ಮಿಶ್ರಲೋಹದ ಸೋಗಿನಲ್ಲಿ ಚಿನ್ನದ ಆಮದು : ಗೊತ್ತಿದ್ದೂ ಕುರುಡಾಗಿ ವರ್ತಿಸಿದ್ದ ಕೇಂದ್ರ ಸರಕಾರ!
ಬೊಕ್ಕಸಕ್ಕೆ 1,700 ಕೋಟಿ ರೂ. ಆದಾಯ ನಷ್ಟ
PC: stock.adobe.com/
ಹೊಸದಿಲ್ಲಿ, ಅ.28: ಚಿನ್ನ ಕಳ್ಳಸಾಗಣೆಯನ್ನು ತಡೆಯಲು ಭಾರತೀಯ ಕಸ್ಟಮ್ಸ್ ಅಧಿಕಾರಿಗಳು ಹದ್ದುಗಣ್ಣಿನಿಂದ ಕಾಯುತ್ತಿರುತ್ತಾರೆ,ದೇಶವನ್ನು ಪ್ರವೇಶಿಸುವವರನ್ನು ಕೂಲಂಕಷವಾಗಿ ತಪಾಸಣೆ ನಡೆಸಲಾಗುತ್ತದೆ. ಶರೀರಗಳಲ್ಲಿನ ಗುಪ್ತಭಾಗಗಳನ್ನು ಕೂಡಾ ಅಧಿಕಾರಿಗಳು ಪರಿಶೋಧಿಸದೇ ಬಿಡುವುದಿಲ್ಲ. ಆದರೆ ಭಾರತ ಮತ್ತು ಯುಎಇ ನಡುವಿನ ವ್ಯಾಪಾರ ಒಪ್ಪಂದದಲ್ಲಿಯ ಲೋಪವೊಂದನ್ನು ಸಮರ್ಥವಾಗಿ ಬಳಸಿಕೊಂಡಿರುವ ಆಮದುದಾರರು ಪ್ಲಾಟಿನಂ ಮಿಶ್ರಲೋಹದ ಸೋಗಿನಲ್ಲಿ ಟನ್ಗಟ್ಟಲೆ ಚಿನ್ನವನ್ನು ದೇಶದೊಳಗೆ ಸಾಗಿಸಿದ್ದಾರೆ, ಅದೂ ಕಾನೂನುಬದ್ಧವಾಗಿ!
ವ್ಯಾಪಾರ ಒಪ್ಪಂದದಲ್ಲಿಯ ಪ್ಲಾಟಿನಂ ಮಿಶ್ರಲೋಹದ ಭಾಗವಾಗಿ ಅಗ್ಗದ ದರದಲ್ಲಿ ಚಿನ್ನವನ್ನು ತರಲು ಅವಕಾಶವನ್ನು ನೀಡಿರುವ ಲೋಪವನ್ನು ಬಳಸಿಕೊಳ್ಳುವ ಮೂಲಕ ಆಮದುದಾರರು ಹೆಚ್ಚಿನ ಆಮದು ಸುಂಕ ಮತ್ತು ಚಿನ್ನದ ಆಮದುಗಳ ಮೇಲಿನ ನಿರ್ಬಂಧಗಳಿಂದ ನುಣುಚಿಕೊಂಡಿದ್ದಾರೆ.
ಈ ಲೋಪದಿಂದಾಗಿ ಸರಕಾರದ ಬೊಕ್ಕಸವು 2022ರಿಂದ 1,700 ಕೋ.ರೂ.ಗಳಷ್ಟು ಆದಾಯವನ್ನು ಕಳೆದುಕೊಂಡಿದೆ ಎಂದು ಸಾರ್ವಜನಿಕ ಡೊಮೇನ್ನಲ್ಲಿಯ ಮತ್ತು ಸರಕಾರದ ಆಂತರಿಕ ದಾಖಲೆಗಳ ಆಧಾರದಲ್ಲಿ ರಿಪೋರ್ಟರ್ಸ್ ಕಲೆಕ್ಟಿವ್ ಅಂದಾಜಿಸಿದೆ. ಇದು ಕಸ್ಟಮ್ಸ್ ಅಧಿಕಾರಿಗಳಿಗೆ ಮುಜುಗರವನ್ನುಂಟು ಮಾಡಿದೆ.
ಯುಎಇ ಜೊತೆಗಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವು ಮೇ 2022ರಲ್ಲಿ ಅನುಷ್ಠಾನಗೊಂಡ ಬಳಿಕ 24,000 ಕೋ.ರೂ.ಮೌಲ್ಯದ ಪ್ಲಾಟಿನಂ ಮಿಶ್ರಲೋಹವನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ದತ್ತಾಂಶಗಳು ತೋರಿಸಿವೆ. ಈ ಪೈಕಿ ಶೇ.90ಕ್ಕೂ ಹೆಚ್ಚು ಆಮದು ವಾಸ್ತವದಲ್ಲಿ ಚಿನ್ನವಾಗಿತ್ತು ಎಂದು ತೆರಿಗೆ ಅಧಿಕಾರಿಗಳ ಆಂತರಿಕ ದಾಖಲೆಗಳು ಅಂದಾಜಿಸಿವೆ.
ಇದು ಸಾಧ್ಯ, ಏಕೆಂದರೆ ಪ್ಲಾಟಿನಂ ಚಿನ್ನಕ್ಕಿಂತ ಗಣನೀಯವಾಗಿ ದುಬಾರಿಯಾಗಿದ್ದಾಗ ರೂಪಿಸಲಾಗಿದ್ದ ಪ್ಲಾಟಿನಂ ಕುರಿತು ವ್ಯಾಪಾರ ನಿಯಮವು ತೂಕದಲ್ಲಿ ಶೇ.2ರಷ್ಟು ಅಥವಾ ಹೆಚ್ಚಿನ ಪ್ಲಾಟಿನಂ ಹೊಂದಿರುವ ಯಾವುದೇ ಮಿಶ್ರಲೋಹವನ್ನು ಪ್ಲಾಟಿನಂ ಮಿಶ್ರಲೋಹ ಎಂದು ವರ್ಗೀಕರಿಸಬೇಕು ಎಂದು ಹೇಳುತ್ತದೆ.
ಹೀಗಾಗಿ ಪ್ಲಾಟಿನಂ ಮಿಶ್ರಲೋಹಕ್ಕೆ ರತ್ನಗಂಬಳಿ ಹಾಸಿದ್ದ ಒಪ್ಪಂದದಲ್ಲಿಯ ಲೋಪದಿಂದಾಗಿ ಖಾಸಗಿ ವ್ಯಾಪಾರಿಗಳು ಚಿನ್ನಕ್ಕೆ ಹೋಲಿಸಿದರೆ ಕಡಿಮೆ ಆಮದು ಸುಂಕಗಳನ್ನು ಪಾವತಿಸಿ ಪ್ಲಾಟಿನಂ ಸೋಗಿನಲ್ಲಿ ಟನ್ಗಟ್ಟಲೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗಿದೆ. ಪ್ರಸಕ್ತ ವಿತ್ತವರ್ಷದಲ್ಲಿ ಜುಲೈ 2024ರವರೆಗೆ ಪ್ಲಾಟಿನಂ ಮೇಲಿನ ಆಮದು ಸುಂಕ ಶೇ.8.15 ಆಗಿದ್ದರೆ ಚಿನ್ನದ ಮೇಲಿನ ಸುಂಕ ಶೇ.18.45ರಷ್ಟಿತ್ತು.
ಲೋಪವು ಮುಂದುವರಿದಿದ್ದು ಅದರ ದುರ್ಬಳಕೆಯಾಗುತ್ತಿದೆ ಮತ್ತು ತಾವು ಅಸಹಾಯಕರಾಗಿದ್ದೇವೆ ಎಂದು ತೆರಿಗೆ ಅಧಿಕಾರಿಗಳು ತಮ್ಮ ಆಂತರಿಕ ದಾಖಲೆಗಳಲ್ಲಿ ಒಪ್ಪಿಕೊಂಡಿದ್ದಾರೆ. ಎಷ್ಟೆಂದರೂ ವ್ಯಾಪಾರ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಅನುಮೋದಿಸಿತ್ತು.
ಪ್ಲಾಟಿನಂ ಮಿಶ್ರಲೋಹದ ಆಮದುಗಳಲ್ಲಿ ಏರಿಕೆಯಾಗಿರುವುದು ಪ್ಲಾಟಿನಂ ಸೋಗಿನಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವ ತಂತ್ರವನ್ನು ತೋರಿಸುತ್ತಿದೆ. ಈ ವಿಧಾನವು ಚಿನ್ನದ ಆಮದುಗಳ ಮೇಲಿನ ನಿರ್ಬಂಧಗಳನ್ನು ತಪ್ಪಿಸುತ್ತದೆ ಮತ್ತು ಸುಂಕದಲ್ಲಿಯ ಗಣನೀಯ ವ್ಯತ್ಯಾಸದಿಂದ ಲಾಭವನ್ನು ನೀಡುತ್ತದೆ ಎಂದು ತೆರಿಗೆ ಅಧಿಕಾರಿಗಳು ಹೇಳಿದ್ದಾರೆ.
ಒಪ್ಪಂದದಲ್ಲಿಯ ಲೋಪವನ್ನು ಪುನರ್ಪರಿಶೀಲಿಸುವಂತೆ ತಾನು ಇತ್ತೀಚೆಗೆ ಯುಎಇಗೆ ಸೂಚಿಸಿದ್ದೇನೆ ಎಂದು ಸರಕಾರವು ಹೇಳಿದ್ದರೆ, ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಲೋಪವನ್ನು ಭಾಗಶಃ ಮುಚ್ಚಲು ತನ್ನ ಜುಲೈ 2024ರ ಬಜೆಟ್ ಭಾಷಣದಲ್ಲಿ ಚಿನ್ನದ ಮೇಲಿನ ಸುಂಕ ಇಳಿಕೆಯನ್ನು ಪ್ರಕಟಿಸುವ ಮುನ್ನ ಕೇವಲ ಎರಡು ತಿಂಗಳುಗಳಲ್ಲಿ 10,000 ಕೋ.ರೂ.ಗೂ ಅಧಿಕ ಮೌಲ್ಯದ ಪ್ಲಾಟಿನಂ ಮಿಶ್ರಲೋಹವನ್ನು ಆಮದು ಮಾಡಿಕೊಳ್ಳಲಾಗಿತ್ತು.
ಆದರೆ ಸರಕಾರದ ಈ ಕ್ರಮವು ತಾತ್ಕಾಲಿಕ ಪರಿಹಾರವಾಗಿದೆ, ಏಕೆಂದರೆ ವ್ಯಾಪಾರ ಒಪ್ಪಂದದ ಪ್ರಸಕ್ತ ನಿಬಂಧನೆಗಳಂತೆ ಪ್ಲಾಟಿನಂ ಮಿಶ್ರಲೋಹದ ಮೇಲಿನ ಸುಂಕವು 2026ರಲ್ಲಿ ಶೂನ್ಯಕ್ಕೆ ಇಳಿಯಲಿದೆ ಮತ್ತು ಇದು ವ್ಯಾಪಾರಿಗಳು ಚಿನ್ನ ಮತ್ತು ಪ್ಲಾಟಿನಂ ಮಿಶ್ರಲೋಹದ ನಡುವಿನ ಸುಂಕಗಳ ವ್ಯತ್ಯಾಸದ ಲಾಭವನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತದೆ,ಇದೇ ವೇಳೆ ಸರಕಾರದ ಬೊಕ್ಕಸಕ್ಕೆ ನಷ್ಟ ಇನ್ನಷ್ಟು ಹೆಚ್ಚುತ್ತದೆ.
ಸರಕಾರವು 2022ರಲ್ಲಿ ಸೃಷ್ಟಿಸಿದ್ದ ಈ ಲೋಪದ ದುರ್ಬಳಕೆಯಾಗಬಹುದು ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದರೂ ಆಂತರಿಕ ಸರಕಾರಿ ದತ್ತಾಂಶಗಳು ಮತ್ತು ಪರಿಶೀಲನೆಗಳು ಈ ಲೋಪವು ಚಿನ್ನವನ್ನು ಆಮದು ಮಾಡಿಕೊಳ್ಳಲು ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಸರಕಾರಕ್ಕೆ ತಿಳಿದಿತ್ತು ಎನ್ನುವುದನ್ನು ತೋರಿಸಿವೆ.
ವ್ಯಾಪಾರ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದ ಬಳಿಕ ಚಿನ್ನದ ಆಮದು ತಾತ್ಕಾಲಿಕವಾಗಿ ಕುಸಿದಿತ್ತು ಮತ್ತು ಇದೇ ವೇಳೆ ಪ್ಲಾಟಿನಂ ಆಮದು ಏರಿಕೆಯಾಗಿತ್ತು. ಒಪ್ಪಂದದಲ್ಲಿಯ ಲೋಪವನ್ನು ಬಳಸಿಕೊಳ್ಳಲು ಖಾಸಗಿ ವ್ಯಾಪಾರಿಗಳು ಸಜ್ಜಾಗಿದ್ದರು ಎನ್ನುವುದನ್ನು ಇದು ಸೂಚಿಸುತ್ತದೆ. ಇಂದು ಪ್ಲಾಟಿನಂ ಮಿಶ್ರಲೋಹವನ್ನು ಆಮದು ಮಾಡಿಕೊಳ್ಳುತ್ತಿರುವ ಹೆಚ್ಚಿನ ಖಾಸಗಿ ವ್ಯಾಪಾರಿಗಳು ಹಿಂದೆ ಚಿನ್ನವನ್ನು ಮಾತ್ರ ಆಮದು ಮಾಡಿಕೊಳ್ಳುತ್ತಿದ್ದರು ಎನ್ನುವುದನ್ನು ಅಧಿಕೃತ ಪರಿಶೀಲನೆಯು ತೋರಿಸಿದೆ. ಇದು ಚಿನ್ನವನ್ನು ಪ್ಲಾಟಿನಂ ಮಿಶ್ರಲೋಹದ ರೂಪದಲ್ಲಿ ದೇಶದೊಳಗೆ ತರಲಾಗುತ್ತಿದೆ ಎಂಬ ಆತಂಕವನ್ನು ಮರುದೃಢಪಡಿಸಿದೆ.