ತಮಟೆಯ ಸಾಂಪ್ರದಾಯಿಕ ಚೌಕಟ್ಟನ್ನು ಬದಲಾಯಿಸಿದ ಗೋವಿಂದಯ್ಯ
‘ಜನಚರಿತೆ’ ಕಾಲಂನಲ್ಲಿ ‘ದಕ್ಲಕಥಾ ದೇವಿಕಾವ್ಯ’ ನಾಟಕದ ಬಗ್ಗೆ ಬರೆಯುತ್ತಾ ತಮಟೆಯನ್ನು ಹೇಗೆ ಒಂದು ಸಶಕ್ತ ಮಾಧ್ಯಮವಾಗಿ ಬಳಸಿದ್ದಾರೆ ಎನ್ನುವುದನ್ನು ವಿವರಿಸಿದ್ದೆ. ಈಗ ಇದೇ ತಮಟೆಯ ಎಬಿಸಿಡಿಯನ್ನು ಶಾಲಾ-ಕಾಲೇಜು ಮಕ್ಕಳಿಗೆ ಕಲಿಸಿದ ಗೋವಿಂದಯ್ಯನ ಕಥೆ ಇನ್ನೊಂದು ಬಗೆಯದ್ದು. ಸತ್ತವರಿಗೆ ಬಾರಿಸುವ ತಮಟೆ, ಸಾರು ಹಾಕಲು ಬಳಸುವ ತಮಟೆ, ಮದ್ಯ ಸೇವಿಸಿ ಬಾರಿಸುವ ಕಲೆ ಮುಂತಾದ ಹಣೆಪಟ್ಟಿ ಅಂಟಿಸಿದ್ದ ತಮಟೆಯನ್ನು ಕಳೆದ ಮೂವತ್ತು ವರ್ಷಗಳಿಂದ ಶಾಲೆ-ಕಾಲೇಜುಗಳಲ್ಲಿ ಕಲಿಸುತ್ತಾ ತಮಟೆಗೆ ಹೊಸ ಗುರುತನ್ನು ಕೊಟ್ಟಿದ್ದಾರೆ.
ರಾಮನಗರದಿಂದ 12 ಕಿ.ಮೀ. ದೂರದ ಬೊಮ್ಮಚನಹಳ್ಳಿಯ ತಾತ ಗಂಟಯ್ಯ ತಂದೆ ವೆಂಕಟಯ್ಯ ಅಮ್ಮ ಬೋರಮ್ಮ ನವರ ಕಡುಬಡತನದಲ್ಲೂ ಪ್ರೀತಿಯಲ್ಲಿ ಬೆಳೆದ ಗೋವಿಂದಯ್ಯ ತಾತ ಮತ್ತು ತಂದೆಯವರಿಂದಲೇ ತಮಟೆಯನ್ನು ಒಳಗೊಂಡಂತೆ ಜನಪದ ಕಲೆಗಳ ತರಬೇತಿ ಪಡೆದರು. ಹಾಗಾಗಿ ಮನೆಯೇ ಜನಪದ ಕಲೆಗಳ ಮೊದಲ ಪಾಠಶಾಲೆಯಾಯಿತು. ಹೆಂಡತಿ ಪ್ರೇಮ ಅವರು ಆರಂಭದಲ್ಲಿ ಗೋವಿಂದಯ್ಯನ ಕಲಾವೃತ್ತಿಯ ಬಗ್ಗೆ ಅಷ್ಟೇನು ಆಸಕ್ತಿ ವಹಿಸಿರಲಿಲ್ಲ, ನಂತರದಲ್ಲಿ ಕಲೆಯೇ ಜೀವನಕ್ಕೆ ಆಧಾರ ಆದಾಗ ತಮಟೆಯನ್ನು ಒಳಗೊಂಡಂತೆ ಜನಪದ ಕಲೆಗಳ ಬಗ್ಗೆ ಪ್ರೇಮ ಅವರಿಗೂ ಪ್ರೀತಿ ಮೂಡಿತು. ಗೋವಿಂದಯ್ಯ ತಮಟೆ ಕಲಿಸುವ ತರಬೇತಿಗಳಿಂದ ಹಣವನ್ನು ಕೂಡಿಟ್ಟು ಮಗ ಸತ್ಯನಾರಾಯಣ ಮತ್ತು ಮಗಳು ಲಾವಣ್ಯರನ್ನು ಓದಿಸಿದ್ದಾರೆ. ಮಗ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಓದಿ ಇದೀಗ ಬೆಂಗಳೂರಿನ ಆಸ್ಟ್ರೇಲಿಯಾ ಮೂಲದ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂ.ಕಾಂ. ಪದವೀಧರೆಯಾದ ಮಗಳು ಲಾವಣ್ಯ ಕೂಡ ಗೋವಿಂದಯ್ಯನ ಜತೆಗೆ ಹೆಜ್ಜೆ ಕುಣಿತ, ಪಟದ ಕುಣಿತ, ಪೂಜಾ ಕುಣಿತದ ತರಬೇತಿ ಕೊಡಲು ಹೋಗುತ್ತಾಳೆ. ಆರಂಭಕ್ಕೆ ಮಗನಿಗೂ ಆಸಕ್ತಿ ಇತ್ತು. ಓದಲಾರಂಭಿಸಿದ ನಂತರ ‘ಅಪ್ಪಾ ಇದು ನನಗೆ ಬಹಳ ಕಷ್ಟ. ನನಗೆ ಆಗುವುದಿಲ್ಲ’ ಎಂದು ಓದಿನ ಕಡೆಗೆ ಹೆಚ್ಚು ಗಮನ ಹರಿಸಿದ. ಇದಕ್ಕೆ ಕಾರಣ ಗೋವಿಂದಯ್ಯ ಈ ಕಲೆಗೆ ನಾಲ್ಕೈದು ಗಂಟೆ ನಿಂತುಕೊಂಡೇ ತರಬೇತಿ ಕೊಡುತ್ತಾರೆ.
ಒಂದನೇ ತರಗತಿ ಮಾತ್ರ ಶಾಲೆಗೆ ಹೋದ ಗೋವಿಂದಯ್ಯನನ್ನು ತಂದೆ ತಾಯಿ ಬಾಲ್ಯದಲ್ಲಿ ಒಂದೊತ್ತಿನ ಊಟಕ್ಕಾಗಿ ಉಳ್ಳವರ ಮೇಲ್ಜಾತಿ ಮನೆಗಳಲ್ಲಿ ಜೀತಕ್ಕೆ ಇಡುತ್ತಾರೆ. ಗೋವಿಂದಯ್ಯನ ಬಡತನ ಹೇಗಿತ್ತು ಎನ್ನುವುದಕ್ಕೆ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ‘‘ಒಂದು ದಿನ ರಾತ್ರಿ ಎರಡು ಗಂಟೆಗೆ ಅಪ್ಪ-ಅವ್ವ ಎದ್ದೋಗಿದ್ದಾರೆ. ಅಷ್ಟೊತ್ತಲ್ಲಿ ಎದ್ದ ಮಕ್ಕಳು ನಾವು ಅಪ್ಪ ಅವ್ವ ಇಲ್ಲದ್ದನ್ನು ನೋಡಿ ಅಳತೊಡಗಿದ್ದೇವೆ. ಆಗ ಕೇರಿಯ ಜನರೆಲ್ಲಾ ಬಂದು ಮಕ್ಕಳನ್ನು ಸಂತೈಸುತ್ತಾರೆ. ಭೀಕರ ಬರಗಾಲವಾದ ಕಾರಣ ಎಂಟು ಮಕ್ಕಳನ್ನು ಸಾಕಲು ಆಗದೆ ಎಲ್ಲೋ ಓಡೋಗಿರಬೇಕು ಎಂದು ಹುಡುಕಾಟ ಶುರುಮಾಡುತ್ತಾರೆ. ಬೆಳಗಿನ ಜಾವ ಮೂರು ಗಂಟೆಯ ಹೊತ್ತಿಗೆ ಅಪ್ಪ-ಅವ್ವ ಎಳೆ ಹಲಸಿನಕಾಯಿ ಕಿತ್ಕೊಂಡ್ ಹೊತ್ಕೊಂಡ್ ಬರುತ್ತಾರೆ. ಆ ಚಿತ್ರ ನನಗೆ ಈಗಲೂ ಮರೆಯೋಕೆ ಆಗಲ್ಲ’’ ಎಂದು ಹೇಳುವಾಗ ಗೋವಿಂದಯ್ಯನ ಗಂಟಲು ಕಟ್ಟಿ ದುಃಖ ಒತ್ತರಿಸಿ ಬರುತ್ತದೆ. ‘‘ಎಳೆ ಹಲಸಿನ ಕಾಯಿಯನ್ನು ಬೇಯಿಸಿ ನಮಗೆ ತಿನ್ನಲು ಕೊಡುತ್ತಿದ್ದರು. ಹೀಗೆ ಹಗಲೊತ್ತು ತಂದರೆ ಕದ್ದು ಸಿಕ್ಕಾಕಿಕೊಂಡರೆ ಕಷ್ಟ ಅಂತ ಮಧ್ಯರಾತ್ರಿ ಎದ್ದೋಗಿ ಹಲಸು, ಸೊಪ್ಪು, ಇನ್ನಿತರ ಹೊಲಗಳಲ್ಲಿರುವ ತರಕಾರಿ, ಕಾಳು ಮುಂತಾದವುಗಳನ್ನು ಕದ್ದು ತರುತ್ತಿದ್ದರು. ಹೀಗೆ ಎಂಟು ಜನ ಮಕ್ಕಳನ್ನು ಕಡುಕಷ್ಟದಲ್ಲಿ ಬೆಳೆಸಿದ್ದಾರೆ. ಇರುವ ಐದು ಜನ ಗಂಡುಮಕ್ಕಳಲ್ಲಿ ಭೂಮಿ ಭಾಗ ಆಗಿ 12 ಕುಂಟೆ ಜಮೀನು ಬಂದಿದೆ. ಅದರಲ್ಲಿ ಜೀವನ ಮಾಡಕಾಗ್ದೆ ನಾನು ಜನಪದ ಕಲೆಗಳನ್ನೇ ಬದುಕಿಗೆ ಆಶ್ರಯಿಸಿದೆ. ಕಲೆಗಳನ್ನು ನಾವು ಗೌರವಿಸಿದರೆ ಕಲೆಗಳು ನಮ್ಮನ್ನು ಸಾಕುತ್ತವೆ’’ ಎನ್ನುವುದು ಗೋವಿಂದಯ್ಯನ ನಿಲುವು.
ಗೋವಿಂದಯ್ಯನ ಪಾಲಿಗೆ ರಾಮನಗರದ ಜಾನಪದ ಲೋಕ ಒಂದು ಹೊಸ ಜಿಗಿತವನ್ನು ಕೊಟ್ಟಿತು. ಗೋವಿಂದಯ್ಯ ಜನಪದ ಲೋಕ ಶಂಕುಸ್ಥಾಪನೆ ಆಗುವ ಸಂದರ್ಭದಲ್ಲಿಯೇ ಜನಪದ ಕಲೆಯನ್ನು ಪ್ರದರ್ಶಿಸಿ ಎಚ್.ಎಲ್.ನಾಗೇಗೌಡರ ಗಮನ ಸೆಳೆಯುತ್ತಾರೆ. ಹೀಗಾಗಿ ಜಾನಪದ ಲೋಕದಲ್ಲಿ ಜನಪದ ಕಲೆ ಕಲಿಸುವ ಡಿಪ್ಲೊಮಾ ಕೋರ್ಸ್ ಶುರುವಾದಾಗ ಜನಪದ ಕಲೆ ಕಲಿಸುವ ಮೇಷ್ಟ್ರಾಗಿ ತಾತ್ಕಾಲಿಕ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಹೀಗಾಗಿ ಗೋವಿಂದಯ್ಯ ತಮಟೆಯ ಜತೆ ಒಟ್ಟು ಹದಿನಾರು ಜನಪದ ಕಲೆಗಳನ್ನು ಕಲಿತು ಪರಿಣತಿ ಹೊಂದುತ್ತಾರೆ. ಆ ಸಂದರ್ಭದಲ್ಲಿ ಕುರುವ ಬಸವರಾಜು, ಚಕ್ಕರೆ ಶಿವಶಂಕರ, ಸದಾಶಿವಯ್ಯ ಮೊದಲಾದವರು ಗೋವಿಂದಯ್ಯನ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಾರೆ.
ಗೋವಿಂದಯ್ಯ ಹಲವು ಜನಪದ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ತಮಟೆ ಕಲೆ, ಪಟದ ಕುಣಿತ, ಪೂಜಾ ಕುಣಿತ, ಸೋಮನ ಕುಣಿತ, ಮರಗಾಲು ಕುಣಿತ, ರಂಗದ ಹೆಜ್ಜೆ, ಜಡೆ ಕೋಲಾಟ, ವೀರಗಾಸೆ, ಡೊಳ್ಳು ಕುಣಿತ, ಗಾರುಡಿಗ ಕುಣಿತ, ಮರಗಾಲು ಕುದುರೆ ಕುಣಿತ, ಕೀಲುಕುದುರೆ ಕುಣಿತ, ಗೊಂಬೆ ಕುಣಿತ, ಹುಲಿವೇಷ, ಸುಗ್ಗಿಕುಣಿತ ಮೊದಲಾದ 16 ಜನಪದ ಕಲೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ಎಲ್ಲಾ ಕಲೆಗಳ ತರಬೇತಿಯನ್ನೂ ಮಾಡಿದ್ದಾರೆ. ಈ ಕಲೆಗಳಲ್ಲಿ ವೇಷಭೂಷಣ, ಹೆಜ್ಜೆಗಳ ಮಾದರಿ, ಪ್ರದರ್ಶನದ ಗತ್ತುಗಳು ಎಲ್ಲದರಲ್ಲೂ ಹೊಸತನ ತರಲು ಪ್ರಯತ್ನಿಸಿದ್ದಾರೆ. ತಮಟೆಯನ್ನು ಜನಪದ ಹಾಡಿಕೆಗಳ ಜತೆ ಹೊಂದಿಸಿದ್ದಾರೆ. ಜನಪ್ರಿಯ ಜನಪದ ಹಾಡುಗಳಿಗೆ ತಮಟೆ ಲಯವನ್ನು ಹೊಂದಿಸಿದ್ದಾರೆ. ಮಂಟೇಸ್ವಾಮಿ, ಮಾದೇಶ್ವರ ಪದಗಳಿಗೆ ತಮಟೆಯ ಜತೆ ಪ್ರಯೋಗ ಮಾಡಿದ್ದಾರೆ.
ಇದೀಗ 53 ವರ್ಷದ ಗೋವಿಂದಯ್ಯ ಶಾಲೆಗೆ ತಮಟೆ ಹೇಗೆ ಪ್ರವೇಶಿಸಿತು ಎಂದು ನೆನಪಿಸಿಕೊಳ್ಳುತ್ತಾರೆ. ಜಾನಪದ ಲೋಕದ ಡಿಪ್ಲೊಮಾ ಕೋರ್ಸಿಗೆ ಬಂದ ಶಿಷ್ಯರಾದ ಮಧುಸೂಧನ್, ಸತ್ಯನಾರಾಯಣ, ಪ್ರಭಾಕರ್ ಅವರುಗಳು ತಮಟೆಯನ್ನು ಸ್ಕೂಲಲ್ಲಿ ಕಲಿಸೋಣ ಎಂದು ಬೆಂಗಳೂರಿನ ಕ್ರಿಶ್ಚಿಯನ್ ಸ್ಕೂಲಲ್ಲಿ ಅವಕಾಶ ಕೊಡಿಸಿದರು. ಆಗ ಕಬ್ಬನ್ ಫಾರ್ಕ್ ಬಳಿ ಇರುವ ಒಂದು ಕ್ರಿಶ್ಚಿಯನ್ ಸ್ಕೂಲಿಗೆ ತಮಟೆ ಕಲಿಸಲು ಹೋಗುತ್ತಾರೆ. ಅಲ್ಲಿನ ಮ್ಯಾನೇಜ್‌ಮೆಂಟ್‌ನವರು ‘‘ಏನ್ರೀ ಸತ್ತೋರ ಮುಂದೆ ಬಾರಿಸೋ ತಮಟೆ ತಂದು ಮಕ್ಕಳಿಗೆ ನೃತ್ಯ ಮಾಡಿಸ್ತೀವಿ ಅಂತೀರಲ್ಲ’’ ಎಂದು ಹಾಸ್ಯ ಮಾಡುತ್ತಾರೆ. ಆಗ ಗೋವಿಂದಯ್ಯಗೆ ಬಹಳ ಅವಮಾನ, ದುಃಖ ಆಗುತ್ತದೆ. ‘‘ಒಂದು ಅವಕಾಶ ಕೊಡಿ ವಿದ್ಯಾರ್ಥಿಗಳಿಗೆ ಕಲಿಸ್ತೀನಿ ಒಂದ್ಸಲ ನೋಡಿ’’ ಎಂದು ಕೇಳಿಕೊಳ್ಳುತ್ತಾರೆ. ಆಗ ಒಂದು ಅವಕಾಶ ಕೊಡುತ್ತಾರೆ. ಗೋವಿಂದಯ್ಯ ಮಕ್ಕಳಿಗೆ ಕಲಿಸಿ ಮ್ಯಾನೇಜ್‌ಮೆಂಟ್ ಮುಂದೆ ಮಕ್ಕಳಿಂದ ನೃತ್ಯ ಪ್ರದರ್ಶಿಸುತ್ತಾರೆ. ಮ್ಯಾನೇಜ್‌ಮೆಂಟ್ ಮಕ್ಕಳ ತಮಟೆ ನೃತ್ಯ ನೋಡಿ, ‘‘ನಾವು ತಮಟೆ ಎಂದರೆ ಕೇವಲ ಸಾವಿಗೆ ಬಡಿಯೋದು ಅನ್ಕೊಂಡಿದ್ವಿ, ಆ ನಂಬಿಕೆಯನ್ನು ಬದಲಿಸಿಬಿಟ್ರಿ’’ ಎಂದು ಹೊಗಳಿ ಸನ್ಮಾನ ಮಾಡುತ್ತಾರೆ. ಅಲ್ಲಿಂದ ಶುರುವಾದ ಶಾಲಾ-ಕಾಲೇಜಿನ ಪಯಣಕ್ಕೆ ಈಗ 30 ವರ್ಷ. ಆಗಿನಿಂದ ಶಾಲೆ, ಕಾಲೇಜುಗಳಲ್ಲಿ ಸಾವಿರಾರು ಮಕ್ಕಳಿಗೆ ತಮಟೆ ನೃತ್ಯ ಕಲಿಸಿದ್ದಾರೆ. ಶಾಲಾ ವಾರ್ಷಿಕೋತ್ಸವ ಸಂದರ್ಭಕ್ಕೆ ಶಾಲೆ, ಕಾಲೇಜುಗಳಿಗೆ 15 ದಿನ ಮುಂಚೆಯೇ ಹೋಗಿ ಅಲ್ಲಿಯೇ ಉಳಿದು ಮಕ್ಕಳಿಗೆ ಕಲಿಸುತ್ತಾರೆ. ಎಷ್ಟೋ ಕಡೆ ಉಚಿತವಾಗಿ ತರಬೇತಿ ಕೊಟ್ಟಿದ್ದಾರೆ.
ಕೊರೋನ ಸಂದರ್ಭದಲ್ಲಿ ಕಲೆ ಕಲಿಸುವ ಕೆಲಸ ನಿಂತು ಹೋದಾಗ ಬಹಳ ಕಷ್ಟ ಅನುಭವಿಸುತ್ತಾರೆ. ಆ ಸಂದರ್ಭದಲ್ಲಿ ಸ್ನೇಹಿತರ ನೆರವಿನಿಂದ ಟೊಯೋಟಾ ಶೋರೂಮಲ್ಲಿ ಸ್ವಚ್ಛಗೊಳಿಸುವ ಕೆಲಸಕ್ಕೆ ಸೇರುತ್ತಾರೆ. ಮುಂದೆ ಈ ಕೆಲಸ ಬಿಟ್ಟು ಮತ್ತೆ ಕಲೆ ಕಲಿಸುವ ಕೆಲಸದಲ್ಲಿ ಮುಂದುವರಿಯುತ್ತಾರೆ. ತನ್ನ ಕಲೆಗಳು ತನ್ನೊಳಗೆ ಉಳಿಯಬಾರದು, ಅದು ಹೊಸ ತಲೆಮಾರಿನ ಹುಡುಗ, ಹುಡುಗಿಯರಿಗೆ ದಾಟಬೇಕು ಎನ್ನುವುದು ಗೋವಿಂದಯ್ಯನವರ ಕನಸು. ಕೇರಳ, ತಮಿಳುನಾಡು, ಕೊಲ್ಕತಾ, ಅಂಡಮಾನ್ ಒಳಗೊಂಡಂತೆ ತಮಟೆ ಕಲೆಯನ್ನು ಭಾರತದಾದ್ಯಂತ ಕರ್ನಾಟಕದ ಮಾದರಿಯಲ್ಲಿ ಪರಿಚಯಿಸಿದ್ದಾರೆ. ಜಾನಪದ ಲೋಕದಲ್ಲಿ ಜಾನಪದ ಡಿಪ್ಲೊಮಾ ಕಲಿಯುವ ಸಾವಿರಾರು ವಿದ್ಯಾರ್ಥಿಗಳಿಗೆ ಜನಪದ ಕಲೆಗಳನ್ನು ಕಲಿಸುವ ಮೇಷ್ಟ್ರಾಗಿ ದುಡಿದಿದ್ದಾರೆ. ಜಿಕೆವಿಕೆ ಕೃಷಿ ವಿವಿಯಲ್ಲಿ ಮಕ್ಕಳಿಗೆ ತಮಟೆ ನೃತ್ಯ ತರಬೇತಿ ಮಾಡಿದ್ದಾರೆ.
ಚರ್ಮವಾದ್ಯದ ಬಗ್ಗೆ ಗೋವಿಂದಯ್ಯನವರ ಗ್ರಹಿಕೆ ಭಿನ್ನವಾಗಿದೆ. ‘‘ಚರ್ಮ ವಾದ್ಯದ ಚರ್ಮ ಕಾಯಿಸಲು ಒಂದು ಹದ ಬೇಕಾಗುತ್ತದೆ. ಹೊಸ ಹುಡುಗರಿಗೆ ಚರ್ಮದ ತಮಟೆಯನ್ನು ಕಾಯಿಸಲು ಬರೋದಿಲ್ಲ. ನಾನು ಮೊದಲು ಮಾಡಿಸಿದ ಹದಿನೈದು ಚರ್ಮದ ಹಲಗೆಯನ್ನು ಹೀಗೆ ಕಾಯಿಸಿ ಹರಿದುಹಾಕಿದರು. ಹೀಗಾಗಿ ನಾನು ಫೈಬರ್ ತಮಟೆಗೆ ಬಂದೆ. ಚರ್ಮದ ತಮಟೆ ಚಳಿಗಾಲದಲ್ಲಿ ಮಳೆಗಾಲದಲ್ಲಿ ಬೇಗ ಹದಕ್ಕೆ ಬರುವುದಿಲ್ಲ. ಆದರೆ ಫೈಬರ್ ಹಲಗೆಗೆ ಈ ಸಮಸ್ಯೆ ಇಲ್ಲ. ಅದನ್ನು ಯಾವ ಕಾಲದಲ್ಲಾದರೂ, ಯಾವ ಸಮಯದಲ್ಲಾದರೂ ಬಾರಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ನಾವು ಫೈಬರ್ ತಮಟೆಯನ್ನು ಹೆಚ್ಚು ಬಳಸಲು ಶುರುಮಾಡಿದೆವು. ಶಾಲೆಗಳಲ್ಲಿ ಕಲಿಸಲೂ ಕೂಡ ಫೈಬರ್ ಹಲಗೆ ಒಂದು ರೀತಿಯ ಅನುಕೂಲ ಆಗಿದೆ. ಆದರೂ ಚರ್ಮದ ತಮಟೆಯ ನಾದವೇ ಬೇರೆ, ಫೈಬರ್ ತಮಟೆಯ ನಾದವೇ ಬೇರೆ. ಚರ್ಮದ ತಮಟೆ ನಾದ ಹತ್ತು ಕಿಲೋಮೀಟರ್ ದೂರದ ತನಕ ಕೇಳಿಸುತ್ತೆ. ಫೈಬರ್ ತಮಟೆ ಹತ್ತಿರದಲ್ಲಿ ಜೋರಾಗಿ ಕೇಳುತ್ತೆ, ಆದರೆ ಈ ಶಬ್ದ ಬಹಳ ದೂರ ಕೇಳಿಸುವುದಿಲ್ಲ. ಈಗ ನಾನು ಯಾರಿಗೆ ಕಲಿಸಿದ್ದೇನೋ ಆ ಶಿಷ್ಯಂದಿರೇ ಮುಂದೆ ಬಂದಿದ್ದಾರೆ. ಹಾಗಾಗಿ ನನಗೆ ಬೇಡಿಕೆ ಕಡಿಮೆಯಾಗಿದೆ. ಇದೀಗ ತಿಂಗಳಿಗೆ ಒಂದೋ ಎರಡೋ ಕಾರ್ಯಕ್ರಮಗಳು ಸಿಗುತ್ತವೆ’’ ಎನ್ನುತ್ತಾರೆ. ಹೀಗೆ ಶಾಲೆ ಕಾಲೇಜಿಗೆ ಹೋಗಿ ಜನಪದ ಕಲೆ ಕಲಿಸಬಹುದು ಅನ್ನುವುದನ್ನು ಮೊದಲು ತಂದದ್ದೇ ಗೋವಿಂದಯ್ಯ. ಮುಖ್ಯವಾಗಿ ಕರ್ನಾಟಕದ ಎಲ್ಲಾ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶ ಆಗಿದೆ. ಈ ಕೆಲಸವನ್ನು ಗೋವಿಂದಯ್ಯ ತಣ್ಣಗೆ ಮಾಡಿದ್ದಾರೆ. ಗಂಡುಮಕ್ಕಳಿಗೆ ಮಾತ್ರ ಎಂದಿದ್ದ ಕಲೆಗಳನ್ನು ಹುಡುಗಿಯರಿಗೂ ಕಲಿಸಿದ್ದಾರೆ. ಒಂದು ಕಲೆ ಒಂದೇ ಜಾತಿಗೆ ಸೀಮಿತ ಆಗಬಾರದು ಎಂದು ಎಲ್ಲಾ ಜಾತಿ ವರ್ಗದವರಿಗೂ ಕಲೆ ಕಳಿಸಿದ್ದಾರೆ.
ಹಂಸಲೇಖ ಅವರೇ ಗೋವಿಂದಯ್ಯನವರ ಮನೆಗೆ ಬಂದಿದ್ದಾರೆ. ಅವರ ತಮಟೆಯ ಗತ್ತು, ಲಯಗಳನ್ನು ಆಡಿಯೋ ವೀಡಿಯೋ ಮಾಡಿಸಿದ್ದಾರೆ. ಜಾನಪದ ವಿದ್ವಾಂಸರನ್ನು ಕರೆಸಿ ಚರ್ಚಿಸಿ ವೈಜ್ಞಾನಿಕವಾಗಿ ಗೋವಿಂದಯ್ಯನ ಪ್ರತಿಭೆಯನ್ನು ದಾಖಲೀಕರಣ ಮಾಡಿಸಿದ್ದಾರೆ. ‘‘ಸರಿಗಮಪ ರಿಯಾಲಿಟಿ ಶೋನಲ್ಲಿ ಕರೆಸಿ ನನ್ನ ಕಲೆಯನ್ನು ಪರಿಚಯಿಸಿದ್ದಾರೆ’’ ಎಂದು ಗೋವಿಂದಯ್ಯ ಹಂಸಲೇಖ ಅವರನ್ನು ಪ್ರೀತಿಯಿಂದ ನೆನೆಯುತ್ತಾರೆ.
ಗೋವಿಂದಯ್ಯನವರ ಪಯಣ ನಾಟಕ, ಸಿನೆಮಾಗಳಲ್ಲೂ ವಿಸ್ತರಿಸಿದೆ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ನೋಡುಗರಿಂದ ಸೈ ಅನಿಸಿಕೊಂಡಿದ್ದಾರೆ. ಸಿನೆಮಾಗಳ ಹಾಡುಗಳಿಗೆ ಗೋವಿಂದಯ್ಯ ಜನಪದ ಕಲೆಗಳ ನೃತ್ಯಗಳಿಗೆ ನಿರ್ದೇಶನ ಮಾಡಿದ್ದಾರೆ, ಸ್ವತಃ ತಾವೂ ಸಿನೆಮಾಗಳ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದರ್ಶನ್ ಅಭಿನಯದ ‘ಕಾಟೇರ’ ಸಿನೆಮಾಕ್ಕೆ ಜನಪದ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಕೈವಾ’ ಸಿನೆಮಾ, ಪುನೀತ್ ಅಭಿನಯದ ‘ವೀರ ಕನ್ನಡಿಗ’ ಸಿನೆಮಾದಲ್ಲಿ ತಂಡದೊಂದಿಗೆ ನೃತ್ಯ ಮಾಡಿದ್ದಾರೆ. ಯೋಗೇಶ್ವರ್ ಅವರ ‘ಉತ್ತರ ಧ್ರುವದಿಂ..’ ರಾಧಿಕಾ ಕುಮಾರಸ್ವಾಮಿ ಅವರ ‘ನಮ್ಮ ಪ್ರೀತಿಗೆ ಜಯ’ ಅನ್ನೋ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜಾನಪದ ಲೋಕ ಗೋವಿಂದಯ್ಯನ ಬಗ್ಗೆ ಪುಟ್ಟ ಪುಸ್ತಕವನ್ನು ಪ್ರಕಟಿಸಿದೆ. ಪತ್ರಿಕೆಗಳು, ಕೆಲವು ಟಿವಿ ಶೋಗಳು, ಯೂಟ್ಯೂಬರ್ಸ್ ಗೋವಿಂದಯ್ಯನ ಬಗ್ಗೆ ಪರಿಚಯಿಸಿದ್ದಾರೆ. ‘ಲೋಕೋತ್ಸವ ಪ್ರಶಸ್ತಿ’ ಒಳಗೊಂಡಂತೆ ಹಲವು ಪ್ರಶಸ್ತಿಗಳು ಬಂದಿವೆ. ‘‘ನಾನು ಕಲಿಸಿದ ಎಷ್ಟೋ ಶಿಷ್ಯರು ಡಾಕ್ಟರೇಟ್ ಪಡೆದಿದ್ದಾರೆ’’ ಎಂದು ಗೋವಿಂದಯ್ಯ ಹೆಮ್ಮೆಯಿಂದ ಹೇಳುತ್ತಾರೆ.
ಯಾವುದೇ ಜನಪದ ವಾದ್ಯಗಳಿಗೆ ಒಂದು ಗುರುತು ಇರುತ್ತದೆ. ಆ ಗುರುತು ಜಾತಿಯಿಂದ, ಕುಲ, ಪಂಥಗಳಿಂದ, ವೃತ್ತಿಗಳಿಂದ ಪರಂಪರೆಯಿಂದ ಬಂದಿರುತ್ತವೆ. ಹೀಗೆ ತಮಟೆ, ತಪ್ಪಟೆ, ತಪ್ಪಡಿ, ಹಲಗೆ ಎಂದು ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯುವ ತಮಟೆಯು ಅಸ್ಪಶ್ಯ ಸಮುದಾಯದ ಜತೆ ನಂಟು ಬೆಸೆದುಕೊಂಡಿದೆ. ಹಿಂದೂ ಧರ್ಮದ ವರ್ಣಾಶ್ರಮ ಪದ್ಧತಿಯ ಪ್ರಕಾರ ಶೂದ್ರರೆಂದು ಆರೋಪಿಸಿ ಅಸ್ಪಶ್ಯ(ಮುಟ್ಟಿಸಿಕೊಳ್ಳದ) ಸಮುದಾಯದ ಮುಖ್ಯ ಅಭಿವ್ಯಕ್ತಿ ಮಾಧ್ಯಮವೇ ತಮಟೆ. ಇದೀಗ ಬೆಂಗಳೂರಿನಲ್ಲಿ ರಾಯಚೂರು ಮೂಲದ ಭರತ್ ಡಿಂಗ್ರಿ ತಮಟೆ ಕಲಿಕಾ ತರಬೇತಿಗಳನ್ನು ನಡೆಸುತ್ತಿದ್ದಾರೆ. ಬೇರೆ ಬೇರೆ ಜಾತಿ, ವರ್ಗ, ಸಮದಾಯದ ಮಕ್ಕಳು ತಮಟೆ ಕಲಿಯುತ್ತಿದ್ದಾರೆ. ತಮಟೆ ಕಲಿತ ನಂತರ ಮುಂದೇನು? ಎನ್ನುವ ಪ್ರಶ್ನೆಗೆ ಗೋವಿಂದಯ್ಯನ ಮಾದರಿ ಒಂದು ರೀತಿಯ ಉತ್ತರವಾಗಿದೆ. ಹೀಗೆ ತಮಟೆಯ ಸಾಂಪ್ರದಾಯಿಕ ಚೌಕಟ್ಟು ಬದಲಾಗಿದೆ. ತಮಟೆಗೆ ಶಾಲಾ ಮಕ್ಕಳು ನೃತ್ಯ ಮಾಡಬಹುದು ಎನ್ನುವ ಹೊಸ ಪರಿಭಾಷೆಯನ್ನು ಕಟ್ಟಿಕೊಟ್ಟಿದ್ದಾರೆ.
‘‘ಈಗಿನ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಕರ್ನಾಟಕದ ಪ್ರತೀ ಜಿಲ್ಲೆಗಳಿಂದ ನಾಲ್ಕೈದು ಜನರನ್ನು ಗುರುತಿಸಿ ಅವರಿಗೆ ಜಾನಪದ ಲೋಕದಲ್ಲಿಯೇ ತರಬೇತಿ ಕೊಡಿಸುವ ಯೋಜನೆ ಹಾಕಿಕೊಳ್ಳೋಣ ಎಂದು ಹೇಳಿದ್ದಾರೆ’’ ಎಂದು ಗೋವಿಂದಯ್ಯ ಹೇಳುತ್ತಾರೆ. ಜನಪದ ಮೂಲ ಕಲೆಗಳು ಉಳಿಯಬೇಕು ಎನ್ನುವುದು ಗೋವಿಂದಯ್ಯನವರ ಒತ್ತಾಸೆ. ಈ ತನಕ ಒಂದೇ ವೇದಿಕೆಯಲ್ಲಿ ಎರಡೂವರೆ ಸಾವಿರ ಮಕ್ಕಳಿಗೆ ಒಂದೇ ಬಾರಿಗೆ ನೃತ್ಯ ಹೇಳಿಕೊಟ್ಟ ಗೋವಿಂದಯ್ಯರಿಗೆ ಒಂದೇ ವೇದಿಕೆಯಲ್ಲಿ ಐದು ಸಾವಿರ ಮಕ್ಕಳ ನೃತ್ಯ ಮಾಡಿಸಿ ಗಿನ್ನೆಸ್ ರೆಕಾರ್ಡ್ ಮಾಡಬೇಕು ಎನ್ನುವ ಆಸೆ ಇದೆ. ಈ ಆಸೆ ಈಡೇರಲಿ, ಗೋವಿಂದಯ್ಯನವರ ಕನಸುಗಳಿಗೆ ರೆಕ್ಕೆ ಮೂಡಲಿ ಎಂದು ಆಶಿಸೋಣ.