ಗೃಹ ಲಕ್ಷ್ಮಿ ಯೋಜನೆ: ಸಾಮಾಜಿಕ ಸಬಲೀಕರಣದ ಸಾಧನ
2023ರ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಪಂಚ ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯತೆಯ ಬಗ್ಗೆ ಆರ್ಥಿಕ ತಜ್ಞರೇ ಅನುಮಾನ ವ್ಯಕ್ತಪಡಿಸಿದ್ದರು. ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಸೇರಿದಂತೆ ಅನೇಕರು ಮೂಗು ಮುರಿದಿದ್ದರು. ಆದರೆ, ತನ್ನ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ, ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ತಜ್ಞರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾರೆ. ಈ ಪೈಕಿ ರಾಜ್ಯದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿರುವುದು, ನೀಡುತ್ತಿರುವುದು ಗೃಹ ಲಕ್ಷ್ಮಿ ಯೋಜನೆ.
ನಗದು ರಹಿತ ವಹಿವಾಟು ಘೋಷಣೆಯೊಂದಿಗೆ ನವೆಂಬರ್ 8, 2016ರ ಮಧ್ಯರಾತ್ರಿ ಜಾರಿಯಾದ ನೋಟು ಅಮಾನ್ಯದಿಂದ ಹೆಚ್ಚು ಸಂತ್ರಸ್ತರಾಗಿದ್ದು ಗೃಹಿಣಿಯರು. ತಮ್ಮ ಅಡುಗೆ ಕೋಣೆಯ ಜೀರಿಗೆ, ಸಾಸಿವೆ ಡಬ್ಬಿಗಳಲ್ಲಿ ಆಪತ್ಕಾಲಕ್ಕೆಂದು ಸಣ್ಣ ಉಳಿತಾಯ ಮಾಡುವ ಪ್ರವೃತ್ತಿ ಗೃಹಿಣಿಯರಲ್ಲಿ ಜನ್ಮಜಾತವಾಗಿ ಬಂದಿದೆ. ಅಂತಹ ಉಳಿತಾಯದ ಮೊತ್ತಕ್ಕೆ ಕನ್ನ ಹಾಕಿದ್ದೇ ನೋಟು ಅಮಾನ್ಯ. ಇದರಿಂದ ಬಹಳಷ್ಟು ಗೃಹಿಣಿಯರು ಉಳಿತಾಯದ ಮೊತ್ತಕ್ಕೆ ಎರವಾದರು. ಅದರೊಂದಿಗೆ ಅವರ ಬಳಿಯ ನಗದು ಹರಿವಿಗೂ ತೊಡಕುಂಟಾಯಿತು. ಇದರಿಂದ ನೇರ ಪರಿಣಾಮವುಂಟಾಗಿದ್ದು ಮಾರುಕಟ್ಟೆಯಲ್ಲಿನ ಹಣದ ಹರಿವಿನ ಮೇಲೆ. ಹೀಗಾಗಿ 2016ರ ಆಸುಪಾಸಿನಲ್ಲಿ ಶೇ. 8ರಷ್ಟು ಜಿಡಿಪಿ ಪ್ರಗತಿ ಸಾಧಿಸಿದ್ದ ಭಾರತ, ನಂತರದ ವರ್ಷಗಳಲ್ಲಿ ಶೇ. 5ರ ಆಸುಪಾಸಿಗೆ ಕುಸಿಯಿತು. ಕೈಗಾರಿಕಾ ಉತ್ಪಾದನಾ ಚಟುವಟಿಕೆಗಳು ಹಿನ್ನಡೆ ಅನುಭವಿಸಿದವು. ಯುವಕರಿಗೆ ಗಮನಾರ್ಹ ಪ್ರಮಾಣದ ಉದ್ಯೋಗಾವಕಾಶ ಒದಗಿಸುತ್ತಿದ್ದ ಮಧ್ಯಮ ಮತ್ತು ಕಿರು ಕೈಗಾರಿಕೆಗಳು ಬಾಗಿಲು ಮುಚ್ಚಿಕೊಂಡವು. ಇವೆಲ್ಲದರ ಪರಿಣಾಮವಾಗಿ ದೇಶದ ಆರ್ಥಿಕತೆಯೂ ಕುಸಿಯಿತು.
ಇದಕ್ಕೆ ಕಳಶವಿಟ್ಟಂತೆ ಬೆಲೆಯೇರಿಕೆ ಮತ್ತು ಹಣದುಬ್ಬರ ಪ್ರಮಾಣ ಬಡ ಮತ್ತು ಮಧ್ಯಮ ವರ್ಗದ ಗೃಹಿಣಿಯರನ್ನು ಇನ್ನಿಲ್ಲದಂತೆ ಕಾಡಿತು ಹಾಗೂ ಈಗಲೂ ಕಾಡುತ್ತಿವೆ. ಒಂದು ಅಂದಾಜಿನ ಪ್ರಕಾರ, 2014ರಿಂದೀಚೆಗೆ, ಕೇವಲ 10 ವರ್ಷಗಳ ಅವಧಿಯಲ್ಲೇ ಅಗತ್ಯ ವಸ್ತುಗಳ ಬೆಲೆ ಸರಿಸುಮಾರು ದುಪ್ಪಟ್ಟಾಗಿದೆ. ಅರ್ಥಾತ್, ಒಂದು ಕುಟುಂಬದ ಮಾಸಿಕ ವೆಚ್ಚ ರೂ. 10,000 ಆಸುಪಾಸಿನಲ್ಲಿದ್ದದ್ದು, ಇದೀಗ ರೂ. 20,000ಕ್ಕೆ ಏರಿಕೆಯಾಗಿದೆ. ಅಂದರೆ, ಪ್ರತೀ ಕುಟುಂಬದ ಮೇಲೆ ರೂ. 10,000 ಅಧಿಕ ವೆಚ್ಚದ ಹೊರೆ ಬಿದ್ದಿದೆ. ಆದರೆ, ಇದೇ ಪ್ರಮಾಣದಲ್ಲಿ ಯಾವುದೇ ಬಡ ಮತ್ತು ಮಧ್ಯಮ ವರ್ಗದ ಆದಾಯ ದ್ವಿಗುಣಗೊಂಡಿಲ್ಲ. ಬದಲಿಗೆ, ಬಡ ಮತ್ತು ಮಧ್ಯಮ ವರ್ಗದ ತಲಾವಾರು ಆದಾಯ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದೆ ಎನ್ನುತ್ತವೆ ಕೆಲ ಅಧ್ಯಯನ ವರದಿಗಳು. ಅದಕ್ಕೆ ಪ್ರಮುಖ ಕಾರಣ: ನೋಟು ಅಮಾನ್ಯ, ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ಉಂಟಾಗಿರುವ ಖರೀದಿ ಸಾಮರ್ಥ್ಯದ ಕೊರತೆ.
ಈಗಿನ ಜಿಎಸ್‌ಟಿ ತೆರಿಗೆ ಪದ್ಧತಿಯಲ್ಲಿ ಯಾವುದೇ ವ್ಯಕ್ತಿ ಒಂದು ರೂ. ಮೌಲ್ಯದ ವಸ್ತುವನ್ನು ಖರೀದಿಸಿದರೆ, ಅದರಲ್ಲಿ ಸುಮಾರು 49 ಪೈಸೆಯನ್ನು ತೆರಿಗೆಯ ರೂಪದಲ್ಲೇ ಪಾವತಿಸುತ್ತಿದ್ದಾನೆ. ಇದು ಒಟ್ಟು ವೆಚ್ಚದ ಸರಿಸುಮಾರು ಶೇ. 50ರಷ್ಟಾಗಿದೆ. ಈ ಶೇ. 50ರಷ್ಟು ತೆರಿಗೆ ಪ್ರಮಾಣದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಸಮಾನ ಪ್ರಮಾಣದ ತೆರಿಗೆ ಹಂಚಿಕೊಳ್ಳುತ್ತವೆ. ಒಂದು ರೂ.ಯಲ್ಲಿ 50 ಪೈಸೆ ತೆರಿಗೆ ಬಂದರೆ, ಅದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ತಲಾ 25 ಪೈಸೆ ಹಂಚಿಕೊಳ್ಳುತ್ತವೆ. ಇಷ್ಟು ದುಬಾರಿ ತೆರಿಗೆಯೊಂದಿಗೆ ಬೆಲೆಯೇರಿಕೆ ಮತ್ತು ಹಣದುಬ್ಬರದ ಬಿಸಿಯೂ ತಟ್ಟಿರುವುದರಿಂದ ಯಾವುದೇ ಕುಟುಂಬ ತನ್ನ ಆದಾಯದಷ್ಟೇ ಪರೋಕ್ಷ ತೆರಿಗೆಯನ್ನು ಪಾವತಿಸುವಂತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಹಣದುಬ್ಬರ ಮತ್ತು ಬೆಲೆಯೇರಿಕೆಯ ಲೆಕ್ಕದಲ್ಲಿ ಯಾವುದೇ ಕುಟುಂಬದ ಮಾಸಿಕ ಆದಾಯ 10,000 ರೂ. ಇದ್ದರೆ, ಅದರ ವೆಚ್ಚ ರೂ. 20,000ಕ್ಕೆ ಏರಿಕೆಯಾಗಿದೆ. ಈ ಪೈಕಿ ರೂ. 10,000 (ಶೇ. 50ರಷ್ಟು) ಮೊತ್ತವನ್ನು ತೆರಿಗೆಗೆ ಪಾವತಿಸುವಂತಾಗಿದೆ. ಇದರರ್ಥ, ಕಳೆದ ಹತ್ತು ವರ್ಷಗಳಲ್ಲಿ ಬೆಲೆಯೇರಿಕೆ, ಹಣದುಬ್ಬರದ ರೂಪದಲ್ಲಿ ಆಳುವ ಸರಕಾರಗಳು ಸರಾಸರಿ ರೂ. 10,000ದಷ್ಟು ಹೊರೆಯನ್ನು ಪ್ರತೀ ಕುಟುಂಬದ ಮೇಲೆ ಹೇರಿವೆ.
2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ, ವಿರೋಧ ಪಕ್ಷಗಳೂ ಸೇರಿದಂತೆ ತಥಾಕಥಿತ ಆರ್ಥಿಕ ತಜ್ಞರು ರಾಜ್ಯ ದಿವಾಳಿಯಾಗಲಿದೆ ಎಂದು ಬೊಬ್ಬೆ ಹೊಡೆದಿದ್ದರು. ಆದರೆ, ಈ ಗ್ಯಾರಂಟಿ ಯೋಜನೆಗಳು ಜಾರಿಯಾದ ಕೇವಲ ಒಂದು ವರ್ಷದಲ್ಲೇ ಫಲ ನೀಡಲು ಪ್ರಾರಂಭಿಸಿವೆ. ರಾಜ್ಯದ ಜಿಎಸ್‌ಡಿಪಿ ದರ ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದ್ದು, ಶೇ. 10.2ಕ್ಕೆ ಏರಿಕೆಯಾಗಿದೆ. ಅದೇ ಯಾವುದೇ ಗ್ಯಾರಂಟಿ ಯೋಜನೆಗಳಿಲ್ಲದ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಂತಹ ರಾಜ್ಯಗಳು ಕಳಪೆ ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿವೆ. ಈ ಅಂಕಿ-ಅಂಶಗಳು ಹೇಳುತ್ತಿರುವ ವಾಸ್ತವವೆಂದರೆ, ಜನರ ಬಳಿ ನಗದು ಚಲಾವಣೆಯ ಸಾಮರ್ಥ್ಯವಿದ್ದಾಗ ಮಾತ್ರ, ಯಾವುದೇ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂಬ ಸತ್ಯವನ್ನು.
ರಾಜ್ಯ ಸರಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಗಳ ಪೈಕಿ ಗೃಹ ಲಕ್ಷ್ಮಿ ಹಾಗೂ ಯುವ ನಿಧಿ ಮಾತ್ರ ನೇರ ನಗದು ವರ್ಗಾವಣೆ ಯೋಜನೆಗಳಾಗಿವೆ. ಈ ಪೈಕಿ ಗೃಹ ಲಕ್ಷ್ಮಿ ಯೋಜನೆಯದ್ದೇ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಿಂಹಪಾಲು ಎಂಬುದಿಲ್ಲಿ ಗಮನಾರ್ಹ. ಅದರಲ್ಲೂ, ಗ್ರಾಮೀಣ ಭಾಗದ ಆರ್ಥಿಕತೆ ಪುಟಿದೇಳಲು ಈ ಯೋಜನೆ ಬಹು ದೊಡ್ಡ ಕೊಡುಗೆ ನೀಡಿದೆ. ನೇರವಾಗಿ ಮನೆಯ ಯಜಮಾನಿಯ ಖಾತೆಗೇ ಈ ಯೋಜನೆಯಡಿ ನಗದು ನೆರವು ಜಮೆಯಾಗುತ್ತಿರುವುದರಿಂದ, ಗೃಹಿಣಿಯರ ನಗದು ಚಲಾವಣೆಯ ಸಾಮರ್ಥ್ಯ ಮತ್ತೆ ಮರಳಿ ಬಂದಂತಾಗಿದೆ. ಅದು ರಾಜ್ಯದ ಜಿಡಿಪಿ ಬೆಳವಣಿಗೆಯ ರೂಪದಲ್ಲಿ ಪ್ರತಿಫಲನಗೊಂಡಿದೆ.
ಇಷ್ಟಕ್ಕೂ ಗ್ಯಾರಂಟಿ ಯೋಜನೆಗಳು ಯಾವುದೇ ಸರಕಾರ ನೀಡುತ್ತಿರುವ ಬಿಟ್ಟಿ ಭಾಗ್ಯವಲ್ಲ. ಬದಲಿಗೆ ತಮ್ಮ ಅಸಮರ್ಥ ಆಡಳಿತದಿಂದಾಗಿರುವ ಬೆಲೆಯೇರಿಕೆ ಹಾಗೂ ಹಣದುಬ್ಬರಕ್ಕೆ ನೀಡುತ್ತಿರುವ ಅಲ್ಪಪ್ರಮಾಣದ ಪರಿಹಾರ ಮಾತ್ರ. ರಾಜ್ಯ ಸರಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿಯಿಂದ ಪ್ರತೀ ಕುಟುಂಬಕ್ಕೆ ಸುಮಾರು ಐದು ಸಾವಿರ ರೂ. ಉಳಿತಾಯವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಅರ್ಥಾತ್, ಬೆಲೆಯೇರಿಕೆ ಮತ್ತು ಹಣದುಬ್ಬರದ ರೂಪದಲ್ಲಿ ಪ್ರತೀ ಕುಟುಂಬದಿಂದ ರಾಜ್ಯದ ಬೊಕ್ಕಸಕ್ಕೆ ಹರಿದು ಬರುತ್ತಿರುವ ಸರಾಸರಿ ರೂ. 5,000 ಮೊತ್ತವನ್ನು ಅರ್ಹ ಮತ್ತು ದುರ್ಬಲ ಸಮುದಾಯಗಳಿಗೆ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರಕಾರ ಪರಿಹಾರ ರೂಪದಲ್ಲಿ ಮರಳಿಸುತ್ತಿದೆಯೇ ಹೊರತು, ಬಿಟ್ಟಿ ಕೊಡುಗೆ ನೀಡುತ್ತಿಲ್ಲ. ಆದರೆ, ಗ್ಯಾರಂಟಿ ಯೋಜನೆಗಳನ್ನು ಹೆಜ್ಜೆಹೆಜ್ಜೆಗೆ ಬಿಟ್ಟಿ ಭಾಗ್ಯಗಳು ಎಂದು ಹಂಗಿಸುತ್ತಾ, ನಿರಂತರವಾಗಿ ಬೆಲೆಯೇರಿಕೆ ಹಾಗೂ ಹಣದುಬ್ಬರಕ್ಕೆ ಕಾರಣವಾಗುವಂತಹ ಆಡಳಿತ ನೀಡುತ್ತಿರುವ ಕೇಂದ್ರ ಸರಕಾರವೀಗ ಕರ್ನಾಟಕ ಸರಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಪಾಠ ಕಲಿಯಬೇಕಿದೆ. ತನ್ನ ದುರಾಡಳಿತದಿಂದ ಆಗಿರುವ ಬೆಲೆಯೇರಿಕೆ ಮತ್ತು ಹಣದುಬ್ಬರಕ್ಕೆ ಪ್ರಾಯಶ್ಚಿತ್ತವಾಗಿ ಅರ್ಹ ಮತ್ತು ದುರ್ಬಲ ಸಮುದಾಯಗಳಿಗೆ ಗ್ಯಾರಂಟಿ ಯೋಜನೆಯಂತಹುದೇ ನಗದು ಚಲಾವಣೆಯನ್ನು ಉತ್ತೇಜಿಸುವ ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಬೇಕಿದೆ. ಆಗ ಮಾತ್ರ ದೇಶದ ಆರ್ಥಿಕತೆ ಸುಸ್ಥಿರ ಪ್ರಗತಿ ಸಾಧಿಸಲು ಸಾಧ್ಯ.
ಕೊನೆಯ ಮಾತು: ರಾಜ್ಯ ಸರಕಾರ ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನ ಮಡುಗಟ್ಟಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಇಂತಹ ಶಾಸಕರ ಪ್ರಮುಖ ಆರೋಪ: ತಮಗೆ ಅಭಿವೃದ್ಧಿ ಕಾಮಗಾರಿಗಳಿಗೆ ಸಮರ್ಪಕ ಅನುದಾನ ಒದಗುತ್ತಿಲ್ಲ ಎಂಬುದು. ಇಂತಹ ಶಾಸಕರು ಅರ್ಥ ಮಾಡಿಕೊಳ್ಳಬೇಕಿರುವುದೇನೆಂದರೆ, ಸಾಮಾಜಿಕ ಸಬಲೀಕರಣ ಉಪಕ್ರಮಗಳು ನಗದು ಹರಿವನ್ನು ಉತ್ತೇಜಿಸುವುದರಿಂದ ಆರ್ಥಿಕ ಚಲನಶೀಲತೆಯ ವೇಗ ಕ್ಷಿಪ್ರವಾಗಿರುತ್ತದೆ. ಆರ್ಥಿಕ ಚಲನೆಯ ವೇಗ ಕ್ಷಿಪ್ರವಾಗಿದ್ದಾಗ, ಸರಕಾರದ ಬೊಕ್ಕಸಕ್ಕೆ ಹರಿದು ಬರುವ ಆದಾಯದ ಪ್ರಮಾಣವೂ ದ್ವಿಗುಣಗೊಳ್ಳುತ್ತದೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆಂದು ರಾಜ್ಯ ಸರಕಾರ ಮೀಸಲಿಟ್ಟಿರುವ ಮೊತ್ತ ವಾರ್ಷಿಕ ಸುಮಾರು 60,000 ಕೋಟಿ ರೂ. ಆದರೆ, 2023-24ನೇ ಸಾಲಿಗೆ ಹೋಲಿಸಿದರೆ, 2024-25ನೇ ಸಾಲಿನ ಬಜೆಟ್ ಗಾತ್ರ ಸುಮಾರು ರೂ. 30,000 ಕೋಟಿ ಹೆಚ್ಚಾಗಿದೆ. 2025-26ನೇ ಸಾಲಿಗೆ ಈ ಪ್ರಮಾಣವು ಮತ್ತೆ ರೂ. 30,000 ಕೋಟಿಗಿಂತ ಹೆಚ್ಚಾಗುವುದು ನಿಶ್ಚಿತ. ಅಲ್ಲಿಗೆ ಗ್ಯಾರಂಟಿ ಯೋಜನೆಗಳಿಗೆ ವೆಚ್ಚವಾಗುತ್ತಿರುವ ವಾರ್ಷಿಕ ರೂ. 60,000 ಕೋಟಿ ಮೊತ್ತ ಕೇವಲ ಎರಡೇ ವರ್ಷಗಳಲ್ಲಿ ರಾಜ್ಯದ ಬೊಕ್ಕಸಕ್ಕೆ ಹರಿದು ಬರಲಿದೆ. ಇನ್ನುಳಿದ ಮೂರು ವರ್ಷಗಳಲ್ಲಿ ಭೌತಿಕ ಅಭಿವೃದ್ಧಿಗೆ ಬೇಕಾದ ಅನುದಾನಗಳು ತಮಗೆ ತಾವೇ ಲಭ್ಯವಾಗಲಿವೆ.
ಭೌತಿಕ ಅಭಿವೃದ್ಧಿ ಕಾಮಗಾರಿಗಳು ಸೀಮಿತ ಪ್ರಮಾಣದಲ್ಲಿ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದರೆ, ಸಾಮಾಜಿಕ ಸಬಲೀಕರಣ ಯೋಜನೆಗಳು ದೀರ್ಘಾವಧಿಯಲ್ಲಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತವೆ. ಅಭಿವೃದ್ಧಿಯೆಂದರೆ, ಕೇವಲ ಭೌತಿಕ ಅಭಿವೃದ್ಧಿಯಲ್ಲ; ಬದಲಿಗೆ ಸಮಾಜವನ್ನು ಸಮಷ್ಟಿ ಪ್ರಜ್ಞೆಯೊಂದಿಗೆ ಸಬಲೀಕರಣಗೊಳಿಸುವುದೇ ನೈಜ ಅಭಿವೃದ್ಧಿ ಎಂಬುದು ಇಂತಹ ಕಾಂಗ್ರೆಸ್ ಶಾಸಕರಿಗೆ ಅರ್ಥವಾಗಬೇಕಿದೆ.