ಹಿಪ್ಪುನೇರಳೆ ಸೊಪ್ಪಿನ ಬೆಲೆ ಕುಸಿತದಿಂದ ಆತಂಕದಲ್ಲಿ ಬೆಳೆಗಾರರು
ಹೊಸಕೋಟೆ: ಹಿಪ್ಪು ನೇರಳೆ ಸೊಪ್ಪಿನ ಬೆಲೆ ಇತ್ತೀಚೆಗೆ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ.
ಮಾರ್ಚ್ ತಿಂಗಳಿನಲ್ಲಿ ಒಂದು ಮೂಟೆ ಹಿಪ್ಪುನೇರಳೆ ಸೊಪ್ಪಿನ ದರ ೧,೧೦೦ ರೂ.ಯಿಂದ ೧,೨೦೦ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಇದೀಗ ಬೇಡಿಕೆ ಕುಸಿದ ಪರಿಣಾಮ ಸೊಪ್ಪನ್ನು ಕೇಳುವವರಿಲ್ಲ, ಪ್ರಸ್ತುತ ಒಂದು ಮೂಟೆ ರೂ.೬೦೦ ರಿಂದ ೭೦೦ರೂ.ಗೆ ಮಾರಾಟವಾಗುತ್ತಿದ್ದು, ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ.
ರೇಷ್ಮೆ ಗೂಡಿನ ಜತೆಗೆ ಹಿಪ್ಪು ನೇರಳೆ ಸೊಪ್ಪಿನ ದರ ಹೆಚ್ಚಾಗಿತ್ತು. ಕೆಲವು ರೈತರು ಸೊಪ್ಪನ್ನು ಹಾಗೆಯೇ ತೋಟಗಳಲ್ಲಿ ಬಿಟ್ಟಿದ್ದು, ಸುತ್ತಮುತ್ತಲಿನ ರೇಷ್ಮೆ ಹುಳು ಸಾಕಣೆದಾರರು ಉಚಿತವಾಗಿ ಕೊಯ್ದುಕೊಂಡು ಹೋಗುತ್ತಿದ್ದಾರೆ.
ಸಾವಿರಾರು ಹೆಕ್ಟೇರ್‌ನಲ್ಲಿ ಹಿಪ್ಪು ನೇರಳೆ ಬೆಳೆ: ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ
ಮಾಹಿತಿ ಪ್ರಕಾರ ಒಟ್ಟು ೫,೦೫೨ಹೆಕ್ಟೇರ್‌ನಲ್ಲಿ ಹಿಪ್ಪುನೇರಳೆ ಸೊಪ್ಪುಬೆಳೆಯಲಾಗುತ್ತಿದ್ದು, ೭,೪೩೯ ರೇಷ್ಮೆ ಬೆಳೆಗಾರರ ಕುಟುಂಬಗಳು ರೇಷ್ಮೆ ಕೃಷಿಯನ್ನು ನಂಬಿಕೊಂಡಿದ್ದು, ಇದೀಗ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.
ಉತ್ತಮ ಮಳೆಯಿಂದಾಗಿ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳೆದಿದ್ದರು ಖರೀದಿಸುವವರು ಇಲ್ಲದಂತಹ ಪರಿಸ್ಥಿತಿಯನ್ನು ಬೆಳೆಗಾರರು ಎದುರಿಸುತ್ತಿದ್ದಾರೆ. ಸರಕಾರ ಕೂಡಲೇ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ಗೂಡಿನ ದರ ನಿಗದಿಗೊಳಿಸಿ ಬೆಂಬಲ ಬೆಲೆ ನೀಡಬೇಕು ಎಂದು ಬೆಳೆಗಾರರುಆಗ್ರಹಿಸಿದ್ದಾರೆ.
ಗುಣಮಟ್ಟದ ಸೊಪ್ಪಿಗಿಲ್ಲ ಬೇಡಿಕೆ
ಒಂದು ಎಕರೆ ರೇಷ್ಮೆ ತೋಟದಲ್ಲಿ ೧೨೫ರಿಂದ ೧೫೦ ರೇಷ್ಮೆ ಮೊಟ್ಟೆ ಮೇಯಿಸಿ ಉತ್ತಮ ಇಳುವರಿಯ ರೇಷ್ಮೆಗೂಡು ಪಡೆಯಲು ಗುಣಮಟ್ಟದ ಸೊಪ್ಪು ಅಗತ್ಯ. ೧೦೦ ಮೊಟ್ಟೆ ರೇಷ್ಮೆ ಚಿತ್ರ ಹುಳ ಸಾಕಣೆಗೆ ಕನಿಷ್ಠ ೩೫ರಿಂದ ೪೦ ಮೂಟೆ ಹಿಪ್ಪುನೇರಳೆ ಸೊಪ್ಪು ಬೇಕಾಗಿದೆ.
ರೇಷ್ಮೆಗೂಡು ಮತ್ತು ಹಿಪ್ಪುನೇರಳೆ ಸೊಪ್ಪಿನ ಬೆಲೆಯ ಏರಿಳಿತ ಸಾಮಾನ್ಯ. ಹಿಂದೆ ದುಬಾರಿಯಾಗಿತ್ತು. ಇತ್ತೀಚೆಗೆ ಗೂಡಿನ ಬೆಲೆ ಕುಸಿತ ದಿಂದಾಗಿ ಸೊಪ್ಪಿನ ಬೇಡಿಕೆಯೂ ದಿಢೀರ್ ಕುಸಿದಿದೆ. ತೋಟಗಳಿರುವವರು ರೇಷ್ಮೆ ಹುಳು ಸಾಕುವವರು ಸಹ ಆಸಕ್ತಿ ತೋರಿಸುತ್ತಿಲ್ಲ. ಇರುವ ಒಂದು ಎಕರೆ ಹಿಪ್ಪುನೇರಳೆ ಸೊಪ್ಪನ್ನು ಉಚಿತವಾಗಿ ಜಾನುವಾರುಗಳಿಗೆ ಮೇಯಿಸಲು ರೈತರಿಗೆ ಕೊಡಲಾಗು ತ್ತಿದೆ. ರೇಷ್ಮೆ ಬೆಳೆಗಾರರ ಸಂಕಷ್ಟಗಳನ್ನು ಸರಕಾರ ದರ ನಿಗದಿಗೊಳಿಸಿ ಗೂಡು ಬೆಲೆ ಏರಿಸಬೇಕು.
-ಎಚ್.ಎಂ.ರವಿಕುಮಾರ್, ಹಿಪ್ಪುನೇರಳೆ, ಬೆಳೆಗಾರ