ಗ್ಯಾರಂಟಿ ಯೋಜನೆಗಳು: ಬಿಟ್ಟಿ ಭಾಗ್ಯವೋ? ಆರ್ಥಿಕ ತಜ್ಞತೆಯೋ?
2016ರ ನಂತರ ಭಾರತದ ಆರ್ಥಿಕತೆಯ ಮೇಲೆ ಮೂರು ಮಹಾ ಮರ್ಮಾಘಾತಗಳು ಎರಗಿದವು - ನೋಟು ಅಮಾನ್ಯ, ಜಿಎಸ್‌ಟಿ ಜಾರಿ ಹಾಗೂ ಕೊರೋನ ಲಾಕ್‌ಡೌನ್.
ನವೆಂಬರ್ 8, 2016ರ ಮಧ್ಯರಾತ್ರಿಯಿಂದ ದಿಢೀರನೆ ಜಾರಿಗೆ ಬಂದ ನೋಟು ಅಮಾನ್ಯದಿಂದ ಭಾರತದ ಆರ್ಥಿಕತೆ ತಲ್ಲಣಿಸಿ ಹೋಯಿತು. ನಗದು ರಹಿತ ವಹಿವಾಟು, ಕಪ್ಪು ಹಣ ನಿಯಂತ್ರಣ ಹಾಗೂ ಭಯೋತ್ಪಾದನೆ ನಿರ್ಮೂಲನೆಯ ಧ್ಯೇಯ ವಾಕ್ಯದೊಂದಿಗೆ ಜಾರಿಯಾದ ನೋಟು ಅಮಾನ್ಯವು ತನ್ನ ಮೂರು ಮುಖ್ಯ ಉದ್ದೇಶಗಳಲ್ಲೂ ದಯನೀಯವಾಗಿ ವಿಫಲಗೊಂಡಿತು. ಇದರೊಂದಿಗೆ, ಅಲ್ಲಿಯವರೆಗೆ ಸರಾಸರಿ ಶೇ. 8 ದರದಲ್ಲಿ ಬೆಳವಣಿಗೆ ಸಾಧಿಸುತ್ತಿದ್ದ ಭಾರತದ ಜಿಡಿಪಿಯ ಕೀಲನ್ನೇ ಮುರಿಯಿತು. ಇದರಿಂದ ಲಕ್ಷಾಂತರ ಚಿಲ್ಲರೆ ವ್ಯಾಪಾರಿಗಳು, ಕಿರು ಮತ್ತು ಸಣ್ಣ ಕೈಗಾರಿಕೆಗಳ ಮಾಲಕರು ಬೀದಿಗೆ ಬಿದ್ದರು. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಒದಗಿಸುತ್ತಿದ್ದ ಕಿರು ಮತ್ತು ಸಣ್ಣ ಕೈಗಾರಿಕೆಗಳ ಅವಸಾನದಿಂದ ಜನರ ಖರೀದಿ ಸಾಮರ್ಥ್ಯ ಇಳಿಮುಖಗೊಂಡಿತು. ಇದರ ನೇರ ಪರಿಣಾಮವಾಗಿದ್ದು ಸರಕಾರದ ಬೊಕ್ಕಸಕ್ಕೆ ಹರಿದು ಬರುತ್ತಿದ್ದ ತೆರಿಗೆ ಪ್ರಮಾಣ ಹಾಗೂ ಜಿಡಿಪಿ ಬೆಳವಣಿಗೆಯ ಮೇಲೆ. ಅಲ್ಲಿಯವರೆಗೂ ಶೇ. 8ರ ಸರಾಸರಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದ ಭಾರತದ ಆರ್ಥಿಕತೆಯು ಶೇ. 5ರ ಆಸುಪಾಸಿಗೆ ಕುಸಿಯಿತು. ಆರ್ಥಿಕ ವಹಿವಾಟುಗಳು ಮಂಕಾಗಿದ್ದರಿಂದ ಬೊಕ್ಕಸಕ್ಕೆ ಹರಿದು ಬರುತ್ತಿದ್ದ ಆದಾಯವೂ ಕ್ಷೀಣಿಸಿ ವಿತ್ತೀಯ ಕೊರತೆ ಆಘಾತಕಾರಿ ಪ್ರಮಾಣದಲ್ಲಿ ಏರಿಕೆಯಾಯಿತು.
ಅಲ್ಲಿಯವರೆಗೆ ದೇಶಾದ್ಯಂತ ಏಕರೂಪ ತೆರಿಗೆ ಪ್ರಸ್ತಾವವನ್ನು ಹೊಂದಿದ್ದ ಜಿಎಸ್‌ಟಿಯನ್ನು ವಿರೋಧಿಸುತ್ತಾ ಬರುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಜುಲೈ 1, 2017ರ ಮಧ್ಯರಾತ್ರಿಯಂದು ಜಿಎಸ್‌ಟಿ ಜಾರಿಗೊಳಿಸಿ, ಅದನ್ನು ಐತಿಹಾಸಿಕ ಕ್ರಾಂತಿ ಎಂದು ಬಣ್ಣಿಸಿದರು. ಆದರೆ, ಅವೈಜ್ಞಾನಿಕ ತೆರಿಗೆ ಹಂತಗಳನ್ನು (Tax slabs) ಹೊಂದಿದ್ದುದರಿಂದ ಅದಾಗಲೇ ನೋಟು ಅಮಾನ್ಯದ ಗಾಯದ ನೋವಿನಿಂದ ನರಳುತ್ತಿದ್ದ ಭಾರತದ ಆರ್ಥಿಕತೆಯ ಮೇಲೆ ಉಪ್ಪು ಸವರಿದಂತಾಯಿತು. ಈ ಬಾರಿ ಮತ್ತಷ್ಟು ಕಿರು ಮತ್ತು ಸಣ್ಣ ಕೈಗಾರಿಕೆಗಳು ಕೊನೆಯುಸಿರೆಳೆದವು.
ಜಿಎಸ್‌ಟಿ ಜಾರಿಯ ನಂತರ ಹಾಗೂ ಹೀಗೂ ಏದುಸಿರು ಬಿಟ್ಟುಕೊಂಡು ಹಳಿಗೆ ಮರಳಿದ್ದ ಭಾರತದ ಆರ್ಥಿಕತೆಗೆ ಮರ್ಮಾಘಾತ ನೀಡಿದ್ದು ಅವೈಜ್ಞಾನಿಕ ಕೊರೋನ ಲಾಕ್‌ಡೌನ್. ಮಾರ್ಚ್ 24ರ ಮಧ್ಯರಾತ್ರಿಯಿಂದ ಏಕಾಏಕಿ ಕೊರೋನ ಲಾಕ್‌ಡೌನ್ ಘೋಷಿಸಿದ್ದರಿಂದ ವಲಸೆ ಕಾರ್ಮಿಕರು, ದಿನಗೂಲಿ ನೌಕರರ ಬದುಕು ಮೂರಾಬಟ್ಟೆಯಾಯಿತು. ಅದೆಷ್ಟೋ ಸಹಸ್ರ ವಲಸೆ ಕಾರ್ಮಿಕರು ಲಾಕ್‌ಡೌನ್ ಅವಧಿಯಲ್ಲಿ ಸಹಸ್ರಾರು ಕಿ.ಮೀ. ದೂರವನ್ನು ನಡೆದೇ ತಮ್ಮ ತವರು ಸೇರಿದರು. ಮತ್ತೆ ಕೆಲವರು ದಾರಿ ಮಧ್ಯೆಯೇ ಕೊನೆಯುಸಿರೆಳೆದರು. ಒಟ್ಟಿನಲ್ಲಿ ಅದೊಂದು ಮನುಕುಲದ ಪಾಲಿನ ಭೀಕರ ಬಿಕ್ಕಟ್ಟಾಗಿ ಇತಿಹಾಸದಲ್ಲಿ ದಾಖಲಾಗಿದೆ.
ಇಡೀ ವಿಶ್ವ ಕೊರೋನದ ಪರಿಣಾಮವನ್ನು ಅಂದಾಜಿಸುವಲ್ಲಿ ವಿಫಲವಾಗಿ ಅವೈಜ್ಞಾನಿಕ ಲಾಕ್‌ಡೌನ್ ಮೊರೆ ಹೋಗಿದ್ದರಿಂದ ಇಡೀ ವಿಶ್ವದ ಆರ್ಥಿಕತೆಯೂ ಏಕಾಏಕಿ ಕುಸಿಯಿತು. ಈ ಸಂದರ್ಭದಲ್ಲಿ ಬಹುತೇಕ ಅರ್ಥಶಾಸ್ತ್ರಜ್ಞರು ನೀಡಿದ ಸಲಹೆ: ಜನರ ಬಳಿ ಹಣದ ಚಲನೆ ಇರುವಂತೆ ನೋಡಿಕೊಳ್ಳಬೇಕು ಎಂದು. ಆದರೆ, ಭಾರತದ ವಿಚಾರದಲ್ಲಿ ಇದು ತಿರುವುಮುರುವು ಆಯಿತು. ದುಡಿಯುವ ವರ್ಗದ ಜನರ ಕೈಯಲ್ಲಿ ಹಣ ಇರುವಂತೆ ನೋಡಿಕೊಳ್ಳಬೇಕಿದ್ದ ಆಳುವ ಸರಕಾರವು, ಬಂಡವಾಳಶಾಹಿಗಳ ಲಕ್ಷಾಂತರ ಕೋಟಿ ರೂ. ಬ್ಯಾಂಕ್ ಸಾಲವನ್ನು ಮನ್ನಾ ಮಾಡುವ ಇಲ್ಲವೇ ರೈಟ್ ಆಫ್ ಮಾಡುವ ಜನವಿರೋಧಿ ನಿಲುವು ತೆಗೆದುಕೊಂಡಿತು. ಇದರಿಂದ 2014ರವರೆಗೆ ರೂ. 55 ಲಕ್ಷ ಕೋಟಿಯಷ್ಟಿದ್ದ ಭಾರತದ ಒಟ್ಟಾರೆ ವಿದೇಶಿ ಸಾಲದ ಪ್ರಮಾಣವು 2024ರ ವೇಳೆಗೆ ರೂ. 175 ಲಕ್ಷ ಕೋಟಿಗೆ ಏರಿಕೆಯಾಗಿದೆ.
ಜನಸಾಮಾನ್ಯರ ಕೈಯಲ್ಲಿ ಓಡಾಡಬೇಕಿದ್ದ ಹಣವು ಕೆಲವೇ ಆಯ್ದ ಉದ್ಯಮಪತಿಗಳ ಬಳಿ ಕೇಂದ್ರೀಕೃತಗೊಂಡಿದ್ದರಿಂದ ಕೇವಲ ಬಡತನ ಮತ್ತು ನಿರುದ್ಯೋಗ ಮಾತ್ರ ಏರಿಕೆಯಾಗಿಲ್ಲ; ಬದಲಿಗೆ, ಆಟೊಮೊಬೈಲ್, ಎಫ್‌ಎಂಸಿಜಿ ವಲಯದ ಬೆಳವಣಿಗೆಯ ಮೇಲೂ ಪ್ರತಿಕೂಲ ಪರಿಣಾಮವುಂಟಾಗಿದೆ. ಗ್ರಾಮೀಣ ಭಾರತದಲ್ಲಿ ಹಣದ ಹರಿವು ಕ್ಷೀಣಿಸಿರುವುದರಿಂದ ಆಟೊಮೊಬೈಲ್ ಹಾಗೂ ಎಫ್‌ಎಂಸಿಜಿ ವಲಯಗಳು ಹಿಮ್ಮುಖ ಬೆಳವಣಿಗೆ ದಾಖಲಿಸತೊಡಗಿವೆ. ಭಾರತದ ಮುಂಚೂಣಿ ಎಫ್‌ಎಂಸಿಜಿ ಉದ್ಯಮವಾದ ಹಿಂದೂಸ್ಥಾನ್ ಯೂನಿಲೀವರ್ ಲಿಮಿಟೆಡ್, ಗ್ರಾಮೀಣ ಭಾಗದಲ್ಲಿನ ಕಳಪೆ ಆರ್ಥಿಕತೆಯಿಂದಾಗಿ 2023-24ನೇ ಆರ್ಥಿಕ ವರ್ಷದಲ್ಲಿ ಶೇ. 1.6ರಷ್ಟು ಮಾರಾಟ ಕುಸಿತ ದಾಖಲಿಸಿದೆ. ಹಾಗೆಯೇ ಆಟೊಮೊಬೈಲ್ ಉದ್ಯಮ, ಮುಖ್ಯವಾಗಿ ದ್ವಿಚಕ್ರ ವಾಹನ ತಯಾರಿಕಾ ಉದ್ಯಮ ಕೂಡಾ ಗ್ರಾಮೀಣ ಭಾಗದಲ್ಲಿ ಸತತ ಐದು ವರ್ಷಗಳಿಂದ ಮಾರಾಟ ಕುಸಿತ ದಾಖಲಿಸತೊಡಗಿದೆ.
ಶೇ. 60ಕ್ಕಿಂತ ಹೆಚ್ಚು ಗ್ರಾಮೀಣ ಭಾಗವನ್ನು ಹೊಂದಿರುವ ಭಾರತದಂಥ ಕೃಷಿ ಆಧಾರಿತ ದೇಶದಲ್ಲಿ ಗ್ರಾಮೀಣ ಆರ್ಥಿಕತೆಯ ಆರೋಗ್ಯ ಸುಸ್ಥಿತಿಯಲ್ಲಿರುವುದು ಅತ್ಯಂತ ಅವಶ್ಯಕ. ಅದರಲ್ಲೂ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಿದ್ದರೆ ಗ್ರಾಮೀಣ ಭಾರತದ ಆರ್ಥಿಕ ಆರೋಗ್ಯ ಸುಸ್ಥಿತಿಯಲ್ಲಿರಬೇಕಾದದ್ದು ಅಪೇಕ್ಷಣೀಯ. ಇದರಿಂದ ಕೈಗಾರಿಕಾ ವಲಯವೂ ಸಮತೋಲಿತ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರ ಧನಿಕ ಪರ ಆರ್ಥಿಕ ನೀತಿಗಳಿಂದಾಗಿ ಭಾರತದಲ್ಲಿನ ಬಡವ-ಶ್ರೀಮಂತರ ನಡುವಿನ ಅಂತರ ಸ್ವಾತಂತ್ರ್ಯ ಪೂರ್ವ ಕಾಲಘಟ್ಟಕ್ಕೆ ತಲುಪಿದೆ ಎಂದು ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ. ಇಂತಹ ಹೊತ್ತಿನಲ್ಲಿ ದೇಶದ ಆರ್ಥಿಕ ಆರೋಗ್ಯದ ಬಗ್ಗೆ ಕಾಳಜಿ ಇರುವ ಯಾವುದೇ ಸರಕಾರ ಮಾಡಬೇಕಾದ ಕೆಲಸ ಜನರ ಕೈಯಲ್ಲಿ, ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಜನರು ಹೆಚ್ಚು ಹೆಚ್ಚು ನಗದು ಚಲಾಯಿಸುವಂತೆ ನೋಡಿಕೊಳ್ಳುವುದು. ಹಾಗೆ ಮಾಡಬೇಕಾದರೆ, ಸರಕಾರವೇ ಮುಂದಾಗಿ ಜನರ ಕೈಯಲ್ಲಿ ಮಾಸಿಕ ಇಂತಿಷ್ಟು ನಗದು ಉಳಿತಾಯವಾಗುವಂತಹ ಯೋಜನೆಗಳನ್ನು ರೂಪಿಸುವುದು. ಇಂತಹ ಯೋಜನೆಗಳನ್ನು ಆರ್ಥಿಕ ಪರಿಭಾಷೆಯಲ್ಲಿ ಸಾಮಾಜಿಕ ಬಂಡವಾಳ ಹೂಡಿಕೆ ಎಂದು ಕರೆಯಲಾಗುತ್ತದೆ.
ಗ್ಯಾರಂಟಿ ಯೋಜನೆಗಳು: ಆರ್ಥಿಕ ತಜ್ಞತೆಯ ಜ್ವಲಂತ ನಿದರ್ಶನ
ಬಡ ಮತ್ತು ಮಧ್ಯಮ ವರ್ಗಗಳ ಬಳಿ ಹಣದ ಹರಿವಿನ ಕೊರತೆಯುಂಟಾಗಲು ಪ್ರಮುಖ ಕಾರಣ ಹಣದುಬ್ಬರ ಮತ್ತು ಬೆಲೆಯೇರಿಕೆ. ಬಡ ಮತ್ತು ಮಧ್ಯಮ ವರ್ಗದ ಆರ್ಥಿಕತೆ ಎಂದಿಗೂ ಚಲನಶೀಲವಾದದ್ದು. ಅವರ ಬಳಿ ಹಣವಿದ್ದರೆ, ಅದನ್ನವರು ಕೂಡಿಡುವುದಕ್ಕಿಂತ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಖರ್ಚು ಮಾಡುವುದೇ ಹೆಚ್ಚು. ಈ ವರ್ಗಗಳ ವೆಚ್ಚ ಸಾಮರ್ಥ್ಯ ಹೆಚ್ಚಿದಷ್ಟೂ ಮಾರುಕಟ್ಟೆಗಳಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಮಾರುಕಟ್ಟೆಗಳಲ್ಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಉದ್ಯೋಗ ನೇಮಕಾತಿ ಪ್ರಮಾಣವೂ ಏರಿಕೆಯಾಗುತ್ತದೆ. ಮಾರುಕಟ್ಟೆಯ ಧಾರಣ ಶಕ್ತಿ ಹಾಗೂ ಉದ್ಯೋಗ ಪ್ರಮಾಣ ಏರಿಕೆಯಾದಂತೆಲ್ಲ ಸರಕಾರದ ಬೊಕ್ಕಸಕ್ಕೆ ತೆರಿಗೆ ರೂಪದಲ್ಲಿ ಹರಿದು ಬರುವ ಆದಾಯದ ಪ್ರಮಾಣವೂ ಏರಿಕೆಯಾಗುತ್ತಾ ಹೋಗುತ್ತದೆ.
ಕರ್ನಾಟಕ ರಾಜ್ಯದಲ್ಲಿ ಜಾರಿಗೊಳಿಸಲಾಗಿರುವ ಗ್ಯಾರಂಟಿ ಯೋಜನೆಗಳು ಈ ನಿಟ್ಟಿನಲ್ಲಿ ಇಡೀ ದೇಶಕ್ಕೇ ಮಾದರಿಯಾಗುವಂಥದ್ದು. ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ, ಗೃಹ ಜ್ಯೋತಿ ಹಾಗೂ ಯುವ ನಿಧಿ ಯೋಜನೆಗಳ ಮೂಲಕ ಕರ್ನಾಟಕದ ಕಾಂಗ್ರೆಸ್ ಸರಕಾರವು ವಾರ್ಷಿಕ ಸುಮಾರು ರೂ. 52,000 ಕೋಟಿ ಸಾಮಾಜಿಕ ಬಂಡವಾಳ ಹೂಡಿಕೆ ಮಾಡುತ್ತಿದೆ. ಹಾಲಿ ಜಿಎಸ್‌ಟಿ ತೆರಿಗೆ ಪದ್ಧತಿಯಲ್ಲಿ ಪ್ರತೀ ಒಂದು ರೂಪಾಯಿಗೆ 48 ಪೈಸೆಯಷ್ಟು ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸ ಸೇರುತ್ತಿದೆ. ಈ 48 ಪೈಸೆಯಲ್ಲಿ 24 ಪೈಸೆ (ತೆರಿಗೆಯ ಅರ್ಧ ಪಾಲು) ಕೇಂದ್ರ ಸರಕಾರದ ಬೊಕ್ಕಸ ಸೇರಿದರೆ, ಉಳಿದ 24 ಪೈಸೆ ಕರ್ನಾಟಕ ಸರಕಾರದ ಬೊಕ್ಕಸ ಸೇರುತ್ತಿದೆ. ಇದರಿಂದಾಗಿರುವ ಸಕಾರಾತ್ಮಕ ಫಲಿತಾಂಶವೆಂದರೆ, ಗ್ರಾಮೀಣ ಭಾಗದ ಖರೀದಿ ಸಾಮರ್ಥ್ಯ ವೃದ್ಧಿಯಾಗಿರುವುದು. ಈ ಖರೀದಿ ಸಾಮರ್ಥ್ಯದ ಚೇತರಿಕೆಯಿಂದ ನೇರವಾಗಿ ಕೈಗಾರಿಕೋದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಲಾಭವಾಗುತ್ತಿರುವುದು ಹಾಗೂ ರಾಜ್ಯದ ಜಿಡಿಪಿ ಸುಮಾರು ಶೇ. 12ಕ್ಕೆ ಏರಿಕೆಯಾಗಿರುವುದು. ಒಟ್ಟಾರೆಯಾಗಿ ಇಡೀ ರಾಜ್ಯದಲ್ಲಿ ಆರ್ಥಿಕ ಚಲನಶೀಲತೆ ಏರುಮುಖವಾಗಿರುವುದು.
ಬಿಜೆಪಿಯೇತರ ಸರಕಾರಗಳಿರುವ ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳ, ದಿಲ್ಲಿ ರಾಜ್ಯಗಳಲ್ಲಿ ಒಂದಿಲ್ಲ ಒಂದು ರೂಪದಲ್ಲಿ ಇಂತಹ ಸಾಮಾಜಿಕ ಬಂಡವಾಳ ಹೂಡಿಕೆ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇದಕ್ಕಿಂತ ಮಹತ್ವದ ಸಂಗತಿಯೆಂದರೆ, ಯಾವುದೇ ಸಾಮಾಜಿಕ ಬಂಡವಾಳ ಹೂಡಿಕೆ ಯೋಜನೆಗಳಿಲ್ಲದ ಬಿಜೆಪಿ ಸರಕಾರಗಳಿರುವ ರಾಜ್ಯಗಳಿಗೆ ಹೋಲಿಸಿದರೆ ಈ ಎಲ್ಲ ರಾಜ್ಯಗಳಲ್ಲೇ ಆರ್ಥಿಕ ಚಲನಶೀಲತೆ ಆರೋಗ್ಯಕರವಾಗಿದೆ.
ಸರಕಾರವೆಂಬುದು ಒಂದು ಜನ ಸಮೂಹ ತಮ್ಮ ಒಳಿತಿಗಾಗಿ ಸೃಷ್ಟಿ ಮಾಡಿಕೊಂಡಿರುವ ಆಡಳಿತಾತ್ಮಕ ವ್ಯವಸ್ಥೆ. ಒಂದು ಪ್ರದೇಶದಲ್ಲಿ ವಾಸಿಸುವ ಜನಸಮೂಹವು ಸಮತೋಲಿತ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಿದ್ದರೆ, ಜನರಿಂದ ಆಯ್ಕೆಗೊಂಡ ಸರಕಾರಗಳು ಅಂಚಿಗೆ ದೂಡಲ್ಪಟ್ಟ, ದುರ್ಬಲ ಸಮುದಾಯಗಳನ್ನು ಮೇಲೆತ್ತಲು ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಿರುವುದು ಅದರ ಸಾಮಾಜಿಕ ಹೊಣೆಗಾರಿಕೆಯಾಗಿರುತ್ತದೆ. ಇಂತಹ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಲು ಗ್ಯಾರಂಟಿ ಯೋಜನೆಗಳಂತಹ ಸಾಮಾಜಿಕ ಬಂಡವಾಳ ಹೂಡಿಕೆಗಳು ಅತ್ಯಗತ್ಯವಾಗಿವೆ.
ಆಯ್ದ ಉದ್ಯಮಪತಿಗಳಿಗೆ ಲಕ್ಷಾಂತರ ಕೋಟಿ ರೂ. ಸಾಲ ಮನ್ನಾ ಅಥವಾ ರೈಟ್ ಆಫ್ ಮಾಡಿದರೂ ಚಕಾರವೆತ್ತದ ಜನರು, ಅದೇ ದೈನಂದಿನ ಜೀವನ ನಿರ್ವಹಣೆಗೆ ಪರದಾಡುತ್ತಿರುವ ಜನರಿಗೆ ಒದಗಿಸುವ ಆರ್ಥಿಕ ನೆರವು ಅಥವಾ ಅಂಥವರ ಮೇಲೆ ಮಾಡುವ ಸಾಮಾಜಿಕ ಬಂಡವಾಳ ಹೂಡಿಕೆಯನ್ನು ಭಿಕ್ಷೆ, ಬಿಟ್ಟಿ ಭಾಗ್ಯ ಎಂದು ಜರಿಯುವುದು ಅವರ ರೂಢಿಗತ ಜೀವವಿರೋಧಿ ಮನಸ್ಥಿತಿಗೆ ನಿದರ್ಶನವಲ್ಲದೆ ಮತ್ತೇನಲ್ಲ.
ಯಾವುದೇ ವ್ಯಕ್ತಿಗೆ ಮೀನು ಹಿಡಿದುಕೊಡುವ ಬದಲು, ಮೀನು ಹಿಡಿಯುವುದನ್ನು ಕಲಿಸಬೇಕು ಎಂದು ಬಿಟ್ಟಿ ಉಪದೇಶ ನೀಡುವುದು ಇಂತಹ ಜೀವವಿರೋಧಿಗಳ ಸಾಮಾನ್ಯ ಧೋರಣೆ. ಆದರೆ, ಯಾವುದೇ ಜವಾಬ್ದಾರಿಯುತ ಸರಕಾರವೊಂದು ಮೀನು ಹಿಡಿಯುವ ತ್ರಾಣವೇ ಇಲ್ಲದ ವ್ಯಕ್ತಿಯೊಬ್ಬನ ಹೊಟ್ಟೆಗೆ ಮೊದಲು ಅನ್ನದ ಆಸರೆ ಒದಗಿಸಬೇಕಾಗುತ್ತದೆ. ಆ ಅನ್ನ ತಿಂದು ತ್ರಾಣ ಪಡೆದ ನಂತರವಷ್ಟೇ ಅಂತಹ ವ್ಯಕ್ತಿಗೆ ಮೀನು ಹಿಡಿಯುವ ಕಸುಬನ್ನು ಕಲಿಸಲು ಸಾಧ್ಯ. ಒಂದು ಕಾಲದಲ್ಲಿ ತೀವ್ರ ಸ್ವರೂಪದ ವಲಸೆ ಸಮಸ್ಯೆ ಎದುರಿಸುತ್ತಿದ್ದ ತಮಿಳುನಾಡಿನಲ್ಲಿ ಜೆ. ಜಯಲಲಿತಾ ಜಾರಿ ಮಾಡಿದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಂದ ಅಲ್ಲಿನ ಆರ್ಥಿಕತೆ ಹೇಗೆ ಸುಸ್ಥಿರವಾಗಿದೆ ಎಂಬುದನ್ನು ಗಮನಿಸಿದರೆ ಮಾತ್ರ ಮೇಲಿನ ಮಾತು ಅರ್ಥವಾಗಲು ಸಾಧ್ಯ.