ವಿದ್ಯುತ್ ಬಿಲ್ ಪಾವತಿಸಲು ಪರದಾಡುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾನಿಲಯ?
ವಿಜಯನಗರ(ಹೊಸಪೇಟೆ): ಪ್ರಪಂಚದಲ್ಲಿ ಭಾಷೆಗಾಗಿಯೇ ಇರುವ ಏಕೈಕ ವಿಶ್ವವಿದ್ಯಾನಿಲಯವೆಂಬ ಹೆಮ್ಮೆ ಯೊಂದಿಗೆ ಹುಟ್ಟಿಕೊಂಡ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಅನುದಾನದ ಕೊರತೆಯಿಂದಾಗಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದಿರಲಿ, ಕನಿಷ್ಠ ವಿದ್ಯುತ್ ಬಿಲ್ ಪಾವತಿ ಮಾಡಲೂ ಪರದಾಡುವಂತಾಗಿರುವುದು ಮಾತ್ರ ಬೇಸರದ ಸಂಗತಿ.
ಫೆಬ್ರವರಿ ಮಾಸದ ಅಂತ್ಯಕ್ಕೆ ಕನ್ನಡ ವಿಶ್ವವಿದ್ಯಾನಿಲಯವು 1.05 ಕೋಟಿ ರೂ.ಗಳಷ್ಟು ವಿದ್ಯುತ್ ಬಿಲ್ ಬಾಕಿ ಪಾವತಿ ಮಾಡಬೇಕಿದೆ. ಜೆಸ್ಕಾಂ ಅಧಿಕಾರಿಗಳು ವಿವಿಯ ಕುಲಪತಿಗೆ ಪದೇ ಪದೇ ನೋಟಿಸ್‌ಗಳನ್ನು ನೀಡುತ್ತಿದ್ದು, ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೆ ವಿವಿಯ ವಿದ್ಯುತ್ ಸಂಪರ್ಕ ಕಡಿತ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ವಿಶ್ವವಿದ್ಯಾನಿಲಯದ ವಿದ್ಯುತ್ ಸಂಪರ್ಕ ಕಡಿತಗೊಂಡಲ್ಲಿ ಅಲ್ಲಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಇದಲ್ಲದೆ, ವಿಶ್ವವಿದ್ಯಾನಿಲಯದ ಕ್ಯಾಂಪಸ್ ಗುಡ್ಡಗಾಡು ಪ್ರದೇಶದಲ್ಲಿ ಇರುವುದರಿಂದ ಕರಡಿ, ಚಿರತೆ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ವಿಶ್ವವಿದ್ಯಾನಿಲಯದ ಆವರಣದೊಳಗೆ ಪ್ರವೇಶಿಸಬಹುದು ಎಂಬ ಆತಂಕ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರಿಗೆ ಕಾಡುತ್ತಿದೆ.
ಇತ್ತೀಚೆಗಷ್ಟೇ ವಿಶ್ವವಿದ್ಯಾನಿಲಯದ ಕಾರ್ಯಕ್ರಮ ನಡೆಯುತ್ತಿರುವಾಗಲೇ ಜೆಸ್ಕಾಂ ನವರು ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದಿದ್ದರು. ಆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್ ಅವರು ಭಾಗವಹಿಸಿದ್ದರು. ಈ ವೇಳೆ ವಿದ್ಯುತ್ ಸಮಸ್ಯೆಯ ಬಗ್ಗೆ ಕುಲಪತಿ ಬಳಿ ವಿಚಾರಿಸಿದ ಸಚಿವರು, ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದು, ಸರಕಾರದಿಂದ ಬಜೆಟ್‌ನಲ್ಲಿ ಅಗತ್ಯ ನೆರವು ಕೊಡಿಸುವ ಭರವಸೆಯನ್ನು ನೀಡಿದ್ದರು.
ಆದರೆ, ಸಚಿವರು ಭರವಸೆ ನೀಡಿ ಸುಮಾರು 25 ದಿನಗಳಾದರೂ ಈವರೆಗೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾದಲ್ಲಿ ವಿವಿಯ ಎಲ್ಲ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಕೂರುವ ಎಚ್ಚರಿಕೆಯನ್ನು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಬಳಿ ಸಮಸ್ಯೆಯನ್ನು ಹೇಳಿಕೊಂಡಿರುವ ಕನ್ನಡ ವಿವಿಯ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ, ವಿವಿಯ ಎಲ್ಲ ಕಾರ್ಯನಿರ್ವಹಣೆಗಳಿಗೆ ವಾರ್ಷಿಕವಾಗಿ 4.50 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳ ಸಾಮಾನ್ಯ ಅನುದಾನದ ಅಗತ್ಯವಿದೆ. ಸರಕಾರ ಈಗ ನೀಡುತ್ತಿರುವ 1.90 ಕೋಟಿ ರೂ.ಗಳು ಸಾಕಾಗುವುದಿಲ್ಲ. ಅದರಿಂದಾಗಿಯೇ, ಕಳೆದ ಐದು ವರ್ಷಗಳಿಂದ ವಿವಿಯ ವಿದ್ಯುತ್ ಬಿಲ್ ಬಾಕಿ ಸರಿಯಾಗಿ ಪಾವತಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ವಿದ್ಯುತ್ ಬಿಲ್ ಬಾಕಿ 1.05 ಕೋಟಿ ರೂ.ಗಳಿಗೆ ತಲುಪಿದೆ. ಫೆಬ್ರವರಿ ಅಂತ್ಯದವರೆಗೆ ಮಾತ್ರ ಜೆಸ್ಕಾಂನವರು ಅವಕಾಶ ಕೊಟ್ಟಿದ್ದರು. ಇದೀಗ, ವಿದ್ಯುತ್ ಬಿಲ್ ಬಾಕಿ ಪಾವತಿ ಮಾಡದಿದ್ದರೆ ಅನಿವಾರ್ಯವಾಗಿ ನಾವು ವಿದ್ಯುತ್ ಸಂಪರ್ಕ ಕಡಿತ ಮಾಡಬೇಕಾಗುತ್ತದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದು ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಲಾಗಿತ್ತು. ಆದರೆ, ಈವರೆಗೆ ನಮ್ಮ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕುಲಪತಿ ಹೇಳಿದ್ದಾರೆ.
ಈ ಬಗ್ಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರ ಝಮೀರ್ ಅಹ್ಮದ್ ಅವರ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ‘‘ಕನ್ನಡ ವಿಶ್ವವಿದ್ಯಾನಿಲಯ ಸಮಸ್ಯೆಯನ್ನು ಮುಖ್ಯಮಂತ್ರಿ ಮತ್ತು ಉನ್ನತಶಿಕ್ಷಣ ಸಚಿವರ ಗಮನಕ್ಕೂ ತಂದಿದ್ದೇವೆ. ಆದಷ್ಟು ಬೇಗನೆ ಸಮಸ್ಯೆ ಬಗೆಹರಿಯುತ್ತದೆ’’ ಎಂಬ ಮಾಹಿತಿ ದೊರೆತಿದೆ.
ಈ ವರ್ಷದ ಬಜೆಟ್ ನಲ್ಲಿ ಕನ್ನಡ ವಿವಿಗೆ 42.30 ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಇದರಲ್ಲಿ ವೇತನ ಪಾವತಿಗೆ 26 ಕೋಟಿ ರೂ.ಗಳು ಖರ್ಚಾದರೆ, ಪಿಂಚಣಿದಾರರು ಹಾಗೂ ನಿವೃತ್ತ ಸಿಬ್ಬಂದಿಗೆ ಅಗತ್ಯ ನೆರವು ನೀಡಲು 13 ಕೋಟಿ ರೂ.ಗಳನ್ನು ಬಳಸಲಾಗಿದೆ. ಸಾಮಾನ್ಯ ಅನುದಾನದ ರೂಪದಲ್ಲಿ 1.90 ಕೋಟಿ ರೂ.ಗಳು ನೀಡಲಾಗಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ 8.50 ಲಕ್ಷ ರೂ.ಗಳ ಅನುದಾನ ನೀಡಲಾಗಿದೆ. ಸಾಮಾನ್ಯ ಅನುದಾನವನ್ನು ಕನಿಷ್ಠ 4.50 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಹೆಚ್ಚಿಸಿದಲ್ಲಿ ವಿವಿಯ ಸಮಸ್ಯೆಗಳು ಬಗೆಹರಿಯಲಿವೆ.
-ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ, ಕನ್ನಡ ವಿವಿ
ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಈ ಭಾಗದ ಜನಪ್ರತಿನಿಧಿಯಾಗಿದ್ದ ಸಂದರ್ಭದಲ್ಲಿ ಇಂತಹ ಯಾವುದೇ ಸಮಸ್ಯೆಗಳು ಎದುರಾಗದಂತೆ ಅಗತ್ಯ ಅನುದಾನವನ್ನು ಕಲ್ಪಿಸಿಕೊಡುತ್ತಿದ್ದರು. ಆದರೆ, ಇತ್ತೀಚೆಗೆ ಐದು ವರ್ಷಗಳಿಂದ ಬಹಳಷ್ಟು ಸಮಸ್ಯೆಗಳು ಎದುರಾಗುತ್ತಿವೆ. ವಿದ್ಯುತ್ ಸಮಸ್ಯೆ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತು ಕುಲಪತಿಯವರು ಸರಕಾರಕ್ಕೆ ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಮಸ್ಯೆ ಬಗೆಹರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಆದರೆ, ಏನೂ ಆಗಿಲ್ಲ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸಮಸ್ಯೆ ಬಗೆಹರಿಸಲಿ. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟದ ಮೂಲಕ ಸರಕಾರದ ಗಮನ ಸೆಳೆಯಬೇಕಾಗುತ್ತದೆ.
-ಗುಜ್ಜಲ್ ಗಣೇಶ್, ಪ್ರಧಾನ ಕಾರ್ಯದರ್ಶಿ, ವಿಜಯನಗರ ಜಿಲ್ಲೆಯ ಕನ್ನಡಪರ ಸಂಘಟನೆಗಳ ಒಕ್ಕೂಟ