ಪ. ಮಲ್ಲೇಶ್ ಬಿಟ್ಟುಹೋದ ಶೂನ್ಯ ತುಂಬಲಾದೀತೇ?

ಇತಿಹಾಸಕ್ಕೆ ಸೇರಿಹೋದ ಕೆಲವೇ ವ್ಯಕ್ತಿಗಳನ್ನು ಅಜರಾಮರ ಎಂದು ಬಣ್ಣಿಸಲಾಗುತ್ತದೆ. ಭಾರತದಂತಹ ಯಜಮಾನಿಕೆಯ ಪರಂಪರೆಯಲ್ಲಿ ಈ ಪದವನ್ನು ಆಳುವವರ ಅಥವಾ ಉಳ್ಳವರ ಬಗ್ಗೆ ಬಳಸಲಾಗುವುದಾದರೂ, ಈ ಮೇಲ್ಪದರದಿಂದ ಹೊರಬಂದು, ತಳಸಮಾಜದತ್ತ ಗಮನಹರಿಸಿದಾಗ, ಅಲ್ಲಿ ನಮಗೆ ಅನೇಕ ಚೇತನಗಳು ‘ಅಜರಾಮರ’ವಾಗಿ ಕಾಣುತ್ತವೆ. ತಾವು ಬದುಕಿದಾಗ ಅನುಸರಿಸಿದ ಜನಮುಖಿ ಹಾದಿ ಮತ್ತು ಸಮಾಜಮುಖಿ ಜೀವನಾದರ್ಶಗಳ ಕಾರಣಕ್ಕಾಗಿಯೇ ಈ ವ್ಯಕ್ತಿಗಳು ಸಾರ್ವಕಾಲಿಕವಾಗಿ ಅನುಕರಣೀಯವಾಗಿ, ಮಾರ್ಗದರ್ಶಕರಾಗಿ ಕಾಣುತ್ತಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಹುಸಾಂಸ್ಕೃತಿಕ ನೆಲೆಗಳನ್ನು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಗೂ ಸಾಂವಿಧಾನಿಕ ಆಶಯಗಳನ್ನು ಸಮಾಜದ ಕೆಳಸ್ತರದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮಹತ್ಕಾರ್ಯವನ್ನು ತಮ್ಮ ಬದುಕಿನ ಹೆಜ್ಜೆಯಾಗಿಸಿಕೊಂಡು ಬದುಕಿದ ಅನೇಕರು ನಮ್ಮ ನಡುವೆ ಇದ್ದಾರೆ, ಆಗಿ ಹೋಗಿದ್ದಾರೆ.
ಇಂತಹ ಅಪೂರ್ವ ವ್ಯಕ್ತಿಗಳಲ್ಲೊಬ್ಬರಾಗಿದ್ದ ಪ. ಮಲ್ಲೇಶ್ ನಮ್ಮನ್ನು ಅಗಲಿ ಜನವರಿ 19ಕ್ಕೆ ಎರಡು ವರ್ಷ ತುಂಬುತ್ತದೆ (19-01-2023). ಮಲ್ಲೇಶ್‌ಅವರನ್ನು ‘ಸ್ಮರಿಸುವುದು’ ಎಂದರೆ ಅಪಭ್ರಂಶ ಎನಿಸಬಹುದೇನೋ, ಏಕೆಂದರೆ ವಿಸ್ಮತಿಗೆ ಜಾರಿದವರನ್ನು ಮಾತ್ರ ನಾವು ಸ್ಮರಿಸುತ್ತೇವೆ. ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಸಾಮಾನ್ಯರ ನಡುವೆ ಬೆರೆತು ಸಮಾಜದ ಓರೆಕೋರೆಗಳನ್ನು ತಿದ್ದುವತ್ತ ಸದಾ ತುಡಿಯುತ್ತಿದ್ದ ಮಲ್ಲೇಶ್ ಹೇಗೆ ಸಾರ್ವಜನಿಕ ಮರೆವಿಗೆ ಜಾರಲು ಸಾಧ್ಯ? ಆದರೂ ಭೌತಿಕವಾಗಿ ಸರಿದುಹೋಗಿದ್ದಾರೆ. ಸಾವು ಅನಿವಾರ್ಯ ಮತ್ತು ಅನಿರೀಕ್ಷಿತ ಹೌದಾದರೂ, ಮಲ್ಲೇಶ್ ಅವರಂತಹ ವ್ಯಕ್ತಿಗಳು ಪಯಣಕ್ಕೆ ವಿದಾಯ ಹೇಳಿದಾಗ, ಏಕೆ ಹೀಗಾಯ್ತು ಎಂಬ ಯೋಚನೆ ಮೂಡುವುದು ಸಹಜ. ಇನ್ನೂ ಇರಬೇಕಿತ್ತು ಎನಿಸುವ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮಲ್ಲೇಶ್ ಅವರನ್ನು ಹಿಂಬಾಲಿಸಿದವರೂ ಸಹಜವಾಗಿ ನೆನಪಾಗುತ್ತಾರೆ.
ವಿ.ಕೆ. ನಟರಾಜ್, ಡಾ. ವಿ. ಲಕ್ಷ್ಮೀನಾರಾಯಣ್, ಹಾಡುಪಾಡು ರಾಮು, ಸಿ.ಕೆ.ಎನ್. ರಾಜಾ, ಜಿ.ಎಚ್. ನಾಯಕ, ಮುಝಫರ್ ಅಸ್ಸಾದಿ ಮೊದಲಾದವರನ್ನು ಸ್ಮರಿಸುವಾಗ ಪ. ಮಲ್ಲೇಶ್ ಈ ಚಿಂತನಾ ಧಾರೆಯ ವಾಹಕರ ಸಾಲಿನಲ್ಲಿ ಸ್ಫೂರ್ತಿದಾಯಕ ಶಕ್ತಿಯಾಗಿ ಕಾಣುತ್ತಾರೆ. ಏಕೆಂದರೆ ಮಲ್ಲೇಶ್ ತಮ್ಮ ಬದುಕಿನುದ್ದಕ್ಕೂ ಅನುಸರಿಸಿದ ಹೆಜ್ಜೆ ಗುರುತುಗಳನ್ನು ಯಾವುದೋ ಒಂದು ತಾತ್ವಿಕತೆಗೆ, ಸೈದ್ಧಾಂತಿಕ ಚೌಕಟ್ಟಿಗೆ ಅಥವಾ ಸೃಜನಶೀಲ ಸಾಂಸ್ಕೃತಿಕ ನೆಲೆಗೆ ಸೀಮಿತವಾಗಿ ಕಾಣಲು ಸಾಧ್ಯವಿಲ್ಲ. ಹಿಂದಿರುಗಿ ನೋಡಿದಾಗ ಮಲ್ಲೇಶ್ ಅವರನ್ನು ಗಾಂಧಿವಾದಿ, ಸಮಾಜವಾದಿ, ಲೋಹಿಯಾವಾದಿ, ಕನ್ನಡಪರ ಧ್ವನಿ ಎಂದೆಲ್ಲಾ ವರ್ಗೀಕರಿಸುವುದು ಕಷ್ಟವಾಗುತ್ತದೆ. ಏಕೆಂದರೆ ತಾವು ತಾತ್ವಿಕವಾಗಿ ಒಪ್ಪದ ಸೈದ್ಧಾಂತಿಕ ಮನಸ್ಸುಗಳೊಡನೆಯೂ ಅಷ್ಟೇ ಆಪ್ತತೆಯಿಂದ ಬೆರೆತು ಬದುಕಿದ ಒಂದು ಜೀವ ಅದು. ಹಾಗಾಗಿ ಮಲ್ಲೇಶ್ ಅವರನ್ನು ಸಿದ್ಧಾಂತದ ಆವರಣದಲ್ಲಿ ಬಂಧಿಸುವುದರ ಬದಲು, ವಿಶಾಲ ಸಮಾಜದ ಕಟ್ಟಕಡೆಯ ವ್ಯಕ್ತಿಯು ಪ್ರತಿನಿಧಿಸುವ ಒಂದು ಜಗತ್ತಿನ ಪ್ರತಿನಿಧಿಯಾಗಿ ನಿಲ್ಲಿಸುವುದು ಸೂಕ್ತ ಎನಿಸುತ್ತದೆ.
ಈ ಪ್ರಾತಿನಿಧಿಕ ಲಕ್ಷಣವೇ ಪ. ಮಲ್ಲೇಶ್ ಅವರನ್ನು ‘ಅಜರಾಮರ’ವಾಗಿಸುತ್ತದೆ. ಪ. ಮಲ್ಲೇಶ್ ಮನುಜ ಸಹಜ ಸ್ವಭಾವಜನ್ಯ ಕೊರತೆಗಳಿಂದ ಹೊರತಾದವರೇನೂ ಆಗಿರಲಿಲ್ಲ. ಆದರೆ ಈ ಕೊರತೆಗಳನ್ನು ಮೀರಿ ನಿಲ್ಲುವ ಕ್ಷಮತೆ ಹೊಂದಿದ್ದರು. ಇದು ಯಾವುದೇ ದೊಡ್ಡ ವ್ಯಕ್ತಿಯಲ್ಲಿರಬೇಕಾದ ಮೂಲ ಲಕ್ಷಣ. ಏಕೆಂದರೆ ಅವರ ಮನಸ್ಸು ಮತ್ತು ಹೃದಯ ಎಂದಿಗೂ ನಾಲ್ಕು ಗೋಡೆಗಳ ನಡುವೆ ಬಂದಿಯಾಗಲಿಲ್ಲ. ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಿಕ್ಕುಗಳನ್ನು ಬಿಡಿಬಿಡಿಯಾಗಿ ನೋಡದೆ ಸಮಗ್ರವಾಗಿ ನೋಡುವ ಮುನ್ನೋಟ ಅತ್ಯವಶ್ಯ. ಸಿದ್ಧಾಂತಗಳಿಂದಾಚೆ ನಿಂತು ಈ ಸಿಕ್ಕುಗಳನ್ನು ಗಮನಿಸುತ್ತಲೇ, ಅದನ್ನು ಬಿಡಿಸುವ ಪ್ರಯತ್ನ ಮಾಡುವುದು ಸಮಾಜಮುಖಿ ಮನಸ್ಸುಗಳ ಆದ್ಯತೆಯಾಗಬೇಕು. ಇಂತಹ ಮನಸ್ಸನ್ನು ಹೊತ್ತು ಬಾಳಿದವರು ಪ. ಮಲ್ಲೇಶ್.
ತಮ್ಮ ಕನಸಿನ ಭಾರತವನ್ನು ಕಟ್ಟಲು ಅಹರ್ನಿಶಿ ಶ್ರಮಿಸಿ ಕೊನೆಯ ಗಳಿಗೆಯವರೆಗೂ ತಮ್ಮ ಪ್ರಯತ್ನಗಳನ್ನು ಕೈಬಿಡದೆ ಎಲ್ಲ ಸಾಮಾಜಿಕ-ಸಾಂಸ್ಕೃತಿಕ ತಡೆಗೋಡೆಗಳನ್ನೂ ಧೈರ್ಯದಿಂದ ಎದುರಿಸುತ್ತಾ, ಕೆಳಸ್ತರದ ಸಮಾಜದ ನೊಂದ ಜನರೊಡನೆ ಬೆರೆತು ಹೋರಾಡಿದ ಅನೇಕ ಜೀವಗಳು, ಕಟ್ಟಿದ ಕನಸು ನನಸಾಗುವ ಮುನ್ನವೇ ಚಿರನಿದ್ರೆಗೆ ಜಾರಿವೆ. ಇಂತಹ ಅಪೂರ್ವ ಜೀವಗಳ ಪೈಕಿ ಮಲ್ಲೇಶ್ ಎದ್ದು ಕಾಣುತ್ತಾರೆ. ಮೂಲತಃ ಸಮಾಜವಾದಿ ಸಿದ್ಧಾಂತದ ಮುನ್ನೋಟದೊಂದಿಗೆ ಕನಸು ಕಟ್ಟಿದವರು ಮಲ್ಲೇಶ್. ಇದನ್ನು ಸಾಕಾರಗೊಳಿಸಲು ಲಭ್ಯವಿರುವ ಎಲ್ಲ ಹಾದಿಗಳನ್ನೂ, ಅವಕಾಶಗಳನ್ನೂ ಬಳಸಿಕೊಳ್ಳುತ್ತಾ, ಜನಮಾನಸದ ನಿತ್ಯಬದುಕಿನ ಜಂಜಾಟಗಳಿಗೆ ಸ್ಪಂದಿಸಿ ಬದುಕಿದವರು. ಇಂದು ಮೈಸೂರಿನ ಮಟ್ಟಿಗಾದರೂ ಸಾಮಾಜಿಕ ಚಳವಳಿಗಳಲ್ಲಿ ಒಂದು ಶೂನ್ಯ ಕಾಣುತ್ತಿದ್ದರೆ ಅದಕ್ಕೆ ಕಾರಣ ಮಲ್ಲೇಶ್ ಅವರಂತಹ ಒಗ್ಗೂಡಿಸುವ ಆಯಸ್ಕಾಂತೀಯ ಧ್ರುವದ ಅನುಪಸ್ಥಿತಿ.
ಭಾರತದಂತಹ ಬಹುವೈವಿಧ್ಯ ಸಮಾಜದಲ್ಲಿ ಸಾರ್ವಜನಿಕ ಬದುಕಿನಲ್ಲಿ ಸಮಾಜಮುಖಿಯಾಗಿ ಬದುಕಲು ಬೇಕಿರುವುದು ಎಲ್ಲವನ್ನೂ ಒಪ್ಪಿಕೊಳ್ಳದಿದ್ದರೂ, ಯಾವುದನ್ನೂ ಅಲ್ಲಗಳೆಯದ-ನಿರಾಕರಿಸದ ಒಂದು ಮುಕ್ತ ಮನಸ್ಥಿತಿ. ಏಕೆಂದರೆ ಇಲ್ಲಿ ತತ್ವ ಸಿದ್ಧಾಂತಗಳೂ ಸಹ ಸಾಂಸ್ಕೃತಿಕ ವೈವಿಧ್ಯಗಳ ಜೊತೆಯಲ್ಲೇ ಬೆರೆತುಹೋಗಿರುತ್ತವೆ. ಮಡಿವಂತಿಕೆಯಾಗಲೀ, ಯಜಮಾನಿಕೆಯಾಗಲೀ ಅಥವಾ ಏಕವ್ಯಕ್ತಿ ಪ್ರತಿಷ್ಠೆಗಳಾಗಲೀ (One up manship) ಸಮಾಜದ ಧ್ರುವೀಕರಣದ ಹಾದಿಯಲ್ಲಿ ದೊಡ್ಡ ಅಡಚಣೆಯಾಗಿಬಿಡುತ್ತದೆ. ಈ ವಿಶಾಲ ಮನೋಭಾವ ಮತ್ತು ಸಮಚಿತ್ತದ ಸ್ವಭಾವವೇ ನಾಯಕತ್ವ ಗುಣಗಳಿರುವ ವ್ಯಕ್ತಿಯಲ್ಲಿ ಚಿಕಿತ್ಸಕ ಗುಣವನ್ನೂ ರೂಢಿಸುತ್ತದೆ. ನಮ್ಮ ಸಮಾಜ ಇಂದು ಎದುರಿಸುತ್ತಿರುವ ಬಹು ಆಯಾಮಗಳ ಸಮಸ್ಯೆಗಳ ನಡುವೆ, ತಳಸಮುದಾಯಗಳನ್ನು, ಅವಕಾಶವಂಚಿತರನ್ನು ಹಾಗೂ ನೊಂದ ಜನರನ್ನು ಒಟ್ಟುಮಾಡಬೇಕಾದರೆ ಈ ಚಿಕಿತ್ಸಕ ಗುಣ ಅತ್ಯವಶ್ಯ.
ಮಲ್ಲೇಶ್ ಅವರಲ್ಲಿ ಈ ಗುಣ ಇದ್ದುದರಿಂದಲೇ ಮೈಸೂರಿನ ಜನತೆಯ ಹೋರಾಟಗಳಲ್ಲಿ ಸದಾ ಕಾಲವೂ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿಯಾಗಿ ಬದುಕಲು ಸಾಧ್ಯವಾಗಿತ್ತು. ಇಂದು ಅಂತಹ ನಾಯಕತ್ವದ ಕೊರತೆ ನಮ್ಮಲ್ಲಿ ಎದ್ದುಕಾಣುತ್ತಿದೆ. ಆ ಧ್ವನಿ ಶಾಶ್ವತವಾಗಿ ಮೌನವಾದಂತೆ ಕಾಣುತ್ತಿದೆ. ಮುನ್ನುಗ್ಗುವ ಕ್ಷಮತೆಯ ಕೊರತೆ ಢಾಳಾಗಿ ಕಾಣುತ್ತಿದೆ. ವರ್ತಮಾನದ ಯುವ ಪೀಳಿಗೆ ಈ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಹೊಂದಿರುವುದಾದರೂ, ರಾಜಕೀಯ-ಸಾಮಾಜಿಕ ನೆಲೆಗಳಲ್ಲಿ ವಿಘಟನೆಯ ಹಾದಿಯಲ್ಲಿ ಸಾಗುತ್ತಿರುವ ಹೊತ್ತಿನಲ್ಲಿ ‘ಮಲ್ಲೇಶ್ ನಮ್ಮ ನಡುವೆ ಇರಬೇಕಿತ್ತು’ ಎಂದು ಭಾಸವಾಗುತ್ತದೆ. ಇದು ಮಲ್ಲೇಶ್ ಅವರ ವ್ಯಕ್ತಿತ್ವ ಮತ್ತು ಹೋರಾಟದ ಗುಣಗಳಿಗೆ ಸಲ್ಲುವ, ಸಲ್ಲಬೇಕಾದ ಸಮ್ಮಾನ ಮತ್ತು ಗೌರವ. ಅವರ ಈ ವ್ಯಕ್ತಿತ್ವಕ್ಕೆ ಮೆರುಗು ನೀಡುವಂತಹ ಒಂದು ಶೈಕ್ಷಣಿಕ ಕೇಂದ್ರವನ್ನು ಮಲ್ಲೇಶ್ ನೃಪತುಂಗ ಶೈಕ್ಷಣಿಕ ಸಂಸ್ಥೆಯ ಮೂಲಕ ಸ್ಥಾಪಿಸಿ ಹೋಗಿದ್ದಾರೆ.
ಐದಾರು ದಶಕಗಳ ಅವರ ಸಮಾಜಮುಖಿ ಹೋರಾಟಗಳಿಗೆ ಸ್ಫೂರ್ತಿಯಾಗಿ ರೂಪುಗೊಂಡಿರುವ ನೃಪತುಂಗ ಕನ್ನಡ ಶಾಲೆ ಇಂದು ಬೃಹತ್ ಸಂಸ್ಥೆಯಾಗಿ ಬೆಳೆಯಬೇಕಿದೆ. ಕೇವಲ ಕನ್ನಡ ಶಿಕ್ಷಣಕ್ಕೆ ಸೀಮಿತವಾಗದೆ, ಮೈಸೂರಿನ ಪ್ರಗತಿಪರ ಚಿಂತನೆಗಳಿಗೆ ತವರಾಗಿ ರೂಪುಗೊಳ್ಳಬೇಕಿದೆ. ಅವರೊಂದಿಗೆ ಕೈಜೋಡಿಸಿ ದಶಕಗಳ ಕಾಲ ಹೆಜ್ಜೆಗೆ ಹೆಜ್ಜೆಯಾಗಿ ನಡೆದಿರುವ ಸಂಗಾತಿಗಳು ಮಲ್ಲೇಶ್ ಅವರ ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಲೇ ಇದ್ದಾರೆ. ಈ ಪರಿಶ್ರಮ ಮತ್ತು ಭವಿಷ್ಯದ ಜವಾಬ್ದಾರಿಯನ್ನು ನೆನಪು ಮಾಡಿಕೊಳ್ಳಲು ಮಲ್ಲೇಶ್ ಅವರು ನಿರ್ಗಮಿಸಿದ ದಿನವಲ್ಲದೆ ಮತ್ತಾವ ದಿನ ಪ್ರಶಸ್ತವಾದೀತು? ಈ ಕಾರಣಕ್ಕಾಗಿಯೇ ಇದೇ ಜನವರಿ 19ರಂದು ನೃಪತುಂಗ ಶಾಲೆಯ ಆವರಣದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ, ಸಂಸ್ಥೆಯ ಸಂಸ್ಥಾಪಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅದೇ ದಿನ ಸಂಜೆ 5 ಗಂಟೆಗೆ ಭಾರತ ರತ್ನ ಪಂಡಿತ್ ಭೀಮಸೇನ್‌ಜೋಷಿ ಅವರ ಶಿಷ್ಯ, ಹರೀಶ್ ತಿವಾರಿ (ದಿಲ್ಲಿ) ಅವರಿಂದ ಹಿಂದೂಸ್ತಾನಿ ಗಾಯನವನ್ನು ಏರ್ಪಡಿಸಲಾಗಿದೆ.
ಕನ್ನಡ ವಿಕಾಸ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ (ನೃಪತುಂಗ ಶಾಲೆ) ಕೇವಲ ಶಿಕ್ಷಣ ಮತ್ತು ಬೌದ್ಧಿಕ ಕ್ರಿಯಾಶೀಲತೆಗೆ ಸೀಮಿತವಾಗದೆ, ಬಹುಸಾಂಸ್ಕೃತಿಕ ನೆಲೆಗಳನ್ನು ಮತ್ತಷ್ಟು ವಿಸ್ತರಿಸುವ, ಗಟ್ಟಿಗೊಳಿಸುವ ಮತ್ತು ಬಹುತ್ವಕ್ಕೆ ಎದುರಾಗಿರುವ ಅಪಾಯಗಳನ್ನು ತೊಡೆದುಹಾಕುವ ಒಂದು ಸಾಮಾಜಿಕ ಸಂಸ್ಥೆಯಾಗಿ ರೂಪುಗೊಳ್ಳಬೇಕಿದೆ. ಜನವರಿ 19ರಂದು ನಡೆಯಲಿರುವ ಸಂಸ್ಥಾಪಕ ದಿನಾಚರಣೆ ಇದಕ್ಕೆ ನಾಂದಿ ಆಗಬೇಕಿದೆ. ಈ ನಿಟ್ಟಿನಲ್ಲಿ ಸಹೃದಯ ಜನತೆ, ಹೋರಾಟಪರ ಮನಸ್ಸುಗಳು ಮತ್ತು ಜನಪರ ಸಂಘಟನೆಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ. ತನ್ಮೂಲಕ ನಮ್ಮ ನಡುವೆ ಆರು ದಶಕಗಳಿಗೂ ಹೆಚ್ಚು ಕಾಲ ಸಮಾಜದ ಒಂದು ಭಾಗವಾಗಿ ಬದುಕಿ ನಿರ್ಗಮಿಸಿದ ಪ. ಮಲ್ಲೇಶ್ ಅವರಿಗೆ ನಮ್ಮ ನಮನಗಳನ್ನು ಸಲ್ಲಿಸಬೇಕಿದೆ.