ಗಡಿ ವಿವಾದದಲ್ಲಿ ಕರ್ನಾಟಕದ ಹಿತ ಕಾಪಾಡಿದವರು
ಕರ್ನಾಟಕ ಏಕೀಕರಣ ಪುರುಷ ಜಗಳೂರು ಇಮಾಂ ಸಾಹೇಬರು
ಭಾಗ- 3
ಫಲಕಾರಿಯಾದ ಅವಿಶ್ವಾಸ ನಿರ್ಣಯ
ಆದರೆ ಶ್ರೀ ಹನುಮಂತಯ್ಯನವರ ಸ್ಥಾನ ಸಡಿಲವಾಗುತ್ತ ಬಂತು. ಮೊದಲಿನಿಂದಲೂ ಶ್ರೀ ಚನ್ನಯ್ಯ, ಶ್ರೀ ನಿಜಲಿಂಗಪ್ಪ, ಶ್ರೀ ನಾಗಯ್ಯರೆಡ್ಡಿ ಮುಂತಾದವರು ಇವರಿಗೆ ವಿರೋಧವಾಗಿದ್ದರು. ಈಗ ಕರ್ನಾಟಕಕ್ಕೆ ವಿರೋಧವಾಗಿದ್ದವರೆಲ್ಲರೂ ಶ್ರೀ ಹನುಮಂತಯ್ಯನವರ ವಿರೋಧಿಗಳಾಗಿ ಹಿಂದಿನ ವಿರೋಧ ಗುಂಪಿನೊಡನೆ ಸಹಕರಿಸಿದರು. ಮಂತ್ರಿಮಂಡಲದಲ್ಲಿ ಒಡಕು ಹುಟ್ಟಿತು. ‘‘ಶ್ರೀ ಕಡಿದಾಳು ಮಂಜಪ್ಪನವರು ಮತ್ತು ಶ್ರೀ ರಾಮಚಂದ್ರರಾಯರು ತಮ್ಮ ನಾಯಕನ ಕೈಬಿಟ್ಟರು. ಅವರ ಮೇಲೆ ತಂದ ಅವಿಶ್ವಾಸ ನಿರ್ಣಯ ಫಲಕಾರಿಯಾಯಿತು. ಹನುಮಂತಯ್ಯ ನವರು ಪದವಿಯನ್ನು ತ್ಯಜಿಸಬೇಕಾಯಿತು. ಅವರ ಮಹದಾಸೆಗಳಾದ ವಿಧಾನಸೌಧದ ಆರಂಭೋತ್ಸವವೂ ಅಖಿಲ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗುವುದೂ ಕನಸಾಗಿ ಉಳಿಯಿತು. ಅವರ ತರುವಾಯ 1956ನೇ ಆಗಸ್ಟ್‌ನಲ್ಲಿ ಶ್ರೀ ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿಗಳಾಗಿ ಬಂದರು’’ ಎಂದು ಇಮಾಂ ಸಾಹೇಬರು ವಿವರಿಸಿದ್ದಾರೆ.
ಪಾರ್ಲಿಮೆಂಟ್‌ನಲ್ಲಿ ಭಾಷಾವಾರು ಪ್ರಾಂತದ ಮಸೂದೆಗೆ ಅಂಗೀಕಾರ ದೊರೆಯಿತು. 1956ನೇ ನವೆಂಬರ್ ಒಂದರಂದು ವಿಶಾಲ ಮೈಸೂರು ರಾಜ್ಯದ ಉದ್ಘಾಟನೆಯಾಯಿತು. ನಿಜಲಿಂಗಪ್ಪನವರು ವಿಶಾಲ ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾದರು. ಕಡಿದಾಳ ಮಂಜಪ್ಪನವರು ಅವರ ಮಂತ್ರಿಮಂಡಳ ಸೇರಿದರು. ವಿಧಾನ ಸಭೆಯ ಅಧ್ಯಕ್ಷರಾಗಿದ್ದ ಎಚ್.ಎಸ್. ರುದ್ರಪ್ಪನವರು ಮತ್ತು ಉಪಾಧ್ಯಕ್ಷರಾಗಿದ್ದ ಚೆನ್ನಿಗರಾಮಯ್ಯನವರು ತಮ್ಮ ಪವಿತ್ರವಾದ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಈ ಹೊಸ ಮಂತ್ರಿಮಂಡಲದಲ್ಲಿ ಸೇರಿದ್ದು ಇಮಾಂ ಸಾಹೇಬರಿಗೆ ಸರಿ ಬರಲಿಲ್ಲ.
1956ನೇ ನವೆಂಬರ್ ತಿಂಗಳಿನಿಂದ 1957ನೇ ಎಪ್ರಿಲ್ ತಿಂಗಳವರೆಗೆ ನಿಜಲಿಂಗಪ್ಪನವರ ತಾತ್ಕಾಲಿಕ ಮಂತ್ರಿಮಂಡಳವಿತ್ತು. ನಂತರ ಮೊಳಕಾಲ್ಮೂರು ತಾಲೂಕಿನಿಂದ ವಿಧಾನಸಭೆಗೆ ಆಯ್ಕೆಯಾದ ನಿಜಲಿಂಗಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿದರು. ಪಕ್ಷದಲ್ಲಿ ನಿಜಲಿಂಗಪ್ಪನವರ ವಿರೋಧಿಗಳು ಹೆಚ್ಚಾದರು. ಅವರ ಆಪ್ತಸ್ನೇಹಿತರು ಮತ್ತು ಬೆಂಬಲಿಗರು ಕೂಡ ರಾಜಕೀಯ ಶತ್ರುಗಳಾದರು. ಒಂದು ವರ್ಷದೊಳಗೆ ನಿಜಲಿಂಗಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು. ಚನ್ನಯ್ಯ, ಟಿ. ಸುಬ್ರಹ್ಮಣ್ಯಂ, ಬಿ.ಡಿ. ಜತ್ತಿ ಮುಂತಾದವ ರನ್ನೊಳಗೊಂಡ ಒಂದು ಸಮಿತಿಯನ್ನು ನೇಮಿಸಲಾಯಿತು. ಟಿ. ಸುಬ್ರಹ್ಮಣ್ಯಂ ಅವರನ್ನು ನಾಯಕರನ್ನಾಗಿಸಲು ಶಿಫಾರಸು ಮಾಡಿ ಪಕ್ಷದ ಅವಗಾಹನೆಗೆ ತರಲಾಯಿತು. ಆದರೆ ಅವರನ್ನು ನಾಯಕರನ್ನಾಗಿ ಮಾಡುವ ಸಂದರ್ಭದಲ್ಲಿ ವಿರೋಧಿ ಕಾಂಗ್ರೆಸ್ ಸದಸ್ಯರು ಬದಲಾದರು. ಟಿ. ಸುಬ್ರಹ್ಮಣ್ಯಂ ಅವರು ಮುಖ್ಯಮಂತ್ರಿಯಾಗಲು ಮತ ಹಾಕುವುದಿಲ್ಲ ಎಂದು ಕೆಲವರು ಹಟ ಹಿಡಿದರು. ಲಿಂಗಾಯತ ಅಭ್ಯರ್ಥಿಯನ್ನು ಸ್ಪರ್ಧೆಗೆ ಆಯ್ಕೆ ಮಾಡದಿದ್ದರೆ ನಿಜಲಿಂಗಪ್ಪನವರನ್ನೇ ಬೆಂಬಲಿಸುತ್ತಾರೆ ಎಂಬುದು ಸಮಿತಿಯ ಗಮನಕ್ಕೆ ಬಂದಿತು. ಹೀಗಾಗಿ ಬಿ.ಡಿ. ಜತ್ತಿ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ದೊರೆಯಿತು. ಈ ಸಂದರ್ಭದಲ್ಲಿ ಕೋಮುವಾರು ಭಾವವೇ ತಲೆದೋರಿತು ಎಂದು ಇಮಾಂ ಸಾಹೇಬರು ತಿಳಿಸಿದ್ದಾರೆ. ಕರ್ನಾಟಕದ ರಾಜಕಾರಣದಲ್ಲಿ ಮೊದಲ ಬಾರಿಗೆ ಜಾತಿ/ಕೋಮು ಕೆಲಸ ಮಾಡಿತು!
ಸಂಸತ್ ಸದಸ್ಯರಾಗಿ ಇಮಾಂ ಸಾಹೇಬರು
1957ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಇಮಾಂ ಸಾಹೇಬರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಪಿ.ಎಸ್.ಪಿ. ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ ದೇಶದ ರಾಜಕೀಯದಲ್ಲಿ ಪ್ರವೇಶ ಪಡೆಯುತ್ತಾರೆ. ಅಲ್ಲಿಂದ ಅವರಿಗೆ ರಾಜ್ಯ ರಾಜಕೀಯದ ನೇರ ಸಂಪರ್ಕ ತಪ್ಪಿತು.
‘‘ಪಿ.ಎಸ್.ಪಿ.ಯವರು ಲೋಕಸಭೆಯಲ್ಲಿ ಅನುಸರಿಸುತ್ತಿದ್ದ ನೀತಿಯು ಅನೇಕ ವೇಳೆ ನನಗೆ ಸಮಂಜಸವಾಗಿ ಕಾಣುತ್ತಿರಲಿಲ್ಲ. ವಿರೋಧ ಪಕ್ಷದಲ್ಲಿದ್ದರೂ ಸರಕಾರದ ಭೂ ಸುಧಾರಣೆ, ರಾಷ್ಟ್ರೀಕರಣ ಪದ್ಧತಿ, ಪರ್ಮಿಟ್ ಕಂಟ್ರೋಲ್‌ಗಳ ಮೂಲಕ ಸರಕಾರದ ಹತೋಟಿಯನ್ನು ವಿಸ್ತರಿಸುವುದು, ಸರಕಾರದ ಅಧಿಕ ತೆರಿಗೆಯ ನೀತಿ - ಇವುಗಳಿಗೆಲ್ಲ ಬೆಂಬಲ ಕೊಡುವುದು ನನಗೆ ಸರಿ ಬೀಳಲಿಲ್ಲ’’ ಎಂದು ಇಮಾಂ ಸಾಹೇಬರು ಹೇಳಿದ್ದಾರೆ. ಅವರದು ಮುಕ್ತ ಮಾರುಕಟ್ಟೆಯ ಚಿಂತನೆ ಎಂಬುದು ಇದರಿಂದ ತಿಳಿದುಬರುತ್ತದೆ. ಭಾರತದಂಥ ಜಮೀನುದಾರಿ ಮತ್ತು ಬಂಡವಾಳಶಾಹಿ ದೇಶಗಳಲ್ಲಿ ಭೂ ಸುಧಾರಣೆ ಮತ್ತು ರಾಷ್ಟ್ರೀಕರಣ ನೀತಿಯನ್ನು ಅನುಸರಿಸದಿದ್ದರೆ ತುಳಿತಕ್ಕೊಳಗಾದ ಜನಸಮುದಾಯಗಳು ದಂಗೆ ಏಳುತ್ತವೆ ಎಂಬುದು ಪಿ.ಎಸ್.ಪಿ.ಯವರಿಗೂ ಗೊತ್ತಿತ್ತು. ಈ ಕಾರಣದಿಂದಲೇ ಅವರು ಕಾಂಗ್ರೆಸ್‌ಗೆ ಇಂಥ ವಿಚಾರಗಳಲ್ಲಿ ಬೆಂಬಲಿಸುವುದು ದೇಶದ ಹಿತದೃಷ್ಟಿಯಿಂದ ಅವಶ್ಯವೂ ಆಗಿತ್ತು. ಆದರೆ ತಾವು ಚಿಂತಿಸುವ ಕ್ರಮವೇ ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂಬುದು ಅವರ ಭಾವನೆಯಾಗಿತ್ತು.
ಇಮಾಂ ಸಾಹೇಬರು ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ವಿಚಾರ ದಲ್ಲಿ ಸರಿಯಾದ ನಿಲುವನ್ನೇ ತೆಗೆದುಕೊಂಡರು. ಬೆಳಗಾವಿ, ಖಾನಾಪುರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಕೇಂದ್ರ ಸರಕಾರವನ್ನು ಮತ್ತು ಪ್ರಧಾನಿ ನೆಹರೂ ಅವರನ್ನು ಒತ್ತಾಯಿಸಲು ಬರುವ ಮಹಾರಾಷ್ಟ್ರ ನಿಯೋಗಕ್ಕೆ ಬೆಂಬಲಿಸಿ ಸಭಾತ್ಯಾಗ ಮಾಡಲು ಮಹಾರಾಷ್ಟ್ರದ ಪಿ.ಎಸ್.ಪಿ. ಸದಸ್ಯರು ಮಾಡಿದ ತೀರ್ಮಾನವನ್ನು ಇಮಾಂ ಸಾಹೇಬರು ವಿರೋಧಿಸಿದರು. ಅವರೆಲ್ಲ ಸಭಾತ್ಯಾಗ ಮಾಡಿದರೂ ಇಮಾಂ ಸಾಹೇಬರು ಸಭಾತ್ಯಾಗ ಮಾಡದೆ ಕರ್ನಾಟಕದ ಹಿತ ಕಾಪಾಡಿದರು. ಇಂಥ ಸಂದರ್ಭಗಳಿಂದ ಬೇಸರಗೊಂಡ ಅವರು ನಂತರ ರಾಜಾಜಿಯವರ ಸ್ವತಂತ್ರ ಪಕ್ಷ ಸೇರಿದರು.
1962ರ ವಿಧಾನಸಭಾ ಚುನಾವಣೆಯಲ್ಲಿ ನಿಜಲಿಂಗಪ್ಪನವರ ಗುಂಪಿಗೆ ಹೆಚ್ಚಿನ ಬೆಂಬಲ ಸಿಕ್ಕಿತು. ಆದರೆ ನಿಜಲಿಂಗಪ್ಪನವರು ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. ಬಿ.ಡಿ. ಜತ್ತಿ ಮತ್ತು ಎಸ್.ಆರ್. ಕಂಠಿ ಅವರ ಮಧ್ಯೆ ಪೈಪೋಟಿ ನಡೆದು ನಿಜಲಿಂಗಪ್ಪ ಗುಂಪಿನ ಕಂಠಿ ಅವರು ಮುಖ್ಯಮಂತ್ರಿಗಳಾದರು. ನಂತರ ನಿಜಲಿಂಗಪ್ಪನವರು ಬಾಗಲಕೋಟೆಯಿಂದ ಅವಿರೋಧವಾಗಿ ಆಯ್ಕೆಯಾದರು. ಕಂಠಿಯವರು ಮುಖ್ಯಮಂತ್ರಿ ಸ್ಥಾನವನ್ನು ನಿಜಲಿಂಗಪ್ಪನವರಿಗೆ ಬಿಟ್ಟುಕೊಟ್ಟರು. ಕೇಂದ್ರ ಕಾಂಗ್ರೆಸ್‌ನ ಸಂಧಾನದ ಫಲವಾಗಿ ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾದರು.
ಸೋಲು-ಗೆಲುವು
ಇಮಾಂ ಸಾಹೇಬರು 1962ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು. 1967ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಚಿತ್ರದುರ್ಗದಿಂದ ಆಯ್ಕೆಯಾದರು. ನುರಿತ ಸಂಸದೀಯಪಟುವಾಗಿದ್ದ ಅವರು ಹಂಗಾಮಿ ಲೋಕಸಭಾ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದರು.
ರಾಜಕೀಯವನ್ನೇ ಕಸುಬು ಮಾಡಿಕೊಳ್ಳುವುದನ್ನು ಇಮಾಂ ಸಾಹೇಬರು ಜೀವನವಿಡೀ ವಿರೋಧಿಸಿದರು. ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ಹೆಚ್ಚಲು ಭ್ರಷ್ಟ ರಾಜಕೀಯ ನಾಯಕರೇ ಕಾರಣರು ಎಂದು ಅವರು ವಾದಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಮುಖರಾದ ಪ್ರಜೆಗಳು, ಅವರಿಂದ ಚುನಾಯಿತರಾದ ರಾಜಕೀಯ ಪ್ರತಿನಿಧಿಗಳು ಮತ್ತು ಪ್ರಜೆಗಳ ಪರವಾಗಿ ಆಡಳಿತ ನಡೆಸುವ ಸಚಿವರು ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ವರ್ತಿಸಿದರೆ ಪ್ರಜಾಪ್ರಭುತ್ವ ಯಶಸ್ವಿಯಾಗಿ ನಡೆಯುತ್ತದೆ ಎಂಬುದು ಅವರ ದೃಢನಿರ್ಧಾರವಾಗಿತ್ತು. ಇವರೆಲ್ಲ ಅನೀತಿ ಮತ್ತು ಅಕ್ರಮ ಮಾರ್ಗಗಳನ್ನು ಅನುಸರಿಸಿದರೆ ಪ್ರಜಾಪ್ರಭುತ್ವವು ಭ್ರಷ್ಟಾಚಾರದ ತವರುಮನೆ ಆಗುತ್ತದೆ ಎಂದು ಎಚ್ಚರಿಸಿದರು. ಮೈಸೂರು ಸಂಸ್ಥಾನ ಭಾರತದ ಒಕ್ಕೂಟ ಸೇರಿದ ನಂತರ ಬಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಬೆಳೆದದ್ದನ್ನು ಕಂಡು ನೊಂದುಕೊಂಡರು.
ಗಣ್ಯರ ದೃಷ್ಟಿಯಲ್ಲಿ ಇಮಾಂ ಸಾಹೇಬರು
‘‘ಶ್ರೀಯುತ ಇಮಾಂರವರು ಇಂದಿನ ಸಮಾಜದ ಮತ್ತು ರಾಷ್ಟ್ರದ ನಡವಳಿಕೆಯನ್ನು ಕಂಡು ಕೊರಗುತ್ತಿದ್ದಾರೆ. ಇದು ಗಾಂಧೀಜಿಯ ಕನಸಿನ ರಾಷ್ಟ್ರವೇ ಎಂದು ಪಶ್ಚಾತ್ತಾಪ ಪಡುತ್ತಿದ್ದಾರೆ’’ ಎಂದು ಶ್ರೀ ತರಳಬಾಳು ಜಗದ್ಗುರು ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದ್ದಾರೆ.
‘‘ಕರ್ನಾಟಕದ ಹಿರಿಯ ಸ್ನೇಹಪರ ಜೀವಿ, ಸಾಹಿತಿ, ರಾಜಕಾರಣಿ, ಸಾಮಾಜಿಕ ತ್ರಿವೇಣಿ ಸಂಗಮದ ವ್ಯಕ್ತಿಯಾಗಿರುವ ನಿಷ್ಕಲ್ಮಶ ಮುಗ್ಧ ಮನಸ್ಸಿನ ಜಗಳೂರು ಮುಹಮ್ಮದ್ ಇಮಾಂ ಸಾಹೇಬರು ನಮ್ಮ ಹೆಮ್ಮೆ’’ ಎಂದು ಬಿ.ಡಿ. ಜತ್ತಿ ಅವರು ಗುಣಗಾನ ಮಾಡಿದ್ದಾರೆ.
‘‘ಕರ್ನಾಟಕ ಪ್ರಾಂತ ರಚನೆಗೆ ಅವರಿಂದ ಲಭಿಸಿದ ನೆರವು ಸಾಮಾನ್ಯವಾದುದಲ್ಲ.... ಅವರು ನಮ್ಮ ಸಾರ್ವಜನಿಕ ಜೀವನದ ಅಮೂಲ್ಯ ಆಸ್ತಿ’’ ಎಂದಿದ್ದರು ಪಾಟೀಲ ಪುಟ್ಟಪ್ಪ.
‘‘ಒಂದು ಬಾರಿ ಅವರು ಸ್ವತಂತ್ರ ಪಕ್ಷ, ನಾನು ಕಾಂಗ್ರೆಸ್ ಪರವಾಗಿ ಹೀಗೆ ವಿರೋಧಿಗಳಾಗಿ ಸ್ಪರ್ಧಿಸಿದ್ದರೂ ನಮ್ಮ ಪರಸ್ಪರ ಅಭಿಮಾನ, ಆದರಗಳಿಗೆ ಚ್ಯುತಿ ಬರಲಿಲ್ಲ’’ ಎಂದು ಎಸ್. ನಿಜಲಿಂಗಪ್ಪ ಅವರು ನೆನಪಿಸಿಕೊಂಡಿದ್ದರು.
‘‘ಇಮಾಂ ಅವರು ಭಾರತದ ಹಿಂದೂ-ಮುಸ್ಲಿಮ್ ಸೌಹಾರ್ದದ ಪ್ರತೀಕವಾಗಿದ್ದಾರೆ. ಅವರ ಜೀವನ ನಮಗೊಂದು ದೀಪವಿದ್ದಂತೆ. ಅದರ ಬೆಳಕಿನಲ್ಲಿ ನಾವು ನಮ್ಮ ನಲ್ಮೆಯನ್ನು ಕಂಡುಕೊಳ್ಳೋಣ’’ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು.
‘‘ಅಧಿಕಾರೇತರ ವ್ಯಕ್ತಿಯಾಗಿ, ಸಂವಿಧಾನ ನಿರ್ಮಾಣ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿ ತಮ್ಮ ನೈಜ ಜನಹಿತ ಕಾರ್ಯದಿಂದ ಸರ್ವ ಜನರ ಆದರ ಗಳಿಸಿದ ಇಮಾಂ ಸಾಹೇಬರು ಜಾತ್ಯತೀತತೆಗೆ ಒಂದು ದೃಷ್ಟಾಂತ. 1967ರಲ್ಲಿ ಮುಂಬೈಯಲ್ಲಿ ಹಿಂದೂ-ಮುಸ್ಲಿಮರಲ್ಲಾದ ಘರ್ಷಣೆಯ ಕಾಲದಲ್ಲಿ ಅವರು ವಹಿಸಿದ ಪಾತ್ರ ಇಂದಿಗೂ ಅವರ ಚಿರ ನೆನಪನ್ನು ನಮ್ಮಲ್ಲಿ ಉಳಿಸಿದೆ’’ ಎಂದು ಎಂ.ಸಿ. ಛಗಲಾ ಅವರು ನೆನಪಿಸಿಕೊಂಡಿದ್ದರು.
‘‘ಅಧಿಕಾರಕ್ಕಾಗಿ ಆಸೆ ಪಡದೆ, ಎಂದೂ ಅಧಿಕಾರರೂಢ ಪಕ್ಷದಲ್ಲಿರದೆ ವಿರೋಧ ಪಕ್ಷದ ನಾಯಕರಾಗಿ ಮೈಸೂರು ಶಾಸನ ಸಭೆಯಲ್ಲಿ ವಿಜೃಂಭಿಸಿದ ನಾಯಕರು’’ ಎಂದು ಆಚಾರ್ಯ ಕೃಪಲಾನಿಯವರು ಕೊಂಡಾಡಿದ್ದಾರೆ.
‘‘ತಮ್ಮ ನಡೆ ನುಡಿ, ಚಾಣಾಕ್ಷತನದ ಮಾತುಗಳಿಂದ ಪಾರ್ಲಿಮೆಂಟ್‌ನಲ್ಲಿ ಪ್ರಸಿದ್ಧಿ ಪಡೆದು ಯೋಜನಾ ಆಯೋಗದ ಉಪಾಧ್ಯಕ್ಷನಾಗಿದ್ದ ನನಗೆ ಅಮೂಲ್ಯ ಸಲಹೆ ಸೂಚನೆಗಳನ್ನು ಕೊಡುವುದರೊಂದಿಗೆ ರಾಷ್ಟ್ರ ಕಾರ್ಯ ನಿರ್ವಹಿಸಿದ ನಿಸ್ಪಹ ರಾಜಕಾರಣಿ’’ ಎಂದು ಅಶೋಕ ಮೆಹತಾ ಅವರು ಗುಣಗಾನ ಮಾಡಿದ್ದಾರೆ.
‘‘ಕನ್ನಡ ಪ್ರದೇಶಗಳು ಮೈಸೂರು ದೇಶದಲ್ಲಿ ವಿಲೀನವಾಗಲು 1953ನೇ ಸಾಲಿನಲ್ಲಿ ಮುಖ್ಯಮಂತ್ರಿಯಾಗಿದ್ದ ಹನುಮಂತಯ್ಯನವ ರೊಂದಿಗೆ ತಾವು ಪಟ್ಟ ಪ್ರಯತ್ನವನ್ನು ಇಂದಿಗೂ ನೆನೆಯುತ್ತಾರೆ’’ ಎಂದು ಡಿ.ಎಂ. ಚಂದ್ರಶೇಖರಯ್ಯ ಅವರು ಹೇಳಿದ್ದಾರೆ.
‘‘ಅಲ್ಪಸಂಖ್ಯಾತ ಕೋಮಿಗೆ ಸೇರಿದ ಅವರು ಬಹುಸಂಖ್ಯಾತರ ಬಹುಮತವನ್ನು ಗಳಿಸಿ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದುದು ಅವರ ಜನಾನುರಾಗವನ್ನು ಸೂಚಿಸುತ್ತದೆ’’ ಎಂದು ಕಡಿದಾಳ ಮಂಜಪ್ಪನವರು ಅಂದಿದ್ದಾರೆ.
‘‘ಸರ್ವೋದಯ ತತ್ವಗಳ ಆಧಾರದ ಮೇಲೆ ರಾಜಕೀಯ ನಡೆಸಿದ ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಪಾರ್ಲಿಮೆಂಟನ್ನು ಪ್ರತಿನಿಧಿಸುತ್ತಿದ್ದ ನಿಸ್ಪಹ ರಾಜಕಾರಣಿ ಇಮಾಮರು ಕರ್ನಾಟಕದ ನವ ನಿರ್ಮಾಣದಲ್ಲಿ ಅಗ್ರಗಣ್ಯರು’’ ಎಂದು ಜಯಪ್ರಕಾಶ ನಾರಾಯಣ ಅವರು ಹೇಳಿದ್ದಾರೆ.
‘‘ನಮ್ಮ ಇಮಾಂರವರ ಕರ್ನಾಟಕದ ಐಕ್ಯತೆಯ ಕನಸೇನೊ ನನಸಾಯಿತು. ಆದರೆ ಮುಂದೆ ಅಧಿಕಾರಕ್ಕೆ ಬಂದ ಜನರಾಗಲಿ, ಸರಕಾರಗಳಾಗಲಿ ಐಕ್ಯ ಕರ್ನಾಟಕಕ್ಕೆ ದುಡಿದವರಲ್ಲಿ ಇವರೂ ಒಬ್ಬರು ಎಂಬುದನ್ನು ಮರೆತು, ಬರೀ ಕರ್ನಾಟಕ ಎಂದು ನಾಮಕರಣ ಮಾಡಿದ್ದೇ ದೊಡ್ಡ ಕಾರ್ಯವೆಂಬಂತೆ ಅವರಿಗೆ ಸನ್ಮಾನ ಬಿರುದು ಬಾವಲಿಗಳನ್ನು ಕೊಟ್ಟರು. ಆದರೆ ಅಂದು ಈ ಏಕೀಕರಣಕ್ಕೆ ಕಾರಣಪುರುಷರಾದ ಇವರ ಹೆಸರು ಸಹ ಕೇಳಿ ಬರಲಿಲ್ಲವೆಂಬುದನ್ನು ಗಮನಿಸಿದರೆ ನಮ್ಮವರ ಅಧಿಕಾರ ಲಾಲಸೆ ತಿಳದು ದುಃಖವಾಗುತ್ತದೆ. ಈ ಕರ್ನಾಟಕ ಏಕೀಕರಣ ಪುರುಷನಿಗೆ ಶುಭವಾಗಲಿ’’ ಎಂದು ಕೆಂಗಲ್ ಹನುಮಂತಯ್ಯ ಅವರು ಹಾರೈಸಿದ್ದಾರೆ.
1971ರಲ್ಲಿ ಲೋಕಸಭೆ ವಿಸರ್ಜನೆಯಾದ ಬಳಿಕ ಜಗಳೂರಿಗೆ ಹಿಂದಿರುಗಿದರು. ತಮ್ಮ ಬಂಗಲೆಯಲ್ಲಿ ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಅವಕಾಶ ನೀಡಿ ತಾವು ಔಟ್‌ಹೌಸ್‌ನಲ್ಲಿ ವಾಸ ಮಾಡಿದರು. 1983ರ ಜನವರಿ 3ರಂದು ನಮ್ಮನ್ನು ಅಗಲಿದರು.
ದೇಶದ ಮಾರ್ಗದರ್ಶಕ
ಮೈಸೂರು ಮಹಾರಾಜರಿಂದ ‘ಮುಷೀರ್ ಉಲ್ ಮುಲ್ಕ್’ (ದೇಶದ ಮಾರ್ಗದರ್ಶಕ) ಪ್ರಶಸ್ತಿ ಪಡೆದ ಇಮಾಂ ಸಾಹೇಬರು ಪ್ರಜಾಪ್ರಭುತ್ವ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದನ್ನು ಸಾಕ್ಷಿಪ್ರಜ್ಞೆಯಿಂದ ಗಮನಿಸಿದರು. ಅವರ ಕಾಂಗ್ರೆಸ್ ವಿರೋಧ ವ್ಯಕ್ತಿಗತವಾಗಿರಲಿಲ್ಲ. ನಿಜಲಿಂಗಪ್ಪನವರ ಜೊತೆಗಿನ ಸೈದ್ಧಾಂತಿಕ ವಿರೋಧವನ್ನು ಎಂದೂ ವ್ಯಕ್ತಿಗತವಾಗಿ ನೋಡಲಿಲ್ಲ. ನೆಹರೂ ಅವರು ಎಡಪಂಥೀಯ ಧೋರಣೆಗಳ ಕಡೆಗೆ ವಾಲುತ್ತಿದ್ದಾರೆ ಎಂದು ಭಾವಿಸಿದರೂ ಅವರ ಬಗ್ಗೆ ಉನ್ನತ ಗೌರವವನ್ನು ಹೊಂದಿದ್ದರು. ಕಮ್ಯುನಿಸಂ ವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುತ್ತದೆ ಎಂಬ ಭಾವ ಅವರದಾಗಿತ್ತು. ಅವರು ರಾಜಾಶ್ರಯದಲ್ಲಿ ಬೆಳೆದವರಾಗಿದ್ದರು. ಕಾಂಗ್ರೆಸ್‌ನವರಿಗೆ ವರ್ಗ ಹೋರಾಟ ಗೊತ್ತಿರದಿದ್ದರೂ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ಹೋರಾಡಿದ ಅನುಭವವಿತ್ತು. ಇಮಾಂ ಸಾಹೇಬರಿಗೆ ಅಂಥ ಅನುಭವವೂ ಇರಲಿಲ್ಲ. ತ್ಯಾಗ, ಆತ್ಮಗೌರವ, ಪ್ರಾಮಾಣಿಕತೆ, ಸತ್ಯದ ಪ್ರತಿಪಾದನೆ, ಜೀವಕಾರುಣ್ಯ ಮುಂತಾದ ಸದ್ಗುಣಗಳಿಂದ ಮಾತ್ರ ಮಾನವೀಯ ಸಮಾಜವನ್ನು ಸೃಷ್ಟಿಸುವ ಬಗ್ಗೆ ಅವರು ಅಚಲ ನಂಬಿಕೆಯನ್ನು ಹೊಂದಿದ್ದರು. ಮಾನವನ ಇತಿಹಾಸದಲ್ಲಿ ಮತ್ತು ಭವಿಷ್ಯದಲ್ಲಿ ಅನೇಕ ಹಂತಗಳ ಹಾಗೆ ರಾಜಪ್ರಭುತ್ವ, ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಕಮ್ಯುನಿಸಂ ಕೂಡ ವಿವಿಧ ಹಂಗಳು ಎಂಬುದನ್ನು ಅವರು ಒಪ್ಪಿಕೊಂಡಿದ್ದರೆ ಕಮ್ಯುನಿಸಂ ಬಗೆಗಿನ ಅವರ ವಿಚಾರಧಾರೆ ಬೇರೆ ಆಗುತ್ತಿತ್ತೇನೊ. ಅದೇನೇ ಇದ್ದರೂ ಒಬ್ಬ ಯೋಗ್ಯ ಮನುಷ್ಯನ ಹೃದಯಸ್ಪರ್ಶಿ ನೆನಪು ಸದಾ ಉಳಿಯುವುದು ಮನದಲ್ಲಿ. (ಮುಗಿಯಿತು)