ಹೇ ರಾಮ್!
‘ರಾಮರಾಜ್ಯ’ ಪರಿಕಲ್ಪನೆಯ ಹರಿಕಾರ, ರಾಮನ ಪರಮ ಭಕ್ತ ಮಹಾತ್ಮಾ ಗಾಂಧೀಜಿಯನ್ನು 1948, ಜನವರಿ 30ರಂದು ನಾಥೂರಾಂ ಗೋಡ್ಸೆ ಎಂಬ ಬಲಪಂಥೀಯ ಉಗ್ರವಾದಿ ಗುಂಡಿಟ್ಟು ಕೊಂದು ಹಾಕಿದ. ಈ ಬಗ್ಗೆ ಕೆ. ವಿ. ಸುಬ್ಬಣ್ಣ ಅವರ ಅನುವಾದಿತ ಬರಹ ಇಲ್ಲಿದೆ.
1947 ಸೆಪ್ಟಂಬರ್ ಎರಡನೇ ವಾರ ಗಾಂಧಿ ಕಲ್ಕತಾದಿಂದ ದೆಹಲಿಗೆ ಬಂದರು. ಆ ಕಾಲಕ್ಕೆ ದೆಹಲಿ, ಒಂದು ಕಡೆ ದೇಶಬಿಟ್ಟು ಬಂದ ಅಸಂಖ್ಯಾತ ನಿರಾಶ್ರಿತರ ಸಂದಣಿಯಿಂದ ಹಾಗೂ ಇನ್ನೊಂದು ಕಡೆ ಮತೀಯ ಗಲಭೆಗಳಿಂದ, ಸಂಕಟ ಹಿಂಸೆಗಳ ದಾರುಣ ಕುರುಕ್ಷೇತ್ರವಾಗಿತ್ತು. ಗಾಂಧಿ ಅಲ್ಲಿ ತನ್ನ ಕೆಲಸದಲ್ಲಿ ತೊಡಗಿದರು. ನೌಖಾಲಿ - ಬಿಹಾರ- ಕಲ್ಕತಾಗಳಲ್ಲಿನಂತೆಯೇ ಇಲ್ಲೂ ಅಹಿಂಸೆಯ ಪ್ರಭಾವದಿಂದ ಶಾಂತಿ ಭರವಸೆಗಳನ್ನು ಸ್ಥಾಪಿಸಲು ತನ್ನನ್ನು ಸವೆಸಿದರು.
ದೆಹಲಿಯಲ್ಲಿ ಸ್ಥಾಪಿತವಾಗಿದ್ದ ನೆಹರೂ ಸರಕಾರವು ಗಾಂಧಿಯ ಮಾತುಗಳಿಗೆಲ್ಲ ಮನ್ನಣೆ ಕೊಡುವ ಸ್ಥಿತಿಯಲ್ಲಿರಲಿಲ್ಲ. ‘ನನ್ನ ಮಾತನ್ನು ಯಾರೂ ಕೇಳುವುದಿಲ್ಲ, ನಾನೀಗ ಹಿಂದಿನ ಬೆಂಚಿನವನಾಗಿದ್ದೇನೆ’ ಅಂತ ಅವರೇ ಹೇಳಿಕೊಂಡರು. ಆದರೆ ಮೇಲಿಂದ ಮೇಲೆ ಬರುತ್ತಿದ್ದ ಕಷ್ಟದ ಸಮಸ್ಯೆಗಳ ಪರಿಹಾರಕ್ಕೆ ಅವರೆಲ್ಲರೂ ಗಾಂಧಿಯ ಸಲಹೆ ಕೇಳಿ ಬರುತ್ತಿರುವುದೂ ನಿಂತಿರಲಿಲ್ಲ. ಅಂಥ ಸಮಸ್ಯೆಗಳ ಬಗ್ಗೆ ಮತ್ತು ಅದಾಗಲೇ ನೆಹರೂ-ಪಟೇಲ್ ಮಧ್ಯೆ ಬೆಳೆಯುತ್ತಿದ್ದ ತೀವ್ರ ಭಿನ್ನಾಭಿಪ್ರಾಯಗಳ ಬಗ್ಗೆ ಕೂಡಾ ಗಾಂಧಿ ಗಮನಹರಿಸಬೇಕಾಗಿತ್ತು.
1948 ಜನವರಿ 13 ರಂದು, ದೆಹಲಿಯಲ್ಲಿ ಮತೀಯ ಹಿಂಸಾಚಾರ ನಿಲ್ಲದಿರುವ ಕಾರಣ ಮತ್ತು ಭಾರತ ಸರಕಾರವು ಪಾಕಿಸ್ತಾನಕ್ಕೆ ಕೊಡಬೇಕಿದ್ದ ಪಾಲು ಹಣವನ್ನು ತಡೆಹಿಡಿದಿದ್ದ ಕಾರಣ, ಗಾಂಧಿ ಅನಿರ್ದಿಷ್ಟ ಉಪವಾಸವನ್ನಾರಂಭಿಸಿದರು. ಆನಂತರ ದೆಹಲಿಯ ಅನೇಕಾನೇಕ ಮುಖಂಡರು, ನಾಗರಿಕರು ಮತ್ತು ಸರಕಾರ ಕೊಟ್ಟ ಆಶ್ವಾಸನೆಯನ್ನು ಒಪ್ಪಿ ತಾ.18 ರಂದು ಉಪವಾಸವನ್ನು ನಿಲ್ಲಿಸಿದರು. ತಾ. 20ರಂದು ಅವರ ಪ್ರಾರ್ಥನಾ ಸಭೆಯಲ್ಲಿ ಒಂದು ಬಾಂಬ್ ಸ್ಫೋಟವಾಯಿತು. ಅದು ತನ್ನ ಮೇಲೆ ಎಸೆದ ಬಾಂಬ್ ಎಂದು ತಕ್ಷಣ ಅವರಿಗೆ ತಿಳಿಯಲಿಲ್ಲ. ಆಮೇಲೆ, ಅದು ಗೊತ್ತಾಗಿ ಮದನ್‌ಲಾಲ್ ಪಹವಾ ಎಂಬ ನಿರಾಶ್ರಿತನನ್ನು ಬಂಧಿಸಿದ್ದಾರೆಂಬುದು ತಿಳಿದಾಗ ಗಾಂಧಿ ಹೀಗಂದರು: ಅದು ನನ್ನ ಮೇಲೆ ಎಸೆದ ಬಾಂಬ್ ಎನ್ನುವುದು ಆ ಕ್ಷಣದಲ್ಲಿ ನನಗೆ ತಿಳಿದಿದ್ದರೆ ನಾನು ಏನು ಮಾಡುತ್ತಿದ್ದೇನೋ ಯಾರಿಗೆ ಗೊತ್ತು? ಬಾಂಬ್ ಎಸೆದವರ ಬಗ್ಗೆ ಯಾವುದೇ ದ್ವೇಷದ ಕಹಿಯಿಲ್ಲದೆ, ಅವನನ್ನು ಕ್ಷಮಿಸಿ, ನಗುಮುಖದಿಂದ ಸಾವನ್ನು ಎದುರಿಸುತ್ತಿದ್ದೇನೇ?’’
ಮುಂದಿನ ದಿನಗಳಲ್ಲಿ ಗಾಂಧಿ, ಕಾಂಗ್ರೆಸನ್ನು ಅಧಿಕಾರ ರಾಜಕಾರಣದ ಹೊರಗೆ ಕೇವಲ ಸಾರ್ವಜನಿಕ ಸೇವಾಸಂಸ್ಥೆಯಾಗಿ ಪುನರ‌್ರಚಿಸುವ ಬಗ್ಗೆ ಯೋಚಿಸತೊಡಗಿದ್ದರು. ಉಪವಾಸದಿಂದಾದ ಬಳಲಿಕೆಯ ನಡುವೆಯೂ ಅವರು, ಕಾಂಗ್ರೆಸಿನ ಹೊಸ ‘ಸಂಘಟನಾವಿಧಿ’ಗಳ ಕರಡನ್ನು ತಯಾರಿಸಿದರು. 29ರ ರಾತ್ರಿ ಮಲಗಲು ಹೊರಟಾಗ ಅವರು ತುಂಬಾ ದಣಿದಿದ್ದರು. ಮಲಗುವ ಮೊದಲು ಅವರು ಉರ್ದು ದ್ವಿಪದಿಯೊಂದನ್ನು ಹಾಡಿಕೊಂಡರು. ಅದರ ಸ್ಥೂಲ ಅರ್ಥ: ‘ಲೋಕದ ಹೂದೋಟದಲ್ಲಿ ಕ್ಷಣಿಕ ಚೈತ್ರಜಾತ್ರೆ, ಕ್ಷಣಿಕವಾದರೂ ಸವಿಯಬೇಕದನು ತುಂಬಿ ಜೀವಪಾತ್ರೆ.’
ಅದೇ ದಿನ ಅವರು ಸ್ವಗ್ರಾಮದ ಕಿಶೋರಿಲಾಲ ಮಶ್ರುವಾಲಾ ಅವರಿಗೆ ಒಂದು ಪತ್ರ ಬರೆದು, ತಾನು ಫೆಬ್ರವರಿ 3ರ ಹೊತ್ತಿಗೆ ಸೇವಾಗ್ರಾಮಕ್ಕೆ ಬಂದು 8-10 ದಿನ ಇರಲು ಯೋಚಿಸಿರುವುದಾಗಿಯೂ, ಅದರೆ ಆ ಪ್ರವಾಸವು ನಿಶ್ಚಿತವಾಗಿಲ್ಲವೆಂದೂ ತಿಳಿಸಿದರು. ಅದು ಆ ದಿನ ಪೋಸ್ಟ್ ಆಗದೆ ಉಳಿಯಿತು. ಗಾಂಧಿಯ ಕಾರ್ಯಕ್ರಮವು ಸಂಜೆಗೆ ನಿಶ್ಚಿತವಾಗುತ್ತದೆ ಎಂದು ತಿಳಿದ ಮನುಗಾಂಧಿ, ಆ ಬಗ್ಗೆ ಒಂದು ಸಾಲು ಸೇರಿಸಿ ಅದನ್ನು ಮರುದಿನ ಅಂಚೆಗೆ ಕಳಿಸಿದರಾಯಿತು ಎಂದುಕೊಂಡರು. ಮಾರನೆಯ ದಿನ ಈ ಸಂಗತಿ ತಿಳಿದಾಗ ಗಾಂಧಿ ಮನುವಿಗೆ ಹೀಗಂದರು: ‘‘ಈ ಪತ್ರವನ್ನು ಹಾಗೆ ಅಂಚೆಗೆ ಹಾಕದೆ ಇಡಬಾರದಿತ್ತು... ನಾಳೆಯನ್ನು ಯಾರು ಕಂಡಿದ್ದಾರೆ? ಪತ್ರವನ್ನು ಅಂಚೆಗೆ ಕಳಿಸುವುದು ಬಿಶನ್‌ನ ಜವಾಬ್ದಾರಿಯಾಗಿತ್ತು, ನಿಜ. ಆದರೆ ಅಲ್ಲಿಗೂ ನನ್ನ ಎಲ್ಲಾ ಕೆಲಸಗಳ ಬಗ್ಗೆ ನಿನಗಿರುವ ಜವಾಬ್ದಾರಿಯು ತಪ್ಪಿಹೋಗುವುದಿಲ್ಲ.... ನಾನು ಅದನ್ನು ನಿನ್ನ ಲೋಪವೆಂದೇ ಪರಿಗಣಿಸುತ್ತೇನೆ.
ತಾ. 30 ರಂದು ಗಾಂಧಿ, ಎಂದಿನಂತೆ ಬೆಳಗ್ಗಿನ ಜಾವ ಮೂರೂವರೆ ಗಂಟೆಗೆ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿ ಪ್ರಾರ್ಥನೆ ನಡೆಸಿದರು. ಆಮೇಲೆ ರೂಢಿಯ ಪ್ರಕಾರ ಪತ್ರಗಳಿಗೆ ಉತ್ತರ ಬರೆಸಿದರು. ಅನಂತರ, ಪ್ಯಾರೆಲಾಲ್‌ರಿಗೆ, ತಾನು ಹಿಂದಿನ ರಾತ್ರಿ ಆತುರದಲ್ಲಿ ಬರೆದಿದ್ದ ಕಾಂಗ್ರೆಸ್ ಸಂಘಟನೆಯ ಕರಡನ್ನು ಕೊಟ್ಟು ಅದರಲ್ಲಿರುವ ಲೋಪಗಳನ್ನು ತಿದ್ದಿ ತರಲು ಹೇಳಿದರು. ಸ್ವಲ್ಪ ಹೊತ್ತಾದಮೇಲೆ ಪ್ಯಾರೆಲಾಲ್ ಕರಡನ್ನು ನೋಡಿ ತಂದಾಗ, ಆಸಮಯಕ್ಕೆ ಮದರಾಸ್ ಸರಕಾರವು ಎದುರಿಸುತ್ತಿದ್ದ ಆಹಾರ ಕೊರತೆಯನ್ನು ಪರಿಹರಿಸುವ ಬಗ್ಗೆ ಸೂಚನೆಗಳನ್ನು ಹೇಳಿ ಅದನ್ನು ಟಿಪ್ಪಣಿ ಮಾಡುವಂತೆ ತಿಳಿಸಿದರು.
ಅವೊತ್ತು ಸ್ನಾನ ಮುಗಿಸಿ ಬಂದಾಗ ಅವರ ದಣಿವು ಕಳೆದು ಉತ್ಸಾಹ ತುಂಬಿರುವಂತೆ ಕಂಡಿತು. ಆಮೇಲೆ, ನೌಖಾಲಿ ಪ್ರವಾಸದಲ್ಲಿ ರೂಢಿಮಾಡಿಕೊಂಡಿದ್ದ, ಬಂಗಾಲಿ ಕಲಿಕೆಯಲ್ಲಿ ಉದ್ಯುಕ್ತರಾದರು. ಅದಾದಮೇಲೆ ಪುನಃ, ಪ್ಯಾರೆಲಾಲರು ತಿದ್ದಿದ್ದ ಕರಡಿನಲ್ಲಿ, ತಾವು ಬರೆದ ಸಂಖ್ಯೆಗಳು ತಪ್ಪಾಗಿದ್ದುವೆಂಬುದನ್ನು ನೆನೆಸಿಕೊಂಡು ಅದನ್ನು ತಿದ್ದಿದರು.
ಮಧ್ಯಾಹ್ನದ ಕಿರುನಿದ್ದೆಯಾದ ಮೇಲೆ ಅವರು ಸಂದರ್ಶಕರನ್ನು ಭೇಟಿಮಾಡಿದರು. ಸಿಂಧಿ ಪ್ರತಿನಿಧಿಗಳ ತಂಡವನ್ನು ಕುರಿತು ಹೀಗೆಂದರು: ಒಬ್ಬ ನಿರಾಶ್ರಿತನು ನನಗೆ ಹಿಮಾಲಯಕ್ಕೆ ಹೋಗಲು ಹೇಳಿದ. ನಿಜ, ಅದು ಅತ್ಯುತ್ತಮವಾದ ಸೂಚನೆಯೇ. ಹಾಗೆ ಮಾಡಿದರೆ ನಾನು ಈಗಿರುವುದಕ್ಕಿಂತ ಇಮ್ಮಡಿ ಮಹಾತ್ಮನಾಗಿ ಜನರನ್ನು ಆಕರ್ಷಿಸಬಹುದು..... ಆದರೆ, ಈಗಿನ ಕತ್ತಲು-ಹಿಂಸೆ-ನೋವುಗಳ ನಡುವಿನಲ್ಲೇ ಇಲ್ಲೇ ನಾನು ನನ್ನ ಸುಖ-ಶಕ್ತಿಗಳನ್ನು ಪಡೆದುಕೊಳ್ಳಬೇಕು; ಅದು ನನ್ನ ಸಂಕಲ್ಪ.’’
ಮಧ್ಯಾಹ್ನದ ಮೇಲೆ 4 ಗಂಟೆಗೆ, ಸರ್ದಾರ್ ವಲ್ಲಭಭಾಯಿ ಪಟೇಲರು ಮಗಳು ಮಣಿಬೆಹನ್ ಜೊತೆಯಲ್ಲಿ ಬಂದು ಗಾಂಧಿಯನ್ನು ಭೇಟಿ ಮಾಡಿದರು. ಗಾಂಧಿ ಚರಕಾದಲ್ಲಿ ನೂಲುತ್ತಲೇ ಸಂಭಾಷಣೆ ನಡೆಸಿದರು. ಸರ್ದಾರ್ ಮತ್ತು ಪಂಡಿತ ನೆಹರೂ ಈ ಇಬ್ಬರಲ್ಲಿ ಯಾರಾದರೊಬ್ಬರು ಮಂತ್ರಿಮಂಡಲದಿಂದ ಹೊರಬರಬೇಕೆಂದು ತಾನು ಸೂಚಿಸಿದ್ದನ್ನು ನೆನೆಸಿ, ಈಗ ತನ್ನ ಅಭಿಪ್ರಾಯವು ಬದಲಾಗಿದೆಯೆಂದೂ ಸದ್ಯದ ಸಂದರ್ಭದಲ್ಲಿ ಇಬ್ಬರೂ ಕೂಡಿ ಮುಂದುವರಿಯಬೇಕಾದದ್ದು ಅನಿವಾರ್ಯವೆಂದೂ ಹೇಳಿದರು. ಅವತ್ತಿನ ಪ್ರಾರ್ಥನಾ ಸಭೆಯಲ್ಲಿ ತಾನು ಈ ಬಗ್ಗೆಯೇ ಮಾತನಾಡುವುದಾಗಿಯೂ ಹೇಳಿದರು. ಅಗತ್ಯಬಿದ್ದರೆ ತಾನು ಸೇವಾಗ್ರಾಮಕ್ಕೆ ಹೋಗುವುದನ್ನು ಮುಂದೆ ಹಾಕುವುದಾಗಿ ಮತ್ತು ಅವರಿಬ್ಬರಲ್ಲಿನ ಭಿನ್ನಾಭಿಪ್ರಾಯವನ್ನು ಅಂತಿಮವಾಗಿ ಪರಿಹರಿಸುವತನಕ ತಾನು ದೆಹಲಿಯನ್ನು ಬಿಡುವುದಿಲ್ಲ ವೆಂದು ಕೂಡಾ ತಿಳಿಸಿದರು.
ಸರ್ದಾರರ ಜೊತೆ ಮಾತು ನಡೆದಿರುವಾಗಲೇ, 4:30 ಗಂಟೆಗೆ, ಗಾಂಧಿಗೆ ಅಭಾ ಸಂಜೆಯ ಆಹಾರವನ್ನು ತಂದುಕೊಟ್ಟರು. ಅದಾಗಲೇ ಪ್ರಾರ್ಥನೆಯ ವೇಳೆ ಸಮೀಪಿಸುತ್ತಿತ್ತು. ಆದರೆ ಸರ್ದಾರರ ಮಾತು ಮುಗಿದಿರಲಿಲ್ಲ. ನಿಗದಿತ ವೇಳೆಯು. ಅದೂ ಪ್ರಾರ್ಥನೆಗೆ ಸಂಬಂಧಿಸಿ, ಯಾವತ್ತೂ ತಪ್ಪಕೊಡದು ಎಂಬುದು ಗಾಂಧಿಯ ನಿಯಮವಾಗಿತ್ತು. ಇದರಿಂದ ಆಭಾಗೆ ತುಂಬಾ ಆತಂಕವೆನಿಸತೊಡಗಿತು. ಆದರೆ, ಮಧ್ಯೆ ಬಾಯಿ ಹಾಕಲಿಕ್ಕೂ ಆಕೆಗೆ ಧೈರ್ಯವಾಗಲಿಲ್ಲ. ಕಟ್ಟಕಡೆಗೆ ಆಕೆ ಹತಾಶಳಾಗಿ, ಗಾಂಧಿಯ ಗಡಿಯಾರವನ್ನು ಎತ್ತಿ ಅವರ ಎದುರು ಹಿಡಿದರು. ಅದೂ ಪ್ರಯೋಜನವಾಗಲಿಲ್ಲ. ಆಭಾರ ಪೇಚಾಟವನ್ನು ಗಮನಿಸಿದ ಮಣಿ ಬೆಹನ್, ಉಪಾಯದಿಂದ ಮಧ್ಯೆ ಪ್ರವೇಶಿಸಿ ವಿಷಯ ತಿಳಿಸಿದರು. ಗಾಂಧಿ ಪ್ರಾರ್ಥನೆಗೆ ಹೋಗಲು ಮೇಲಕ್ಕೇಳುತ್ತ, ಸರ್ದಾರರಿಗೆ, ಈಗ ನಾನು ನಿಮ್ಮಿಂದ ಹರಿದುಕೊಂಡು ಹೋಗಬೇಕಾಗಿದೆ’’ ಎಂದರು.
ಗಾಂಧಿ, ಆಭಾ ಮತ್ತು ಮನುಗಾಂಧಿಯವರ ಜೊತೆ ಪ್ರಾರ್ಥನೆಗೆ ಹೊರಟರು. ದಾರಿಯಲ್ಲಿ ಆಭಾ ಹೇಳಿದರು - ಬಾಪು, ನಿಮ್ಮ ಗಡಿಯಾರ ಬೇಸರಗೊಂಡಿರಬೇಕು; ನೀವು ಅದರ ಕಡೆ ನೋಡುವುದೇ ಇಲ್ಲ.
ಗಾಂಧಿ: ನಾನು ಯಾಕೆ ನೋಡಬೇಕು? ವೇಳೆ ನೋಡಿಕೊಳ್ಳಲು ನೀವೆಲ್ಲ ಇದ್ದೀರಲ್ಲ?
ಆದರೆ ನೀವು ನಿಮ್ಮ ಸಮಯಪಾಲಕರ ಕಡೆಗೂ ನೋಡುವುದಿಲ್ಲವಲ್ಲ? ಅಂತ ಆ ಹುಡುಗಿಯರಲ್ಲೊಬ್ಬರು ಮಾರ್ನುಡಿದಾಗ ಗಾಂಧಿ ದೊಡ್ಡದಾಗಿ ನಕ್ಕರು.
ಮೆಟ್ಟಿಲು ಹತ್ತಿ ಪ್ರಾರ್ಥನಾ ಸಭೆ ನಡೆಯುವ ಬಯಲಿಗೆ ಕಾಲಿಡುತ್ತಾ ಗಾಂಧಿ ಹೀಗಂದರು: ನಾನು ಹತ್ತು ನಿಮಿಷ ತಡವಾಗಿರುವುದು ನಿಮ್ಮ ತಪ್ಪು. ದಾದಿಯರು ತಮ್ಮ ಕರ್ತವ್ಯವನ್ನು ನೆರವೇರಿಸುತ್ತಲೇ ಇರಬೇಕು; ದೇವರೇ ಎದುರು ಬಂದು ನಿಂತರೂ ನಿಲ್ಲಿಸಬಾರದು. ರೋಗಿಗೆ ಔಷಧ ಕೊಡಬೇಕಾದ ಸಮಯದಲ್ಲಿ, ನೀವು ಏನೇ ಕಾರಣದಿಂದ ತಳುವಿದರೂ ಅದರಿಂದ ಬಡರೋಗಿ ಸಾಯುತ್ತಾನೆ. ಪ್ರಾರ್ಥನೆಯ ವಿಷಯವೂ ಹಾಗೇ; ಒಂದು ನಿಮಿಷಮಾತ್ರ ನಾನು ತಡಮಾಡಿದರೂ ಅದು ನನ್ನನ್ನು ಕೊರೆಯುತ್ತದೆ.
ಆದಿನ ಸುಮಾರು ಒಂದು ಸಾವಿರಕ್ಕೂ ಮಿಕ್ಕು ಸಭಿಕರು ಸೇರಿದ್ದರು. ಸಭಿಕರ ಮಧ್ಯೆ ದಾರ ಕಟ್ಟಿದ ಹಾದಿಯಲ್ಲಿ ನಡೆಯುತ್ತ ಗಾಂಧಿ, ಹುಡುಗಿಯರ ಹೆಗಲಮೇಲಿದ್ದ ತನ್ನ ಕೈಗಳನ್ನು ತೆಗೆದು, ನಮಸ್ಕರಿಸುತ್ತಿದ್ದ ಜನರಿಗೆ ಪ್ರತಿನಮಸ್ಕಾರ ಮಾಡಿದರು. ಇದ್ದಕ್ಕಿದ್ದಂತೆ, ಯಾವನೋ ಒಬ್ಬ ಜನರ ಗುಂಪಿನಿಂದ ತಳ್ಳಿಕೊಳ್ಳುತ್ತ ಬಂದು ಗಾಂಧಿಯ ಕಡೆಗೇ ಧಾವಿಸಿದ. ಆತ ಗಾಂಧಿಯ ಪಾದಗಳನ್ನು ಮುಟ್ಟಲು ಬರುತ್ತಿದ್ದಾನೆಂದು ಭಾವಿಸಿದ ಮನು, ‘ಈಗಲೇ ಪ್ರಾರ್ಥನೆಗೆ ತಡವಾಗಿದೆ’ ಎನ್ನುತ್ತ, ಅವರ ಕೈಮುಟ್ಟಿ ಅವನನ್ನು ನಿವಾರಿಸಲೆತ್ನಿಸಿದಳು. ಆದರೆ ಆತ ಆಕೆಯನ್ನು ಬಲವಾಗಿ ತಳ್ಳಿದ; ಆಕೆಯ ಕೈಯಲ್ಲಿದ್ದ ಪುಸ್ತಕ ಮತ್ತು ಮಾಲೆ ಕೆಳಗೆ ಬಿದ್ದವು. ಬಿದ್ದ ವಸ್ತುಗಳನ್ನು ಎತ್ತಿಕೊಳ್ಳಲಿಕ್ಕಾಗಿ ಆಕೆ ಬಾಗಿದಾಗ, ಆತ ಗಾಂಧಿಗೆ ಮುಖಾಮುಖಿ ನಿಂತು, ಆ ಸಮೀಪದಿಂದ ಪಿಸ್ತೂಲು ಎತ್ತಿ ಒಂದಾದ ಮೇಲೊಂದರಂತೆ ಏಕಪ್ರಕಾರ ಮೂರು ಗುಂಡುಗಳನ್ನು ಹಾರಿಸಿದ. ಗಾಂಧಿ, ‘ಹೇ ರಾಮ್’ ಎಂದರು; ಅವರ ಬಿಳಿ ಬಟ್ಟೆಯ ಮೇಲೆ ಕೆಂಪು ಹರಡಿಕೊಳ್ಳುತ್ತ, ನಮಸ್ಕರಿಸಲಿಕ್ಕೆ ಎತ್ತಿದ ಕೈ ಕೆಳಗಿಳಿಯಿತು. ಬಸವಳಿದ ದೇಹ ಮೆದುವಾಗಿ ನೆಲಕ್ಕೆ ಕುಸಿಯಿತು. ಗಾಂಧಿ 5:17 ಗಂಟೆಗೆ ಕೊನೆಯುಸಿರನ್ನೆಳೆದರು.