ಹಾಸ್ಟೆಲ್‌ಗಳು ಸುಧಾರಣೆಗಳಿಗೆ ತೆರೆದುಕೊಳ್ಳುವುದು ಎಂದು?
ಹಲವು ವರ್ಷಗಳಿಂದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗದ ಇಲಾಖೆ ಅಡಿಯಲ್ಲಿ ಬರುವ ಹಾಸ್ಟೆಲ್‌ಗಳ ಸಮಸ್ಯೆಗಳು ಸಮಸ್ಯೆಗಳಾಗಿಯೆ ಉಳಿದಿವೆ. ಇವುಗಳು ಬಗೆಹರಿಯುವುದೇ ಇಲ್ಲವೇನೋ ಎನ್ನುವ ಆತಂಕಕ್ಕೆ ವಿದ್ಯಾರ್ಥಿಗಳು ತಲುಪಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳು, ಸರಕಾರ ಗಮನ ಕೊಡದೆ ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿ.
ರಾಜ್ಯದ ಹಲವು ಹಾಸ್ಟೆಲ್‌ಗಳಲ್ಲಿ ಖಾಯಂ ಮೇಲ್ವಿಚಾರಕರ ಕೊರತೆಯಿಂದಾಗಿ ಒಂದೇ ವಾರ್ಡನ್‌ಗೆ
ಎರಡು-ಮೂರು ಹಾಸ್ಟೆಲ್‌ನ್ನು ನಿರ್ವಹಣೆ ಮಾಡುವ ಜವಾಬ್ದಾರಿ ನೀಡಿದ್ದಾರೆ. ಸರಕಾರ ಹಾಸ್ಟೆಲ್‌ಗಳಿಗೆ ನಿಲಯಪಾಲಕರನ್ನು ನೇಮಕ ಮಾಡಿಕೊಳ್ಳದೆ ಇರುವುದರಿಂದಲೇ ಈ ಸಮಸ್ಯೆ ಉಂಟಾಗಿರುವುದು. ಈ ಸಮಸ್ಯೆ ಹಾಸ್ಟೆಲ್‌ಗಳಲ್ಲಿ ವಾಸಮಾಡುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ.
2024ರ ಜೂನ್ ತಿಂಗಳಿನಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ಸತತವಾಗಿ ಮಳೆ ಎನ್ನದೆ ಹತ್ತು ದಿನಗಳ ಕಾಲ ಅವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿದ್ದರು. ಹಾಸ್ಟೆಲ್‌ನಲ್ಲಿ
ಮೂಲಭೂತಸೌಕರ್ಯಗಳಿಲ್ಲದಿರುವುದು,
ಊಟ ಕಳಪೆಯಿಂದ ಕೂಡಿರುವುದು, ಊಟದಲ್ಲಿ ಹುಳ ಸಿಗುವುದು, ಇವೆಲ್ಲದರ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡಿದ್ದ ಸಮಯದಲ್ಲಿ, ಮೇಲ್ವಿಚಾರಕರು ಮತ್ತು ಇಲಾಖೆ ಅಧಿಕಾರಿಗಳು ಹೋರಾಟ ಮಾಡಿದ ವಿದ್ಯಾರ್ಥಿಗಳನ್ನೇ ತಪ್ಪಿತಸ್ಥರನ್ನಾಗಿ ಮಾಡಿದ್ದರು. ಪೋಷಕರಿಗೆ ಕರೆ ಮಾಡಿ, ನಿಮ್ಮ ಮಗನನ್ನು ಹಾಸ್ಟೆಲ್ ನಿಂದ ಹೊರಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಇದು ನಿಜವೇ ಆಗಿದ್ದರೆ, ಅಧಿಕಾರಿಗಳ ನಡವಳಿಕೆ ವಿದ್ಯಾರ್ಥಿಗಳ ಹೋರಾಟ ಮತ್ತು ಪ್ರಶ್ನೆಯನ್ನು ದಮನ ಮಾಡುವುದೇ ಆಗಿದೆ.
ಬೆಂವಿವಿಯದ ವಿದ್ಯಾರ್ಥಿಗಳ ಹೋರಾಟದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಬೆಂಬಲವಾಗಿ ನಿಂತು ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿತು. ಪ್ರತಿಭಟನೆ ನಡೆದ ಹತ್ತು ದಿನಗಳ ನಂತರ ಬಂದಂತಹ ಮೇಲಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾತನಾಡಿ ‘ನಾವು ಓದುತ್ತಿದ್ದಂತಹ ಸಮಯದಲ್ಲಿ ಹಾಸ್ಟೆಲ್‌ಗಳಲ್ಲಿ ಇಷ್ಟು ಸೌಕರ್ಯಗಳು ಇರಲಿಲ್ಲ. ನಿಮಗೆ ಇಷ್ಟು ಕೊಟ್ಟರೂ ನೀವು, ಉತ್ತಮ ವಿದ್ಯಾಭ್ಯಾಸ ಮಾಡಿಕೊಳ್ಳದೆ, ಹೋರಾಟ ಮಾಡಿ ನಮಗೆ ಪ್ರಶ್ನೆ ಮಾಡುತ್ತಿದ್ದೀರಾ?’ ಎಂದು ವಿದ್ಯಾರ್ಥಿಗಳಿಗೇ ಬುದ್ಧಿ ಹೇಳಿ, ಅವರನ್ನು ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದ್ದರು.
ಹಾಸ್ಟೆಲ್ ಸಮಸ್ಯೆಗಳನ್ನು ಸೂಕ್ಷ್ಮವಾಗಿ ನೋಡುವುದಾದರೆ, ಕಳೆದ ಮೂರು ವರ್ಷಗಳಿಂದಲೂ ವಿದ್ಯಾರ್ಥಿಗಳಿಗೆ ಕೊಡುವ ಮಾಸಿಕ ನಿರ್ವಹಣಾ ವೆಚ್ಚದ ಹಣ 1,750. ಇದೆ. ಅಂದರೆ ಒಂದು ವಿದ್ಯಾರ್ಥಿ/ನಿಗೆ ಪ್ರತಿ ದಿನಕ್ಕೆ ಕೇವಲ 55ರೂ.ಮಾತ್ರ. ಈ ಹಣದಲ್ಲಿ ವಿದ್ಯಾರ್ಥಿಗಳಿಗೆ ಎಂತಹ ಗುಣಮಟ್ಟದ ಪೌಷ್ಟಿಕ ಊಟ ನೀಡುವುದಕ್ಕೆ ಸಾಧ್ಯವಿದೆ?. ಕೋವಿಡ್ ನಂತರದಲ್ಲಿ ಎಲ್ಲ ಆಹಾರ ಪದಾರ್ಥಗಳ ಮೇಲಿನ ಬೆಲೆ ಹೆಚ್ಚಾಗಿದೆ.
ತರಕಾರಿ ಬೆಲೆಯೂ ಪ್ರತಿದಿನ ಬದಲಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕರು ಗುಣಮಟ್ಟದ ಆಹಾರ ಕೊಡುವುದಕ್ಕೆ ಸಾಧ್ಯವಿದೆಯೆ?.
ರಾಜ್ಯದ ಯಾವ ಹಾಸ್ಟೆಲ್‌ಗೆ ಭೇಟಿ ನೀಡಿ, ನಿಮ್ಮ ಸಮಸ್ಯೆ ಏನು ಎಂದು ವಿದ್ಯಾರ್ಥಿಗಳನ್ನು ಕೇಳಿದರೆ ಮೊದಲು ಬರುವಂತಹ ಉತ್ತರ ‘ಊಟದ ಸಮಸ್ಯೆ’. ಈ ಸಮಸ್ಯೆಯನ್ನು ಮುಂದಿಟ್ಟು ಹಲವು ವರ್ಷಗಳಿಂದಲೂ ವಿದ್ಯಾರ್ಥಿ-ಮೇಲ್ವಿಚಾರಕರು-ಮತ್ತು ಇಲಾಖೆ ಅಧಿಕಾರಿಗಳ ನಡುವೆ ನಿರಂತರವಾಗಿ ಜಗಳ/ವಾಗ್ವಾದಗಳು ನಡೆಯುತ್ತಲೇ ಇವೆ. ಈಗ ಹಾಸ್ಟೆಲ್‌ಗಳಲ್ಲಿ ಕೊಡುತ್ತಿರುವ ಊಟವನ್ನು ಒಮ್ಮೆ ಫುಡ್ ಟೆಸ್ಟಿಂಗ್ ಲ್ಯಾಬ್‌ನಿಂದ ಪರೀಕ್ಷೆ ಮಾಡಿಸಬೇಕಾಗಿದೆ. ಕೊಡುತ್ತಿರುವ ಊಟದ ಗುಣಮಟ್ಟ ಎಷ್ಟರಮಟ್ಟಿಗಿದೆ ಎನ್ನುವುದು ಆಗ ಬಹಿರಂಗವಾಗುತ್ತದೆ.
ವಿದ್ಯಾರ್ಥಿಗಳಿಗೆ ಗುಣಮಟದ್ಟ ಪೌಷ್ಟಿಕ ಆಹಾರ ಕೊಡಬೇಕೆಂದರೆ, ಈಗ ಸರಕಾರ ಒಂದು ವಿದ್ಯಾರ್ಥಿಗೆ ಕೊಡುತ್ತಿರುವ ಮಾಸಿಕ 1,750ರಿಂದ ಕನಿಷ್ಠ 3,000ರೂ.ಗಳಿಗಾದರೂ ಏರಿಸಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದಕ್ಕೆ ಸಾಧ್ಯವಾಗುತ್ತದೆ. ಹಲವು ದಶಕಗಳಿಂದಲೂ ಒಂದು ವಿದ್ಯಾರ್ಥಿಗೆ ವಾರಕ್ಕೆರಡು ಮೊಟ್ಟೆ, ಎರಡು ಬಾಳೆ ಹಣ್ಣು, ತಿಂಗಳಿಗೊಮ್ಮೆ ಚಿಕನ್ ಇಷ್ಟೇ ಇದೆ. ಇದನ್ನು ಬದಲಾಯಿಸುವ ಆಲೋಚನೆಯನ್ನು ಸರಕಾರ ಇದುವರೆಗೂ ಮಾಡಿಲ್ಲ.
ಹಿಂದುಳಿದ ವರ್ಗ ಇಲಾಖೆಗೆ ಸೇರಿದ ಬಿಸಿಎಂ ಹಾಸ್ಟೆಲ್‌ಗಳು ಸೇರಿದಂತೆ ರಾಜ್ಯದಲ್ಲಿರುವ ಹಲವು ಹಾಸ್ಟೆಲ್‌ಗಳನ್ನು ಖಾಸಗಿ ಕಟ್ಟಡದಲ್ಲಿಯೇ ನಿರ್ವಹಣೆ ಮಾಡುತ್ತಿದ್ದಾರೆ. ಅದರಲ್ಲೂ ಆ ಖಾಸಗಿ ಕಟ್ಟಡಗಳಲ್ಲಿ ಪ್ರವೇಶಾತಿ ಪಡೆಯುವ ಹೊಸ ವಿದ್ಯಾರ್ಥಿಗಳಿಗೆ ಸೀಮಿತ ಪ್ರವೇಶವನ್ನಷ್ಟೆ ನೀಡುತ್ತಿದ್ದಾರೆ. ಅದರಲ್ಲೂ ಮೊದಲ ಆದ್ಯತೆ ಶ್ರೇಣಿಹಂತದಲ್ಲಿ ಪ್ರವೇಶಾತಿ ನೀಡುತ್ತಿದ್ದಾರೆ. ಪ್ರವೇಶಕ್ಕೆ ಮಿತಿ ಹೇರುತ್ತಿರುವುದರಿಂದ, ಎಷ್ಟೊಂದು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಈ ಸಮಸ್ಯೆ ಎಸ್‌ಸಿ/ಎಸ್‌ಟಿ, ಬಿಸಿಎಂ ಹಾಸ್ಟೆಲ್‌ಗಳೆರಡರಲ್ಲೂ ಇದೆ.
ಈ ಕೂಡಲೇ ಸರಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯಾದ್ಯಂತ ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚು ಮಾಡಬೇಕು. ಪ್ರವೇಶ ಸಿಗದೇ ಯಾವ ವಿದ್ಯಾರ್ಥಿಯೂ ಉನ್ನತ ಶಿಕ್ಷಣದಿಂದ ವಂಚಿರಾಗಬಾರದು. ಈಗಾಗಲೇ ಇರುವಂತಹ ಹಾಸ್ಟೆಲ್‌ಗಳಿಗೆ ಖಾಯಂ ನಿಲಯಪಾಲಕರನ್ನು ನೇಮಕಾತಿ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಕಡ್ಡಾಯವಾಗಿ ಗ್ರಂಥಾಲಯ, ದೈಹಿಕ ವ್ಯಾಯಾಮ ಕೇಂದ್ರ, ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿನಿಯರಿಗೆ ಆತ್ಮ ರಕ್ಷಣೆಯ ಕೌಶಲ್ಯಗಳ ತರಬೆೇತಿ, ಸೇರಿದಂತೆ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರಕಾರ ಯೋಚಿಸಬೇಕು.
ಹಾಸ್ಟೆಲ್ ಸೌಲಭ್ಯಗಳು, ಶಿಕ್ಷಣದಲ್ಲಿ ಮತ್ತು ಆ ಮೂಲಕ ದೇಶದ ಅಭಿವೃದ್ಧಿಯಲ್ಲೂ ದಮನಿತ ಸಮುದಾಯದ ಪ್ರಜಾತಾಂತ್ರಿಕ ಪಾಲನ್ನು ಹೆಚ್ಚಿಸುವ ಸಾಂವಿಧಾನಿಕ ಜವಾ ಬ್ದಾರಿಯ ಕಾರ್ಯಕ್ರಮ. ಹಾಸ್ಟೆಲ್ ವ್ಯವಸ್ಥೆಯನ್ನು ಶಿಕ್ಷಣದ ಪ್ರಜಾತಾಂತ್ರೀಕರಣದ ಭಾಗವಾಗಿಯೇ ನೋಡಬೇಕು ಎನ್ನುವುದನ್ನು ಸರಕಾರ ಮರೆಯಬಾರದು.