ಮಹಾರಾಷ್ಟ್ರದ ‘ವಿಶೇಷ ಸಾರ್ವಜನಿಕ ಸುರಕ್ಷತಾ ಮಸೂದೆ’ ಎಷ್ಟು ಅಪಾಯಕಾರಿ?
ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಒಂದು ಮಾತು ಹೇಳುತ್ತಾರೆ.
‘‘ಈ ಸರಕಾರಗಳು ಜನರನ್ನು ಪೀಡಿಸುವುದಕ್ಕಾಗಿಯೇ ಹಾಕುವ ಶ್ರಮದ ಅರ್ಧ ಶ್ರಮವನ್ನು ಜನರ ಒಳಿತಿಗಾಗಿ ಹಾಕಿದ್ದರೆ ಜನರ ಬಾಳು ಬಂಗಾರ ಆಗುತ್ತ್ತಿತ್ತು’’.
ಈ ಮಾತು ಮೋದಿ ಸರಕಾರಕ್ಕೆ ಹಾಗೂ ಅವರ ಮೈತ್ರಿಕೂಟದ ರಾಜ್ಯ ಸರಕಾರಗಳಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ.
ಒಬ್ಬ ಜಿಲ್ಲಾಧಿಕಾರಿ ಅಥವಾ ಪೊಲೀಸ್ ಕಮಿಷನರ್ ಗೆ ನಿಮ್ಮ ಮನೆ ಅಥವಾ ಅಂಗಡಿಯನ್ನು ಜಪ್ತಿ ಮಾಡುವ ಅಧಿಕಾರ ಕೊಟ್ಟು ಬಿಟ್ಟರೆ ಏನಾಗಬಹುದು?
ಕಾನೂನು, ನ್ಯಾಯಾಲಯ ಯಾವುದರ ಗೊಡವೆಯೂ ಇಲ್ಲದೆ ಇದ್ದಕ್ಕಿದ್ದ ಹಾಗೆ ನೀವು ಅಪರಾಧಿ ಎಂದು ಡಿಸಿ ಅಥವಾ ಕಮಿಷನರ್ ನಿಮ್ಮ ಮನೆಯನ್ನು ನೆಲಸಮ ಮಾಡಿದರೆ ಅಥವಾ ಜಪ್ತಿ ಮಾಡಿದರೆ ನಿಮ್ಮ ಗತಿ ಏನಾಗಲಿದೆ?
ನೀವು ಸರಕಾರದ ವಿರುದ್ಧ ಒಂದೇ ಒಂದು ಮಾತಾಡದ ಹಾಗೆ, ಒಂದೇ ಒಂದು ಪ್ರತಿಭಟನೆ ಮಾಡದ ಹಾಗೆ ವಾತಾವರಣ ನಿರ್ಮಾಣವಾದರೆ ಆ ಸರಕಾರ ಅದೆಷ್ಟು ಸರ್ವಾಧಿಕಾರಿ ಆಗಿ ಬಿಡಬಹುದು?
ಈ ಅಪಾಯಗಳ ಬಗ್ಗೆ ಈಗ ಚರ್ಚೆ ಶುರುವಾಗಲು ಕಾರಣ - ಮಹಾರಾಷ್ಟ್ರದ ಬಿಜೆಪಿ-ಶಿಂದೆ ಶಿವಸೇನೆ ಹಾಗೂ ಎನ್‌ಸಿಪಿ ಮೈತ್ರಿ ಸರಕಾರ ವಿಧಾನಸಭೆಯಲ್ಲಿ ಮಂಡಿಸಿರುವ ವಿಶೇಷ ಸಾರ್ವಜನಿಕ ಸುರಕ್ಷತಾ ಮಸೂದೆ.
ಈ ಮಸೂದೆಯ ಪ್ರಸ್ತಾವಗಳ ಬಗ್ಗೆ ಈಗ ಗಂಭೀರ ಪ್ರಶ್ನೆಗಳು ಎದ್ದಿವೆ. ಇದು ಕಾನೂನಾದರೆ ಜನರು ಸರಕಾರದ ಯಾವುದೇ ನೀತಿ ಅಥವಾ ಕಾರ್ಯಕ್ರಮವನ್ನು ವಿರೋಧಿಸುವುದು ಅಸಾಧ್ಯವಾಗುತ್ತದೆ ಎಂಬ ಆತಂಕವಿದೆ.
ಯಾವುದೇ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಆರೋಪದ ಮೇಲೆ ಸರಕಾರ ಯಾರನ್ನಾದರೂ ಜೈಲಿಗೆ ಹಾಕಲಿದೆ. ಅಂದರೆ, ಜನರಲ್ಲಿ ಜೈಲಿನ ಭಯ ಹೆಚ್ಚಿಸಲು ಸರಕಾರ ಸಿಕ್ಕಾಪಟ್ಟೆ ಶ್ರಮ ಹಾಕುತ್ತಿದೆ. ಅದರಲ್ಲಿ ಸ್ವಲ್ಪ ಶ್ರಮ ಹಾಕಿದ್ದರೂ ಜನರ ಎಲ್ಲ ಸಮಸ್ಯೆಗಳನ್ನೇ ಬಗೆಹರಿಸುವುದು ಸರಕಾರಕ್ಕೆ ಸಾಧ್ಯ. ಆದರೆ ಅದು ಹಾಗೆ ಮಾಡುವುದಿಲ್ಲ.
ಜನರನ್ನು ಜೈಲಿಗೆ ಹಾಕಲು ಮತ್ತು ಜಾಮೀನು ಸಿಗದಂತೆ ಮಾಡಲು ಕಾನೂನಿನ ಪಾಶವನ್ನು ಬಿಗಿಗೊಳಿಸುವುದರಲ್ಲಿ ತೊಡಗಿದೆ ಸರಕಾರ. ಸರಕಾರದ ಜನವಿರೋಧಿ ನೀತಿಯನ್ನು ಟೀಕಿಸಿದರೂ ತನಿಖೆಯನ್ನು ಎದುರಿಸುವ ಕಾಲ ಬರಲಿದೆ. ಜೈಲಿಗೆ ಹೋಗಬೇಕಾಗಿಯೂ ಬರಬಹುದು.
ಯಾವುದೇ ಸಾಮಾನ್ಯ ಪ್ರಜಾತಾಂತ್ರಿಕ ನಡೆಯನ್ನೂ ಅಪರಾಧ ಎನ್ನುವಂತೆ ಬಿಂಬಿಸುವ ಯತ್ನವನ್ನು ಕಾನೂನುಗಳ ಮೂಲಕ ಮಾಡಲಾಗುತ್ತಿದೆ. ಯಾವುದೇ ಆಂದೋಲನದಲ್ಲಿ, ಯಾವುದೇ ಸಭೆಗಳಲ್ಲಿ ಪಾಲ್ಗೊಳ್ಳುವುದು ಜನರಿಗೆ ಜೈಲಿನ ದಾರಿಗೂ ಬಾಗಿಲು ತೆರೆಯಬಹುದು.
ಆದರೆ ಪ್ರಜಾತಂತ್ರ ಸಮಾಜದಲ್ಲಿ ಇವೆಲ್ಲವೂ ಎಂಥ ಸ್ಥಿತಿಯನ್ನು ತರಲಿವೆ?
ಹೋರಾಟಗಳಲ್ಲಿ ಪಾಲ್ಗೊಳ್ಳುವುದನ್ನು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎನ್ನುವ ಮೂಲಕ ಮೊದಲೇ ಅಪರಾಧ ಎನ್ನುವಂತೆ ಮಾಡಲಾಗಿದೆ.
ಈಗ ಅಂಥ ಹೋರಾಟದಲ್ಲಿ ಪಾಲ್ಗೊಂಡರೂ ಸಾಕು ಅಥವಾ ಯಾವುದೇ ಹೋರಾಟಗಾರರು ಕರೆದ ಸಭೆಯಲ್ಲಿ ಭಾಗವಹಿಸಿದರೂ ಸಾಕು, ಜೈಲಿಗೆ ಹೋಗುವ ಸ್ಥಿತಿಯೇ ಬರಬಹುದು.
ನಿಮಗೆ ಪ್ರತಿಭಟನೆ ಆಯೋಜಿಸಿದವರ ಬಗ್ಗೆ ಏನೂ ಗೊತ್ತಿಲ್ಲದಿರಬಹುದು. ಆದರೆ ನೀವು ಆ ಪ್ರತಿಭಟನೆಯಲ್ಲಿ ಕಂಡ ಒಂದೇ ಕಾರಣಕ್ಕೆ ನಿಮ್ಮನ್ನು ಆ ಸಂಘಟನೆ ಜೊತೆ ನಂಟು ಕಲ್ಪಿಸಿ ಜೈಲಿಗೆ ಹಾಕಬಹುದು. ಅಂತಹ ಸನ್ನಿವೇಶ ಸೃಷ್ಟಿಗೆ ಸರಕಾರ ಮುಂದಾಗಿದೆ.
ಮಹಾರಾಷ್ಟ್ರ ಸರಕಾರವೀಗ ಮಂಡಿಸಿರುವ ವಿಶೇಷ ಸಾರ್ವಜನಿಕ ಸುರಕ್ಷತಾ ಮಸೂದೆ ಇಂಥದೇ ಒಂದು ಯತ್ನ.
ಇದನ್ನು ಅಸ್ತ್ರವಾಗಿಟ್ಟುಕೊಂಡು ಸಾಮಾಜಿಕ ಹೋರಾಟ ಗಾರರು, ಮಾನವ ಹಕ್ಕುಗಳ ಹೋರಾಟಗಾರರು ಅಥವಾ ಕಾನೂನು ಹೋರಾಟಗಾರರನ್ನು ನಿರ್ಬಂಧಿಸುವ ಕೆಲಸವಾಗಲಿದೆ.
ದೇಶದಲ್ಲಿ ಯುಎಪಿಎ ಇಂತಹದ್ದಕ್ಕೆಂದೇ ಈಗ ಇದೆ. ಹಾಗಿರುವಾಗಲೂ ರಾಜ್ಯದಲ್ಲೂ ಅಂಥದೇ ಸ್ವರೂಪದ ಕಾನೂನು ತರುವುದರ ಅಗತ್ಯವೇನು? ಸರಕಾರ ಇಂತಹ ಕಾನೂನುಗಳನ್ನೇ ಏಕೆ ಮತ್ತೆ ಮತ್ತೆ ತರುತ್ತಿದೆ?
ಛತ್ತೀಸ್‌ಗಡ, ತೆಲಂಗಾಣ, ಒಡಿಶಾ, ಆಂಧ್ರಪ್ರದೇಶಗಳಂಥ ರಾಜ್ಯಗಳಲ್ಲಿ ಇಂತಹದ್ದೇ ಕಾನೂನುಗಳು ಮೊದಲೇ ಇವೆ.
ಸಂಘಟನೆಯೊಂದು ಕರೆದ ಸಭೆಗೆ ಹೋದದ್ದೇ ತಪ್ಪು ಎನ್ನುವಂತಾಗಿ, ಅ ಸಂಘಟನೆಯ ಸದಸ್ಯರಲ್ಲದೇ ಹೋದರೂ ಜೈಲಿಗೆ ಹೋಗಬೇಕಾದ ಸ್ಥಿತಿಯನ್ನು ತಂದಿಡುವ ಕಾನೂನು ಇದು.
ಮಹಾರಾಷ್ಟ್ರ ಈಗ ಮಂಡಿಸಿರುವ ಮಸೂದೆ 2ರಿಂದ 7 ವರ್ಷಗಳವರೆಗಿನ ಜೈಲುಶಿಕ್ಷೆಯ ಬಗ್ಗೆ ಹೇಳುತ್ತದೆ. ಅಲ್ಲದೆ 2 ಲಕ್ಷದಿಂದ 5 ಲಕ್ಷ ರೂ.ವರೆಗೂ ದಂಡ ವಿಧಿಸುವ ಪ್ರಸ್ತಾವವೂ ಇದೆ.
ಈ ಮಸೂದೆ ಕಾನೂನಾದರೆ, ಆಸ್ತಿ ಜಪ್ತು ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿ ಮತ್ತು ಕಮಿಷನರ್‌ಗಳೇ ಪಡೆಯುತ್ತಾರೆ. ಒಂದೊಮ್ಮೆ ಆಸ್ತಿಜಪ್ತಿ ಮಾಡುವ, ಬುಲ್ಡೋಜರ್ ಹರಿಸುವ ಅಧಿಕಾರ ಜಿಲ್ಲಾಧಿಕಾರಿಯ ಕೈಗೆ ಬಂತೆಂದಾದರೆ ಪರಿಸ್ಥಿತಿ ಹೇಗಿರಬಹುದು?
ಈಗ ಸಾಮಾಜಿಕ ಜಾಲತಾಣದಲ್ಲಿ ಆಂದೋಲನವೇನೋ ಶುರುವಾಗಿದೆ. ಆದರೆ ಇದೆಲ್ಲವೂ ಎಷ್ಟು ದಿನ?
ಅನ್ಯಾಯದ ವಿರುದ್ಧದ, ಜನವಿರೋಧಿ ನೀತಿ ವಿರುದ್ಧದ ಹೋರಾಟಗಳ ವಿರುದ್ಧವೆಲ್ಲ ಇಂಥ ಕಾನೂನುಗಳನ್ನು ತಂದಿಟ್ಟರೆ ಹೋರಾಟ ಮಾಡುವುದು ಹೇಗೆ?
ಸರಕಾರದ ವಿರುದ್ಧ ಹಿಂಸೆಯಿಲ್ಲದೆ ದನಿಯೆತ್ತುವವರ ವಿರುದ್ಧ ಕಾನೂನು ಇರಲಿಲ್ಲ. ಹಾಗಾಗಿ ಜನರ ದನಿಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಇಂತಹ ಕಾನೂನುಗಳನ್ನು ತರಲಾಗುತ್ತಿದೆ. ಸರಕಾರದ ವಿರುದ್ಧ ಮಾತಾಡಿದರೆ ಜೈಲಿಗೆ ಕಳಿಸುವ ಕಾನೂನು ಇದು.
ಇಂಥ ಕಾನೂನು ಖಂಡಿತವಾಗಿಯೂ ಅಸಾಂವಿಧಾನಿಕ ವಾಗಲಿದೆ ಎನ್ನುತ್ತಾರೆ ಹಿರಿಯ ಮಾನವ ಹಕ್ಕುಗಳ ವಕೀಲ ಕಾಲಿನ್ ಗೊನ್ಸಾಲ್ವಿಸ್.
ಇಂತಹ ಕಾನೂನುಗಳ ಅಡಿಯಲ್ಲಿ ಜೈಲಿಗೆ ಹೋದವರಿಗೆ ಜಾಮೀನು ಸಿಗದಂತೆ ಆಟವಾಡಲಾಗುತ್ತದೆ. ಐದು ತಿಂಗಳಿಂದ ಐದು ವರ್ಷಗಳವರೆಗೆ ಕೂಡ ಜೈಲಿನಲ್ಲಿಯೇ ಇರಬೇಕಾಗಿ ಬರಬಹುದು. ವಿಚಾರಣೆಯೇ ಆರಂಭವಾಗದೇ ಹೋಗಬಹುದು. ಜೈಲಿಗೆ ಕಳಿಸುವುದು ಮತ್ತು ಆನಂತರ ಜಾಮೀನನ್ನು ನಿರಾಕರಿಸುತ್ತ ಹೋಗುವುದು ಇಲ್ಲಿ ನಡೆಯುತ್ತದೆ.
ಜನರು ಭಯಬಿದ್ದರೆ ಸರಕಾರ ಅಂದುಕೊಂಡಿದ್ದರಲ್ಲಿ ಅರ್ಧ ಸಾಧಿಸಿದಂತೆ. ಇಂತಹ ಕಠೋರ ಕಾನೂನುಗಳನ್ನು ವಿರೋಧಿಸುವ ಹಕ್ಕನ್ನು ಕೂಡ ಸಂವಿಧಾನವೇ ನೀಡುತ್ತದೆ.
ಭೀಮಾ ಕೋರೆಗಾಂವ್ ಕೇಸ್‌ನಲ್ಲಿ ಏನೆಲ್ಲ ಆಯಿತು ನೋಡಿದ್ದೇವೆ.
ಸಾಮಾಜಿಕ ಮತ್ತು ರಾಜಕೀಯ ಅನ್ಯಾಯದ ವಿರುದ್ಧ ದನಿಯೆತ್ತುವ ಕೆಲಸ ನಡೆಯುತ್ತಲೇ ಇರುತ್ತದೆ.
ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಾಖಾ, ಸುಧಾ ಭಾರದ್ವಾಜ್ ಅಂಥವರು ಇಲ್ಲದೇ ಹೋಗಿದ್ದರೆ ಆದಿವಾಸಿಗಳ ಪರ ಯಾರು ದನಿಯೆತ್ತುವುದು ಸಾಧ್ಯವಿತ್ತು?
ಹೀಗೆ ನ್ಯಾಯಯುತ ಹೋರಾಟ ಮಾಡಿದ ಅವರನ್ನೆಲ್ಲ ವರ್ಷಗಳ ಕಾಲ ಜೈಲಿನಲ್ಲಿಡಲಾಯಿತು.
ಈಗ ಮಂಡನೆಯಾಗಿರುವ ಮಸೂದೆ ಯಾವ ಸ್ವರೂಪದ್ದೆಂದರೆ, ಭೀಮಾ ಕೋರೆಗಾಂವ್ ಕೇಸ್‌ನಲ್ಲಿ ಜೈಲಿಗೆ ಕಳಿಸಿದ ರೀತಿಯಲ್ಲೇ ಇನ್ನೂ ಅನೇಕರನ್ನು ಜೈಲಿಗೆ ಕಳಿಸಬಹುದಾದ ಕಾನೂನು ಅದಾಗಲಿದೆ.
ಜನರಲ್ಲಿ ಭಯ ಸೃಷ್ಟಿಸಿ ಜಮೀನನ್ನು ಕಾರ್ಪೊರೇಟ್‌ಗಳ ಕೈಗೆ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಾಗಿ ಗುರಿಯಾಗುವುದು ಬುಡಕಟ್ಟು ಜನರು.
ಕಾಡುಗಳನ್ನು ಕಾರ್ಪೊರೇಟ್‌ಗಳ ಕೈಗೆ ಕೊಡುವ ನಿಯಮಗಳನ್ನು ವಿರೋಧಿಸುವ ಬುದ್ಧಿಜೀವಿಗಳನ್ನು, ಹೋರಾಟಗಾರರನ್ನು ಜೈಲಿಗೆ ಹಾಕುವ ಯತ್ನವಿದು.
ಅಮಾಯಕ ಬುಡಕಟ್ಟು ಜನರಲ್ಲಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಬುದ್ಧಿಜೀವಿಗಳಿಗೆ ಅರ್ಬನ್ ನಕ್ಸಲ್ ಹಣೆಪಟ್ಟಿ ಹಚ್ಚುವ ಕೆಲಸವನ್ನು ಈ ಕಾನೂನು ಮಾಡುತ್ತದೆ.
ಶ್ರೀಮಂತ ನೈಸರ್ಗಿಕ ಸಂಪತ್ತಿರುವ ಕಾಡುಗಳು, ಭೂಮಿಗಳಲ್ಲಿರುವ ಆದಿವಾಸಿಗಳ ಪರ ಮಾತಾಡುವವರನ್ನು ಜೈಲಿಗೆ ಅಟ್ಟಲು ಈ ಕಾನೂನು ಬಳಕೆಯಾಗುತ್ತದೆ.
ಅಷ್ಟೇ ಅಲ್ಲ, ಅಧಿಕಾರಿಗಳು ಕಾನೂನುಬಾಹಿರವಾಗಿ ಮರಗಳನ್ನು ಕಡಿಯಲು ಅಥವಾ ಪರಿಸರ ಮಾಲಿನ್ಯಗೊಳಿಸಲು ಮುಂದಾದರೆ ಅದನ್ನು ವಿರೋಧಿಸುವಂತಿಲ್ಲ ಎನ್ನುತ್ತಾರೆ ಕಾಲಿನ್ ಗೋನ್ಸಾಲ್ವಿಸ್.
ಸರಕಾರಕ್ಕೆ ಕಿರಿಕಿರಿ ತಂದವರನ್ನು ನಕ್ಸಲರ ಹೆಸರಲ್ಲಿ ಹೆಡೆಮುರಿ ಕಟ್ಟುವ, ಅವರನ್ನು ಮುಗಿಸಿ ಬಿಡುವ ಕೆಲಸ ಆಗಲಿದೆ ಎನ್ನುತ್ತಾರೆ ಕಾಲಿನ್.
ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನರಿರುವ ರಾಜ್ಯಗಳಲ್ಲೇ ಇಂತಹ ಕಾನೂನು ಬರುತ್ತಿದೆ ಎಂಬುದನ್ನು ಗಮನಿಸಬೇಕು. ಆದಿವಾಸಿಗಳ ಗೋಳು ಅರಣ್ಯ ರೋದನವಾಗುತ್ತದೆ. ಅದು ದಿಲ್ಲಿಗೆ ತಲುಪಿಲ್ಲ. ಮಡಿಲ ಮೀಡಿಯಾಗಳು ಹೇಗೂ ಆ ಬಗ್ಗೆ ವರದಿ ಮಾಡೋದೇ ಇಲ್ಲ. ಇನ್ನು ಉಳಿಯುವುದು ಹೋರಾಟಗಾರರು, ಬುದ್ಧಿಜೀವಿಗಳು. ಅವರನ್ನು ಇಂತಹ ಕಾನೂನಿನ ಮೂಲಕ ಮಟ್ಟ ಹಾಕಲಾಗುತ್ತದೆ. ಆ ಮೂಲಕ ಹೆಕ್ಟೇರುಗಟ್ಟಲೆ ಕಾಡುಗಳನ್ನು, ಭೂಮಿಯನ್ನು ಕಾರ್ಪೊರೇಟ್‌ಗಳಿಗೆ ಕೊಡಲಾಗುತ್ತದೆ.
ಇಂತಹ ಕಾನೂನು ಬಂದ ಮೇಲೆ ನಗರಗಳಲ್ಲೂ ಅನ್ಯಾಯದ ವಿರುದ್ಧ ದನಿಯೆತ್ತುವವರೇ ಆಗ ಇಲ್ಲವಾಗುತ್ತಾರೆ, ಅವರಿಗೆ ರಕ್ಷಣೆಯೇ ಇಲ್ಲವಾಗುತ್ತದೆ.
ಹೋರಾಟಗಾರರು, ಕೆಲವು ಪತ್ರಕರ್ತರು, ವಕೀಲರು ಅನ್ಯಾಯದ ವಿರುದ್ಧ ದನಿಯೆತ್ತಿದರೆ ಅವರನ್ನು ಹತ್ತಿಕ್ಕಲೆಂದೇ ‘ಅರ್ಬನ್ ನಕ್ಸಲ್’ ಹಣೆಪಟ್ಟಿ ಬಳಕೆಯಾಗುತ್ತದೆ.
‘ಅರ್ಬನ್ ನಕ್ಸಲ್’ ಎಂಬುದನ್ನು ಯಾರು ಬಳಸಿದ್ದೆಂದೇ ಗೊತ್ತಿಲ್ಲ ಎನ್ನುತ್ತದೆ ಸರಕಾರ. ಅವರೆಂದರೆ ಯಾರೆಂದೇ ಗೊತ್ತಿಲ್ಲ ಎನ್ನುತ್ತದೆ. ಇನ್ನೊಂದೆಡೆ ಅರ್ಬನ್ ನಕ್ಸಲರ ಮೇಲೆ ಕಣ್ಣಿಡಿ ಎಂದು ಭದ್ರತಾ ಪಡೆಗಳಿಗೆ ಅಮಿತ್ ಶಾ ಸೂಚನೆ ಕೊಡುತ್ತಾರೆ.
ಮಹಾರಾಷ್ಟ್ರದ ಮಸೂದೆಯಲ್ಲಿ ನೇರವಾಗಿ ‘ಅರ್ಬನ್ ನಕ್ಸಲ್’ ಎಂಬುದು ಇಲ್ಲವಾದರೂ ಅದರ ಹಿಂದಿನ ರಾಜಕೀಯ ಏನೆಂಬುದು ಸ್ಪಷ್ಟವೇ ಇದೆ.
ಮುಂಬೈನ ಸಿಟಿಜನ್ ಫಾರ್ ಜಸ್ಟೀಸ್ ಎಂಬ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಈ ಮಸೂದೆಯ ವಿಶ್ಲೇಷಣೆ ನಡೆಸಿದೆ.
ಇಂತಹದೊಂದು ಪ್ರತ್ಯೇಕ ಕಾನೂನಿನ ಅಗತ್ಯ ಇರಲೇ ಇಲ್ಲ ಎಂದೇ ಅದು ಹೇಳಿದೆ.
ಮಹಾರಾಷ್ಟ್ರ ಈಗಾಗಲೇ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ಸ್ ಆ್ಯಕ್ಟ್ (ಎಂಸಿಒಸಿಎ) ಅನ್ನು ಹೊಂದಿದೆ.
ಈಗ ಹೊಸ ಮಸೂದೆ ಜನರ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಹತ್ತಿಕ್ಕುವ ಉದ್ದೇಶದ್ದಾಗಿದೆ ಎಂದು ಸಿಟಿಜನ್ ಫಾರ್ ಜಸ್ಟೀಸ್ ಹೇಳಿದೆ.
ಜನರ ಹೋರಾಟವನ್ನು ಹೇಗಾದರೂ ಮಾಡಿ ಅಪರಾಧ ಎಂದು ನೋಡಲು ಬಿಜೆಪಿ ನೇತೃತ್ವದ ಸರಕಾರ ಬಯಸುತ್ತದೆ. ಯಾಕೆಂದರೆ ಅದಕ್ಕೆ ಹೋರಾಟವೆಂದರೇ ಆಗುವುದಿಲ್ಲ.
ಅದೇನೇ ಇದ್ದರೂ, ಈಗ ಮಸೂದೆ ವಿರುದ್ಧವೂ ಹೋರಾಡಬೇಕಾಗುತ್ತದೆ, ಚರ್ಚಿಸಬೇಕಾಗುತ್ತದೆ. ಚರ್ಚೆಯೇ ಆಗದೆ ಇಂತಹ ಕಾನೂನುಗಳನ್ನು ಸರಕಾರ ತರುತ್ತಲೇ ಹೋಗುತ್ತದೆ. ಇನ್ನೊಂದು ಕಡೆ ಸಂವಿಧಾನ ಹತ್ಯಾ ದಿನ ಘೋಷಿಸಲಾಗುತ್ತದೆ.
ಜನರ ದನಿಗೆ ಹೆದರುವ ಸರಕಾರ, ಜನರ ದನಿಯನ್ನು ಅಡಗಿಸುವ ಮೂಲಕ, ಭಯದಲ್ಲಿಡುವ ಮೂಲಕ ತಾನು ಸುರಕ್ಷಿತವಾಗುಳಿಯುವುದರ ಲೆಕ್ಕ ಹಾಕುತ್ತಿದೆ.