ಈ ದೇಶದ ಪ್ರಜಾಸತ್ತೆಯ ಕತ್ತು ಹಿಸುಕಿದ್ದು ಹೇಗೆ?
ಭಾಗ- 2
ಭಾರತದಲ್ಲಿ ಪ್ರಜಾಪ್ರಭುತ್ವದ ಒಂದೊಂದೇ ಸ್ತಂಭವನ್ನು ಹೇಗೆ ಧ್ವಂಸಗೊಳಿಸಲಾಗುತ್ತಿದೆ? ಒಂದೇ ದೇಶ ಒಂದೇ ಪಾರ್ಟಿ ಎಂಬಂತಹ ವಾತಾವರಣ ಹೇಗೆ ಸೃಷ್ಟಿಸಲಾಗುತ್ತಿದೆ? ಇವನ್ನೆಲ್ಲ ವಿವರಿಸುವಂತೆ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಒಂದು ವೀಡಿಯೊ ಮಾಡಿದ್ದಾರೆ. ಅದರ ಸಾರಾಂಶವನ್ನು ನಿಮ್ಮ ಮುಂದಿಡುತ್ತಿದ್ದೇವೆ.
ವಾಜಪೇಯಿ ಒಮ್ಮೆ, ಅಧಿಕಾರಕ್ಕೇರಲು ಭ್ರಷ್ಟರೊಡನೆ ಕೈಜೋಡಿಸಬೇಕಾಗಿ ಬಂದರೆ ಅಂಥ ಅಧಿಕಾರ ತಮಗೆ ಬೇಕಿಲ್ಲ ಎಂದಿದ್ದರು. ಆ ಕಾಲವೇ ಬೇರೆ ಇತ್ತು. ಅವತ್ತಿನ ಬಿಜೆಪಿ, ಇವತ್ತಿನ ಬಿಜೆಪಿ ನಡುವೆ ದೊಡ್ಡ ವ್ಯತ್ಯಾಸವಿದೆ.
ಮೋದಿ ವಾಷಿಂಗ್ ಮೆಷಿನ್ ಬಗ್ಗೆ ನಿತಿನ್ ಗಡ್ಕರಿ ಬಳಿ ಕೇಳಿದರೆ, ಬಿಜೆಪಿಯ ಸಾಬೂನು ಪರಿಸರ ಸ್ನೇಹಿ ಎಂದು ಮುಗುಳ್ನಗುತ್ತ ಉತ್ತರಿಸುತ್ತಾರೆ.
ಹಣದ ಆಮಿಷ, ಈ.ಡಿ. ಒತ್ತಡಕ್ಕೂ ಮಣಿಯದೆ ಬಿಜೆಪಿ ಸೇರದೇ ಇದ್ದ ವಿಪಕ್ಷ ರಾಜಕಾರಣಿಗಳ ವಿರುದ್ಧ ತನಿಖೆ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಹಲವು ಕೇಸ್‌ಗಳಲ್ಲಿ, ಆರೋಪಿಗಳೆಂದು ಘೋಷಿಸದೆಯೂ ಜೈಲಿನಲ್ಲಿಡಲಾಗುತ್ತದೆ. ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸಬೇಕಾಗುತ್ತದೆ.
ಆಪ್ ಸಂಸದ ರಾಘವ್ ಛಡ್ಡಾ ಹೇಳುವಂತೆ ಮನೀಷ್ ಸಿಸೋಡಿಯಾ, ಸತ್ಯೇಂದ್ರ ಜೈನ್, ಅಭಿಷೇಕ್ ಬ್ಯಾನರ್ಜಿ, ಸಂಜಯ್ ರಾವುತ್, ಫಾರೂಕ್ ಅಬ್ದುಲ್ಲಾ, ತೇಜಸ್ವಿ ಯಾದವ್ ಬಿಜೆಪಿ ಸೇರಿದ್ದರೆ ಅವರ ವಿರುದ್ಧದ ಈಗ ನಡೆಯುತ್ತಿರುವ ಇಷ್ಟೆಲ್ಲ ಈ.ಡಿ., ಸಿಬಿಐ ಕೇಸ್‌ಗಳು ತಕ್ಷಣವೇ ಇಲ್ಲವಾಗುತ್ತಿದ್ದವು.
ಆರೋಪ ಸಾಬೀತಾದ ಮೇಲೆ ಜೈಲಿಗೆ ಕಳಿಸುವುದು ಬೇರೆ. ಆದರೆ ಇಲ್ಲಿ ಆರೋಪವೇ ಸಾಬೀತಾಗದೆ ವಿಪಕ್ಷ ನಾಯಕರನ್ನು ಜೈಲಿನಲ್ಲಿಡಲಾಗುತ್ತಿದೆ.
ಇನ್ನೂ ಕೆಟ್ಟ ಸ್ಥಿತಿ ಏನೆಂದರೆ, ವಿಪಕ್ಷಗಳ ಸರಕಾರಗಳು ಇರುವ ರಾಜ್ಯಗಳಲ್ಲಿ ಸರಕಾರದ ದೈನಂದಿನ ವ್ಯವಹಾರಗಳಲ್ಲಿ ರಾಜ್ಯಪಾಲರನ್ನು ಬಳಸಿಕೊಂಡು ಮೂಗು ತೂರಿಸಲಾಗುತ್ತದೆ. ಸರಕಾರ ಕೆಲಸವನ್ನೇ ಮಾಡಲಾರದ ಸ್ಥಿತಿ ನಿರ್ಮಾಣವಾಗುತ್ತದೆ.
ಪಶ್ಚಿಮ ಬಂಗಾಳ, ತಮಿಳುನಾಡು, ದಿಲ್ಲಿ, ಕೇರಳ ಸರಕಾರಗಳು ಈ ಆರೋಪ ಮಾಡಿವೆ. ಕಳೆದ ವರ್ಷ ಕೇರಳ ಸರಕಾರ, ರಾಜ್ಯಪಾಲರು ಮಸೂದೆಗೆ ಎರಡು ವರ್ಷಗಳಿಂದ ಅಂಕಿತ ಹಾಕಿಲ್ಲ ಎಂಬ ಆರೋಪ ಮಾಡಿತ್ತು. ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಅದು ಏರಿತ್ತು. ರಾಜ್ಯಪಾಲರು ಮಸೂದೆಯನ್ನು ತಡೆಹಿಡಿಯುವಂತಿಲ್ಲ. ಅದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ದಿಲ್ಲಿ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಮಧ್ಯೆ ಕೂಡ ಇಂಥದೇ ಸಂಘರ್ಷ ಇತ್ತು. ಕೆಲಸ ಮಾಡುವುದಕ್ಕೇ ಬಿಡುತ್ತಿಲ್ಲ ಎಂಬ ಆರೋಪವನ್ನು ಕೇಜ್ರಿವಾಲ್ ಮತ್ತೆ ಮತ್ತೆ ಮಾಡಿದ್ದರು.
ರಾಜ್ಯಪಾಲರ ವಿರುದ್ಧ ದೂರು ಬಂದಾಗ ಸುಪ್ರೀಂ ಕೋರ್ಟ್ ಮೂರೂ ರಾಜ್ಯ ಸರಕಾರಗಳ ಪರವಾಗಿ ತೀರ್ಪು ನೀಡಿತ್ತು. ನಿಜವಾದ ಅಧಿಕಾರ ಚುನಾಯಿತ ಸರಕಾರದ ಬಳಿ ಇರುತ್ತದೆ. ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪ ಮಾಡುವಂತಿಲ್ಲ ಎಂದಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇಂದ್ರ ಸರಕಾರ ಮಾಡಿದ್ದೇನು? ದಿಲ್ಲಿ ಸರಕಾರದ ಅಧಿಕಾರ ಕಿತ್ತುಕೊಳ್ಳುವ ಹೊಸ ಕಾನೂನು ತಂದಿತು.
ನೀವು ಒಂದು ವೇಳೆ ಮೋದಿಯವರ ಕಟ್ಟಾ ಅಭಿಮಾನಿಯಾಗಿದ್ದರೂ ಒಮ್ಮೆ ಯೋಚಿಸಿ, ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ. ಪ್ರಧಾನಿ ಮೋದಿ ನಿಜವಾಗಿಯೂ ದೇಶದ ಬಗ್ಗೆ, ದೇಶದ ಜನರ ಬಗ್ಗೆ ಚಿಂತಿತರಾಗಿದ್ದರೆ ಹೀಗೆ ಮಾಡುತ್ತಿದ್ದರೆ? ನೀವು ನಿಜವಾಗಿಯೂ ದೇಶದ ಬಗ್ಗೆ ಕಳವಳ ಹೊಂದಿದ್ದರೆ ವಾಸ್ತವದ ಬಗ್ಗೆ ಕಣ್ತೆರೆಯಬೇಕಿದೆ.
ಎರಡು ದಿನಗಳ ಹಿಂದೆ ನ್ಯೂಸ್ ಲಾಂಡ್ರಿ ಒಂದು ತನಿಖಾ ವರದಿಯನ್ನು ಪ್ರಕಟಿಸಿತು. ಇತರ ಪಕ್ಷಗಳ ವಿರುದ್ಧ್ದ ಮಾತ್ರವಲ್ಲ, ಕಂಪೆನಿಗಳ ವಿರುದ್ಧವೂ ಐಟಿ, ಈ.ಡಿ.ಯನ್ನು ಬಳಸಲಾಗಿತ್ತು ಎಂಬುದನ್ನು ಆ ವರದಿ ಹೇಳಿದೆ.
ಈವರೆಗೆ ಬಿಜೆಪಿಗೆ ದೇಣಿಗೆ ನೀಡದ ಕನಿಷ್ಠ 23 ಕಂಪೆನಿಗಳ ವಿರುದ್ಧ ಈ.ಡಿ. ಬಳಕೆಯಾಗಿತ್ತು. ರೇಡ್ ಬಳಿಕ ಅವು ಬಿಜೆಪಿಗೆ ಕೋಟಿಗಟ್ಟಲೆ ರೂ. ದೇಣಿಗೆ ನೀಡಿದ್ದವು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮಾತು ಬಂದಾಗ ಮಾಧ್ಯಮಗಳ ಪಾತ್ರ ಕೂಡ ಬಹಳ ಮುಖ್ಯ. ನ್ಯಾಯಸಮ್ಮತ ಎಂದರೆ ಆಡಳಿತಾರೂಢ ಮತ್ತು ವಿಪಕ್ಷ ನಾಯಕರಿಬ್ಬರಿಗೂ ಮಾತನಾಡಲು ಸಮಾನ ಅವಕಾಶ ಇರುವುದು. ಇಬ್ಬರ ಬಗ್ಗೆಯೂ ಸಮವಾಗಿ ವರದಿ ಮಾಡಬೇಕು.
ಆದರೆ ಇವತ್ತು ಮೀಡಿಯಾಗಳಲ್ಲಿ ಏನಾಗುತ್ತಿದೆ?
ಹಗಲು ರಾತ್ರಿ 24 ಗಂಟೆಯೂ ಮೋದಿ ಸರಕಾರದ ಗುಣಗಾನವೇ ನಡೆದಿರುತ್ತದೆ. ಟಿವಿ ನಿರೂಪಕರೆಲ್ಲರೂ ಬಿಜೆಪಿಯ ವಕ್ತಾರರೇ ಆಗಿಬಿಟ್ಟಿದ್ದಾರೆ. ಜನರ ಪರವಾಗಿ ಸರಕಾರವನ್ನು ಪ್ರಶ್ನಿಸುವ ಬದಲು ಅವರೇ ಸರಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಯಾವ ಮಟ್ಟದಲ್ಲೆಂದರೆ, ನಿರುದ್ಯೋಗ ಹೆಚ್ಚಲು ಯುವಕರೇ ಕಾರಣ ಎಂದು ಹೇಳಿಬಿಡಬಲ್ಲರು. ಚುನಾವಣೆಯಲ್ಲಿ ವಿಪಕ್ಷ ಗೆದ್ದರೆ ಜನರನ್ನೇ ಅವಮಾನಿಸಲು ಇದೇ ನಿರೂಪಕರುಗಳು ನಿಂತುಬಿಡುತ್ತಾರೆ.
ಸರಕಾರವನ್ನು ಪ್ರಶ್ನಿಸುತ್ತ ದಿಟ್ಟತನ ತೋರಿದ್ದ ಕಡೆಯ ಚಾನೆಲ್ ಎನ್‌ಡಿಟಿವಿಯನ್ನು ಮೋದಿ ಮಿತ್ರ ಉದ್ಯಮಿ ಅದಾನಿ ಕೊಂಡುಕೊಂಡರು.
ಇಂದು ಟಿವಿ ನ್ಯೂಸ್ ಎಂಬುದು ಸತ್ತುಹೋಗಿದೆ. ಜನರ ತೆರಿಗೆ ಹಣವನ್ನು ಸರಕಾರ ಜಾಹೀರಾತು ಪ್ರಸಾರ ಮಾಡಲು ಟಿವಿ ವಾಹಿನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಕೊಡುತ್ತಿದೆ ಮತ್ತು ಈ ಚಾನೆಲ್‌ಗಳು ಜನರ ದನಿಯನ್ನು ಅಡಗಿಸಲು ನಿರಂತರ ಕೆಲಸ ಮಾಡುತ್ತಿವೆ.
ಹೀಗೆ ಸತ್ಯವೇ ನಿಮ್ಮನ್ನು ತಲುಪದೇ ಇದ್ದಾಗ ಯಾರಿಗೆ ಮತ ಹಾಕಬೇಕೆಂದು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನೀವು ಯೋಚಿಸಲು ಸಾಧ್ಯವೇ?
ಮಣಿಪುರದಲ್ಲಿ 77 ದಿನಗಳ ಕಾಲ ಜನಾಂಗೀಯ ಸಂಘರ್ಷದ ಬೆಂಕಿ ಹೊತ್ತಿಕೊಂಡು ಉರಿಯಿತು. ಆದರೆ ಟಿವಿ ಚಾನೆಲ್‌ಗಳಲ್ಲಿ ಅದರ ಬಗ್ಗೆ ವಿಶೇಷ ವರದಿಗಳೇ ಇರಲಿಲ್ಲ. ಅಲ್ಲಿನ ಬಿಜೆಪಿ ಸರಕಾರದ ವೈಫಲ್ಯಗಳ ಬಗ್ಗೆ ಯಾವ ಚರ್ಚೆಯೂ ಇಲ್ಲ, ಪ್ರಶ್ನೆಯೂ ಇಲ್ಲ.
ಸಿಎಜಿ ಈಚೆಗೆ 12 ವರದಿಗಳನ್ನು ಸಲ್ಲಿಸಿತು. ಸರಕಾರದ ಇಲಾಖೆಗಳು ಮತ್ತು ಅಧಿಕಾರಿಗಳ ಅಕ್ರಮಗಳ ಬಗ್ಗೆ ಅವು ಹೇಳಿದ್ದವು. ಆಯುಷ್ಮಾನ್ ಭಾರತ್ ಸ್ಕೀಮ್ ಅಡಿಯಲ್ಲಿ, ಸತ್ತವರ ಹೆಸರಿನಲ್ಲೂ ಬಿಡದೆ ರೂ. 6.97 ಕೋಟಿ ಗುಳುಂ ಮಾಡಲಾಗಿತ್ತು. ಈ ವರದಿ ಬಂದಾಗ ಸಿಎಜಿ ಅಧಿಕಾರಿಗಳನ್ನೇ ಸರಕಾರ ವರ್ಗಾವಣೆ ಮಾಡಿತು. ಈ ವಿಚಾರದ ಬಗ್ಗೆ ಟಿವಿ ಚಾನೆಲ್‌ಗಳು ಸುದ್ದಿ ಪ್ರಸಾರ ಮಾಡಲೇ ಇಲ್ಲ.
ಪ್ರಜಾತಂತ್ರವೆನ್ನುವುದು ಬಹುಸಂಖ್ಯಾತವಾದ ಎಂದುಕೊಳ್ಳುವುದು ಜನತೆಯಲ್ಲಿರುವ ಮತ್ತೊಂದು ತಪ್ಪು ಕಲ್ಪನೆ. ಬಹುಸಂಖ್ಯಾತತೆಯ ಹೆಸರಲ್ಲಿ ದುರ್ಬಲರನ್ನು ಘಾಸಿಗೊಳಿಸುವುದು ಪ್ರಜಾಸತ್ತೆಯಾಗುತ್ತದೆಯೆ?
ದೇಶದಲ್ಲಿ ತೀರಾ ಸಾಮಾನ್ಯ ಮಟ್ಟದಿಂದಲೂ ಈ ಬಹುಸಂಖ್ಯಾತವಾದವನ್ನು ಕಾಣಬಹುದಾಗಿದೆ.
ಒಮ್ಮೆ ಆರಿಸಿ ಅಧಿಕಾರಕ್ಕೆ ಬಂದವರು ಅವರಿಗೆ ಇಷ್ಟವಾದ ಏನನ್ನೂ ಮಾಡಬಹುದು ಎಂದು ಭಾವಿಸುವವರಿದ್ದಾರೆ. ಆದರೆ ನಮ್ಮ ಸಂವಿಧಾನದ ಪೀಠಿಕೆಯಲ್ಲಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯ ಈ ನಾಲ್ಕು ಪದಗಳು ಪ್ರಜಾಪ್ರಭುತ್ವದ ಮುಖ್ಯ ಆಧಾರಗಳು. ಇವನ್ನು ಜೀವನದ ತತ್ವಗಳು ಎಂದಿದ್ದರು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್.
ಬಹುಮತವೆಂಬುದು ಒಬ್ಬನ ಸಹಜ ಹಕ್ಕುಗಳನ್ನು ಕಸಿಯುವುದು ಎಂದಲ್ಲ. ತಾರತಮ್ಯ ತೋರಿಸುವುದಲ್ಲ. ಸಲ್ಲದ ನಿಯಮಗಳನ್ನು ಹೇರುವುದಲ್ಲ.
ಸರಕಾರದ ಕೆಲವು ನಿರ್ಧಾರಗಳು ಪ್ರಜಾಪ್ರಭುತ್ವ ವಿರೋಧಿ ಎಂದು ಹೇಳಲಾಗುವುದು ಈ ಹಿನ್ನೆಲೆಯಲ್ಲಿ. ಸುಪ್ರೀಂ ಕೋರ್ಟ್ ಪರಿಭಾಷೆಯಲ್ಲಿ ಹೇಳುವುದಾದರೆ, ಅವು ಅಸಾಂವಿಧಾನಿಕ.
ಚುನಾವಣಾ ಬಾಂಡ್ ಯೋಜನೆ ರದ್ದುಗೊಳಿಸುವಾಗ ಸುಪ್ರಿಂ ಕೋರ್ಟ್ ಆ ಯೋಜನೆಯನ್ನು ಅಸಾಂವಿಧಾನಿಕ ಎಂದು ಕರೆಯಿತು. ತೀರ್ಪು ತುಸು ತಡವಾಗಿ ಬಂದರೂ, ಅದು ಬಹಳ ಮಹತ್ವದ ತೀರ್ಪು. ಪ್ರಜಾಪ್ರಭುತ್ವ ಮತ್ತು ಜನರ ಪರವಾದ ತೀರ್ಪು.
ಇಲ್ಲಿ ಸರಕಾರದ ಉತ್ತರದಾಯಿತ್ವವನ್ನು ಕೇಳುವುದು ನಿಜವಾದ ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳ, ಮಾಧ್ಯಮಗಳ, ನಾಗರಿಕ ಸಮಾಜಗಳ, ಜನತೆಯ ಜವಾಬ್ದಾರಿ ಕೂಡ. ಆರ್‌ಟಿಐನಂಥ ವ್ಯವಸ್ಥೆ ಇರುವುದು ಇದೇ ಕಾರಣಕ್ಕೆ. ಸರಕಾರದ ಜಾತಕ ಬಿಚ್ಚಿಡುವ ಮಾಹಿತಿಗಳು ನಮಗೆ ಸಿಗುವುದು ಅದರ ಮೂಲಕ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಮಾಧ್ಯಮವನ್ನು ಕರೆಯಲಾಗುವುದು ಕೂಡ ಇದೇ ಕಾರಣಕ್ಕೆ. ಅದು ಸರಕಾರದ ಉತ್ತರದಾಯಿತ್ವವನ್ನು ಕೇಳಬೇಕಾಗುತ್ತದೆ. ಆದರೆ ಇವತ್ತಿನ ಸನ್ನಿವೇಶ ಹಾಗಿಲ್ಲ.
ಇವತ್ತಿನವರೆಗೂ ಪ್ರಧಾನಿ ಮೋದಿ ಒಂದೇ ಒಂದು ಸುದ್ದಿಗೋಷ್ಠಿಯನ್ನು ಎದುರಿಸಿಲ್ಲ. ಬರೆದುಕೊಳ್ಳದೆ ಉತ್ತರ ಹೇಳಲು ತಯಾರಿಲ್ಲ. ಉತ್ತರದಾಯಿತ್ವದ ಪ್ರಶ್ನೆಯಂತೂ ಸೊನ್ನೆ. ಮೊದಲೇ ಬರೆದು ತಿಳಿಸದ ಪ್ರಶ್ನೆಯನ್ನೆದುರಿಸುವ ಧೈರ್ಯವೇ ಇಲ್ಲ.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕನಿಷ್ಠ 117 ಬಾರಿ ಅವರು ಸುದ್ದಿಗೋಷ್ಠಿ ಎದುರಿಸಿದ್ದರು, ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದರು. ಪ್ರಧಾನಿಯಾಗಿ ಕಡೆಯ ಸುದ್ದಿಗೋಷ್ಠಿಯಲ್ಲಿ ಮನಮೋಹನ್ ಸಿಂಗ್ 62 ನೇರ ಪ್ರಶ್ನೆಗಳನ್ನು ಎದುರಿಸಿದ್ದರು. ಅಲ್ಲಿ 100ಕ್ಕೂ ಹೆಚ್ಚು ಪತ್ರಕರ್ತರಿದ್ದರು.
ನಿಜವಾದ ಪ್ರಜಾತಂತ್ರದಲ್ಲಿ ನಾಗರಿಕರಿಗೆ ಪ್ರತಿಭಟಿಸುವ ಹಕ್ಕು ಇರುವುದು ಕೂಡ ಇದೇ ಕಾರಣಕ್ಕೆ. ಈಚೆಗೆ ಯುಪಿ ಸರಕಾರ ಹೆಣ್ಣುಮಕ್ಕಳಿಗೆ ರಾತ್ರಿ 8ರ ನಂತರ ಕ್ಲಾಸ್ ನಡೆಸುವಂತಿಲ್ಲ ಎಂದು ಕೋಚಿಂಗ್ ಕೇಂದ್ರಗಳಿಗೆ ಸೂಚಿಸುವ ನಿಯಮವನ್ನು ಜಾರಿಗೆ ತಂದಿತು. ಹೆಣ್ಣುಮಕ್ಕಳ ಸುರಕ್ಷೆಯ ಕಾರಣವನ್ನು ಕೊಟ್ಟಿತ್ತು. ಸುರಕ್ಷತೆ ನೀಡುವ ನಿಟ್ಟಿನಲ್ಲಿ ಎಚ್ಚರ ವಹಿಸಬೇಕಿರುವುದು ಸರಕಾರದ ಹೊಣೆ. ಅದರ ಬದಲು ಹೆಣ್ಣುಮಕ್ಕಳನ್ನು ಕಟ್ಟಿಹಾಕುವ ನಿಯಮ ತಂದರೆ? ಪ್ರತಿಭಟನೆಯ ನಂತರ ಯುಪಿ ಸರಕಾರ ಅದನ್ನು ವಾಪಸ್ ಪಡೆಯಿತು.
ಪ್ರಜಾತಂತ್ರದಲ್ಲಿ ಜನರ ಪ್ರತಿಭಟಿಸುವ ಹಕ್ಕಿನ ತಾಕ್ತತೇನು ಎಂಬುದನ್ನು ಈ ಸಣ್ಣ ಘಟನೆ ತೋರಿಸುತ್ತದೆ.
ಸರಕಾರಗಳೇ ಬೇಕಾಬಿಟ್ಟಿ ನಿಯಮ ಮಾಡುವಾಗ ಅದರ ಪ್ರತಿಫಲನ ಸಮಾಜದಲ್ಲೂ ಕಾಣಿಸುತ್ತಿದೆ. ದಿಲ್ಲಿ, ಗುಗಾಕಂವ್ ಮತ್ತಿತರ ನಗರಗಳ ವಸತಿ ಸಮುಚ್ಚಯಗಳ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಶನ್‌ಗಳು ಜಾರಿಗೆ ತರುತ್ತಿರುವ ನಿಯಮಗಳನ್ನು ನೋಡಿದರೆ ನೀವು ಬೆಚ್ಚಿ ಬೀಳುತ್ತೀರಿ. ದ್ವಿಚಕ್ರ ವಾಹನಗಳನ್ನು ಸಮುಚ್ಚಯದಲ್ಲಿ ತರುವಂತಿಲ್ಲ, ನಿರ್ದಿಷ್ಟ ಕ್ಷೇತ್ರದ ಉದ್ಯೋಗಿಗಳಿಗೆ ಬಾಡಿಗೆಗೆ ಅಪಾರ್ಟ್ ಮೆಂಟ್ ಕೊಡುವಂತಿಲ್ಲ, ಬಾಡಿಗೆ ಮಾತ್ರವಲ್ಲದೆ ಬಾಡಿಗೆಗೆ ಬರುವವರು ಎಂಟ್ರಿ ಶುಲ್ಕ ಹಾಗೂ ಎಕ್ಸಿಟ್ ಶುಲ್ಕ ಪ್ರತ್ಯೇಕವಾಗಿಯೇ ಕೊಡಬೇಕು ಇತ್ಯಾದಿ ಇತ್ಯಾದಿ. ಈ ಎಲ್ಲ ಅನ್ಯಾಯವನ್ನು, ತಾರತಮ್ಯದ ನೀತಿಯನ್ನು ಚುನಾಯಿತ ಸಂಘ ಎಂಬ ಹೆಸರಲ್ಲೇ ಅವು ಜಾರಿಗೆ ತರುತ್ತವೆ.
ಆದರೆ ಇಂತಹ ಅನ್ಯಾಯಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಇಲ್ಲಿದೆಯೇ?
ಪ್ರತಿಭಟಿಸುವ ಹಕ್ಕನ್ನೇ ಜನರಿಂದ ಕಿತ್ತುಕೊಳ್ಳಲು ಹೊರಟರೆ?
ಮತ್ತೊಮ್ಮೆ ಪ್ರತಿಭಟನೆಗೆ ಇಳಿದಿರುವ ರೈತರನ್ನು ತಡೆಯಲು ಸರಕಾರ ತಡೆಗೋಡೆಗಳನ್ನು ಹಾಕಿತು, ರಸ್ತೆಯಲ್ಲಿ ಮೊಳೆಗಳನ್ನು ನೆಟ್ಟಿತು. ಕಡೆಗೆ ರೈತರ ಮೇಲೆ ಅಶ್ರುವಾಯು, ರಬ್ಬರ್ ಬುಲೆಟ್‌ಗಳ ಪ್ರಯೋಗವನ್ನೂ ಮಾಡಲಾಯಿತು.
ದೇಶದೊಳಗೆಯೇ ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ನಡುವೆ ನಿರ್ಮಿಸಿದ್ದ ಈ ತಡೆಗೋಡೆಗಳ ಫೋಟೊ ನೋಡಿದರೆ ಚೀನಾದೊಂದಿಗಿನ ಗಡಿಯೇನೋ ಎನ್ನುವಂತೆ ಮಾಡಿಬಿಟ್ಟಿದೆ ಸರಕಾರ. ಒಬ್ಬ ಯುವ ರೈತ ಬಲಿಯಾಗಿದ್ದಾರೆ. ರಬ್ಬರ್ ಬುಲೆಟ್ ಪರಿಣಾಮವಾಗಿ ಕನಿಷ್ಠ ಮೂವರು ರೈತರು ದೃಷ್ಟಿ ಕಳೆದುಕೊಂಡಿದ್ದಾರೆಂಬ ವರದಿಗಳಿವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿಚಾರದಲ್ಲಿ ಸರಕಾರ ಹೀಗೆ ನಡೆದುಕೊಳ್ಳಬೇಕಾಗಿತ್ತೇ? ಎಂಬುದು ಪ್ರಶ್ನೆ.
ಇದಕ್ಕೂ ಮೊದಲು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ಮಾಡಿದಾಗಲೂ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿತ್ತು. ಆದರೆ ಲೈಂಗಿಕ ಕಿರುಕುಳದ ಆರೋಪ ಹೊತ್ತ ಬಿಜೆಪಿ ಸಂಸದನ ಬೆನ್ನಿಗೆ ನಿಂತಿತು.
ಈ ಹಿಂದೆ ರೈತರು ಪ್ರತಿಭಟನೆಗೆ ಇಳಿದಾಗಲೂ ಹೀಗೆಯೇ ಆಗಿತ್ತು. ಬಹಳಷ್ಟು ರೈತರು ಪ್ರಾಣ ಕಳೆದುಕೊಂಡಿದ್ದರು. ಸುಮಾರು 600 ರೈತರು ಕಳೆದ ಬಾರಿಯ ಪ್ರತಿಭಟನೆ ವೇಳೆ ಸಾವಿಗೀಡಾಗಿದ್ದರು.
ರೈತರ ಪ್ರತಿಭಟನೆ, ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ ದೊಡ್ಡ ಆಂದೋಲನವಾಗಿ ರೂಪುಗೊಂಡಿದ್ದರಿಂದ ಸ್ವಲ್ಪ ಸುದ್ದಿಯಾದವು. ಆದರೆ ದೇಶಾದ್ಯಂತ ಸಾವಿರಾರು ಪ್ರತಿಭಟನೆಗಳನ್ನು ಅಲ್ಲಿಂದಲ್ಲಿಗೆ ಸುದ್ದಿಯೇ ಆಗದಂತೆ ದಮನಿಸಲಾಗಿದೆ.
ನೂರಾರು ದಿನಗಳಿಂದ ನಡೆಯುತ್ತಿರುವ ಯುವಜನರ ಪ್ರತಿಭಟನೆ, ಕಾಶ್ಮೀರಿ ಪಂಡಿತರ ಪ್ರತಿಭಟನೆ, ಸರಕಾರಿ ಉದ್ಯೋಗಿಗಳ ಪ್ರತಿಭಟನೆ , ವೈದ್ಯರುಗಳ ಪ್ರತಿಭಟನೆ - ಇವ್ಯಾವುದೂ ಸುದ್ದಿಯೇ ಆಗುವುದಿಲ್ಲ.
ಈ ಪ್ರತಿಭಟನೆಗೂ ನಮಗೂ ಏನೂ ಸಂಬಂಧ ಇಲ್ಲ ಎಂದು ನೀವು ಆರಾಮವಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ನಾಳೆ ನಿಮಗೆ ಅನ್ಯಾಯವಾದಾಗಲೂ ನೀವು ಪ್ರತಿಭಟನೆಗೆ ಇಳಿದರೆ ಇದೇ ರೀತಿ ನಿಮ್ಮನ್ನು ಸುಮ್ಮನಾಗಿಸಲಾಗುತ್ತದೆ.
ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಇದೆಯೇ ಇಲ್ಲವೇ?
ಪರಿಸ್ಥಿತಿ ಈಗಿನಂತೆಯೇ ಮುಂದುವರಿದರೆ ಉತ್ತರ ಕೊರಿಯಾ, ರಶ್ಯದಂಥ ದುರ್ದೆಸೆ ಮುಟ್ಟಲು ನಮಗೂ ಹೆಚ್ಚು ದಿನಗಳು ಬೇಕಾಗಲಾರವು.
ಪ್ರಜಾತಂತ್ರ ಕಾಗದದ ಮೇಲೆ ಉಳಿಯಬಹುದು, ಚುನಾವಣೆಗಳೂ ನಡೆದಾವು.
ಆದರೆ ನಿಜವಾದ ಅರ್ಥದಲ್ಲಿ ಪ್ರಜಾಸತ್ತೆಯ ಸರ್ವನಾಶವಾಗುತ್ತದೆ.