‘ಎಲ್ಲರ ನೋವನು ಬಲ್ಲವರಾದರೆ ಗೆಲುವಿರಿ ನೀವು ಬಾಳಲ್ಲಿ...’
ನೆತ್ತರು ಹರಿಸಿ ಗಾಂಧಿಯ ಎದೆಯಿಂದಾಚೆ ಆತ್ಮಾರಾಮನನ್ನು ಬೀದಿಗೆಳೆದು ತಂದವರು ಆ ದೇವನಿಗೆ ಹೊಸ ಮನೆ ಕಟ್ಟಿದೆವೆಂದು ಇತ್ತ ಎದೆಯುಬ್ಬಿಸುತ್ತಿದ್ದಾಗ, ಅತ್ತ ನಾವು ‘ಎಲ್ಲರ ನೋವನು ಬಲ್ಲವರಾದರೆ ಗೆಲುವಿರಿ ನೀವು ಬಾಳಲ್ಲಿ, ಲೋಭವಿಲ್ಲದ ಉಪಕಾರವೇ ಸುಖವು/ಗರುವವು ಬರದಿರೆ ಮನದಲ್ಲಿ’ ಎಂದು ಗಾಂಧಿ ಪ್ರಯೋಗ ನಡೆಸಿ ಕಂಡುಕೊಂಡ ತಾಣವನ್ನು ನೋಡಿ ಬಂದೆವು.
ಅದು ‘ಮಣಿಭವನ, ಲ್ಯಾಬರ್ನಮ್ ರಸ್ತೆ, ಗಾಮದೇವಿ, ಮುಂಬೈ. 1918-1934ರ ನಡುವಿನ 17 ವರ್ಷಗಳ ಕಾಲ ಮುಂಬೈಯಲ್ಲಿದ್ದಾಗ ಗಾಂಧಿ ಇರುತ್ತಿದ್ದ ಮನೆ. ದಕ್ಷಿಣ ಆಫ್ರಿಕಾದಿಂದ 1915ರಲ್ಲಿ ಭಾರತಕ್ಕೆ ಬಂದ ಬಳಿಕ ಅಹಮದಾಬಾದಿನಲ್ಲಿ ಕೊಚ್ರಾಬ್-ಸಬರಮತಿ ಆಶ್ರಮ ಸ್ಥಾಪಿಸಿದರೂ ಸಭೆ, ವಿದೇಶ ಪ್ರಯಾಣ, ಹರತಾಳ, ಮುದ್ರಣ, ಸತ್ಯಾಗ್ರಹಗಳಿಗೆ ಗಾಂಧಿ ಪದೇಪದೇ ಮುಂಬೈಗೆ ಬರಬೇಕಾಗುತ್ತಿತ್ತು. ಅಂದಿನ ಮುಂಬೈ ಆಗಲೇ ಕಾಸ್ಮೋಪಾಲಿಟನ್ ಚಹರೆ ಹೊಂದಿ ಎಲ್ಲ ಧಾರೆಯ ಹೋರಾಟಗಾರರಿಗೂ ನೆಲೆಯಾಗಿತ್ತು. ಅವರಿಗಲ್ಲೊಂದು ವಸತಿ ವ್ಯವಸ್ಥೆ ಅಗತ್ಯವಿತ್ತು.
ಅದನ್ನರಿತು ಗಾಂಧೀಜಿಯವರ ಆಪ್ತ ಗೆಳೆಯ ಪ್ರಾಣಜೀವನ ಮೆಹ್ತಾ ತನ್ನ ಸೋದರ ಸಂಬಂಧಿ ರೇವಾಶಂಕರ್ ಜಗಜೀವನ್ ಝವೇರಿ ಮುಂಬೈಯ ಗಾಮದೇವಿಯಲ್ಲಿರುವುದನ್ನು ತಿಳಿಸಿದರು. ಆಭರಣ ವ್ಯಾಪಾರಿಯಾಗಿದ್ದ ರೇವಾಶಂಕರ್ ಸತ್ಯಾಗ್ರಹ, ಸತ್ಯ, ಅಹಿಂಸೆಯ ಮೌಲ್ಯಗಳಲ್ಲಿ ನಂಬಿಕೆಯಿಟ್ಟಿದ್ದರು. ವಾಣಿಜ್ಯ ಚಟುವಟಿಕೆಗಳು ಕಡಿಮೆಯಿರುವ ವಸತಿ ಪ್ರದೇಶದಲ್ಲಿ ಅವರ ಮನೆ ‘ಮಣಿಭವನ’ ಇತ್ತು. 1910ರಲ್ಲಿ ಬಾಂಬೆ ಇಂಪ್ರೂವ್ಮೆಂಟ್ ಟ್ರಸ್ಟಿನವರು ಹಳದಿ ಹೂಗೊಂಚಲುಗಳನ್ನು ಇಳಿಬಿಡುವ ಲ್ಯಾಬರ್ನಮ್ ಮರಗಳನ್ನು ಆ ಪ್ರದೇಶದಲ್ಲಿ ವಿಪುಲವಾಗಿ ನೆಟ್ಟಿದ್ದರು. ಬೇಸಿಗೆಯಲ್ಲಿ ಗಾಢ ಹಳದಿ ಹೂಗಳಿಂದ ಕಂಗೊಳಿಸುತ್ತಿದ್ದ ಮರಗಳು ರಸ್ತೆಗೇ ಲ್ಯಾಬರ್ನಮ್ ಹೆಸರು ಬರುವಂತೆ ಮಾಡಿದ್ದವು. ‘ಮಣಿಭವನ’ ಅಂದಿನ ಮಧ್ಯಮ ವರ್ಗದ ಮಹಡಿ ಮನೆ. ಎರಡನೇ ಮಹಡಿಯ ಒಂದು ಕೋಣೆಯನ್ನು ಗಾಂಧೀಜಿಯವರಿಗೆ ಬಿಟ್ಟುಕೊಟ್ಟರು. ಗಾಂಧಿ ರೇವಾಶಂಕರರನ್ನು ಅಣ್ಣನೆಂದೇ ಕರೆಯುತ್ತಿದ್ದರು.
ನನ್ನದು ಎಂಬ ಸುರಕ್ಷಿತ ಆವರಣವನ್ನು ಕಟ್ಟಿಕೊಳ್ಳುವುದು ಜೀವಿಗಳ ಹಂಬಲ. ಅದರಲ್ಲೂ ಘನತೆಯ ಬದುಕಿಗೆ ಅದು ಅತಿ ಅಗತ್ಯವೆಂದು ಮನುಷ್ಯರು ಭಾವಿಸಿರುವೆವು. ಹಾಗಿರುತ್ತ ನನ್ನದೇ ಮನೆ ಎಂಬ ಮೋಹ ಕಳಚಿಕೊಂಡು ಯಾರದೋ ಮನೆಯಲ್ಲಿ ವಾರಗಟ್ಟಲೆ, ತಿಂಗಳುಗಟ್ಟಲೆ ಅಲ್ಲ, ವರ್ಷಗಟ್ಟಲೆ ಇರುವುದು ಸರಳ ಸಂಗತಿಯಲ್ಲ. ಗಾಂಧಿ ಎಂಬ ದಿವಾನರ ಮಗ, ಬ್ಯಾರಿಸ್ಟರ್, ಜನನಾಯಕ, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ, ಧಾರ್ಮಿಕ ಆಚರಣೆಗಳ ವ್ಯಕ್ತಿಯು ಯಾರದೋ ಮನೆಯಲ್ಲಿ ಸಂಸಾರ, ಮಿತ್ರರು, ಬಳಗದೊಡನೆ ವಾಸಿಸುವುದು; ತಾವು ಮಾಡುವುದನ್ನು ಅವರಿಗೂ ತಿಳಿಸಿ, ಒಪ್ಪಿಸಿ ಅವರ ಮನೆಯವರಲ್ಲೊಬ್ಬರಾಗಿ, ಅವರ ಮನೆಗೆಲಸದಲ್ಲಿ ತಾನೂ ಪಾಲು ಹಂಚಿಕೊಂಡು ಇರುವುದು; ಖಾಸಗಿ ಆಸ್ತಿಯೆನ್ನುವುದೇ ಬೇಡವೆಂದು ಎಲ್ಲರಿಗೂ ಸೇರಿದ ಆಶ್ರಮ ಕಟ್ಟಿ ಬದುಕುವುದು ಸುಮ್ಮನಲ್ಲ. ಇವೆಲ್ಲ ಅಹಂ ನಿರಶನದ ಮಾರ್ಗಗಳೆಂದೇ ಅವರು ಭಾವಿಸಿದ್ದರು. ಅದಕ್ಕೇ ಜಗತ್ತು ಆತನನ್ನು ವಿಭಿನ್ನವಾಗಿ ನೋಡುವುದಿರಬೇಕು.
ಮಣಿಭವನದ ಎರಡನೆಯ ಮಹಡಿಯ ಆ ಕೋಣೆಯೆದುರು ನಾವು ನಿಂತಾಗ ಈ ಎಲ್ಲ ಭಾವಗಳು ಸುಳಿದು ಹೋದವು.
ಲೋಭವಿಲ್ಲದ ಉಪಕಾರ
ಮಣಿಭವನದ ಆ ಪುಟ್ಟ ಕೋಣೆ ಏನೇನಕ್ಕೆಲ್ಲ ಸಾಕ್ಷಿಯಾಗಿದೆ! ಅನ್ಯಾಯದ ವಿರುದ್ಧ ವ್ಯಕ್ತಿಗತ, ಸಾಮುದಾಯಿಕ ಹೋರಾಟವಾಗಿ ಸತ್ಯಾಗ್ರಹವನ್ನು ಬಳಸಬಹುದೆಂದು ಯೋಚಿಸಿ ಭಾರತದಲ್ಲಿ ಅದನ್ನು ಕಾರ್ಯರೂಪಗೊಳಿಸಿದ್ದು ಇಲ್ಲಿಂದ. ರೌಲತ್ ಕಾಯ್ದೆಯ ವಿರುದ್ಧ ಮೊದಲ ರಾಷ್ಟ್ರೀಯ ಹೋರಾಟಕ್ಕೆ ಕರೆಯಿತ್ತಿದ್ದು ಇಲ್ಲಿಂದ. ಖಿಲಾಫತ್, ಅಸಹಕಾರ ಚಳವಳಿಗಳು ಆರಂಭವಾದದ್ದು ಇಲ್ಲಿಂದ. ಅವೆಲ್ಲ ನಡೆದ ಆಝಾದ್ ಮೈದಾನ್ ಈ ಭವನದ ಹಿಂದೆಯೇ ಇದೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗಳು ಈ ಮನೆಯಲ್ಲಿಯೇ ನಡೆದವು. ಪಟೇಲ್, ನೆಹರೂ, ಸರೋಜಿನಿ ನಾಯ್ಡು, ಮೌಲಾನಾ ಅಬುಲ್ ಕಲಾಂ, ಪಟ್ಟಾಭಿ ಸೀತಾರಾಮಯ್ಯ, ರಾಜೇಂದ್ರ ಪ್ರಸಾದ್, ಮದನ ಮೋಹನ್ಮಾಳವೀಯ, ರಾಜಗೋಪಾಲಾಚಾರಿ, ಅಬ್ದುಲ್ ಗಫ್ಫಾರ್ ಖಾನ್ ಮೊದಲಾದವರು ಗಾಂಧೀಜಿಯವರ ಭೇಟಿಗೆ ಬಂದು ಇಲ್ಲಿಯೇ ಇರುತ್ತಿದ್ದರು. ‘ಕ್ವಿಟ್ ಇಂಡಿಯಾ’ ಸೇರಿದಂತೆ ಹಲವು ಘೋಷವಾಕ್ಯಗಳನ್ನು ರೂಪುಗೊಳಿಸಿದ ಯೂಸುಫ್ ಮೆಹರಲಿ ಮನೆ ಅಲ್ಲಿಂದ ಕೆಲವೇ ನಿಮಿಷಗಳ ದೂರ. ನವಜೀವನ್ (ಗುಜರಾತಿ) ಮತ್ತು ಯಂಗ್ ಇಂಡಿಯನ್ (ಇಂಗ್ಲಿಷ್) ಪತ್ರಿಕೆಗಳನ್ನು ಪ್ರಕಟಿಸಿದ್ದು ಇದೇ ವಿಳಾಸದಿಂದ. ಐತಿಹಾಸಿಕ ಮಹತ್ವದ ಗಾಂಧಿ, ಅಂಬೇಡ್ಕರರ ಪ್ರಥಮ ಭೇಟಿ ಇದೇ ಕೋಣೆಯಲ್ಲಿ ನಡೆದಿದೆ.
1919ರ ಜೂನ್ ತಿಂಗಳು. ಮಣಿಭವನದೆದುರು ಹತ್ತಿಯಿಂದ ನೂಲು ತೆಗೆದುಕೊಡುವವ ಕೂಗುತ್ತ ಹೋದ. ಗಾಂಧಿ ನೂಲು ತೆಗೆಯುವುದು ಹೇಗೆಂದು ನೋಡಿಕೊಂಡರು. ಚರಕಾ ಸತ್ಯಾಗ್ರಹದ ಅಸ್ತ್ರವಾಗಬಹುದೆಂದು ಅವರಿಗೆ ಹೊಳೆದದ್ದು ಇಲ್ಲಿಯೇ. ಮಧ್ಯಾಹ್ನ 12ರಿಂದ 3 ಗಂಟೆಯ ತನಕ ನೂಲುವ ತರಗತಿ ಆರಂಭವಾಯಿತು. ಗಾಂಧಿ ಅದರ ವಿಧೇಯ ವಿದ್ಯಾರ್ಥಿಯಾದರು. ಹೊತ್ತೊಯ್ಯಬಲ್ಲ ಚರಕಾ ತಯಾರಿಸಿದವರಿಗೆ 5,000 ರೂಪಾಯಿ ಬಹುಮಾನ ಕೊಡುವುದಾಗಿ ರೇವಾಶಂಕರ್ ಘೋಷಿಸಿದರು. ಚರಕಾ ಕೊನೆಯವರೆಗೆ ಗಾಂಧೀಜಿಯವರ ಸಂಗಾತಿಯಾಯಿತು.
1921 ನವೆಂಬರ್ 17ರಂದು ವೇಲ್ಸ್ನ ರಾಜಕುವರ ಭಾರತಕ್ಕೆ ಬಂದಾಗ ಒಂದೆಡೆ ಮುಂಬೈಯ ಗಣ್ಯರು ಪ್ರಿನ್ಸ್ ಆಫ್ ವೇಲ್ಸ್ ವಸ್ತುಸಂಗ್ರಹಾಲಯ ಉದ್ಘಾಟಿಸಲು ಸಿದ್ಧವಾಗಿದ್ದರೆ ಮತ್ತೊಂದೆಡೆ ಸತ್ಯಾಗ್ರಹಿಗಳು ಹರತಾಳ ನಡೆಸಿದರು. ಎಲ್ಫಿನ್ಸ್ಟನ್ ಮಿಲ್ ಎದುರು ವಿದೇಶಿ ಬಟ್ಟೆಗಳನ್ನು ಸುಟ್ಟರು. ಸ್ವದೇಶಿ ಮತ್ತು ಶಾಂತಿಯ ವ್ರತ ಹಿಡಿದು ಬಳಿಕ ಬಟ್ಟೆ ಸುಡಿ ಎಂದು ಗಾಂಧಿ ದೇಶವಾಸಿಗಳಲ್ಲಿ ವಿನಂತಿಸಿ ಮಣಿಭವನದಲ್ಲಿ ಐದು ದಿನಗಳ ಉಪವಾಸ ಆಚರಿಸಿದರು.
ಎರಡನೇ ದುಂಡುಮೇಜಿನ ಪರಿಷತ್ಗೆ ಮುನ್ನ 1931ರ ಜೂನ್ 9ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಮಣಿಭವನದಲ್ಲಿ ಸೇರಿತು. ಆಗಸ್ಟ್ 27ರಂದು ಅಲ್ಲಿಂದಲೇ ಗಾಂಧಿ ಲಂಡನ್ಗೆ ಹೊರಟರು. ಡಿಸೆಂಬರ್ 27ರಂದು ತಿರುಗಿ ಮಣಿಭವನಕ್ಕೆ ಬಂದಿಳಿದು ಹೋರಾಟಗಾರರ ಸಭೆ ನಡೆಸಿದರು. ಇತ್ತ ದುಂಡುಮೇಜಿನ ಪರಿಷತ್ನಿಂದ ‘‘ಖಾಲಿ ಕೈಯಲ್ಲಿ ಬಂದಿರುವೆ’’ ಎಂದು ಗಾಂಧಿ ಹೇಳುತ್ತಿರುವಾಗ ಅತ್ತ ಕೈತುಂಬಿಕೊಂಡು ಬಂದಿದ್ದ ಅಂಬೇಡ್ಕರ್ರನ್ನು ಸ್ವಾಗತಿಸಲು ಬಂದರಿನಲ್ಲಿ ಸಾವಿರಾರು ಜನ ನೆರೆದಿದ್ದರು.
ಜನವರಿ 3, 1934. ಗಾಂಧಿ ಕೊನೆಯ ಬಾರಿ ಆ ಮನೆಯಿಂದ ಹೊರಬಿದ್ದರು. ಅಂದು ಅಲ್ಲಿದ್ದ ವೆರಿಯರ್ ಎಲ್ವಿನ್ ನೆನಪುಗಳನ್ನು ಹೀಗೆ ದಾಖಲಿಸಿದ್ದಾರೆ:
‘‘ಗಾಂಧಿ ಒಂದು ವಾರದ ಮೌನವ್ರತ ಹಿಡಿದಿದ್ದರು. ಕಾಗದ, ಲೇಖನಿ, ಚರಕಾ ಜೊತೆಯಿದ್ದವು. ಸಂಭಾಷಣೆ ಒಮ್ಮುಖವಾಗದಿರಲೆಂದು ಕಾಗದದ ತುಂಡಿನ ಮೇಲೆ ಬರೆದು ತೋರಿಸುತ್ತಿದ್ದರು. ಸೂರ್ಯ ಮುಳುಗುವ ವೇಳೆ. ಕಸ್ತೂರ್ಬಾ ಮತ್ತು ಮೀರಾ ಬೆನ್ ಎಲ್ಲರಿಗೂ ಹಂಚಿದ ಖರ್ಜೂರ, ಹಣ್ಣು ತಿಂದು ಗಾಂಧೀಜಿಯವರ ಊಟ ಮುಗಿಯಿತು... ನಾನು ಅನತಿ ದೂರದಲ್ಲಿ ಮಲಗಿದೆ. ಬೆಳಗ್ಗಿನ ಜಾವ ನಿದ್ರೆಯ ನಡುವೆ ‘ಪೊಲೀಸರು ಬಂದರು’ ಎಂಬ ಪಿಸುಮಾತು ಕೇಳಿಸಿತು. ಗಾಂಧಿ ಬಂಧನಕ್ಕಾಗಿ ಪೊಲೀಸರು ಮನೆಯನ್ನು ಸುತ್ತುವರಿದಿದ್ದರು. ತಾನು ಮೌನ ವಹಿಸಿರುವುದನ್ನು ಗಾಂಧಿ ಸನ್ನೆಯಿಂದ ತೋರಿಸಿದರು. ‘ಅರ್ಧ ಗಂಟೆಯಲ್ಲಿ ಸಿದ್ಧವಾಗಿ ಬರುವೆ’ ಎಂದು ಬರೆದು, ಪ್ರಾತಃವಿಧಿ ಮುಗಿಸಿ ಬಂದರು. ಬೆಳಗ್ಗಿನ 3 ಗಂಟೆ 5 ನಿಮಿಷ. ಮೀರಾ ಮತ್ತು ದೇವದಾಸ್ ಹಿಂದೆಮುಂದೆ ಓಡಾಡಿ ಲಗೇಜನ್ನು ಸಿದ್ಧಗೊಳಿಸಿದರು. ಎಲ್ಲರೂ ವೃತ್ತಾಕಾರವಾಗಿ ಕೂತು ‘ವೈಷ್ಣವ ಜನತೋ’ ಹಾಡಿದೆವು. ಪಟೇಲರಿಗೆ ಪತ್ರ, ನನಗೊಂದೆರಡು ಸಾಲು, ಮಿಕ್ಕವರಿಗೆ ಕೆಲವು ಸೂಚನೆ ಬರೆದುಕೊಟ್ಟು ಗಾಂಧಿ ಎದ್ದರು. ಗುಡ್ ಬೈ ಎಂದೆ. ಮೆಲುವಾಗಿ ಕಿವಿಯೆಳೆದು ನಕ್ಕರು. ಅವರು ಹೊರಟದ್ದೇ ಕಸ್ತೂರ್ಬಾ, ‘‘ನನ್ನನ್ನೂ ಕರಕೊಂಡ್ ಹೋಗಬಾರದೇ?’’ ಎಂದರು. ಅನುಯಾಯಿಗಳು ದುಃಖಿಸುತ್ತ ನಮಸ್ಕರಿಸಿದರು. ಕೆಲವೇ ಪೊಲೀಸರ ಜೊತೆ ಮೌನವಾಗಿ ಕೆಳಗಿಳಿದು ಪೊಲೀಸ್ ವಾಹನದಲ್ಲಿ ಕುಳಿತು ಕತ್ತಲಲ್ಲಿ ಕರಗಿಹೋದರು.’’
ಗಾಂಧೀಜಿ ಸೆರೆಮನೆಯಲ್ಲಿದ್ದಾಗ ಆಪ್ತ ಗೆಳೆಯ ಪ್ರಾಣಜೀವನ ಮೆಹ್ತಾ ಕೊನೆಯುಸಿರೆಳೆದರು. ನಂತರ ಚಳವಳಿ, ಉಪವಾಸ, ವಾರ್ಧಾ ಸೇವಾಗ್ರಾಮದ ವಾಸ, ದೇಶಾದ್ಯಂತ ತಿರುಗಾಟದಲ್ಲಿ ವ್ಯಸ್ತರಾದ ಗಾಂಧಿ ಮತ್ತೆಂದೂ ಮಣಿಭವನಕ್ಕೆ ಬರಲಾಗಲಿಲ್ಲ.
ಈಗ
ಮಣಿಭವನವು ಭಾರತದ ಸ್ವಾತಂತ್ರ್ಯ ಹೋರಾಟದೊಂದಿಗೆ ಅಚ್ಚಳಿಯದ ಸಂಬಂಧ ಹೊಂದಿರುವುದರಿಂದ ರಾಷ್ಟ್ರೀಯ ಸ್ಮಾರಕವಾಗಬೇಕೆಂದು 1955ರಲ್ಲಿ ಅದರ ಮಾಲಕರು ಸರಕಾರಕ್ಕೆ ಬಿಟ್ಟುಕೊಟ್ಟರು. ಎರಡನೆಯ ಮಹಡಿಯ ಗಾಧೀಜಿಯವರ ಕೋಣೆಯನ್ನು ಈಗಲೂ ಹಾಗೆಯೇ ಇರಿಸಲಾಗಿದೆ. ಸುಶೀಲಾ ಗೋಖಲೆ ಪಟೇಲ್ ನಿರ್ಮಿಸಿದ ಗಾಂಧೀಜಿಯವರ ಬದುಕಿನ ಮುಖ್ಯ ಘಟ್ಟಗಳನ್ನು ನಿರೂಪಿಸುವ 28 ಟ್ಯಾಬ್ಲೊಗಳು ಹಜಾರದಲ್ಲಿವೆ. ಎಲ್ಲೆಡೆ ನೂರಾರು ಫೋಟೊಗಳಿವೆ. ಗ್ರಂಥಾಲಯದಲ್ಲಿ 50,000 ಅಮೂಲ್ಯ ಪುಸ್ತಕಗಳಿವೆ. ಗಾಂಧಿ ಬರೆದ ಪತ್ರಗಳಿವೆ. ದೇಶವಿದೇಶದಿಂದ ಬಂದವರು ಸಂದರ್ಶಕರ ಪುಸ್ತಕದಲ್ಲಿ ಅಭಿಪ್ರಾಯ ಬರೆದಿದ್ದಾರೆ. ಇರಾನಿನ ನೊಬೆಲ್ ವಿಜೇತೆ ಶಿರೀನ್ ಎಬಾಡಿ ‘ಗಾಂಧಿ ಚಿಂತನೆಗಳು ಅರಳಲಿ’ ಎಂಬ ವಿಶ್ವಾಸ ವ್ಯಕ್ತಪಡಿಸಿದರೆ, ಲಿಬಿಯದ ಗದ್ದಾಫಿ ಪರ್ಷಿಯನ್ನಲ್ಲಿ ಏನೋ ಬರೆದಿದ್ದಾರೆ. ಮಾರ್ಟಿನ್ ಲೂಥರ್ ಕಿಂಗ್, ಮತ್ತವರ ಮಗ ಜ್ಯೂನಿಯರ್ ಇಬ್ಬರೂ ಬಂದಿದ್ದಾರೆ. ಬರಾಕ್ ಒಬಾಮಾ, ‘ಗಾಂಧೀಜಿಯವರ ಬದುಕಿಗೆ ಸಾಕ್ಷಿಯಾದ ಈ ಸ್ಥಳವನ್ನು ಸಂದರ್ಶಿಸುವ ಸದವಕಾಶದಿಂದ ಭರವಸೆ ಮತ್ತು ಸ್ಫೂರ್ತಿಗಳನ್ನು ತುಂಬಿಕೊಂಡಿದ್ದೇನೆ. ಅವರು ಭಾರತಕ್ಕಷ್ಟೆ ಅಲ್ಲ, ವಿಶ್ವದ ಹೀರೋ’ ಎಂದು ಬರೆದಿದ್ದಾರೆ.
ಮನದ ಮಾತು
ಮಣಿಭವನದಲ್ಲಿ ಎದ್ದು ಕಾಣುವಂತೆ ಇಲ್ಲದಿರುವ ಸಂಗತಿ ಒಂದಿದೆ.
ಸ್ವಾತಂತ್ರ್ಯ ಹೋರಾಟ ಚರಿತ್ರೆಯ ಹಲವು ವಿಷಯ, ಫೋಟೊಗಳನ್ನು ಒಳಗೊಂಡಿರುವ ಸ್ಮಾರಕವು ಗಾಂಧಿ-ಅಂಬೇಡ್ಕರರ ಮೊದಲ ಭೇಟಿ ನಡೆದ ಸ್ಥಳವೂ ಹೌದು. ಅಲ್ಲಿರುವ ಫೋಟೊಗಳನ್ನು ನೋಡಿದರೆ ಗಾಂಧಿ ಬದಲಾಗುತ್ತ ಹೋದ ವ್ಯಕ್ತಿತ್ವ ಎಂದು ದಿರಿಸಿನಲ್ಲೇ ಗೊತ್ತಾಗುತ್ತದೆ. ಪಾಶ್ಚಾತ್ಯ ಶೈಲಿಯಿಂದ ಭಾರತೀಯ ಉಡುಪಿಗೆ; ಕಾಥೇವಾಡಿ ರುಮಾಲಿನಿಂದ ಕಾಶ್ಮೀರಿ ಟೋಪಿಗೆ; ನಂತರ ಬಿಳಿ ಟೋಪಿ, ಧೋತಿಗೆ; ಕೊನೆಗೆ ಖಾದಿಯ ಮುಂಡು ಪಂಚೆಗೆ ಗಾಂಧಿ ಬದಲಾದರು. ಹಾಗೆಯೇ ಜಾತಿ, ಅಸ್ಪಶ್ಯತೆ, ವರ್ಣಾಶ್ರಮ ಕುರಿತ ಅವರ ನಿಲುವುಗಳಲ್ಲಿಯೂ ಗಮನಾರ್ಹ ಬದಲಾವಣೆಯಾಯಿತು. ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್ರೆಂಬ ಪ್ರಖರ ವಿದ್ವಾಂಸ, ಕಟು ವಿಮರ್ಶಕ ವ್ಯಕ್ತಿತ್ವದ ಜೊತೆಗಿನ ಸಂವಾದ, ನೇರ ಸಂಘರ್ಷ. ಎಂದೇ ಅವರಿಬ್ಬರ ಮೊದಲ ಭೇಟಿ ನಡೆದ ಮಣಿಭವನವು ಮಹತ್ವದ ಸ್ಥಳವಾಗಿದೆ.
ಆದರೆ ಅಲ್ಲಿ ಅಂಬೇಡ್ಕರ್ರ ಯಾವುದೇ ಫೋಟೊ, ಉಲ್ಲೇಖ, ಭೇಟಿ ನಡೆದ ಪ್ರಸ್ತಾಪ ಇಲ್ಲ!
ಹೋಲಿಕೆ ಎನ್ನುವುದು ಭಾರತೀಯ ಮನಸ್ಥಿತಿಯ ಕಾಯಿಲೆಯೋ ಅಥವಾ ರಾಗದ್ವೇಷಗಳಿಂದ ತುಂಬಿದ ಮನುಷ್ಯ ಮನಸ್ಸಿನ ಒಳಚಾಚೋ?! ಮುಂಬೈಯ ರಾಜಗೃಹ-ಚೈತ್ಯಭೂಮಿ, ದೀಕ್ಷಾಭೂಮಿ, ಮಹಾಡ್, ಕೋರೆಗಾಂವ್ ಮುಂತಾದ ಸ್ಥಳಗಳು ಒಂದು ವಲಯ ರೂಪಿಸಿದ್ದರೆ; ಮಣಿಭವನ, ಸಬರಮತಿ, ವಾರ್ಧಾ, ರಾಜಘಾಟ್, ದಂಡಿಯಂತಹ ತಾಣಗಳು ಮತ್ತೊಂದು ವಲಯ ರೂಪಿಸಿವೆ. ನಡುವೆ ಒಂದು ಸ್ಪಷ್ಟವಾದ ಕಂದರವಿದೆ. ಎಂದೂ ಪರಸ್ಪರ ಮುಟ್ಟಿಕೊಳ್ಳಬಾರದ ಹೈಟೆನ್ಶನ್ ವಿದ್ಯುತ್ ತಂತಿಗಳೋ ಎಂಬಂತೆ ಸ್ವತಂತ್ರ ಭಾರತವನ್ನು ರೂಪಿಸಿದ ಈ ಇಬ್ಬರು ಮಹಾನಾಯಕರನ್ನು ಅವರ ಕಟ್ಟಾ ಅಭಿಮಾನಿಗಳು ದೂರವಿಟ್ಟಿದ್ದಾರೆ. ಗಾಂಧಿ ಕೇಂದ್ರಗಳು ಅಂಬೇಡ್ಕರ್ ಜಯಂತಿ ಆಚರಿಸುವುದಿಲ್ಲ. ಅಂಬೇಡ್ಕರರ ಕಟ್ಟಾ ಅನುಯಾಯಿಗಳ ಮಾತುಗಳಲ್ಲಿ ಗಾಂಧಿ ಕುರಿತು ದ್ವೇಷದ ಹೊರತು ಬೇರೆ ವಿಷಯ ಸುಳಿಯುವುದಿಲ್ಲ.
ಈ ಕಾಲಘಟ್ಟದಲ್ಲಿ ಬಿಳಿ, ನೀಲಿಗಳು ಹೀಗೆ ವಿಕರ್ಷಣೆಗೊಳಗಾಗುವುದು, ದೂರವಾಗುವುದು ಸರಿಯೇ?
ಗಾಂಧಿ-ಅಂಬೇಡ್ಕರ್, ಬಾಪು-ಬಾಬಾ ಆಗಿಹೋದ ಚೇತನಗಳಲ್ಲ. ಲೋಕಹಿತಕ್ಕಾಗಿ ಹರಿದು ಹೋರಾಟದ ಕಡಲಿನೆಡೆಗೆ ಈಗಲೂ ಪ್ರವಹಿಸುತ್ತಿರುವ ಜೀವನದಿಗಳು. ಸತ್ಯ, ಪ್ರೇಮಗಳಂತಹ ಹೋಲಿಸಲಾಗದ ಅನನ್ಯ ಮೌಲ್ಯಗಳು. ಯಾವುದು ಹೆಚ್ಚು ಯಾವುದು ಕಡಿಮೆ ಎಂದು ಅಳೆಯುವುದು ನಮ್ಮ ಬೇಜವಾಬ್ದಾರಿ, ಅನಾರೋಗ್ಯಕರ ಮನಸ್ಸನ್ನು ಸೂಚಿಸುವುದೇ ಹೊರತು ಅದರಿಂದ ಆ ಜೀವಚೇತನಗಳ ಹಿರಿಮೆಗೆ ಯಾವುದೇ ಕುಂದು ಬರುವುದಿಲ್ಲ. ಸಮಾಜದ ಸೌಹಾರ್ದ ನೇಯ್ಗೆಗೆ, ಸ್ವಾಯತ್ತ ಘನತೆಯ ಬದುಕಿಗೆ ಕುತ್ತು ಬಂದೊದಗಿರುವ ವರ್ತಮಾನವನ್ನು ಎದುರಿಸುತ್ತ ನಾವು ಸಮಯಸಾಧಕರ ರಾಜಕೀಯ ಪ್ರೇರಿತ ಕಸರತ್ತುಗಳನ್ನು ನಿರಾಕರಿಸಿ ನಡೆಯಬೇಕಿದೆ. ಬಾಪು, ಬಾಬಾಸಾಹೇಬರು ಪ್ರತಿನಿಧಿಸುವ ಮೌಲ್ಯಗಳನ್ನರಿತು ಅವರ ಹೆಜ್ಜೆಗಳಿಗೆ ಹೆಜ್ಜೆಗೂಡಿಸಬೇಕಿದೆ. ನೀವು ಹರಿಸಿದ ರಕ್ತ, ಬೆವರು, ಕಣ್ಣೀರು ಹುಸಿ ಹೋಗಲು ಬಿಡಲಾರೆವೆಂದು ಆ ಚೇತನಗಳಿಗೆ ಮಾತು ಕೊಟ್ಟು ಭಾರತವು ಸಮತೆಯ ನೆಲವಾಗುವಂತೆ ಪ್ರಯತ್ನಿಸಬೇಕಿದೆ.
ನಾವು ಮೆಚ್ಚುವವರನ್ನು ಅವರಿರುವ ಹಾಗೆಯೇ ಸಂಪೂರ್ಣ ಆವಾಹಿಸಿಕೊಳ್ಳಬೇಕೆಂದಿಲ್ಲ. ಬುದ್ಧ, ಬಾಬಾಸಾಹೇಬರೇ ಹೇಳಿದ ಹಾಗೆ ಪ್ರಶ್ನಿಸುತ್ತ, ಪ್ರಶ್ನೆ ಕೇಳಿಕೊಳ್ಳುತ್ತ ನಡೆಯೋಣ. ಅವರನ್ನರಿತು, ಅವರ ಆಶಯದಂತೆ ಬದುಕೋಣ. ನಮ್ಮ ದಾರಿದೀಪಗಳಿಗೆ ಇದಕ್ಕಿಂತ ಮಿಗಿಲಾದ ಸ್ಮಾರಕ ಕಟ್ಟಲಾರೆವು, ಅಲ್ಲವೇ?
(ಇಲ್ಲಿ ಬಳಸಿದ ವೈಷ್ಣವ ಜನತೋ ಹಾಡಿನ ಕನ್ನಡಾನುವಾದ ಜಯಂತ ಕಾಯ್ಕಿಣಿಯವರದು.)