ಸತ್ಯವನ್ನು ಯಾರ ಹಿತಾಸಕ್ತಿಗಾಗಿ ಕೊಲೆ ಮಾಡಲಾಗುತ್ತಿದೆ?
ಪೊಲೀಸರು, ಸೇನೆ ಅಥವಾ ಸರಕಾರಕ್ಕೆ ಗೊತ್ತೇ ಇರದೆ ಸಾವಿರಾರು ಪ್ರವಾಸಿಗರು ಮತ್ತು ವಾಹನಗಳು ಸೂಕ್ಷ್ಮ ಪ್ರದೇಶಕ್ಕೆ ಹೇಗೆ ಹೋಗಲು ಸಾಧ್ಯ?

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ 26 ಜನರು ಸಾವನ್ನಪ್ಪಲು ಪ್ರಮುಖ ಕಾರಣ ಭದ್ರತಾ ವೈಫಲ್ಯ. ಆದರೆ ಕನಿಷ್ಠ ಪಕ್ಷ ಆ ಬಲಿಯಾದವರ ವಿಚಾರದಲ್ಲಾದರೂ ಸರಕಾರ ಪ್ರಾಮಾಣಿಕತೆ ತೋರಿಸಿದೆಯೇ?
ಬಲಿಯಾದವರ ಹೆಸರಿನಲ್ಲಿ ದೇಶಾದ್ಯಂತ ಭಾವನೆಗಳ ಅಲೆಯೇ ಸೃಷ್ಟಿಯಾಗುತ್ತಿದೆ. ಆದರೆ ಅವರ ಬಗ್ಗೆ ಮಾಹಿತಿಯನ್ನು ಕೊಡುವಾಗ ಅಪ್ರಾಮಾಣಿಕತೆ ತೋರಿಸಲಾಗುತ್ತಿದೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಎಕ್ಸ್‌ನಲ್ಲಿ ಒಂದು ವೀಡಿಯೊ ಹೇಳಿಕೆ ಪೋಸ್ಟ್ ಮಾಡಿದ್ದಾರೆ.
ಅವರ ಹೇಳಿಕೆಯನ್ನು ನೋಡಿದರೆ, ಧರ್ಮದ ರಾಜಕೀಯದಲ್ಲಿ ಸತ್ಯವನ್ನು ಈ ರೀತಿ ಸುಟ್ಟುಹಾಕಲಾಗುತ್ತಿದೆಯೇ ಎಂದು ದಿಗ್ಭ್ರಮೆಯಾಗುತ್ತದೆ.
ಕಿರಣ್ ರಿಜಿಜು ಹೇಳಿಕೆಯಲ್ಲಿ ಪ್ರಮುಖ ಅಂಶಗಳೇ ಕಾಣೆಯಾಗಿವೆ. ನಮ್ಮ ಐಬಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ಘಟನೆ ಹೇಗೆ ನಡೆಯಿತು ಮತ್ತು ತಪ್ಪು ಎಲ್ಲಿ ನಡೆಯಿತು ಎಂಬುದನ್ನು ಸಹ ಹೇಳಿದ್ದಾರೆ ಎಂದು ಸಚಿವರು ಹೇಳುತ್ತಾರೆ.
‘‘ಈ ಘಟನೆ ನಡೆದ ಸ್ಥಳ ಮುಖ್ಯ ರಸ್ತೆಯಲ್ಲಿಲ್ಲ. ಅಲ್ಲಿಗೆ ನಡೆದೇ ಹೋಗಬೇಕು ಅಥವಾ ಕುದುರೆಯ ಮೇಲೆ ಹೋಗಬೇಕು. ಅದು ಅಲ್ಲಿಂದ ಮೈದಾನದಲ್ಲಿ ಸುಮಾರು ಎರಡೂವರೆ ಗಂಟೆಗಳ ದೂರದಲ್ಲಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರೂ, ಒಂದು ತಪ್ಪು ನಡೆದಿದೆ ಮತ್ತು ಎಲ್ಲರಿಗೂ ಅದರ ಬಗ್ಗೆ ದುಃಖವಾಗಿದೆ. ಇಂತಹ ಘಟನೆಗಳು ಮತ್ತೆ ನಡೆಯಬಾರದು. ಇದಕ್ಕಾಗಿ ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’’ ಎಂಬುದು ಕಿರಣ್ ರಿಜಿಜು ನೀಡಿರುವ ನಿಜವಾದ ಹೇಳಿಕೆ.
ಆದರೆ ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಈ ವಿಚಾರಗಳನ್ನು ತೆಗೆದುಹಾಕಲಾಗಿದೆ.
ಇದು ಆಘಾತಕಾರಿ.. ಎಂದು ಅವರು ಹೇಳಿದ ನಂತರ, ಮಧ್ಯದಿಂದ ಕೆಲವು ಸಾಲುಗಳನ್ನು ತೆಗೆದುಹಾಕಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗಾಗಲೇ ಮೇಲೆ ಉಲ್ಲೇಖಿಸಲಾದ ಸಾಲುಗಳು ಅವರು ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ಇಲ್ಲ. ಅವರ ಹೇಳಿಕೆಯಲ್ಲಿ 50 ಸೆಕೆಂಡುಗಳ ಭಾಗವನ್ನು ತೆಗೆದುಹಾಕಲಾಗಿದೆ.
ಈ ದೇಶದಲ್ಲಿ ನೂರಾರು ಸುದ್ದಿ ಚಾನೆಲ್‌ಗಳಿವೆ. ಆದರೆ ಯಾರಿಗೂ ಇದನ್ನೇ ಮೊದಲ ಹೆಡ್‌ಲೈನ್ ಆಗಿ ಮಾಡಿ, ಸಚಿವರು ಹೇಳಿದ್ದನ್ನು ಜನರಿಗೆ ಸರಿಯಾಗಿ ತಿಳಿಸುವ ಧೈರ್ಯ ಇಲ್ಲ. ಆದರೆ ಎಎನ್‌ಐ ಪೂರ್ತಿ ವೀಡಿಯೊ ಹಾಕಿದೆ. ಅದು 3 ನಿಮಿಷ 48 ಸೆಕೆಂಡುಗಳಷ್ಟಿದೆ. ಆದರೆ ಸಚಿವರು ಅಪ್‌ಲೋಡ್ ಮಾಡಿದ ವೀಡಿಯೊ 2 ನಿಮಿಷ 33 ಸೆಕೆಂಡುಗಳಷ್ಟಿದೆ. ಹಾಗಾದರೆ ಸಚಿವರು ತಪ್ಪನ್ನು ಒಪ್ಪಿಕೊಂಡ ಆ 50 ಸೆಕೆಂಡುಗಳ ಭಾಗ ಎಲ್ಲಿಗೆ ಹೋಯಿತು? ತಪ್ಪು ನಡೆದಿದೆ ಎಂದು ಹೇಳಿದ್ದನ್ನು ಸಚಿವರು ತಮ್ಮ ವೀಡಿಯೊದಿಂದ ಅಳಿಸಿಹಾಕಿದ್ದಾರೆ ಎಂದು ಮಾಧ್ಯಮಗಳು ಏಕೆ ಹೇಳುತ್ತಿಲ್ಲ?
ಈ ಸುದ್ದಿಯನ್ನು ಮಡಿಲ ಮೀಡಿಯಾಗಳು ಕೊಲ್ಲುತ್ತಿವೆ.
ದಾಳಿಯ ವಿಚಾರವಾಗಿ ಅಧಿಕೃತವಾಗಿ ಈವರೆಗೂ ದೇಶಕ್ಕೆ ಏನನ್ನೂ ತಿಳಿಸಲಾಗಿಲ್ಲ. ಇಲ್ಲಿಯವರೆಗೆ ಸರಕಾರ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಉತ್ತರಿಸುವ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ಯಾವ ಪ್ರಶ್ನೆಗಳಿಗೂ ಇನ್ನೂ ಅಧಿಕೃತವಾಗಿ ಉತ್ತರಿಸಲಾಗಿಲ್ಲ.
ಭದ್ರತಾ ಲೋಪ ಹೇಗೆ ನಡೆಯಿತು? ಭಯೋತ್ಪಾದನೆ ಪೀಡಿತ ಪ್ರದೇಶದಲ್ಲಿ ಸಾವಿರಾರು ಜನರು ಹೋಗಲು ಹೇಗೆ ಅವಕಾಶ ನೀಡಲಾಯಿತು? ಅವರು ಹೋದ ನಂತರವೂ ಯಾವುದೇ ಭದ್ರತಾ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ? ಇವೆಲ್ಲ ಪ್ರಶ್ನೆಗಳೂ ಬರುತ್ತವೆ. ಪತ್ರಿಕಾಗೋಷ್ಠಿ ನಡೆಸಿ ಸರಕಾರ ಉತ್ತರ ನೀಡುವಾಗ, ಅದು ಎಷ್ಟು ಸುಳ್ಳುಗಳನ್ನು ಹೇಳುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಆದ್ದರಿಂದ, ಸರಕಾರದ ಈ ವೈಫಲ್ಯದ ಮುಖ ಜನರಿಗೆ ಕಾಣಬಾರದು ಎಂದೇ ಸರ್ವಪಕ್ಷ ಸಭೆ ಕರೆಯಲಾಯಿತು.
ಸಭೆಯಿಂದ ಹೊರಬಂದ ನಂತರ ನಾಯಕರು ಎಲ್ಲವನ್ನೂ ಹೇಳಲಿಲ್ಲ. ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಎಲ್ಲೋ ಕೆಲವು ಕಡೆ ಮಾತ್ರ ಬಯಲಾಗಿದೆ.
ಸಭೆ ಗೌಪ್ಯವಾಗಿದ್ದರಿಂದ, ಎಲ್ಲಾ ಮಾಹಿತಿ ಬಹಿರಂಗಪಡಿಸದಂತೆ ನಿರ್ಬಂಧಿಸಲಾಯಿತು. ಹಾಗಾಗಿ, ಸಭೆಯಲ್ಲಿ ನಿಖರವಾಗಿ ಏನು ನಡೆಯಿತು ಎಂದು ಹೇಳಲು ವಿರೋಧ ಪಕ್ಷಗಳು ಸಹ ಪತ್ರಿಕಾಗೋಷ್ಠಿ ನಡೆಸಲು ಸಾಧ್ಯವಾಗಲಿಲ್ಲ. ಅಂದರೆ, ಸರ್ವಪಕ್ಷ ಸಭೆಯ ಅರ್ಥ ಮತ್ತು ಉದ್ದೇಶ ಏನೆಂಬುದನ್ನು ಗ್ರಹಿಸಬಹುದು.
ಭಯೋತ್ಪಾದಕ ದಾಳಿಯ ನಂತರ, ಭದ್ರತಾ ವೈಫಲ್ಯದ ಸುದ್ದಿಗಳನ್ನು ಮಡಿಲ ಮೀಡಿಯಾಗಳಲ್ಲಿ ಹೇಗೆ ಸಾಯಿಸಲಾಗುತ್ತಿದೆ ಎಂಬುದನ್ನು ನೋಡಬಹುದು.
ಎಲ್ಲಾ ಕಡೆಯಲ್ಲೂ ಸರಕಾರದಿಂದಾದ ತಪ್ಪಿನ ಸುದ್ದಿ ತುಂಬಾ ಚಿಕ್ಕದಾಗಿ ಕಾಣಿಸುತ್ತದೆ. ಭಯೋತ್ಪಾದಕರಿಗೆ ಪಾಠ ಕಲಿಸುವ ಅಬ್ಬರದ ಹೇಳಿಕೆಯನ್ನು ದೊಡ್ಡದಾಗಿ ಮಾಡಿ, ಭದ್ರತಾ ವೈಫಲ್ಯದ ಸುದ್ದಿಗಳನ್ನು ಹಿಂದಕ್ಕೆ ತಳ್ಳಲಾಗುತ್ತಿದೆ.
ಪ್ರವಾಸ ಆಯೋಜಕರು ನಾಲ್ಕು ದಿನಗಳ ಹಿಂದೆ ಪೊಲೀಸರಿಗೆ ಮಾಹಿತಿ ನೀಡದೆ ಪ್ರವಾಸಗಳನ್ನು ನಡೆಸಲು ಪ್ರಾರಂಭಿಸಿದರು. ಆದ್ದರಿಂದ ಅಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇರಲಿಲ್ಲ ಎಂದು ಹೇಳುವ ಹೊಸ ವರಸೆಯೊಂದು ಶುರುವಾಗಿದೆ.
ತ್ವರಿತ ಪ್ರತಿಕ್ರಿಯೆ ತಂಡದ ಆಗಮನದಲ್ಲಿನ ವಿಳಂಬದ ಬಗ್ಗೆ ಕೇಳಲಾಗುತ್ತಿರುವುದಕ್ಕೂ, ಪ್ರವಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ವ್ಯವಸ್ಥೆ ಇರಲಿಲ್ಲ, ಎಸ್‌ಒಪಿ ಅಂದರೆ ನಿರ್ಧಾರಿತ ಕಾರ್ಯಾಚರಣೆ ಪ್ರಕ್ರಿಯೆ ಇರಲಿಲ್ಲ ಎಂದು ಹೇಳಲಾಗಿದೆ.
ಅಷ್ಟೊಂದು ಜನರು ಅಲ್ಲಿಗೆ ಬಂದಿದ್ದರು. ಮುಖ್ಯ ರಸ್ತೆಯ ಮೂಲಕ ಹಲವಾರು ವಾಹನಗಳು ಸಂಚರಿಸುತ್ತಿದ್ದವು. ಆಗಲೂ ಯಾರಿಗೂ ಎಸ್‌ಒಪಿ ಅನುಸರಿಸಬೇಕು ಎಂಬ ಕಲ್ಪನೆ ಇರಲಿಲ್ಲ. ಸರಕಾರದ ಪರವಾಗಿ ಈ ಉತ್ತರವನ್ನು ಸಿದ್ಧಪಡಿಸಿದವರು ಯಾರೋ ಜಾಣರೇ ಇರಬೇಕು.
ಅಂದರೆ ಪ್ರವಾಸ ನಿರ್ವಾಹಕರು ಜನರನ್ನು ಅಪಾಯಕ್ಕೆ ಸಿಲುಕಿಸಿದ್ದಾರೆ ಎಂದು ಹೇಳಲು ಸರಕಾರ ಹೊರಟಿದೆ.
ಘಟನೆ ನಡೆದ ಸ್ಥಳ ಮುಖ್ಯ ರಸ್ತೆಯಲ್ಲಿಲ್ಲ ಎಂದು ಕಿರಣ್ ರಿಜಿಜು ಹೇಳಿದ್ದಾರೆ. ಭಯೋತ್ಪಾದಕರು ಮುಖ್ಯ ರಸ್ತೆಯಲ್ಲಿ ಮಾತ್ರ ದಾಳಿ ಮಾಡುತ್ತಾರೆಯೇ? ಪುಲ್ವಾಮಾದಲ್ಲಿ ದಾಳಿಯನ್ನು ಮುಖ್ಯ ರಸ್ತೆಯಲ್ಲೇ ಹೆದ್ದಾರಿಯಲ್ಲೇ ನಡೆಸಲಾಯಿತು. 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಅದಕ್ಕೆ ಉತ್ತರವೇನು? ಮಾಧ್ಯಮಗಳಲ್ಲಿ ಇದರ ಬಗ್ಗೆ ಚರ್ಚೆ ಏಕೆ ಆಗುತ್ತಿಲ್ಲ?
ಸಚಿವರು, ಅಲ್ಲಿಗೆ ನಡೆದುಕೊಂಡು ಹೋಗಬೇಕು ಮತ್ತು ಕುದುರೆಯ ಮೇಲೆ ಹೋಗಬೇಕು ಎಂದು ಹೇಳುತ್ತಾರೆ.ಹಾಗಾದರೆ ಭದ್ರತೆ ಇಲ್ಲದಿರುವುದಕ್ಕೆ ಇದೇ ಕಾರಣವಾ? ಅಂತಹ ಸ್ಥಳದಲ್ಲಿಯೂ ಭದ್ರತೆ ಇರಬೇಕಲ್ಲವೇ?
ಬೈಸರನ್ ಪ್ರದೇಶ ಎಂದಿಗೂ ಮುಚ್ಚುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಅಲ್ಲಿ ಭದ್ರತಾ ಪಡೆಗಳ ಉಪಸ್ಥಿತಿ ಇರಲಿಲ್ಲ. ಸುತ್ತಮುತ್ತಲಿನ ಕಾಡುಗಳಲ್ಲಿ ವಿದೇಶಿ ಭಯೋತ್ಪಾದಕರು ನುಸುಳುವ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಾದರೆ ಅಲ್ಲಿಗೆ ಹೋಗಲು ಪೊಲೀಸರ ಅನುಮತಿ ಪಡೆಯಲಿಲ್ಲ ಎಂದು ಸರಕಾರ ಏಕೆ ಹೇಳುತ್ತಿದೆ?
ಆ ಪ್ರದೇಶ ಗುಡ್ಡಗಾಡು ಮತ್ತು ಕಲ್ಲುಗಳಿಂದ ಕೂಡಿದೆ.ಲಕ್ಷಾಂತರ ಜನರು ಈ ಕಷ್ಟಕರವಾದ ಹಾದಿಗಳಲ್ಲಿ ಹೋಗಬೇಕಾದ ಪರಿಸ್ಥಿತಿಯಲ್ಲಿ, ಪ್ರಥಮ ಚಿಕಿತ್ಸೆ ಸೇರಿದಂತೆ ಪ್ರತಿಯೊಂದು ರೀತಿಯ ವ್ಯವಸ್ಥೆ ಇರಬೇಕಿತ್ತು. ಆದರೆ ಸರಕಾರ ವ್ಯರ್ಥ ವಾದ ಮಾಡುತ್ತಿದೆ.
ಆ ದಿನ ಪಹಲ್ಗಾಮ್‌ನಲ್ಲಿ 500 ಭದ್ರತಾ ಸಿಬ್ಬಂದಿ ಇದ್ದರು ಎಂದು ಗೃಹ ಸಚಿವರು ಹೇಳಿದ್ದಾರೆ ಎಂದು ವರದಿಯಾಗಿದೆ.
ಆದರೆ ಬೈಸರನ್‌ನಲ್ಲಿ ಯಾರೂ ಇರಲಿಲ್ಲ. ಸಿಆರ್‌ಪಿಎಫ್ ಮತ್ತು ಸೇನಾ ಶಿಬಿರಗಳು 5 ರಿಂದ 7 ಕಿ.ಮೀ. ದೂರದಲ್ಲಿದ್ದವು.
ಸಿಆರ್‌ಪಿಎಫ್ ಮೊದಲು ಪ್ರತಿಕ್ರಿಯಿಸಿತು. ಅದಕ್ಕೆ ಹೇಸರಗತ್ತೆ ಮಾಲಕರು ಮಾಹಿತಿ ಕೊಟ್ಟಿದ್ದರು.
ಪ್ರವಾಸಿ ಸ್ಥಳಗಳಿಂದ ದೂರವಿರುವುದು ಸೇನೆಯ ನೀತಿಯಾಗಿದೆ ಎಂದು ಸೇನೆ ತಿಳಿಸಿದೆ. ಈ ನೀತಿಯ ಬಗ್ಗೆ ಯಾವತ್ತಾದರೂ ಹೇಳಲಾಗಿದೆಯೇ? ಎಂದು ‘ದಿ ಹಿಂದೂ’ ಪತ್ರಕರ್ತೆ ವಿಜೇತಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಟೂರ್ ಆಪರೇಟರ್ ಪೊಲೀಸರಿಗೆ ತಿಳಿಸಲಿಲ್ಲ ಮತ್ತು ಜನರನ್ನು ತಾನಾಗಿಯೇ ಕರೆದುಕೊಂಡು ಹೋದರು ಎನ್ನುವ ಅಮಿತ್ ಶಾ ಅವರ ಹೇಳಿಕೆ ಬಾಲಿಶವೆನಿಸುತ್ತದೆ. ಒಂದು ವೇಳೆ ಪ್ರವಾಸ ನಿರ್ವಾಹಕರು ಮಾಹಿತಿ ನೀಡದೇ ಆಯೋಜಿಸಿದ್ದರೂ, ವಿಮಾನ ಬುಕಿಂಗ್, ಬಸ್‌ಗಳಲ್ಲಿ ಬರುವ ಜನರು, ವಾಹನಗಳು, ಜನಸಂದಣಿಯನ್ನು ನೋಡಿದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆಂದು ಅರ್ಥವಾಗುತ್ತಿರಲಿಲ್ಲವೇ?
ಒಂದು ಸಾವಿರಕ್ಕೂ ಹೆಚ್ಚು ಜನರು ಇಂತಹ ಕಡೆ ಹೋಗುತ್ತಿದ್ದಾರೆ ಎಂಬುದು ಕಾಶ್ಮೀರದಂತಹ ಅತಿ ಸೂಕ್ಷ್ಮ ಪ್ರದೇಶದಲ್ಲಿ ಗೊತ್ತಾಗದೆ ಇರುತ್ತದೆಯೇ? ಹೀಗೆ ಹೇಳಿ ಯಾರನ್ನು ಮೂರ್ಖರಾಗಿಸಲಾಗುತ್ತಿದೆ ?
ಬೈಸರನ್‌ಗೆ ಹೋಗುವ ದಾರಿಯಲ್ಲಿ ಯಾವುದೇ ಶಸ್ತ್ರಸಜ್ಜಿತ ಕಾವಲುಗಾರರು ಇರಲಿಲ್ಲ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಕೇಡರ್‌ಗೆ ಸೇರಿದ ನಾಲ್ವರು ನಿರಾಯುಧ ಕಾವಲುಗಾರರು ನಿಂತಿದ್ದರು ಎಂದು ವರದಿಯೊಂದು ಹೇಳುತ್ತದೆ. ಇವರು ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಾರೆ.
ಅಂದರೆ, 2,000 ಜನರ ಭದ್ರತೆಯನ್ನು ದಿನಗೂಲಿ ಮೇಲೆ ನೇಮಕಗೊಂಡ ನಾಲ್ಕು ಜನರಿಗೆ ವಹಿಸಿಕೊಡಲಾಗಿತ್ತು ಮತ್ತು ಈಗ ನೆಪಗಳನ್ನು ಹೇಳಲಾಗುತ್ತಿದೆ.
ಸಾರ್ವಜನಿಕರಿಗೆ ಮುಖಾಮುಖಿಯಾಗಿ ಹೇಳಲು ಸಾಧ್ಯವಾಗದಷ್ಟು ದೊಡ್ಡ ತಪ್ಪು ಸರಕಾರದಿಂದ ನಡೆದಿರಬೇಕು.ಸರಕಾರ ಈ ನಾಟಕ ನಿಲ್ಲಿಸಬೇಕಿದೆ ಮತ್ತು ಭದ್ರತಾ ಲೋಪ ಹೇಗೆ ಸಂಭವಿಸಿತು ಎಂಬುದರ ಕುರಿತು ಜನರು ಪ್ರಶ್ನೆಗಳನ್ನು ಕೇಳಬೇಕಿದೆ.
ಸತ್ಯವನ್ನು ಯಾರ ಹಿತಾಸಕ್ತಿಗಾಗಿ ಕೊಲೆ ಮಾಡಲಾಗುತ್ತಿದೆ?