ಒಲುಮೆ ಮತ್ತು ಹಕ್ಕು: ಕವಿಯ ತಳಮಳ
ಪು.ತಿ. ನ. ಅವರ ಹುಟ್ಟು ದಿನದ ಹಿನ್ನೆಲೆಯಲ್ಲಿ ಹೀಗೊಂದು ಕವಿ ಸ್ಮರಣೆ

ಅನೇಕ ಸಲ ಒಬ್ಬ ಕವಿಯ ಬಗ್ಗೆ ರೂಪಿತವಾಗುವ ಪೂರ್ವಾಗ್ರಹಗಳು, ಅವನ/ಳ ನಿಜವಾದ ಲೋಕದರ್ಶನ ಮತ್ತು ಸಮಾಜದರ್ಶನವನ್ನು ಮರೆಮಾಚುತ್ತವೆ. ಹಿರಿಯ ಕವಿಗಳಾದ ಪುತಿನ ಅವರ ಬರವಣಿಗೆಯಲ್ಲಿ ಹರಡಿಕೊಂಡಿರುವಂತೆ ಕಾಣುವ ಭಕ್ತಿ, ಕೃಷ್ಣಕೇಂದ್ರಿತ ಲೋಕ ಮತ್ತು ಸಂಸ್ಕೃತ ಪದಗಳು ಅವರ ದೇಶಭಕ್ತಿ, ಜನಪರತೆ ಮತ್ತು ದೀನಪರತೆಗಳ ಕಡೆ ಗಮನ ಹರಿಯದಂತೆ ಮಾಡಿವೆ. ಇದು ಕನ್ನಡ ವಿಮರ್ಶೆಯ ಅರಕೆಯೇ ವಿನಾ ಕವಿಯದಲ್ಲ. ಈ ಕವಿ ಲೋಕ, ಜೀವನ ಮತ್ತು ಸಮಾಜವನ್ನು ಒಟ್ಟಾಗಿ ನೋಡಿ ಹಲವು ಮೌಲಿಕವಾದ ಚಿಂತನೆಗಳನ್ನು ಕವಿತೆಯಾಗಿ ಕಟ್ಟಿದ್ದಾರೆ. ಪುತಿನರ ‘ಹಣತೆ’ ಸಂಕಲನದಿಂದ ‘ಶ್ರೀ ಹರಿಚರಿತೆ’ಯವರೆಗಿನ ಬರವಣಿಗೆಯ ಎಚ್ಚರದ ಓದು ‘ಹೊಸ ಪುತಿನ’ರನ್ನು ನಮಗೆ ತೋರಬಲ್ಲವು. ಪುತಿನರು ಬಹಳ ಹಿಂದೆ ಬರೆದ ಒಂದು ಕವಿತೆಯ ಮೂಲಕ ಅವರ ಜೀವಪರತೆಯನ್ನು ಅರಿಯುವ ಸಣ್ಣ ಪ್ರಯತ್ನ ಈ ಲೇಖನ.
‘ಒಲುಮೆ ಹೊನಲ ತಡೆಗಳು’, 1933ರಲ್ಲಿ ಪ್ರಕಟಗೊಂಡ ಪುತಿನ ಅವರ ಮೊದಲ ಕವನ ಸಂಕಲನ ‘ಹಣತೆ’ಯಲ್ಲಿರುವ ಕವಿತೆ. ಪ್ರೀತಿ ಎನ್ನುವ ಹೊಳೆಗೆ ಇರುವ ಅಡ್ಡಿಗಳು ಅಥವಾ ಅಡೆತಡೆಗಳು ಯಾವುವೆಂದು ಯೋಚಿಸುತ್ತ, ಅವುಗಳ ಸ್ವರೂಪವನ್ನು ಕಾಣಿಸುವ ಕವಿತೆಯು
‘‘ಒಲುಮೆಹೊನಲಿಗಣೆಗಳೆಷ್ಟು-
ಹರಿಯಬಿಡದ ತಡೆಗಳು!
ಹೊನಲ ತಡೆವುವೇನು ಹಿತದಿ!
ಆದರೇನು?- ತಡೆಗಳು!’’
ಎಂದು ಆರಂಭವಾಗುತ್ತದೆ. ತಂದೆ, ತಾಯಿ, ಸ್ನೇಹಿತರು, ಮಗ, ಹೆಂಡತಿ ಇತ್ಯಾದಿ, ಬಾಳಿನ ಕೊರತೆಗಳನ್ನು ಪೂರ್ಣಗೊಳಿಸುವ ಸಂಗತಿಗಳೆಲ್ಲವೂ ಪ್ರೀತಿಯ ಹೊನಲಿನ ಹರಿಯುವಿಕೆಗೆ ತಡೆಗಳು ಎನ್ನುವ ಕವಿ ಅದನ್ನು ಒಂದು ನಿದರ್ಶನದ ಮೂಲಕ ವಿಸ್ತರಿಸುತ್ತಾರೆ. ಜ್ವರದ ಬೇಗೆಯಿಂದ ರೋಗಿಯೊಬ್ಬ ನರಳುತ್ತಿದ್ದಾನೆ. ದಾಹದಿಂದ ಒಣಗಿದ ಗಂಟಲನ್ನು ತಣಿಸುವ ಹಣ್ಣನ್ನು ಅವನು ಬಯಸಿದ್ದಾನೆ. ‘‘ಅವನ (ರೋಗಿ) ಬಯಕೆ ರೂಪುಗೊಂಡು ಎನ್ನೊಳವಿತ ತೆರದೊಳು’’ ಎನ್ನುವಂತೆ ಕವಿತೆಯ ನಿರೂಪಕನ ಮಡಿಲಿನಲ್ಲಿ ಒಂದು ಹಣ್ಣಿತ್ತು. ‘ಎಂಥಾ ಮಗ’ ಎಂದು ಬೀಗಿ ನಲಿವ ತಾಯಿಯನ್ನು ನೆನಪಿಸಿಕೊಂಡು, ಕೇಳಿದಷ್ಟು ಬೆಲೆಯನ್ನು ತೆತ್ತು ಕೊಂಡ ಸೇಬು ಅದು. ರೋಗಿಗಾಗಿ ಇವನ ಹೃದಯ ತುಡಿದು ಹಣ್ಣಿನತ್ತ ಇವನ ಕೈ ಹೋಗುತ್ತದಾದರೂ ಅದೇ ಕ್ಷಣ ತಾಯಿಯ ನೆನಪು ಅವನನ್ನು ತಡೆಯುತ್ತದೆ. ಮನಸ್ಸು ‘ವರುಷಕ್ಕೊಮ್ಮೆ ನೋಡಹೋಗಿ ಬರಿಯ ಕೈಯ ತೋರಲೆ?’ ಎನ್ನುವ ತರ್ಕ ಹೂಡುತ್ತದೆ. ಕಿವಿಯಲ್ಲಿ ರೋಗಿಯ ಅಳಲು ಇರಿಯತೊಡಗಿ ಅವನು ಮತ್ತೆ ಮಡಿಲಿಗೆ ಕೈ ಹಾಕುತ್ತಾನೆ, ಆದರೆ ಮನಸ್ಸು ತಡೆಯುತ್ತದೆ. ಆಳಿಗೆ ಮೂರು ಕಾಸು ‘ಎಸೆದು’ ಆ ರೋಗಿಗೆ ಯಾವುದಾದರೂ ಹಣ್ಣು ತಂದುಕೊಡು ಎಂದು ಹೇಳಿ ಇವನು ‘ಮಡಿಲ ಹಣ್ಣ ಮರೆ’ಸುತ್ತಾನೆ. ಊರು ಸೇರಿ ತಾಯಿಯನ್ನು ಕಂಡು ಹಣ್ಣು ನೀಡಿ, ಅವಳ ಸಂತೋಷದಲ್ಲಿ ನಲಿಯುತ್ತಾನೆ. ‘ಅರಸ ಮೆಚ್ಚುವಂಥ’ ಹಣ್ಣನ್ನು ಇಬ್ಬರೂ ತಿನ್ನುತ್ತಾರೆ. ಆ ಕ್ಷಣ, ರೋಗಿಗೆ ಹಣ್ಣನ್ನು ಕೊಡಗೊಡದ ‘ಮೋಹ’ ಅವನ ಮನಸ್ಸಿನಿಂದ ಮಾಯವಾಗುತ್ತದಾದರೂ ಮರುಗಳಿಗೆಯಲ್ಲಿ ‘ಹಣ್ಣು ಸವಿಯೆ ಹೆಚ್ಚು ಹಕ್ಕು ರೋಗಿಗಿತ್ತು’ ಎನಿಸುತ್ತದೆ. ತಾಯಿಯು ಬಾಳಿಗೆ ಅರ್ಥವೀಯುತ್ತಾಳೆ ಎನ್ನುವುದೇನೋ ನಿಜವೇ, ಆದರೆ ಅದಕ್ಕೆ ಇದಿರಾಗಿ ‘ಯಾರದೋ ದುಃಖವನ್ನು ನನ್ನ ದುಃಖ ಎನ್ನಲಾರೆನಲ್ಲ’ ಅನ್ನುತ್ತದೆ ನಿರೂಪಕನ ಮನಸ್ಸು. ‘‘ಅವನ ಹಕ್ಕ ಕದ್ದೆ’’ನೆಂಬ ಭಾವ ಅವನನ್ನು ಇರಿಯತೊಡಗುತ್ತದೆ. ಪ್ರೇಮದ ಮೋಹವನ್ನು ಹರಿದುಕೊಂಡಾಗ ಮಮತೆಯ ಕಟ್ಟು/ತಡೆಯನ್ನು ಜಿಗಿಯಲು ಸುಲಭವಾಗುತ್ತಿತ್ತು, ಆಗ ರೋಗಿಯ ನೋವು ನನ್ನದೂ ಆಗುತ್ತಿತ್ತು ಎಂದು ಅವನ ಮನಸ್ಸು ಉಸುರಿ,
‘‘ಒಲುಮೆಹೊನಲಿಗಣೆಗಳೆಷ್ಟು-
ಹರಿಯಬಿಡದ ತಡೆಗಳು!
ಹೊನಲ ತಡೆವುವೆಷ್ಟು ಹಿತದಿ!
ಆದರೇನು? - ತಡೆಗಳು!’’ ಎಂದು ಕವಿತೆ ಕೊನೆಯಾಗುತ್ತದೆ.
*
ಆಶಯ ಮತ್ತು ಆಕೃತಿ ಎರಡೂ ಘನವಾಗಿ ಬೆರೆತ ಅಪರೂಪದ ಕವಿತೆಯಿದು. ಕಣ್ತಪ್ಪಿ ಅಥವಾ ಸಾರಾಸಗಟಾಗಿ ಓದಿದರೆ ಆರಂಭದ ಮತ್ತು ಕಡೆಯ ಸ್ಟ್ಯಾಂಜಾ ಒಂದೇ ಅನ್ನಿಸಿ, ಮೂರನೇ ಸಾಲಿನ ಒಂದು ಪದದಲ್ಲಿ ಕವಿ ತರಲು ಪ್ರಯತ್ನಿಸಿರುವ ಸೂಕ್ಷ್ಮವಾದ ಶಿಫ್ಟ್ ನಮ್ಮ ಗಮನಕ್ಕೆ ಬರದೆ ಹೋಗಬಹುದು. ಮೊದಲ ಸ್ಟ್ಯಾಂಜಾದಲ್ಲಿ ‘ಹೊನಲ ತಡೆವುವೇನು ಹಿತದಿ’ ಎನ್ನುವುದು ಕಡೆಯಲ್ಲಿ ‘ಹೊನಲ ತಡೆವುವೆಷ್ಟು ಹಿತದಿ’ ಎಂದಾಗಿದೆ. ‘ಏನು ಹಿತದಿ’ ಎಂದಾಗ ಅದರ ಬಗೆ ಏನು ಎಂಬುದನ್ನು ವಿವರಿಸುವ ನಿದರ್ಶನವಿದೆ; ‘ಎಷ್ಟು ಹಿತದಿ’ ಅನ್ನುವಾಗ ‘ಎಷ್ಟೊಂದು’ ಬಗೆಗಳು ಅನ್ನುವ ಪ್ರಮಾಣಸೂಚಕವೂ, ‘ಎಷ್ಟು ಹಿತ!’ ಅನ್ನುವ ಭಾವಸುಖ ಸೂಚಕತೆಯೂ ತೋರುತ್ತದೆ. ಇವೆರಡು ವ್ಯಾಪ್ತಿಯ ಒಳಗೆ ಕವಿತೆಯ ಚಲನೆಯಿದೆ.
ಕವಿತೆಯಲ್ಲಿನ ಘಟನೆಗಳು ನಮ್ಮ ಬದುಕಿನಲ್ಲಿಯೂ ನಡೆಯುತ್ತವೆ, ನಮ್ಮ ಆತ್ಮಸಾಕ್ಷಿಯನ್ನು ಕೆಣಕುತ್ತವೆ, ತಿವಿಯುತ್ತವೆ. ನಾವು ಅವನ್ನು ಸುಮ್ಮನೆ ದಾಟಿಕೊಂಡು ಹೋಗಿಬಿಡುತ್ತೇವೆ, ಕ್ರಮೇಣ ಇದು ನಮಗೆ ಅಭ್ಯಾಸವೂ ಆಗಿಬಿಡುತ್ತದೆ. ಅರೆಕ್ಷಣ ತಡೆದು ನೋಡಿದಾಗ ಮಾತ್ರ ಅಂತರಂಗದಲ್ಲಿ ಪ್ರಶ್ನೆಗಳೇಳುತ್ತವೆ ಮತ್ತು ಮನಸ್ಸಿನಲ್ಲಿ ಪ್ರಶ್ನೆಗಳನ್ನೆತ್ತುವ ಇಂತಹ ಕವಿತೆಯೂ ಸಾಧ್ಯವಾಗಬಹುದು!
ಹಣ್ಣನ್ನು ತಿನ್ನುವ ನಿಜವಾದ ಹಕ್ಕು ಇದ್ದದ್ದು ಯಾರಿಗೆ? ಅದು ಸಲ್ಲಬೇಕಾಗಿದ್ದು ಯಾರಿಗೆ? ಎಂದು ನೋಡಿದರೆ ಅದರ ಹಕ್ಕುದಾರ ರೋಗಿ ಎಂಬುದು ಯಾರಿಗೂ ತಿಳಿಯುತ್ತದೆ. ಆದರೆ ಮೋಹದ ಸ್ವರೂಪಗಳು ನಮ್ಮನ್ನು ಹಲಬಗೆಯಲ್ಲಿ ಕಟ್ಟಿಹಾಕಿ ಮನಸ್ಸು ನೂರಾರು ತರ್ಕಗಳನ್ನು ಕಟ್ಟುತ್ತದೆ. ಹಕ್ಕಿನ ಈ ಪ್ರಶ್ನೆ ನಮಗೆ ತಿಳಿಯದೆ ಹೋದರೆ ಸಂಬಂಧದ ಮಹತ್ವವೇ ಅರಿವಾಗುವುದಿಲ್ಲ ಎಂಬ ಜಿಜ್ಞಾಸೆಯನ್ನು ಕವಿತೆಯು ನಮ್ಮ ಮುಂದಿಡುತ್ತಿದೆ.
ಕವಿತೆಯಲ್ಲಿ ಕವಿ/ನಿರೂಪಕ ತನ್ನನ್ನು ‘ಕಳ್ಳ’ ಎಂದು ಕರೆದುಕೊಳ್ಳುತ್ತಾನೆ, ‘‘ಅವನ ಹಕ್ಕ ಕದ್ದೆನೆಂಬ ಭಾವವಿರಿಯೆತೆನ್ನನು’’ ಎನ್ನುತ್ತಾರೆ. ತಾಯಿಯು ಪ್ರೀತಿಯನ್ನು ಸುರಿಸುತ್ತ ನನ್ನ ಬಾಳಿಗೆ ಅರ್ಥ ಕೊಡುತ್ತಾಳೆ. ತಾಯಿಯ ಸುಖವನ್ನು ಅನುಭವಿಸಬಲ್ಲೆ, ಅವಳ ದುಃಖವು ನನ್ನ ದುಃಖ ಎನ್ನುತ್ತೇನೆ. ಆದರೆ ಅವಳ ಪ್ರೀತಿಯ ಮೋಹವು ನನ್ನನ್ನು ತಡೆದುಬಿಟ್ಟಿದ್ದರಿಂದಾಗಿ ರೋಗಿಯ ಹಕ್ಕನ್ನು ಕದ್ದೆ ಎನ್ನುವ ಭಾವವು ನನ್ನನ್ನು ಚುಚ್ಚುತ್ತಿದೆ ಎನ್ನುತ್ತಾರೆ. ರೋಗಿಯು ಇವನಿಂದ ಹಣ್ಣನ್ನೇನೂ ಕೇಳಿಲ್ಲ ಅಥವಾ ಅವನಿಗೆ ಇವನ ಬಳಿ ಹಣ್ಣಿದೆ ಎಂಬುದೂ ತಿಳಿದಿಲ್ಲ. ಆದರೆ ಎಲ್ಲಿಯವರೆಗೆ ನಾನು ನನ್ನ ಕಳ್ಳತನವನ್ನು ಗುರುತಿಸಲು ಆಗುವುದಿಲ್ಲವೋ ಅಲ್ಲಿವರೆಗೆ ಮತ್ತೊಬ್ಬನ/ಳನ್ನು ಇನ್ನಷ್ಟು ಬಡತನಕ್ಕೆ ದೂಡುತ್ತಿರುತ್ತೇನೆ ಎನ್ನುವಲ್ಲಿಗೆ ಕವಿತೆಯು ನಮ್ಮ ಆಲೋಚನೆಯನ್ನು ವಿಸ್ತರಿಸುತ್ತದೆ. ಈ ತಾತ್ವಿಕತೆಯನ್ನು ಹೀಗೆ ಬೆಳೆಸಬಹುದೇನೋ: ಕಪ್ಪುಹಣದಿಂದ ಅಥವಾ ಯಾವಯಾವುದೋ ಮಾರ್ಗದಿಂದ ನೂರಾರು ಎಕರೆ ಭೂಮಿ ಹೊಂದಿರುವವರನ್ನು/ಮಾಡಿಕೊಂಡವನನ್ನು ನಮ್ಮ ಸಮಾಜ ಕಳ್ಳ ಎನ್ನುವುದಿಲ್ಲ, ಬೇರೆಯವರ ತಟ್ಟೆಯ ತುಂಡು ರೊಟ್ಟಿಗೆ, ಹಣ್ಣಿಗೆ ಕೈ ಹಾಕುವವನನ್ನು ಕಳ್ಳ ಎನ್ನುತ್ತದೆ. ಯಾಕೆಂದರೆ ಇದು ಸುಲಭ. ಹಾಗಾದರೆ ರೊಟ್ಟಿ/ಹಣ್ಣಿಗೆ ಕೈ ಹಾಕಿದವನ/ಳನ್ನು ಕಳ್ಳ/ಳ್ಳಿ ಅನ್ನಬೇಕಾಗಿಲ್ಲವೆ? ಅನ್ನುವ ಪ್ರಶ್ನೆ ಏಳುತ್ತದೆ. ಇಲ್ಲಿ ಸಮಸ್ಯೆ ಅದಲ್ಲ, ಬದಲಿಗೆ ನೂರಾರು ಎಕರೆಯನ್ನು ತನ್ನದಾಗಿ ಮಾಡಿಕೊಂಡು ಎಷ್ಟೊಂದು ಜನರ ಹಕ್ಕನ್ನು ವಂಚಿಸಿರುವವನನ್ನು ನಾನು ‘ಕಳ್ಳ’ ಎಂದು ಗುರುತಿಸುವುದಿಲ್ಲ ಅನ್ನುವುದು ಸಮಸ್ಯೆ ಮತ್ತು ಪ್ರಶ್ನೆ. ಬಹುಶಃ, ಈ ‘ಕಳ್ಳ’ನನ್ನು ನಾವು ಗುರುತಿಸಿದ್ದೇ ಆದರೆ ಹಸಿವಿನಿಂದ ಬೇರೆಯವರ ತಟ್ಟೆಗೆ ಕೈ ಹಾಕುವ ಕಳ್ಳ ಸಮಾಜದಲ್ಲಿ ಇರುವುದಿಲ್ಲವೇನೋ. ಎಲ್ಲಿವರೆಗೆ ಒಬ್ಬ ಹತ್ತಾರು ಎಕರೆ ಭೂಮಿಯಲ್ಲಿ ಬೇಕಾದಷ್ಟು ಬೆಳೆದು ಮಾರಿ ಬದುಕುತ್ತಾನೆ/ಳೆ ಅಥವಾ ನಾಲ್ಕು ಮನೆ ಕಟ್ಟುವಷ್ಟು ಜಾಗದಲ್ಲಿ ಒಂದು ಮನೆ ಕಟ್ಟಿ ಮತ್ತೊಬ್ಬರ ಹಕ್ಕನ್ನು ವಂಚಿಸುತ್ತಿರುತ್ತಾನೆ/ಳೆ
ಅಲ್ಲಿವರೆಗೆ ಸಮಾಜದಲ್ಲಿ ಸಮಾನ ಅವಕಾಶಗಳು ಇರಲು ಹೇಗೆ ಸಾಧ್ಯ? ಎಂಬ ಪ್ರಶ್ನೆಯವರೆಗೂ ಈ ಕವಿತೆ ನಮ್ಮನ್ನು ಕರೆದೊಯ್ಯುತ್ತದೆ. ಹಾಗಾದರೆ ‘ಕಳ್ಳತನ’ ಎಂಬುದನ್ನು ಇದು ಸಮರ್ಥಿಸಿದಂತಾಗುವುದಿಲ್ಲವೆ? ಎಂಬ ಪ್ರಶ್ನೆ ಇಲ್ಲಿ ಏಳುತ್ತದೆ. ಈ ಕಳ್ಳತನ ನಮಗೆ ಯಾಕೆ ಕಳ್ಳತನ ಅನ್ನಿಸುತ್ತದೆಯೆಂದರೆ ‘ಇನ್ನೊಂದು’ ಕಳ್ಳತನ ನಮಗೆ ಕಳ್ಳತನ ಅನ್ನಿಸದೆ ಇರುವುದರಿಂದ ಮತ್ತು, ಆ ‘ಇನ್ನೊಂದು’ ಕಳ್ಳತನದಿಂದಲೇ ಇತರ ಎಲ್ಲ ಕಳ್ಳತನಗಳು ಹುಟ್ಟಿವೆ ಎಂಬುದು ತಿಳಿಯದೆ ಇರುವುದರಿಂದ.
ಚೋದ್ಯ ಅಂದರೆ ಈ ಸಮಾಜ ಹಣವಂತರನ್ನು ‘ಶ್ರೀಮಂತ’ ಎಂದು ಆದರಿಸುತ್ತದೆ, ಇವರಿಗಾಗಿ ಕಾನೂನು, ಕೋರ್ಟು ಇದೆ. ಅಷ್ಟೆಲ್ಲ ಸಂಪತ್ತನ್ನು ಇಟ್ಟುಕೊಂಡು ನಾನು ಮತ್ತೊಬ್ಬರ ಹಸಿವನ್ನು, ಸುಖಕರ ಬದುಕನ್ನು ಕದ್ದಿದ್ದೇನೆ ಎಂಬ ಆಲೋಚನೆಯೂ ನಮ್ಮಲ್ಲಿ ಬರದೆ ಇರುವ ‘ವ್ಯವಸ್ಥೆ’ಯ ಕೋಟೆಗಳನ್ನು ನಿರ್ಮಿಸಿದ್ದೇವೆ. ಈ ‘ಹಿಂಸೆ’ಯನ್ನು ಎಲ್ಲಿಯವರೆಗೆ ನಾವು ಗುರುತಿಸಲು ಸಾಧ್ಯವಿಲ್ಲವೋ ಅಲ್ಲಿಯವರೆಗೆ ನಾವು ಅದರ ಭಾಗವಾಗಿ ಇರುತ್ತೇವೆ. ಹತ್ತಾರು ಅಥವಾ ನೂರಾರೆಕರೆ ಭೂಮಿಯನ್ನು ಒಬ್ಬರು ಹೊಂದಿರುವುದು ಕಾನೂನಾತ್ಮಕವಾಗಿ ಸರಿ ಇರಬಹುದು ಆದರೆ ನೈತಿಕವಾಗಿ ಇದು ಸರಿಯೆ? ಎಂಬ ಪ್ರಶ್ನೆ ಬಂದಾಗ, ಯಾರೋ ಒಬ್ಬನಲ್ಲಿ ನೂರೆಕರೆ ಇರಬೇಕೆಂದರೆ ಇನ್ನೆಷ್ಟೋ ಜನ ಭೂರಹಿತರಾಗಿರಬೇಕಾಗುತ್ತದೆ. ಆಗ ಸಮಾನ ಅವಕಾಶಗಳು ಸಾಧ್ಯವೇ ಆಗುವುದಿಲ್ಲ. ಇದು ಹಕ್ಕಿನ ಬಹುದೊಡ್ಡ ಪ್ರಶ್ನೆ ಎಂಬ ಸತ್ಯವನ್ನೂ ನಾವು ಮನಗಾಣಬೇಕು. ಇದನ್ನೇ ಕವಿ ‘ಅವನ ಹಕ್ಕ ಕದ್ದೆ’ ಎನ್ನುತ್ತಿರುವುದು.
‘ತಾಯಿಗೆ ಹಣ್ಣು ಕೊಟ್ಟಿದ್ದರಲ್ಲಿ ತಪ್ಪೇನಿದೆ? ನ್ಯಾಯವಾಗಿ ದುಡಿದ ಹಣದಲ್ಲಿ ತಾಯಿಗೆ ಅಂತ ಉಳಿಸಿ ತಂದಿದ್ದರಲ್ಲಿ ತಪ್ಪೆಲ್ಲಿದೆ?’ ಇತ್ಯಾದಿ ಪ್ರಶ್ನೆಗಳನ್ನು ನಾವು ಕೇಳಬಹುದು. ಒಬ್ಬನಿಗೆ ನಿಜವಾಗಿ ಸೇರಬೇಕಾದದ್ದು ಅನ್ನುವಂತಹದ್ದನ್ನು ನಾನು ಇಟ್ಟುಕೊಂಡಾಗ ಅಥವಾ ಅಗತ್ಯಕ್ಕಿಂತ ಹೆಚ್ಚಿನದ್ದನ್ನು ನಾನು ಇಟ್ಟುಕೊಂಡಿದ್ದಾಗ ಅದು ಇನ್ನೊಬ್ಬರ/ಎಷ್ಟೊಂದು ಜನರ ಹಕ್ಕನ್ನು ಕಸಿಯುತ್ತಿದೆ ಎಂದು ನಮಗೆ ಅನ್ನಿಸದೆ ಹೋದರೆ ಅಂತಹ ಸಮಾಜ ನೈತಿಕವಾಗಿ ಸದೃಢವಾಗಿ ಇರಲು ಸಾಧ್ಯವಿಲ್ಲ ಎನ್ನುವ ಆಯಾಮವೂ ಇದರೊಳಗಿದೆ. ‘ಅಸ್ಪಶ್ಯತೆ’ ಅಂದರೆ ಇದೇ ತಾನೆ?: ಮತ್ತೊಬ್ಬನ ಎಲ್ಲ ಅವಕಾಶಗಳನ್ನೂ ವಂಚಿಸುವುದು; ನಾನು ಮಾಡಬೇಕಾದ ಕೆಲಸಗಳನ್ನು ಇನ್ನೊಬ್ಬರಿಂದ ಮಾಡಿಸುವುದು. ಎಲ್ಲಿಯವರೆಗೆ ನನ್ನ ಕೆಲಸಗಳನ್ನು ನಾನೇ ಮಾಡಿಕೊಳ್ಳುತ್ತೇನೆಯೋ ಅಲ್ಲಿಯವರೆಗೆ ಮತ್ತೊಬ್ಬರ ಹಕ್ಕನ್ನು ಕಸಿಯುವ ಸಾಧ್ಯತೆ ಇರುವುದಿಲ್ಲ ಎಂಬ ಗಾಂಧಿ ಚಿಂತನೆ ಹೇಳಿದ್ದು ಇದೇ ತಾನೆ?
‘ಹಕ್ಕ’ನ್ನು ತಪ್ಪು ಜಾಗದಲ್ಲಿಟ್ಟು ಅಥವಾ ತಪ್ಪು ಒತ್ತು ಕೊಟ್ಟು ನೋಡಿದ್ದರಿಂದಾಗಿ ಕವಿಗೆ ತಾಯಿಯ ಪ್ರೀತಿಯೇ ಹೆಚ್ಚು ಅನ್ನಿಸಿತು. ಪ್ರೇಮದ ಈ ‘ಮೋಹ’ವನ್ನು ಕಳಚಿದ ಕೂಡಲೇ ತಾನು ಮಮತೆಯೆಂಬ ತಡೆಗೋಡೆಯನ್ನು ಹಾರಲು ಸುಲಭವಾಗುತ್ತಿತ್ತು ಮತ್ತು ಆಗ ರೋಗಿಯ ನೋವು ನನ್ನ ನೋವೇ ಎಂದು ಭಾವಿಸಲು ಸಾಧ್ಯವಾಗುತ್ತಿತ್ತು ಎನ್ನುವುದು ಕವಿ ಮತ್ತು ಕವಿತೆಯ ನಿಲುವು.
ಕೊನೆ ಮಾತು: ದೇವಸ್ಥಾನದಲ್ಲಿ ಚಿನ್ನದ ಕಿರೀಟ, ಹಾರಗಳು, ರೇಷ್ಮೆ ವಸ್ತ್ರಗಳನ್ನುಟ್ಟ ದೇವರನ್ನು ಎಲ್ಲಿಟ್ಟು ನೋಡುವುದು?