ಹೆಚ್ಚುತ್ತಿರುವ ಗುಂಪು ಹಲ್ಲೆ, ಹತ್ಯೆ ಘಟನೆಗಳೂ... ಪತ್ರಕರ್ತರ ಮೇಲೆ ಜರಗುವ ಪೊಲೀಸ್ ಕ್ರಮಗಳೂ...
ಇತ್ತೀಚೆಗೆ ಗುಂಪು ಹಲ್ಲೆ, ಹತ್ಯೆ ಘಟನೆಗಳು ಒಂದೇ ಸಮನೆ ಹೆಚ್ಚುತ್ತಿವೆ. ಆದರೆ ಇದನ್ನು ವರದಿ ಮಾಡುವ ಪತ್ರಕರ್ತರ ಮೇಲೆಯೇ ಪೊಲೀಸರು ಕ್ರಮ ಜರಗಿಸುತ್ತಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತ್ತೆ ಪತ್ರಕರ್ತರ ವಿರುದ್ಧವೇ ಎಫ್‌ಐಆರ್ ಆಗಿದೆ. ಗುಂಪು ಹಲ್ಲೆಯ ಸುಳ್ಳು ಆರೋಪದ ಕಾರಣ ನೀಡಿ ಪೊಲೀಸರು ಬಿಹಾರ ಮೂಲದ ಯೂಟ್ಯೂಬ್ ಚಾನೆಲ್ ಒಂದರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುಂಪು ಹಲ್ಲೆ, ಹತ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್ ಪೊಲೀಸರಿಗೆ ವ್ಯಾಪಕವಾದ ನಿರ್ದೇಶನಗಳನ್ನು ನೀಡಿದೆ. ಹಾಗೆಯೇ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೂ ಇಂತಹ ಪ್ರಕರಣಗಳನ್ನು ಎಲ್ಲ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಮಾಡುವಂತೆ ಸೂಚಿಸಿದೆ. ಗುಂಪು ಹಲ್ಲೆ, ಹತ್ಯೆಯಂಥ ಪ್ರಕರಣಗಳಲ್ಲಿ ಭಾಗಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
ಹಾಗಾದರೆ, ಪತ್ರಕರ್ತರು ಗುಂಪು ಹಲ್ಲೆ, ಹತ್ಯೆ ಎಂಬುದನ್ನು ಉಲ್ಲೇಖಿಸಲು ಯಾವ ಹೇಳಿಕೆಗಳನ್ನು ನಂಬಬೇಕು ಎಂಬ ಪ್ರಶ್ನೆ ಈಗ ಏಳುತ್ತದೆ.
ಜುಲೈ 9ರಂದು ‘ಟೆಲಿಗ್ರಾಫ್’ ಮತ್ತು ‘ದಿ ಹಿಂದೂ’ ಪತ್ರಿಕೆಗಳಲ್ಲಿ ಬಂದಿರುವ ವರದಿಯು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಮಾಡಿರುವ ಒಂದು ಆರೋಪದ ಬಗ್ಗೆ ಇದೆ.
ಬಿಜೆಪಿ ಸಂಸದ ಹಾಗೂ ಕೇಂದ್ರ ಮಂತ್ರಿ ಶಂತನು ಠಾಕೂರ್ ಭಾರತ-ಬಾಂಗ್ಲಾ ಗಡಿಯಲ್ಲಿ ಬೀಫ್ ಸಾಗಣೆಯ ಅವಕಾಶಕ್ಕಾಗಿ ಗಡಿ ಭದ್ರತಾ ಪಡೆಗೆ ಸೂಚಿಸುವ ಫಾರ್ಮ್ ಅನ್ನೇ ತಮ್ಮ ಅಧಿಕೃತ ಲೆಟರ್‌ಹೆಡ್‌ನಲ್ಲಿ ಮುದ್ರಿಸಿ ಪಾಸ್ ರೀತಿಯಲ್ಲಿ ನೀಡುತ್ತಿರುವ ಬಗ್ಗೆ ಮಹುವಾ ಆರೋಪಿಸಿದ್ದಾರೆ. ಅವರು ಆರೋಪಿಸಿರುವ ಪ್ರಕರಣದಲ್ಲಿ 3 ಕೆ.ಜಿ. ಬೀಫ್ ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಇದನ್ನು ಕಳ್ಳಸಾಗಣೆೆ ಎಂದೇ ಮಹುವಾ ಆರೋಪಿಸಿದ್ದಾರೆ. ಠಾಕೂರ್ ಕೂಡ ಇದನ್ನು ಒಪ್ಪಿಕೊಂಡಿದ್ದು, ಯಾವುದೇ ಕಳ್ಳಸಾಗಣೆದಾರರಿಗೆ ಇದಕ್ಕಾಗಿ ಅನುಮತಿ ನೀಡುವಂತೆ ಸೂಚಿಸಿಲ್ಲ ಎಂದಿದ್ದಾರೆ.
ಭಾರತ-ಬಾಂಗ್ಲಾ ಗಡಿಯಲ್ಲಿ ಎರಡೂ ಕಡೆಯಿಂದ ಬಂದುಹೋಗುವವರು ಸಾಗಿಸುವ ಸರಂಜಾಮುಗಳ ಪರಿಶೀಲನೆ ನಡೆಯುತ್ತದೆ. ಯಾವುದರ ಸಾಗಣೆಗೆ ಅನುಮತಿ ನೀಡಬೇಕೆಂಬುದನ್ನು ಗ್ರಾಮ ಪಂಚಾಯತ್ ಮೊದಲೇ ಸೂಚಿಸಿರುತ್ತದೆ. ಟಿಎಂಸಿ ಕೌನ್ಸಿಲರ್ ಕೂಡ ಬೀಫ್ ಸಾಗಾಟಕ್ಕೆ ಅನುಮತಿ ನೀಡಿರುವ ಬಗ್ಗೆ ಶಂತನು ಠಾಕೂರ್ ಹೇಳಿಕೆ ಕೊಟ್ಟಿದ್ದಾರೆ.
ನಿಮಗೆ ನೆನಪಿರಬಹುದು.
ಚುನಾವಣಾ ಬಾಂಡ್ ಹಗರಣ ಸುದ್ದಿಯಲ್ಲಿದ್ದಾಗ, ಬೀಫ್ ರಫ್ತು ಮಾಡುವ ಕಂಪೆನಿಯಿಂದಲೇ ಬಿಜೆಪಿ 2 ಕೋಟಿ ರೂ. ದೇಣಿಗೆ ತೆಗೆದುಕೊಂಡದ್ದು ಬಯಲಾಗಿತ್ತು.
ಬಂಗಾಳದಲ್ಲಿ ಬಿಜೆಪಿ ನಾಯಕ ಕೂಡ ಬೀಫ್ ಸಾಗಾಟಕ್ಕೆ ಅನುಮತಿ ನೀಡಬಹುದಾದಷ್ಟು ಮಟ್ಟಿಗೆ ಅದೊಂದು ಸಾಮಾನ್ಯ ವಿಚಾರ. ಆದರೆ ಬೇರೆ ರಾಜ್ಯಗಳಲ್ಲಿ ಬೀಫ್ ಸಾಗಾಟವನ್ನು ವಿರೋಧಿಸುವವರು ಯಾರನ್ನು ಬೇಕಾದರೂ ತಡೆದು ಹಲ್ಲೆ ನಡೆಸಿ ಕೊಲ್ಲುವ ಕೆಲಸವನ್ನು ಅವರು ಗೋರಕ್ಷಣೆ ಎಂಬ ಹೆಸರಿನಲ್ಲಿ ಮಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಇಂತಹ ಅದೆಷ್ಟೋ ಘಟನೆಗಳು ದೇಶಾದ್ಯಂತ ನಡೆದುಹೋಗಿವೆ. ಈಗ ಜೂನ್ 4ರ ನಂತರವಂತೂ ದೇಶಾದ್ಯಂತ ಒಂದೇ ಸಮನೆ ಗುಂಪು ಹಲ್ಲೆ, ಹತ್ಯೆ ಘಟನೆಗಳು ವರದಿಯಾಗುತ್ತಿವೆ.
ಅವುಗಳ ಬಗ್ಗೆ ನೋಡುವ ಮೊದಲು ಹಿಂದಿನ ಕೆಲವು ಘಟನೆಗಳನ್ನು ಗಮನಿಸುವುದಾದರೆ,
2018ರ ಜೂನ್‌ನಲ್ಲಿ ಯುಪಿಯ ಹಾಪುರ್‌ನಲ್ಲಿ ಗೋಹತ್ಯೆ ಶಂಕೆಯಿಂದ ಖಾಸಿಂ ಖುರೇಷಿ ಎಂಬ ಯುವಕನನ್ನು ಗುಂಪೊಂದು ಕೊಂದಿದ್ದ ಪ್ರಕರಣದಲ್ಲಿ 10 ಮಂದಿಗೆ ಜೀವಾವಧಿ ಶಿಕ್ಷೆಯಾಗಿತ್ತು.
ಸಾವು ಗುಂಪು ಹಲ್ಲೆಯಿಂದ ಆಗಿತ್ತು. ಆದರೆ ಪೊಲೀಸರು ಮೋಟರ್ ಸೈಕಲ್ ಅಪಘಾತದಿಂದ ಸಾವು ಸಂಭವಿಸಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದು ಬಯಲಾಗಿತ್ತು.
ಹಾಪುರ್ ಘಟನೆ ಬಗ್ಗೆ ಬರೆಯುವಾಗ ಗುಂಪು ಹತ್ಯೆ ಎಂದೇ ಪತ್ರಕರ್ತರು ಬರೆದಿದ್ದರು. ಪೊಲೀಸರ ಹೇಳಿಕೆ ಆಧರಿಸಿ ಅವರು ಅಪಘಾತ ಎಂದು ಬರೆಯಬಹುದಾಗಿತ್ತು.
ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋದಾಗ, ಗುಂಪು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿ ನೀಡಲಾಗಿರುವ ನಿರ್ದೇಶನದ ಅನುಸಾರ ಈ ಪ್ರಕರಣದ ತನಿಖೆ ಆಗಬೇಕೆಂದು ಸೂಚಿಸಿತ್ತು.
ಕಡೆಗೆ ಇದೇ ಮಾರ್ಚ್‌ನಲ್ಲಿ 10 ಆರೋಪಿಗಳ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆ ಪ್ರಕಟವಾಯಿತು. ತೀರ್ಪು ಬರುವ ಹೊತ್ತಿಗೆ 6 ವರ್ಷಗಳೇ ಕಳೆದಿದ್ದವು.
ಹಾಪುರ್ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ, ಪೊಲೀಸ್ ತನಿಖೆ ಸಂಬಂಧ ಅನೇಕ ಪ್ರಶ್ನೆಗಳು ಎದ್ದಿದ್ದವು. ಗುಂಪು ಹಲ್ಲೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ಸೂಚನೆಗಳ ಪಾಲನೆಯಾಗಿಲ್ಲ ಎಂಬುದು ಬಹಿರಂಗವಾಗಿತ್ತು. ಸುಪ್ರೀಂ ಕೋರ್ಟ್‌ನ ನಿರ್ದೇಶನವಿಲ್ಲದೆ ಹೋಗಿದ್ದರೆ ಈ ಪ್ರಕರಣ ಬೇರೆಯದೇ ಸ್ವರೂಪ ಪಡೆದು ಮುಚ್ಚಿಹೋಗುತ್ತಿತ್ತು.
ಇನ್ನು ಯುಪಿಯ ಶಾಮ್ಲಿಯಲ್ಲಿನ ಪ್ರಕರಣಕ್ಕೆ ಬರುವುದಾದರೆ, ಅಲ್ಲಿ ಗುಂಪು ಹಲ್ಲೆ ಪ್ರಕರಣ ನಡೆದಿರಲಿಲ್ಲ ಎಂಬುದು ಪೊಲೀಸರ ಹೇಳಿಕೆ.
ಕುಟುಂಬದವರು, ಮತ್ತಿತರರ ಹೇಳಿಕೆ ಮೇರೆಗೆ ಪತ್ರಕರ್ತರು ಹಾಗೆ ಹೇಳಿದ್ದರು. ಆದರೆ, ಒಂದು ವೇಳೆ ಇಂತಹ ಪ್ರಕರಣ ನಡೆದಿದ್ದರೆ ಅದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಪತ್ರಕರ್ತರ ಮೇಲೆ ಎಫ್‌ಐಆರ್ ಹಾಕಲಾಗಿದೆ.
ಶಾಮ್ಲಿಯ ಪ್ರಕರಣದಲ್ಲಿ ಯೂಟ್ಯೂಬ್ ಚಾನೆಲ್ ವಿರುದ್ಧ ಕೇಸ್ ದಾಖಲಿಸಿರುವ ಪೊಲೀಸರ ಪ್ರಕಾರ, ಅದು ಸುಳ್ಳು ಸುದ್ದಿ ಹರಡಿತ್ತು. ಆ ಚಾನೆಲ್ ಬಿಹಾರದ ಪತ್ರಕರ್ತ ಸದಫ್ ಖಮ್ರಾನ್ ಅವರದ್ದಾಗಿದೆ. ಹತ್ಯೆಯಾದವನ ಕುಟುಂಬದವರ ಹೇಳಿಕೆ ಮತ್ತು ಎಫ್‌ಐಆರ್ ಆಧರಿಸಿ ವರದಿ ಮಾಡಿರುವುದಾಗಿ ಸದಫ್ ಹೇಳುತ್ತಾರೆ.
ಈ ಎಫ್‌ಐಆರ್‌ಗೂ ಮೊದಲು ಪೊಲೀಸರು ಜುಲೈ 6ರಂದು ಇನ್ನೂ ಒಂದು ಎಫ್‌ಐಆರ್ ಹಾಕಿದ್ದರು.
ಅದರಲ್ಲಿ ಪತ್ರಕರ್ತರಾದ ಝಾಕೀರ್ ಅಲಿ ತ್ಯಾಗಿ ಹಾಗೂ ವಸೀಮ್ ಅಕ್ರಂ ತ್ಯಾಗಿ ಅಲ್ಲದೆ ಇನ್ನೂ ಮೂವರನ್ನು ಹೆಸರಿಸಲಾಗಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ್ದ ಆರೋಪದಲ್ಲಿ ಇವರ ವಿರುದ್ದ ಎಫ್‌ಐಆರ್ ಹಾಕಲಾಗಿತ್ತು.
ಪತ್ರಕರ್ತರ ವಿರುದ್ಧ ಎಫ್‌ಐಆರ್ ಹಾಕಿರುವುದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ಕ್ರಿಮಿನಲ್ ಕಾನೂನಿನ ದುರುಪಯೋಗ ಎಂದು ಅಭಿಪ್ರಾಯ ಪಡಲಾಗಿದೆ.
ಎಫ್‌ಐಆರ್ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.
ಶಾಮ್ಲಿ ಘಟನೆ ಜುಲೈ 4ರಂದು ನಡೆದದ್ದು.
ಫಿರೋಝ್ ಹತ್ಯೆ ಆರೋಪದಲ್ಲಿ ಪೊಲೀಸರು ಪಿಂಕಿ, ಪಂಕಜ್, ರಾಜೇಂದ್ರ ಮತ್ತವರ ಜೊತೆಗಾರರ ವಿರುದ್ಧ ಕೇಸ್ ದಾಖಲಿಸಿರುವುದಾಗಿ ವರದಿಗಳಿವೆ.
ಗುಂಪು ಹತ್ಯೆ ಅಲ್ಲವೆಂದು ಪೊಲೀಸರು ಹೇಳುತ್ತಿದ್ದರೆ, ಗುಂಪು ಹತ್ಯೆ ಎಂಬುದು ಕೇಳಿಬಂದಿರುವ ಆರೋಪ.
ಪತ್ರಕರ್ತ ಉಮರ್ ರಶೀದ್ ಕೂಡ ಶಾಮ್ಲಿ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಫಿರೋಝ್‌ನನ್ನು ಮನೆಗೆ ಕರೆದುಕೊಂಡು ಬಂದಾಗ ಆತನ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು ಮತ್ತು ಕೆಲವೇ ಸಮಯದಲ್ಲಿ ಆತನ ಪ್ರಾಣವೂ ಹೋಯಿತು. ಪೋಸ್ಟ್ ಮಾರ್ಟಮ್ ವರದಿ ಪ್ರಕಾರ, ಆತನ ದೇಹದ ಮೇಲೆ ಯಾವ ಗಾಯಗಳೂ ಇರಲಿಲ್ಲ. ಹಾಗಾದರೆ ಸಾವು ಸಂಭವಿಸಿದ್ದು ಹೇಗೆ?
ಇನ್ನು ಸಾವಿಗೀಡಾದವನ ಕುಟುಂಬದವರು ಹೇಳಿರುವುದರ ಆಧಾರದಲ್ಲಿ ವರದಿ ಮಾಡುವುದು ತಪ್ಪೆ? ಅವರ ಹೇಳಿಕೆಗಳನ್ನು ಆಧರಿಸಿ ವರದಿ ಮಾಡಿದವರ ಮೇಲೆ ಎಫ್‌ಐಆರ್ ಹಾಕಬಹುದೇ?
ಇವು ಈಗ ಕೇಳಬೇಕಿರುವ ಪ್ರಶ್ನೆಗಳು.
ಜೂನ್‌ನಲ್ಲಿ ಅಲೀಗಡದಲ್ಲಿ ಒಂದು ಘಟನೆ ನಡೆಯಿತು. ಅಲ್ಲಿಯೂ, ನಡೆದದ್ದು ಗುಂಪುಹಲ್ಲೆಯೇ ಅಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ. ಹಲ್ಲೆ ನಡೆಸಿದವನ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ‘ಸಂಸ್ಕಾರಿ’ ಜನರನ್ನು ರಕ್ಷಿಸಲು ಪೊಲೀಸರು ಸುಲಭ ಉಪಾಯ ಹುಡುಕಿದ್ದಾರೆ.
ಹಾಪುರ್ ಘಟನೆಯಲ್ಲಿ 6 ವರ್ಷದ ಬಳಿಕವಾದರೂ ಸತ್ಯ ಸಾಬೀತಾಗಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ. ಇದನ್ನು ನಿದರ್ಶನವಾಗಿಟ್ಟುಕೊಂಡರೆ, ಶಾಮ್ಲಿ ಮತ್ತು ಅಲೀಗಡದಲ್ಲಿ ನಡೆದಿರುವುದೇನು ಎಂಬುದನ್ನು ಗ್ರಹಿಸಬಹುದು.
ಹಾಪುರ್ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದವರ ಹೆಸರುಗಳು: ಯುಧಿಷ್ಠಿರ್, ರಾಕೇಶ್, ಕಾನು, ಸೋನು, ಮಾಂಗೇರಾಂ, ರಿಂಕು, ಹರಿಓಂ, ಮನೀಶ್, ಲಲಿತ್ ಹಾಗೂ ಕರಣ್‌ಪಾಲ್.
ಆದರೆ ಈ ಇಡೀ ಪ್ರಕರಣಕ್ಕಾಗಿ ಕೋರ್ಟ್‌ನಲ್ಲಿ ಹೋರಾಡುತ್ತ ಖಾಸಿಂ ಕುಟುಂಬ ಆರ್ಥಿಕವಾಗಿ ಜರ್ಝರಿತವಾಗಿ ಹೋಗಿದೆ. ಜಮೀನನ್ನೂ ಅವರು ಮಾರಿಕೊಳ್ಳಬೇಕಾಯಿತು. ತಮ್ಮ ಜೀವವನ್ನೂ ಅವರು ಅಪಾಯಕ್ಕೊಡ್ಡಿಕೊಂಡಿದ್ದರು.
ಪೊಲೀಸರು ಎಂಥ ಪ್ರಮಾದ ಎಸಗಬಲ್ಲರು ಎಂಬುದಕ್ಕೆ ಹಾಪುರ್ ಘಟನೆ ಒಂದೇ ಸಾಕ್ಷಿಯಲ್ಲ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಬಹುಸಂಖ್ಯಾತರ ಇಲ್ಲವೇ ಸ್ಥಳೀಯ ಜನರ ಒತ್ತಡಕ್ಕೆ ಮಣಿಯುವುದೇ ಹೆಚ್ಚು.
ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳನ್ನೂ ಅವರು ಬದಿಗಿಡಬಲ್ಲರು. ಸಾಕ್ಷ್ಯಗಳನ್ನೂ ಇಲ್ಲವಾಗಿಸಿಬಿಡಬಲ್ಲರು.
ಅಲೀಗಡದಲ್ಲಿ ರೋಟಿ ಮಾಡುವ ಜೌರಂಗಝೇಬ್ ಹತ್ಯೆ ಪ್ರಕರಣದಲ್ಲಿ ಕೆಲವರ ವಿರುದ್ಧ ಕೇಸ್ ದಾಖಲಾಗಿದೆ.
ಉನ್ಮಾದಿ ಗುಂಪು ಹಿಂಸಿಸಿ ಕೊಂದಿರುವ ವರದಿಗಳಿವೆ. ಪ್ರಕರಣದಲ್ಲಿ 6 ಮಂದಿ ಜೈಲುಪಾಲಾಗಿದ್ದಾರೆ.
ಆದರೆ ಆ ಆರೋಪಿಗಳ ಪರವಾಗಿ ಬಂದ್ ನಡೆದಿದೆ. ಬಿಜೆಪಿ ಮತ್ತು ಹಿಂದುತ್ವ ಸಂಘಟನೆ ನಾಯಕರೇ ಖುದ್ದು ಧರಣಿ ನಡೆಸಿದ್ದಾರೆ.
ಬಟ್ಟೆ ವ್ಯಾಪಾರಿ ಮುಕೇಶ್ ಚಂದ್ ಮಿತ್ತಲ್ ಮನೆಯಲ್ಲಿ ಕಳವು ಮಾಡಲು ಹೋದಾಗ ಔರಂಗಝೇಬ್ ಸಿಕ್ಕಿಹಾಕಿಕೊಂಡ ಎಂಬುದು ಆರೋಪ. ಮುಕೇಶ್ ಚಂದ್ ಮಿತ್ತಲ್, ಆತನ ಪುತ್ರ ರಾಹುಲ್ ಮಿತ್ತಲ್ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಔರಂಗಝೇಬ್ ಮೇಲಿನ ಹಲ್ಲೆ ವೀಡಿಯೊ ವೈರಲ್ ಆಗಿದ್ದು 2 ನಿಮಿಷ 18 ಸೆಕೆಂಡ್‌ಗಳದ್ದಾಗಿದೆ ಎಂದು ವರದಿಗಳು ಹೇಳುತ್ತಿವೆ. ಅದರಲ್ಲಿ, ಯುವಕನೊಬ್ಬ ನೆಲಕ್ಕೆ ಬಿದ್ದಿದ್ದು, ಆತನ ಮೇಲೆ ಮುಗಿಬಿದ್ದ ಕೆಲವರು ಥಳಿಸುತ್ತಿರುವುದನ್ನು ನೋಡಬಹುದಾಗಿದೆ.
ಇನ್ನೊಂದು ವೀಡಿಯೊ 49 ಸೆಕೆಂಡ್‌ಗಳದ್ದಾಗಿದ್ದು, ಬಡಿಗೆ ಹಿಡಿದಿರುವ ಎಲ್ಲರೂ ಆತನ ಕಾಲು ಮುರಿಯಿರಿ ಎಂದು ಕೂಗುತ್ತಿರುವುದು ಸೆರೆಯಾಗಿದೆ.
ಹತ್ಯೆ ಪ್ರಕರಣದಲ್ಲಿ ಬಂಧಿಯಾದವರು: ಡಿಂಪಿ ಅಗರ್ವಾಲ್, ಅಂಕಿತ್ ವಾರ್ಷನೀಯ, ಜಯಗೋಪಾಲ್, ಚಿರಾಗ್, ರಾಹುಲ್ ಮಿತ್ತಲ್, ಕಮಲ್ ಬನ್ಸಲ್.
ಅಲ್ಲದೆ ಸಂಜಯ್ ವಾರ್ಷನೀಯ, ರಿಷಬ್ ಪಾಠಕ್, ಅನುಜ್ ಅಗರ್ವಾಲ್, ಸೋನು ಪಾಠಕ್, ಪಂಡಿತ್ ವಿಜಯ್ ಗಾಡ್ವಾಲಾ ಹೆಸರುಗಳೂ ಆರೋಪಿಗಳ ಪಟ್ಟಿಯಲ್ಲಿವೆ. ಅವರಿಗಿನ್ನೂ ಜೈಲಾಗಿಲ್ಲ.
ಔರಂಗಝೇಬ್ ಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ಆಗುವಾಗ 10 ದಿನಗಳೇ ಕಳೆದಿವೆ.
ಹಾಗೇಕಾಯಿತು ಎಂಬ ಪ್ರಶ್ನೆಯೂ ಬರುತ್ತದೆ.
ಜೂನ್ 4ರಂದು ಚುನಾವಣಾ ಫಲಿತಾಂಶ ಬಂದ ಬಳಿಕ ದೇಶದಲ್ಲಿ ಗುಂಪು ಹಲ್ಲೆ, ಹತ್ಯೆ ತೀವ್ರಗೊಳ್ಳತೊಡಗಿದೆ.
ಹಿಂದಿನ 10 ವರ್ಷಗಳಲ್ಲಿನ ಇಂತಹದೇ ಘಟನೆಗಳ ಜೊತೆ ಇವನ್ನು ಹೋಲಿಸಿಕೊಂಡರೆ ಅವುಗಳ ಹಿಂದಿನ ರಾಜಕಾರಣ ಬೇರೆಬೇರೆಯಲ್ಲ ಎಂಬುದು ಗೊತ್ತಾಗುತ್ತದೆ.
ಗುಂಪು ಹತ್ಯೆಗೆ ತುತ್ತಾದವರ ಕುಟುಂಬಗಳ ಭೇಟಿಗೆ ವಿಪಕ್ಷ ನಾಯಕರು ಮುಂದಾಗುವುದಿಲ್ಲ ಎಂಬುದು ಕೂಡ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಆದರೆ ಧರ್ಮದ ಹೆಸರಿನಲ್ಲಿ ನಡೆಯುವ ಇಂತಹ ಪ್ರಕರಣಗಳು ರಾಜಕೀಯ ಕಾರಣದ್ದಾಗಿವೆ ಮತ್ತು ಅದು ಈಗಿನ ರಾಜಕಾರಣದ ವಾಸ್ತವವೂ ಆಗಿದೆ.
ಗುಂಪು ಹಲ್ಲೆ ಪರಿಣಾಮವಾಗಿ ಸಾವನ್ನಪ್ಪಿದವರ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿ, ಪ್ರಾಣ ತೆಗೆದವರ ಬೆಂಬಲಕ್ಕೆ ನಿಲ್ಲುವ ಸನ್ನಿವೇಶ, ಇಲ್ಲಿನ ರಾಜಕೀಯ ಎಂಥದು? ಪೊಲೀಸ್ ವ್ಯವಸ್ಥೆಯಲ್ಲಿಯೂ ಈ ರಾಜಕೀಯ ಸೇರಿಕೊಳ್ಳುವುದು ಹೇಗೆ?
ಛತ್ತೀಸ್‌ಗಡದಲ್ಲಿ ಜೂನ್ 7ರಂದು ಗುಂಪು ಹತ್ಯೆ ಪ್ರಕರಣ ನಡೆದಿದೆ. ಗುಡ್ಡು ಖಾನ್, ಜಾನ್ಮಿಯ ಖಾನ್ ಹಾಗೂ ಸದ್ದಾಂ ಖುರೇಷಿ ಎಂಬವರನ್ನು ಗುಂಪೊಂದು ಹಲ್ಲೆ ನಡೆಸಿ ಕೊಂದಿದೆ. ಇಲ್ಲಿ ಕೂಡ ಮೂವರೂ ಸೇತುವೆಯಿಂದ ಕೆಳಗೆ ಬಿದ್ದರು ಎಂಬುದು ಪೊಲೀಸರ ಹೇಳಿಕೆಯಾದರೆ, ಅವರನ್ನು ಥಳಿಸಿ ಕೊಲ್ಲಲಾಗಿದೆ ಎಂಬುದು ಕುಟುಂಬಸ್ಥರ ಆರೋಪ.
ಈಗ ಕುಟುಂಬಸ್ಥರ ಹೇಳಿಕೆ ಆಧರಿಸಿ ವರದಿ ಮಾಡುವುದೇ ಅಪರಾಧ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಹೀಗಾದರೆ ಪತ್ರಕರ್ತರೆಲ್ಲ ಜೈಲುಪಾಲಾಗಿ, ಗುಂಪುಹತ್ಯೆ ಮಾಡಿದವರು ರಾಜಾರೋಷವಾಗಿ ತಿರುಗಿಕೊಂಡಿರುತ್ತಾರೆ.
ಪೊಲೀಸರು ಛತ್ತಿಸ್‌ಗಡ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಚಾಲಕ ನವೀನ್ ಸಿಂಗ್ ಠಾಕೂರ್, ಟ್ರಾನ್ಸ್ ಪೋರ್ಟರ್ ಮಯನ್ ಶರ್ಮಾ, ಹರ್ಷ್ ಮಿಶ್ರಾ ಹಾಗೂ ಬಿಜೆಪಿ ಯುವ ಮೋರ್ಚಾದ ರಾಜಾ ಅಗರ್ವಾಲ್ ಬಂಧಿತರಾಗಿದ್ದಾರೆ.
ಯುಪಿಯಂತೆಯೇ ಛತ್ತೀಸ್‌ಗಡದಲ್ಲೂ ಬಿಜೆಪಿಯದ್ದೇ ಸರಕಾರವಿದೆ. ಇಲ್ಲಿಯೂ ಇವರ ಬಂಧನದ ವಿರುದ್ಧ ಬಜರಂಗದಳ, ವಿಎಚ್‌ಪಿ ಧರಣಿ ನಡೆಸಿವೆ. ಈ ಘಟನೆಯನ್ನು ಗುಂಪು ಹತ್ಯೆ ಎಂದಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಅವು ಆಗ್ರಹಿಸಿವೆ.
ಪೊಲೀಸರು ಪತ್ರಕರ್ತರ ಮೇಲೆ ಎಫ್‌ಐಆರ್ ಹಾಕುತ್ತಾರೆಯೇ ಹೊರತು ಈ ಸಂಘಟನೆಗಳ ವಿರುದ್ದ ಹಾಕಲಾರರು.
ಗುಜರಾತ್‌ನಲ್ಲಿ ಕೂಡ ಸಲ್ಮಾನ್ ಎಂಬ ಮುಸ್ಲಿಮ್ ಯುವಕನ ಮೇಲೆ ಗುಂಪೊಂದು ಕ್ರಿಕೆಟ್ ಪಂದ್ಯದ ಬಳಿಕ ಬ್ಯಾಟ್ ಮತ್ತು ಚೂರಿಯಿಂದ ದಾಳಿ ನಡೆಸಿ, ಆತನ ಸಾವಿಗೆ ಕಾರಣವಾಯಿತು. 11 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ.
2018ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ನ ಆಗಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣಗಳ ಕುರಿತಂತೆ 11 ಅಂಶಗಳ ಮಾರ್ಗದರ್ಶಿ ಸೂತ್ರವನ್ನು ನೀಡಿತ್ತು.ಆದರೆ 10 ವರ್ಷಗಳಿಂದಲೂ ಗುಂಪು ಹಲ್ಲೆಗಳು ನಡೆದೇ ಇವೆ, ಈಗಲೂ ಮುಂದುವರಿದಿವೆ, ಇನ್ನಷ್ಟು ತೀವ್ರಗೊಳ್ಳುತ್ತಿವೆ.
ತನ್ನ ಮಾರ್ಗದರ್ಶಿ ಸೂತ್ರದ 6 ವರ್ಷಗಳ ಬಳಿಕ ಏನೇನಾಗಿದೆ ಮತ್ತು ಯಾಕೆ ಗುಂಪು ಹತ್ಯೆಗಳು ನಿಲ್ಲುತ್ತಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಕೂಡ ಪರಿಶೀಲಿಸಬೇಕಾದ ಸಮಯ ಇದಾಗಿ ಕಾಣಿಸುತ್ತಿದೆ.