ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳು
ಮಾನ್ಯರೇ,
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಭಾರೀ ನಿರೀಕ್ಷೆಯೊಂದಿಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪ್ರತೀ ದಿನವೂ ಅಪಘಾತಗಳು ಸಂಭವಿಸುತ್ತಿವೆ. ಕಳೆದ ಒಂಭತ್ತು ತಿಂಗಳಿಂದ ಈ ಹೆದ್ದಾರಿಯಲ್ಲಿ 670 ಅಪಘಾತಗಳು, 160 ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಅದರಲ್ಲೂ ಹೆಚ್ಚಿನ ಅಪಘಾತಗಳು ಚನ್ನಪಟ್ಟಣ-ರಾಮನಗರದ ನಡುವಿನ ಬೈಪಾಸ್ ರಸ್ತೆಯಲ್ಲಿ ಸಂಭವಿಸುತ್ತಿವೆ ಎಂದು ಹೇಳಲಾಗಿದೆ.
ಅಪಘಾತಗಳಿಗೆ ಮುಖ್ಯ ಕಾರಣಗಳೆಂದರೆ, ಎಲ್ಲೆಲ್ಲಿ ಎಷ್ಟೆಷ್ಟು ವೇಗದಲ್ಲಿ ಚಲಿಸಬೇಕೆಂಬ ವೇಗದ ಮಿತಿಯ ಫಲಕಗಳನ್ನು ಅಳವಡಿಸದೇ ಇರುವುದು, ಬೈಪಾಸ್ ರಸ್ತೆ ಬದಿಯಲ್ಲಿ ಸೂಚನಾ ಫಲಕಗಳು ಇಲ್ಲದೇ ಇರುವುದು, ಒಂದು ವೇಳೆ ಅಪಘಾತವಾಗಿ ಬದುಕುಳಿಯುವ ಸಾಧ್ಯತೆ ಇದ್ದರೂ ರಸ್ತೆಯಲ್ಲಿ ಎಲ್ಲೂ ತುರ್ತು ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಇಲ್ಲದೇ ಇರುವುದು, ವಾಹನ ಚಾಲಕರು ಆಗಾಗ ಟ್ರಾಕ್‌ಗಳನ್ನು ಬದಲಿಸುವುದು ಆಗಿದೆ.
ಅಚ್ಚರಿಯ ಸಂಗತಿ ಎಂದರೆ ಬೆಂಗಳೂರು- ಮೈಸೂರು ನಡುವಿನ ಹಳೆಯ ಹೆದ್ದಾರಿಯ ರಸ್ತೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಸರಾಸರಿ ವರ್ಷಕ್ಕೆ 200 ರಿಂದ 250 ಸಣ್ಣಪುಟ್ಟ ಅಪಘಾತಗಳು ಹಾಗೂ 50 ರಿಂದ 60 ಸಾವುಗಳು ಮಾತ್ರ ಸಂಭವಿಸುತ್ತಿದ್ದವು ಎಂದು ವರದಿಯಾಗಿದೆ.
ರಸ್ತೆ ಅಭಿವೃದ್ಧಿಯಾದಂತೆ ಅಪಘಾತಗಳ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿರುವುದು ಆತಂಕಕ್ಕೀಡು ಮಾಡುತ್ತಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪಘಾತ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಜೊತೆಗೆ ರಸ್ತೆಯ ಅಲ್ಲಲ್ಲಿ ತುರ್ತು ಆರೋಗ್ಯ ಸೇವೆಗಳನ್ನು ಹಾಗೂ ಅಗತ್ಯ ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಮಾಡಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು