‘ಇಂಡಿಯಾ’ ಒಕ್ಕೂಟ ಅರ್ಥೈಸಬೇಕಾದ ಭಾರತ
ಈವರ್ಷ ನಡೆದ 18ನೇ ಲೋಕಸಭಾ ಚುನಾವಣೆ ಕೋಮುವಾದಿಗಳಿಗೆ ಭಯ ಹುಟ್ಟಿಸಿದೆ. ಆದರೆ ‘ಇಂಡಿಯಾ’ ಒಕ್ಕೂಟಕ್ಕೆ ಎಚ್ಚರಿಕೆ ನೀಡಿದೆ. ಏತನ್ಮಧ್ಯೆ ಭಾರತೀಯರಿಗೆ ಭರವಸೆ ಮೂಡಿಸಿದೆ. ನಿಜವಾದ ಅರ್ಥದಲ್ಲಿ ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಒಟ್ಟಾರೆ ಭಾರತೀಯರು ಗೆಲುವು ಸಾಧಿಸಿದ್ದಾರೆ.
ಭಾರತೀಯರ ಗೆಲುವನ್ನು ಕಸಿದುಕೊಳ್ಳಲು ಕೋಮುವಾದಿಗಳು ಹವಣಿಸುತ್ತಿದ್ದಾರೆ. ಆದರೆ ಈ ಗೆಲುವನ್ನು ಉಳಿಸಿಕೊಳ್ಳಲು ‘ಇಂಡಿಯಾ’ ಒಕ್ಕೂಟ ಮುಂದಿನ ವರ್ಷಗಳಲ್ಲಿ ಬಹಳಷ್ಟು ಸವಾಲುಗಳನ್ನು ಎದುರಿಸಲು ಸನ್ನದ್ಧರಾಗುವುದು ಅವಶ್ಯವಾಗಿದೆ. ಜನರ ಗೆಲುವಿನಲ್ಲೇ ಅವರ ಅಸ್ತಿತ್ವವಿದೆ ಎಂಬುದನ್ನು ಮೊದಲಿಗೆ ಒಕ್ಕೂಟದ ಪಕ್ಷಗಳು ಅರಿತುಕೊಳ್ಳಬೇಕಾಗಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಒಕ್ಕೂಟದ ಒಗ್ಗಟ್ಟಿಗೆ ಧಕ್ಕೆ ತಂದರೆ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಭಾರತೀಯರು ಅನೇಕ ಜನಾಂಗ, ಧರ್ಮ, ಜಾತಿ, ಉಪಜಾತಿ, ಅಸ್ಪಶ್ಯತೆ, ಪ್ರಾದೇಶಿಕತೆ, ಭಾಷೆ ಮತ್ತು ಸಂಸ್ಕೃತಿಗಳ ತಾಕಲಾಟದಲ್ಲಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ ಇವರೆಲ್ಲ 550 ಕ್ಕೂ ಹೆಚ್ಚು ಸಂಸ್ಥಾನಗಳಿಗೆ ಮತ್ತು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟವರಾಗಿದ್ದರು. ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತಗಳ ಅಡಿಯಲ್ಲಿ ವಿವಿಧ ರಾಜ್ಯಗಳಿಗೆ ಸೇರಿದವರಾದರು.
ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಜನಿಸಿದ ಅನೇಕರು ಇನ್ನೂ ನಮ್ಮ ಜೊತೆಗಿದ್ದಾರೆ. ಹೀಗಾಗಿ ನಾವು ರಾಜಕೀಯವಾಗಿ ಮುಕ್ಕಾಲು ಶತಮಾನ ಮಾತ್ರ ದಾಟಿದವರಾಗಿದ್ದೇವೆ. ನಿರಕ್ಷರತೆ, ಮೂಢನಂಬಿಕೆ, ಸಂಪ್ರದಾಯಗಳು, ಕೋಮುವಾದ, ಪ್ರಾದೇಶಿಕತೆ ಮುಂತಾದವು ನಮ್ಮ ಬದುಕನ್ನು ದುರ್ಭರಗೊಳಿಸುತ್ತಲೇ ಇವೆ. ಈ ಎಲ್ಲ ವೈರುಧ್ಯಗಳ ಮಧ್ಯೆ ಸಂತರು, ಸೂಫಿಗಳು, ದಾಸರು, ಶರಣರು ಮತ್ತು ತತ್ವಪದಕಾರರು ಶತಮಾನಗಳಿಂದ ಮಾನವ ಏಕತೆಗಾಗಿ ಶ್ರಮಿಸುತ್ತ ಬಂದಿದ್ದಾರೆ. ಜಾತಿ ನಿರಾಕರಣೆ ಮತ್ತು ಸರ್ವಧರ್ಮ ಸಮಭಾವ ಅವರಲ್ಲಿ ಸ್ಥಾಯಿ ಭಾವವಾಗಿದೆ. ಅವರೆಲ್ಲರಿಗೆ ನಾವು ಭಕ್ತಿಪಂಥದವರು ಎಂದು ಕರೆಯುತ್ತೇವೆ. ಇವರ ಭಕ್ತಿ ಉತ್ಕೃಷ್ಟವಾದ ಪ್ರೇಮಭಾವದಿಂದ ಕೂಡಿದೆ. ಜನರ ಮಧ್ಯೆ ಭಾವೈಕ್ಯ ಮೂಡಿಸುವ ಶಕ್ತಿ ಅದಕ್ಕಿದೆ. ಮಾನವರಿಗೆ ಮಾನವಧರ್ಮದ ದಾರಿ ತೋರಿಸುವಂಥದ್ದಾಗಿದೆ. ಅನೇಕ ರೀತಿಯಲ್ಲಿ ವಿಂಗಡಣೆಗೆ ಒಳಗಾದ ಜನಸಮುದಾಯಗಳ ಮಧ್ಯೆ ಭಾವೈಕ್ಯ ಮೂಡಿಸುವಲ್ಲಿ ಭಕ್ತಿಪಂಥದವರು ಶತಮಾನಗಳಿಂದ ಯಶಸ್ಸನ್ನು ಸಾಧಿಸಿದ್ದಾರೆ.
ಭಾರತದಲ್ಲಿ ಆರು ಲಕ್ಷಕ್ಕೂ ಹೆಚ್ಚಿನ ಹಳ್ಳಿಗಳಿವೆ. ಈ ಹಳ್ಳಿಗಳಲ್ಲಿ ಭಕ್ತಿಪಂಥದಲ್ಲಿನ ಯಾವುದೇ ಒಂದು ಪ್ರಕಾರದವರ ಸಮಾಧಿಗಳನ್ನು ಇಂದಿಗೂ ಕಾಣಬಹುದು. ಇವರೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಪ್ರತೀ ಹಳ್ಳಿಯ ಮತ್ತು ಪ್ರತಿಯೊಬ್ಬರ ಸಂಪರ್ಕದಲ್ಲಿದ್ದು ಮಾನವೀಯ ಸಂಸ್ಕೃತಿಯನ್ನು ಕಲಿಸಿದವರಾಗಿದ್ದಾರೆ. ಭಾರತದಲ್ಲಿ ಇಷ್ಟಾದರೂ ಭಾವೈಕ್ಯ ಮತ್ತು ಪ್ರಜಾಪ್ರಭುತ್ವ ಉಳಿಯಲು ಭಕ್ತಿಪಂಥದವರ ಶ್ರಮವೇ ಬಹುಪಾಲು ಕಾರಣವಾಗಿದೆ.
ಗಾಂಧೀಜಿಯವರು ನರಸೀ ಮೆಹತಾ ಅವರಂಥ ಸಂತರನ್ನು ಆದರ್ಶವಾಗಿಟ್ಟುಕೊಂಡಿದ್ದರೆ, ಅಂಬೇಡ್ಕರರಿಗೆ ಕಬೀರರು ಆದರ್ಶವಾಗಿದ್ದರು. ಬುದ್ಧ, ಬಸವಣ್ಣ, ವಿವೇಕಾನಂದ ಮತ್ತು ನಾರಾಯಣ ಗುರು ಅಂಥವರು ಸಮಾಜವಾದಿಗಳ ಮತ್ತು ಕಮ್ಯುನಿಸ್ಟರ ಮೇಲೂ ಪ್ರಭಾವ ಬೀರಿದವರಾಗಿದ್ದಾರೆ. ಆದರೆ ಇಂದಿನ ರಾಜಕೀಯ ಪಕ್ಷಗಳ ನಾಯಕರುಗಳ ಮೇಲೆ ಇಂಥವರ ಗಾಢವಾದ ಪ್ರಭಾವ ಬಿದ್ದದ್ದು ಕಂಡುಬರುವುದಿಲ್ಲ. ಆಯಾ ಪ್ರದೇಶಗಳಿಲ್ಲಿನ ಭಕ್ತಿಪಂಥದವರ ಮೇಲೆ ತೋರಿಕೆಯ ಗೌರವ ಮಾತ್ರ ಕಾಣುತ್ತದೆ. ಹೀಗಾಗಿ ಕೋಮುವಾದ ವಿರೋಧಿ ರಾಜಕೀಯ ಪಕ್ಷಗಳು ಮಹತ್ವದ್ದನ್ನು ಕಳೆದುಕೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಗಂಭೀರವಾಗಿ ಚಿಂತಿಸುವ ಕಾಲ ಇದಾಗಿದೆ. ಕೋಮುವಾದಿಗಳನ್ನು ಭಕ್ತಿಪಂಥದ ಚಿಂತನಾಕ್ರಮಗಳ ಮೂಲಕ ಮಾತ್ರ ಹಿಮ್ಮೆಟ್ಟಿಸಲು ಸಾಧ್ಯ ಎಂಬ ಪರಿಜ್ಞಾನ ‘ಇಂಡಿಯಾ’ ಒಕ್ಕೂಟದ ಪಕ್ಷಗಳಿಗೆ ಇನ್ನೂ ಬಂದಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿದುಬರುತ್ತದೆ.
ಕೋಮುವಾದದಿಂದ ಘಾಸಿಗೊಂಡ ಭಾರತೀಯರು ಅದು ಹೇಗೆ ಈ ಐದು ವರ್ಷಗಳ ಕಾಲ ಕೋಮುವಾದಿಗಳು ನಿದ್ದೆಗೆಡುವಂತೆ ಮಾಡಿದರು ಎಂಬುದನ್ನು ‘ಇಂಡಿಯಾ’ ಒಕ್ಕೂಟದವರು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಎನ್‌ಡಿಎಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಚ್ಚು ಪ್ರಭಾವಶಾಲಿಯಾದ ಪಕ್ಷ ಬಿಜೆಪಿಯಾಗಿದೆ. ಅದೇ ರೀತಿಯಲ್ಲಿ ‘ಇಂಡಿಯಾ’ ಒಕ್ಕೂಟದಲ್ಲಿ ಕಾಂಗ್ರೆಸ್ ಇದೆ. ಆದರೆ ಇನ್ನುಮುಂದೆ ಯಾವೊಂದು ಪಕ್ಷವೂ ಸ್ವತಂತ್ರವಾಗಿ ಭಾರತವನ್ನು ಆಳಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯನ್ನು ಭಾರತದ ಮತದಾರರು ತೋರಿಸಿಕೊಟ್ಟಿದ್ದಾರೆ. ದ್ವೇಷದಿಂದ ಭಾರತ ದೇಶವನ್ನು ಆಳಲಿಕ್ಕಾಗದು. ಸರ್ವಧರ್ಮ ಸಮಭಾವದ ಪ್ರಜ್ಞೆಯ ಜಾತ್ಯತೀತ ಪಕ್ಷಗಳಿಗೆ ಮಾತ್ರ ಭಾರತೀಯರು ಬೆಂಬಲಿಸುವರು ಎಂಬ ಸಂದೇಶ ಈ ಸಲದ ಚುನಾವಣಾ ಫಲಿತಾಂಶದಿಂದ ಹೊರಬಿದ್ದಿದೆ.
ಕೋಮುವಾದಿಗಳು ಭಾರತೀಯರನ್ನು ಧರ್ಮದ ಹೆಸರಿನಲ್ಲಿ ಇಬ್ಭಾಗ ಮಾಡಲು ಶತಪ್ರಯತ್ನ ಮಾಡಿದರು. ಅಲ್ಪಸಂಖ್ಯಾತರ ಮೇಲೆ ಬಹಳಷ್ಟು ರೀತಿಯಲ್ಲಿ ಹಲ್ಲೆ ಮಾಡಿದರು. ದಲಿತರ ಮೇಲಿನ ಹಲ್ಲೆಯಂತೂ ಸಂಪ್ರದಾಯ ರೀತಿಯಲ್ಲೇ ಮುಂದುವರಿದವು. ಮರ್ಯಾದಾ ಪುರುಷ ರಾಮನನ್ನು ಕೋಮುವಾದಿಗಳು ರಾಜಕೀಯ ದುರ್ಬಳಕೆ ಮಾಡಲು ಯತ್ನಿಸಿದರು. ಆದರೆ ಕೋಮುವಾದಿಗಳ ರಾಮನನ್ನು ಭಾರತೀಯರು ಸ್ವೀಕರಿಸಲಿಲ್ಲ. ಅವರಿಗೆ ಏನಿದ್ದರೂ ಗಾಂಧೀಜಿಯವರ ರಾಮನೇ ಬೇಕು. ಗಾಂಧೀಜಿಯವರ ಹೇ ರಾಮ ಉದ್ಗಾರದಲ್ಲಿ ಭಾರತೀಯರ ಅಂತಃಕರಣ ಮತ್ತು ನೋವು ತುಂಬಿವೆ. ಭಾರತೀಯರು ಇಂದಿಗೂ ಇಷ್ಟಪಡುವುದು ಗಾಂಧೀಜಿಯವರ ರಾಮನನ್ನು.
ಸೀತಾ, ರಾಮ, ಲಕ್ಷ್ಮಣರು ವನವಾಸದಲ್ಲಿ ಕ್ರಮಿಸಿದ ಮಾರ್ಗಗಳಲ್ಲಿ ಉಳಿದುಕೊಂಡ ಪ್ರದೇಶಗಳು ನಂತರ ಯಾತ್ರಾಕ್ಷೇತ್ರಗಳಾದವು. ಆ ಪವಿತ್ರ ಕ್ಷೇತ್ರಗಳಲ್ಲಿನ ಮತದಾರರು ಕೋಮುವಾದಿಗಳನ್ನು ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿದ ಕಾರಣ ಕೋಮುವಾದಿಗಳ ಜಂಘಾಬಲವೇ ಉಡುಗಿಹೋಗಿದೆ.
ಅಯೋಧ್ಯೆ ಇರುವ ಫೈಝಾಬಾದ್ ಲೋಕಸಭಾ ಮತಕ್ಷೇತ್ರದಲ್ಲೇ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿತು. ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಅವರು ಬಿಜೆಪಿಯ ಲಲ್ಲೂ ಸಿಂಗ್ ಅವರನ್ನು 54 ಸಾವಿರ ಮತಗಳಿಂದ ಸೋಲಿಸಿದರು.
ಲೋಕಸಭಾ ಚುನಾವಣೆಯನ್ನಿಟ್ಟುಕೊಂಡು ಇನ್ನೂ ಪೂರ್ತಿಗೊಳ್ಳದ ರಾಮಮಂದಿರವನ್ನು ಸಂಪ್ರದಾಯಕ್ಕೆ ವಿರುದ್ಧವಾಗಿ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದ್ದು ಜನಸಮುದಾಯದಲ್ಲಿ ಮತ್ತು ಸಂಪ್ರದಾಯವಾದಿ ಸಾಧು ಸಂತರು ಹಾಗೂ ಅನೇಕ ಧರ್ಮಗುರುಗಳಲ್ಲಿ ಅಸಂತೋಷವನ್ನುಂಟು ಮಾಡಿತು. ರಾಜಕಾರಣದಲ್ಲಿ ಸುಲಭವಾಗಿ ಕೋಮುವಾದವನ್ನು ಸೇರಿಸುವಂತೆ ಧರ್ಮವನ್ನು ಸೇರಿಸಲಿಕ್ಕಾಗದು ಎಂಬ ಜ್ಞಾನೋದಯ ಕೋಮುವಾದಿಗಳಿಗೆ ಈ ಲೋಕಸಭಾ ಚುನಾವಣಾ ಫಲಿತಾಂಶದಿಂದ ಆಯಿತು. ಪುರುಷೋತ್ತಮ ರಾಮನ ವ್ಯಕ್ತಿತ್ವವನ್ನು ಕಡೆಗಣಿಸಿ ತಮ್ಮ ಸ್ವಾರ್ಥಕ್ಕಾಗಿ ಅಪೂರ್ಣ ರಾಮಮಂದಿರ ಉದ್ಘಾಟನೆ ಮಾಡಿದ್ದಕ್ಕೆ ಧರ್ಮಭೀರುಗಳು ಮಾನಸಿಕವಾಗಿ ಕ್ಷೋಭೆಗೊಳಗಾದರು. ತಮ್ಮ ಸಿಟ್ಟನ್ನು ವೋಟು ಹಾಕುವುದರ ಮೂಲಕ ತೋರಿಸಿಕೊಟ್ಟರು.
ಬಿಜೆಪಿಯ ಏಕಮೇವಾದ್ವಿತೀಯ ಕನಸು ನನಸಾಗದ್ದಕ್ಕೆ ಇದೊಂದೇ ಕಾರಣವಲ್ಲ. ಜನರ ದೈನಂದಿನ ಬದುಕಿನ ಸಂಕಟ, ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದೌರ್ಜನ್ಯ, ತುಳಿತಕ್ಕೊಳಗಾದವರ ಆರ್ಥಿಕ ಮತ್ತು ಸಾಮಾಜಿಕ ಅಪಮಾನ ಮುಂತಾದ ಸಮಸ್ಯೆಗಳು ಕೋಮುವಾದದ ಡಾಂಭಿಕ ಧರ್ಮನಿಷ್ಠೆಯನ್ನು ಬಯಲಿಗೆಳೆಯಲು ಸಹಾಯಕವಾದವು. ಹಿಂದೂ ಧರ್ಮದಲ್ಲಿನ ಬಡವರು ಮತ್ತು ವಿಚಾರವಾದಿಗಳು ಕೂಡ ಕೋಮುವಾದದ ಕ್ರೌರ್ಯದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸತೊಡಗಿದರು.
ಅಯೋಧ್ಯೆಯ ರಾಮಮಂದಿರಕ್ಕೆ ರಾಜಮಾರ್ಗ ನಿರ್ಮಾಣಕ್ಕಾಗಿ ಅಂಗಡಿ, ಮನೆ, ಮಂದಿರ ಮತ್ತು ಮಸೀದಿಗಳನ್ನು ಧ್ವಂಸಗೊಳಿಸಿ ಸಹಸ್ರಾರು ಕುಟುಂಬಗಳು ಬೀದಿಗೆ ಬರುವಂತೆ ಉತ್ತರ ಪ್ರದೇಶದ ಯೋಗಿ ಸರಕಾರ ದೌರ್ಜನ್ಯ ಎಸಗಿತು. ಈ ತಪ್ಪುಗಳ ಜೊತೆಗೆ ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಮಾಡಿದ ದೌರ್ಜನ್ಯ ಹಿಂದೂ ಸಮಾಜದ ಸಂವೇದನಾಶೀಲರನ್ನು ಚಿಂತೆಗೊಳಗಾಗುವಂತೆ ಮಾಡಿತು. ಈ ಎಲ್ಲ ಕಾರಣಗಳಿಂದ ಕೋಮುವಾದಿಗಳು ರಾಮಜನ್ಮಭೂಮಿ ಎಂದು ಹೆಸರಾದ ಪವಿತ್ರ ಕ್ಷೇತ್ರವಾದ ಅಯೋಧ್ಯೆಯಲ್ಲೇ ಸೋತುಹೋದರು.
ದಲಿತ ಮೂಲದ ಅವಧೇಶ್ ಪ್ರಸಾದರು ರಾಮಜನ್ಮಭೂಮಿ ಪ್ರದೇಶವನ್ನು ಒಳಗೊಂಡ ಸಾಮಾನ್ಯ ಮತಕ್ಷೇತ್ರದಲ್ಲಿ ಮೇಲ್ಜಾತಿ ಎದುರಾಳಿಯನ್ನು ಸೋಲಿಸಿ ಸಂಸತ್ತಿಗೆ ಆಯ್ಕೆಯಾದದ್ದು ಸಾಮಾನ್ಯ ಸಂಗತಿಯಲ್ಲ. ಈ ಪ್ರದೇಶದಲ್ಲಿ ಶೇ. 50ರಷ್ಟು ಇರುವ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಕೋಮುವಾದದ ವಿರುದ್ಧ ಒಗ್ಗಟ್ಟಾಗಿದ್ದರಿಂದಲೇ ಇದು ಸಾಧ್ಯವಾಯಿತು ಎಂಬುದನ್ನು ‘ಇಂಡಿಯಾ’ ಒಕ್ಕೂಟ ಮರೆಯಬಾರದು.
ಅಯೋಧ್ಯೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಾಗ ಮತ್ತು ರಾಮಮಂದಿರಕ್ಕೆ ತಕ್ಕಂತೆ ಹೊಸ ಯೋಜನೆಗಳನ್ನು ರೂಪಿಸುವಾಗ ಸ್ಥಳೀಯರನ್ನು ಕಡೆಗಣಿಸಿದ್ದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸುವ ವಾತಾವರಣ ಸೃಷ್ಟಿಯಾಗಲಿಲ್ಲ. ಯೋಜನೆಗಾಗಿ ಅವರ ಭೂಮಿಯನ್ನು ಪಡೆದ ನಂತರ ಅವರಿಗೆ ಸಿಗಬೇಕಾದ ನ್ಯಾಯಬದ್ಧ ಪರಿಹಾರವನ್ನೂ ಕೊಡಲಿಲ್ಲ. ಸ್ಥಳೀಯರು ತಮ್ಮ ಅಸಮಾಧಾನವನ್ನು ಬಿಜೆಪಿ ವಿರುದ್ಧ ಮತ ಚಲಾಯಿಸುವ ಮೂಲಕ ವ್ಯಕ್ತಪಡಿಸಿದರು.
ಬಿಎಸ್‌ಪಿಯ ಮಾಯಾವತಿ ಉತ್ತರ ಪ್ರದೇಶದ 50 ಕ್ಷೇತ್ರಗಳಲ್ಲಿ ಮುಸ್ಲಿಮ್ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಅವರ ಒಬ್ಬ ಅಭ್ಯರ್ಥಿಯೂ ಗೆಲ್ಲಲಿಲ್ಲ. ಏಕೆಂದರೆ ಮುಸ್ಲಿಮರು ಅವರಿಗೆ ಮತ ಚಲಾಯಿಸಲಿಲ್ಲ. ಇದೆಲ್ಲ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಗಳನ್ನು ಸೋಲಿಸುವ ತಂತ್ರ ಎಂಬುದು ಅವರಿಗೆ ಅರಿವಾಗಿತ್ತು. ಆದರೆ ನಾಗಿನಾ ಲೋಕಸಭಾ ಕ್ಷೇತ್ರದಲ್ಲಿ ಆಝಾದ್ ಸಮಾಜ ಪಾರ್ಟಿ (ಕಾನ್ಶೀರಾಮ್) ಅಭ್ಯರ್ಥಿ ಚಂದ್ರಶೇಖರ ಆಝಾದ್ ಅವರನ್ನು ಬಿಜೆಪಿ ವಿರುದ್ಧ 1,51,473 ಮತಗಳ ಅಂತರದಿಂದ ಗೆಲ್ಲಿಸಿದರು. 2011ರ ಜನಗಣತಿ ಪ್ರಕಾರ ಉತ್ತರ ಪ್ರದೇಶದ ಬಿಜನೂರ್ ಜಿಲ್ಲೆಯ ನಾಗಿನಾ ಪಟ್ಟಣದ ಜನಸಂಖ್ಯೆ 5,02,488 ಇದ್ದು, ಅವರಲ್ಲಿ ಶೇ. 70.53ರಷ್ಟು ಮುಸ್ಲಿಮರಿದ್ದಾರೆ. ದೇಶದ ಮುಸ್ಲಿಮರು ಉವೈಸಿಯ ಪಕ್ಷವನ್ನೂ ದೂರವಿಟ್ಟು ‘ಇಂಡಿಯಾ’ ಒಕ್ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿ ಮುಸ್ಲಿಮರು ಇಷ್ಟೊಂದು ಪ್ರಬುದ್ಧವಾಗಿ ಮತ ಚಲಾಯಿಸಿದ್ದು ಇದೇ ಮೊದಲು. ಏಕೆಂದರೆ ಯಾವ ಪಕ್ಷವನ್ನು ಗೆಲ್ಲಿಸಬೇಕು ಎಂದು ಅವರು ಈ ಬಾರಿ ಯೋಚಿಸಲಿಲ್ಲ. ಕೋಮುವಾದಿಗಳನ್ನು ಸೋಲಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂಬುದರ ಬಗ್ಗೆ ದೃಢನಿರ್ಧಾರ ಕೈಗೊಂಡರು.
ಫೈಝಾಬಾದ್ ಕ್ಷೇತ್ರದ ಸುತ್ತಮುತ್ತಲಿನ ಬಸ್ತಿ, ಅಂಬೇಡ್ಕರ್ ನಗರ, ಬಾರಾಬಂಕಿ ಮುಂತಾದ ಕ್ಚೇತ್ರಗಳಲ್ಲೂ ಬಿಜಿಪಿ ಅಭ್ಯರ್ಥಿಗಳು ಸೋತರು.
ರಾಮಾಯಣದಲ್ಲಿ ತಂದೆ ದಶರಥನಿಗೆ ಕೊಟ್ಟ ವಚನ ಪಾಲನೆಗಾಗಿ ಶ್ರೀರಾಮಚಂದ್ರ ಸೀತೆ ಮತ್ತು ಲಕ್ಷ್ಮಣರ ಜೊತೆ 14 ವರ್ಷ ವನವಾಸಕ್ಕೆ ಹೊರಟಾಗ ಉಳಿದುಕೊಂಡ ಸ್ಥಳಗಳು ಪವಿತ್ರಕ್ಷೇತ್ರಗಳಾಗಿವೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಪುರಾತನ ಹೆಸರು ವಶಿಷ್ಠಿ. ಇದು ಶ್ರೀರಾಮನ ಗುರು ವಶಿಷ್ಠ ಋಷಿಗಳ ವಾಸಸ್ಥಾನದಿಂದಾಗಿ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿಯ ಸಂಸದರು ಸಮಾಜವಾದಿ ಪಕ್ಷದ ರಾಮಪ್ರಸಾದ್ ಚೌಧರಿ.
ಸೀತಾ-ರಾಮ-ಲಕ್ಷ್ಮಣರು ಗಂಗಾನದಿಯನ್ನು ದಾಟಿದ ನಂತರ ಸಿಕ್ಕ ಮೊದಲ ಪ್ರದೇಶವೇ ತ್ರಿವೇಣಿ ಸಂಗಮದ ಪ್ರಯಾಗರಾಜ್. ಅಲ್ಲಿನ ಭಾರದ್ವಾಜ ಋಷಿಗಳ ಆಶ್ರಮದಲ್ಲಿ ಅವರು ಉಳಿದು ಮುಂದೆ ಸಾಗಿದ್ದರಿಂದ ಪ್ರಯಾಗರಾಜ್ ಪವಿತ್ರ ಕ್ಷೇತ್ರವಾಯಿತು. ಅಲ್ಲಿ ಕಾಂಗ್ರೆಸ್‌ನ ಉಜ್ವಲ ರಮಣನಿಂಗ್ ಸಂಸದರಾಗಿದ್ದಾರೆ.
ರಾಮಾಯಣದಲ್ಲಿ ಹೇಳಿದಂತೆ ಸೀತಾ-ರಾಮ-ಲಕ್ಷಣರು ನಂತರ ವನವಾಸ ಮುಂದುವರಿಸಿ ಚಿತ್ರಕೂಟ ಅರಣ್ಯದಲ್ಲಿ ಬಹಳ ವರ್ಷ ಕಾಲ ಉಳಿದುಕೊಂಡರು. ಭರತ ಇದೇ ಚಿತ್ರಕೂಟದಲ್ಲಿ ರಾಮನನ್ನು ಭೇಟಿಯಾಗಿ ತಂದೆ ದಶರಥನ ಸಾವಿನ ಸುದ್ದಿ ತಿಳಿಸಿದ. ರಾಮ ಇಲ್ಲಿಯೇ ತಂದೆಯ ಗೌರವಾರ್ಥ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದ. ಆ ಸಂದರ್ಭದಲ್ಲಿ ದೇವಾನುದೇವತೆಗಳು ಬಂದಿದ್ದರು. ವಾಲ್ಮೀಕಿ ಆಶ್ರಮ ಕೂಡ ಇದೇ ಚಿತ್ರಕೂಟದಲ್ಲಿತ್ತು. ಈ ಎಲ್ಲ ಕಾರಣಗಳಿಂದ ಇದು ರಾಮಾಯಣದ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಚಿತ್ರಕೂಟ (ಬಾಂದಾ) ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕೃಷ್ಣಾದೇವಿ ಶಿವಶಂಕರ ಪಟೇಲ ಸಂಸದರಾಗಿದ್ದಾರೆ.
ಪಂಚವಟಿ(ನಾಸಿಕ)ವನದಲ್ಲಿ ಇದ್ದಾಗ ರಾವಣನ ಸಹೋದರಿ ಶೂರ್ಪನಖಿ ರಾಮನ ಮೇಲೆ ಮೋಹಗೊಂಡು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದಳು. ಲಕ್ಷಣ ಅವಳ ಮೂಗು ಕೊಯ್ದದ್ದು ಇಲ್ಲೇ. ಆದ್ದರಿಂದ ಈ ಪ್ರದೇಶ ನಾಸಿಕ (ಮೂಗು) ಎಂದು ಹೆಸರಾಯಿತು. ಇದೇ ಅರಣ್ಯದಲ್ಲಿ ರಾವಣ ಸೀತೆಯನ್ನು ಅಪಹರಿಸಿದ. ನಾಸಿಕದಲ್ಲಿ ಕಾಳರಾಮ ಮಂದಿರ ಮತ್ತು ರಾಮ ಸ್ನಾನ ಮಾಡುತ್ತಿದ್ದ ರಾಮಕುಂಡ ಇವೆ. ರಾಮಾಯಣದ ಪವಿತ್ರ ಸ್ಥಳಗಳಲ್ಲಿ ಇದೂ ಒಂದಾಗಿದೆ. ಕಾಂಗ್ರೆಸ್‌ನ ರಾಜಾಭಾವು ಪ್ರಕಾಶ ವಜೆ ಇಲ್ಲಿ ಸಂಸದರಾಗಿದ್ದಾರೆ.
ನಂತರ ರಾಮ-ಲಕ್ಷ್ಮಣರು ಹಂಪಿಯ ಬಳಿಯ ಕಿಷ್ಕಿಂದೆಗೆ ಬಂದರು. ಅಲ್ಲಿನ ಮಾತಂಗ ಪರ್ವತದಲ್ಲಿನ ಮಾತಂಗ ಋಷಿಯ ಆಶ್ರಮದಲ್ಲಿ ಉಳಿದರು. ಶಬರಿ ಶ್ರೀರಾಮನಿಗೆ ಬೋರೆ ಹಣ್ಣು ಕೊಟ್ಟದ್ದು ಇಲ್ಲಿಯೇ. ರಾಮ ಸ್ನಾನ ಮಾಡಿದ ಪಂಪಾ ಸರೋವರ ಮಾತಂಗ ಪರ್ವತದ ತಪ್ಪಲಿನಲ್ಲಿ ಇದೆ. ಕಿಷ್ಕಿಂದೆಯಲ್ಲಿ ವಾಲಿ -ಸುಗ್ರೀವರು ಆಳುತ್ತಿದ್ದರು. ಹನುಮಂತನ ಭೇಟಿಯೂ ಇಲ್ಲಿಯೇ ಆಯಿತು. ಹನುಮಂತ ಹುಟ್ಟಿದ್ದು ಕೂಡ ಇಲ್ಲಿಯೇ. ಸುಗ್ರೀವನ ಸಹಾಯಹೊಂದಿಗೆ ರಾಮ ಇಲ್ಲಿ ವಾನರ ಸೈನ್ಯ ಕಟ್ಟಿಕೊಂದು ಇಂದಿನ ರಾಮೇಶ್ವರದ ಕಡೆಗೆ ಸಾಗಿದ. ಕಿಷ್ಕಿಂದೆ ಕೊಪ್ಪಳ ಕ್ಷೇತ್ರದಲ್ಲಿ ಬರುತ್ತದೆ. ಅಲ್ಲಿನ ಸಂಸದರು ಕಾಂಗ್ರೆಸ್ ಪಕ್ಷದ ರಾಜಶೇಖರ ಹಿಟ್ನಾಳ.
ಇಲ್ಲಿಂದ ರಾಮ-ಲಕ್ಷ್ಮಣರು ಲಂಕೆಗೆ ಸಮೀಪದ ಧನುಷ್ಕೋಟಿ (ಇಂದಿನ ರಾಮೇಶ್ವರ) ಕಡೆಗೆ ಪ್ರಯಾಣ ಬೆಳೆಸಿದರು. ಲಂಕೆ ತಲುಪಲು ಸಮುದ್ರದ ಮೇಲೆ ಸೇತುವೆ ಕಟ್ಟಲು ಶ್ರೀರಾಮ ವಾನರ ಸೈನ್ಯಕ್ಕೆ ಹೇಳಿದ ಜಾಗವದು. ಆ ಸೇತುವೆ ರಾಮಸೇತು ಎಂದು ಪ್ರಸಿದ್ಧವಾಯಿತು. ಧನುಷ್ಕೋಟಿ ಮುಂತಾದ ಪ್ರದೇಶಗಳು ಸದ್ಯ ತಮಿಳುನಾಡಿನ ರಾಮನಾಥಪುರಂನಲ್ಲಿ ಇವೆ. ಅಲ್ಲಿನ ಸಂಸದರು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್‌ನ ನವಾಸಕಾನಿ ಕೆ.
ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ (ಪುರಾತನ ಕುಶನಗರ) ಗೋಮತಿ ನದಿ ಹರಿದಿದೆ. ಬ್ರಾಹ್ಮಣ ರಾವಣನನ್ನು ಯುದ್ಧದಲ್ಲಿ ಕೊಂದ ಕಾರಣ ಬ್ರಹ್ಮಾಹತ್ಯಾ ದೋಷಕ್ಕೆ ಒಳಗಾಗಿದ್ದ ರಾಮನ ಪಾಪ ಪರಿಹಾರಕ್ಕಾಗಿ ವಶಿಷ್ಠ ಋಷಿಗಳು ಗೋಮತಿ ನದಿಯಲ್ಲಿ ಸ್ನಾನ ಮಾಡಲು ತಿಳಿಸಿದ ಕಾರಣ ರಾಮ ಅಲ್ಲಿ ಸ್ನಾನ ಮಾಡಿದ್ದರಿಂದ ಆ ಪ್ರದೇಶ ಪವಿತ್ರವಾಯಿತು. ಸಮಾಜವಾದಿ ಪಕ್ಷದ ರಾಮಭುವಾಲ ನಿಷಾದ ಅಲ್ಲಿ ಸಂಸದರಾಗಿದ್ದಾರೆ.
ಅಯೋಧ್ಯೆಯಿಂದ ಧನುಷ್ಕೋಟಿಯವರೆಗೆ ರಾಮಾಯಣದ ಎಲ್ಲ ಪವಿತ್ರ ಕ್ಷೇತ್ರಗಳಲ್ಲೂ ಬಿಜೆಪಿ ಸೋತಿದೆ!
‘ಇಂಡಿಯಾ’ ಒಕ್ಕೂಟದಿಂದ ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಬಂದಿದೆ. ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರಿಗೆ ಭರವಸೆ ಮೂಡಿದೆ. ‘ಇಂಡಿಯಾ’ ಒಕ್ಕೂಟವೇ ದೇಶವನ್ನು ಆಳುವ ಪರಿಸ್ಥಿತಿ ಇತ್ತು. ಆದರೆ ಅವರೊಳಗಿನ ಸ್ವಾರ್ಥ ರಾಜಕಾರಣದಿಂದಾಗಿ ಹಿನ್ನಡೆ ಅನುಭವಿಸಿತು. ಪ್ರಜಾತಂತ್ರದಲ್ಲಿ ವಿರೋಧ ಪಕ್ಷಗಳ ಪಾತ್ರ ಮಹತ್ವದ್ದು. ಅಲ್ಲದೆ ವಿರೋಧ ಪಕ್ಷಗಳ ಮಧ್ಯೆ ಒಗ್ಗಟ್ಟು ಸಾಧಿಸುವುದು ಇನ್ನೂ ಮಹತ್ವದ್ದು ಎಂಬುದರ ಅರಿವಾಗುವ ಮೂಲಕ ಫ್ಯಾಶಿಸ್ಟ್ ಶಕ್ತಿಗಳನ್ನು ಬಗ್ಗುಬಡಿಯುವ ಮಹೋದ್ದೇಶವನ್ನು ಹೊಂದಿದಾಗ ಮಾತ್ರ ಅವು ವೈಯಕ್ತಿಕ ಸ್ವಾರ್ಥ ತ್ಯಾಗ ಮಾಡಿ ಉತ್ತಮ ಆಡಳಿತವನ್ನು ಕೊಡಬಲ್ಲವು. ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಆತ್ಮಗೌರವದೊಂದಿಗೆ ಬದುಕುವ ವಾತಾವರಣವನ್ನು ಸೃಷ್ಟಿಸಬಲ್ಲವು. ಅಹಿಂದ ಭಾರತವನ್ನು ‘ಇಂಡಿಯಾ’ ಒಕ್ಕೂಟ ಚೆನ್ನಾಗಿ ಅರ್ಥೈಸಿಕೊಳ್ಳುವುದು ಅವಶ್ಯವಾಗಿದೆ.