ದಕ್ಷಿಣಕ್ಕೆ ಅನ್ಯಾಯ
ಎನ್‌ಡಿಎ ಸರಕಾರ ತನ್ನ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ವೈಮನಸ್ಸನ್ನು ಹೆಚ್ಚಿಸಿದೆ ಅನ್ನಿಸುತ್ತದೆ. ರಾಜ್ಯ ಸರಕಾರಗಳೊಡನೆ ಹಂಚಿಕೊಳ್ಳುವುದಕ್ಕೆ ಇರುವ ಹಣವನ್ನು ಕೇಂದ್ರ ಸರಕಾರ ವಿತರಿಸುತ್ತಿರುವ ಕ್ರಮದ ಬಗ್ಗೆ ಹಲವು ರಾಜ್ಯಗಳು ಅಸಮಾಧಾನವನ್ನು ವ್ಯಕ್ತಪಡಿಸಿವೆ. ರಾಜ್ಯಗಳಿಗೆ ಹಣ ಸಲೀಸಾಗಿ ಹರಿದುಬರುವುದಕ್ಕೆ ಕೇಂದ್ರ ಹಲವು ನಿರ್ಬಂಧಗಳನ್ನು ಒಡ್ಡುತ್ತಿವೆ ಎಂಬ ಆಕ್ರೋಶ ಪ್ರಕಟವಾಗುತ್ತಿದೆ. ಹಲವು ದೊಡ್ಡ ರಾಜ್ಯಗಳಲ್ಲಿ ಎನ್‌ಡಿಎ ಪ್ರಬಲವಾಗಿರುವುದರಿಂದ ಹೀಗೆ ಬೆಳೆಯುತ್ತಿರುವ ಅತೃಪ್ತಿಯನ್ನು ಹತ್ತಿಕ್ಕುವುದಕ್ಕೆ ಕೇಂದ್ರಕ್ಕೆ ಸಾಧ್ಯವಾಗಿದೆ. ಆದರೆ ನೊಂದ ರಾಜ್ಯಗಳೊಂದಿಗೆ ಸಂವಾದ ನಡೆಸಲು ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರವು ವಿಫಲವಾಗಿರುವುದು ನಿಜವಾಗಿ ಆತಂಕದ ವಿಷಯ.
ಕೇಂದ್ರ ಸರಕಾರದಿಂದ ರಾಜ್ಯಗಳಿಗೆ ಹಣದ ಹರಿವಿನ ಬಗ್ಗೆ ಮೊದಲು ಪಶ್ಚಿಮ ಬಂಗಾಳದಂತಹ ಕೆಲವು ರಾಜ್ಯಗಳಷ್ಟೇ ಅತೃಪ್ತಿಯನ್ನು ವ್ಯಕ್ತಪಡಿಸು ತ್ತಿದ್ದವು. ಈಗ ಆಕ್ರೋಶ ದಕ್ಷಿಣ ರಾಜ್ಯಗಳಿಗೂ ಹರಡಿದೆ. ಅಲ್ಲೆಲ್ಲಾ ಬಹುತೇಕ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿವೆ. ಮೊದಲು ಕರ್ನಾಟಕ ಸರಕಾರದ ಸಚಿವರು ರಾಜ್ಯಕ್ಕೆ ಹಣದ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ದಿಲ್ಲಿಯಲ್ಲಿ ಪ್ರತಿಭಟಿಸಿದರು. ನಂತರ ಕೇರಳದ ಮುಖ್ಯಮಂತ್ರಿ, ದಿಲ್ಲಿ ಮತ್ತು ಪಂಜಾಬಿನ ಮುಖ್ಯ ಮಂತ್ರಿಗಳ ಜೊತೆಗೆ ಸೇರಿಕೊಂಡು ದಿಲ್ಲಿಯಲ್ಲಿ ಪ್ರತಿಭಟಿಸಿದರು. ಇವರೊಂದಿಗೆ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷರೂ ಕೈಜೋಡಿಸಿದರು. ಹಣಕಾಸಿನ ವಿತರಣೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದರು. ಹಣಕಾಸು ಒಕ್ಕೂಟ ವ್ಯವಸ್ಥೆಯ ಮೇಲೆ ಆಗುತ್ತಿರುವ ದಾಳಿಯನ್ನು ವಿರೋಧಿಸಿದರು. ಇದೇ ರೀತಿಯಲ್ಲಿ ತಮಿಳುನಾಡಿಗೆ ಅವಶ್ಯಕವಾಗಿರುವ ನಿಧಿಗೆ ಕೇಂದ್ರ ತಡೆಯೊಡ್ಡುತ್ತಿದೆ ಎಂದು ದ್ರಾವಿಡ ಮುನ್ನೇತ್ರ ಕಳಗಂ ಸಂಸದರು ದಿಲ್ಲಿಯಲ್ಲಿ ಚಳವಳಿ ನಡೆಸಿದರು.
ಈ ಮಧ್ಯೆ, ಕೇರಳ ಸರಕಾರ ರಾಜ್ಯಗಳ ಸಾಲಗಳ ಮೇಲೆ ಕೇಂದ್ರ ಸರಕಾರವು ಹಾಕಿರುವ ನಿರ್ಬಂಧಗಳನ್ನು ಪ್ರಶ್ನಿಸಿದೆ. ಸಾಲ ಮಾಡುವ ತನ್ನ ಸಾಂವಿಧಾನಿಕ ಅಧಿಕಾರಗಳನ್ನು ಕೇಂದ್ರವೂ ಮನಸೋ ಇಚ್ಛೆ ಕಡಿತಗೊಳಿಸಿದೆ ಎಂದು ಸುಪ್ರೀಂ ಕೋರ್ಟಿನಲ್ಲಿ ದೂರು ಸಲ್ಲಿಸಿದೆ. ಕೇಂದ್ರ ಸರಕಾರವು ಸಾಲದ ಮಿತಿಗಳ ಮೇಲೆ ಹೇರಿರುವ ನಿರ್ಬಂಧಗಳಿಂದಾಗಿ 2017-23ರ ಅವಧಿಯಲ್ಲಿ 1,07,013 ಕೋಟಿ ರೂಪಾಯಿಗಳ ಕೊರತೆಯುಂಟಾಗಿದೆ ಮತ್ತು ರಾಜ್ಯಕ್ಕೆ ತನ್ನ ಬಜೆಟ್ ಬದ್ಧತೆಗಳನ್ನು ಈಡೇರಿಸುವುದಕ್ಕೆ ಕೇಂದ್ರವೂ ಅಡ್ಡಿಯುಂಟುಮಾಡುತ್ತಿದೆ ಎಂದು ಅದು ತಿಳಿಸಿದೆ. ರಾಜ್ಯದ ಸಾಲವನ್ನು ಸಂವಿಧಾನದ ರಾಜ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ಯಗಳ ಸಾಲದ ಹಕ್ಕುಗಳನ್ನು ಸೀಮಿತಗೊಳಿಸುವ ಉದ್ದೇಶದಿಂದ ಮಾಡಿರುವ 2003ರ ಹಣಕಾಸು ಉತ್ತರದಾಯಿತ್ವ ಮತ್ತು ಬಜೆಟ್ ನಿರ್ವಹಣಾ ಕಾಯ್ದೆಯ 2018ರ ತಿದ್ದುಪಡಿ ಸಂವಿಧಾನದ ಅತಿಕ್ರಮಣವಾ ಗಿದೆ.
ಕೇಂದ್ರದಿಂದ ರಾಜ್ಯಗಳಿಗೆ ಆಗುತ್ತಿರುವ ಹಣಕಾಸು ವಿತರಣೆಯ ಕ್ರಮವನ್ನು ಸುಮ್ಮನೆ ನೋಡಿದರೂ ದಕ್ಷಿಣ ರಾಜ್ಯಗಳ ದೂರುಗಳಿಗೆ ಸುಮಾರು ಪುರಾವೆಗಳು ಸಿಗುತ್ತವೆ. ಉದಾಹರಣೆಗೆ, ಹನ್ನೊಂದನೆಯ ಮತ್ತು ಹದಿನೈದನೆಯ ಹಣಕಾಸು ಆಯೋಗಗಳ ಶಿಫಾರಸುಗಳ ಅನ್ವಯ ರಾಜ್ಯಗಳಿಗೆ ಆಗುತ್ತಿರುವ ಹಣಕಾಸು ವಿತರಣೆಯನ್ನು ವಿಶ್ಲೇಷಿಸಿದರೆ 11 ರಾಜ್ಯಗಳ ಪಾಲಿನಲ್ಲಿ ತೀವ್ರವಾದ ಕುಸಿತವನ್ನು ಕಾಣಬಹುದು. ದುರದೃಷ್ಟವಶಾತ್, ಅತಿ ಹೆಚ್ಚು ಹಣ ಕಳೆದುಕೊಂಡ ರಾಜ್ಯಗಳು ದಕ್ಷಿಣದಲ್ಲಿವೆ. ಇವುಗಳಲ್ಲಿ ಕೇರಳ (ಶೇ.36.3) ಮತ್ತು ಆಂಧ್ರ ಪ್ರದೇಶ (ತೆಲಂಗಾಣ ಸೇರಿದಂತೆ) (ಶೇ.19.8) ಮುಂತಾದ ಮಧ್ಯಮ ಆದಾಯದ ರಾಜ್ಯಗಳು ಮತ್ತು ಕರ್ನಾಟಕ (ಶೇ.26) ಮತ್ತು ತಮಿಳುನಾಡು (ಶೇ. 25.2) ಮುಂತಾದ ಹೆಚ್ಚು ಆದಾಯದ ರಾಜ್ಯಗಳು ಸೇರಿವೆ. ಈ ಅವಧಿಯಲ್ಲಿ ಹಣದ ಹಂಚಿಕೆಯಲ್ಲಿ ಕಡಿತ ಅನುಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ಒಡಿಶಾ (ಶೇ. 10.2), ಬಿಹಾರ (ಜಾರ್ಖಂಡ್ ಸೇರಿದಂತೆ) (ಶೇ. 8.3), ಪಶ್ಚಿಮ ಬಂಗಾಳ (ಶೇ. 7.5), ಅಸ್ಸಾಂ (ಶೇ. 4.6) ಮತ್ತು ಉತ್ತರ ಪ್ರದೇಶ (ಉತ್ತರಾಖಂಡ ಸೇರಿದಂತೆ) (ಶೇ. 3.8) ಮುಂತಾದ ಏಳು ಅತ್ಯಂತ ಬಡ ರಾಜ್ಯಗಳು ಸೇರಿವೆ.
ಇದಕ್ಕೆ ತದ್ವಿರುದ್ಧವಾಗಿ ಇನ್ನೂ ಹಲವು ಮಧ್ಯಮ ವರಮಾನದ ಹಾಗೂ ಶ್ರೀಮಂತ ರಾಜ್ಯಗಳ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ರಾಜಸ್ಥಾನ (ಶೇ. 12), ಹಿಮಾಚಲ ಪ್ರದೇಶ (ಶೇ. 22.1), ಮಧ್ಯಪ್ರದೇಶ (ಛತ್ತೀಸ್‌ಗಡ ಸೇರಿದಂತೆ) (ಶೇ.26.1), ಮಹಾರಾಷ್ಟ್ರ (ಶೇ. 35.8) ಮತ್ತು ಪಂಜಾಬ್ (ಶೇ. 62.8), ಹರ್ಯಾಣ (ಶೇ.13.9), ಗುಜರಾತ್ (ಶೇ.22.5) ಮತ್ತು ಗೋವಾ (ಶೇ. 93) ಮುಂತಾದ ರಾಜ್ಯಗಳಿಗೆ ಗಣನೀಯ ಪ್ರಮಾಣದಲ್ಲಿ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ.
ಈ ಪ್ರವೃತ್ತಿಯನ್ನು ನೋಡಿದರೆ ಹಣಕಾಸು ಆಯೋಗಗಳು ನಿಧಿಗಳನ್ನು ವಿತರಿಸಲು ಬಳಸುತ್ತಿರುವ ಮಾನದಂಡಗಳು ಅಸಮಾನ ಪರಿಸ್ಥಿತಿಯನ್ನು ಸೃಷ್ಟಿಸಿ ವಿಭಜನಾತ್ಮಕ ಭಾವನೆಗಳನ್ನು ಬೆಳೆಸುವುದಕ್ಕೆ ಕಾರಣವಾಗುತ್ತವೆ. ಎಲ್ಲಾ ರಾಜ್ಯಗಳಿಗೂ ಅಂದರೆ ಬಡ, ಮಧ್ಯಮ ಆದಾಯ ಮತ್ತು ಶ್ರೀಮಂತ ರಾಜ್ಯಗಳಿಗೆ ಹಣವನ್ನು ಸಮಾನ ಪ್ರಮಾಣದಲ್ಲಿ ಹಂಚಬೇಕೆಂದು ಯಾರೂ ವಾದಿಸುತ್ತಿಲ್ಲ. ಆದರೆ ಮಧ್ಯಮ ಆದಾಯದ ಕೆಲವು ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ಕೇರಳಕ್ಕೆ ಸಲ್ಲಬೇಕಾದ ಹಣದಲ್ಲಿ ಮೂರನೇ ಒಂದು ಭಾಗವನ್ನು ಕಡಿತಗೊಳಿಸುವ, ಹಾಗೆಯೇ ಮಧ್ಯ ಪ್ರದೇಶ (ಛತ್ತೀಸ್‌ಗಡ ಸೇರಿದಂತೆ) ಮತ್ತು ಮಹಾರಾಷ್ಟ್ರದಂತಹ ಇತರ ಮಧ್ಯಮ ಆದಾಯದ ರಾಜ್ಯಗಳಿಗೆ ಅದೇ ಪ್ರಮಾಣದಲ್ಲಿ ಹೆಚ್ಚಿಗೆ ಹಣ ಹಂಚುವ ವಿತರಣಾ ಸೂತ್ರವನ್ನು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ. ಹಾಗೆಯೇ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ (ಉತ್ತರಾಖಂಡ ಸೇರಿದಂತೆ) ಮತ್ತು ಬಿಹಾರ (ಜಾರ್ಖಂಡ್ ಸೇರಿದಂತೆ) ಮುಂತಾದ ಕಡಿಮೆ ಆದಾಯದ ರಾಜ್ಯಗಳಿಗೆ ವಿತರಿಸುವ ಹಣದ ಪ್ರಮಾಣದಲ್ಲಿ ಕಡಿತವನ್ನು ಮಾಡಿರುವುದು ತರ್ಕಕ್ಕೆ ಸಿಗುವುದಿಲ್ಲ. ಹರ್ಯಾಣ, ಗುಜರಾತ್, ಗೋವಾ ಮತ್ತು ಸಿಕ್ಕಿಂ ಮುಂತಾದ ಹೆಚ್ಚು ಶ್ರೀಮಂತ ರಾಜ್ಯಗಳಿಗೆ ಹೆಚ್ಚಿನ ಹಣಕಾಸು ಸಿಗುತ್ತಿದೆ. ಅವೆಲ್ಲಾ ತಲಾ ವರಮಾನ ಹೆಚ್ಚಿರುವ ರಾಜ್ಯಗಳು.
ನಿಧಿಗಳ ವಿತರಣೆಗೆ ಕೇಂದ್ರ ಸರಕಾರ ಅನುಸರಿಸುತ್ತಿರುವ ಅಸಂಬದ್ಧ ಕ್ರಮದಿಂದ ರಾಜ್ಯಗಳ ಒಟ್ಟಾರೆ ಆರ್ಥಿಕ ಸ್ಥಿತಿ ನಿರಂತರವಾಗಿ ಹದಗೆಡು ತ್ತದೆ. ಕೇಂದ್ರ ಸರಕಾರ ಹದಿನಾಲ್ಕನೇ ಹಾಗೂ ಹದಿನೈದನೇ ಹಣಕಾಸು ಆಯೋಗದ ಹಲವು ಶಿಫಾರಸುಗಳನ್ನು ಕಡೆಗಣಿಸಿರುವುದರಿಂದ ರಾಜ್ಯಗಳ ಹಣಕಾಸಿನ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ರಾಜ್ಯಗಳು ಹಣದ ತೊಂದರೆಯಿಂದ ವಿತ್ತೀಯ ಬಿಕ್ಕಟ್ಟಿಗೆ ಸಿಕ್ಕಿ ನರಳುತ್ತವೆ. ಜೊತೆಗೆ ಅವಕ್ಕೆ ಹವಾಮಾನದ ತೊಂದರೆ, ಕೋವಿಡ್ ಇತ್ಯಾದಿಗಳಿಂದಾಗಿ ನಿರ್ವಹಿಸಬೇಕಾದ ಜವಾಬ್ದಾರಿಗಳೂ ಹೆಚ್ಚುತ್ತಲೇ ಇವೆ. ಹಾಗಾಗಿ ರಾಜ್ಯಗಳ ಬಜೆಟ್ ಖರ್ಚು ಕಳೆದ ದಶಕದಲ್ಲಿ ಜಿಡಿಪಿಯ ಶೇ. 5ರಿಂದ 20ರಷ್ಟಾಗಿದೆ. ಇದರ ಪರಿಣಾಮವಾಗಿ ರಾಜ್ಯಗಳ ಸಾಲ ಏರುತ್ತಿದೆ. ಜೊತೆಗೆ ಹಣಕಾಸು ಆಯೋಗದ ಶಿಫಾರಸುಗಳಿಂದ ಆದ ತೊಂದರೆಗಳೂ ಸೇರಿಕೊಂಡು ಅವುಗಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಆದಾಗ್ಯೂ, ಕೇಂದ್ರ ಸರಕಾರವು ಈ ವಿಚಾರಗಳನ್ನು ಚರ್ಚಿಸಲು ಇದುವರೆಗೆ ಉತ್ಸಾಹ ತೋರುತ್ತಿಲ್ಲ. ಯೋಜನಾ ಆಯೋಗ ರದ್ದುಪಡಿಸಿದೆ. ವಿತ್ತೀಯ ಮಂಡಳಿಗಳನ್ನು ಸ್ಥಾಪಿಸಲು ಅಸಡ್ಡೆ ತೋರುತ್ತಿದೆ. ಒಟ್ಟಾರೆಯಾಗಿ ರಾಜ್ಯಗಳಿಗೆ ಸಮಾನ ವಿಷಯಗಳನ್ನು ಚರ್ಚಿಸುವುದಕ್ಕೆ ಸೂಕ್ತ ವೇದಿಕೆಯೇ ಇಲ್ಲದಂತೆ ಮಾಡಿದೆ. ಕೇಂದ್ರ ಸರಕಾರವು ಅತ್ಯಂತ ಸಂಕಷ್ಟದಲ್ಲಿರುವ ರಾಜ್ಯಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಅವುಗಳ ನ್ಯಾಯಯುತ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುವುದಕ್ಕೆ ನೆರವಾಗಬೇಕು. ಇದು ಇಂದಿನ ತುರ್ತು.
(ಮೂಲ: ಎಕಾನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿಯ ಸಂಪಾದಕೀಯ)