ಶೋಷಿತ ವರ್ಗಗಳಿಗೆ ಸ್ಫೂರ್ತಿ
ಅದು 2016ರ ಮೈಸೂರು ದಸರಾ ದಿನಗಳು. ರಾಜ್ಯ ಸರಕಾರ ಮೈಸೂರು ದಸರಾ ತಯಾರಿಯಲ್ಲಿದ್ದರೆ, ಮತ್ತೊಂದೆಡೆ ಮೈಸೂರಿನ ಪ್ರಗತಿಪರ ಸಂಗಾತಿಗಳು ಮಹಿಷ ದಸರಾ ಆಚರಿಸುವ ಉತ್ಸಾಹದಲ್ಲಿದ್ದರು. ದಲಿತ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ದಿವಂಗತ ಶಾಂತರಾಜು ಅವರ ಬಳಗ ಒಳಗೊಂಡಂತೆ ವಿವಿಧ ಚಿಂತಕರು ಮತ್ತು ಹೋರಾಟಗಾರರು ಮಹಿಷಾ ದಸರಾ ಆಚರಣೆ ಮತ್ತು ಅದರ ಪೂರ್ವ ಹಿನ್ನೆಲೆಯನ್ನು ಶ್ರೀಸಾಮಾನ್ಯರಿಗೆ ಮಾಧ್ಯಮಗಳ ಮೂಲಕ ತಿಳಿಸಲು ಒಂದಷ್ಟು ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದರು. ಆದರೆ, ವಿಪರ್ಯಾಸವೇನೆಂದರೆ, ಇವರು ಎಷ್ಟೇ ಪತ್ರಿಕಾಗೋಷ್ಠಿಗಳಲ್ಲಿ ಸತ್ಯ ಮಂಡಿಸುತ್ತಿದ್ದರೂ ಬಹುತೇಕ ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬಿತ್ತರಿಸುತ್ತಿದ್ದ ಸುದ್ದಿಗಳು ಮಾತ್ರ ಚಾಮುಂಡೇಶ್ವರಿ ತಾಯಿ ವಿರುದ್ಧ ಮಹಿಷಾ ದಸರಾ ಆಚರಿಸುತ್ತಿದ್ದಾರೆ ಎಂಬುದು ರಾಜ್ಯದ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಅಪಪ್ರಚಾರವಾಗುತ್ತಿತ್ತು. ಆ ಸಂದರ್ಭದಲ್ಲಿ, ಪ್ರಗತಿಪರ ಚಿಂತಕರಾಗಿದ್ದ ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರುರವರು ಮಹಿಷಾಸುರನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ‘ಇತಿಹಾಸ ಸತ್ಯ ಪುರಾಣ ಮಿಥ್ಯೆ’ ಎಂಬ ಅತ್ಯದ್ಭುತ ಲೇಖನವೊಂದನ್ನು ಬರೆದು ಸುದ್ದಿಮನೆಗಳಿಗೆ ಕಳುಹಿಸಿದ್ದರು. ಆದರೆ, ಅವರು ಬರೆದಿದ್ದ ಲೇಖನ ಕೇವಲ ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಮಾತ್ರ ಪ್ರಕಟಗೊಂಡಿತ್ತು. ಆ ದಿನ ಬೆಳಗ್ಗೆ ಪ್ರೊ. ಬಿ.ಪಿ ಮಹೇಶ್ ಚಂದ್ರ ಗುರು ರವರು ನನಗೆ ಪೋನ್ ಕರೆ ಮಾಡಿ ‘‘ಗುಡ್ ಮಾರ್ನಿಂಗ್ ದಿಲೀಪ್.... ‘ವಾರ್ತಾಭಾರತಿ’ಯಲ್ಲಿ ಮಹಿಷಾಸುರನ ಲೇಖನ ಪ್ರಕಟವಾಗಿದೆ, ಓದಿದ್ರಾ?’’ ಎಂದು ಕೇಳಿದರು. ಅದಕ್ಕೆ, ನಾನು ‘‘ಹೌದು ಸರ್.. ‘ವಾರ್ತಾಭಾರತಿ’ಯವರು ಮಹಿಷಾಸುರನನ್ನು ಮಿಂಚಿಸುತ್ತಿದ್ದಾರೆ’’ ಎಂದು ನಗುನಗುತ್ತ ಉತ್ತರಿಸಿದೆ. ಅದಕ್ಕೆ ಗುರುಗಳು ‘‘ಮೂಲನಿವಾಸಿಗಳ ಅಸ್ಮಿತೆ ಮತ್ತು ನೈಜ ಇತಿಹಾಸವನ್ನು ಧೈರ್ಯವಾಗಿ ಪ್ರಕಟಿಸಲು ಎದೆಗಾರಿಕೆ ಬೇಕು ಅದು ವಾರ್ತಾಭಾರತಿಗಿದೆ’’ ಎಂದು ಮನದುಂಬಿ ಪತ್ರಿಕೆಯ ಬದ್ಧತೆಯನ್ನು ಶ್ಲಾಘಿಸಿದರು. ‘‘ನೀವು ಮಹಿಷಾಸುರನ ಬಗ್ಗೆ ಒಂದು ಲೇಖನ ಬರೆದು ವಾರ್ತಾಭಾರತಿಗೆ ಮಾತ್ರ ಕಳುಹಿಸಿ’’ ಎಂದು ಹೇಳಿ ಫೋನ್‌ಕಾಲ್ ಕಟ್ ಮಾಡಿದರು. ‘ವಾರ್ತಾಭಾರತಿ’ ಕೃಪೆಯಿಂದ ಪ್ರೊ.ಗುರು ಅವರ ಲೇಖನ ಮಹಿಷಾಸುರ ಇತಿಹಾಸ ಪುರುಷ ಎಂಬುದು ಇಡೀ ರಾಜ್ಯ ತಲುಪಿತ್ತು. ಅಂದು ‘ವಾರ್ತಾಭಾರತಿ’ಯಲ್ಲಿ ಲೇಖನ ಓದಿದ ಎಷ್ಟೋ ಜನರು ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿ ಪ್ರೊ.ಗುರು ಅವರಿಗೆ ಅಭಿನಂದಿಸಿದರು. ಅಂದು ಮೈಸೂರಿನಲ್ಲಿ ‘ವಾರ್ತಾಭಾರತಿ’ ಪತ್ರಿಕೆಯ ಪ್ರತಿಗಳು ಮಧ್ಯಾಹ್ನದ ಹೊತ್ತಿಗೆ ಅಂಗಡಿ-ಮಳಿಗೆಗಳಲ್ಲಿ ಖಾಲಿಯಾಗಿತ್ತು. ಆದ್ದರಿಂದ ಲೇಖನವನ್ನು ಜೆರಾಕ್ಸ್ ಮಾಡಿಸಿ ‘ಮಹಿಷ ದಸರಾ’ ಕಾರ್ಯಕ್ರಮಗಳಲ್ಲಿ ಸಭಿಕರಿಗೆ ಹಂಚಲಾಗಿತ್ತು. ಪ್ರೊ.ಗುರು ಅವರು ಹೇಳಿದ ಹಾಗೆ ಮೂರ್ನಾಲ್ಕು ದಿನ ಬಿಟ್ಟು ನಾನು ಕಳುಹಿಸಿದ್ದ ಲೇಖವೂ ಪ್ರಕಟವಾಯಿತು. ಮಹಿಷಾಸುರನ ಕುರಿತು ‘ವಾರ್ತಾಭಾರತಿ’ ಪತ್ರಿಕೆಯು ರಾಜ್ಯದ ವಿವಿಧ ಲೇಖಕರು ಹಾಗೂ ಚಿಂತಕರು ಬರೆದ ಲೇಖನಗಳನ್ನು ಪ್ರಕಟಿಸಿದ ಪರಿಣಾಮವಾಗಿ ಮಹಿಷ ದಸರಾವನ್ನು 2017ರಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಗತಿಪರ ಸಂಘಟನೆಗಳು ಆಚರಿಸಲು ಮುಂದಾಗಿದ್ದು ಮಾತ್ರ ಒಂದು ಇತಿಹಾಸ.
ಸಮಾಜದ ಆಗುಹೋಗುಗಳನ್ನು ವಸ್ತುನಿಷ್ಠವಾಗಿ ಜನರ ಮುಂದಿಡುವುದು ಮಾತ್ರ ಪತ್ರಿಕೆಗಳ ಕೆಲಸವಲ್ಲ. ಬಹುಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಭ್ಯುದಯಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿರುವುದು ಪತ್ರಿಕೆಗಳ ಜವಾಬ್ದಾರಿಯಾಗಿದೆ. ವೈದಿಕರ ಕುಯುಕ್ತಿಯಿಂದ ಸಾವಿರಾರು ವರ್ಷಗಳಿಂದ ಅಕ್ಷರವಂಚಿತರಾಗಿದ್ದ ಸಮುದಾಯಗಳು ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಚಾರ-ವಿಚಾರ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಗಳನ್ನು ತೆಗೆದು-ಹೆಕ್ಕಿ ಪುನರ್ ವಿಶ್ಲೇಷಿಸುವ ತವಕದಲ್ಲಿರುವವರಿಗೆ ಪತ್ರಿಕೆಗಳು ಕಿವಿ, ಕಣ್ಣು ಮತ್ತು ಧ್ವನಿಯಾಗಬೇಕು. ಆದರೆ, ಇಂದಿನ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಯುಗದಲ್ಲಿ ಬಹುತೇಕ ಮಾಧ್ಯಮಗಳ ನಿಲುವುಗಳು ಅಸ್ಪಷ್ಟ ಹಾಗೂ ಪತ್ರಿಕಾ ಧರ್ಮವಂತೂ ಅಗೋಚರ. ಇಂತಹವರ ಮಧ್ಯೆ ‘ವಾರ್ತಾಭಾರತಿ’ ದಮನಿತ ಮತ್ತು ಶೋಷಿತರ ಪಾಲಿಗೆ ಬಹುಗಟ್ಟಿ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ‘ಮಹಿಷ ದಸರಾ ಆಚರಣೆ’ ಒಳಗೊಂಡಂತೆ ನೂರಾರು ಉದಾಹರಣೆಗಳಿವೆ.
ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಯಥಾಸ್ಥಿತಿವಾದಿಗಳು ಮೊದಲಾದ ಜನವಿರೋಧಿ ಶಕ್ತಿಗಳ ಕಪಿಮುಷ್ಟಿಗೆ ಸಿಲುಕಿಕೊಂಡು ನರಳುತ್ತಿರುವ ಪತ್ರಿಕೆಗಳ ಮಧ್ಯೆ ವಾರ್ತಾಭಾರತಿ ಪತ್ರಿಕೆಯು ಜಾತ್ಯತೀತ ಮನೋಭಾವ, ಸಾಮಾಜಿಕ ಸೌಹಾರ್ದ, ಶೋಷಿತರ ಹಿತಾಸಕ್ತಿಯ ಹಂಬಲ, ಮಹಿಳಾ ಪರ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನಿಟ್ಟುಕೊಂಡು ಮುನ್ನಡೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಾಡಿನ ನೆಲ, ಜಲ, ಭಾಷೆ, ನುಡಿ, ಸಾಹಿತ್ಯ, ಸಂಸ್ಕೃತಿ ಪ್ರವರ್ಧನೆಗೆ ತನ್ನದೇ ಆದ ಅಮೋಘ ಸೇವೆ ನೀಡುತ್ತಿದೆ. ದೇಶ ಹಾಗೂ ಪ್ರಚಲಿತ ಘಟನೆಗಳ ಕುರಿತು ‘ವಾರ್ತಾಭಾರತಿ’ಯಲ್ಲಿ ಪ್ರಕಟವಾಗುವ ನಿಷ್ಠುರ ಸಂಪಾದಕೀಯ, ಅಂಕಣಗಳು ಹಾಗೂ ವೈಚಾರಿಕ ಸುದ್ದಿ ವಿಶ್ಲೇಷಣೆಗಳು ಓದುಗರ ಮಿದುಳನ್ನು ಚುರುಕುಗೊಳಿಸುತ್ತಿದೆ.
ಇನ್ನು ರಾಜ್ಯದೆಲ್ಲೆಡೆ ಜರುಗುತ್ತಿರುವ ದಲಿತ ಚಳವಳಿ, ರೈತ ಚಳವಳಿ, ಕಾರ್ಮಿಕ ಚಳವಳಿ, ವಿದ್ಯಾರ್ಥಿ ಚಳವಳಿ, ಪರಿಸರ ಚಳವಳಿ, ಮಹಿಳಾ ಚಳವಳಿ ಹೀಗೆ ಮೊದಲಾದ ಪ್ರಗತಿಪರ ಚಳವಳಿಗಳಿಗೆ ‘ವಾರ್ತಾಭಾರತಿ’ ಸ್ಫೂರ್ತಿ ಮತ್ತು ಚೈತನ್ಯ ತುಂಬುತ್ತಿದೆ. ಪತ್ರಿಕೆಯು ತನ್ನ ಅಪೂರ್ವ ಪತ್ರಿಕಾ ಧರ್ಮ, ವೈವಿಧ್ಯಮಯ ಬರಹಗಳು, ಧೀಮಂತ ವಿಶ್ಲೇಷಣೆ ಮತ್ತು ವಿಮರ್ಶೆಗಳು, ಶಿಸ್ತುಬದ್ಧ ತನಿಖಾ ವರದಿಗಳು, ಸೃಜನಶೀಲ ವಿನ್ಯಾಸ, ಪ್ರಯೋಗಗಳು ಹಾಗೂ ಜನನಿಷ್ಠ ಪತ್ರಿಕಾ ಕೃಷಿಯಿಂದಾಗಿ ತನ್ನದೇ ಆದ ಸ್ಥಾನಮಾನವನ್ನು ಕರ್ನಾಟಕ ಪತ್ರಿಕೋದ್ಯಮದಲ್ಲಿ ಉಳಿಸಿಕೊಂಡಿದೆ. ರಾಜ್ಯ ಮತ್ತು ದೇಶದೊಳಗಿರುವ ಭ್ರಷ್ಟ ಮುಖಗಳನ್ನು ಅನಾವರಣಗೊಳಿಸಿ 22ರ ಹೊಸ್ತಿಲಲ್ಲಿರುವ ವಾರ್ತಾಭಾರತಿ ಪತ್ರಿಕೆಯು ರಾಜಕೀಯ ಶುದ್ಧೀಕರಣಕ್ಕೆ ನಿರಂತರವಾಗಿ ನಿರ್ಭೀತಿಯಿಂದ ಹೋರಾಡುತ್ತಿರುವುದು ಓದುಗರ ಕಣ್ಣಿಗೆ ಕಾಣುತ್ತಿದ್ದು ಎಲ್ಲರೂ ಮೆಚ್ಚುವಂತಹದ್ದು. ವಾರ್ತಾಭಾರತಿ ಪತ್ರಿಕೆಯು ರಾಜ್ಯದಲ್ಲಿ ಅನೇಕ ಬರಹಗಾರರನ್ನು, ಸಾಹಿತಿಗಳನ್ನು ಹಾಗೂ ಚಿಂತಕರನ್ನು ಬೆಳೆಸಿದೆ, ಗಳಿಸಿದೆ ಹಾಗೂ ಗಟ್ಟಿಗೊಳಿಸಿದೆ. ಪತ್ರಿಕೆ ಆರಂಭ ಆದಾಗ ಹಾಕಿಕೊಂಡಿದ್ದ ಗುರಿ ತಲುಪಿದ್ದರೂ ಬದಲಾಗುತ್ತಿರುವ ಸನ್ನಿವೇಶಗಳಿಗೆ ನವ ಗುರಿಗಳನ್ನು ನಿರ್ಧರಿಸಿಕೊಂಡು 21 ವರ್ಷಗಳನ್ನು ಪೂರೈಸುತ್ತಿರುವ ಹಾಗೂ ಸತ್ಯದ ಪರ ನಿಲ್ಲುವ ವಾರ್ತಾಭಾರತಿ ಪತ್ರಿಕಾ ತಂಡಕ್ಕೆ ಅಭಿನಂದಿಸುತ್ತೇನೆ.