ಒಳನುಡಿಗಳು ಮತ್ತು ಸಾಂಸ್ಕೃತಿಕ ಬಹುತ್ವ
ಭಾಗ- 1
ದೇಶ ಸಮಾಜ ಸಮುದಾಯ ಪ್ರಾಂತಗಳನ್ನು ಅಲ್ಲಿರುವ ಅಧಿಕಾರಸ್ಥ ಪಂಗಡ, ಭಾಷೆ, ಧರ್ಮ, ಸಂಸ್ಕೃತಿಗಳ ಮೂಲಕ ಗುರುತಿಸುವುದು ರೂಢಿಗತ ಪದ್ಧತಿಯಾಗಿದೆ. ಆದರೆ ವಾಸ್ತವವಾಗಿ ಅಲ್ಲಿ ಹಲವಾರು ಧರ್ಮ, ಭಾಷೆ, ಪಂಗಡ, ಸಂಸ್ಕೃತಿಗಳಿರುತ್ತವೆ. ಭಾರತದ ಯಾವುದೇ ಧರ್ಮದಲ್ಲಿ ಹಲವಾರು ವಿಭಿನ್ನ ಪಂಗಡಗಳು, ಪಂಗಡಗಳಿಗೆ ಅವುಗಳದ್ದೇ ಆದ ಭಾಷೆ, ಜೀವನವಿಧಾನ, ಲೋಕದೃಷ್ಟಿ ಇರುತ್ತವೆ. ಅಫ್ಘಾನಿಸ್ತಾನದಲ್ಲಿ ಬಲೂಚಿಗಳು, ಹಜಾರಾ, ಶಿಯಾಗಳು, ಪಶ್ತೂನರು, ಉಜ್ಭೆಕ್‌ಗಳು, ತುರ್ಕಮನ್‌ಗಳು, ಪರ್ಶಿಯನ್ನರು ಇದ್ದು, ಧರ್ಮ ಒಂದೇ ಆದರೂ ಎಲ್ಲರಿಗೂ ಪ್ರತ್ಯೇಕ ಭಾಷೆ, ಸಂಸ್ಕೃತಿಗಳಿವೆ. ಪಾಕಿಸ್ತಾನದಲ್ಲಿ ಉರ್ದು ಆಡಳಿತ ಭಾಷೆಯಾಗಿದ್ದರೂ, ಆಡುಭಾಷೆಯಾಗಿ ಅದು ಅಲ್ಪಸಂಖ್ಯಾತ. ಪಂಜಾಬಿ, ಸಿಂಧಿ, ಬಲೂಚಿ, ಪುಶ್ತು, ಕಾಶ್ಮೀರಿ ಸಮುದಾಯಗಳು ತಮ್ಮದೇ ಭಾಷೆಯನ್ನು ಹೊಂದಿವೆ. ಈ ಒಳಸ್ತರಗಳ ವೈವಿಧ್ಯ ಮತ್ತು ಬಹುತ್ವವು ಭಾರತದ ಎಲ್ಲ ಧಾರ್ಮಿಕ ಸಾಮಾಜಿಕ ಸಮುದಾಯಗಳ ವಿಷಯದಲ್ಲೂ ನಿಜ.
ಭಾಷೆಯ ವಿಷಯ ತೆಗೆದುಕೊಂಡರೆ, ಇಂಡೋನೇಶ್ಯ, ನ್ಯೂಗಿನಿ ನಂತರ ಭಾರತವೇ ಬಹುಸಂಖ್ಯೆಯ ಭಾಷೆಗಳಿರುವ ದೇಶ. ಸಂವಿಧಾನದಲ್ಲಿ 22 ಭಾಷೆಗಳನ್ನು ಅಧಿಕೃತವಾಗಿ ಮಾನ್ಯಗೊಳಿಸಲಾಗಿದೆ. ಉಳಿದಂತೆ ನಾಲ್ಕು ಸಾವಿರಕ್ಕಿಂತ ಅಧಿಕ ನುಡಿಗಳಿವೆ. ಈ ಬಹುಭಾಷಿಕತೆ ಕರ್ನಾಟಕದ ಮಟ್ಟಿಗೂ ನಿಜ. ಇಲ್ಲಿ ಕನ್ನಡವು ಪ್ರಧಾನ ಸ್ಥಾನದಲ್ಲಿದ್ದರೂ, ಉರ್ದು, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಕೊರಗ, ಲಂಬಾಣಿ, ತುಳು, ಇಂಗ್ಲಿಷ್, ಬ್ಯಾರಿ, ಕೊಂಕಣಿ, ಹಕ್ಕಿಪಿಕ್ಕಿ, ಕೊಡವ ಮೊದಲಾದ 20ಕ್ಕಿಂತಲೂ ಹೆಚ್ಚು ಜನಭಾಷೆಗಳಿವೆ. ಇವುಗಳ ಜತೆ ಧರ್ಮ ಮತ್ತು ಜ್ಞಾನದ ಭಾಷೆಗಳಾಗಿರುವ ಸಂಸ್ಕೃತ, ಅರಬಿ, ಫಾರಸಿಗಳಿವೆ. ಮೇಲ್ಕಾಣಿಸಿದ ಭಾಷೆಗಳ ಶಬ್ದಗಳು ಸೇರಿ ಕನ್ನಡವನ್ನು ಸಮೃದ್ಧಗೊಳಿಸಿವೆ. ಈ ನುಡಿಗಳ ಜತೆಗಿನ ಒಡನಾಟದ ಸ್ವರೂಪ ಬದಲಾದಂತೆ ಕನ್ನಡದ ಬಹುತ್ವದ ಚಹರೆಯೂ ಬದಲಾಗುತ್ತ ಬಂದಿದೆ.
ಹಲವು ಪ್ರಾಂತಗಳಲ್ಲಿ ಚದುರಿ ಹೋಗಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನು ಒಗ್ಗೂಡಿಸಿದಾಗ ಸಹಜವಾಗಿಯೇ ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಯಿತು. ಬಹುಭಾಷಿಕ ದೇಶದಲ್ಲಿ ಆಡಳಿತದ ಅನುಕೂಲಕ್ಕೆ ಪ್ರಾಂತಗಳನ್ನು ಹೇಗೆ ಒಗ್ಗೂಡಿಸಿದರೂ, ಗಡಿಗಳಲ್ಲಿ ಹಲವು ಭಾಷಿಕರು ಉಳಿದುಬಿಡುವರು. ಹೀಗಾಗಿ ಕರ್ನಾಟಕವು ಆಡಳಿತ ಶಿಕ್ಷಣ ವ್ಯವಹಾರಗಳಲ್ಲಿ ಕನ್ನಡವು ಪ್ರಧಾನವಾಗಿರುವ ಜನನುಡಿಗಳ ವಿಷಯದಲ್ಲಿ ಬಹುಭಾಷಿಕವಾಗಿರುವ ರಾಜ್ಯ. ಕನ್ನಡವು ಹೇರಿಕೆೆ ಬಂದಾಗಲೆಲ್ಲ ಆರ್ಥಿಕ ಅಧಿಕಾರಸ್ಥ ಇಂಗ್ಲಿಷನ್ನು, ರಾಜಕೀಯ ಅಧಿಕಾರಸ್ಥ ಹಿಂದಿಯನ್ನು, ಧಾರ್ಮಿಕ ಅಧಿಕಾರಸ್ಥ ಸಂಸ್ಕೃತವನ್ನು ಪ್ರತಿರೋಧಿಸುತ್ತಲೇ ತನ್ನ ಸ್ವಾಯತ್ತತೆಯ ಎಚ್ಚರವನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ‘ಕನ್ನಡ ಮಾತು ತಲೆಯೆತ್ತುವ ಬಗೆ’ಯನ್ನು ಆಂಗ್ಲ ಪ್ರಾಧ್ಯಾಪಕ ಬಿಎಂಶ್ರೀ ಚಿಂತಿಸುವುದು; ಕನ್ನಡ ಪ್ರಾಧ್ಯಾಪಕರಾದ ಕುವೆಂಪು ‘ನಮಗೆ ಬೇಕಾದ ಇಂಗ್ಲಿಷ್’ ಲೇಖನ ಬರೆಯುವುದು ಮಾರ್ಮಿಕ ಸಂಗತಿ. ಇವರಿಬ್ಬರೂ ‘ಕನ್ನಡಿಗರು ತಮ್ಮ ಲೌಕಿಕ ಬದುಕಿಗೆ ಬೇಕಾದ್ದನ್ನು ಎಲ್ಲ ಕಡೆಯಿಂದ ಪಡೆಯಬೇಕು’ ಎಂದು ಆಲೋಚಿಸಿದ್ದಕ್ಕೂ, ಕನ್ನಡ ನುಡಿ ಮತ್ತು ಸಾಹಿತ್ಯಗಳು ತಮಗೆ ಬೇಕಾದ ಪ್ರೇರಣೆಯನ್ನು ಹಲವು ಭಾಷಾ ಪರಂಪರೆಗಳಿಂದ ಪಡೆದಿರುವುದಕ್ಕೂ ನಂಟಿದೆ. ಶ್ರೀಯವರು ಬ್ರಿಟಾನಿಯಾಳನ್ನು ಕನ್ನಡಮ್ಮನಿಗೆ ಇನಿಯ ತಂಗಿಯಾಗಿ, ಕುವೆಂಪುರವರು ಕನ್ನಡಮಾತೆಯನ್ನು ಭಾರತ ಜನನಿಯ ಮಗಳಾಗಿ ಚಿತ್ರಿಸಿದ್ದು ಇದೇ ನೆಲೆಯಲ್ಲಿ. ಕರ್ನಾಟಕದ ಇತಿಹಾಸ, ಸಂಸ್ಕೃತಿ, ಪರಂಪರೆಗಳನ್ನು, ಪೋರ್ಚುಗೀಸ್, ಇತಾಲಿಯಾ, ಫಾರಸಿ, ಅರಬಿ, ಉರ್ದು, ತಮಿಳು, ಮರಾಠಿ ಭಾಷೆಗಳಲ್ಲಿ ಲಭ್ಯವಿರುವ ಸಂಶೋಧನ ಆಕರಗಳ ಮೂಲಕ ನಿರ್ವಚಿಸಿದರೆ, ಬಹುಮುಖಿಯಾದ ಬೇರೆ ಸತ್ಯಗಳು ಗೋಚರಿಸುವವು.
ಕನ್ನಡದ ಬಹುತ್ವವು ಜಗತ್ತಿನ ಭಾಷೆಗಳ ಒಡನಾಟದಲ್ಲಿ ರೂಪುಗೊಂಡಂತೆ, ತನ್ನ ಒಳರೂಪಗಳ ಮೂಲಕವೂ ರೂಪುಗೊಂಡಿದೆ. ಕನ್ನಡದ ಒಳನುಡಿಗಳನ್ನು ಕವಿರಾಜಮಾರ್ಗವು ‘ಕನ್ನಡಂಗಳ್’ ಎಂದಿತು. ಈ ಹಿನ್ನೆಲೆಯಲ್ಲಿ ಕುಂದಾಪುರ, ಚಾಮರಾಜನಗರ, ಧಾರವಾಡ, ಬೆಳಗಾವಿ, ಕೋಲಾರ, ಕಲಬುರಗಿ, ಬೀದರ್ ಕನ್ನಡದ ವಿಶಿಷ್ಟ ರೂಪಗಳನ್ನು ಗಮನಿಸಬಹುದು. ಕರ್ನಾಟಕದ ಜನಭಾಷೆಗಳಾದ ಕೊಂಕಣಿ, ಉರ್ದು, ತಮಿಳು, ತೆಲುಗು, ಕೊಡವ, ತುಳುಗಳಲ್ಲೂ ಪ್ರದೇಶವಾರು, ಜಾತಿವಾರು, ಧರ್ಮವಾರು ಒಳರೂಪಗಳಿವೆ. ಕ್ರೈಸ್ತರ, ಸಾರಸ್ವತರ, ನವಾಯತಿಗಳ, ಕುಡುಬಿಯರ, ಖಾರ್ವಿಗಳ, ಕೊಂಕಣಿಗಳಲ್ಲಿ ವಿಶಿಷ್ಟ ವ್ಯತ್ಯಾಸಗಳಿವೆ. ಮುಸ್ಲಿಮರ ಕೊಂಕಣಿಯಲ್ಲಿ ಹೆಚ್ಚು ಅರಬಿ ಶಬ್ದಗಳಿದ್ದರೆ, ಕ್ರೈಸ್ತರ ಕೊಂಕಣಿಯಲ್ಲಿ ತುಳು, ಆಂಗ್ಲ ಶಬ್ದಗಳೂ, ಸಾರಸ್ವತರ ಕೊಂಕಣಿಯಲ್ಲಿ ಸಂಸ್ಕೃತ ಶಬ್ದಗಳೂ ಅಧಿಕ. ಕರ್ನಾಟಕದ ಮುಸ್ಲಿಮರು ಉರ್ದು, ಕನ್ನಡ, ಬ್ಯಾರಿ, ಮಲಾಮೆ, ಮಲಯಾಳಂ, ಕೊಂಕಣಿಗಳನ್ನು ಮನೆಮಾತಾಗಿ ಆಡುವರು. ಕರ್ನಾಟಕದಲ್ಲಿ ತುಳು, ಕೊಂಕಣಿ, ಕನ್ನಡ, ಮರಾಠಿ, ಮನೆಮಾತಿನ ಬ್ರಾಹ್ಮಣರಿದ್ದಾರೆ. ಮರಾಠಿ, ಕೊಂಕಣಿ, ಕೊರಗ, ಕೊಡವ, ಕನ್ನಡ, ತೆಲುಗು ಮನೆಮಾತಿನ ದಲಿತರಿದ್ದಾರೆ.
ರಾಜಕೀಯ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ಅಲ್ಲಿರುವ ಫೆಡರಲ್ ತತ್ವಗಳ ಮೂಲಕ ಮೌಲ್ಯಮಾಪನ ಮಾಡುವ ಒಂದು ರಿವಾಜಿದೆ. ಅಧಿಕೃತವಾದ ಪ್ರಾಂತೀಯ ಭಾಷೆಗಳು ತಮ್ಮ ಸಹವಾಸಿ ಜನಭಾಷೆಗಳ ಸಹಜ ಹಕ್ಕುಗಳನ್ನು ಮತ್ತು ತಮ್ಮದೇ ಒಳನುಡಿಗಳನ್ನು ಹೇಗೆ ನಿಭಾಯಿಸುತ್ತಿವೆ ಎಂಬ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ, ಪ್ರಾಂತಗಳ ಅಧಿಕೃತ ಭಾಷೆಯು ಯಾವುದೇ ಅಧಿಕಾರಸ್ಥ ಭಾಷೆಗಳನ್ನು ಹೇರಿಕೊಂಡಾಗಲಿ, ಜತೆವಾಸಿ ಅಧಿಕಾರಸ್ಥವಲ್ಲದ ಜನಭಾಷೆಗಳನ್ನು ತುಳಿದಾಗಲಿ ಬದುಕಬೇಕಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಆಚರಿಸುವುದು ಕನ್ನಡ ರಾಜ್ಯೋತ್ಸವವಲ್ಲ, ಕರ್ನಾಟಕ ರಾಜ್ಯೋತ್ಸವ. ಇದಕ್ಕೆ ಹೋಲಿಸಿದರೆ, ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಹಿಂದಿಯು ಮಾಗಧಿ, ಅವಧಿ, ಮೈಥಿಲಿ, ಭೋಜಪುರಿ, ಮಾರವಾಡಿ, ಮೇವಾಡಿ, ಕುಮಾಯೂನಿ, ಕಾಂಗಡಿ, ಘಡವಾಲಿ, ಬ್ರಜ, ಬುಂದೇಲಖಂಡಿ, ಖಡಿಬೋಲಿ, ಮಲಾವಿ, ಬಘೇಲಿ, ಕನ್ನೊಜಿ, ಬಾಗ್ರಿ, ಛತ್ತೀಸ್‌ಘಡಿ, ಹರಿಯಾಣವಿ, ಪಹಾಡಿ ಮೊದಲಾದ ಜನಭಾಷೆಗಳ ಸ್ವತಂತ್ರ ಅಸ್ತಿತ್ವವನ್ನು ತನ್ನ ಏಕರೂಪೀಕರಣದ ಗರ್ಭದಲ್ಲಿ ಕರಗಿಸುತ್ತಿದೆ. ಮತೀಯ ಸಿದ್ಧಾಂತದ ಭಾಗವಾಗಿರುವ ‘ಹಿಂದೂ-ಹಿಂದಿ-ಹಿಂದೂಸ್ಥಾನ್’ ಘೋಷಣೆ ಅನುಷ್ಠಾನಗೊಂಡರೆ, ಹಿಂದಿಯೇತರವಾದ ಎಲ್ಲ ಜನಭಾಷೆಗಳ ಅವಸ್ಥೆ ಕೆಳದರ್ಜೆಗಿಳಿಯುತ್ತದೆ.
ನಾಡಿನಲ್ಲಿ ಬಹುಭಾಷೆಗಳು ಒಟ್ಟಿಗೆ ಬದುಕುವುದು ಒಂದು ಆಯಾಮವಾದರೆ, ಜನರೇ ಬಹುಭಾಷಿಕ ಆಗಿರುವುದು ಇನ್ನೊಂದು ಆಯಾಮ. ಈ ಬಹುಭಾಷಿಕ ಪರಿಸರವು ಸಾಮಾಜಿಕ ಸಂಪರ್ಕ, ವ್ಯವಹಾರ ಹಾಗೂ ಸಾಹಿತ್ಯ, ಸಿನೆಮಾ, ನಾಟಕದಂತಹ ಕಲೆಗಳಲ್ಲಿ ವಿಭಿನ್ನ ವಿನ್ಯಾಸದಲ್ಲಿ ನಿಯೋಜಿತವಾಗಿದೆ. ಅತಿಹೆಚ್ಚು ಭಾಷೆಗಳಿರುವ ಕರಾವಳಿಯಲ್ಲಿ ಪ್ರತಿಯೊಬ್ಬರೂ ಮೂರು ನಾಲ್ಕು ಭಾಷೆ ಆಡಬಲ್ಲರು. ಗಡಿಭಾಗದ ಜನ ಮಾತುಕತೆಯನ್ನು ಒಂದು ಭಾಷೆಯಿಂದ ಇನ್ನೊಂದಕ್ಕೆ ಸಹಜವಾಗಿ ಜಿಗಿಯುವರು. ಕೋಲಾರ ಭಾಗದ ಜನ ತಮ್ಮ ಮಾತುಕತೆಯಲ್ಲಿ ಕನ್ನಡ, ಉರ್ದು, ತೆಲುಗು ಮಾತಿನ ವ್ಯಕ್ತಿಗಳು ಏನೆಂದರು ಎಂಬುದನ್ನು, ಆಯಾ ಭಾಷೆಗಳ ವಾಕ್ಯಗಳನ್ನೇ ಉದ್ಧರಿಸಿ ಮಾತಾಡುವರು. ಈ ಸನ್ನಿವೇಶವು ಕೇರಳ, ತಮಿಳುನಾಡು, ಮಹಾರಾಷ್ಟ್ರ ಗಡಿಗಳಲ್ಲೂ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ತತ್ವಪದಕಾರರು ಒಂದೇ ತತ್ವಪದದಲ್ಲಿ ಹಲವು ಭಾಷೆಯ ಚರಣಗಳನ್ನು ಜೋಡಿಸುವುದನ್ನು ಗಮನಿಸಬಹುದು.
ಹಿಂದೆ, ಭಾಷಾಶಾಸ್ತ್ರದಲ್ಲಿ ಕನ್ನಡದ ಒಳನುಡಿಗಳನ್ನು ಮಂಗಳೂರು, ಮೈಸೂರು, ಧಾರವಾಡ, ಗುಲಬರ್ಗ ಕನ್ನಡವೆಂದು ಕಲಿಸುವ ಪದ್ಧತಿಯಿತ್ತು. ಆಡಳಿತದ ಅನುಕೂಲಕ್ಕಾಗಿ ಮಾಡಿಕೊಂಡ ಭೌಗೋಳಿಕ ವಿಭಜನ ಚೌಕಟ್ಟಿನಲ್ಲಿರುವ ಇದು ಭಾಷಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯವಾಗಿ ಅಸೂಕ್ಷ್ಮ ಮತ್ತು ಅವಾಸ್ತವಿಕ. ತುಳುಗಂಧಿಯಾದ ಮಂಗಳೂರು ಕನ್ನಡಕ್ಕಿಂತ, ಹಳೆಗನ್ನಡದ ಪದಗಳನ್ನು ಹೆಚ್ಚು ಉಳಿಸಿಕೊಂಡಿರುವ ಕುಂದಾಪುರ ಕನ್ನಡವು ಬೇರೆ; ಬೆಳಗಾವಿ ಕನ್ನಡವು ಧಾರವಾಡ, ಹಾವೇರಿ, ಗದಗದ ಕನ್ನಡಗಳಿಗಿಂತ ಭಿನ್ನ; ರಾಯಚೂರು, ಕಲಬುರಗಿ, ಬೀದರ್ ಕನ್ನಡಗಳದ್ದು ಪ್ರತ್ಯೇಕ ಜಗತ್ತು. ಪ್ರತಿಯೊಂದು ಪ್ರಾದೇಶಿಕ ಕನ್ನಡದೊಳಗೂ ಹತ್ತಾರು ಒಳನುಡಿಗಳು. ಮೈಸೂರು ಕನ್ನಡ ಎಂಬ ಚೌಕಟ್ಟಿನಲ್ಲಿ ಬರುವ ಚನ್ನರಾಯಪಟ್ಟಣ, ಕೊಳ್ಳೆಗಾಲ, ಮಂಡ್ಯ ಕನ್ನಡಗಳಲ್ಲಿ ಎಷ್ಟೊಂದು ಫರಕಿದೆ? ಚನ್ನರಾಯಪಟ್ಟಣದ ರಾಗವಾಗಿ ಎಳೆದು ಮಾತಾಡುವ ಕನ್ನಡಕ್ಕೆ ಹೋಲಿಸಿದರೆ ಚಾಮರಾಜನಗರದ ಕನ್ನಡದ ಕಾಕುಗಳೇ ಬೇರೆ. ಹಾಡಿಗಳಲ್ಲಿ ವಾಸಿಸುವ ಕಾರಣಕ್ಕೇ ಜೇನುಕುರುಬರು, ಇರುಳಿಗರು, ತೊದವರು, ಗೊಂಡರು, ಹಾಲಕ್ಕಿಯವರು ತಮ್ಮದೇ ಕನ್ನಡ ಹೊಂದಿದ್ದಾರೆ.
ಪ್ರಭುತ್ವವು ರಾಜಕೀಯ ಒತ್ತಡಗಳಿಗೆ ಮಣಿದು, ಕೆಲವೊಮ್ಮೆ ಜನಭಾಷೆಗಳಿಗೂ ಅವುಗಳ ಒಳಚಹರೆಗಳಿಗೂ ಮನ್ನಣೆ ಕೊಡುವುದುಂಟು. ಸುಳ್ಯ ಪರಿಸರದಲ್ಲಿರುವ ಅರೆಭಾಷೆಯು ತನ್ನ ಬೆಳೆವಿಗಾಗಿ ಅಕಾಡಮಿಯನ್ನು ಪಡೆಯಿತು. ಈ ಭಾಗ್ಯ ಕುಂದಾಪುರ, ಚಾಮರಾಜನಗರ, ಬೀದರಗನ್ನಡಗಳಿಗೆ ಸಿಕ್ಕಿಲ್ಲ. ಆದರೆ ಪ್ರಭುತ್ವ ಕೊಡಲಾಗದ ಮನ್ನಣೆಯನ್ನು ಒಳನುಡಿಗಳ ಬಹುರೂಪೀ ಚಹರೆಗಳನ್ನು ದಾಖಲಿಸುವ ನಿಘಂಟುಗಳು ಕೊಟ್ಟವು. ಈ ದಿಸೆಯಲ್ಲಿ ಕುಂದಾಪ್ರ ಕನ್ನಡ, ಹವ್ಯಕ, ಬೀದರಗನ್ನಡದ ನಿಘಂಟುಗಳನ್ನು ಉಲ್ಲೇಖಿಸಬೇಕು. ಮುದೇನೂರ ಸಂಗಣ್ಣನವರ ‘ಚಿಗಟೇರಿ ಪದಕೋಶ’ವು ಇನ್ನೊಂದು ಹೆಜ್ಜೆ ಮುನ್ನಡೆದು, ಪ್ರತೀ ಊರಿಗೂ ಕನ್ನಡದ ಚಹರೆ ಬದಲಾಗುತ್ತದೆ ಎಂಬ ದಿಟವನ್ನು ಕಾಣಿಸಿತು. ಆದರೆ ನಿಘಂಟಿನೊಳಗಿನ ಶಬ್ದರಾಶಿಯ ವೈವಿಧ್ಯವು, ಜನರ ದೈನಿಕ ಮಾತುಕತೆ ಮತ್ತು ಬರೆಹದಲ್ಲಿ ಸೇರಿಕೊಂಡಾಗಲೇ ನಿಜವಾದ ಬಹುತ್ವ ಸಂಭವಿಸುತ್ತದೆ. ಭಾಷಿಕ ಸ್ತರವೈವಿಧ್ಯವನ್ನು ಕಾಣಿಸುವ ಈ ನಿಘಂಟುಗಳು ಕೇವಲ ಶಬ್ದಕೋಶಗಳಲ್ಲ. ಸಂಸ್ಕೃತಿ ಕೋಶಗಳೂ ಹೌದು. ಕುಂದಾಪುರ ಕನ್ನಡ ನಿಘಂಟಿನ ಸಂಪಾದಕರು ತಮ್ಮ ಸಂಪಾದನ ಕಾರ್ಯದ ಬಗ್ಗೆ ಹೇಳಿಕೊಂಡಿರುವುದು ಇದಕ್ಕೆ ನಿದರ್ಶನ:
‘‘ಶಬ್ದ, ನುಡಿಗಟ್ಟು, ಹಾಡು ಒಗಟುಗಳ ಸಂಗ್ರಹಣೆಗೆ ಊರುಕೇರಿಗಳನ್ನು ಸುತ್ತಾಡಿದ್ದೇವೆ. ವಿವಿಧ ಜನಾಂಗಗಳ ಕಸುಬು, ರೀತಿ ರಿವಾಜು, ಬದುಕಿನ ಕ್ರಮವನ್ನು ಹತ್ತಿರದಿಂದ ನೋಡಿದ್ದೇವೆ. ಮೀನುಗಾರಿಕೆ, ಬೇಸಾಯ, ಮೂರ್ತೆ, ವಾದ್ಯ, ಗಾಣ, ಬುಟ್ಟಿ ತಯಾರಿಸುವುದು, ಕುಂಬಾರಿಕೆ, ಬೆಲ್ಲ ತಯಾರಿ ಹಾಗೂ ಇನ್ನಿತರ ವೃತ್ತಿಕಸುಬುಗಳಲ್ಲಿ ಬಳಕೆಯಲ್ಲಿರುವ ರೂಢಿಗತ ಹಾಗೂ ತಾಂತ್ರಿಕ ಪದಗಳು; ನಾಗಮಂಡಲ, ಢಕ್ಕೆಬಲಿ, ತನು ಹಾಕುವುದು, ಗಡಿಪೂಜೆ, ಅಜ್ಜಿ, ಸೋಣೆಆರತಿ, ತುಳಸಿಪೂಜೆ, ವಸಂತ, ಪಾಣರಾಟ, ಹರಕೆ ತೀರಿಸುವುದು, ದೈವ-ಭೂತ-ನಾಗದರ್ಶನ, ನಿವಾರಕ ವಿಧಿ ಮೊದಲಾದ ಧಾರ್ಮಿಕ ಕಾರ್ಯಕ್ರಗಳಲ್ಲಿ ಬಳಸಲ್ಪಡುವ ಶಬ್ದಗಳು; ಯಕ್ಷಗಾನ, ಕಂಬಳ, ಕೋಳಿಅಂಕ, ಬೇಟೆ ಮೊದಲಾದ ಸಾಂಸ್ಕೃತಿಕ, ವಿನೋದಾತ್ಮಕ ಚಟುವಟಿಕೆಗಳಲ್ಲಿ ಬಳಕೆಯಾಗುವ ಶಬ್ದ ಸಂಪತ್ತು; ವಿವಿಧ ಜನಾಂಗಗಳ ಬಳಿ ಗೋತ್ರ ಕುಲಮಾನಗಳು, ಸಂಬಂಧಗಳ ಹೆಸರು, ಮನುಷ್ಯ, ಪ್ರಾಣಿ, ಮೀನು, ಪಕ್ಷಿ ಶರೀರದ ವಿವಿಧ ಭಾಗಗಳ ಹೆಸರುಗಳು; ಮರ, ಗಿಡ, ಹುಲ್ಲು, ಹುಳಹುಪ್ಪಟೆಗಳ ಹೆಸರುಗಳು ಮೊದಲಾದವುಗಳನ್ನು ಕಾಣಿಸಿದ್ದೇವೆ. ಬಾಲ್ಯದಲ್ಲಿ ಆಡಿದ ಚನ್ನೆಮಣೆ, ಗುಡ್ಣ, ಎಂಜ್ಲ್‌ಗಿಳಿ ಆಟ, ಬೋಯಾ, ಚಿನ್ನಿಕೋಲು, ಗೋಲಿಯಾಟ ಮೊದಲಾದ ಸ್ಥಳೀಯ ಕ್ರೀಡೆಗಳನ್ನು ಮೆಲುಕು ಹಾಕಿ ಮತ್ತು ತಿಳಿದವರನ್ನು ಭೇಟಿಯಾಗಿ ಈ ಆಟಗಳೊಂದಿಗೆ ಕಣ್ಮರೆಯಾಗಿರುವ ಆಯಾ ಆಟದ ಶಬ್ದಗಳನ್ನು ತಂದಿದ್ದೇವೆ. ರೋಗ ರುಜಿನ ಹಾಗೂ ಅವುಗಳ ಆರೈಕೆ ವಿಧಾನಗಳ ಹೆಸರುಗಳು, ಅಶ್ಲೀಲಪದ, ತಿರಸ್ಕಾರಸೂಚಕ ಪದ, ಬೈಗುಳ, ಶಾಪ, ಹೊಗಳಿಕೆ, ಬಾಲಭಾಷೆ ಶಬ್ದಗಳನ್ನು ಸಂಗ್ರಹಿಸಿದ್ದೇವೆ; ವಿವಿಧ ಜನಾಂಗಗಳಲ್ಲಿ ಮದುವೆ, ಮೈನೆರೆಯುವುದು, ಬೊಜ್ಜ ಮೊದಲಾದ ಆಚರಣೆಗಳಲ್ಲಿ ಬಳಕೆಯಾಗುವ ಪದಗಳನ್ನು ದಾಖಲಿಸಿದ್ದೇವೆ; ಇವುಗಳನ್ನೆಲ್ಲ ನೇರವಾಗಿ ಜೀವಂತವಾದ ಪರಿಸರದಿಂದ ಹೆಕ್ಕಿದ್ದೇವೆ’’
ಈ ವಿವರಣೆಯಲ್ಲಿ ಪ್ರಾದೇಶಿಕ ಬದುಕು ನಿರ್ಮಿಸಿಕೊಂಡಿರುವ ಒಳಜಗತ್ತುಗಳ ಸೂಚನೆಗಳಿವೆ. ಈ ಒಳಜಗತ್ತುಗಳು ಸ್ಥಳೀಯ ಪರಿಸರದ ಪಶುಪಕ್ಷಿ, ಗಿಡಬಳ್ಳಿಗಳ ಸಮೇತ ಸೃಷ್ಟಿಯಾಗಿರುತ್ತವೆ. ಭಾಷೆಯಲ್ಲಿ ಶಬ್ದವೊಂದು ಸಂಸ್ಕೃತಿಯ ಜತೆ ಹೇಗೆ ನಿಕಟ ಸಂಪರ್ಕ ಪಡೆದಿರುತ್ತದೆ ಎನ್ನುವುದಕ್ಕೆ ಹೇಲಿನಿಂದ ಆರಂಭವಾಗುವ ಗಾದೆಗಳನ್ನು ಗಮನಿಸಬಹುದು. ಇವು ಸನ್ನಿವೇಶದ ಕೊರತೆ; ಬಾಳಿನಲ್ಲಿ ಎದುರಾಗುವ ಇಕ್ಕಟ್ಟು, ಜನ ತೋರುವ ಪ್ರಬುದ್ಧತೆ, ಮೂರ್ಖತನ, ಕೇಡಿಗತನ, ಜಿಪುಣತನ; ದುರ್ಜನ ಸಂಗ, ಪಡೆದುಕೊಳ್ಳುವ ವಿವೇಕವನ್ನು ಕುರಿತಿವೆ. ‘ಹೇಲ್ದಿದ್ ಬೂಮಿ ಇಲ್ಲ, ಹೇಳ್ಸ್‌ಕಣ್ದಿದ್ದ್ ಮನ್ಸ್‌ರಿಲ್ಲ’ ಗಾದೆಯಲ್ಲಿರುವ ದಾರ್ಶನಿಕ ನೋಟವನ್ನು ಗಮನಿಸಬೇಕು. ಜೀವನವಿವೇಕವನ್ನು ಗಾದೆಗಳು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಹೇಳುತ್ತವೆ. ಇಲ್ಲಿನ ರೂಪಕಗಳಲ್ಲಿ ಕಾವ್ಯಾತ್ಮಕತೆಯಿದೆ. ಅರಬಿಯಲ್ಲಿ ತಲ್ಹ್ ಖಿಲಾಲ್ ಬಲ್ಹ್ ಬುಸ್ರ್ ರತಬ್ ತಮ್ರ್ ಮೊದಲಾಗಿ ಖರ್ಜೂರದ ವಿವಿಧ ಅವಸ್ಥೆಗಳನ್ನು ಸೂಚಿಸುವ ಶಬ್ದಗಳಿವೆ; ಕನ್ನಡದಲ್ಲಿ ತೆಂಗಿನ ವಿವಿಧ ಅವಸ್ಥೆ ಸೂಚಿಸುವ ಹರಳು, ಕುರುಬು, ಎಳೆನೀರು, ದಿಗಡು, ಕಾಯಿ, ಗಿಟಕು, ಕವಟುಗಳಿವೆ. ಇದರಂತೆ ಮೀನುಗಳ ವೈವಿಧ್ಯ ಮತ್ತು ವಿಶಿಷ್ಟತೆ ಕುರಿತಂತೆ ಅಪಾರಜ್ಞಾನ ಕರಾವಳಿಯ ಜನಭಾಷೆಗಳಲ್ಲಿವೆ. ನುಡಿ ವೈವಿಧ್ಯವು ಭಾಷಿಕ ಸಮುದಾಯದ ಅನುಭವ ಮತ್ತು ಲೋಕಜ್ಞಾನದ ಭಾಗ. ಅನುವಾದದಲ್ಲಿ ಅದನ್ನು ಇನ್ನೊಂದು ನುಡಿಗೆ ದಾಟಿಸಲಾಗದು. ಹೀಗಾಗಿ ಯಾವುದೇ ಭಾಷೆಯ ಸಾವೆಂದರೆ, ಅದು ಹುಟ್ಟಿದ ಪರಿಸರದ ಸ್ಥಳೀಯ ಬಹುರೂಪೀ ಅನುಭವ ಕೋಶದ ಕಣ್ಮರೆ. ಆದಿವಾಸಿ ಭಾಷೆಗಳು ಮರಣಿಸುವಾಗ ಅವುಗಳ ಅನುಭವ ಕೋಶವೂ ಇಲ್ಲವಾಗುತ್ತದೆ. ಈ ಕೋಶವನ್ನು ಬದಲಾಗುತ್ತಿರುವ ಬದುಕಿನ ನೆಲೆಯಲ್ಲಿ ಜೀವಂತವಾಗಿ ಉಳಿಸಿಕೊಳ್ಳುವುದು ಒಂದು ಸವಾಲು. ಈ ಸವಾಲೇ ಪ್ರಾದೇಶಿಕ ವೃತ್ತಿಪರ ನಿಘಂಟುಗಳು ಅಕ್ಷರರೂಪದಲ್ಲಿ ಹಿಡಿದಿಡುವುದಕ್ಕೆ ಪ್ರೇರೇಪಿಸಿರಬಹುದು.