ಒಳನುಡಿಗಳು ಮತ್ತು ಸಾಂಸ್ಕೃತಿಕ ಬಹುತ್ವ
ಭಾಗ- 2
ಕರ್ನಾಟಕದ ಸ್ಥಳೀಯ ಒಳನುಡಿ ನಿಘಂಟುಗಳನ್ನು ನೋಡುವಾಗ, ಮುದ್ರಿತ ಪುಸ್ತಕ, ತಾಳೆಗರಿ, ಶಾಸನಗಳ ಆಧಾರದಿಂದ ಸೃಷ್ಟಿಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ನಿಘಂಟು, ಕನ್ನಡದ ಸಹಸ್ರಾರು ವೈವಿಧ್ಯಗಳನ್ನು ಹೊರಗಿಟ್ಟಿರುವ ಘೋರಸತ್ಯ ಹೊಳೆಯುತ್ತದೆ. ಯಾವುದೇ ಭಾಷೆಯ ನಿರ್ದಿಷ್ಟ ರೂಪವು ಅಧಿಕೃತಗೊಂಡರೆ, ಅದರ ಉಳಿದ ರೂಪವೈವಿಧ್ಯವು ಮರವೆಗೆ ಸಲ್ಲುತ್ತದೆ. ಜತೆಗೆ ಪ್ರಾದೇಶಿಕ ಸಂಸ್ಕೃತಿ ಮತ್ತು ಚರಿತ್ರೆಗಳನ್ನು ಅನಧಿಕೃತಗೊಳಿಸುತ್ತದೆ. ಕುಂದಾಪುರ ಭಾಷೆಗೆ ಬೇರೆಬೇರೆ ಶಬ್ದಗಳು ಸೇರುವ ಬಗ್ಗೆ ಈ ಕೆಳಗಿನ ವಿವರಣೆಯನ್ನು ಇದಕ್ಕಾಗಿ ಉಲ್ಲೇಖಿಸಬಹುದು:
‘‘ಹಿಂದಿ, ಮರಾಠಿ, ಉರ್ದು, ಅರೇಬಿಕ್ ಮೂಲದ ಹಲವಾರು ಪದಗಳು ಕುಂದಾಪ್ರ ಕನ್ನಡದಲ್ಲಿ ಬಳಕೆಯಲ್ಲಿವೆ. ಉದಾ: ಕಲಾಸಿ, ನಸೀಪ್, ಹರ್ಕತ್, ಚಪ್ಪನ್‌ಚೂರ್, ಪಾಯ್ದಿ ಇತ್ಯಾದಿ. ಇವು ಹೆಚ್ಚಾಗಿ ಗಂಗೊಳ್ಳಿ, ಕುಂದಾಪುರದಂತಹ ಕರಾವಳಿ ಪರಿಸರದಲ್ಲಿ ಕಾಣಸಿಗುತ್ತವೆ. ಇದಕ್ಕೆ ಮುಖ್ಯ ಕಾರಣ, ಹಿಂದೆ ಇಲ್ಲಿಂದ ಹೆಂಚುಗಳನ್ನು ಮುಂಬೈ, ಗುಜರಾತ್‌ಗಳಿಗೆ ಕೊಂಡೊಯ್ಯುತ್ತಿದ್ದ ಮಚುವಿಗಳ (ಹಾಯಿಹಡಗು) ನವಾಯಿತಿ ಮುಸ್ಲಿಮ್ ಖಲಾಸಿಗಳು. ಇವರು ಮುಂಬೈ, ಗುಜರಾತಿನಿಂದ ಈ ಶಬ್ದಗಳನ್ನು ಕುಂದಾಪ್ರ ಕನ್ನಡಕ್ಕೆ ತಂದರು. ಹಾಗೆಯೇ ಪೋರ್ಚುಗೀಸರ ಕಾಲದಲ್ಲಿ ಗೋವಾ-ಮುಂಬೈ ಪ್ರದೇಶದಿಂದ ಇಲ್ಲಿಗೆ ವಲಸೆ ಬಂದ ಕೊಂಕಣಿ ಹಾಗೂ ಖಾರ್ವಿ ಜನಾಂಗಗಳು, ಆಗಾಗ ದಾಳಿ ಮಾಡುತ್ತಿದ್ದ ಮರಾಠರೂ ಕುಂದಾಪ್ರ ಕನ್ನಡಕ್ಕೆ ತಮ್ಮದೇ ಆದ ಬಳುವಳಿ ನೀಡಿದ್ದಾರೆ’’.
ಈ ವಿವರಣೆಯಲ್ಲಿರುವ ಚಾರಿತ್ರಿಕ ನೋಟವೆಂದರೆ, ಕುಂದಾಪುರದಿಂದ ಗುಜರಾತಿಗೆ ಒಯ್ದ ಮಂಗಳೂರ ಹೆಂಚುಗಳು ಮೂಲತಃ ಬಾಸೆಲ್ ಮಿಶನರಿಗಳು ಜರ್ಮನಿಯಿಂದ ತಂದು ಪರಿಚಯಿಸುವುದು; ಸ್ವತಃ ಭಾರತಕ್ಕೆ ಇರಾನಿನಿಂದ ವಲಸೆ ಬಂದ ನವಾಯಿತರು, ಬಾಸೆಲ್ ಮೂಲದ ಹೆಂಚನ್ನು ಕುಂದಾಪುರದಿಂದ ಮಧ್ಯ ಏಶ್ಯದಿಂದ ಭಾರತಕ್ಕೆ ಬರುವವರನ್ನು ಬರಮಾಡಿಕೊಳ್ಳುವ ಹೆಬ್ಬಾಗಿಲಾಗಿದ್ದ ಗುಜರಾತಿನ ಬಂದರುಗಳಿಗೆ ಕೊಂಡೊಯುತ್ತಿರುವುದು. ಜನ ಮತ್ತು ಸರಕುಗಳ ಕೊಡುಕೊಳ್ಳು ಭಾಗವಾಗಿ ಶಬ್ದಗಳು ಹುಟ್ಟುತ್ತವೆ ಮತ್ತು ಸೇರ್ಪಡೆಯಾಗುತ್ತವೆ. ಪ್ರಾದೇಶಿಕ ನಿಘಂಟಿನ ಶಬ್ದಗಳು ತಮ್ಮ ಗರ್ಭದಲ್ಲಿ ಸಂಕರಶೀಲ ಚರಿತ್ರೆಯನ್ನೇ ಧಾರಣಮಾಡುತ್ತವೆ.
ಕರ್ನಾಟಕ ಏಕೀಕರಣದ ಮುನ್ನ ಬೇರೆಬೇರೆ ಪ್ರಾಂತಗಳು ತಮ್ಮದೇ ಕನ್ನಡ ರೂಪಗಳನ್ನು ಅಧಿಕೃತವಾಗಿ ಹೊಂದಿದ್ದವು. ಏಕೀಕರಣದ ಬಳಿಕ ಬೆಂಗಳೂರು ರಾಜಧಾನಿಯಾಯಿತು. ರಾಜಕೀಯ ಕಾರಣದಿಂದ ಹಳೇಮೈಸೂರಿನ ಶಿಷ್ಟಗನ್ನಡವು ಅಧಿಕೃತ ಸ್ಥಾನ ಪಡೆಯಿತು. ಇದು ಕರ್ನಾಟಕದ ಉಳಿದ ಕನ್ನಡಂಗಳನ್ನು ಸಮಾನವಾಗಿ ನಡೆಸಿಕೊಳ್ಳಲಿಲ್ಲ. ಅಧಿಕಾರ ಕೇಂದ್ರಗಳು ಉಂಟುಮಾಡುವ ಭಾಷಿಕ ಶ್ರೇಣೀಕರಣವು, ಬಹುತ್ವಕ್ಕೆ ಸಲ್ಲದ ಶ್ರೇಷ್ಠತೆ, ಕೀಳರಿಮೆ, ದ್ವೇಷ, ಅನ್ಯೀಕರಣಗಳಿಗೆ ಕಾರಣವಾಗುತ್ತದೆ. ‘ಬೀದರ ಕನ್ನಡ’ ಕೋಶದ ಸಂಪಾದಕರ ಮಾತುಗಳಲ್ಲಿ ಈ ಅಪಮಾನ ನೋವು ಅಭಿಮಾನಗಳು ಪ್ರಕಟವಾಗಿವೆ:
‘‘12ನೇ ಶತಮಾನದ ನಂತರ ಕನ್ನಡದ ಮೇಲೆ ಮರಾಠಿ, ಉರ್ದು, ಹಿಂದಿ, ತೆಲುಗು, ಇಂಗ್ಲಿಷ್ ಮೊದಲಾದ ಆಡಳಿತ ಭಾಷಿಕರ ಪ್ರಭಾವದಿಂದಾಗಿ ಆಯಾ ಭಾಷೆಗಳ ಅನೇಕ ಮಾತುಗಳು ಕನ್ನಡಕ್ಕೆ ಸೇರಿಕೊಂಡು ಅದನ್ನು ಶ್ರೀಮಂತಗೊಳಿಸಿದವು. ಅಲ್ಲದೆ ಕನ್ನಡದಿಂದ ತಮ್ಮತಮ್ಮ ಭಾಷೆಗಳನ್ನು ಕೂಡಾ ಸಮೃದ್ಧಗೊಳಿಸಿಕೊಂಡವು. ಆದರೆ 1948ರಿಂದ ಈಚೆಗೆ ಉದರಂಭರಣಕ್ಕಾಗಿ ಬೀದರ ಜಿಲ್ಲೆಗೆ ಬಂದ ಕರ್ನಾಟಕದ ಇತರ ಜಿಲ್ಲೆಗಳ ಕನ್ನಡಿಗರು, ಇಲ್ಲಿಯ ಕನ್ನಡ ಭಾಷೆಯ ವಿಶಿಷ್ಟ ಪದಗಳನ್ನು ಆಯ್ದುಕೊಂಡು ಗೇಲಿಯಾಡುವುದೇ ಕಾಯಕ ಮಾಡಿಕೊಂಡರು. ನಮ್ಮ ಬೀದರಿ ಕನ್ನಡಿಗರು ಅವರೊಡನೆ ಕೈಹೊಡೆದು ಬಾಯಿತೆರೆದು ಖೊಳ್ಳೆಂದು ನಕ್ಕು ತಮ್ಮ ಗೇಲಿಯನ್ನು ತಾವೇ ಸ್ವಾಗತಿಸುವುದನ್ನು ಕಂಡೆನು, ಕೇಳಿದೆನು. ಇಂಥ ಸಂದರ್ಭಗಳು ನನ್ನನ್ನು ಕದಡಿದವು, ಕಾಡಿದವು, ನೋಯಿಸಿದವು. ಅಂತರಂಗದಲ್ಲಿ ಮಾಯದ ಗಾಯವಾಗಿ ಪರಿಣಮಿಸಿದವು. ಈ ನೋವಿನ ಫಲವಾಗಿಯೇ ನನ್ನಲ್ಲಿ ಬಾಲ್ಯದಿಂದಲೇ ಬೀಡುಬಿಟ್ಟಿದ್ದ ಈ ಬಿದಿರಿ ಕನ್ನಡಕೋಶವು ಬೀಜಗಟ್ಟಿ ಮೊಳಕೆಯೊಡೆಯಲು ಪ್ರಾರಂಭಿಸಿತು.’’
ಪ್ರಧಾನಧಾರೆ ಎನಿಸಿರುವ ಮೈಸೂರು-ಬೆಂಗಳೂರು ಕನ್ನಡವನ್ನು ಬಳಸುವ ಸುದ್ದಿ ಮಾಧ್ಯಮಗಳು, ಒಳಗನ್ನಡಗಳಲ್ಲಿ ಬರೆಯಲಾದ ಬರೆಹಗಳಿಗೆ ಅವಕಾಶ ಕಲ್ಪಿಸುವುದುಂಟು. ‘ಪ್ರಜಾವಾಣಿ’ಯಲ್ಲಿ ಧಾರವಾಡದ ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ‘ಚಹಾದ ಜೋಡಿ ಚೂಡಧಾಂಗ’ ಅಂಕಣ ನೆನಪಾಗುತ್ತಿದೆ. ಇದು ಅಧಿಕಾರ ಕೇಂದ್ರವಿರುವ ರಾಜಧಾನಿ ಪತ್ರಿಕೆಗಳಲ್ಲಿ ಪ್ರಾದೇಶಿಕ ಕನ್ನಡದ ಒಳನುಡಿಯೊಂದು ಗಳಿಸಿದ ಸಾಂಕೇತಿಕ ಪ್ರಾತಿನಿಧ್ಯದ ನಿದರ್ಶನದಂತಿದೆ. ಇದು ‘ಶಿಷ್ಟ’ ‘ಪ್ರಧಾನ’ ಎನ್ನಲಾದ ಕನ್ನಡದ ಏಕತಾನತೆ ಮುರಿಯಲೆಂದೇ ಆವಾಹಿಸಿಕೊಂಡ ವೈವಿಧ್ಯವಾಗಿತ್ತು. ಇದರ ಶೀರ್ಷಿಕೆ ಬೇಂದ್ರೆಯವರ ‘ಹುಬ್ಬಳ್ಳಿಯಾಂವಾ’ ಕವನದ್ದು. ‘ವಾರದಾಗ ಮೂರುಸರತಿ ಬಂದು ಹೋಗುವ’ ವ್ಯಾಪಾರಿಯೊಬ್ಬ, ತನ್ನ ಉಪಪತ್ನಿ ಸಂಬಂಧವನ್ನು ಬಣ್ಣಿಸುವುದಕ್ಕೆ ಬಳಸುತ್ತಿರುವ ‘ಚಹದ ಜೋಡಿ ಚೂಡಧಾಂಗ’ ಉಪಮೆ, ಸಾಂಕೇತಿಕ ಪ್ರಾತಿನಿಧ್ಯದ ಸಮಸ್ಯೆಗಳನ್ನು ಸಹ ಧ್ವನಿಸುತ್ತಿದೆ.
ಇಲ್ಲಿಯೇ ಬೇರೆಬೇರೆ ಕಸುಬುದಾರ ಸಮುದಾಯಗಳು ಸರಕು-ಸೇವೆಯ ಉತ್ಪಾದನೆ ಮತ್ತು ವಿತರಣೆಯ ಅಂಗವಾಗಿ ಸೃಷ್ಟಿಸಿ ಕೊಂಡಿರುವ ವೃತ್ತಿಗನ್ನಡ ಚಹರೆಗಳನ್ನೂ ಈ ಕಸುಬುಗನ್ನಡವನ್ನು ಸಾಹಿತ್ಯರಚನೆ ಮತ್ತು ತಾತ್ವಿಕ ಚರ್ಚೆಯಲ್ಲಿ ದುಡಿಸಿಕೊಂಡು, ಅವಕ್ಕೆ ಆಧ್ಯಾತ್ಮಿಕ ಮತ್ತು ಕಾವ್ಯಾತ್ಮಕ ಘನತೆ, ಗಹನತೆ ಕಲ್ಪಿಸಿದವರು ಶರಣರು. ವ್ಯಾಪಾರಿಗಳು, ಪಶುಗಾಹಿಗಳು, ರೈತರು, ಚಮ್ಮಾರರು, ನೇಕಾರರು, ವೇಶ್ಯೆಯರು, ಕಮ್ಮಾರರು ತಮ್ಮ ವೃತ್ತಿ ಪರಿಭಾಷೆಯಲ್ಲಿ ದಾರ್ಶನಿಕ ವಾಗ್ವಾದ ನಡೆಸಿದರು. ಮಾದಾರ ಧೂಳಯ್ಯನ ವಚನವೊಂದರಲ್ಲಿ ಶಿವನು ಚರ್ಮದ ಅಟ್ಟೆಗೆ ಚುಚ್ಚುವ ಉಳಿಯ ಮೊನೆಯಲ್ಲಿ ಪ್ರತ್ಯಕ್ಷವಾಗುತ್ತಾನೆ. ಬಿಡಿಬಿಡಿಯಾದ ಚರ್ಮ ಮತ್ತು ನೂಲುಗಳನ್ನು ಉಳಿಯ ನೆರವಿನಿಂದ ಕಸುಬುದಾರನ ಕಲ್ಪನೆಗೆ ಅನುಸಾರವಾಗಿ ಸೇರಿಸಿ ಚಪ್ಪಲಿ ತಯಾರಿಸುವ ಪ್ರಕ್ರಿಯೆಯು, ಅನುಭವ ಕಲ್ಪನೆ ಚಿಂತನೆಗಳನ್ನು ಭಾಷಾ ಮಾಧ್ಯಮದಲ್ಲಿ ಏಕೀಕರಿಸಿ, ಒಂದು ಕೃತಿ ಸೃಷ್ಟಿಯಾಗುವುದನ್ನೂ ಅಭಿನಯಿಸುವಂತಿದೆ; ದೇಹ ದುಡಿಮೆ ಮನಸ್ಸು ಧ್ಯಾನಗಳು ಅನುಭಾವದಲ್ಲಿ ಕೂಡುವುದನ್ನೂ ಕಾಣಿಸುವಂತಿದೆ.
ವೃತ್ತಿಭಾಷೆಯನ್ನು ದಾರ್ಶನಿಕ ಅಭಿವ್ಯಕ್ತಿಗಾಗಿ ದುಡಿಸುವುದನ್ನು ಕಸುಬುದಾರ ತತ್ವಪದಕಾರರೂ ಮುಂದುವರಿಸಿದರು. ಇದು ವೃತ್ತಿ ಪರಿಭಾಷೆಯ ದಾರ್ಶನಿಕ ರೂಪಾಂತರ ಮಾತ್ರವಲ್ಲ. ಕಸುಬು-ದುಡಿಮೆಗಳಿಗೆ, ಅವನ್ನು ಮಾಡುವ ಸಮುದಾಯಗಳಿಗೆ ಒದಗಿಸಿದ ಘನತೆ ಕೂಡ. ಆಧುನಿಕ ಸಾಹಿತ್ಯದಲ್ಲಿ, ಸಮುದಾಯ ಮತ್ತು ವೃತ್ತಿ ವಿಶಿಷ್ಟವಾದ ಕನ್ನಡದ ಚಹರೆಗಳು ನೂರಾರು ರೂಪದಲ್ಲಿ ಪ್ರಕಟವಾಗಿವೆ. ಅಧಿಕಾರಿಗಳು, ಪೊಲೀಸರು, ವಿಜ್ಞಾನಿಗಳು, ವೈದ್ಯರು, ಚರ್ಮಕಾರರು, ರೈತರು, ಗೃಹಿಣಿಯರು, ಸಂಗೀತಗಾರರು, ನಟನಟಿಯರು, ಪತ್ರಕರ್ತರು ವಾಸ್ತುಶಿಲ್ಪಿಗಳು ರಾಜಕಾರಣಿಗಳು, ತಂತಮ್ಮ ಕ್ಷೇತ್ರದ ಒಳಗನ್ನಡವನ್ನು ಬರೆಹದಲ್ಲಿ ಮಾತಿನಲ್ಲಿ ದುಡಿಸಿರುವರು. ಅನುಭವ ನಿರೂಪಿಸುವ ನೆಪದಲ್ಲಿ ಜ್ಞಾನಸೃಷ್ಟಿಸುವ ಮತ್ತು ತಮ್ಮ ಲೋಕದೃಷ್ಟಿ ಮಂಡಿಸುವ ಕೆಲಸ ಮಾಡಿರುವರು. ಇದು ಭಾಷಿಕ ಬಹುತ್ವವು ಸಾಹಿತ್ಯದ ಬಹುಪ್ರಕಾರಗಳಲ್ಲಿ ಪ್ರಕಟವಾಗುವ ವಿಶಿಷ್ಟ ಪರಿಯಾಗಿದೆ.
19ನೇ ಶತಮಾನದ ಮಿಶನರಿಗಳಿಂದ ಶುರುವಾದ ಚರ್ಚು ಮತ್ತು ಬೈಬಲುಗಳ ಕನ್ನಡ; ಕುರ್‌ಆನ್‌ನ ಅನುವಾದಗಳಲ್ಲಿರುವ ಅರಬಿಗನ್ನಡ; ಶಾಸನಗಳಲ್ಲಿ, ಪೊಲೀಸು ಮತ್ತು ರೆವಿನ್ಯೂ ಇಲಾಖೆಯ ದಸ್ತಾವೇಜುಗಳಲ್ಲಿ, ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಬಳಕೆಯಾಗುವ ಕನ್ನಡ; ಜಾತ್ರೆ, ಉರೂಸುಗಳ ಕರಪತ್ರ ಕನ್ನಡ; ಕಾಲೇಜು ಕ್ಯಾಂಪಸುಗಳಲ್ಲಿ ಚಾಲ್ತಿಯಲ್ಲಿರುವ ಕಂಗ್ಲೀಷು-ಹೀಗೆ ಕನ್ನಡದ ನೂರಾರು ಒಳಚಹರೆಗಳಿವೆ. ಪ್ರತಿಭಾವಂತ ಲೇಖಕರು ಇವನ್ನು ದುಡಿಸಿಕೊಳ್ಳುತ್ತ ತಮ್ಮದೇ ಆದ ಕನ್ನಡವನ್ನೂ ರೂಪಿಸಿಕೊಂಡಿರುವರು. ಈಚೆಗೆ ವಿಶಿಷ್ಟ ಚಹರೆಯ ಕನ್ನಡಂಗಳಲ್ಲಿ ರೇಡಿಯೊ-ಟಿವಿ ಕಾರ್ಯಕ್ರಮ ಪ್ರಸಾರವಾಗುತ್ತಿವೆ; ಸಿನೆಮಾ, ನಾಟಕ ತಯಾರಾಗುತ್ತಿವೆ. ಡಿಜಿಟಲ್ ಮಾಧ್ಯಮವು ಈ ಬಹುರೂಪಿ ನುಡಿಚಹರೆಗಳನ್ನು ಆಡುವವರ ಮುಖಭಾವ ಮತ್ತು ಧ್ವನಿಸಮೇತ ಕಾಣಿಸುತ್ತಿದೆ. ಕನ್ನಡದ ಬಹುರೂಪೀ ಚಹರೆಗಳ ಗುರುತಿಸುವಿಕೆ ಮತ್ತು ಮನ್ನಿಸುವಿಕೆಯು, ಭಾಷಿಕ ಬಹುತ್ವದ ಶೋಧ ಮಾತ್ರವಲ್ಲ, ಕರ್ನಾಟಕದ ಸಾಂಸ್ಕೃತಿಕ ಬಹುತ್ವದ ಜೀವನದೃಷ್ಟಿಗಳ ಸಮುದಾಯಗಳ, ಹಲವು ಜ್ಞಾನ ಮತ್ತು ಕುಶಲತೆಗಳ, ಬದುಕಿನ ಕ್ರಮ ಮತ್ತು ದೃಷ್ಟಿಕೋನಗಳ, ಸಂಸ್ಕೃತಿ ಮತ್ತು ಕೂಡುಬಾಳಿನ ಪರಿಗಳ ಪ್ರತಿಫಲನವೂ ಆಗಿದೆ. ಹಲವು ಬಗೆಯ ಸೇವೆ ಸರಕುಗಳ ಸೃಷ್ಟಿಯಿಂದ ನಾಡಿನ ಸಂಪತ್ತು ನಿರ್ಮಾಣವಾಗುವಂತೆ, ಹಲವು ಭಾಷೆ ಸಮುದಾಯ ಹಾಗೂ ಪ್ರಾದೇಶಿಕತೆಗಳಿಂದ ದೇಶವೊಂದು ರೂಪುಗೊಳ್ಳುವುದನ್ನು ಕಾಣಿಸುವ ಪ್ರಯೋಗವೂ ಆಗಿದೆ. ಇದು ಅಳಿವಿನಂಚಿನಲ್ಲಿರುವ ವೈವಿಧ್ಯವನ್ನು ಸಾಂಕೇತಿವಾಗಿ ಉಳಿಸಿಕೊಳ್ಳುವ ಯತ್ನ ಕೂಡ.
ಬಹುಭಾಷಿಕ ಸಮಾಜದಲ್ಲಿ ಬದುಕುವ ಕಲಾವಿದರು ಬಹುಭಾಷಿಕತೆ ಮತ್ತು ಬಹುಧಾರ್ಮಿಕತೆಯನ್ನು ಸಹಜವಾಗಿಯೋ ಉದ್ಯಮದ ಒತ್ತಾಸೆಯಿಂದಲೋ ರೂಢಿಸಿಕೊಂಡಿರುತ್ತಾರೆ. ಇದು ಅಸ್ತಿತ್ವಕ್ಕಾಗಿ ಏರ್ಪಡುವ ಬಹುತ್ವ. ದುರುಗ ಮುರುಗಿಯವರು ಭಿಕ್ಷೆಬೇಡುವಾಗ, ಮನೆಗಳ ಮುಂದೆ ಆ ಸೀಮೆಯ ಎಲ್ಲ ದೇವತೆಗಳನ್ನು ಆವಾಹಿಸುವರು. ಹಾವಾಡಿಗರ ಬಹುಭಾಷಿಕತೆಯೂ ಇಂತಹುದೇ. ರೇಡಿಯೊ-ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕರು ಒಂದೇ ಉಸಿರಿಗೆ ಸಲಾಂ ಅಲೈಕುಂ, ನಮಸ್ಕಾರ್, ಸತ್‌ಶ್ರೀಅಕಾಲ್ ಹೇಳುವುದನ್ನು ಗಮನಿಸ ಬಹುದು. ವಿದೇಶಗಳಿಂದ ರೋಗಿಗಳನ್ನು ಆಕರ್ಷಿಸುವ ಕಾರ್ಪೊರೇಟ್ ಆಸ್ಪತ್ರೆ ಹಾಗೂ ಬಹುಭಾಷಿಕ ಗ್ರಾಹಕರು ಬರುವ ಮಾಲ್‌ಗಳಲ್ಲಿ, ಬಹುಭಾಷಿಕ ಸ್ವಾಗತಕಾರರನ್ನು ಈಚೆಗೆ ನೇಮಿಸಲಾಗುತ್ತದೆ. ಹಳೆಯ ಸಿನೆಮಾ ಪೋಸ್ಟರುಗಳಲ್ಲಿ ಚಿತ್ರದ ಹೆಸರನ್ನು ಹಲವು ಭಾಷೆಗಳಲ್ಲಿ ಕಾಣಿಸಲಾಗುತ್ತಿತ್ತು. ಹಲ್ಲಿನಪುಡಿ, ಬೀಡಿ, ಆಹಾರದ ಪ್ಯಾಕೇಟುಗಳಲ್ಲೂ ಬಹುಭಾಷಿಕತೆಯಿದೆ. ಇವೆಲ್ಲ ಜೀವನಶ್ರದ್ಧೆಯ ಭಾಗವಾಗಿರದೆ, ಉದ್ಯಮ ವಿಸ್ತರಣೆಯ, ಗ್ರಾಹಕರನ್ನು ಸೆಳೆವ ಕೃತಕ ಬಹುತ್ವಗಳಾಗಿವೆ. ಬಹುಭಾಷಿಕತೆ, ಒಳನುಡಿಗಳು, ಸಹಭಾಷೆಗಳು, ವ್ಯಾಪಾರಿ ಹಿತಾಸಕ್ತಿಯ ಉಪಕರಣಗಳಾದ ಸಮಾಜದ ಸಾರ್ವಜನಿಕ ಬದುಕಿನ ಸಹಜಲಯವಾಗುವ ಸನ್ನಿವೇಶವೇ ನಿಜವಾದ ಬಹುತ್ವ. ಅಂತಹ ಬಹುತ್ವಪ್ರಾಪ್ತಿಗಾಗಿ ಭಾಷೆಗಳನ್ನು ಬದುಕಗೊಟ್ಟಿರುವ ಸಮಾಜ, ಧರ್ಮ, ರಾಜಕಾರಣಗಳು ಮತ್ತಷ್ಟು ಡೆಮಾಕ್ರಟಿಕ್ ಆಗಬೇಕಿದೆ.