ಐಪಿಎಲ್ ಪಂದ್ಯಗಳು ವಿದ್ಯಾರ್ಥಿಗಳಿಗೆ ಮಾರಕ
ಮಾನ್ಯರೇ,
ಐಪಿಎಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)
2008ರಲ್ಲಿ ಪ್ರಾರಂಭವಾಯಿತು. ವರ್ಷದಿಂದ ವರ್ಷಕ್ಕೆ ಐಪಿಎಲ್‌ನ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ. 2023ರಲ್ಲಿ ಐಪಿಎಲ್‌ನ ಮೌಲ್ಯ 92, 500 ಕೋಟಿ ರೂ.ಗಳು. ಪ್ರಸ್ತುತ ಈ ವರ್ಷ ಇದರ ಮೌಲ್ಯ ಇನ್ನೂ ಹೆಚ್ಚಾದರೂ ಅಚ್ಚರಿಯಿಲ್ಲ. ಐಪಿಎಲ್ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ ಹಾಗೂ ಅಪಾರ ಪ್ರಮಾಣದ ತೆರಿಗೆಯು ಸಹ ಭಾರತಕ್ಕೆ ನೀಡುತ್ತದೆ.ಆದರೆ ಐಪಿಎಲ್ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಭವಿಷ್ಯಕ್ಕೆ ದಾರಿಯಾಗಿದೆ. ಐಪಿಎಲ್‌ನಿಂದಾಗಿ ಲಕ್ಷಾಂತರ ಜನರು ಬೆಟ್ಟಿಂಗ್ ಮುಂತಾದ ಕೆಟ್ಟ ಚಟಗಳಿಗೆ ಬಲಿಯಾಗಿದ್ದಾರೆ. ಒಂದು ಮಾತಿನಲ್ಲಿ ಕೇಳುವುದಾದರೆ ಯುವಜನತೆಗೆ ಐಪಿಎಲ್‌ನ ಕೊಡುಗೆ ಏನು?. ಐಪಿಎಲ್ ಪಂದ್ಯಗಳು ಪ್ರತೀ ವರ್ಷ ಮಾರ್ಚ್‌ನಿಂದ ಎಪ್ರಿಲ್ ತಿಂಗಳಲ್ಲಿ ನಡೆಯುವುದರಿಂದ ವಿದ್ಯಾರ್ಥಿ ಗಳಿಗೆ ತೊಂದರೆಯಾಗುವುದು ಖಚಿತ. ಕಾರಣ ಮಾರ್ಚ್ ಮತ್ತು ಎಪ್ರಿಲ್‌ನಲ್ಲಿ ಪರೀಕ್ಷೆಗಳು ಇರುವುದರಿಂದ ವಿದ್ಯಾರ್ಥಿ ಗಳು ಓದಿನ ಕಡೆಗೆ ಗಮನ ಹರಿಸುವ ಬದಲು ಐಪಿಎಲ್ ಪಂದ್ಯಗಳ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಾರೆ. ಇದರಿಂದಾಗಿ ಅವರ ಭವಿಷ್ಯಕ್ಕೆ ದೊಡ್ಡ ಪೆಟ್ಟು ನೀಡಿದಂತಾಗುತ್ತದೆ. ಭಾರತ ಸರಕಾರ ಐಪಿಎಲ್ ಟೂರ್ನಮೆಂಟ್ ಪ್ರಾರಂಭವಾಗುವ ಸಮಯವನ್ನು ಬೇಸಿಗೆ ರಜೆಯಲ್ಲಿ ಇಲ್ಲವಾದರೆ ನವೆಂಬರ್ -ಡಿಸೆಂಬರ್ ತಿಂಗಳಲ್ಲಿ ನಡೆಯುವಂತೆ ಪಂದ್ಯಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಕೇಂದ್ರ ಸರಕಾರ ಐಪಿಎಲ್ ಟೂರ್ನಮೆಂಟ್ ನ ವೇಳಾಪಟ್ಟಿಯನ್ನು ಬದಲಾಯಿಸಬೇಕೆಂದು ದೇಶದ ವಿದ್ಯಾರ್ಥಿಗಳ ಪರವಾಗಿ ಆಗ್ರಹಿಸೋಣ.
ರಾಸುಮ ಭಟ್, ಚಿಕ್ಕಮಗಳೂರು