ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮದ ನಿರಾಕರಣೆಯಲ್ಲಿನ ಅವೈಚಾರಿಕತೆ
ಜರ್ಮನಿ, ಚೀನಾ, ಜಪಾನ್, ಫ್ರಾನ್ಸ್, ಸ್ಪೇನ್ ಮುಂತಾದ ಪ್ರಗತಿ ಪಡೆದ ದೇಶಗಳಲ್ಲಿ ಅಷ್ಟೆ ಅಲ್ಲದೆ ಅರಬ್, ದಕ್ಷಿಣ ಅಮೆರಿಕ ಮುಂತಾದ ದೇಶಗಳಲ್ಲಿ ಕೂಡ ಮಾತೃಭಾಷಾ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತಿರುವಾಗ ನಮ್ಮ ದೇಶದಲ್ಲಿ ಅದು ಏಕೆ ಸಾಧ್ಯವಾಗಲಾರದು? ಈ ಪ್ರಶ್ನೆಗೆ ಹಲವಾರು ಕಾರಣಗಳು ಇವೆ. ಮುಖ್ಯವಾಗಿ ಪೋಷಕರಲ್ಲಿರುವ ಅಜ್ಞಾನ ಮತ್ತು ಭಯ, ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಸೆ, ಸರಕಾರದ ದಿವ್ಯ ನಿರ್ಲಕ್ಷ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಬದ್ಧತೆ ಇಲ್ಲದಿರು ವುದು ಮತ್ತು ಬೇಜವಾಬ್ದಾರಿ ಮನೋಭಾವ. ಇವಿಷ್ಟೇ ಅಲ್ಲದೆ ಇನ್ನೂ ಅನೇಕ ತಪ್ಪು ತಿಳುವಳಿಕೆಗಳಿಂದಾಗಿ ಕನ್ನಡ ಮಾಧ್ಯಮ ಇಂದು ಮೊದಲಿಗಿಂತ ಹೆಚ್ಚು ಸೊರಗುತ್ತಿದೆ.
ಬಹಳ ದೊಡ್ಡ ಸಮಸ್ಯೆ ಏನೆಂದರೆ ನಮ್ಮಲ್ಲಿ ಬಹುಮಂದಿಗೆ ಅಂದರೆ ಸು.ಶೇ.80ರಿಂದ ಶೇ. 90ರವರೆಗೆ ನಿಜವಾದ ಶಿಕ್ಷಣ ಎಂದರೇನೆಂಬುದರ ಕಲ್ಪನೆಯೇ ಇಲ್ಲದಿರುವುದು. ಗರಿಷ್ಠ ಅಂಕಗಳನ್ನು ಗಳಿಸಿ ಒಳ್ಳೆಯ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆದು ಹೆಚ್ಚು ಹಣ ಗಳಿಸಿಕೊಡುವ ಉದ್ಯೋಗಗಳಿಗೆ ಸೇರುವುದೇ ಶಿಕ್ಷಣ ಎಂದು ಬಹುಮಂದಿ ಭಾವಿಸುತ್ತಾರೆ. ಇನ್ನು ಕೆಲವರಿಗೆ ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದಕ್ಕೆ ಏನು ಅಗತ್ಯ ಇದೆಯೋ ಅದನ್ನು ಕೊಡುವುದೇ ಶಿಕ್ಷಣ. ಇನ್ನುಳಿದವರಿಗೆ ಏನೋ ಒಂದಷ್ಟು ಓದಿ ಪದವಿ ಪ್ರಮಾಣ ಪತ್ರಗಳನ್ನು ಪಡೆದುಕೊಳ್ಳುವುದು. ಒಟ್ಟಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಬೇಕಾದ ಪದವಿಗಳ ಸಂಪಾದನೆಯೇ ಶಿಕ್ಷಣದ ಅಂತಿಮ ಗುರಿ; ಅಷ್ಟೆ.
ವ್ಯಕ್ತಿಯ ಸುಪ್ತ ಪ್ರತಿಭೆಯನ್ನು ಪ್ರಕಟಪಡಿಸಲು ಅವಕಾಶ ನೀಡಿ, ವ್ಯಕ್ತಿತ್ವವನ್ನು ರೂಪಿಸಿ ಸತ್ಪ್ರಜೆಗಳನ್ನು ಸೃಷ್ಟಿಸುವುದೇ ಶಿಕ್ಷಣ. ಜೊತೆ ಜೊತೆಗೆ ಹೊಟ್ಟೆಪಾಡಿಗೆ ಬೇಕಾದ ಅರ್ಹತೆಗಳನ್ನೂ ಪಡೆದುಕೊಳ್ಳುತ್ತಾ ಅಂತಃಶಕ್ತಿಯನ್ನು ವಿಕಾಸಗೊಳಿಸಿಕೊಳ್ಳುವ ಒಂದು ಬೌದ್ಧಿಕ, ಮಾನಸಿಕ ಮತ್ತು ದೈಹಿಕ ವ್ಯಾಯಾಮವೇ ಶಿಕ್ಷಣ ಎಂಬ ಜಾಗೃತ ಪ್ರಜ್ಞೆಯ ಹಿನ್ನೆಲೆಯಲ್ಲಿ ಶಿಕ್ಷಣವನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಶಿಕ್ಷಣದಲ್ಲಿ ಪ್ರಾಥಮಿಕ ಹಂತ ಬಹಳ ಪ್ರಮುಖವಾದದ್ದು. ಆಗ ಮಗು ತನಗೆ ಹಿತವಾದ, ಪ್ರಿಯವಾದ, ಸುಲಭವಾದ ಭಾಷೆಯಲ್ಲಿ ಮಾತ್ರ ಜ್ಞಾನಾರ್ಜನೆ ಮಾಡಬಲ್ಲದು. ಅದರಲ್ಲೂ ತನ್ನ ಅನುಭವಕ್ಕೆ ಬಾರದ ವಿಷಯಗಳನ್ನು ತನಗೆ ಸುಖವಲ್ಲದ ಭಾಷೆಯ ಮೂಲಕ ಕಲಿಯಲು ಯಾವ ಮಗುವೂ ಆಸಕ್ತಿಯನ್ನು ತೋರಲಾರದು. ಉದಾ: ಐದನೇ ಅಥವಾ ಆರನೇ ತರಗತಿಯಲ್ಲಿರುವ ಮಗುವಿಗೆ ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ಬೋಧನೆ ಮಾಡುವಾಗ, ಶೋಷಣೆಯ ವಿರುದ್ಧ ಹಕ್ಕು ಎಂಬ ದೊಡ್ಡ ದೊಡ್ಡ ವಿಚಾರಗಳನ್ನು ತಿಳಿಸಿಕೊಡುವುದು ಬಹಳ ಕಷ್ಟ. ಅಂಥದನ್ನು ತನಗೆ ಸುಪರಿಚಿತವಲ್ಲದ ಭಾಷೆಯಲ್ಲಿ ತಿಳಿಸಹೊರಟರಂತೂ ಮಗು ತರಗತಿಯಲ್ಲಿ ತೂಕಡಿಸುವುದು ಖಂಡಿತ. ಬಡ್ಡಿ, ಚಕ್ರಬಡ್ಡಿ, ಅನುಪಾತ, ಇತಿಹಾಸ, ಭೂಗೋಳ, ಖಗೋಳಗಳನ್ನು ಪಾಠ ಮಾಡುವಾಗ ಮಾತೃಭಾಷೆ ಬಳಸಿದರೆ ಮಗು ಕನಿಷ್ಠಪಕ್ಷ ತನಗೆ ಅರ್ಥ ಆಗಲಿಲ್ಲ ಅಂತ ಹೇಳುವ ಧೈರ್ಯವನ್ನು ತೋರುತ್ತದೆ. ಪ್ರಶ್ನಿಸಬೇಕೆನಿಸಿದರೂ ಅನ್ಯಭಾಷೆಯ ತೊಡಕಿನಿಂದಾಗಿ ಹಿಂಜರಿಯುತ್ತದೆ. ತನ್ನದೇ ಭಾಷೆಯಾದರೆ ಪ್ರಶ್ನಿಸುತ್ತದೆ. ಮಕ್ಕಳಿಗೆ ಬೋಧನೆ ಮಾಡುವಾಗ ಅದು ಕ್ರೀಡೆಯಂತೆ ಆನಂದದಾಯಕವಾಗಿರಬೇಕಾದರೆ ಮಾಧ್ಯಮ ಮಾತೃಭಾಷೆಯಾಗಿರಬೇಕಾದ್ದು ಕಡ್ಡಾಯ ಎಂದು ಜಗತ್ತಿನ ಎಲ್ಲ ಶಿಕ್ಷಣತಜ್ಞರು ಒಕ್ಕೊರಲಿನಿಂದ ಹೇಳಿದ್ದಾರೆ.
ಮಕ್ಕಳು ಪ್ರತಿಕ್ರಿಯೆ ತೋರುವ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡಬೇಕಾದರೆ ಮಾತೃಭಾಷೆಯಲ್ಲಿ ಸುಲಭ ಸಾಧ್ಯ. ಆದ್ದರಿಂದಲೇ ಮಾತೃಭಾಷೆಯಲ್ಲಿ ಬೋಧಿಸಿದರೆ ಆಗ ವಿಷಯ ಜ್ಞಾನವು ಮಗುವಿನ ಬುದ್ಧಿಯನ್ನು ಮುಟ್ಟುತ್ತದೆ ಮತ್ತು ಮನಸ್ಸನ್ನು ತಟ್ಟುತ್ತದೆ. ಅನೇಕ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಈಗ ಆಗುತ್ತಿರುವುದು ಕುರುಡು ಪಾಠ, ಮಕ್ಕೀಕಾ ಮಕ್ಕಿ. ಇದರ ಪರಿಣಾಮವನ್ನು ಇಂದು ನಾವು ಪ್ರತ್ಯಕ್ಷ ನೋಡುತ್ತಿದ್ದೇವೆ. ಇಂದು ನಿರುದ್ಯೋಗಿಗಳಿಗಿಂತ ಹೆಚ್ಚಾಗಿ ಉದ್ಯೋಗಕ್ಕೆ ಅರ್ಹರಲ್ಲದ ನಿರುದ್ಯೋಗಿಗಳನ್ನು ನೋಡುತ್ತಿದ್ದೇವೆ. ಯಾವುದೇ ಹುದ್ದೆಗೆ ಸಂದರ್ಶನಕ್ಕೆ ಹಾಜರಾಗುವ ಪ್ರತೀ ನೂರು ಮಂದಿಯಲ್ಲಿ ಶೇ.20 ಮಾತ್ರ ಅರ್ಹರಾಗಿರುತ್ತಾರೆ. ಇನ್ನು ಉಳಿದ ಶೇ.80 ಮಂದಿಯ ಬಳಿ ಪದವಿ ಪ್ರಮಾಣ ಪತ್ರಗಳು, ಗರಿಷ್ಠ ಅಂಕಗಳು ಇರುತ್ತವೆ; ಆದರೆ ಕೆಲಸಕ್ಕೆ ಅಗತ್ಯವಿರುವ ಮೂಲಭೂತವಾದ ಜ್ಞಾನ ಇರುವುದಿಲ್ಲ. ಇದರ ಜೊತೆಗೆ ನಾವು ಗಮನಿಸಬೇಕಾದ ಮತ್ತೊಂದು ಅಂಶವೆಂದರೆ: ಸಾಮಾನ್ಯವಾಗಿ ತಾನು ಓದಿದ್ದೇ ಒಂದು ಉದ್ಯೋಗದಲ್ಲಿ ಬಳಸಲ್ಪಡುತ್ತಿರುವ ಜ್ಞಾನವೇ ಮತ್ತೊಂದು ಎನ್ನುವಂತಾಗಿರುತ್ತದೆ.
ಆಂಗ್ಲ ಮಾಧ್ಯಮದಲ್ಲಿ ಕೇವಲ ವಿಷಯ ಸಂಗ್ರಹವಾಗಿರುತ್ತದೆ. ಆದರೆ ಮಾತೃಭಾಷಾ ಮಾಧ್ಯಮದ ಶಿಕ್ಷಣದಲ್ಲಿ ಅದು ಜೀರ್ಣವಾಗಿ ಜ್ಞಾನವಾಗಿ ಮಾರ್ಪಡುತ್ತದೆ. ಈ ವಾಸ್ತವ ಸತ್ಯ ಗೊತ್ತಿರುವ ಕೆಲವಾರು ಪೋಷಕರನ್ನು ಇತ್ತೀಚೆಗೆ ನೋಡುತ್ತೇವೆ. ಆದರೆ ಅವರು ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಗಳಿಗೆ ಹೋಗಿ ಆ ವಾತಾವರಣವನ್ನು ಕಣ್ಣಾರೆ ಕಂಡಾಗ ದಿಗಿಲುಗೊಳ್ಳುತ್ತಾರೆ. ಇಂದಿನ ಸ್ಪರ್ಧಾತ್ಮಕ ಮತ್ತು ಹೈಟೆಕ್ ಯುಗದಲ್ಲಿ ತಮ್ಮ ಮಕ್ಕಳನ್ನು ಇಲ್ಲಿಗೆ ಸೇರಿಸಿದರೆ ಅವರ ಭವಿಷ್ಯಕ್ಕೆ ಎಲ್ಲಿ ನಾವು ಕುಂದುಂಟು ಮಾಡಿದ ಹಾಗೆ ಆಗುತ್ತದೋ ಎಂದು ಹೆದರಿ ಕೊನೆಗೆ ಆಂಗ್ಲ ಮಾಧ್ಯಮಕ್ಕೆ ಶರಣಾಗುತ್ತಾರೆ. ಇಂತಹ ಸಂದರ್ಭದಲ್ಲಿ ತಪ್ಪು ಯಾರದು ಎಂದು ತೀರ್ಮಾನಿಸುವುದು ಕಷ್ಟವಾಗುತ್ತದೆ. ಬದುಕಿನ ಸಾರ್ಥಕತೆಯ ಬಗ್ಗೆ ಅಥವಾ ನಿಜವಾದ ‘ಬದುಕು’ ಎಂದರೇನು ಎಂಬುದನ್ನು ಕುರಿತು ಬಹಳ ಗಟ್ಟಿಯಾದ ನಿಲುವುಗಳನ್ನು ಹೊಂದಿರುವವರು ಮಾತ್ರ ಏನೇ ಆಗಲಿ ಆಂಗ್ಲ ಮಾಧ್ಯಮದ ಥಳುಕಿಗೆ ಬಲಿಯಾಗದೆ ಕನ್ನಡ ಮಾಧ್ಯಮದಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುತ್ತಾರೆ. ಆದರೆ ಅಂತಹ ಪೋಷಕರು ಎಷ್ಟು ಮಂದಿ ಇರುತ್ತಾರೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ.
ಭಾಷಾ ಕೀಳರಿಮೆಗೆ ಆರ್ಥಿಕ ಹಿಂದುಳಿದಿರುವಿಕೆಯೇ ಕಾರಣ ಎಂದು ಖಚಿತವಾಗಿ ಹೇಳಲಾಗದು. ಮೇಲ್ನೋಟಕ್ಕೆ ಸ್ವಲ್ಪಮಟ್ಟಿಗೆ ನಿಜವೆಂದು ಅನ್ನಿಸಬಹುದು. ಆದರೆ ನಿಜವಾದ ಕಾರಣ ಭಾಷೆ ಮತ್ತು ಜ್ಞಾನಗಳ ವ್ಯತ್ಯಾಸ ಅರಿಯದ ಮನಸ್ಥಿತಿ ಎಂದು ಅನಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿದರೆ ಅವನನ್ನು ಜಾಣ ಎಂದುಕೊಂಡು ಬಿಡುತ್ತಾರೆ. ಭಾಷೆಯ ಜ್ಞಾನ ಬೇರೆ, ಬುದ್ಧಿವಂತಿಕೆ ಬೇರೆ ಎಂಬ ಸ್ಪಷ್ಟತೆ ಅನೇಕರಿಗೆ ಇರುವುದಿಲ್ಲ. ಅವನಿಗೆ ಇಂಗ್ಲಿಷ್ ಭಾಷೆ ಚೆನ್ನಾಗಿ ಬರುತ್ತದೆ ಎಂದು ಮಾತ್ರ ತಿಳಿದುಕೊಳ್ಳುವ ಬದಲು ಅವನು ಸಮರ್ಥ, ಮೇಲು ಎಂದೆಲ್ಲ ಭಾವಿಸುವುದು ಕೇವಲ ವ್ಯಕ್ತಿಯ ದೋಷವಲ್ಲ; ಅದು ನಮ್ಮ ಸಮಾಜದ ದೋಷ ಕೂಡ ಹೌದು. ಹಣವಂತರಿಗೆ ಬೆಲೆ ಕೊಡುವುದರ ಹಿಂದೆ ಇರುವ ಭ್ರಮೆಗಳೇ ಇಲ್ಲೂ ಕ್ರಿಯಾಶೀಲವಾಗಿರುತ್ತದೆ. ಭಾಷಾ ಮೇಲರಿಮೆ ಹಾಗೂ ಭಾಷಾ ಕೀಳರಿಮೆ ಎರಡೂ ಮನಸ್ಥಿತಿಗಳೂ ಒಂದೇ ತರಹದ ತಪ್ಪು ಕಲ್ಪನೆಗಳಿಂದ ಉಂಟಾದವು ಎಂದು ಅನಿಸುತ್ತದೆ.
ಹತ್ತನೆಯ ಶತಮಾನದ ಪಂಪಕವಿ ತನ್ನ ವಿಕ್ರಮಾರ್ಜುನ ವಿಜಯದಲ್ಲಿ, ‘‘ಕುಲಂ ಕುಲಮಲ್ತು, ಚಲಂ ಕುಲಂ, ಗುಣಂ ಕುಲಂ ಅಭಿಮಾನಮೊಂದೆ ಕುಲಂ ...’’ ಎಂದು ಘೋಷಿಸುತ್ತಾನೆ. ಅಲ್ಲಿ ಪ್ರಸ್ತಾಪಿತವಾಗಿರುವ ಅಭಿಮಾನ ಎನ್ನುವುದು ವ್ಯಕ್ತಿಯ ಘನತೆಯನ್ನು ಸೂಚಿಸುವಂತಹುದು. ಪಂಪ ಅದನ್ನು ಮನುಷ್ಯನ ಅಸ್ತಿತ್ವದ ಮೌಲ್ಯ ಎಂದು ಭಾವಿಸುತ್ತಾನೆ. ಈ ಸ್ವಾಭಿಮಾನದ ಲೋಪವೇ ಪರಕೀಯ ಮೋಹಕ್ಕೆ ಕಾರಣ.
ಜಪಾನ್-ಜರ್ಮನಿಗಳಲ್ಲಿ ಇರುವ ಭಾಷಾ ಮಾಧ್ಯಮದ ಬಗೆಗಿನ ವೈಚಾರಿಕ ತಳಹದಿ ಕರ್ನಾಟಕಕ್ಕೆ ಅನ್ವಯವಾಗುತ್ತಿಲ್ಲ ಎಂಬುದು ನಿಜ. ಅಷ್ಟೇ ಏಕೆ ಕೇರಳ, ತಮಿಳುನಾಡಿನಲ್ಲಿ ಕಂಡು ಬರುವ ಈ ಭಾಷಾ ಮಾಧ್ಯಮದ ಅರಿವು ಕೂಡ ನಮ್ಮಲ್ಲಿ ಇಲ್ಲವಾಗಿದೆ. ಬಹುಶಃ ಅಲ್ಲಿನಂತೆ ನಮ್ಮಲ್ಲಿ ದ್ರಾವಿಡ ಪ್ರಜ್ಞೆ ಬೆಳೆಯಲಿಲ್ಲ. ತಮಿಳು ನಾಡಿನಲ್ಲಿ ಪೆರಿಯಾರ್, ಅಣ್ಣಾದೊರೈ ಥರದವರ ಮುಂದಾಳತ್ವದಲ್ಲಿ ದ್ರಾವಿಡತನ ಒಂದು ಆಂದೋಲನವಾಗಿ ಪಸರಿಸಿತು. ನಮ್ಮಲ್ಲಿನ ಔದಾರ್ಯವೇ ನಮಗೆ ಉರುಳಾಯಿತೆನಿಸುತ್ತದೆ.
ಬಹುಶಃ ನಮ್ಮಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ರೂಪಗೊಂಡದ್ದು ಸುಮಾರು 1935ರಲ್ಲಿ. ಆಗಿನಿಂದಲೇ ಆಂಗ್ಲ ಭಾಷೆಯ ಪ್ರಾಬಲ್ಯ ಆರಂಭವಾಯಿತು ಎನ್ನಬಹುದು. ಅಲ್ಲಿಯವರೆಗೆ ನಮ್ಮ ಸಮಾಜದ ಬಹುಮಂದಿ ಶಿಕ್ಷಣದಿಂದ ವಂಚಿತರಾಗಿದ್ದರು. ಬಹುಶಃ ನಮ್ಮಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ರೂಪಗೊಂಡದ್ದು ಸುಮಾರು 1935ರಲ್ಲಿ. ಆಗಿನಿಂದಲೇ ಆಂಗ್ಲ ಭಾಷೆಯ ಪ್ರಾಬಲ್ಯ ಆರಂಭವಾಯಿತು ಎನ್ನಬಹುದು. ಅಲ್ಲಿಯವರೆಗೆ ನಮ್ಮ ಸಮಾಜದ ಬಹುಮಂದಿ ಶಿಕ್ಷಣದಿಂದ ವಂಚಿತರಾಗಿದ್ದರು.
ಅಲ್ಲಿಯವರೆಗೆ ಸಂಸ್ಕೃತದ ಆರಾಧಕರಾಗಿದ್ದ ಮೇಲ್ಜಾತಿಯ ಮಂದಿ ಬ್ರಿಟಿಷರ ಆಡಳಿತದಲ್ಲಿ ಇಂಗ್ಲಿಷ್ ಅನ್ನು ಆರಾಧಿಸತೊಡಗಿದರು. ಈ ಮೇಲ್ಜಾತಿಯವರನ್ನು ಮತ್ತು ಮೇಲ್ವರ್ಗದವರನ್ನು ಅನುಸರಿಸಿದ ಉಳಿದವರೆಲ್ಲರೂ ಈ ಪರಕೀಯ ವ್ಯಾಮೋಹಕ್ಕೆ ಒಳಗಾದರು. ಅದೇ ಈಗಲೂ ಮುಂದುವರಿದಿದೆ.
ಈ ವೈಚಾರಿಕ ಚಿಂತನೆ ಎಂಬುದೇ ನಮ್ಮಲ್ಲಿ ಢಾಳಾಗಿ ಬೆಳೆದದ್ದು (ವಚನ ಜಾಗೃತಿಯನ್ನು ಬಿಟ್ಟು) 20ನೇ ಶತಮಾನದ ಉತ್ತರಾರ್ಧದಲ್ಲಿ. ಈಗಲೂ ನಮ್ಮ ಸಮಾಜದಲ್ಲಿ ವೈಚಾರಿಕತೆಗೆ ಸೀಮಿತ ಅವಕಾಶ. ಹಾಗಾಗಿ ಅದೇ ಮನಸ್ಥಿತಿ ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿ ಕೂಡ ಅನ್ವಯಿಸಲ್ಪಟ್ಟು ವೈಚಾರಿಕ ತಳಹದಿ ಶೈಶವಾವಸ್ಥೆಯಲ್ಲೇ ಇದೆ ಎನ್ನಬಹುದು. ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಮಾತೃಭಾಷಾ ಮಾಧ್ಯಮದ ಶಿಕ್ಷಣ ವೈಚಾರಿಕ ತಳಹದಿಯಿಂದ ರೂಪುಗೊಂಡದ್ದಲ್ಲ. ಸರಕಾರಿ ಶಾಲಾ ಶಿಕ್ಷಣವೇ ಹಳ್ಳಿಗಾಡಿನ ಪ್ರದೇಶಗಳಲ್ಲಿ ಲಭ್ಯವಾಗಿರುವುದಾದ್ದರಿಂದ ಅಲ್ಲೆಲ್ಲ ಸ್ವಲ್ಪ ಕನ್ನಡ ಮಾಧ್ಯಮ ಉಳಿದುಕೊಂಡಿದೆ ಎಂದು ಹೇಳಬಹುದು. ಅಲ್ಲೂ ಇತ್ತೀಚೆಗೆ ಖಾಸಗಿಯವರ ಪ್ರವೇಶವಾಗಿರುವುದರಿಂದ ಮತ್ತು ಸರಕಾರವೇ ತನ್ನ ಆಡಳಿತಕ್ಕೊಳಪಟ್ಟ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಆರಂಭಿಸಿರುವ ಕಾರಣವಾಗಿ ಕನ್ನಡ ಮಾಧ್ಯಮ ಶಿಥಿಲಾವಸ್ಥೆಯನ್ನು ತಲುಪುತ್ತಿದೆ.
ಆರ್ಥಿಕವಾಗಿ ಹಿಂದುಳಿದಿರುವವರೂ ಸಾಲ ಸೋಲ ಮಾಡಿ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಉನ್ನತ ಶಿಕ್ಷಣ ಮತ್ತು ವೃತ್ತಿಶಿಕ್ಷಣದಲ್ಲಿ ಆರ್ಥಿಕತೆಯ ಸಮಸ್ಯೆಯು ತಾರತಮ್ಯಕ್ಕೆ ಎಡೆಮಾಡಿಕೊಡುವುದರಲ್ಲಿ ಸಂದೇಹವೇ ಇಲ್ಲ. ಆದರೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತ್ರ ಆಂಗ್ಲ ವ್ಯಾಮೋಹ ಮತ್ತು ವೈಚಾರಿಕ ಚಿಂತನೆಯ ಕೊರತೆಯೇ ಕನ್ನಡಭಾಷೆ/ ಮಾತೃಭಾಷೆ/ಪ್ರಾದೇಶಿಕ ಭಾಷೆಗೆ ಅಡ್ಡಿಯಾಗಿದೆ ಎನ್ನಬಹುದು. ಈ ಆಂಗ್ಲ ಭಾಷೆಯ ವ್ಯಾಮೋಹ ಎಷ್ಟು ಅತಿಯಾಗಿ ನಮ್ಮ ಜನರನ್ನು ಮುತ್ತಿಕೊಂಡಿದೆ ಎಂದರೆ, ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನು ಕಲಿಸೋಣ, ಮಾಧ್ಯಮ ಕನ್ನಡವೇ ಇರಲಿ ಎಂಬ ಆಲೋಚನೆಗೂ ಇಲ್ಲಿ ಅವಕಾಶ ಇಲ್ಲವಾಗಿದೆ. ಆದರೆ ಸರಕಾರವು ಕನ್ನಡ ಶಾಲೆಗಳನ್ನು ಖಾಸಗಿ ಶಾಲೆಗಳ ಹಾಗೆ ಅಭಿವೃದ್ಧಿ ಪಡಿಸಿದರೆ ಜನ ಬದಲಾಗಬಹುದು ಎಂಬ ಒಂದು ಮರೀಚಿಕೆಯಂತಹ ಆಶಾವಾದವನ್ನು ಇಟ್ಟುಕೊಳ್ಳಬಹುದು.