ಭಾರತದ ಶಿಕ್ಷಣ ವ್ಯವಸ್ಥೆ ಈಗ ‘ಮಾನವ ಕಲ್ಯಾಣ’ಕ್ಕೆ ದಾರಿಯಾಗಿದೆಯೇ?
‘‘ಭಾರತ ಶಿಕ್ಷಣವನ್ನು ಮಾನವ ಕಲ್ಯಾಣದ ಸಾಧನವಾಗಿ ನೋಡುತ್ತದೆ ಅನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ’’ ಎಂದು ಇತ್ತೀಚೆಗೆ ನಳಂದಾ ವಿಶ್ವವಿದ್ಯಾನಿಲಯ ಉದ್ಘಾಟನೆ ವೇಳೆ ಹೇಳಿದ್ದಾರೆ ಪ್ರಧಾನಿ ಮೋದಿ.
‘‘2047ರೊಳಗೆ ಭಾರತ ಅಭಿವೃದ್ಧಿಯಾದ ದೇಶವಾಗಿ ಇಲ್ಲಿನ ಶಿಕ್ಷಣ ವ್ಯವಸ್ಥೆ ಸಮಗ್ರ ಬದಲಾವಣೆ ಕಾಣುವ ಹಾಗೆ ಮಾಡುವುದು ನನ್ನ ಗುರಿ’’ ಎಂದೂ ಹೇಳಿದ್ದಾರೆ ಪ್ರಧಾನಿ ಮೋದಿ.
‘‘ಭಾರತ ಇಡೀ ಜಗತ್ತಿಗೆ ಜ್ಞಾನದ ಪ್ರಮುಖ ಕೇಂದ್ರ ಆಗಬೇಕು ಎಂಬುದು ನನ್ನ ಗುರಿ’’ ಎಂದೂ ಹೇಳಿದ್ದಾರೆ ಮೋದಿ.
ಆದರೆ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಮೋದಿ ಹೇಳಿರುವ ಅದೇ ದಾರಿಯಲ್ಲಿ ಸಾಗುತ್ತಿದೆಯೇ..?
ಇದು ಈ ಹೊತ್ತಿನ ಬಹುಮುಖ್ಯ ಪ್ರಶ್ನೆ.
ನಮ್ಮ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆ ಎಂತಹದ್ದು ಎಂದು ನೆನೆಯುವಾಗ, ಹಲವು ಆತಂಕಕಾರಿ ಅಂಶಗಳು ಎದುರಾಗಿ ಕಾಡುತ್ತವೆ.
ಶಿಕ್ಷಣದ ವೆಚ್ಚದಲ್ಲಿನ ಭಾರೀ ಏರಿಕೆ ಒಂದು ಬಹು ದೊಡ್ಡ ಸವಾಲಾಗಿದ್ದು, ಇದು ಉಂಟುಮಾಡುವ ಪರಿಣಾಮಗಳು ಎಂಥವು?
ಇದೇ ವೇಳೆ, ಶೈಕ್ಷಣಿಕ ಸಾಲಗಳೂ ಭಾರವಾಗುತ್ತಿವೆ. ಒಂದಿಡೀ ಪೀಳಿಗೆಯ ತಲೆ ಮೇಲಿರುವ ಈ ಸಾಲದ ಹೊರೆಗೆ ಯಾರು ಹೊಣೆ?
ವಿದ್ಯಾರ್ಥಿಗಳ ಡ್ರಾಪ್‌ಔಟ್‌ಗಳಲ್ಲಿ ತೀವ್ರ ಹೆಚ್ಚಳವಾಗಿದ್ದು, ಅದರ ಹಿಂದಿನ ಕಾರಣಗಳು ಮತ್ತದರ ಸಾಮಾಜಿಕ ಪರಿಣಾಮಗಳು ಏನು?
ಇಡೀ ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ವಲಯವೇ ಆಳುತ್ತಿರುವಾಗ ಸಾರ್ವಜನಿಕ ಶಿಕ್ಷಣ ಎಂಬುದಕ್ಕೆ ಏನು ಅರ್ಥವಿದೆ?
ಶಿಕ್ಷಣ ಕ್ಷೇತ್ರದ ಪರಿಣಿತ, ‘ಕರಿಯರ್ಸ್ 360’ ಸಂಸ್ಥಾಪಕ ಮಹೇಶ್ವರ್ ಪೆರಿ ಅವರು ಶಿಕ್ಷಣ ವ್ಯವಸ್ಥೆಯಲ್ಲಿನ ವಿಲಕ್ಷಣ ಅಸಮಾನತೆಯನ್ನು ಮತ್ತು ಅದು ತಂದಿರುವ ಆತಂಕಗಳೇನು ಎಂಬುದನ್ನು ವಿವರಿಸಿದ್ದಾರೆ.
ಅವರ ವಿಚಾರಗಳ ಸಂಗ್ರಹ ಇಲ್ಲಿದೆ:
ಮೊದಲ ಪ್ರಧಾನಿ ನೆಹರೂ, ದೇಶದ ಭವಿಷ್ಯಕ್ಕೆ ಬೇಕಾದ ಎಲ್ಲವನ್ನೂ ರೂಪಿಸುವುದು ನಮ್ಮ ಜನರಿಗೆ ನಾವು ಕೊಡುವ ಶಿಕ್ಷಣ ಎಂದಿದ್ದರು.
ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿತ್ತು ಮತ್ತು ಈಗ ಏನಾಗಿದೆ?
1950 ಖರಗ್ಪುರದಲ್ಲಿ ದೇಶದ ಮೊದಲ ಐಐಟಿ ಸ್ಥಾಪನೆ
1956 ಮೊದಲ ಏಮ್ಸ್ ಸ್ಥಾಪನೆ
1959 ವಾರಂಗಲ್ ನಲ್ಲಿ ಮೊದಲ ಎನ್‌ಐಟಿ
1961 ಕೋಲ್ಕತಾದಲ್ಲಿ ದೇಶದ ಮೊದಲ ಐಐಎಂ
1963 ಕೇರಳದಲ್ಲಿ ದೇಶದ ಮೊದಲ ಕೇಂದ್ರೀಯ ವಿದ್ಯಾನಿಲಯ
1962 ಇಸ್ರೋ ಸ್ಥಾಪನೆ
1963 ದೇಶದಲ್ಲಿ ಮೊದಲ ಬಾರಿಗೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ
ಅದಾದ ಬಳಿಕ
1986 ಮೊದಲ ಎನ್‌ಎಲ್ ಯು (ನ್ಯಾಷನಲ್ ಲಾ ಯೂನಿವರ್ಸಿಟಿ)
1986 ಮೊದಲ ಎನ್‌ಐಎಫ್ ಟಿ
2006 ಮೊದಲ ಐಐಎಸ್‌ಇಆರ್
ಆದರೆ ಆಮೇಲೆ ಒಂದು ಹಂತದಲ್ಲಿ ಎಲ್ಲವೂ ಸ್ಥಗಿತವಾದ ಸನ್ನಿವೇಶ.
ಹೊಸದರ ಹುಡುಕಾಟ ಇಲ್ಲವಾಯಿತು. ಶಿಕ್ಷಣದಲ್ಲಿ ಹೂಡಿಕೆ ಇಲ್ಲವಾಯಿತು.
ನಾವು ನಮ್ಮ ಶಿಕ್ಷಣ ವ್ಯವಸ್ಥೆಯ ಬುನಾದಿಗಿದ್ದ ಹೆಚ್ಚುಗಾರಿಕೆಯನ್ನು ಉಳಿಸಿ ಬೆಳೆಸಲು ಬದ್ಧತೆ ತೋರಿದೆವೆ?
ಕೆಲವು ಅಂಕಿಅಂಶಗಳಿಂದ ಈ ಅಂಶವನ್ನು ಮನದಟ್ಟು ಮಾಡಿಕೊಳ್ಳಬಹುದು.
ದೇಶದಲ್ಲಿನ ಶಾಲೆಗಳೆಷ್ಟು?
ಸರಕಾರಿ ಶಾಲೆಗಳು
2008-09ರಲ್ಲಿ 10.35 ಲಕ್ಷ
2021-22ರಲ್ಲಿ 11.28 ಲಕ್ಷ
13 ವರ್ಷಗಳಲ್ಲಿ ಸುಮಾರು ಶೇ.9ರಷ್ಟು ಹೆಚ್ಚಳ
ಖಾಸಗಿ ಶಾಲೆಗಳು
2008-09ರಲ್ಲಿ 2.49 ಲಕ್ಷ
2021-22ರಲ್ಲಿ 3.35 ಲಕ್ಷ
13 ವರ್ಷಗಳಲ್ಲಿ ಶೇ.34.54ರಷ್ಟು ಹೆಚ್ಚಳ
ಇದರ ಅರ್ಥ, ಖಾಸಗಿ ಶಾಲೆಗಳು ಸರಕಾರಿ ಶಾಲೆಗಳಿಗಿಂತ ನಾಲ್ಕು ಪಟ್ಟು ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಿವೆ.
ಈ ಬೆಳವಣಿಗೆ ಶಿಕ್ಷಣದ ವೆಚ್ಚವನ್ನೂ ನಿರ್ಧರಿಸುತ್ತದೆ.
ದೇಶದಲ್ಲಿನ ಕಾಲೇಜುಗಳ ಸಂಖ್ಯೆ
ಸರಕಾರಿ ಕಾಲೇಜುಗಳು
2010-11ರಲ್ಲಿ 8,837
2022-23ರಲ್ಲಿ 9,777
ಶೇ.10.63 ಹೆಚ್ಚಳ
ಖಾಸಗಿ ಕಾಲೇಜುಗಳು
2010-11ರಲ್ಲಿ 24,137
2022-23ರಲ್ಲಿ 35,696
ಶೇ.47.89 ಹೆಚ್ಚಳ
ಆಘಾತಕಾರಿ ಸಂಗತಿಯೆಂದರೆ, ಕಳೆದ 12 ವರ್ಷಗಳಲ್ಲಿ ಶೈಕ್ಷಣಿಕ ವ್ಯವಸ್ಥೆಯ ಶೇ.92.5ರಷ್ಟನ್ನು ಖಾಸಗಿ ಕಾಲೇಜುಗಳೇ ಆಕ್ರಮಿಸಿವೆ.
ಇದೇ ವೇಳೆ ಸರಕಾರಿ ಶಾಲೆಗಳ ಬೆಳವಣಿಗೆ ಶೇ.7.5 ಮಾತ್ರ.
ದೇಶದ ವಿವಿಗಳು
ಸರಕಾರಿ ವಿವಿಗಳು
2010-11ರಲ್ಲಿ 384
2022-23ರಲ್ಲಿ 576
ಶೇ.50ರಷ್ಟು ಹೆಚ್ಚಳ
ಖಾಸಗಿ ವಿವಿಗಳು
2010-11ರಲ್ಲಿ 178
2022-23ರಲ್ಲಿ 586
ಶೇ.229.21 ಹೆಚ್ಚಳ
ಅಂದರೆ, 2010ರಲ್ಲಿ ಪ್ರತೀ ಒಂದು ಖಾಸಗಿ ವಿವಿಗೆ 2ರಂತೆ ಸರಕಾರಿ ವಿವಿಗಳನ್ನು ಹೊಂದಿದ್ದೆವು. ಬರೀ 12 ವರ್ಷಗಳ ಅಂತರದಲ್ಲಿ ಖಾಸಗಿ ವಿವಿಗಳು ಅಗಾಧವಾಗಿ ಬೆಳೆದವು. ಇವತ್ತು ಒಟ್ಟು ಕಾಲೇಜುಗಳಲ್ಲಿ ಶೇ.79ರಷ್ಟು ಖಾಸಗಿ ಕಾಲೇಜುಗಳಿವೆ.
ಖಾಸಗೀಕರಣದಿಂದ ಶಿಕ್ಷಣ ವೆಚ್ಚದ ಮೇಲೆ ಆಗುವ ಪರಿಣಾಮಗಳೇನು?
2014-18ರ ಅವಧಿಯಲ್ಲಿ ಪ್ರಾಥಮಿಕ ಶಿಕ್ಷಣದ ವೆಚ್ಚ ಶೇ.30.7ರಷ್ಟು ಹೆಚ್ಚಿದೆ.
ಹಿರಿಯ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ವೆಚ್ಚ 27.5ರಷ್ಟು ಹೆಚ್ಚಿದೆ.
ಸರ್ವೇ ಪ್ರಕಾರ, ಕೋವಿಡ್ ನಂತರ ಮಕ್ಕಳ ಶಾಲಾ ಶುಲ್ಕ ಶೇ.30ರಿಂದ ಶೇ.50ರವರೆಗೂ ಏರಿದೆ ಎಂದು ಶೇ.42ರಷ್ಟು ಪೋಷಕರು ಹೇಳುತ್ತಿದ್ದಾರೆ.
ಗುರ್ಗಾಂವ್ ವ್ಯಕ್ತಿಯೊಬ್ಬರು 3ನೇ ಕ್ಲಾಸಿನ ತನ್ನ ಮಗುವಿನ ಶಾಲಾ ಶುಲ್ಕವಾಗಿ ಪ್ರತೀ ತಿಂಗಳೂ 30,000 ರೂ. ಪಾವತಿಸುವುದಾಗಿ ಬರೆದುಕೊಂಡಿದ್ದರು.
ಡಿಪಿಎಸ್ ದ್ವಾರಕಾ ಹೆಚ್ಚು ಫೀ ಕಟ್ಟಲು ನಿರಾಕರಿಸಿದ್ದ 13 ಮಕ್ಕಳನ್ನು ತೆಗೆದುಹಾಕಿತ್ತು.
ಹೈದರಾಬಾದ್‌ನಲ್ಲಿ ವಾರ್ಷಿಕ 12 ಲಕ್ಷ ರೂ.ವರೆಗೆ ಶುಲ್ಕ ತೆಗೆದುಕೊಳ್ಳುವ ಶಾಲೆಗಳಿವೆ.
ವಾರ್ಷಿಕ 12 ರೂ. ಲಕ್ಷ ಅಂದ್ರೆ ಏನು ತಮಾಷೆಯೇ?
ಇದು ನಮ್ಮ ಶಿಕ್ಷಣ ವ್ಯವಸ್ಥೆ.
ಐಐಟಿ ಬಾಂಬೆ ವಿಧಿಸುವ ಶುಲ್ಕ
ಒಟ್ಟು ಟ್ಯೂಷನ್ ಶುಲ್ಕ
2008ರವರೆಗೆ 1,08,000 ರೂ.
2024-25ರಲ್ಲಿ 8,00,000 ರೂ.
ಪರೀಕ್ಷಾ ಶುಲ್ಕ
2008ರವರೆಗೆ 4,000 ರೂ.
2024-25ರಲ್ಲಿ 8,000 ರೂ.
ಬರೀ 15 ವರ್ಷಗಳಲ್ಲಿ 7.2 ಪಟ್ಟು ಹೆಚ್ಚಳ
ಎನ್‌ಐಟಿ ತಿರುಚನಾಪಳ್ಳಿ ಶುಲ್ಕ
2011-12ರಲ್ಲಿ 1,42,800;
2023-24ರಲ್ಲಿ 5,02,800
ಅಂದರೆ ಈಗ 3.55 ಪಟ್ಟು ಅಂದರೆ ಹೆಚ್ಚುಕಡಿಮೆ 4 ಪಟ್ಟು ಹೆಚ್ಚಳ
ಇನ್ನು ಇದೇ 15 ವರ್ಷಗಳಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಶುಲ್ಕ 8 ಪಟ್ಟು ಹೆಚ್ಚಿದೆ.
ಹಾಗೆಯೇ ಕಾನೂನು ಶಿಕ್ಷಣದ ವೆಚ್ಚ ನೋಡುವುದಾದರೆ,
ಜಿಎನ್‌ಎಲ್‌ಯು ಗಾಂಧಿನಗರ ವಿಧಿಸುವ ಶುಲ್ಕ
2008-10ರಲ್ಲಿ 5,02,500 ರೂ.
2024-25ರಲ್ಲಿ 8,92,000 ರೂ.
ಪುಣೆಯ ಎಸ್‌ಎಲ್‌ಎಸ್ ಶುಲ್ಕ
2010ರಲ್ಲಿ 5,75,000;
2024ರಲ್ಲಿ 22,65,000
ಬರೀ 14 ವರ್ಷಗಳಲ್ಲಿ 4 ಪಟ್ಟು ಹೆಚ್ಚಳ.
ಇದೆಲ್ಲವನ್ನೂ ಗಮನಿಸಿದರೆ ಕಳೆದ 15 ವರ್ಷಗಳಲ್ಲಿ ಖಾಸಗಿ ಸಂಸ್ಥೆಗಳು ವಿಧಿಸುವ ಶುಲ್ಕಗಳಲ್ಲಿನ ಹೆಚ್ಚಳ ಶೇ.300ರಷ್ಟು.
ಇನ್ನು ಡಿಸೈನಿಂಗ್ ಕ್ಷೇತ್ರದಲ್ಲಿನ ಶಿಕ್ಷಣದ ಶುಲ್ಕ ನೋಡುವುದಾದರೆ,
ಅಹಮದಾಬಾದ್ ಎನ್‌ಐಡಿ ಶುಲ್ಕ
2013-14ರಲ್ಲಿ 4,80,000 ರೂ.
2024-25ರಲ್ಲಿ 15,72,000 ರೂ.
11 ವರ್ಷಗಳಲ್ಲಿ 3.3 ಪಟ್ಟು ಹೆಚ್ಚಳ
ಎಂಬಿಬಿಎಸ್ ಶುಲ್ಕ
ಸ್ಟೇಟ್ ಪ್ರೈವೇಟ್ ಕಾಲೇಜುಗಳಲ್ಲಿ -80 ಲಕ್ಷದಿಂದ 1.25 ಕೋಟಿ ರೂ. ವರೆಗೆ ಹೆಚ್ಚಳ
ಡೀಮ್ಡ್ ಪ್ರೈವೇಟ್ ಸಂಸ್ಥೆಗಳಲ್ಲಿ -1.25 ಕೋಟಿಯಿಂದ 2 ಕೋಟಿ ರೂ.
ಎನ್‌ಆರ್‌ಐ ಶುಲ್ಕ 3 ಕೋಟಿಯಿಂದ 4 ಕೋಟಿ ರೂ.
ಇನ್ನು ಎಲ್ಲಾ ಐಐಟಿಗಳಲ್ಲಿನ ಎಂಟೆಕ್ ಶುಲ್ಕ ಶೇ.900ರಷ್ಟು ಹೆಚ್ಚಳವಾಗಿದೆ.
ಹೀಗಾಗಿ ಅಷ್ಟೊಂದು ಶುಲ್ಕ ಕೊಡಲಾರದೆ ಹೊರಬರುವವರ ಸಂಖ್ಯೆಯೂ ಹೆಚ್ಚಿದೆ.
ಐಐಎಂ ಅಹಮದಾಬಾದ್ ಶುಲ್ಕ
2005ರಲ್ಲಿ 3.16 ಲಕ್ಷ ರೂ.
2024-26ರಲ್ಲಿ 25 ಲಕ್ಷ ರೂ.
ಇದು 8 ಪಟ್ಟು ಹೆಚ್ಚಳ
ಹೀಗೆ ಅತಿಯಾದ ಶುಲ್ಕ ನೀಡಿ ಓದಬೇಕಾಗಿರುವಾಗ ಶೈಕ್ಷಣಿಕ ಸಾಲ ಪಡೆಯಲೇಬೇಕಾದ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕುತ್ತಾರೆ.
2005ರಲ್ಲಿ 4,68,207 ವಿದ್ಯಾರ್ಥಿಗಳು ಪಡೆದ ಒಟ್ಟು ಸಾಲ 6,713 ಕೋಟಿ ರೂ.
2023ರಲ್ಲಿ 32 ಲಕ್ಷ ವಿದ್ಯಾರ್ಥಿಗಳು ಪಡೆದ ಒಟ್ಟು ಸಾಲದ ಮೊತ್ತ 96,847 ಕೋಟಿ ರೂ.
18 ವರ್ಷಗಳಲ್ಲಿ ಸಾಲ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ 7 ಪಟ್ಟು ಹೆಚ್ಚಿದೆ
ಒಟ್ಟು ಶೈಕ್ಷಣಿಕ ಸಾಲದ ಮೊತ್ತ 14 ಪಟ್ಟು ಹೆಚ್ಚಿದೆ.
ಇದೆಲ್ಲದರ ನಡುವೆ ಭಾರೀ ಮೊತ್ತದ ಶುಲ್ಕ ಭರಿಸಲಾರದೆ ಓದು ನಿಲ್ಲಿಸಿದವರ ಸಂಖ್ಯೆಯೂ ದೊಡ್ಡದೇ ಇದೆ.
ಶಾಲೆ ಮತ್ತು ಕಾಲೇಜುಗಳಲ್ಲಿ ಡ್ರಾಪ್ ಔಟ್ ಆದವರು 4.5 ಕೋಟಿ ವಿದ್ಯಾರ್ಥಿಗಳು
ಓದುವುದನ್ನೂ ನಿಲ್ಲಿಸಿ, ಉದ್ಯೋಗವೂ ಇರದೆ ಇರುವವರ ಪ್ರಮಾಣ:
ಮಹಿಳೆಯರು ಶೇ.43.1, ಪುರುಷರು ಶೇ.16.1
ಎನ್‌ಎಸ್‌ಎಸ್ ವರದಿ ಪ್ರಕಾರ, ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯಿಂದ ಹೊರಗಿರುವ ಯುವತಿಯರ ಪ್ರಮಾಣ ಶೇ.50ಕ್ಕೂ ಅಧಿಕ.
ಆರ್ಥಿಕ ತೊಂದರೆಯ ಕಾರಣದಿಂದಲೇ ಡ್ರಾಪ್ ಔಟ್ ಆಗುವ ವಿದ್ಯಾರ್ಥಿಗಳ ಸಂಖ್ಯೆ ಶೇ.22.58
ಕುಟುಂಬಕ್ಕಾಗಿ ದುಡಿಯಬೇಕಾದ ಅನಿವಾರ್ಯತೆಯಲ್ಲಿ ಓದು ನಿಲ್ಲಿಸುವವರು ಶೇ.21
ಶಿಕ್ಷಣದ ಮೂಲಕ ಬದುಕನ್ನು ಕಟ್ಟಿಕೊಳ್ಳಬೇಕು.ಆದರೆ ಆ ಶಿಕ್ಷಣದ ವೆಚ್ಚ ನಿಯಂತ್ರಣವೇ ಇಲ್ಲದೆ ಮಿತಿಮೀರಿ ಹೆಚ್ಚುತ್ತಲೇ ಇದೆ.
ಶಿಕ್ಷಣದ ವೆಚ್ಚ 8 ಪಟ್ಟು ಏರಿದೆ. ಶೈಕ್ಷಣಿಕ ಸಾಲಗಳಲ್ಲಿ 14 ಪಟ್ಟು ಹೆಚ್ಚಳವಾಗಿದೆ. ವಿದ್ಯಾರ್ಥಿಗಳ ಡ್ರಾಪ್‌ಔಟ್‌ಗಳಲ್ಲಿ ಶೇ. 40 ಹೆಚ್ಚಳ ದಾಖಲಾಗುತ್ತಿದೆ.
ಶಿಕ್ಷಣ ವ್ಯವಸ್ಥೆಯ ಶೇ.92.5ರಷ್ಟನ್ನು ಖಾಸಗಿಯವರೇ ಆಕ್ರಮಿಸಿಕೊಂಡಿದ್ದಾರೆ. ಶಿಕ್ಷಣ ಎಂಬುದು ವಿದ್ಯಾರ್ಥಿಗಳಿಗೂ, ಕುಟುಂಬಗಳಿಗೂ ಒಂದು ದೊಡ್ಡ ಹೊರೆಯಾಗುತ್ತಿದೆ.
ಒಂದೆಡೆ ಶುಲ್ಕ ಏರುತ್ತಲೇ ಹೋಗುತ್ತಿದ್ದರೆ, ಶಿಕ್ಷಣದ ಗುಣಮಟ್ಟ ಮಾತ್ರ ಅಧೋಗತಿಗೆ ಇಳಿದಿದೆ.
ಅದು ಇನ್ನೂ ಆಘಾತಕಾರಿ.
ಸಾಮಾಜಿಕವಾಗಿ ಆರ್ಥಿಕವಾಗಿ ಪ್ರಬಲರಲ್ಲದವರ ಪಾಲಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಕನಸಾಗುತ್ತಿದೆ.
ಇಂತಹ ಹೊತ್ತಲ್ಲಿ ಸರಕಾರಿ ಸಂಸ್ಥೆಗಳು ಅದನ್ನು ಸಾಧ್ಯವಾಗಿಸುವ ಕೆಲಸ ಮಾಡಬೇಕಿದೆ.
ದೇಶದಲ್ಲಿ ಹೆಚ್ಚು ಹೆಚ್ಚು ಸರಕಾರಿ ಶಾಲೆಗಳು, ಕಾಲೇಜುಗಳು, ವಿವಿಗಳ ಅಗತ್ಯ ಇದೆ.
ಆದರೆ ಅದನ್ನು ಮಾಡುವವರು ಯಾರು ?