ಸ್ವಾಭಿಮಾನಿ ದೇಶವೊಂದಕ್ಕೆ ತನ್ನ ನಾಗರಿಕರನ್ನು ಹೀಗೆ ಹಿಂದಕ್ಕೆ ಕರೆಸಿಕೊಳ್ಳುವುದು ಹೆಮ್ಮೆಯೇ?

ಅಮೆರಿಕ ಅಧ್ಯಕ್ಷ ಟ್ರಂಪ್ ಮಿಲಿಟರಿ ವಿಮಾನದಲ್ಲಿ 100ಕ್ಕೂ ಹೆಚ್ಚು ಭಾರತೀಯರನ್ನು ವಾಪಸ್ ಕಳುಹಿಸಿದ್ದಾರೆ. ಈ ವಿಮಾನ ಅಕ್ರಮ ಭಾರತೀಯರನ್ನು ಹೊತ್ತು ಬಂದಿದೆ.
ಅಮೆರಿಕ ಮಿಲಿಟರಿ ವಿಮಾನ ನಮ್ಮ ಭಾರತೀಯ ನೆಲದಲ್ಲಿ ಇಳಿದಿದೆ ಮತ್ತು ಯಾರೂ ಇದರ ಬಗ್ಗೆ ನಾಚಿಕೆಪಡುತ್ತಿಲ್ಲ.
ಇನ್ನೊಂದು ದೇಶದ ಮಿಲಿಟರಿ ವಿಮಾನದಲ್ಲಿ ದೇಶದ ನಾಗರಿಕರು ಅಪರಾಧಿಗಳಂತೆ ಬಂದಿಳಿಯುವುದು ನಾಚಿಕೆಗೇಡಿನ ಸಂಗತಿ.
ಕಾನೂನಿನ ಪ್ರಕಾರ, ಸ್ವಾಭಿಮಾನಿ ದೇಶ ತನ್ನ ನಾಗರಿಕ ವಿಮಾನದಲ್ಲಿ ತನ್ನ ನಾಗರಿಕರನ್ನು ಮರಳಿ ಕರೆತರುವುದಾಗಿ ಹೇಳಬೇಕಿತ್ತು. ಆದರೆ ಭಾರತ ತನ್ನ ನೆಲದಲ್ಲಿ ಅಮೆರಿಕದ ಮಿಲಿಟರಿ ವಿಮಾನ ಇಳಿಯಲು ಏಕೆ ಅನುಮತಿಸಿತು ಎಂಬುದು ನಿಗೂಢ. ಈ ಪ್ರಶ್ನೆಯ ಬಗ್ಗೆ ಮೌನ ಏಕೆ?
ಈ ಸಂದರ್ಭದಲ್ಲಿ, ಕೊಲಂಬಿಯಾದ ಅಧ್ಯಕ್ಷ ಗುಸ್ತಾವ್ ಪೆಟ್ರೋ ತಮ್ಮ ನೆಲದಲ್ಲಿ ಯುಎಸ್ ಮಿಲಿಟರಿ ವಿಮಾನ ಇಳಿಯಲು ಅನುಮತಿಸಲಿಲ್ಲ ಎಂಬುದನ್ನು ನಾವು ನೆನಪು ಮಾಡಿಕೊಳ್ಳಬೇಕು. ಆದರೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೀಗೆ ಏಕೆ ಮಾಡಲು ಸಾಧ್ಯವಾಗಲಿಲ್ಲ?
ವಿಮಾನ ಇಳಿಯುವ ವೀಡಿಯೊವನ್ನು ತೆಗೆದುಕೊಳ್ಳಲು ಮಾಧ್ಯಮಗಳಿಗೆ ಅವಕಾಶ ನೀಡಲಾಗಿಲ್ಲ.
ಆದರೆ ಅಮೆರಿಕದ ಮಿಲಿಟರಿ ವಿಮಾನ ಇಳಿಯುವ ಚಿತ್ರಗಳು ಹಲವು ಸ್ಥಳಗಳಿಂದ ಬಂದಿವೆ ಮತ್ತು ಜನರು ತೆಗೆದಿರಬಹುದಾದ ವೀಡಿಯೊಗಳು ಸಹ ಇವೆ.
ಈ ವಿಮಾನದಲ್ಲಿ ಬಂದವರಲ್ಲಿ 33 ಮಂದಿ ಗುಜರಾತ್‌ನವರು, 30 ಮಂದಿ ಪಂಜಾಬ್‌ನವರು ಮತ್ತು ಕೆಲವರು ಉತ್ತರ ಪ್ರದೇಶ, ಹರ್ಯಾಣ, ಮಹಾರಾಷ್ಟ್ರ ಮತ್ತು ಚಂಡಿಗಡದವರೂ ಇದ್ದಾರೆ.
ಅಮೆರಿಕ ಭಾರತ ಮಾತ್ರವಲ್ಲದೆ ಮೆಕ್ಸಿಕೊ, ಕೊಲಂಬಿಯಾ ಮತ್ತು ಗ್ವಾಟೆಮಾಲಾದ ಅಕ್ರಮ ವಲಸಿಗರನ್ನು ಕೂಡ ಗಡಿಪಾರು ಮಾಡಿದೆ ಎಂದು ಮಡಿಲ ಮೀಡಿಯಾ ಹೇಳುತ್ತಿದೆ. ಮೋದಿ ಸರಕಾರವನ್ನು ಹೊಗಳುತ್ತಾ, ಈ ಮಡಿಲ ಮೀಡಿಯಾ ಭಾರತವನ್ನು ಮೆಕ್ಸಿಕೊ ಮತ್ತು ಗ್ವಾಟೆಮಾಲಾಗಳ ಸಾಲಿನಲ್ಲಿ ಸೇರಿಸುತ್ತಿದೆ. ಆದರೆ ಅಮೆರಿಕ ತನ್ನ ನಾಗರಿಕರನ್ನು ತನ್ನ ಮಿಲಿಟರಿ ವಿಮಾನದ ಮೂಲಕ ಕಳುಹಿಸಲು ಹೊರಟಾಗ ಕೊಲಂಬಿಯಾ ಏನು ಮಾಡಿತ್ತು ಎಂದು ಹೇಳಲು ಇದೇ ಮಡಿಲ ಮೀಡಿಯಾಕ್ಕೆ ಬಾಯಿಯಿಲ್ಲ.
ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆದುಕೊಂಡು ಬರುವಾಗ ಅದೆಷ್ಟು ಪ್ರಚಾರ ಕೊಟ್ಟಿತ್ತು ಮಡಿಲ ಮೀಡಿಯಾ? ಆ ಪ್ರಯಾಣಿಕರಿಂದ ಮೋದಿಗೆ ಜೈಕಾರ ಹಾಕಿಸಲಾಗಿತ್ತು, ಅದರ ಸರಣಿ ವೀಡಿಯೊಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಅಮೆರಿಕ ಮಿಲಿಟರಿ ವಿಮಾನದಲ್ಲಿ ಭಾರತೀಯರನ್ನು ಅಪರಾಧಿಗಳಂತೆ ಕಳಿಸಿದಾಗ ಸುದ್ದಿಯೇ ಆಗುತ್ತಿಲ್ಲ.
ಕೊಲಂಬಿಯಾದ ಅಧ್ಯಕ್ಷ ‘‘ವಲಸಿಗರಿಗೆ ಕೈಕೋಳ ಹಾಕಿರುವುದು ಅವರನ್ನು ಅಪರಾಧಿಗಳಂತೆ ನಡೆಸಿಕೊಂಡಂತೆ. ಅದು ಅವರ ಘನತೆಯ ಉಲ್ಲಂಘನೆ ಮತ್ತು ಸೇನೆಯ ಈ ಕ್ರಮ ಶಿಷ್ಟಾಚಾರದ ಉಲ್ಲಂಘನೆ’’ ಎಂದು ಹೇಳಿದ್ದಾರೆ.
ಆದರೆ ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದಾಗ, ಕೊಲಂಬಿಯಾದ ಅಧ್ಯಕ್ಷ ಹಿಂದೆ ಸರಿಯಬೇಕಾಯಿತು. ಆದರೆ ಆಗಲೂ ಅವರು ತಮ್ಮ ನಾಗರಿಕರನ್ನು ಮರಳಿ ಕರೆತರಲು ತಮ್ಮ ವಾಯುಪಡೆಯ ವಿಮಾನಗಳನ್ನು ಅಮೆರಿಕಕ್ಕೆ ಕಳುಹಿಸಿದರು.
ಅವರು ಅಮೆರಿಕದ ವಿಮಾನಗಳನ್ನು ಸ್ವೀಕರಿಸಲಿಲ್ಲ.
ಕೊಲಂಬಿಯಾ ಸರಕಾರವು ತನ್ನ ನಾಗರಿಕರ ಗೌರವಯುತ ವಾಪಸಾತಿಗಾಗಿ ಒಂದು ಸಮಿತಿಯನ್ನು ಸಹ ರಚಿಸಿತು.
ಭಾರತೀಯ ನಾಗರಿಕರನ್ನು ಅಮೆರಿಕ ಭಾರತಕ್ಕೆ ಕಳುಹಿಸಿದಾಗ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗರಾಜ್‌ನಲ್ಲಿ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೊತೆ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿದ್ದರು, ಪ್ರಾರ್ಥನೆ ಸಲ್ಲಿಸುತ್ತಿದ್ದರು.
ಭಾರತೀಯರನ್ನು ಈ ರೀತಿ ಕಳುಹಿಸುವುದು ನಾಚಿಕೆಗೇಡಿನ ಸಂಗತಿ, ಆದರೆ ಅವರನ್ನು ಸ್ವಂತ ನೆಲದಲ್ಲಿ ಈ ರೀತಿ ಮೌನವಾಗಿ ಇಳಿಸುವುದು ಇನ್ನೂ ನಾಚಿಕೆಗೇಡಿನ ಸಂಗತಿ. ಭಾರತದ ಪ್ರಧಾನಿ ಮೋದಿ ಅವರು ಕೊಲಂಬಿಯಾದ ಅಧ್ಯಕ್ಷ ಪೆಟ್ರೋ ತೋರಿಸಿದ ಧೈರ್ಯವನ್ನು ತೋರಿಸಲು ಸಾಧ್ಯವಾಗಲಿಲ್ಲ.
ಭಾರತ ಏಕೆ ಆಕ್ಷೇಪಿಸಲಿಲ್ಲ? ಅದು ತನ್ನದೇ ವಿಮಾನವನ್ನು ಏಕೆ ಅಮೆರಿಕಕ್ಕೆ ಕಳುಹಿಸಲಿಲ್ಲ?
ಯಾವುದೇ ಸರಕಾರದ ಅವಧಿಯಲ್ಲಿ ಭಾರತದ ಜನರು ಬೇರೆ ದೇಶದ ಮಿಲಿಟರಿ ವಿಮಾನದಲ್ಲಿ ವಾಪಸ್ ಬಂದು ಇಳಿದದ್ದಿಲ್ಲ.
ಮುಂದಿನ ವಾರ ಮೋದಿ ಅಮೆರಿಕಕ್ಕೆ ಹೋಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳಿವೆ. ಅದಕ್ಕೂ ಮೊದಲು ಟ್ರಂಪ್ ಮಿಲಿಟರಿ ವಿಮಾನದಲ್ಲಿ ಭಾರತದ ನಾಗರಿಕರನ್ನು ಕಳುಹಿಸಿದ್ದಾರೆ. ರಾಜತಾಂತ್ರಿಕತೆಯನ್ನು ಅರ್ಥಮಾಡಿಕೊಳ್ಳುವುದಾದರೆ, ಇದು ಸಮಾನ ಮತ್ತು ಸ್ನೇಹಪರ ನಡವಳಿಕೆಯೇ?
ಈ ಭಾರತೀಯರನ್ನು ಸರಪಳಿಗಳಿಂದ ಬಂಧಿಸಲಾಗಿತ್ತೆ? ಹೌದಾಗಿದ್ದಲ್ಲಿ ಇದು ನಾಚಿಕೆಗೇಡಿನ ಸಂಗತಿಯಲ್ಲವೇ?ಇಲ್ಲ ಎಂದಾದರೂ ಅವರನ್ನು ಕಳಿಸಿದ ರೀತಿ ಅದೆಷ್ಟು ಅವಮಾನಕಾರಿಯಾಗಿತ್ತು?
ಅಮೆರಿಕದ ಮಿಲಿಟರಿ ವಿಮಾನವನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. 100ಕ್ಕೂ ಹೆಚ್ಚು ಭಾರತೀಯರನ್ನು ಈ ವಿಮಾನದಲ್ಲಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಈ ವಿಮಾನದಲ್ಲಿ 79 ಪುರುಷರು, 25 ಮಹಿಳೆಯರು ಮತ್ತು 12 ಅಪ್ರಾಪ್ತ ವಯಸ್ಕರಿದ್ದರು. ಆದರೆ ಮಾಧ್ಯಮಗಳಿಗೆ ಅವರನ್ನು ತಲುಪಲು ಅವಕಾಶ ನೀಡಲಾಗಿಲ್ಲ. ಅದನ್ನು ಏಕೆ ರಹಸ್ಯವಾಗಿಡಲಾಗಿದೆ?
ಪ್ರಧಾನಿ ಮೋದಿಯವರ ಗುಜರಾತ್‌ನ ಜನರು ಅಕ್ರಮ ಮಾರ್ಗಗಳ ಮೂಲಕ ಅಮೆರಿಕದಲ್ಲಿ ಹೋಗಿ ಏಕೆ ನೆಲೆಸಿದ್ದಾರೆ ಎಂಬುದನ್ನು ದೇಶ ತಿಳಿದುಕೊಳ್ಳಬೇಕಿತ್ತು.
ಅಭಿವೃದ್ಧಿಯ ಮಾದರಿ ಎಂದು ಅವರು ನಿರಾಯಾಸವಾಗಿ ಗುಜರಾತ್ ಅನ್ನು ತೋರಿಸುತ್ತಾರೆ. ಆದರೆ ಅದೇ ಗುಜರಾತನ್ನು ಈಗ ಯಾರೂ ನೋಡದಂತೆ ಸ್ವಂತ ದೇಶದಲ್ಲಿಯೇ ಮರೆಮಾಡಲಾಗಿದೆ. ಗುಜರಾತ್‌ನ ಸತ್ಯ ಹೊರಬರುವುದಿಲ್ಲ.
ಕನಿಷ್ಠ ಗುಜರಾತ್‌ನ ಮುಖ್ಯಮಂತ್ರಿಯಾದರೂ ತನ್ನ ರಾಜ್ಯದ 33 ನಾಗರಿಕರನ್ನು ಸ್ವಾಗತಿಸಲು ಬರಬೇಕಿತ್ತು.
ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಹೋಗುವ ದಾರಿಯಲ್ಲಿ ಗುಜರಾತ್‌ನ ಜನರು ಶೀತದಿಂದ ಹೇಗೆಲ್ಲ ಸತ್ತರು ಎಂದು ವರದಿಗಳು ಬಂದಿದ್ದವು. ಪ್ರಧಾನಿ ಒಂದೇ ಒಂದು ಮಾತನ್ನೂ ಯಾವತ್ತೂ ಹೇಳಲಿಲ್ಲ.
ಮೋದಿ ಅವರ ಅಧಿಕಾರಾವಧಿಯಲ್ಲಿ, ಅಕ್ರಮವಾಗಿ ವಿದೇಶಗಳಿಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಭಾರತೀಯರು ಅನೇಕ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕಿಬೀಳುತ್ತಿದ್ದಾರೆ.
ಭಾರತೀಯರನ್ನು ವಂಚಿಸಿ ಇತರ ದೇಶಗಳಿಗೆ ಕರೆದೊಯ್ಯಲಾ ಗುತ್ತಿದೆ ಮತ್ತು ಅವರನ್ನು ಮ್ಯಾನ್ಮಾರ್‌ಗೆ ಕಳುಹಿಸಲಾಗುತ್ತಿದೆ.
ಬ್ರೆಝಿಲ್ ತನ್ನ ನಾಗರಿಕರಿಗೆ ಕೈಕೋಳ ಹಾಕಿದಾಗ ಅದನ್ನು ಖಂಡಿಸಿತು. ಅಲ್ಲಿಂದ ಬಂದ ಮಾಧ್ಯಮ ವರದಿಯ ಪ್ರಕಾರ, 88 ಅಕ್ರಮ ವಲಸಿಗರ ಮೂಲಭೂತ ಹಕ್ಕುಗಳನ್ನು ಏಕೆ ಅಗೌರವಿಸಲಾಯಿತು ಎಂಬುದರ ಕುರಿತು ಬ್ರೆಝಿಲ್ ಸರಕಾರ ಟ್ರಂಪ್ ಆಡಳಿತದಿಂದ ವಿವರಣೆಯನ್ನು ಕೋರಿದೆ.
ಅದೇ ರೀತಿ, ಕಳೆದ ವಾರ ಮೆಕ್ಸಿಕೋ ಅಮೆರಿಕದ ಮಿಲಿಟರಿ ವಿಮಾನವನ್ನು ಇಳಿಯದಂತೆ ನಿಲ್ಲಿಸಿತು. ಆ ವಿಮಾನದಲ್ಲಿ 80 ಮೆಕ್ಸಿಕನ್ ನಾಗರಿಕರಿದ್ದರು. ಭಾರತ ಈ ರೀತಿ ಮಾಡಿದ್ದರೆ, ಸುದ್ದಿ ಎಲ್ಲೆಡೆ ಪ್ರಕಟವಾಗುತ್ತಿತ್ತು.
ಹಾರ್ಲೆ ಡೇವಿಡ್ಸನ್ ಎಂಬ ಮೋಟರ್ ಸೈಕಲ್ ಮೇಲಿನ ಹೆಚ್ಚಿನ ಆಮದು ಸುಂಕದ ವಿಷಯವನ್ನು ಟ್ರಂಪ್ ಎತ್ತಿದ್ದಾರೆ.ಅದರ ಬೆನ್ನಲ್ಲೇ ಈ ವರ್ಷದ ಬಜೆಟ್‌ನಲ್ಲಿ ಭಾರತ ಆಮದು ಸುಂಕವನ್ನು ಶೇ.20ರಷ್ಟು ಕಡಿಮೆ ಮಾಡಿದೆ.
ಸುಂಕದ ಕುರಿತು ಟ್ರಂಪ್ ಭಾರತದ ವಿರುದ್ಧ ಎಚ್ಚರಿಕೆ ನೀಡಿದ್ದರು. ಭಾರತ ಮೊದಲ ಹೆಜ್ಜೆಯಾಗಿ ಸುಂಕವನ್ನು ಕಡಿಮೆ ಮಾಡಿದೆ. ಮೋದಿ ಯುಗದ ಮಡಿಲ ಮಾಧ್ಯಮಗಳು ಈ ವಿಷಯಗಳನ್ನು ಎಂದಿಗೂ ಪ್ರಶ್ನಿಸುವುದಿಲ್ಲ ಮತ್ತು ಅಂತಹ ಸುದ್ದಿಗಳನ್ನು ಪ್ರಾಮುಖ್ಯತೆಯೊಂದಿಗೆ ಪ್ರಕಟಿಸುವುದಿಲ್ಲ.
ಭಾರತೀಯರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನ ಅಮೃತಸರದ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿರುವ ನಾಚಿಕೆಗೇಡಿನ ಚಿತ್ರವನ್ನು ಮರೆಮಾಡುವಲ್ಲಿ ಯಶಸ್ವಿಯಾಗಬಹುದು, ಆದರೆ ಅಮೆರಿಕದಿಂದ ಬರುವ ಚಿತ್ರಗಳು ಹೆಚ್ಚಿನ ಕಥೆಗಳನ್ನು ಹೇಳುತ್ತಿವೆ.
ಜನವರಿ 24ರಂದು ಟ್ರಂಪ್ ಅವರ ಪತ್ರಿಕಾ ಕಾರ್ಯದರ್ಶಿ ಈ ಚಿತ್ರ ಟ್ವೀಟ್ ಮಾಡಿದ್ದಾರೆ. ಹುಡುಗರನ್ನು ಸಾಲಿನಲ್ಲಿ ಸೇನಾ ವಿಮಾನಕ್ಕೆ ಕರೆದೊಯ್ಯಲಾಗುತ್ತಿದೆ. ಅವರ ಸೊಂಟಕ್ಕೆ ಸರಪಳಿಗಳು, ಕೈಗಳಿಗೆ ಕೈಕೋಳಗಳು ಮತ್ತು ಕಾಲುಗಳಿಗೆ ಸಂಕೋಲೆಗಳಿವೆ.
ಈ ಚಿತ್ರ ಭಾರತೀಯರದ್ದಲ್ಲ, ಆದರೆ ಅಮೆರಿಕ ಮೆಕ್ಸಿಕೊ ಮತ್ತು ಬ್ರೆಝಿಲ್‌ನಿಂದ ಬಂದ ವಲಸಿಗರನ್ನು ಈ ರೀತಿ ಕಳುಹಿಸುತ್ತಿರುವಾಗ, ಅದು ಭಾರತೀಯರನ್ನೂ ಅದೇ ರೀತಿಯಲ್ಲಿ ಕಳುಹಿಸದೆ ಇರುತ್ತದೆಯೇ?.
ಗಡಿಪಾರು ಮಾಡುವ ಈ ಚಿತ್ರ ಭಾರತದಲ್ಲಿಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಮೆರಿಕ ಎಲ್ಲಾ ಅಕ್ರಮ ವಲಸಿಗರನ್ನು ಈ ರೀತಿ ಕಳುಹಿಸುತ್ತಿರುವಾಗ, ಭಾರತೀಯರ ವಿಷಯದಲ್ಲೂ ಅದೇ ರೀತಿ ಮಾಡಿರಬೇಕು ಎಂದು ಅನ್ನಿಸದೇ ಇರುವುದಿಲ್ಲ.
ಸೇನಾ ವಿಮಾನದ ಮೂಲಕ ಕಳುಹಿಸುವುದರ ಅರ್ಥವೇನೆಂಬ ಚರ್ಚೆಯೂ ಇದೆ. ಟ್ರಂಪ್ ಉದ್ದೇಶಪೂರ್ವಕವಾಗಿ ಮಿಲಿಟರಿ ವಿಮಾನಗಳನ್ನು ಬಳಸುತ್ತಿದ್ದಾರೆ ಎಂಬ ಚರ್ಚೆ ಅಮೆರಿಕದ ಮಾಧ್ಯಮಗಳಲ್ಲಿ ನಡೆಯುತ್ತಿದೆ.
ಮಿಲಿಟರಿ ವಿಮಾನದ ಮೂಲಕ ಅವರನ್ನು ಕಳುಹಿಸುವ ಉದ್ದೇಶ, ಅವರೆಲ್ಲರೂ ಅಪರಾಧಿಗಳು ಎಂದು ತೋರಿಸುವುದಾಗಿದೆ.
ಟ್ರಂಪ್ ತಮ್ಮ ಚುನಾವಣಾ ಪ್ರಚಾರದಲ್ಲಿ ಅಮೆರಿಕದೊಳಗೆ ಅಕ್ರಮವಾಗಿ ಪ್ರವೇಶಿಸುವ ಜನರನ್ನು ಅಪರಾಧಿಗಳು ಮತ್ತು ವಿದೇಶಿಯರೆಂದು ಕರೆಯುತ್ತಿದ್ದರು. ಆದ್ದರಿಂದ ಅವರನ್ನು ಮಿಲಿಟರಿ ವಿಮಾನಗಳಲ್ಲಿ ಸರಪಳಿಗಳಲ್ಲಿ ಬಂಧಿಸಿ ಕಳುಹಿಸಲಾಗುತ್ತಿದೆ.
ಅಮೆರಿಕಕ್ಕೆ ಈ ನಾಗರಿಕರು ಅಕ್ರಮ ವಲಸಿಗರಾಗಿರಬಹುದು, ಅದು ಅವರನ್ನು ಅಪರಾಧಿಗಳು ಎಂದು ಕರೆದಿರಬಹುದು. ಆದರೆ ಕೊಲಂಬಿಯಾದ ಅಧ್ಯಕ್ಷರು ಈ ಅಕ್ರಮ ನಾಗರಿಕರನ್ನು ತಮ್ಮದೇ ಆದ ರೀತಿಯಲ್ಲಿ ನೋಡಿದರು ಮತ್ತು ತಮ್ಮ ನಾಗರಿಕರನ್ನು ಸ್ವಾಗತಿಸಿದರು ಮತ್ತು ವಲಸಿಗರಾಗಿರುವುದು ಅಪರಾಧವಲ್ಲ ಎಂದು ಹೇಳಿದರು.
ಭಾರತದ ದೃಷ್ಟಿಕೋನ ಎಲ್ಲಿಗೆ ಹೋಗಿದೆ?
ಇದಕ್ಕೂ ಮುಂಚೆಯೇ, ಬೈಡನ್ ಕಳೆದ ವರ್ಷ 1,000ಕ್ಕೂ ಹೆಚ್ಚು ಅಕ್ರಮ ಭಾರತೀಯರನ್ನು ಭಾರತಕ್ಕೆ ಕಳುಹಿಸಿದ್ದರು, ನಂತರ ಅದರ ಬಗ್ಗೆ ಚರ್ಚೆ ನಡೆಯಲಿಲ್ಲ.
ಅವರನ್ನು ನಾಗರಿಕ ವಿಮಾನ ಅಥವಾ ಯುಎಸ್ ಮಿಲಿಟರಿ ವಿಮಾನದ ಮೂಲಕ ಕರೆತರಲಾಗಿದೆಯೇ ಎಂಬುದು ಕೂಡ ಯಾರಿಗೂ ತಿಳಿದಿಲ್ಲ. ಆದರೆ ಟ್ರಂಪ್ ಅಕ್ರಮ ನಿವಾಸಿಗಳನ್ನು ಹೇಗೆ ಅವರವರ ದೇಶಕ್ಕೆ ವಾಪಸ್ ಕಳುಹಿಸಲಾಗುತ್ತಿದೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ.
ಈ ಜನರನ್ನು ಭಾರತಕ್ಕೆ ಕಳುಹಿಸುವ ಮೊದಲು, ಅವರು ಭಾರತದ ನಾಗರಿಕರೇ ಅಥವಾ ಇಲ್ಲವೇ ಎಂಬುದನ್ನು ಭಾರತ ಪರಿಶೀಲಿಸುತ್ತದೆ.
ಆದ್ದರಿಂದ, ಈಗ ಸಂಖ್ಯೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ, ಆದ್ದರಿಂದ ಕೇವಲ ಐದು ದಿನಗಳಲ್ಲಿ 100ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಲಾಗಿದೆಯೇ ಎಂದು ಸರಕಾರ ಹೇಳಬೇಕು, ಅಂತಹ ಇನ್ನೂ ಎಷ್ಟು ಜನರಿದ್ದಾರೆ?
ಸರಪಳಿಗಳಲ್ಲಿ ಬಂಧಿಸಿ ಮಿಲಿಟರಿ ವಿಮಾನಗಳಲ್ಲಿ ಕಳುಹಿಸಲಾಗುತ್ತಿದೆ ಎಂದು ಅಮೆರಿಕ ಭಾರತಕ್ಕೆ ತಿಳಿಸಿತ್ತೆ?
ಜನವರಿ 20ರಂದು ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವಾಗ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮೊದಲ ಸಾಲಿನಲ್ಲಿದ್ದರು.
ಮಡಿಲ ಮೀಡಿಯಾಗಳ ನಿರೂಪಕರು ಭಾರತದ ಶಕ್ತಿಯನ್ನು ನೋಡಿ, ವಿದೇಶಾಂಗ ಸಚಿವರಿಗೆ ಮೊದಲ ಸಾಲಿನಲ್ಲಿ ಸ್ಥಾನ ನೀಡಲಾಗಿದೆ ಎಂದು ಹೆಮ್ಮೆಪಡಲು ಪ್ರಾರಂಭಿಸಿದ್ದರು.
ಈಗ ಮಡಿಲ ಮೀಡಿಯಾ ಸರಕಾರವನ್ನು ಕೇಳಬೇಕು, ಅವರನ್ನು ಈ ಸ್ಥಿತಿಯಲ್ಲಿ ಮಿಲಿಟರಿ ವಿಮಾನದಲ್ಲಿ ಕಳುಹಿಸುವ ಮೂಲಕ ಅಮೆರಿಕ ಭಾರತದ ಗೌರವವನ್ನು ಹೆಚ್ಚಿಸಿದೆಯೇ?
ಮುಂದಿನ ಸಾಲಿನಲ್ಲಿ ಕುಳಿತಿದ್ದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಟ್ರಂಪ್ ಅವರ ಭಾಷಣಕ್ಕೆ ಹಲವಾರು ಬಾರಿ ಚಪ್ಪಾಳೆ ತಟ್ಟಿ, ಎದ್ದು ನಿಂತು ಸ್ವಾಗತಿಸಿದ್ದರು. ಆದರೆ ಟ್ರಂಪ್ ಅಮೆರಿಕದ ದಕ್ಷಿಣ ಗಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸುವುದಾಗಿ ಮತ್ತು ಅಕ್ರಮ ವಲಸಿಗರು ಬರಲು ಬಿಡುವುದಿಲ್ಲ ಎಂದು ಹೇಳಿದಾಗ, ಜೈಶಂಕರ್ ಚಪ್ಪಾಳೆ ತಟ್ಟಿರಲಿಲ್ಲ.
ಆಗ ಇಡೀ ಸಭಾಂಗಣ ಎದ್ದು ನಿಂತು ಟ್ರಂಪ್ ಅವರ ಹೇಳಿಕೆ ಯನ್ನು ಸ್ವಾಗತಿಸಿತ್ತು, ಆದರೆ ಭಾರತದ ವಿದೇಶಾಂಗ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಸ್ಥಾನದಲ್ಲಿ ಕುಳಿತಿದ್ದರು.
ಆ ಸಮಯದಲ್ಲಿ ಯಾವುದೇ ಸ್ವಾಭಿಮಾನಿ ದೇಶಕ್ಕೆ ಇದನ್ನು ಕೇಳುವುದು ಎಷ್ಟು ಕೆಟ್ಟದಾಗಿರಬಹುದು? ಆದರೆ ಮಡಿಲ ಮೀಡಿಯಾಗಳು ಆಗಲೂ ಜೈಶಂಕರ್ ಅವರನ್ನು ಪ್ರಶ್ನಿಸಲಿಲ್ಲ ಮತ್ತು ದೇಶಕ್ಕೆ ಇದರ ಬಗ್ಗೆ ತಿಳಿಯಲಿಲ್ಲ.
ಮೊದಲು ಕೆನಡಾ ಭಾರತೀಯರನ್ನು ಕಳುಹಿಸಿತು, ಈಗ ಅಮೆರಿಕ ಅವರನ್ನು ಕಳುಹಿಸುತ್ತಿದೆ.
ನಾವು ಈ ವಲಸಿಗರನ್ನು ಸ್ವಾಗತಿಸುತ್ತಿದ್ದೇವೆ.
ಆದರೆ ಇದು ಆತ್ಮಾವಲೋಕನ ಮಾಡಿಕೊಳ್ಳುವ ಸಮಯ,
ವಾಪಸ್ ಬರುತ್ತಿರುವವರನ್ನು ಕೇಳಬೇಕು, ಈ ಜನರು ಅಮೆರಿಕವನ್ನು ಹೇಗೆ ತಲುಪಿದರು? ಯಾವ ಮಾಫಿಯಾ ಇದನ್ನೆಲ್ಲಾ ಮಾಡಿತು? ಯಾಕೆ ಭಾರತವನ್ನು ತೊರೆಯುವ ಅನಿವಾರ್ಯತೆ ಅವರಿಗೆ ಬಂತು ಎಂಬುದರ ಕುರಿತು ತನಿಖೆ ನಡೆಯಬೇಕು,
ಹಣವಿಲ್ಲದವರು ಮಾತ್ರವಲ್ಲ, ಹಣವಿರುವವರು ಸಹ ಭಾರತವನ್ನು ತೊರೆಯುತ್ತಿದ್ದಾರೆ. ಯಾವ ಮಾಫಿಯಾ ಅವರನ್ನು ಕರೆದುಕೊಂಡು ಹೋಗುತ್ತಿದೆ?
ಕಳೆದ 10 ವರ್ಷಗಳಲ್ಲಿ, 15 ಲಕ್ಷ ಭಾರತೀಯರು ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ, 135 ದೇಶಗಳ ಪೌರತ್ವವನ್ನು ಸ್ವೀಕರಿಸಿದ್ದಾರೆ.
ಪ್ರತೀ ವರ್ಷ ಕೆಲವು ಸಾವಿರ ಮಿಲಿಯನೇರ್‌ಗಳು ಭಾರತವನ್ನು ತೊರೆದು ಇತರ ದೇಶಗಳಿಗೆ ಹೋಗುತ್ತಿದ್ದಾರೆ. ಇದು ಮಾತ್ರವಲ್ಲದೆ, ಭಾರತೀಯ ಯುವಕರು ಅಲ್ಲಿ ಕೆಲಸ ಮಾಡಲು ಅನುಮತಿ ಪಡೆಯಬೇಕೆಂದು ಭಾರತ ಸರಕಾರ ಇಸ್ರೇಲ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತದೆ.
ಹೇಳಬೇಕಾದ ಇನ್ನೊಂದು ಕಥೆ ಇದೆ.
ಹೆಚ್ಚಿನ ಸಂಖ್ಯೆಯ ಭಾರತೀಯ ಯುವಕರನ್ನು ದಾರಿ ತಪ್ಪಿಸಲಾಗುತ್ತಿದೆ. ಅವರಿಗೆ ಕೆಲಸದ ಸುಳ್ಳು ಭರವಸೆ ನೀಡಿ ಬೇರೆ ಯಾವುದೋ ದೇಶಕ್ಕೆ ಎಂದು ಇಲ್ಲಿಂದ ಕರೆದೊಯ್ಯಲಾಗುತ್ತದೆ ಮತ್ತು ಬೇರೆಡೆಗೆ ಕಳುಹಿಸಲಾಗುತ್ತದೆ,
ಮ್ಯಾನ್ಮಾರ್‌ನಲ್ಲಿ ಅಪರಾಧ ಕೃತ್ಯಕ್ಕೆ ಭಾರತೀಯರನ್ನು ಬಳಸಲಾಗುತ್ತಿದೆ,
ಅನೇಕ ಭಾರತೀಯರನ್ನು ಉದ್ಯೋಗದ ಭರವಸೆ ನೀಡಿ ವಿದೇಶಗಳಿಗೆ ಕರೆಸಿ, ನಂತರ ಮ್ಯಾನ್ಮಾರ್‌ನಂಥ ದೇಶಗಳಲ್ಲಿ ಬಿಡಲಾಗುತ್ತದೆ. ನಂತರ ಅವರನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಮತ್ತು ಅವರ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಲಾಗುತ್ತದೆ.
ಇತ್ತೀಚೆಗೆ, ವಿದೇಶಾಂಗ ಸಚಿವಾಲಯದ ಹಸ್ತಕ್ಷೇಪದ ನಂತರ, ಯುಪಿಯ ಮೂವರು ಹುಡುಗರನ್ನು ಮ್ಯಾನ್ಮಾರ್‌ನ ಹಿಡಿತದಿಂದ ಬಿಡುಗಡೆ ಮಾಡಲಾಯಿತು.
ಒಬ್ಬ ಭಾರತೀಯ ಯುವಕ ರಶ್ಯದ ಸೈನ್ಯದಲ್ಲಿ ಕೆಲಸ ಮಾಡುತ್ತಿದ್ದಾಗ ಸಾವನ್ನಪ್ಪಿದ್ದಾನೆ ಎಂಬ ವರದಿಗಳಿವೆ.
ಈ ಎಲ್ಲ ವಿಷಯಗಳಲ್ಲಿ ಮೌನವನ್ನು ಕಾಯ್ದುಕೊಳ್ಳಲಾಗಿದೆ.
ಭಾರತೀಯ ನಾಗರಿಕನನ್ನು ಹೀಗೆ ಭಾರತಕ್ಕೆ ಕರೆತರಬೇಕಾಗಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ?
ಇವೆಲ್ಲದರ ಬಗ್ಗೆ ಏಕೆ ಮಾತನಾಡುತ್ತಿಲ್ಲ?
ನೆಹರೂ ಕಾಲದಲ್ಲಿ ಅಮೆರಿಕ ಎಷ್ಟು ಭಾರತೀಯರನ್ನು ವಿಮಾನದ ಮೂಲಕ ಕಳುಹಿಸಿದೆ ಎಂಬುದನ್ನು ಬಿಜೆಪಿಯ ಐಟಿ ಸೆಲ್ ಇಲ್ಲಿಯವರೆಗೆ ಏಕೆ ಕಂಡುಹಿಡಿಯಲಿಲ್ಲ?
ಅಮೆರಿಕ ಭಾರತೀಯರನ್ನು ಮಿಲಿಟರಿ ವಿಮಾನದಲ್ಲಿ ತುಂಬಿಸಿ ಭಾರತಕ್ಕೆ ಕಳುಹಿಸಿರುವ ವಿಷಯದಲ್ಲಿ ಮೋದಿಯವರಿಗೇ ಮೊದಲ ಸ್ಥಾನವೆ?
ಯಾವುದೇ ರೀತಿಯಲ್ಲಿ, ಇದು ತುಂಬಾ ನಾಚಿಕೆಗೇಡಿನ ಸುದ್ದಿ ಮತ್ತು ಈ ಸುದ್ದಿಯನ್ನು ಮುಚ್ಚಿಡುವುದು ಇನ್ನೂ ನಾಚಿಕೆಗೇಡಿನ ಸಂಗತಿ.