ನ್ಯಾಯಾಧೀಶರು ರಾಜಕೀಯ ಪ್ರವೇಶಕ್ಕಾಗಿ ನಿವೃತ್ತಿ ಘೋಷಿಸುವುದು ಸರಿಯೇ?
ಮಾನ್ಯರೇ,
ಪಶ್ಚಿಮ ಬಂಗಾಳದಲ್ಲಿ ಕೋಲ್ಕತಾ ಹೈಕೋರ್ಟಿನ ನ್ಯಾಯಾಧೀಶರೊಬ್ಬರು ರಾಜಕೀಯ ಪಕ್ಷವನ್ನು ಸೇರುವ ಸಲುವಾಗಿಯೇ ತಮ್ಮ ನ್ಯಾಯಾಧೀಶರ ಹುದ್ದೆಗೆ ರಾಜೀನಾಮೆಯನ್ನು ನೀಡಿದರು. ರಾಜೀನಾಮೆಯನ್ನು ನೀಡಿ ನಂತರದಲ್ಲಿ ಬಿಜೆಪಿಯನ್ನು ಸೇರಿದರು. ಇಂತಹ ನಡವಳಿಕೆಗಳನ್ನು ನೋಡಿದಾಗ ನ್ಯಾಯಾಧೀಶರುಗಳ ತೀರ್ಪುಗಳ ಬಗ್ಗೆ ಅನುಮಾನ ಬಾರದಿರಲೂ ಸಾಧ್ಯವಿಲ್ಲ. ನ್ಯಾಯಾಧೀಶರ ಸ್ಥಾನದಲ್ಲಿ ಕುಳಿತವರು ಪಕ್ಷಪಾತಿಗಳಾದರೆ ಅಥವಾ ಪೂರ್ವಗ್ರಹ ಪೀಡಿತರಾದರೆ ಸಮಾಜ ಉಳಿಯುವುದಾದರೂ ಹೇಗೆ.
ಯಾವುದೇ ಒಬ್ಬ ನ್ಯಾಯಾಧೀಶರು ನಿವೃತ್ತಿಯ ನಂತರ ಕನಿಷ್ಠ ಐದು ವರ್ಷಗಳ ಕಾಲ ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗುವುದಾಗಲೀ, ಚುನಾವಣೆಗೆ ಸ್ಪರ್ಧಿಸುವುದಾಗಲೀ ಅಥವಾ ಕೇಂದ್ರ ಸರಕಾರದ ಹುದ್ದೆಗಳನ್ನು ಅಲಂಕರಿಸಬಾರದೆಂದು ಕಾನೂನನ್ನು ರೂಪಿಸಬೇಕಾಗಿದೆ. ಇಲ್ಲದಿದ್ದಲ್ಲಿ ಇವರ ಬಗ್ಗೆ ಜನರಲ್ಲಿ ನಂಬಿಕೆ ಹೋಗುತ್ತದೆ, ನ್ಯಾಯಾಧೀಶರ ತೀರ್ಪುಗಳೆಲ್ಲವೂ ತಮ್ಮ ಮುಂದಿನ ಲಾಭದ ಹಿನ್ನೆಲೆಯಲ್ಲಿ ನೀಡುವಂತಹ ಆದೇಶಗಳಾಗುತ್ತದೆ ಎನ್ನುವ ಅನುಮಾನ ಬರುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಹಂತದ ನ್ಯಾಯಾಧೀಶರು ಸ್ವಯಂ ನಿವೃತ್ತಿ ಅಥವಾ ಸಹಜ ನಿವೃತ್ತಿ ನಂತರ ಐದು ವರ್ಷಗಳ ಕಾಲ ರಾಜಕೀಯ ಪ್ರವೇಶ ಮಾಡದಂತೆ ನಿರ್ಬಂಧವನ್ನು ಹೇರಬೇಕಾಗಿದೆ.
ಈಗಾಗಲೇ ಸರಕಾರಿ ಅಧಿಕಾರಿಗಳಾದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್. ಮತ್ತು ಉನ್ನತ ಶ್ರೇಣಿಯ ಅಧಿಕಾರಿಗಳು ಹಲವಾರು ದಶಕಗಳ ಕಾಲ ಅಧಿಕಾರವನ್ನು ಅನುಭವಿಸಿ ಸ್ವಯಂ ನಿವೃತ್ತಿ ಅಥವಾ ನಿವೃತ್ತಿಯ ನಂತರ ರಾಜಕೀಯ ಪ್ರವೇಶ ಮಾಡಿ ಚುನಾಯಿತ ಪ್ರತಿನಿಧಿಗಳಾಗಿದ್ದಾರೆ. ಇದು ಸಹ ಸರಿಯಲ್ಲ. ಇವರಿಗೂ ಐದು ವರ್ಷಗಳ ನಿರ್ಬಂಧವಿರಬೇಕು. ತನ್ನ ಮುಂದಿನ ರಾಜಕೀಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದು ವರ್ಗದ ಇಲ್ಲವೇ ಒಂದು ಪಕ್ಷದ ಪರವಾಗಿ ಪರೋಕ್ಷವಾಗಿ ಕೆಲಸ ಮಾಡಿದಂತಹ ಭಾವನೆ ಬರುತ್ತದೆ.
-ಕೆ.ಎಸ್. ನಾಗರಾಜ್,
ಹನುಮಂತನಗರ, ಬೆಂಗಳೂರು