ರಾಜ್ಯ ಬಜೆಟ್‌ನಿಂದ ‘ಮುಸ್ಲಿಮ್ ತುಷ್ಟೀಕರಣ’ ಎಂಬುದು ನಿಜವೇ?

ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್ ಬಗ್ಗೆ ತೀರಾ ಕೆಟ್ಟದಾಗಿ, ಅಷ್ಟೇ ಹಸಿ ಸುಳ್ಳುಗಳನ್ನು ಬಳಸಿ ಅಪಪ್ರಚಾರ ಮಾಡುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ನಿಜವಾದ ಮನಸ್ಥಿತಿಯೇನು ಎಂಬುದನ್ನು ತೋರಿಸಿದೆ.
ಮುಸ್ಲಿಮರ ವಿರುದ್ಧದ ತನ್ನ ದ್ವೇಷಯುಕ್ತ ನಿರೂಪಣೆಯನ್ನು ಮುಂದೆ ಮಾಡಲು ಅದು ಎಲ್ಲ ಸತ್ಯಗಳನ್ನೂ ಮರೆಮಾಚುವುದು, ವಾಸ್ತವವನ್ನು ಬೇಕೆಂತಲೇ ಅಡಗಿಸುವುದು, ತಿರುಚುವುದು ಹೊಸ ವಿಚಾರವೇನೂ ಅಲ್ಲ. ಆದರೆ ಒಂದು ಬಜೆಟ್ ಬಗ್ಗೆ ವಸ್ತುನಿಷ್ಠವಾಗಿ ವಿಶ್ಲೇಷಿಸಲಾರದವರು ಅದನ್ನು ಕೋಮುವಾದಿ ದೃಷ್ಟಿಯಿಂದ ಟೀಕಿಸಿ, ಎಲ್ಲರ ಪ್ರಗತಿಯನ್ನು ಬಯಸುವ ಅದರ ಸ್ವರೂಪವನ್ನು ನಿರ್ಲಕ್ಷಿಸುವುದು ಮಾತ್ರ ಅತ್ಯಂತ ಕೆಟ್ಟ ನಡೆ.ಸಾಬರ ಬಜೆಟ್ ಅನ್ನುವುದು, ಹಲಾಲ್ ಬಜೆಟ್ ಎನ್ನುವುದು, ಪಾಕಿಸ್ತಾನದ ಬಜೆಟ್ ಎನ್ನುವುದು ಆರೋಗ್ಯಪೂರ್ಣ ಮನಸ್ಥಿತಿಯ ಲಕ್ಷಣವಂತೂ ಅಲ್ಲ.
ಯಾವುದನ್ನೂ ಗಮನಿಸದೆ, ಆಳವಾಗಿ ಬಜೆಟ್ ಅನ್ನು ಪರಿಶೀಲಿಸದೆ, ಅಲ್ಪಸಂಖ್ಯಾತರಿಗೆ ಅಷ್ಟು ಕೊಡಲಾಗಿದೆ, ದಲಿತರಿಗೆ ಏನೂ ಇಲ್ಲ ಎಂದು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಮತ್ತೊಂದು ಅತಿ.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ, ಬಿಜೆಪಿ ಮಾತೆತ್ತಿದರೆ ಒಂದು ಸಮುದಾಯದ ತುಷ್ಟೀಕರಣ ಎನ್ನುತ್ತಲೇ ಬಂದಿದೆ. ಈಗ ಬಜೆಟ್ ಬಗ್ಗೆ ಮಾತಾಡುವಾಗಲೂ, ಒಂದು ಸಮುದಾಯದ ತುಷ್ಟೀಕರಣ ಮಾಡಲಾಗಿದೆ ಎಂದೇ ಟೀಕಿಸಲಾಗಿದೆ ಮತ್ತು ಅದಕ್ಕಾಗಿ ಇಡೀ ಬಜೆಟ್‌ನ ವಾಸ್ತವವನ್ನು, ಅದು ಪ್ರತಿಪಾದಿಸುತ್ತಿರುವ ಅಭಿವೃದ್ಧಿಯ ಆಶಯವನ್ನು ಮರೆಮಾಚಲಾಗಿದೆ.
ಬಿಜೆಪಿಯವರ ಕೊಳಕು ಟೀಕೆಗೆ ‘‘ಅಲ್ಪಸಂಖ್ಯಾತರು ಅಂದರೆ ಮುಸ್ಲಿಮರು ಮಾತ್ರ ಅಲ್ಲ. ಕ್ರಿಶ್ಚಿಯನ್ ಅಭಿವೃದ್ಧಿಗೂ 500 ಕೋಟಿ ರೂ. ಮೀಸಲಿಟ್ಟಿದ್ದೇವೆ. ಆದರೆ ಬಿಜೆಪಿಯವರು ಹಲಾಲ್ ಬಜೆಟ್ ಎಂದು ಕರೆದಿದ್ದಾರೆ. ಬಿಜೆಪಿಯವರ ಮನಸ್ಸಿನ ಕೊಳಕು ಭಾವನೆ ಹೊರಗೆ ಬರುತ್ತಿದೆ’’ ಎಂದು ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರ ಕೊಟ್ಟಿದ್ದಾರೆ.
‘‘ಅಲ್ಪಸಂಖ್ಯಾತರ ಶೈಕ್ಷಣಿಕ ಪ್ರಮಾಣ ಕಡಿಮೆ. ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು. ಅದಕ್ಕಾಗಿ ಎಲ್ಲರಿಗೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಾಡಿದ್ದೇವೆ’’ ಎಂದಿದ್ದಾರೆ ಸಿದ್ದರಾಮಯ್ಯ.
‘‘ಹಲಾಲ್ ಬಜೆಟ್, ಪಾಕಿಸ್ತಾನ್ ಬಜೆಟ್ ಎನ್ನುವುದೆಲ್ಲ ಅವರು ಸೆಕ್ಯುಲರ್ ಅಲ್ಲ ಎಂಬುದನ್ನು ತೋರಿಸುತ್ತದೆ. ಅವರು ಜಾತ್ಯತೀತೆಯ ವಿರುದ್ಧವೇ ಇದ್ದಾರೆ. ಸಂವಿಧಾನ ಹೇಳಿದಂತೆ ನಾವು ನಡೆದುಕೊಳ್ಳುತ್ತಿದ್ದೇವೆ’’ ಎಂದು ಸಿದ್ದರಾಮಯ್ಯ ಹೇಳಿದ್ಧಾರೆ.
ಮುಸ್ಲಿಮ್ ತುಷ್ಟೀಕರಣ ಬಜೆಟ್ ಎನ್ನುವವರು ಬಜೆಟ್‌ನಲ್ಲಿ ಅನುದಾನದ ಹಂಚಿಕೆಯನ್ನು ಮೊದಲು ಗಮನಿಸಬೇಕಿದೆ.
ಮೊದಲನೆಯದಾಗಿ, ಬಜೆಟ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ದೊಡ್ಡ ಪ್ರಮಾಣದಲ್ಲಿ ಆಸರೆಯಾಗಿದೆ.
ಇಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ತೀರಾ ಸಣ್ಣ ಶೇಕಡಾವಾರು ಪ್ರಮಾಣವನ್ನು ಮಾತ್ರ ಹೊಂದಿದೆ.
ಎರಡನೆಯದಾಗಿ, ಅಲ್ಪಸಂಖ್ಯಾತರ ಶಿಕ್ಷಣದ ಬಗ್ಗೆ ಗಮನ ಕೊಡುವಾಗ, ಬೇರೆಲ್ಲ ಸಮುದಾಯಗಳನ್ನು ಮರೆತು ಕೊಟ್ಟಿರುವುದೇನೂ ಅಲ್ಲ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮಾಡಲಾದ ಹಂಚಿಕೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಗ್ರಾಮೀಣ ಶಿಕ್ಷಣ ಕಾರ್ಯಕ್ರಮಗಳಲ್ಲಿನ ಹೂಡಿಕೆಗಳಂತೆಯೇ ಇದೆ.
ಮೂರನೆಯದಾಗಿ, ರಾಜ್ಯವ್ಯಾಪಿ ಆರ್ಥಿಕ ಅಭಿವೃದ್ಧಿಯ ದೃಷ್ಟಿಕೋನವನ್ನು ಬಜೆಟ್ ಹೊಂದಿದೆ. ಮೂಲಸೌಕರ್ಯ, ಉದ್ಯೋಗ ಮತ್ತು ಉದ್ಯಮ ಸಂಬಂಧಿತ ಹೂಡಿಕೆಗಳು ಕೇವಲ ಒಂದು ಗುಂಪಿಗೆ ಅಲ್ಲ, ಎಲ್ಲಾ ನಾಗರಿಕರಿಗೆ ಪ್ರಯೋಜನವನ್ನು ನೀಡುತ್ತವೆ.
ಆದರೆ, ಇದನ್ನು ಮುಸ್ಲಿಮ್ ತುಷ್ಟೀಕರಣದ ಬಜೆಟ್ ಎನ್ನುತ್ತಿರುವವರು ಈ ಅಂಶವನ್ನು ಮರೆತಿದ್ದಾರೆ. ಅಥವಾ ಬೇಕೆಂತಲೇ ಮರೆಮಾಚುತ್ತಾರೆ.
ಅವರು ಅಭಿವೃದ್ಧಿಯ ತಪ್ಪು ವ್ಯಾಖ್ಯಾನ ಮಾಡುತ್ತಾರೆ.
ಗೃಹಲಕ್ಷ್ಮಿ ಯೋಜನೆಯಂತಹ ಕಲ್ಯಾಣ ಯೋಜನೆಗಳು ಧರ್ಮಾಧಾರಿತವಲ್ಲ. ಆದರೆ, ಕೋಮುವಾದಿ ಕಣ್ಣಿಂದ ನೊಡುವವರಿಗೆ ಈ ಸತ್ಯ ಕಾಣಿಸುವುದಿಲ್ಲ ಅಥವಾ ಬೇಕೆಂದೇ ಅವರು ಕಣ್ಣು ಮುಚ್ಚಿಕೊಳ್ತಾರೆ.
ಬಜೆಟ್ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗಗಳು, ಮಹಿಳೆಯರು, ರೈತರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ವರ್ಗಗಳಲ್ಲಿ ಹಣವನ್ನು ಹಂಚಿಕೆ ಮಾಡುತ್ತದೆ.
ಕಲ್ಯಾಣ ಕಾರ್ಯಕ್ರಮಗಳು ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೃಷಿ, ಗ್ರಾಮೀಣ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.
ಇನ್ನು ಅಲ್ಪಸಂಖ್ಯಾತರಿಗೆ ಮಾಡಲಾದ ಹಂಚಿಕೆಗಳನ್ನು ಗಮನಿಸುವುದಾದರೆ,
ಕರ್ನಾಟಕ ಸಾರ್ವಜನಿಕ ಶಾಲೆಗಳ ಮಾದರಿಯಲ್ಲಿ ಮೌಲಾನಾ ಆಝಾದ್ ಮಾದರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ರೂ. 500 ಕೋಟಿ ಮೀಸಲಿಡಲಾಗಿದೆ. ಈ ವರ್ಷಕ್ಕೆ ರೂ. 100 ಕೋಟಿ ಹಂಚಿಕೆ ಮಾಡಲಾಗಿದೆ.
ಅತಿ ಹೆಚ್ಚು ದಾಖಲಾತಿ ಹೊಂದಿರುವ 100 ಉರ್ದು ಮಾಧ್ಯಮ ಶಾಲೆಗಳನ್ನು ಮೇಲ್ದರ್ಜೆಗೇರಿಸುವ ಘೋಷಣೆ ಮಾಡಲಾಗಿದೆ.
ಇವು ಶೈಕ್ಷಣಿಕ ಹೂಡಿಕೆಗಳಾಗಿವೆ. ನೇರ ನಗದು ಪ್ರಯೋಜನಗಳಲ್ಲ.
ಬಜೆಟ್‌ನಲ್ಲಿನ ವಿವಿಧ ಹಂಚಿಕೆಗಳನ್ನು ಹೋಲಿಸಿ ನೋಡುವುದಾದರೆ,
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು -ರೂ. 42,018 ಕೋಟಿ, ಮಹಿಳಾ ಕೇಂದ್ರಿತ ಕಾರ್ಯಕ್ರಮಗಳು -ರೂ. 94,084 ಕೋಟಿ, ಮಕ್ಕಳ ಕೇಂದ್ರಿತ ಕಾರ್ಯಕ್ರಮಗಳು -ರೂ. 62,033 ಕೋಟಿ, ಹಿಂದುಳಿದ ವರ್ಗಗಳ ನಿಗಮಗಳು, ಹಾಸ್ಟೆಲ್ ಮತ್ತು ಶಿಕ್ಷಣ ನಿಧಿಗೆ ರೂ. 422 ಕೋಟಿ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ - ರೂ. 51,339 ಕೋಟಿ ಹಂಚಿಕೆ ಮಾಡಲಾಗಿದೆ.
ಸರಕಾರದ ಐದು ಗ್ಯಾರಂಟಿಗಳು ಮತ್ತು ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯನ್ನು ಕೂಡ ಇಲ್ಲಿ ಗಮನಿಸಬೇಕಿದೆ. ಈ ಯೋಜನೆಗಳು ಧಾರ್ಮಿಕ ತಾರತಮ್ಯವಿಲ್ಲದೆ ಎಲ್ಲಾ ಸಮುದಾಯಗಳಿಗೆ ಪ್ರಯೋಜನವನ್ನು ನೀಡುತ್ತವೆ.
ಕರ್ನಾಟಕದಾದ್ಯಂತ 1 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಸರ್ವಧರ್ಮೀಯ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಹೀಗಿರುವಾಗ, ಬಿಜೆಪಿಯವರು ಮಾಡುತ್ತಿರುವ ಆರೋಪ ಜನರ ದಾರಿ ತಪ್ಪಿಸುವ ಷಡ್ಯಂತ್ರ ಮಾತ್ರವಾಗಿದೆ.
ಬಜೆಟ್‌ನ ಒಟ್ಟು ಗಾತ್ರ 4,09,549 ಕೋಟಿ ರೂ. ಅದರಲ್ಲಿ 4,500 ಕೋಟಿಯನ್ನು ಅಲ್ಪಸಂಖ್ಯಾತರಿಗೆ ಕೊಡಲಾಗಿದೆ. ಅದು ಒಟ್ಟು ಬಜೆಟ್ ಗಾತ್ರದ ಕೇವಲ 1 ಪರ್ಸೆಂಟ್ ಮಾತ್ರ.
ಸಾಚಾರ್ ವರದಿ ಅನುಷ್ಠಾನ ಮಾಡುವ ಸಲುವಾಗಿ ಕೆಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕೇಂದ್ರ ಸರಕಾರ ರೂಪಿಸಿರುವ ಆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಬರುವ ಹಂಚಿಕೆ ಬಜೆಟ್ ಗಾತ್ರದ ಅನುಸಾರವಾಗಿ ಹೆಚ್ಚಾಗುತ್ತದೆ.
ಮುಸ್ಲಿಮರ ಸರಳ ವಿವಾಹಕ್ಕೆ 50 ಸಾವಿರ ರೂ. ಕೊಡುವುದರ ಬಗ್ಗೆಯೂ ಬಿಜೆಪಿ ಆಕ್ಷೇಪವೆತ್ತಿದೆ. ಆದರೆ, ಬಿಜೆಪಿ ಸರಕಾರವಿದ್ದಾಗ ದೇವಸ್ಥಾನಗಳಲ್ಲಿ ಆಯೋಜಿಸಲಾಗುತ್ತಿದ್ದ ಮದುವೆಗಳಿಗೆ ಇದೇ ರೀತಿ ಕೊಡಲಾಗುತ್ತಿತ್ತು. ಆದರೆ ಅದೇ ಬಿಜೆಪಿ ಈಗ ಮುಸ್ಲಿಮರಿಗೆ ಕೊಡುವ ವಿಚಾರಕ್ಕೆ ಮಾತ್ರ ದೊಡ್ಡ ಆಕ್ಷೇಪ ತೆಗೆಯುತ್ತಿದೆ.
ರಾಜ್ಯದ ಜನಸಂಖ್ಯೆಯ ಶೇ.24ರಷ್ಟಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ರೂ. 42,018 ಕೋಟಿ ನೀಡಲಾಗಿದೆ. ಹಿಂದುಳಿದ ವರ್ಗದವರಿಗೆ 7,500 ಕೋಟಿ ಅನುದಾನವಿದೆ. ಹಿಂದುಳಿದ ವರ್ಗದಲ್ಲೇ ಹಲವಾರು ನಿಗಮಗಳಿವೆ. ಅವೆಲ್ಲಕ್ಕೂ ಅನುದಾನ ನೀಡಲಾಗಿದೆ. ಅವೆಲ್ಲವನ್ನೂ ಸೇರಿಸಿದರೆ ಸಾಕಷ್ಟು ಹಂಚಿಕೆ ಆದಂತಾಗಿದೆ.
ಶೇ.16ರಷ್ಟಿರುವ ಮುಸ್ಲಿಮ್ ಸಮುದಾಯಕ್ಕೆ ಕೊಟ್ಟಿರುವುದು ಕೇವಲ 4,500 ಕೋಟಿ ರೂ.
ಆದರೆ ಬಜೆಟ್ ಅನ್ನು ಮುಸ್ಲಿಮ್ ತುಷ್ಟೀಕರಣಕ್ಕಾಗಿ ಮಾಡಲಾಗಿದೆ ಎನ್ನುವವರು ಈ ಯಾವ ಲೆಕ್ಕವನ್ನೂ, ಅಂಕಿ ಸಂಖ್ಯೆಗಳನ್ನೂ ಹೇಳುತ್ತಿಲ್ಲ.
ಅಲ್ಪಸಂಖ್ಯಾತರು ಎಂದೊಡನೆ ಎಲ್ಲವನ್ನೂ ಮುಸ್ಲಿಮರಿಗೆ ಕೊಡಲಾಗಿದೆ ಎನ್ನುವ ಧಾಟಿಯಲ್ಲೇ ಹೇಳಲಾಗುತ್ತದೆ. ಆದರೆ ಅದರಲ್ಲಿ ಜೈನರು, ಕ್ರಿಶ್ಚಿಯನ್ನರು, ಬೌದ್ಧರು, ಫಾರ್ಸಿಗಳೂ ಬರುತ್ತಾರೆ.
ಇನ್ನು ಮುಸ್ಲಿಮರ ಜನಸಂಖ್ಯೆಗೆ ಮತ್ತು ಬೇಡಿಕೆಗೆ ಹೋಲಿಸಿದರೆ ಈಗ ನೀಡಿರುವ ಅನುದಾನ ತೀರಾ ಕಡಿಮೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಾ.ರಝಾಕ್ ಉಸ್ತಾದ್ ಅವರು ಹೇಳುತ್ತಾರೆ.
ಹಾಗೆ ನೋಡಿದರೆ, ಅಲ್ಪಸಂಖ್ಯಾತರಿಗೆ ಕನಿಷ್ಠ 10 ಸಾವಿರ ಕೋಟಿ ಅನುದಾನದ ಭರವಸೆ ನೀಡಲಾಗಿತ್ತು. ಅದರ ಪ್ರಕಾರ ಈ ಮೂರನೇ ಬಜೆಟ್‌ನಲ್ಲಿ ಅನುದಾನ 6 ಸಾವಿರ ಕೋಟಿಗೆ ಬರಬೇಕಿತ್ತು.
ಆಗ ಮುಂದಿನ ಎರಡು ಬಜೆಟ್‌ಗಳಲ್ಲಿ ಎರಡೆರಡು ಸಾವಿರ ಕೋಟಿ ರೂ.ಯಂತೆ ಹೆಚ್ಚಿಸಿ, ರೂ. 10 ಸಾವಿರ ಕೋಟಿಯ ಭರವಸೆ ಈಡೇರಿಸಬಹುದಿತ್ತು.
ಮುಸ್ಲಿಮ್ ಸಮುದಾಯಕ್ಕೆ ನೇರವಾಗಿ ಬರಬೇಕಾದ ಬಹುತೇಕ ಯಾವ ಅನುದಾನಗಳೂ ಸಿಗುತ್ತಿಲ್ಲ ಎಂಬ ಆಕ್ಷೇಪಗಳೂ ಇವೆ.
ಸರಕಾರದ ಹಂತದಲ್ಲಿಯೇ ಇರುವ ಅನೇಕ ಅವ್ಯವಸ್ಥೆಗಳಿಂದಾಗಿ ಹೀಗಾಗುತ್ತದೆ. ಆದರೆ ಇದಾವುದರ ಬಗ್ಗೆಯೂ ರಾಜಕೀಯ ನಾಯಕರು ಯೋಚಿಸುತ್ತಿಲ್ಲ.
ಅಲ್ಪಸಂಖ್ಯಾತರಿಗೆ ಅನುದಾನ ಎಂದ ಕೂಡಲೇ ಮುಸ್ಲಿಮ್ ತುಷ್ಟೀಕರಣ ಎನ್ನುವುದು ಚಾಳಿಯೇ ಆಗಿಬಿಟ್ಟಿದೆ ಎಂದು ಡಾ.ರಝಾಕ್ ಉಸ್ತಾದ್ ಅವರು ಹೇಳುತ್ತಾರೆ.
ಇನ್ನೊಂದು ಅಂಶವನ್ನು ನೋಡಬೇಕು.
ಸರಕಾರದ ಪರೋಕ್ಷ ತೆರಿಗೆ ಆದಾಯ ಅಂದರೆ ಹೆಚ್ಚಾಗಿ ಜಿಎಸ್‌ಟಿಯಿಂದ ಬರುವ ಆದಾಯ 2 ಲಕ್ಷ 8,100 ಕೋಟಿ ರೂ. ಇರಲಿದೆ ಎಂದು ಅಂದಾಜಿಸಲಾಗಿದೆ.
ಮುಸ್ಲಿಮ್ ಜನಸಂಖ್ಯೆಯನ್ನು ನೋಡಿಕೊಂಡರೆ, ಸರಕಾರಕ್ಕೆ ಮುಸ್ಲಿಮ್ ಸಮುದಾಯದವರು ಪಾವತಿಸುವ ಪರೋಕ್ಷ ತೆರಿಗೆ ಮೊತ್ತ ಸುಮಾರು 29,000 ಕೋಟಿ ರೂ.ಗಳಷ್ಟಿರುತ್ತದೆ. ಆದರೆ ಸರಕಾರದಿಂದ ಸಮುದಾಯಕ್ಕೆ ಕೇವಲ 4 ಸಾವಿರ ಕೋಟಿ ಅನುದಾನ ಬರುತ್ತಿದೆ. ಅದು ಕೂಡ ಮುಸ್ಲಿಮರಿಗೆ ಮಾತ್ರವಲ್ಲ, ಎಲ್ಲಾ ಅಲ್ಪಸಂಖ್ಯಾತರಿಗೆ ಸೇರಿ ಬರುತ್ತಿರುವುದು ಅಷ್ಟು ಮಾತ್ರ.
ಅಂದರೆ ಮುಸ್ಲಿಮರ ಜನಸಂಖ್ಯೆ ಅಥವಾ ಅವರು ಕಟ್ಟುವ ತೆರಿಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಅವರಿಗೆ ಸಿಕ್ಕಿರುವ ಅನುದಾನ ತೀರಾ ಕಡಿಮೆ.
ಇವೆಲ್ಲವನ್ನೂ ಗಮನಿಸಿದಾಗ ಸ್ಪಷ್ಟವಾಗುವುದು ಏನೆಂದರೆ,
ಈ ಸಲದ ರಾಜ್ಯ ಬಜೆಟ್‌ನಲ್ಲಿ ಮುಸ್ಲಿಮರಿಗೆ ಮಾತ್ರವೇ ಹೆಚ್ಚು ಅನುದಾನ ನೀಡಲಾಗಿದೆ ಎಂಬುದು ಸಂಪೂರ್ಣವಾಗಿ ತಪ್ಪು. ಬದಲಾಗಿ ಈ ಬಜೆಟ್ ವಿವಿಧ ದುರ್ಬಲ ಮತ್ತು ಹಿಂದುಳಿದ ಗುಂಪುಗಳ ಸಾಮಾಜಿಕ ಕಲ್ಯಾಣ ಮತ್ತು ಆರ್ಥಿಕ ಉನ್ನತಿಯ ಗುರಿಯನ್ನು ಹೊಂದಿದೆ.
ಸಮುದಾಯಗಳಾದ್ಯಂತ ಹಂಚಿಕೆಗಳನ್ನು ಹೋಲಿಸಿದಾಗ ಮುಸ್ಲಿಮರ ಕಡೆಗಿನ ಪಕ್ಷಪಾತ ಕುರಿತ ಯಾವುದೇ ಆರೋಪ ಸತ್ಯಕ್ಕೆ ದೂರವಾಗಿದೆ.
ಬಜೆಟ್ ಅನ್ನು ಬಿಜೆಪಿಯವರು ಪೂರ್ತಿಯಾಗಿ ನೋಡಬೇಕಿದೆ.
ಬರೀ ಸುಳ್ಳು ಹೇಳಿ ಸದ್ದು ಮಾಡುವುದನ್ನು ಬಿಡಬೇಕಿದೆ.