ಕುಂಭಮೇಳದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ ಜನತೆ ದೂರುವುದು ತಪ್ಪೇ?

ಕುಂಭಮೇಳ ಮುಗಿದಿದೆ. ಈಗ ಕುಂಭಮೇಳದ ರಾಜಕೀಯ ಶುರುವಾಗಲಿದೆ.
ಮುಖ್ಯಮಂತ್ರಿ ಆದಿತ್ಯನಾಥ್ ತಮ್ಮನ್ನು ಪ್ರಶ್ನಿಸುವವರನ್ನು ಹಂದಿಗಳು ಮತ್ತು ರಣಹದ್ದುಗಳು ಎಂದು ಕರೆಯುವ ಮೂಲಕ ಆಗಲೇ ಈ ರಾಜಕೀಯವನ್ನು ಶುರು ಮಾಡಿದ್ದಾರೆ.
ಸಾಮಾನ್ಯ ಜನರು ಮಾತ್ರವಲ್ಲ, ಸಂಸದರು ಮತ್ತು ಸಂತರು ಸಹ ಕುಂಭಮೇಳದ ಅಸಮರ್ಪಕ ನಿರ್ವಹಣೆ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವಾಗ ಮುಖ್ಯಮಂತ್ರಿಗಳು ಯಾರನ್ನು ಹಂದಿ ಮತ್ತು ರಣಹದ್ದು ಎಂದು ಕರೆಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಬೇಕು.
ಪ್ರಧಾನಿ ಮೋದಿ ಈ ಹೇಳಿಕೆಯನ್ನು ಖಂಡಿಸದೇ ಇರುವ ಬಗ್ಗೆಯೂ ಪ್ರಶ್ನೆ ಏಳುತ್ತದೆ.
ಕುಂಭಮೇಳ ಆಯೋಜನೆಯಲ್ಲಿನ ಕೆಲ ನ್ಯೂನತೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಕ್ಷಮೆ ಯಾಚಿಸಿದ್ದಾರೆ. ಇದೇ ವೇಳೆ ಅವರು ಆದಿತ್ಯನಾಥ್ ಅವರನ್ನು ಹೊಗಳಿದ್ದಾರೆ. ಆದಿತ್ಯನಾಥ್ ನೇತೃತ್ವದಲ್ಲಿ ಮಹಾಕುಂಭ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದ್ದಾರೆ.
ಯೋಗಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಮಾಧ್ಯಮಗಳು ಇದನ್ನು ನೋಡುತ್ತಿವೆ.
ಕ್ಷಮೆ ಕೇಳಿರುವ ಮೋದಿ, ಸಾವುಗಳ ಬಗ್ಗೆ ಉಲ್ಲೇಖಿಸಿಲ್ಲ. ಮೌನಿ ಅಮವಾಸ್ಯೆಯ ದಿನ 30 ಜನರು ಸಾವನ್ನಪ್ಪಿದರು. ಹೊಸದಿಲ್ಲಿ ರೈಲು ನಿಲ್ದಾಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18. ಈ ಎರಡರ ಬಗ್ಗೆಯೂ ಯಾವುದೇ ಉಲ್ಲೇಖವಿಲ್ಲ.
ಇಷ್ಟು ದೊಡ್ಡ ಕಾರ್ಯಕ್ರಮದಲ್ಲಿ ಕೆಲವು ನ್ಯೂನತೆಗಳಿಗೆ ಪ್ರಧಾನಿ ಮೋದಿ ಕ್ಷಮೆ ಯಾಚಿಸುವುದು ವಿಷಾದಕರ. ಇವು ನ್ಯೂನತೆಗಳಲ್ಲ. ಜನರು ಅನುಭವಿಸಿದ ನೋವುಗಳಿಗೆ ಕೆಲ ನ್ಯೂನತೆಗಳನ್ನು ಹೆಸರಿಸುವ ಮೂಲಕ ವಿಷಾದ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ.
ನ್ಯೂನತೆಗಳೆಂದರೆ ಗಂಗಾ ನೀರು ಶುದ್ಧವಾಗಿಲ್ಲ. ಜನರು ಸ್ನಾನ ಮಾಡಲು ಇಪ್ಪತ್ತಕ್ಕೂ ಹೆಚ್ಚು ಕಿ.ಮೀ. ನಡೆಯಬೇಕಾಯಿತು. ಅವರು ಎರಡೆರಡು ದಿನಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಬೇಕಾಯಿತು. ನೂರಾರು ಕಿಲೋಮೀಟರ್‌ಗಳವರೆಗೆ ಟ್ರಾಫಿಕ್ ಜಾಮ್ ಇತ್ತು. ಜನರ ಹಣ ಖಾಲಿಯಾಯಿತು.
ಮಡಿಲ ಮೀಡಿಯಾ ಈ ಬಗ್ಗೆ ಮೊದಲು ವರದಿ ಮಾಡಿರಲಿಲ್ಲ. ಅದು ಎಲ್ಲವನ್ನೂ ಮರೆಮಾಚಿತ್ತು. ಕೇವಲ ಹೊಗಳಿಕೆ ಮಾತ್ರ ನಡೆಯುತ್ತಿತ್ತು.
ಜನರು ತಮ್ಮ ಸಮಸ್ಯೆಗಳ ವೀಡಿಯೊ ಮಾಡಿ ಸರಕಾರವನ್ನು ಪ್ರಶ್ನಿಸಿದಾಗ ಎಲ್ಲವೂ ಒಂದೊಂದಾಗಿ ಹೊರಬಂದವು. ಹೊಸದಿಲ್ಲಿ ರೈಲು ನಿಲ್ದಾಣದಲ್ಲಿನ ಕಾಲ್ತುಳಿತದ ವೀಡಿಯೊಗಳನ್ನು ಕೂಡ ಜನರೇ ಮಾಡಿದ್ದರು. ಆದರೆ ಪ್ರಧಾನಿ ಮೋದಿಯವರ ಕ್ಷಮೆ ಯಾಚನೆ ಕೇವಲ ಔಪಚಾರಿಕತೆಯಾಗಿದೆ.
ರೈತರ ಪ್ರತಿಭಟನೆಯ ನಂತರವೂ ಮೋದಿ ಹೀಗೆಯೇ ಮಹಾನ್ ವಿನಮ್ರತೆ ತೋರಿಸಿದ್ದರು.ರೈತರ ಪ್ರತಿಭಟನೆಯ ಬಗ್ಗೆ ಅವರ ತಿಳುವಳಿಕೆ ಬದಲಾಗಿದೆ ಎಂದೇ ಜನರು ಭಾವಿಸಿದ್ದರು.ಆದರೆ ಆ ಸಮಯದಲ್ಲಿ ಅವರು ನೀಡಿದ ಭರವಸೆ ಇಲ್ಲಿಯವರೆಗೆ ಜಾರಿಗೆ ಬಂದಿಲ್ಲ. ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಯುಪಿ ಸಿಎಂ ಆದಿತ್ಯನಾಥ್ ನ್ಯೂನತೆಗಳ ಬಗ್ಗೆ ಮಾತಾಡುತ್ತಿರುವವರನ್ನು ಹಂದಿ ಮತ್ತು ರಣಹದ್ದುಗಳಿಗೆ ಹೋಲಿಸುತ್ತ ಮತ್ತೊಂದು ಬಗೆಯ ಅತಿರೇಕ ತೋರಿಸುತ್ತಿದ್ದಾರೆ. ಇದು ಯಾವುದೇ ಮುಖ್ಯಮಂತ್ರಿ ಬಳಸಬಹುದಾದ ಭಾಷೆಯೇ?
ಪ್ರಧಾನಿ ಮೋದಿ ಕ್ಷಮೆ ಯಾಚನೆಯನ್ನು ಆದಿತ್ಯನಾಥ್ ಹೇಳಿಕೆಗಳಿಗೆ ಉತ್ತರ ಎಂದು ಹೊಸ ಕಥೆ ಹೆಣೆಯುವುದು ಸುಲಭ.
ಬಿಜೆಪಿಯಿಂದ ಆರೆಸ್ಸೆಸ್‌ವರೆಗೆ ಯಾವುದೇ ದೊಡ್ಡ ನಾಯಕರು ಆದಿತ್ಯನಾಥ್ ಹೇಳಿಕೆಯನ್ನು ಟೀಕಿಸಿಲ್ಲ. ಆದಿತ್ಯನಾಥ್ ಅವರ ಭಾಷೆ, ಅವರ ಹೇಳಿಕೆಯಿಂದ ಅವರ ಬೆಂಬಲಿಗರು ಸಂತಸಪಟ್ಟಿರಬಹುದು.
2002ರಲ್ಲಿ ಈ ಪ್ರಯಾಗರಾಜ್‌ನ ಮಾಘ ಮೇಳದಲ್ಲಿ, ಗಂಗಾ ನೀರು ಶುದ್ಧವಾಗಿಲ್ಲದ ಕಾರಣ ಕೆಲ ಸಂತರು ಸ್ನಾನ ಮಾಡಲು ನಿರಾಕರಿಸಿದ್ದರು.
ದೂರ್ವಾಸ ಆಶ್ರಮದ ತ್ರಿದಂಡಿ ರಂಗ ರಾಮಾನುಚಾರ್ಯ ಚೈತನ್ಯ ಬ್ರಹ್ಮಚಾರಿಜಿ ಮತ್ತು ಸ್ವಾಮಿ ನಿಶ್ಚಲಾನಂದ ಅಂತಹ ಹೇಳಿಕೆ ನೀಡಿದ್ದರು.
ಅವರು ಸ್ನಾನ ಮಾಡಲು ನಿರಾಕರಿಸಿದರು ಮತ್ತು ಒಂದು ದಿನ ಉಪವಾಸ ಮಾಡಿದರು. ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಕೆ ಹಾಕಿದ್ದರು.
ಆ ಸಮಯದಲ್ಲಿ ರಾಜನಾಥ್ ಸಿಂಗ್ ಯುಪಿ ಮುಖ್ಯಮಂತ್ರಿಯಾಗಿದ್ದರು ಮತ್ತು ವಾಜಪೇಯಿ ದೇಶದ ಪ್ರಧಾನಿಯಾಗಿದ್ದರು.
2013ರಲ್ಲಿ ಸಹ ಕಾನ್ಪುರದ ಸಾಧು ಸಮುದಾಯ ಗಂಗಾ ನದಿಯ ಕೊಳೆಯ ಬಗ್ಗೆ ಪ್ರಸ್ತಾಪಿಸಿ, ಪ್ರಯಾಗರಾಜ್‌ನ ಮಾಘ ಮೇಳದಲ್ಲಿ ಸ್ನಾನ ಮಾಡಲು ನಿರಾಕರಿಸಿತ್ತು. ಆದರೆ ರಾಜನಾಥ್ ಸಿಂಗ್ ಕೊಳೆಯ ಕುರಿತು ಮಾತನಾಡಿದವರ ಬಗ್ಗೆ ಈ ರೀತಿ ಮಾತನಾಡಿರಲಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿರುವಾಗಲೂ ಇಂಥ ಮಾತು ಆದಿತ್ಯನಾಥ್ ರಿಂದ ಬಂದಿದೆ.
50 ಕೋಟಿ ಜನರನ್ನು ಚರಂಡಿ ನೀರಿನಲ್ಲಿ ಸ್ನಾನ ಮಾಡುವಂತೆ ಒತ್ತಾಯಿಸಲಾಯಿತು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
ಕುಂಭವನ್ನು ಆಯೋಜಿಸಿದ್ದಕ್ಕಾಗಿ ಯುಪಿ ಸರಕಾರ ಹೆಗ್ಗಳಿಕೆ ಪಡೆಯುತ್ತಿದೆ. ಆದರೆ, ಕಾಲ್ತುಳಿತದಿಂದ ಟ್ರಾಫಿಕ್ ಜಾಮ್ ಮತ್ತು ಕೊಳಕಿನವರೆಗೆ ಯಾರು ಹೊಣೆ?
ಹೊಣೆಗಾರಿಕೆಯನ್ನು ನಮ್ರತೆಯಿಂದ ಸ್ವೀಕರಿಸಲು ಅದು ತಯಾರಿಲ್ಲ ಮತ್ತು ಮೋದಿ ಇದಾವುದರ ಬಗ್ಗೆಯೂ ಮಾತಾಡುತ್ತಿಲ್ಲ. ಟ್ರಂಪ್ ಅವರ ಆಸ್ಥಾನದಲ್ಲಿಯೂ ಮೋದಿ ಮೌನವಾಗಿದ್ದರು ಮತ್ತು ಈಗ ನಾಗರಿಕರನ್ನು ಹಂದಿಗಳು ಮತ್ತು ರಣಹದ್ದುಗಳು ಎಂದು ಕರೆದಾಗಲೂ ಮೋದಿ ಮೌನವಾಗಿದ್ದಾರೆ.
ಕುಂಭಮೇಳವನ್ನು ಆಯೋಜಿಸುವುದು ಕಷ್ಟ, ಅದು ಎಲ್ಲರಿಗೂ ತಿಳಿದಿದೆ, ಆದರೆ ನ್ಯೂನತೆಗಳನ್ನು ಎತ್ತಿ ತೋರಿಸಿದಾಗ ಸುಧಾರಣೆ ಸಾಧ್ಯ. ಒಪ್ಪಿಕೊಳ್ಳುವ ಮನಸ್ಸಿರಬೇಕು, ಅಷ್ಟೆ. ದೂರುವವರನ್ನು ಮತ್ತು ಪ್ರಶ್ನಿಸುವವರನ್ನು ರಣಹದ್ದುಗಳು ಮತ್ತು ಹಂದಿಗಳು ಎಂದು ಕರೆಯುವುದು ಯಾವ ರೀತಿಯ ಸಂಸ್ಕೃತಿ?
ಸಾಮಾನ್ಯ ಜನರು ಮಾತ್ರ ಈ ಪ್ರಶ್ನೆಯನ್ನು ಎತ್ತಲಿಲ್ಲ. ದೇವಾಲಯ ಎಂದು ಕರೆಯಲಾಗುವ ಸಂಸತ್ತಿನಲ್ಲಾದರೂ ಎಲ್ಲ ಸತ್ಯಗಳನ್ನು ಮಂಡಿಸಬೇಕಲ್ಲವೆ? ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಇಂತಹ ಪ್ರಶ್ನೆ ಎತ್ತಿದ್ದರು. ಮಹಾಕುಂಭದಲ್ಲಿ ಸಾವಿಗೀಡಾದವರ ಅಂಕಿಅಂಶಗಳನ್ನು ನೀಡಬೇಕು, ಮಹಾಕುಂಭದ ಅವ್ಯವಸ್ಥೆ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕು, ಗಾಯಾಳುಗಳ ಚಿಕಿತ್ಸೆ, ಔಷಧಿಗಳ ಲಭ್ಯತೆ ಎಲ್ಲದರ ಬಗ್ಗೆಯೂ ಒಂದು ಸ್ಪಷ್ಟನೆ ಬರಬೇಕು ಎಂದಿದ್ದರು.
ಮಹಾಕುಂಭದಲ್ಲಿ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸತ್ಯವನ್ನು ಮರೆಮಾಚಿದವರಿಗೆ ಶಿಕ್ಷೆಯಾಗಬೇಕು ಎಂದು ಅವರು ಒತ್ತಾಯಿಸಿದ್ದರು.
ಆರ್‌ಜೆಡಿಯ ಮನೋಜ್ ಕುಮಾರ್ ಝಾ ಕೋವಿಡ್ ಅವಧಿಯಲ್ಲಿನ ಸಾವುಗಳ ಬಗ್ಗೆಯೂ ಪ್ರಸ್ತಾಪಿಸುತ್ತ,
ಅವರು ತುಂಬಾ ಸಾಮಾನ್ಯ ಜನರು, ಅವರಿಗೆ ಜೀವನದಲ್ಲಿ ಘನತೆ ಬೇಕು. ಸಂವಿಧಾನವೂ ಅದನ್ನು ಹೇಳುತ್ತದೆ, ಆದರೆ ಸಾವಿನಲ್ಲಿ ಹೆಚ್ಚಿನ ಘನತೆ ಬೇಕು, ನಾವು ಗೌರವಾನ್ವಿತ ಸಾವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಇದು ನಮ್ಮ ಸಾಮೂಹಿಕ ವೈಫಲ್ಯ ಎಂದಿದ್ದರು.
ಕುಂಭಮೇಳ ಕಾಲ್ತುಳಿತದ ಸಂದರ್ಭವನ್ನು ವಿವರಿಸುತ್ತ, 17 ಗಂಟೆಗಳ ಕಾಲ ಅಧಿಕೃತ ದೃಢೀಕರಣವಿಲ್ಲದಿದ್ದಾಗ ಚಿಂತೆ ಹೆಚ್ಚಾಗುತ್ತದೆ, ನಂತರ ವದಂತಿಗಳು ಹರಡುತ್ತವೆ ಎಂದಿದ್ದರು.
ಕುಂಭಮೇಳದಲ್ಲಿನ ತೊಂದರೆಗಳ ಬಗ್ಗೆ ಸಂಸದರೊಂದಿಗೆ, ಜನರು ಕೂಡ ದನಿಯೆತ್ತಿದರು.
ಮಹಿಳೆಯರು ಸ್ನಾನ ಮಾಡುತ್ತಿರುವ ವೀಡಿಯೊಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇದರ ಬಗ್ಗೆ ಮೊದಲು ಪೊಲೀಸರೇ ಮಾಹಿತಿ ನೀಡಿದ್ದರು. ಜನರು ಸಾಮಾಜಿಕ ಮಾಧ್ಯಮದಲ್ಲಿ ಇದು ನಡೆಯುತ್ತಿದೆ ಎಂದು ಬರೆಯಲು ಪ್ರಾರಂಭಿಸಿದರು.
ಅವರು ಕುಂಭಮೇಳವನ್ನು ಕೆಣಕುತ್ತಿಲ್ಲ. ಆದರೆ ಕುಂಭದ ಘನತೆಯನ್ನು ರಕ್ಷಿಸುತ್ತಿದ್ದಾರೆ.ಇದನ್ನು ಯುಪಿ ಸರಕಾರ, ಆದಿತ್ಯನಾಥ್ ಅರ್ಥ ಮಾಡಿಕೊಳ್ಳಬೇಕಾಗಿದೆ.
ಜನರು ಗದ್ದಲ ಎಬ್ಬಿಸಿದ ನಂತರ, ಪೊಲೀಸರು ತಕ್ಷಣ ಈ ವಿಷಯವನ್ನು ತನಿಖೆ ಮಾಡಿ ಮೂವರನ್ನು ಬಂಧಿಸಿದರು.
17 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜನರು ಕಾಳಜಿ ವ್ಯಕ್ತಪಡಿಸಿದ್ದರಿಂದ ಇದು ಸಾಧ್ಯವಾಗಿದೆ.
ಅವತ್ತು ಸಂತಾಪ ವ್ಯಕ್ತಪಡಿಸಿದ್ದ ಮೋದಿ, ಈಗ ಕ್ಷಮೆ ಯಾಚಿಸುವ ಹೊತ್ತಲ್ಲಿ ಕಾಲ್ತುಳಿತದ ಬಗ್ಗೆ ಉಲ್ಲೇಖಿಸಬೇಕಿತ್ತು ಮತ್ತು ಸಾವನ್ನಪ್ಪಿದ ಜನರಿಗೆ ಗೌರವ ಸಲ್ಲಿಸಬೇಕಿತ್ತು. ಅದರ ಬಗ್ಗೆ ವಿಷಾದ ವ್ಯಕ್ತಪಡಿಸಬೇಕಿತ್ತು. ಪ್ರಧಾನಿ ಹಾಗೆ ಮಾಡಿದ್ದರೆ, ಅವರ ರಾಜಕೀಯ ಧೈರ್ಯ ಕಾಣಿಸುತ್ತಿತ್ತು ಮತ್ತು ಅವರ ನಮ್ರತೆಯೂ ಕಾಣಿಸುತ್ತಿತ್ತು.
ಕುಂಭಮೇಳದಲ್ಲಿ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಜನರು ಬಂದಿರುವುದು ನಿಜ. ಕುಂಭದ ಬಗ್ಗೆ ಜನರಲ್ಲಿ ಸಾಕಷ್ಟು ಉತ್ಸಾಹ ಕಂಡುಬಂತು.
ಆದರೆ ಅದೇ ಜನರು ಈ ಬಾರಿ ಎರಡು ಕುಂಭಗಳನ್ನು ನೋಡಿದರು. ಸಾಮಾನ್ಯ ಜನರ ಕುಂಭ ಒಂದೆಡೆ ಮತ್ತು ವಿವಿಐಪಿಗಳ ಕುಂಭ ಇನ್ನೊಂದೆಡೆ.
ಕೋಟ್ಯಂತರ ಜನರು ಒಂದೇ ಘಾಟ್‌ನಲ್ಲಿ ಸ್ನಾನ ಮಾಡಿದರು. ಆದರೆ ಕೆಲವು ಸಾವಿರ ವಿಐಪಿಗಳಿಗಾಗಿ ಪ್ರತ್ಯೇಕ ಘಾಟ್ ನಿರ್ಮಿಸಲಾಯಿತು.
ಎಲ್ಲಿ ನ್ಯೂನತೆಗಳಿದ್ದವು ಎಂದು ಹೇಳುವ ಹಕ್ಕು ಭಕ್ತರಿಗೆ, ಟೀಕಾಕಾರರಿಗೆ ಇದ್ದೇ ಇದೆ. ಕಾರ್ಯಕ್ರಮವನ್ನು ಸರಕಾರ ಆಯೋಜಿಸಿರುವುದೇ ಅವರಿಗಾಗಿ ಎಂದಮೇಲೆ ಅವರ ದೂರುಗಳನ್ನೂ ಕೇಳಬೇಕು.
ಪ್ರಯಾಗರಾಜ್ ನಗರ ಜನರು ಕುಂಭಮೇಳದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ಶಾಲೆಗಳು ಹಲವು ದಿನಗಳವರೆಗೆ ಮುಚ್ಚಲ್ಪಟ್ಟಿದ್ದವು. ಶಾಲೆಗಳು ತೆರೆದಾಗ, ಸಂಚಾರ ದಟ್ಟಣೆಯಿಂದಾಗಿ ಮಕ್ಕಳು ಹಲವು ಗಂಟೆಗಳ ಕಾಲ ರಸ್ತೆಗಳಲ್ಲಿ ಸಿಲುಕಿಕೊಳ್ಳಬೇಕಾಯಿತು.
ಹಾಲಿನ ಕೊರತೆ ಇತ್ತು. ಸರಕುಗಳ ಬೆಲೆಗಳು ಹೆಚ್ಚಾದವು. ದಿನನಿತ್ಯದ ಸರಕುಗಳ ದಾಸ್ತಾನು ಕೂಡ ಖಾಲಿಯಾಗುತ್ತಿದೆ, ಇದು ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ.
ಕುಂಭಮೇಳಕ್ಕೆ ಎಲ್ಲಿಂದಲೂ ಅವಮಾನವಾಗಿಲ್ಲ.
ಪ್ರಧಾನಿ ಮೋದಿ ಇದಕ್ಕಾಗಿ ತಮ್ಮ ಬ್ಲಾಗ್‌ನಲ್ಲಿ ಪ್ರಯಾಗರಾಜ್ ಜನರನ್ನು ಹೊಗಳಿದ್ದಾರೆ.
ಪ್ರಯಾಗರಾಜ್‌ನ ಜನರು ಕುಂಭಮೇಳವನ್ನು ಪೂರ್ಣ ತಾಳ್ಮೆಯಿಂದ ನಿರ್ವಹಿಸಿದರು ಎಂದು ಆದಿತ್ಯನಾಥ್ ಹೇಳುತ್ತಾರೆ.
ಅಂದರೆ, ಅವರು ಸಮಸ್ಯೆಗಳನ್ನು ಎದುರಿಸಿದ್ದು ನಿಜ ಮತ್ತು ಅದಕ್ಕಾಗಿ ಅವರನ್ನು ಹೊಗಳಲಾಯಿತೆ?
ಕುಂಭಮೇಳ ಕೊನೆಗೊಂಡಿದೆ, ಕೋಟ್ಯಂತರ ಜನರು ಸ್ನಾನ ಮಾಡಿದ್ದಾರೆ. ಆದರೆ ಅಮೃತ ಸ್ನಾನ ಮಾಡಲು ಹೋಗಿ ಹೈರಾಣಾಗಿ ನೋವಿನ ಪ್ರಶ್ನೆಗಳನ್ನು ಎತ್ತಿದವರು ಅವಮಾನ ಎದುರಿಸಿದ್ದು ಮಾತ್ರ ದುಃಖದ ವಿಷಯ.