ಮುಸ್ಲಿಮರಿಗೆ ಮೀಸಲಾತಿ ನೀಡುವುದು ತಪ್ಪೇ?

16ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯವರ ನಿದ್ದೆಗೆಡಿಸಿದ್ದಾರೆ. 2025-26ನೇ ಸಾಲಿನ ಬಜೆಟ್ ಮೂಲಕ ಸಿದ್ದರಾಮಯ್ಯನವರು ಐದು ಗ್ಯಾರಂಟಿಗಳ ಹೊರತಾಗಿಯೂ ಹಲವಾರು ಯೋಜನೆಗಳನ್ನು ಘೋಷಿಸಿರುವುದು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಟೀಕೆ ಮಾಡಲು ವಿಷಯ ಸಿಗದೆ ಹಲಾಲ್ ಬಜೆಟ್, ಸಾಬರ ಬಜೆಟ್, ಪಾಕಿಸ್ತಾನಿ ಬಜೆಟ್, ತಾಲಿಬಾನಿ ಬಜೆಟ್, ಮುಸ್ಲಿಮರಿಗಾಗಿ ಮಂಡಿಸಿದ ಬಜೆಟ್ ಎಂದು ಬಡಬಡಾಯಿಸುತ್ತಿದ್ದಾರೆ.
ಈ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಐದು ಗ್ಯಾರಂಟಿಗಳು ಜಾರಿಯಲ್ಲಿದ್ದರೂ ಎಲ್ಲಾ ಸಮುದಾಯಗಳಿಗೆ ವಿಶೇಷ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆ, ಬಿಸಿ ಊಟ ಸಿಬ್ಬಂದಿಗೆ ಒಂದು ಸಾವಿರ ರೂ. ಹೆಚ್ಚಿಸಿದ್ದಾರೆ. ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರ ಗೌರವಧನ ಎರಡು ಸಾವಿರ ರೂ. ಹೆಚ್ಚಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಹೊಸದಾಗಿ 500 ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಮುಂದಾಗಿದ್ದಾರೆ. ಪರಿಶಿಷ್ಟ ಜಾತಿ/ವರ್ಗಗಳ ವಿಶೇಷ ಯೋಜನೆಗೆ 42 ಸಾವಿರ ಕೋ.ರೂ. ಅನುದಾನ ಒದಗಿಸಿದ್ದಾರೆ. ಹಿಂದುಳಿದ ವರ್ಗಗಳ ಇಲಾಖೆಗೆ 7,500 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಒಟ್ಟು 4,500 ಕೋಟಿ ರೂ ಅನುದಾನ ಒದಗಿಸಿದ್ದಾರೆ. ಇದರಲ್ಲಿ ಸಾಬರ ಬಜೆಟ್ ಎನ್ನುವ ವಿಶೇಷತೆ ಏನಿದೆ? ಬಿಜೆಪಿಯವರಂತೆಯೇ ಕೆಲವು ಮಾಧ್ಯಮದವರು ಅದನ್ನೇ ಹೇಳುತ್ತಿರುವುದು ಅತ್ಯಂತ ನಾಚಿಕೆಗೇಡು. ಒಂದಿಷ್ಟು ಅಧ್ಯಯನ ಮಾಡಿ ಸಮಾಜಕ್ಕೆ ಸತ್ಯ ವಿಷಯಗಳನ್ನು ಹೇಳುವುದು ಮಾಧ್ಯಮದ ಜವಾಬ್ದಾರಿಯಲ್ಲವೇ? ಅಲ್ಪಸಂಖ್ಯಾತ ಸಮುದಾಯಕ್ಕೆ ಏನೂ ನೀಡಲೇಬಾರದೆಂದರೆ ಅವರು ಈ ದೇಶದ ನಾಗರಿಕರಲ್ಲವೇ? ಅವರಿಗೆ ಯಾಕೆ ಪ್ರತ್ಯೇಕ ನೀಡಬೇಕು ಎಂದು ಪ್ರಶ್ನಿಸುವವರಿಗೆ ಇನ್ನುಳಿದ ಸಮುದಾಯಕ್ಕೆ ನೀಡಿದ್ದು ಕಾಣಲಿಲ್ಲವೇ?
2019ರಿಂದ 2023ರ ವರೆಗೆ ಸರಕಾರ ನಡೆಸಿದ ಬಿಜೆಪಿ ಹೇಳ ಹೆಸರಿಲ್ಲದಂತೆ ಚುನಾವಣೆಯಲ್ಲಿ ಸೋತಿರುವುದು ಇಂತಹ ಅಸಂಬದ್ಧ ಹೇಳಿಕೆಗಳಿಂದಲೇ. ಹಲಾಲ್-ಜಟಕಾ ಕಟ್, ಜಾತ್ರೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳು ಇರಬಾರದು, ಲವ್ ಜಿಹಾದ್, ಹಿಜಾಬ್ ವಿಷಯಗಳಲ್ಲದೆ ಮುಸ್ಲಿಮರ ಮೀಸಲಾತಿ ತೆಗೆಯುವ ಧಾವಂತದಲ್ಲಿ ಸರಕಾರ ಜನಪರವಾಗಿ ನಡೆಸಲು ಸಾಧ್ಯವಾಗಿಲ್ಲ ಎಂದು ರಾಜ್ಯದ ಜನತೆ ಅವರನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಬಿಜೆಪಿಯವರ ಮುಸ್ಲಿಮ್, ಪಾಕಿಸ್ತಾನ, ನಗರ ನಕ್ಸಲರು, ಹಿಂದೂ ವಿರೋಧಿಗಳು ಎನ್ನುವ ಹರಕಲು ಸ್ಲೋಗನ್‌ಗಳು ಈಗ ನಡೆಯಲಾರದ ನಾಣ್ಯಗಳಾಗಿವೆ ಎಂದು ರಾಜ್ಯದ ಜನರಿಗೆ ಅರ್ಥವಾಗಿದೆ. ಆದರೆ ಬಿಜೆಪಿಗೆ ಅರ್ಥವಾಗಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ದೇಶದ ಪ್ರಧಾನ ಮಂತ್ರಿ, ಗೃಹ ಮಂತ್ರಿ ಹಾಗೂ ಅವರ ಸಚಿವ ಸಂಪುಟದ ಸಹದ್ಯೋಗಿಗಳೂ ಹಿಂದೂ-ಮುಸ್ಲಿಮ್ ಎಂದೇ ಪ್ರಚಾರ ಮಾಡಿದರು. ಇದರಿಂದ ಜನರಿಗೆ ಉಪಯೋಗವಿಲ್ಲ ಎಂದು ಜನತೆ ಬಿಜೆಪಿಯನ್ನು ಬಹುಮತದಿಂದ ದೂರ ಉಳಿಸಿದ್ದಾರೆ.
ಬಿಜೆಪಿಯವರು ಪದೇ ಪದೇ ಮುಸ್ಲಿಮರ ವಿರುದ್ದ ಮಾತನಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ಧರ್ಮದ ಆಧಾರದಲ್ಲಿ ನೀಡಿದ್ದಾರೆ, ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಒಂದೇ ಸಮನೆ ಬಾಯಿಬಡಿದುಕೊಳ್ಳುತ್ತಿದ್ದಾರೆ. ಸಂವಿಧಾನದ ಯಾವ ಅನುಚ್ಛೇದದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬಾರದೆನ್ನುವ ಅಂಶವಿದೆ ಎಂದು ಬಿಜೆಪಿಯವರು ಇಂದಿಗೂ ಜನರಿಗೆ ತಿಳಿಸಿಲ್ಲ, ಪರಿಶಿಷ್ಟ ಜಾತಿ ಮೀಸಲಾತಿಗಾಗಿ ರಾಷ್ಟ್ರಪತಿಗಳ ಆದೇಶ 1950ರಲ್ಲಿ ಹಿಂದೂಯೇತರ ಧರ್ಮಗಳಾದ ಮುಸ್ಲಿಮ್, ಕ್ರಿಶ್ಚಿಯನ್ ಜನರಿಗೆ ಪರಿಶಿಷ್ಟ ಜಾತಿ ಮೀಸಲಾತಿ ನೀಡಬಾರದೆಂದು ಹೇಳಿದೆ. ಆದರೆ ಮುಸ್ಲಿಮರಿಗೆ ಮೀಸಲಾತಿಯೇ ನೀಡಬಾರದೆನ್ನುವ ಅಥವಾ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಬಾರದೆನ್ನುವ ಅಂಶ ಇಡೀ ಸಂವಿಧಾನದಲ್ಲಿ ಎಲ್ಲಿಯಾದರೂ ಇದ್ದರೆ ಬಿಜೆಪಿ ಮುಖಂಡರು ರಾಜ್ಯದ ಜನತೆಗೆ ತಿಳಿಸಲಿ. ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಧರ್ಮಾಧಾರಿತ ಎಂದು ಯಾರೋ ಹೇಳಿದ್ದನ್ನೇ ಎಲ್ಲರೂ ಹೇಳಲು ಪ್ರಾರಂಭ ಮಾಡಿದ್ದಾರೆ, ಹಾಡಿದ್ದೇ ಹಾಡೋ ಕಿಸಬಾಯಿ ದಾಸ ಎನ್ನುವ ಹಾಗೆ.
ಸಂವಿಧಾನದಲ್ಲಿ ಮೀಸಲಾತಿ ವಿಷಯ ಇರುವುದು ಪ್ರಮುಖವಾಗಿ ಅನುಚ್ಛೇದ 15 ಮತ್ತು 16ರಲ್ಲಿ. ಅದರ ಪ್ರಕಾರ ಭಾರತದ ನಿವಾಸಿಗಳಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳಿಗೆ ಮೀಸಲಾತಿ ನೀಡಬಹುದು ಅಥವಾ ಅವರನ್ನು ಮುಖ್ಯವಾಹಿನಿಗೆ ತರುವ ಯೋಜನೆಗಳನ್ನು ಸರಕಾರ ಮಾಡಬಹುದು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳು ಎಂದರೆ ಧರ್ಮವೂ ಅಲ್ಲ, ಜಾತಿಯೂ ಅಲ್ಲ, ಅದೊಂದು ಗುಂಪು ಅಷ್ಟೇ. ಮುಸ್ಲಿಮರು ಈ ದೇಶದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಒಂದು ವರ್ಗ. ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲು ಸಾಕಷ್ಟು ಆಯೋಗಗಳ ವರದಿಗಳು ಇವೆ, ಅವುಗಳ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆ. ಗುಜರಾತ್‌ರಾಜ್ಯದಲ್ಲಿ ಮುಸ್ಲಿಮರ 39 ಒಳಪಂಗಡಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಅದೇ ರೀತಿ ಉತ್ತರ ಪ್ರದೇಶದ 38 ಮುಸ್ಲಿಮರ ವರ್ಗಗಳು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿವೆ. ಇದೇ ರೀತಿ ಬಹುತೇಕ ರಾಜ್ಯಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಇದೆ. ಆದರೆ ಬಿಜೆಪಿ ಮಾತ್ರ ಎಲ್ಲಿಯೂ ಇಲ್ಲದ ಮೀಸಲಾತಿ ರಾಜ್ಯದಲ್ಲಿ ಇದೆ ಎನ್ನುವ ರೀತಿ ಹೇಳುತ್ತಿರುವುದು ನಾಚಿಕೆಗೇಡು.
ದೇಶದ ಪ್ರಧಾನಿ, ಗೃಹ ಸಚಿವರು ಸೇರಿದಂತೆ ಬಿಜೆಪಿ ನಾಯಕರು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡುತ್ತದೆ ಎಂದು ಅಪಪ್ರಚಾರ ಮಾಡಿದರು. ವಾಸ್ತವವಾಗಿ ಮಂಡಲ್ ಆಯೋಗದ ವರದಿಯಂತೆ ಹಿಂದುಳಿದ ವರ್ಗಗಳಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕಾಗಿತ್ತು.ಆದರೆ ಅಂದಿನ ಸರಕಾರ (ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಸರಕಾರ) ಮುಸ್ಲಿಮರಿಗೆ ಮೀಸಲಾತಿ ನೀಡಲಿಲ್ಲ. ಆಂಧ್ರ ಪ್ರದೇಶ ರಾಜ್ಯದಲ್ಲಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿ ಸುಪ್ರೀಂ ಕೋರ್ಟ್‌ನಲ್ಲಿ ರದ್ದಾಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಮಾತ್ರ ನೀಡಿದ್ದು, ರಾಜ್ಯ ಸರಕಾರಕ್ಕೆ ನೋಟಿಸ್ ನೀಡಿದೆ. ಅದರಲ್ಲಿ ಮುಸ್ಲಿಮರಿಗೆ ನೀಡಲಾಗಿರುವ ಮೀಸಲಾತಿ ಯಾವ ಆಧಾರದಲ್ಲಿ ಎಂದು ಕೇಳಲಾಗಿದೆ. ಅಂದರೆ ಆ ಸಮುದಾಯ ಸಂವಿಧಾನದ ಅನುಚ್ಛೇದ 15 ಮತ್ತು 16ರಂತೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ ಎನ್ನಲು ಇರುವ ಅಂಕಿ ಅಂಶಗಳೇನು ಎಂದು ಕೇಳಿದೆ ವಿನಹ ಮೀಸಲಾತಿಯನ್ನೇ ರದ್ದುಪಡಿಸಿಲ್ಲ.
ಈಗ ಕರ್ನಾಟಕ ಸರಕಾರ ಮುಸ್ಲಿಮರಿಗೆ ಸರಕಾರದ ಕಾಮಗಾರಿ ಗುತ್ತಿಗೆಯಲ್ಲಿ ಶೇ. 4ರಷ್ಟು ಮೀಸಲಾತಿ ನೀಡಬೇಕೆಂದು ಬಜೆಟ್ ನಲ್ಲಿ ಘೋಷಿಸಿದೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿ ಈಗಾಗಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳಿಗೂ ಸರಕಾರದ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ ಎನ್ನುವ ವಿಷಯ ಮುಚ್ಚಿಡುತ್ತಿದೆ. ಪ್ರವರ್ಗ-1ಕ್ಕೆ ಶೇ. 4, ಪ್ರವರ್ಗ-2ಎ ಗೆ ಶೇ. 15ರಷ್ಟು ಕಾಮಗಾರಿಗಳನ್ನು ನೀಡಬೇಕೆಂದು ಆದೇಶಿಸಲಾಗಿದೆ. ಈಗ ಪ್ರವರ್ಗ-2ಬಿ ಅಡಿಯಲ್ಲಿ ಬರುವ ಮುಸ್ಲಿಮರಿಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗಿದೆ. ಇದರಲ್ಲಿ ಬಿಜೆಪಿ ಕಂಡಿರುವ ತಪ್ಪೇನು? ಮುಸ್ಲಿಮರಿಗೆ ನೀಡುವ ಯಾವುದೇ ಮೀಸಲಾತಿ ತಪ್ಪೆನ್ನುವುದಾದರೆ, ಯಾವ ಆಧಾರದಲ್ಲಿ ಎಂದು ಹೇಳಬೇಕು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಮುಖಂಡರಿಂದ ಹಿಡಿದು ಗಲ್ಲಿ ಗಲ್ಲಿಯ ಮುಖಂಡರು ಮಾತನಾಡುವುದು ಒಂದೇ ಭಾಷೆ, ಮುಸ್ಲಿಮರ ವಿರುದ್ಧ ಮಾತನಾಡುವುದೇ ಅಭಿವೃದ್ಧಿ ಎಂದುಕೊಂಡಿರುವ ಹಾಗಾಗಿದೆ ಇವರ ಮನಸ್ಥಿತಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಅಸ್ತಿತ್ವದಲ್ಲೇ ಇಲ್ಲದ ವಿಷಯಗಳನ್ನು ದೇಶದ ಬಹಳ ದೊಡ್ಡ ಸಮಸ್ಯೆಗಳೆಂದು ಹೇಳುತ್ತಾ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ಮುಸ್ಲಿಮರು ನಾಲ್ಕು ಮದುವೆ ಆಗುತ್ತಾರೆ, ಅದರಿಂದ ಅವರಲ್ಲಿ ಹೆಚ್ಚು ಮಕ್ಕಳು ಜನಿಸುತ್ತಾರೆ ಎಂದು ಬೊಬ್ಬೆ ಹೊಡೆದರು. ಲಕ್ಷದಲ್ಲಿ ಒಬ್ಬರು ಅಥವಾ ಇಬ್ಬರು ಎರಡು ಮದುವೆ ಆಗಿರುವ ಕುಟುಂಬಗಳು ಸಿಗಬಹುದು. ಆದರೂ ಅಪಪ್ರಚಾರ ಮಾಡಲಾಗುತ್ತದೆ. ಮುಸ್ಲಿಮರಲ್ಲಿ ಹತ್ತಾರು ಮಕ್ಕಳು ಜನಿಸುತ್ತಾರೆ, ಅವರ ಜನಸಂಖ್ಯೆ ನಮಗಿಂತ ಹೆಚ್ಚಾಗುತ್ತದೆ ಎಂದು ಬೊಬ್ಬೆ ಹೊಡೆದರು. ಆದರೆ 75 ವರ್ಷಗಳ ನಂತರವೂ ಮುಸ್ಲಿಮರ ಜನಸಂಖ್ಯೆ ಶೇ. 13.8 ಮಾತ್ರ ಇದೆ. ಈಗ ವಿದ್ಯಾವಂತ ಮುಸ್ಲಿಮ್ ಕುಟುಂಬಗಳಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳು ಕಾಣಲು ಸಿಗುವುದಿಲ್ಲ. ಆದರೆ ಅವಿದ್ಯಾವಂತ ಹಿಂದೂ ಕುಟುಂಬಗಳಲ್ಲಿಯೂ ಹೆಚ್ಚು ಮಕ್ಕಳು ಇರುವ ಉದಾಹರಣೆ ಇದೆ. ಎರಡನೆಯದಾಗಿ ಮುಸ್ಲಿಮರು ಒಂದೇ ಸಮನೆ ತಲಾಖ್ ನೀಡುತ್ತಾರೆ, ಮಹಿಳೆಯರಿಗೆ ಅನ್ಯಾಯ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದರು. ಅದನ್ನು ವಿರೋಧಿಸಿ ಕಾನೂನು ಸಹ ಮಾಡಿದರು, ಏನೋ ಬಹಳ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಜಂಭ ಕೊಚ್ಚಿಕೊಂಡರು. ಆದರೆ ಮುಸ್ಲಿಮರಿಗೆ ಅದರಿಂದ ಯಾವ ಉಪಯೋಗವೂ ಆಗಲಿಲ್ಲ, ನಷ್ಟವೂ ಆಗಲಿಲ್ಲ. ಯಾಕೆಂದರೆ ಮುಸ್ಲಿಮರಲ್ಲಿ ತಲಾಖ್ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ಅಲ್ಲದೆ ತಲಾಖ್ ಎನ್ನುವುದು ಒಂದೇ ಉಸಿರಿನಲ್ಲಿ ಹೇಳುವ ಪದ್ಧತಿ ಅಲ್ಲ, ಅದಕ್ಕೆ ಅದರದ್ದೇ ಆದ ನಿಯಮಗಳಿವೆ, ಸಮಯವಿದೆ.ವಾಸ್ತವವಾಗಿ ಮುಸ್ಲಿಮರಲ್ಲಿ ಹೆಣ್ಣು ಮಕ್ಕಳಿಗೆ ಅತೀ ಹೆಚ್ಚು ಗೌರವ ನೀಡಲಾಗಿದೆ.
ದೇಶ ಮತ್ತು ರಾಜ್ಯವನ್ನು ಆಳಿರುವ ಬಹುತೇಕ ಬಿಜೆಪಿ ಮುಖಂಡರು ದೇವಸ್ಥಾನದ ದುಡ್ಡನ್ನು ಮಸೀದಿಗಳಿಗೆ ನೀಡಲಾಗುತ್ತದೆ ಎಂದು ಸುಳ್ಳು ಹೇಳಲು ಪ್ರಾರಂಭಿಸಿದರು. ಸುಳ್ಳನ್ನು ಸತ್ಯ ಮಾಡಲು ಪದೇ ಪದೇ ಹೇಳಲಾಗುತ್ತಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 35 ಸಾವಿರ ದೇವಸ್ಥಾನಗಳು ಇವೆ, ಅಲ್ಲಿ ಸಂಗ್ರಹವಾಗುವ ಹಣ (ಯಾವುದೇ ಮೂಲದಿಂದಾಗಲೀ ಬಾಡಿಗೆಯಿಂದ, ಜಮೀನಿನಲ್ಲಿ ಬೆಳೆದ ಬೆಳೆಯಿಂದ ಬಂದ ಹಣ, ಭಕ್ತರು ನೀಡಿದ ಕಾಣಿಕೆ) ಅದೇ ದೇವಸ್ಥಾನದ ಅಕೌಂಟ್‌ನಲ್ಲಿ ಇಡಲಾಗುತ್ತದೆ, ದೇವಸ್ಥಾನದ ಅಭಿವೃದ್ಧಿಗೆ ಖರ್ಚು ಮಾಡಲಾಗುತ್ತದೆ. ಇನ್ನುಳಿದ ಅನುದಾನ ಅಲ್ಲಿಯೇ ಸಂಗ್ರಹವಾಗುತ್ತದೆ. ಅಲ್ಲದೆ ದೇವಸ್ಥಾನಗಳನ್ನು ಕಟ್ಟಲು ಸರಕಾರ ಕಾಲಕಾಲಕ್ಕೆ ಅನುದಾನ ನೀಡುತ್ತದೆ. ಇದು ಎಲ್ಲಾ ಶಾಸಕರಿಗೆ ಗೊತ್ತಿದೆ, ಯಾವುದೇ ಮಸೀದಿ ಕಟ್ಟಲು ಸರಕಾರ ಅನುದಾನ ಕೊಟ್ಟಿಲ್ಲ ಎನ್ನುವುದೂ ಶಾಸಕರಿಗೆ ಗೊತ್ತಿದೆ. ಆದರೆ ಯಾರೂ ಹೇಳಲು ಮುಂದೆ ಬರುವುದಿಲ್ಲ.
ರಾಜ್ಯದಲ್ಲಿ ಮಸೀದಿಗಳನ್ನು ಕಟ್ಟಲು ಒಂದೇ ಒಂದು ರೂಪಾಯಿ ಅನುದಾನ ಸರಕಾರವಾಗಲೀ ಅಥವಾ ವಕ್ಫ್ ಮಂಡಳಿಯಾಗಲೀ ನೀಡುವುದಿಲ್ಲ. ಮಸೀದಿ ಅಥವಾ ದರ್ಗಾಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಮಾತ್ರ ವಕ್ಫ್ ಮಂಡಳಿ ಅನುದಾನ ನೀಡುತ್ತದೆ. ಮುಸ್ಲಿಮ್ ಸಮುದಾಯವೇ ತಮ್ಮ ಸ್ವಂತ ದುಡ್ಡಿನಲ್ಲಿ ಜಮೀನು ಖರೀದಿಸಿ, ಮಸೀದಿ ಕಟ್ಟುತ್ತಾರೆ. ನಂತರ ಅದನ್ನು ವಕ್ಫ್ ಮಂಡಳಿಯ ಸುಪರ್ದಿಗೆ ಬಿಟ್ಟುಕೊಡುತ್ತಾರೆ. ಯಾರೇ ಆಗಲೀ ಒಮ್ಮೆ ವಕ್ಫ್ ಮಂಡಳಿಗೆ ನೀಡಿದ ನಂತರ ವಾಪಸ್ ಪಡೆಯಲು ಅವಕಾಶವಿರುವುದಿಲ್ಲ. ಈ ಬಗ್ಗೆ ಬಿಜೆಪಿ ನಾಯಕರಿಗೆ ಗೊತ್ತಿದೆ. ಆದರೂ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಮತ್ತು ನಾಗರಿಕರನ್ನು ದಾರಿ ತಪ್ಪಿಸಲು ದೇವಸ್ಥಾನದ ದುಡ್ಡು ಮಸೀದಿಗಳಿಗೆ ನೀಡುತ್ತಾರೆ ಎಂದು ಪದೇ ಪದೇ ಸುಳ್ಳು ಹೇಳುತ್ತಾರೆ.
ದೇಶದ ಪ್ರಧಾನಿಯಿಂದ ಹಿಡಿದು ಬಿಜೆಪಿಯ ಪ್ರತಿಯೊಬ್ಬ ನಾಯಕರು ಕಾಂಗ್ರೆಸ್ ಮತ್ತು ಜಾತ್ಯತೀತ ಪಕ್ಷಗಳು ಮುಸ್ಲಿಮರ ತುಷ್ಟೀಕರಣ ಮಾಡುತ್ತಿವೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇವರ ಲೆಕ್ಕದಲ್ಲಿ ತುಷ್ಟೀಕರಣ ಎಂದರೆ ಏನು? ಕಾಂಗ್ರೆಸ್ ಪಕ್ಷ ಸಂವಿಧಾನ ಜಾರಿಯಾದ ದಿನದಿಂದ ಐವತ್ತು ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದೆ. ಅವರು ಮುಸ್ಲಿಮರ ತುಷ್ಟೀಕರಣ ಮಾಡಿದ್ದರೆ, ಇಂದು ದೇಶದಲ್ಲಿ ಮುಸ್ಲಿಮರು ಇಷ್ಟೊಂದು ಬಡವರಾಗಿ, ಅನಕ್ಷರಸ್ಥರಾಗಿ ಬದುಕಲು ಸಾಧ್ಯವೇ? ಮುಸ್ಲಿಮರಿಗೆ ಕೇಂದ್ರದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಯಾವುದೇ ಮೀಸಲಾತಿ ಇಲ್ಲ, ಅಲ್ಪಸಂಖ್ಯಾತರು ಎನ್ನುವುದೇ ಮೀಸಲಾತಿ ಎನ್ನುವ ರೀತಿ ಬಿಂಬಿಸಲಾಗುತ್ತದೆ, ಅದರಿಂದ ಮುಸ್ಲಿಮರಿಗೆ ಏನೂ ಲಾಭವಿಲ್ಲ. ಮುಸ್ಲಿಮರಿಗೆ ಅವಮಾನ ಮಾಡುವುದೇ ಕಾಯಕ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಒಬ್ಬ ಮೂರ್ಖ ‘‘ಹಿಂದೂ ಹುಡುಗರು ಅನ್ಯ ಧರ್ಮದ ಹೆಣ್ಣುಮಕ್ಕಳನ್ನು ಲವ್ ಮಾಡಿ ಮದುವೆ ಮಾಡಿಕೊಳ್ಳಿ’’ ಎಂದು ಕರೆ ನೀಡುವಷ್ಟರಮಟ್ಟಿಗೆ ಈ ಬಿಜೆಪಿ ನಾಯಕರು ಕುಲಗೆಟ್ಟು ಹೋಗಿದ್ದಾರೆ. ಇದೇ ಮಾತನ್ನು ಒಬ್ಬ ಮುಸ್ಲಿಮ್ ನಾಯಕ ಹೇಳಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು?
ನ್ಯಾ.ರಾಜೇಂದ್ರ ಸಾಚಾರ ಸಮಿತಿ ಮತ್ತು ನ್ಯಾ.ರಂಗನಾಥ ಮಿಶ್ರಾ ಆಯೋಗದ ವರದಿ ಓದಿದರೆ ಮುಸ್ಲಿಮರ ಸ್ಥಿತಿಗತಿ ಅರ್ಥವಾಗುತ್ತದೆ. ಅದನ್ನು ಸರಕಾರವಾಗಲೀ ಅಥವಾ ಈ ಬಿಜೆಪಿ ನಾಯಕರಾಗಲೀ ಓದಲು ತಯಾರಿಲ್ಲ. ದೇಶದಲ್ಲಿ ಮುಸ್ಲಿಮರು ಬಹುತೇಕ ಎಲ್ಲಾ ರೀತಿಯ ಶ್ರಮದ ಕೆಲಸಗಳನ್ನು ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಕುಟುಂಬವನ್ನು ಸ್ವಾಭಿಮಾನದಿಂದ ಸಲಹುತ್ತಿದ್ದಾರೆ. ಆದರೂ ಬಿಜೆಪಿ ನಾಯಕರಿಂದ ಪದೇ ಪದೇ ಅವಮಾನ, ಹಿಂಸೆಗೊಳಗಾಗಬೇಕಾದ ಅನಿವಾರ್ಯತೆ ಇದೆ. ದೇಶದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮ್ ಸಮುದಾಯದ ಜನಸಂಖ್ಯೆ ಇದೆ. ಎಲ್ಲಾ ಜಾತಿ, ಧರ್ಮದ ಜನರಿಗೆ ಮುಸ್ಲಿಮರು ಮತ ನೀಡುತ್ತಾರೆ, ಆದರೂ ಅವರ ರಕ್ಷಣೆಗೆ ಯಾವೊಬ್ಬ ಜಾತ್ಯತೀತ ನಾಯಕರೂ ಬರುವುದಿಲ್ಲ, ಕಷ್ಟದ ಸಮಯದಲ್ಲಿ ಬೆಂಬಲ ನೀಡುವುದಿಲ್ಲ, ಇಂತಹ ರಾಜಕೀಯ ಸ್ಥಿತಿಯಲ್ಲಿ ಮುಸ್ಲಿಮರು ಬದುಕುತ್ತಿದ್ದಾರೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯೂ ಮಾತನಾಡಲೇಬೇಕಾದ ವಿಷಯ. ಮುಸ್ಲಿಮರ ಬದುಕನ್ನೇ ಅವಮಾನ ಮಾಡಲು ನಾಮುಂದು ತಾಮುಂದು ಎಂದು ಬರುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಮಾಜವೇ ವಿಚಾರ ಮಾಡಬೇಕು.