ದೇಶದಲ್ಲಿ ಬಡತನ ತಗ್ಗುತ್ತಿದೆ ಎಂಬುದು ಮತ್ತೊಂದು ಸುಳ್ಳು ಪ್ರಚಾರವೇ?
Photo: PTI
ಕಳೆದ 9 ವರ್ಷಗಳಲ್ಲಿ ದೇಶದಲ್ಲಿನ ಸುಮಾರು 25 ಕೋಟಿ ಮಂದಿ ಬಡತನದಿಂದ ಮುಕ್ತರಾಗಿದ್ದಾರೆ ಎಂದು ನೀತಿ ಆಯೋಗ ಹೇಳಿದೆ. ರಾಷ್ಟ್ರೀಯ ಬಹು ಆಯಾಮಗಳ ಬಡತನ ಸೂಚ್ಯಂಕ (ಎನ್ಎಂಪಿಐ) ಆಧರಿತ ನೀತಿ ಆಯೋಗದ ವರದಿಯ ಪ್ರಕಾರ, 2013-14ರಲ್ಲಿ ದೇಶದಲ್ಲಿ ಬಹು ಆಯಾಮದ ಬಡತನ ಶೇ.29.17ರಷ್ಟಿತ್ತು. ಇದು 2022-23ರಲ್ಲಿ ಶೇ.11.28ಕ್ಕೆ ಇಳಿದಿದೆ. ಇದರೊಂದಿಗೆ, 2013-14ರಿಂದ 2022-23ರವರೆಗಿನ 9 ವರ್ಷಗಳಲ್ಲಿ 24.82 ಕೋಟಿ ಜನರು ಬಹು ಆಯಾಮಗಳ ಬಡತನದಿಂದ ಹೊರಬಂದಿದ್ದಾರೆ.
ಬಡತನದಿಂದ ಹೊರಬಂದಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶ ಮುಂಚೂಣಿಯಲ್ಲಿವೆ. ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದ್ದು, ಇಲ್ಲಿ 5.94 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಬಿಹಾರ ದ್ವಿತೀಯ ಸ್ಥಾನದಲ್ಲಿದ್ದು, 3.77 ಕೋಟಿ ಹಾಗೂ ನಂತರದ ಶ್ರೇಯಾಂಕದಲ್ಲಿ ಮಧ್ಯಪ್ರದೇಶವಿದ್ದು ಇಲ್ಲಿ 2.30 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ.
ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಹೇಳುವ ಪ್ರಕಾರ, ಕಳೆದ 9 ವರ್ಷಗಳಲ್ಲಿ ವಾರ್ಷಿಕವಾಗಿ 2.75 ಕೋಟಿ ಜನರು ಬಡತನದಿಂದ ಪಾರಾಗಿದ್ದಾರೆ. ಸರಕಾರ ಬಹು ಆಯಾಮಗಳ ಬಡತನವನ್ನು ಶೇ.1ಕ್ಕಿಂತ ಕೆಳತರುವ ಗುರಿ ಇಟ್ಟುಕೊಂಡಿದೆ.
ಈ ವರದಿಯ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್ ಮಾಡಿರುವುದನ್ನು ಗಮನಿಸಬೇಕು. ‘‘ಇದು ನಮ್ಮ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಪ್ರತಿಯೊಬ್ಬ ಭಾರತೀಯನ ಭವಿಷ್ಯವನ್ನು ಉತ್ತಮಪಡಿಸಲು ಕೇಂದ್ರ ಸರಕಾರ ಬದ್ಧವಾಗಿದೆ’’ ಎಂದು ಮೋದಿ ಹೇಳಿದ್ದಾರೆ.
ನೀತಿ ಆಯೋಗದ ಈ ಕಥೆಯನ್ನು ಸೂಕ್ಷ್ಮವಾಗಿ ಗಮನಿಸುವುದಕ್ಕೆ ಮೊದಲು, ಏನಿದು ಬಹು ಆಯಾಮಗಳ ಬಡತನ ಎಂಬುದನ್ನು ನೋಡಬೇಕು. ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕ ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಈ ಮೂರು ಸಮಾನ ಮಟ್ಟದ ಆಯಾಮಗಳಲ್ಲಿ ಏಕಕಾಲಿಕ ಕೊರತೆಯನ್ನು ಅಳೆಯುತ್ತದೆ. ಇವುಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ ಜೋಡಿಸಲಾಗಿರುವ 12 ಸೂಚಕಗಳು ಪ್ರತಿನಿಧಿಸುತ್ತವೆ.
ಅವೆಂದರೆ, ಮೂರು ಆರೋಗ್ಯ ಸೂಚಕಗಳು - ಪೌಷ್ಟಿಕಾಂಶ, ಮಕ್ಕಳ ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ; ಎರಡು ಶಿಕ್ಷಣ ಸೂಚಕಗಳು - ಶಾಲಾ ಶಿಕ್ಷಣದ ವರ್ಷಗಳು, ಶಾಲಾ ಹಾಜರಾತಿ; ಏಳು ಗುಣಮಟ್ಟದ ಜೀವನ ಸೂಚಕಗಳು - ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು.
ಆದರೆ ಇಲ್ಲಿರುವ ಪ್ರಶ್ನೆ ಏನೆಂದರೆ, ಇದನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬುದು. ನೋಡುತ್ತ ಹೋದರೆ, ಕಳೆದ 9 ವರ್ಷಗಳಲ್ಲಿ 25 ಕೋಟಿ ಮಂದಿ ಬಡತನದಿಂದ ಹೊರಬಂದಿದ್ದಾರೆಂಬ ನೀತಿ ಆಯೋಗದ ವಾದದಲ್ಲಿ ಪೂರ್ತಿ ಸುಳ್ಳುಗಳೇ ಇವೆಯಲ್ಲವೆ ಎಂಬುದು ತಿಳಿಯುತ್ತದೆ. 2014ರಿಂದ 2022ರವರೆಗಿನ 8 ವರ್ಷಗಳಲ್ಲಿ ಬಳಕೆಯ ವೆಚ್ಚದ ಸಮೀಕ್ಷೆಗಳನ್ನೇ ಮಾಡಿರದಿದ್ದರೂ, ಬಹು ಆಯಾಮಗಳ ಬಡತನ ತಗ್ಗಿದೆ ಎಂದು ಹೇಳುತ್ತಿರುವುದು ಸಂಪೂರ್ಣ ರಾಜಕೀಯ ತಂತ್ರಗಾರಿಕೆಯ ಉದ್ದೇಶದ್ದಾಗಿದೆ ಎನ್ನುತ್ತಿದ್ದಾರೆ ಪರಿಣಿತರು.
ಬಡತನ ತಗ್ಗುತ್ತಿದೆ ಎಂದು ಹೇಳಲು ನೀತಿ ಆಯೋಗ ಬಳಸಿಕೊಂಡಿರುವುದು 2005-2006ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(ಎನ್ಎಫ್ಎಚ್ಎಸ್)ಯ ವರದಿ 3ರ ಅಂಕಿಅಂಶಗಳನ್ನು. 2015-16ರ ಎನ್ಎಫ್ಎಚ್ಎಸ್-4 ವರದಿ 2014ರಿಂದ 2016ರವರೆಗೆ ಅನ್ವಯಿಸುತ್ತದೆ ಎಂದು ಅದು ಹೇಳಿಕೊಂಡಿದೆ. ಅಂದರೆ, ಬಹು ಆಯಾಮಗಳ ಬಡತನ ಅಳೆಯಲು ಬಳಸಲಾಗುವ 12 ಸೂಚಕಗಳಿಗೆ ಪ್ರತೀ ವರ್ಷದ ಅಂಕಿಅಂಶಗಳೇ ಇಲ್ಲ. ಯುಪಿಎ ಸರಕಾರದ ಅವಧಿಯ 2005-2006ರಲ್ಲಿನ ಬೆಳವಣಿಗೆ ದರಗಳನ್ನು ಎನ್ಡಿಎ ಅವಧಿಯ 2015-2016ರ ಸ್ಥಿತಿಗೆ ಅನ್ವಯಿಸಿ 12 ಸೂಚಕಗಳಲ್ಲಿನ ಸುಧಾರಣಾ ದರಗಳನ್ನು ನೀತಿ ಆಯೋಗ ಬರೀ ಊಹೆ ಮಾಡಿದೆ ಅಷ್ಟೆ.
ಇದನ್ನು ನಂಬುವುದು ಸಾಧ್ಯವೇ? ಅದೂ ಈ 9 ವರ್ಷಗಳ ಜಿಡಿಪಿ ಬೆಳವಣಿಗೆಯ ದರ ವರ್ಷಕ್ಕೆ ಶೇ.5.7ಕ್ಕೆ ಇಳಿದಿರುವಾಗ, ಸುಧಾರಣಾ ದರಗಳ ಇಂಥದೊಂದು ಊಹೆ ಸಾಧ್ಯವೆ? ಊಹೆ ತೀರಾ ತಪ್ಪಾಗಲಾರದು ಎಂದೇ ಅಂದುಕೊಂಡರೂ, ನೀತಿ ಆಯೋಗ ಇಲ್ಲಿ ಅಂಕಿಅಂಶಗಳನ್ನು ಅನುಸರಿಸುವ ಕ್ರಮವನ್ನು ಗಮನಿಸಿದರೆ ಮತ್ತೆ ಅನುಮಾನ ಮೂಡದೇ ಇರುವುದಿಲ್ಲ. ನೀತಿ ಆಯೋಗ 2019 ಮತ್ತು 2021ರ ಎನ್ಎಫ್ಎಚ್ಎಸ್-5ರ ಡೇಟಾವನ್ನು 2021ರ ನಂತರದ, ಅಂದರೆ 2022 ಮತ್ತು 2023ರ ಸ್ಥಿತಿಯನ್ನು ತೋರಿಸಲು ಬಳಸಿದೆ. ನಡುವೆ 2020ರ ವರದಿ ಇಲ್ಲ. ಕೋವಿಡ್ ಕಾರಣದಿಂದಾಗಿ 22 ರಾಜ್ಯಗಳಲ್ಲಿ ದತ್ತಾಂಶ ಸಂಗ್ರಹಣೆಯನ್ನು ನಿಲ್ಲಿಸಿದ ನಂತರ ಸಮೀಕ್ಷೆ ಸ್ಥಗಿತಗೊಂಡಿತ್ತು. ಇದರರ್ಥ ಏನೆಂದರೆ, ಕೋವಿಡ್ ನಂತರದ ಎರಡು ವರ್ಷಗಳವರೆಗಿನ ಸ್ಥಿತಿ ವಿವರಿಸಲು ಮತ್ತೆ ಅಂದಾಜಿನ ಮೊರೆ ಹೋಗಲಾಗಿದೆ. ಅದಕ್ಕಾಗಿ ಕೋವಿಡ್ ಕಾಲದ್ದಲ್ಲದ ಸುಧಾರಣಾ ದರಗಳನ್ನು ಈ ವರ್ಷಗಳಿಗೆ ಅನ್ವಯಿಸಿ ಊಹೆ ಮಾಡಲಾಗಿದೆ. ಹಾಗಾಗಿ, ಇದು ಬರೀ ಸಮರ್ಥಿಸಿಕೊಳ್ಳುವ ಕೆಲಸವೇ ಅಥವಾ ನಂಬಲರ್ಹವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ.
ಬಹು ಆಯಾಮಗಳ ಬಡತನ ಸೂಚ್ಯಂಕದ 12 ಸೂಚಕಗಳ ಮೇಲೆ ಕೋವಿಡ್ ಪರಿಣಾಮವೇನು ಎಂಬುದನ್ನು ಗಮನಿಸಬೇಕು. ಮೊದಲಿಗೆ ಶಿಕ್ಷಣ ಸೂಚಕಗಳಾದ ಶಾಲಾ ಹಾಜರಾತಿ ಮತ್ತು ಶಾಲಾ ಶಿಕ್ಷಣದ ವರ್ಷಗಳು.
ಕೋವಿಡ್ ಸಮಯದಲ್ಲಿ ಮಕ್ಕಳು ಎರಡು ವರ್ಷ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ಎರಡು ವರ್ಷಗಳಲ್ಲಿ ಯಾವುದೇ ಹಾಜರಾತಿ ಇಲ್ಲವಾಯಿತು. ಅಲ್ಲದೆ ಅದು ಅವರ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಿದ್ದು ಆ ಎರಡು ವರ್ಷ ಮಾತ್ರವಲ್ಲ. ಆನಂತರವೂ ಅದರ ಪ್ರತಿಕೂಲ ಪರಿಣಾಮಗಳು ಅವರ ಶಿಕ್ಷಣದ ಮೇಲೆ ಆದವು. ಕೋವಿಡ್ ನಂತರದ ಎರಡು ವರ್ಷಗಳ ಸ್ಥಿತಿಯ ಬಗೆಗಿನ ಸುಧಾರಣಾ ದರವನ್ನು ನಿರ್ಧರಿಸುವಾಗ, ಕೋವಿಡ್ನ ಸಂಭಾವ್ಯ ದೀರ್ಘಕಾಲೀನ ಪರಿಣಾಮಗಳನ್ನು ನಿರ್ಲಕ್ಷಿಸುವುದು ಹೇಗೆ ಸಾಧ್ಯ? ಆದರೆ, ನೀತಿ ಆಯೋಗದ ಡೇಟಾ ಅದನ್ನು ನಿರ್ಲಕ್ಷಿಸಿದೆ.
ಇನ್ನು ಆರೋಗ್ಯ ಸೂಚಕಗಳ ವಿಚಾರದಲ್ಲಿಯೂ ಅಷ್ಟೆ. ಇಲ್ಲಿಯೂ ನೀತಿ ಆಯೋಗದ ತರ್ಕ ದೋಷಪೂರಿತವಾಗಿದೆ. ಕೋವಿಡ್ ಸಮಯದಲ್ಲಿ ಮರಣ ಪ್ರಮಾಣ ತೀವ್ರ ಗತಿಯಲ್ಲಿ ಹೆಚ್ಚಾಯಿತು. ಜನರ ಆರೋಗ್ಯ ಹದಗೆಟ್ಟಿತು. ಹಾಗಿರುವಾಗ ಕೋವಿಡ್ ಮುಂಚಿನ ಸುಧಾರಣಾ ದರಗಳನ್ನು ಕೋವಿಡ್ ನಂತರದ ತಕ್ಷಣದ ಅವಧಿಗೆ, ಕೋವಿಡ್ ಪರಿಣಾಮಗಳು ಆರೋಗ್ಯದ ಮೇಲೆ ಇನ್ನೂ ಇದ್ದೇ ಇರುವಾಗ ಹೇಗೆ ಅನ್ವಯಿಸಲು ಸಾಧ್ಯ? ಮೂರು ಆರೋಗ್ಯ ಸೂಚಕಗಳಾದ ಪೌಷ್ಟಿಕಾಂಶ, ಮಕ್ಕಳು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ - ಈ ಎಲ್ಲದರ ಮೇಲೆಯೂ ಕೋವಿಡ್ ಪ್ರತಿಕೂಲ ಪರಿಣಾಮ ಬೀರಿದೆ. ಆರೋಗ್ಯದ ಮೇಲೆ ವೈರಸ್ ಪರಿಣಾಮಗಳನ್ನು ಜನರು ಇನ್ನೂ ಅನುಭವಿಸುತ್ತಿದ್ದಾರೆ. ಹೀಗಿರುವಾಗಲೂ ಬಹು ಆಯಾಮದ ಬಡತನ ಸೂಚಕಗಳ ಮೇಲೆ ಇದರ ಪರಿಣಾಮವನ್ನು ಅಲಕ್ಷಿಸಿ, ಕೋವಿಡ್ ಹಿಂದಿನ ಸುಧಾರಣಾ ದರವನ್ನು ಹೇಗೆ ಅನ್ವಯಿಸಲಾಯಿತು?
ಬಡತನದಿಂದ ದೊಡ್ಡ ಪ್ರಮಾಣದಲ್ಲಿ ಹೊರಬರುವಲ್ಲಿ ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ರಾಜ್ಯಗಳು ಮುಂದಿವೆ ಎಂದು ನೀತಿ ಆಯೋಗ ಹೇಳುತ್ತಿರುವುದಂತೂ ಇನ್ನೂ ತಮಾಷೆಯಾಗಿದೆ. ಈ ಮೂರೂ ರಾಜ್ಯಗಳು ದೇಶದ ಅತ್ಯಂತ ಬಡ ರಾಜ್ಯಗಳು. ಮಾತ್ರವಲ್ಲದೆ, ಅತ್ಯಂತ ಕೆಟ್ಟ ಮಟ್ಟದಲ್ಲಿ ಕೋವಿಡ್ ಪೀಡಿತವಾಗಿದ್ದ ರಾಜ್ಯಗಳು. ಆದರೆ ಬಹು ಆಯಾಮದ ಬಡತನದಿಂದ ಹೊರಬರುವಲ್ಲಿ ಆ ರಾಜ್ಯಗಳೇ ಮುಂಚೂಣಿಯಲ್ಲಿವೆ ಎಂದು ಹೇಳಲು ನೀತಿ ಆಯೋಗ ಒಂದಿಷ್ಟೂ ಹಿಂಜರಿಯುವುದಿಲ್ಲ.
ಇನ್ನು ಜೀವನ ಮಟ್ಟ ಸೂಚಕಗಳಾದ ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳ ವಿಚಾರ ನೋಡಿದರೆ, ಕೋವಿಡ್ ನಂತರದ ಅವಧಿಯಲ್ಲಿ ಕೋವಿಡ್ ಮುಂಚಿನ ಮಟ್ಟಕ್ಕೆ ಇವುಗಳು ಚೇತರಿಸಿಕೊಂಡಿವೆ ಎನ್ನಲಾಗುತ್ತಿದ್ದರೂ, ಎದೆ ತಟ್ಟಿ ಹೇಳಿಕೊಳ್ಳುವಂಥ ಸ್ಥಿತಿಯೇನೂ ಇಲ್ಲ.
ಕೋವಿಡ್ ಕಾಲದಲ್ಲಿ ಮತ್ತು ನಂತರವೂ ಆರ್ಥಿಕ ಬಲವರ್ಧನೆಗೆ ಸರಕಾರ ಒತ್ತುಕೊಟ್ಟಿದೆ ಮತ್ತು ವೆಚ್ಚವನ್ನು ನಿಯಂತ್ರಿಸುತ್ತಲೇ ಬರಲಾಗುತ್ತಿದೆ. ಆರೋಗ್ಯ ವೆಚ್ಚ ಜಿಡಿಪಿಯ ಶೇ.1.3 ಇದೆ. ರಾಷ್ಟ್ರೀಯ ಆರೋಗ್ಯ ನೀತಿ 2017ರಲ್ಲಿ ಇದನ್ನು 2025ರ ವೇಳೆಗೆ ಜಿಡಿಪಿಯ ಶೇ.2.5ರ ಪ್ರಮಾಣಕ್ಕೆ ಏರಿಸುವ ಉದ್ದೇಶ ವ್ಯಕ್ತಪಡಿಸಿದ್ದರೂ, ಅದಕ್ಕಿನ್ನು ಒಂದು ವರ್ಷವಷ್ಟೇ ಇರುವಾಗಲೂ ಸ್ಥಿತಿ ಮಾತ್ರ ಹಾಗೆಯೇ ಇದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಾರ್ವಜನಿಕ ಶಿಕ್ಷಣ ವೆಚ್ಚಕ್ಕಾಗಿ ಜಿಡಿಪಿಯ ಶೇ.6ರ ಗುರಿ ಹೊಂದಿದೆ. ಆದರೆ ವಾಸ್ತವ ಮಾತ್ರ ವ್ಯತಿರಿಕ್ತವಾಗಿದೆ. ಸಾರ್ವಜನಿಕ ಶಿಕ್ಷಣ ವೆಚ್ಚ 2014ಕ್ಕೆ ಮೊದಲು ಜಿಡಿಪಿಯ ಶೇ.4 ಇದ್ದದ್ದು ಈಗ ಶೇ.2.9ಕ್ಕೆ ಕುಸಿದಿದೆ. ಆರ್ಥಿಕ ಬಲವರ್ಧನೆ ಎನ್ನುವುದು ಜೀವನ ಮಟ್ಟ ಸೂಚಕಗಳ ಮೇಲೆ ಕೆಡುಕನ್ನೇ ಉಂಟು ಮಾಡುತ್ತದೆ. ಸಾರ್ವಜನಿಕ ವೆಚ್ಚವೇ ಮೂಲಭೂತ ಸೇವೆಗಳ ವಿಸ್ತರಣೆಗೆ ಆಧಾರ ಮತ್ತು ಇದನ್ನು ಅವಲಂಬಿಸಿಯೇ ಬಹು ಆಯಾಮಗಳ ಬಡತನ ಸೂಚಕಗಳ ಸುಧಾರಣೆ ಆಗಬೇಕು. ಆದರೆ ಇಲ್ಲಿ ಯಾವುದೂ ಹಾಗಾಗಿಲ್ಲ. ನೀತಿ ಆಯೋಗ ಮಾತ್ರ ಈ ಎಲ್ಲ ಸೂಚಕಗಳು 2022 ಮತ್ತು 2023ರ ಆರ್ಥಿಕ ವರ್ಷದಲ್ಲಿ ಕೋವಿಡ್ ನಂತರದ ಸುಧಾರಣೆಯನ್ನು ಹೊಂದಿದ್ದವು ಎಂದೇ ಹೇಳಿಕೊಳ್ಳುತ್ತಿದೆ.
ಈ ಎಲ್ಲ ಸ್ಥಿತಿಯನ್ನೂ ವಿಶ್ಲೇಷಿಸುವ ಪರಿಣಿತರು ಬಹಳ ಮುಖ್ಯವಾದ ಒಂದು ಅಂಶವನ್ನು ಗಮನಿಸುತ್ತಾರೆ. ಏನೆಂದರೆ, ಸರಕಾರ ಕಳೆದ ಹಲವು ವರ್ಷಗಳಿಂದ ತನಗೆ ಅನುಕೂಲವಾಗುವ ರೀತಿಯಲ್ಲಿ ಪುರಾವೆಗಳನ್ನು ಸೃಷ್ಟಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದೆ ಎಂಬುದು. ಇದು ನಿಜಕ್ಕೂ ದುರದೃಷ್ಟಕರ ಎಂಬುದು ತಜ್ಞರ ಕಳವಳ. ಬಹು ಆಯಾಮಗಳ ಬಡತನ ಸೂಚ್ಯಂಕವನ್ನು ದೇಶದ ಬಡತನ ಸೂಚಕವನ್ನಾಗಿ ಮಾಡುವುದರ ಹಿಂದೆಯೂ ಅಂಥದೇ ಒಂದು ಉದ್ದೇಶವಿದೆ. 2014ರಿಂದ 2022ರವರೆಗಿನ 8 ವರ್ಷಗಳಲ್ಲಿ ಬಳಕೆಯ ವೆಚ್ಚದ ಸಮೀಕ್ಷೆಗಳನ್ನೇ ಮಾಡಲಾಗಿಲ್ಲ. ಹಾಗಿದ್ದೂ ಎಲ್ಲವೂ ಚೆನ್ನಾಗಿದೆ, ಬಡತನ ಇಲ್ಲವಾಗುತ್ತಿದೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಎಂಪಿಐ ಅನ್ನು ಮುಂದಿಡುವ ಮೂಲಕ ಮಾಡಲಾಗುತ್ತಿದೆ. ಇದು ರಾಜಕೀಯ ತಂತ್ರದ ಭಾಗವಾಗಿದೆ ಎಂದೇ ತಜ್ಞರು ಹೇಳುತ್ತಿದ್ದಾರೆ.
ಸರಕಾರಿ ಅರ್ಥಶಾಸ್ತ್ರಜ್ಞರಂತೂ ಭಾರತದಲ್ಲಿ ಬಳಕೆಯ ಬಡತನ ದೇಶದ ಜನಸಂಖ್ಯೆಯ ಶೇ.1ಕ್ಕೆ ಕುಸಿದಿದೆ ಎಂದು ದೋಷಪೂರಿತ ವಿಧಾನದ ಆಧಾರದ ಮೇಲೆ ಹೇಳಿದ್ದಾರೆ ಎನ್ನಲಾಗುತ್ತಿದೆ. ಗಮನಿಸಬೇಕಿರುವ ಒಂದು ವಿಚಾರವೆಂದರೆ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿನ ಬಳಕೆಯ ಬಡತನವನ್ನು ಜಗತ್ತಿನಲ್ಲಿ ಯಾರೂ ಬಳಕೆ ವೆಚ್ಚದ ಸಮೀಕ್ಷೆಗೆ ಬದಲಾಗಿ ಖಾಸಗಿ ಬಳಕೆಯ ರಾಷ್ಟ್ರೀಯ ಖಾತೆಗಳ ಅಂದಾಜುಗಳನ್ನು ಬಳಸಿಕೊಂಡು ಲೆಕ್ಕಹಾಕುವುದಿಲ್ಲ. ಆದರೆ ಸರಕಾರ ಮತ್ತು ಸರಕಾರದ ವಕ್ತಾರರಿಗೆ ಮಾತ್ರ ಈ ದಾಕ್ಷಿಣ್ಯವೇ ಇಲ್ಲವಾಗಿದೆ. ಕಳೆದ 10 ವರ್ಷಗಳಲ್ಲಿ ಬಳಕೆಯ ಬಡತನ ದೇಶದ ಜನಸಂಖ್ಯೆಯ ಶೇ.1ಕ್ಕೆ ಇಳಿದಿದೆ ಎಂದು ಅವರು ನಿರಾಯಾಸವಾಗಿ ಹೇಳಿ ಕೈತೊಳೆದುಕೊಳ್ಳುತ್ತಾರೆ.
ನೀತಿ ಆಯೋಗದ ಈ ಬಹು ಆಯಾಮಗಳ ಬಡತನದ ಅಂದಾಜಿನ ಅತ್ಯಂತ ಹೊಸದೊಂದು ಕಥೆ ಕೂಡ ಸರಕಾರಿ ಪ್ರಾಯೋಜಿತವೇ ಆಗಿದೆ. ಇದು ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ಸರಕಾರದ ಹೆಗ್ಗಳಿಕೆಯನ್ನು ಬಿಂಬಿಸುವ ದಿಕ್ಕಿನಲ್ಲಿಯ ಮತ್ತೊಂದು ಪ್ರಯತ್ನ ಮಾತ್ರ ಎಂಬುದು ತಜ್ಞರ ವಾದ.
ಈಚೆಗಷ್ಟೇ ಜಾಗತಿಕ ಹಸಿವು ಸೂಚ್ಯಂಕ ವರದಿ ಪ್ರಕಟವಾಗಿತ್ತು. 125 ದೇಶಗಳಿಗೆ ಸಂಬಂಧಿಸಿದ ಜಾಗತಿಕ ಹಸಿವು ಸೂಚ್ಯಂಕದ ವರದಿ ಪ್ರಕಾರ, ಭಾರತ 111ನೇ ಸ್ಥಾನದಲ್ಲಿದೆ. ಭಾರತದ ನೆರೆಯ ಬಡ ರಾಷ್ಟ್ರಗಳೇ ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಪಾಕಿಸ್ತಾನ 102ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 81, ನೇಪಾಳ 69 ಹಾಗೂ ಶ್ರೀಲಂಕಾ 60ನೇ ಸ್ಥಾನದಲ್ಲಿವೆ. ಆ ವರದಿಯೇ ಸರಿಯಿಲ್ಲ ಎಂದಿತು ಸರಕಾರ. ಆದರೆ ಆ ಬಳಿಕ, ಸರಕಾರದೊಂದಿಗೇ ಸೇರಿ ಕೆಲಸ ಮಾಡುವ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯೇ (ಎಫ್ಎಒ) ಮತ್ತೊಂದು ಕಹಿ ಸತ್ಯವನ್ನು ಜಗತ್ತಿನ ಮುಂದಿಟ್ಟಿತು. ಅದರ ಪ್ರಕಾರ, ಈ ವಿಶ್ವಗುರು ದೇಶದ ಶೇ.74.1ರಷ್ಟು ಜನರಿಗೆ ಪೌಷ್ಟಿಕ ಆಹಾರ ಸಿಗುವುದೇ ಅಸಾಧ್ಯವಾಗಿದೆ. ಆ ವರದಿಯಲ್ಲಿ ಬಹಿರಂಗವಾಗಿರುವ ವಿಷಯಗಳು ತೀರಾ ಆಘಾತಕಾರಿ ಹಾಗೂ ನಾಚಿಕೆಗೇಡಿನದ್ದಾಗಿವೆ. ಭಾರತದಲ್ಲಿನ ಪೌಷ್ಟಿಕ ಆಹಾರದ ಈ ದಯನೀಯ ಸ್ಥಿತಿಯನ್ನು ಗಮನಿಸಿದರೆ, ಪಾಕಿಸ್ತಾನ ಮತ್ತು ನೇಪಾಳ ಹೊರತುಪಡಿಸಿ ಏಶ್ಯದ ಇತರ ಕೆಲ ದೇಶಗಳು ಬಹುಪಾಲು ಮೇಲಿವೆ.
ಆರ್ಥಿಕತೆ ಬಗ್ಗೆ ಬಡಾಯಿ ಕೊಚ್ಚುವ ಮೋದಿ ಸರಕಾರದ ಹುಳುಕುಗಳು ಹೀಗೆ ಬಯಲಾಗುತ್ತಲೇ ಇದ್ದರೂ, ಅದನ್ನೆಲ್ಲ ಮುಚ್ಚಿಹಾಕಲು ಈಗ ನೀತಿ ಆಯೋಗವನ್ನು ಬಳಸಿಕೊಂಡು, ಬಹು ಆಯಾಮಗಳ ಬಡತನದಿಂದ ದೇಶದ 25 ಕೋಟಿ ಜನ ಹೊರಬಂದಿದ್ದಾರೆ ಎಂದು ಬಿಂಬಿಸಲಾಗಿದೆ.
ಮತ್ತೊಂದು ಹೊಸ ಕಥೆ, ಮತ್ತೊಂದು ಹೊಸ ಸುಳ್ಳು ಅಷ್ಟೆ.