ದೇವೇಗೌಡರ ಈ ಮಾತಿನಲ್ಲಿ ಸತ್ಯಾಂಶ ಇದೆಯೇ?
ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ವರ್ಗೀಕರಣಗೊಳಿಸಿ ಜಾರಿಗೊಳಿಸಿದ ಬಗ್ಗೆ ಪದೇ ಪದೇ ಅಸ್ಪಷ್ಟ/ಅರ್ಧ ಸತ್ಯವನ್ನು ಜನರಿಗೆ ಹೇಳಲಾಗುತ್ತಿದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಇಲ್ಲಿಯವರೆಗೆ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದೇ ನಾನು ಎಂದು ಹೇಳುತ್ತಿದ್ದರು, ಆದರೆ ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಮಾತನಾಡುತ್ತ ಮುಸ್ಲಿಮರಿಗೆ ಶೇ. ೪ ಮೀಸಲಾತಿಯನ್ನು ಒಕ್ಕಲಿಗ ರಿಂದ ಕಿತ್ತು ಕೊಟ್ಟಿದ್ದೇನೆ ಎಂದು ಹೇಳಿರುವುದು ಆಶ್ಚರ್ಯ ಕರವಾಗಿದ್ದಲ್ಲದೆ, ಅತ್ಯಂತ ಸುಳ್ಳಿನಿಂದ ಕೂಡಿದೆ. ಹಾಗೆ ನೋಡಿದರೆ ಎಚ್.ಡಿ. ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದೇ ಮುಸ್ಲಿಮರು, ೧೯೯೨ರಲ್ಲಿ ಬಾಬರಿ ಮಸೀದಿ ದ್ವಂಸಗೊಂಡ ನಂತರ ಕೇಂದ್ರದ ಕಾಂಗ್ರೆಸ್ ಸರಕಾರ ಬಾಬರಿ ಮಸೀದಿ ಉಳಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಮುನಿಸಿಕೊಂಡಿದ್ದ ಮುಸ್ಲಿಮ್ ಸಮಾಜ ರಾಜ್ಯದಲ್ಲಿ ನಡೆದ ೧೯೯೪ರ ವಿಧಾನಸಾಭಾ ಚುನಾವಣೆಯಲ್ಲಿ ಸಾರಾಸಗಟಾಗಿ ಅಂದಿನ ಜನತಾದಳ ಪಕ್ಷಕ್ಕೆ ಮತದಾನ ಮಾಡಿದ್ದರಿಂದಲೇ ಅಂದು ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದು, ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮುಸ್ಲಿಮ್ ಅಭ್ಯರ್ಥಿಗಳಿಗೂ ಮುಸ್ಲಿಮರು ಮತ ನೀಡದೆ, ಜನತಾದಳ ಅಭ್ಯರ್ಥಿಗಳಿಗೆ ಮತ ನೀಡಿದ್ದರು, ಮುಸ್ಲಿಮರು ನಾವೇ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ಎಂದು ಎಲ್ಲಿಯೂ ಹೇಳಿಲ್ಲ, ಹೇಳುವುದೂ ಇಲ್ಲ, ಆದರೆ ದೇವೇಗೌಡರು ಪದೇ ಪದೇ ಮುಸ್ಲಿಮರಿಗೆ ನಾನೇ ಮೀಸಲಾತಿ ನೀಡಿದ್ದು ಎಂದು ಹೇಳುತ್ತ ಹಂಗಿಸುವುದು ಅವರ ಹಿರಿತನಕ್ಕೆ ತಕ್ಕ ಮಾತಲ್ಲ.
ಕರ್ನಾಟಕದಲ್ಲಿ ನ್ಯಾ.ಒ.ಚಿನ್ನಪ್ಪರೆಡ್ಡಿ ನೇತೃತ್ವದ ಮೂರನೇ ಹಿಂದುಳಿದ ವರ್ಗಗಳ ಆಯೋಗವು ೦೭-೦೪-೧೯೯೦ರಂದು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ಕುರಿತು ಮಾಡಿರುವ ಅಧ್ಯಯನ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಅಲ್ಲದೆ ಮಂಡಲ ಆಯೋಗದ ವರದಿ ಅನುಷ್ಠಾನಕ್ಕಾಗಿ ಸರ್ವೋಚ್ಚ ನ್ಯಾಯಾಲಯದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸದರಿ ವರದಿ ಆಧಾರದಲ್ಲಿ ಅಂದಿನ ವೀರಪ್ಪ ಮೊಯ್ಲಿ ನೇತೃತ್ವದ ಸರಕಾರ ದಿನಾಂಕ ೨೫-೦೭-೧೯೯೪ರಂದು ಹಿಂದುಳಿದ ವರ್ಗಗಳ ಮೀಸಲಾತಿ ವರ್ಗೀಕರಣ ಮಾಡಿ ಆದೇಶಿಸಿತ್ತು. ಸದರಿ ಮೀಸಲಾತಿ ಆದೇಶದಲ್ಲಿ ಪ್ರವರ್ಗ-೧ಕ್ಕೆ ಶೇ.೭, ಪ್ರವರ್ಗ-೨ಎಗೆ ಶೇ. ೨೦, ಪ್ರವರ್ಗ-೨ಬಿಗೆ ಶೇ. ೬, ಪ್ರವರ್ಗ-೩ಎಗೆ ಶೇ. ೧೧ ಹಾಗೂ ಪ್ರವರ್ಗ-೩ಬಿಗೆ ಶೇ. ೫ರಷ್ಟು ಮೀಸಲಾತಿ ನೀಡಿ, ಒಟ್ಟಾರೆಯಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಶೇ. ೫೭ ಎಂದು ಆದೇಶಿಲಾಗಿತ್ತು. ಅಂದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಶೇ. ೧೮ ಸೇರಿ ರಾಜ್ಯದಲ್ಲಿ ಒಟ್ಟಾರೆಯಾಗಿ ಮೀಸಲಾತಿ ಪ್ರಮಾಣ ಶೇ. ೭೫ರಷ್ಟಾಗಿತ್ತು. ಇದರಲ್ಲಿ ಒಕ್ಕಲಿಗರು ಪ್ರವರ್ಗ-೩ಎ ಅಡಿಯಲ್ಲಿ ಮಾಡಲಾಗಿರುವ ಪಟ್ಟಿಯಲ್ಲಿ ಇದ್ದು, ಮುಸ್ಲಿಮರು ಪ್ರವರ್ಗ-೨ಬಿ ಅಡಿಯಲ್ಲಿ ಮಾಡಲಾಗಿರುವ ಪಟ್ಟಿಯಲ್ಲಿ ಇದ್ದರು.
ಸದರಿ ಮೀಸಲಾತಿ ಆದೇಶ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗಿ, ಇಂದ್ರಾ ಸಹಾನಿ ವರ್ಸಸ್ ಯುನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.೫೦ ದಾಟಬಾರದು ಎಂದು ಆದೇಶಿಸಿರುವುದರಿಂದ ರಾಜ್ಯದಲ್ಲಿ ವೀರಪ್ಪ ಮೊಯ್ಲಿ ಸರಕಾರ ಜಾರಿಗೆ ತಂದಿದ್ದ ಶೇ. ೭೫ರ ಮೀಸಲಾತಿ ಪ್ರಮಾಣ ಕಡಿತಗೊಳಿಸಿ ಜನವರಿ ೧೯೯೫ರಲ್ಲಿ ಅಂದಿನ ಜನತಾದಳ ಸರಕಾರದ ನೇತೃತ್ವ ವಹಿಸಿದ್ದ ಎಚ್.ಡಿ. ದೇವೇಗೌಡರವರು ಮೀಸಲಾತಿ ಪ್ರಮಾಣವನ್ನು ಶೇ. ೫೦ರ ಮಿತಿಗೊಳಪಟ್ಟು ಮೀಸಲಾತಿ ವರ್ಗೀಕರಣವನ್ನು ಮರು ಆದೇಶಿಸಿದ್ದರು. ಅದರಲ್ಲಿ ಎಲ್ಲಾ ಪ್ರವರ್ಗಗಳ ಮೀಸಲಾತಿ ಪ್ರಮಾಣ ಕಡಿತಗೊಳಿಸಲಾಗಿದ್ದು, ಯಾರ ಮೀಸಲಾತಿ ಯಾರ ಹೆಗಲಿಗೆ ನೀಡಲಾಗಿದೆ ಎಂದು ಆದೇಶದಲ್ಲಿ ಎಲ್ಲಿಯೂ ಬರೆದಿಲ್ಲ. ಹಾಗಿದ್ದಾಗ ಒಕ್ಕಲಿಗರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಲಾಯಿತು ಎಂದು ಹೇಳಿರುವುದು ಅಪ್ಪಟ ಸುಳ್ಳು. ಆದರೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದು ಮುಸ್ಲಿಮ್ ಮತಗಳು ಎನ್ನುವುದು ಅಪ್ಪಟ ಸತ್ಯ. ಇದು ಅವರು ಮರೆಯದಿದ್ದರೆ ಸಾಕು. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮೀಸಲಾತಿ ಪ್ರಮಾಣ ಒಟ್ಟು ಶೇ. ೫೦ಕ್ಕೆ ಮಿತಿಗೊಳಿಸಿ ಆದೇಶಿಸಿದ್ದು ಜನವರಿ ೧೯೯೫ರಲ್ಲಿ. ಸದರಿ ಆದೇಶದಲ್ಲಿ ಎಲ್ಲಾ ವರ್ಗಗಳಿಗೆ ಮೀಸಲಾತಿ ನೀಡಿದ್ದರೂ ಕೇವಲ ಮುಸ್ಲಿಮರ ಬಗ್ಗೆ ಮಾತ್ರ ದೇವೇಗೌಡರು ಪ್ರಸ್ತಾಪಿಸುವುದು ಯಾವ ಕಾರಣಕ್ಕೆ? ಮುಸ್ಲಿಮರು ಈ ದೇಶದ ಪ್ರಜೆಗಳಲ್ಲವೇ, ಬೇರೆ ದೇಶದ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದಾರೆಯೇ? ಅದರಲ್ಲಿ ಏನು ವಿಶೇಷವಿದೆ.
ಯಾವುದೇ ಜನಪ್ರತಿನಿಧಿ ರಾಜ್ಯದ ಜನರಿಗೆ ನನ್ನಿಂದಲೇ ಆಗಿದೆ, ನಾನೇ ಮಾಡಿದ್ದು ಎಂದು ಹೇಳುವುದು ಸಮರ್ಥನೀಯವಲ್ಲ. ಯಾಕೆಂದರೆ, ಜನತೆ ಮತ ನೀಡಿದ ನಂತರವೇ ಅವರು ಆ ಕೆಲಸ ಮಾಡುವ ಅಧಿಕಾರ ಪಡೆಯುವುದು. ನ್ಯಾ.ಒ.ಚಿನ್ನಪ್ಪರೆಡ್ಡಿ ಆಯೋಗದ ವರದಿಯನ್ವಯ ಮೊದಲಿಗೆ ಮೀಸಲಾತಿ ಜಾರಿಗೆ ತಂದಿದ್ದು ವೀರಪ್ಪ ಮೊಯ್ಲಿಯವರ ಸರಕಾರ. ಆದರೆ, ಇಂದಿಗೂ ವೀರಪ್ಪ ಮೊಯ್ಲಿ ಅವರು ನಾನೇ ಮೀಸಲಾತಿ ಜಾರಿಗೆ ತಂದಿದ್ದು ಎಂದು ಎಲ್ಲಿಯೂ ಹೇಳಿದ್ದು ನಾವು ಕೇಳಿಲ್ಲ. ಹಾಗೆ ನೋಡಿದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವರ್ಗೀಕರಣ ಆದೇಶ ಮಾಡಿ, ಶೇ. ೫೭ರಷ್ಟು ಮೀಸಲಾತಿ ನೀಡಿದ್ದು ವೀರಪ್ಪ ಮೊಯ್ಲಿ ಅವರ ಸರಕಾರವೇ. ಅದು ಅವರ ಜವಾಬ್ದಾರಿಯಾಗಿತ್ತು, ಅವರು ನಿರ್ವಹಣೆ ಮಾಡಿದ್ದಾರೆ. ಒಬ್ಬ ಮುತ್ಸದ್ಧಿ ನಾಯಕನ ರೀತಿ ವೀರಪ್ಪ ಮೊಯ್ಲಿಯವರು ನಡೆದುಕೊಂಡಿದ್ದಾರೆ ಎನ್ನಬಹುದು.
ಆದ್ದರಿಂದ, ಹಿರಿಯರಾದ ದೇವೇಗೌಡರು ಮೀಸಲಾತಿ ಬಗ್ಗೆ ಪ್ರಸ್ತಾಪಿಸುವುದಾದರೆ ಎಲ್ಲಾ ಸಮುದಾಯಗಳಿಗೆ ನೀಡಲಾದ ಮೀಸಲಾತಿ ಬಗ್ಗೆ ಪ್ರಸ್ತಾಪಿಸಲಿ. ಕೇವಲ ಮುಸ್ಲಿಮರನ್ನೇ ಟಾರ್ಗೆಟ್ ಮಾಡಿ ನಾನೇ ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ಎಂದು ಹೇಳುವುದು ಸಮಂಜಸವಲ್ಲ, ಎಲ್ಲರಿಗೂ ನೀಡಿದ ರೀತಿಯಲ್ಲಿಯೇ ಮುಸ್ಲಿಮರಿಗೂ ಮೀಸಲಾತಿ ನೀಡಲಾಗಿದೆ. ನ್ಯಾ.ಒ. ಚಿನ್ನಪ್ಪರೆಡ್ಡಿ ಆಯೋಗ ವರದಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಬಾರದೆಂದು ಎಲ್ಲಿಯೂ ಹೇಳಿಲ್ಲ. ಮುಸ್ಲಿಮರಿಗೂ ಮೀಸಲಾತಿ ನೀಡಬೇಕೆಂದೇ ಹೇಳಿದೆ. ಅಲ್ಲದೆ ಮಂಡಲ ಆಯೋಗದ ವರದಿಯಲ್ಲಿಯೂ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂದು ಹೇಳಲಾಗಿದೆ. ಸಂವಿಧಾನದ ಅನುಚ್ಛೇದ ೧೫(೪) ಹಾಗೂ ೧೬(೪)ರ ಅಡಿಯಲ್ಲಿ ಮೀಸಲಾತಿಯನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಬೇಕೆಂದು ಹೇಳಲಾಗಿದೆ. ವರ್ಗಗಳು ಅಂದರೆ ಜಾತಿ ಅಥವಾ ಧರ್ಮವಲ್ಲ, ಅದು ಒಂದು ಸಮೂಹ. ಅದು ಮುಸ್ಲಿಮರಾಗಬಹುದು ಅಥವಾ ಇನ್ನಾವುದೇ ಹಿಂದುಳಿದ ವರ್ಗಗಳಾಗಬಹುದು. ಅಂತಹ ಸಮೂಹ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದರೆ ಮೀಸಲಾತಿ ನೀಡಬಹುದು. ಸರ್ವೋಚ್ಚ ನ್ಯಾಯಾಲಯವು ಸಹ ಹಲವು ಪ್ರಕರಣಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕುರಿತು ಅಧ್ಯಯನ ಮಾಡಿ ಎಂದು ಸೂಚಿಸಿದೆ. ಅಲ್ಲದೆ ಮುಸ್ಲಿಮರಿಗೆ ಮೀಸಲಾತಿ ನೀಡಲೇಬಾರದೆಂದು ಯಾವ ಪ್ರಕರಣದಲ್ಲಿಯೂ ಹೇಳಿಲ್ಲ. ಅನಗತ್ಯವಾಗಿ ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಾ ಬರಲಾಗಿದೆ. ಇಂದು ಸಹ ಯಾವುದೇ ಆಯೋಗ ರಚನೆ ಮಾಡಿ ಮುಸ್ಲಿಮರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಕುರಿತು ಅಧ್ಯಯನ ಮಾಡಿದಲ್ಲಿ, ಖಂಡಿತವಾಗಿಯೂ ಮುಸ್ಲಿಮರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದೇ ವರದಿ ಬರುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಸರಕಾರಗಳು ಈ ಸಮುದಾಯದ ಬಗ್ಗೆ ವಿಶೇಷ ಕಾಳಜಿ ವಹಿಸಿದಾಗ ಮಾತ್ರ ಸುಧಾರಣೆ ಸಾಧ್ಯವಿದೆ.
ದೇಶದಲ್ಲಿ ನ್ಯಾ.ರಾಜೇಂದ್ರ ಸಾಚಾರ್ ವರದಿಯ ಶಿಫಾರಸಿನಂತೆ ಅಲ್ಪಸಂಖ್ಯಾತ (ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಫಾರ್ಸಿ, ಬುದ್ಧ, ಸಿಖ್) ವಿದ್ಯಾರ್ಥಿಗಳಿಗೆ ಜಾರಿಗೊಳಿಸಲಾದ ವಿದ್ಯಾರ್ಥಿ ವೇತನದಿಂದ ಕಳೆದ ಎರಡು ದಶಕಗಳಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ವಿಶೇಷವಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಸ್ವಲ್ಪ ಪ್ರಮಾಣದಲ್ಲಿ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿ ವೇತನ ಭೌತಿಕ ಗುರಿಯ ಆಧಾರದಲ್ಲಿ ಇದೆ. ಇದನ್ನು ಅಲ್ಪಸಂಖ್ಯಾತ ಸಮುದಾಯದ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶೈಕ್ಷಣಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ. ಇದರ ಬಗ್ಗೆ ರಾಜಕೀಯ ಪಕ್ಷಗಳು, ಸಮಾಜ ಚಿಂತನೆ ಮಾಡಬೇಕಾದ ಅವಶ್ಯಕತೆಯಿದೆ.