ಈ ಮನುಷ್ಯ ವಿರೋಧಿ ನಡೆಗೆ ಕೊನೆಯೇ ಇಲ್ಲವೇ?
ಇದ್ದಕ್ಕಿದ್ದಂತೆ ಒಂದು ಗುಂಪು ಮನೆಯೊಳಗೆ ನುಗ್ಗಿಬಿಡುತ್ತದೆ, ದಾಂಧಲೆ ನಡೆಸುತ್ತದೆ ಎಂಬುದೇ ತೀವ್ರ ಆತಂಕದ ವಿಚಾರ. ದೇಶದಲ್ಲಿ ಅಂತಹ ಆಕ್ರಮಣವನ್ನು ಈಗ ಎದುರಿಸುತ್ತಿರುವ ಅದೆಷ್ಟೋ ಕುಟುಂಬಗಳಿವೆ. ಅವರ ಭಾವನೆಗಳನ್ನು ಕಡೆಗಣಿಸಲಾಗುತ್ತದೆ. ಅವರ ಆಹಾರವನ್ನು ಕಸಿಯಲಾಗುತ್ತದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುವ ಅವರ ಹಕ್ಕನ್ನು ನಿರಾಕರಿಸಲಾಗುತ್ತದೆ. ಒಟ್ಟಾರೆ ಅವರ ನೆಮ್ಮದಿಯ ಬದುಕನ್ನೇ ಒಡೆದು ಹಾಕಲಾಗುತ್ತದೆ.
ಮೋದಿ ಸರಕಾರ ಬಂದ ಬಳಿಕ ಕಳೆದ 10 ವರ್ಷಗಳಿಂದ ಇಂತಹ ದುರಾಕ್ರಮಣ ಅವ್ಯಾಹತವಾಗಿ ನಡೆದೇ ಇದೆ. ಈಗ ಮೋದಿ ಮೂರನೇ ಅವಧಿಯಲ್ಲಿಯೂ ಅದು ಮುಂದುವರಿದಿದೆ.
ಒಡಿಶಾದ ಖೋರ್ಡಾ ಪಟ್ಟಣದಲ್ಲಿ ನಡೆದಿರುವ ಘಟನೆ ನಿಜಕ್ಕೂ ಆತಂಕಕಾರಿ. ಗುಂಪೊಂದು ಮುಸ್ಲಿಮ್ ವ್ಯಕ್ತಿಯೊಬ್ಬರ ಮನೆಯೊಳಗೆ ನುಗ್ಗಿ, ಗೋಮಾಂಸವಿದೆಯೆಂದು ಆಕ್ಷೇಪವೆತ್ತಿ ಫ್ರಿಡ್ಜ್ ಅನ್ನು ಬಲವಂತವಾಗಿ ಹೊತ್ತೊಯ್ದಿದೆ. ವರದಿಗಳ ಪ್ರಕಾರ, ಗುಂಪು ‘ಜೈ ಶ್ರೀ ರಾಮ್’ ಎಂದು ಘೋಷಣೆಗಳನ್ನು ಕೂಗುತ್ತಿತ್ತು ಮತ್ತು ಆ ಕುಟುಂಬದ ವಿರುದ್ಧ ಆಕ್ರಮಣಕಾರಿ ರೀತಿಯಲ್ಲಿ ಆರೋಪಗಳನ್ನು ಮಾಡುತ್ತಿತ್ತು.
ಘಟನೆ ಸಂಬಂಧದ ವೈರಲ್ ವೀಡಿಯೊದಲ್ಲಿ, ಆ ಗುಂಪು ಫ್ರಿಡ್ಜ್ ಅನ್ನು ತೆಗೆದುಕೊಂಡು ಹೋಗುವುದಿದೆ. ಅದನ್ನು ತೆಗೆದುಕೊಂಡು ಹೋಗಿ ಇಡಲಾಗುವ ಸ್ಥಳದಲ್ಲಿ ಒಬ್ಬ ಪೊಲೀಸ್ ಸಹ ಕಾಣಿಸಿಕೊಂಡಿದ್ದಾನೆ.
ಗುಂಪೊಂದು ಏಕಾಏಕಿ ನಡೆಸಿದ ಈ ದಾಳಿ ಆ ಕುಟುಂಬಸ್ಥರನ್ನು ಬೆಚ್ಚಿಬೀಳಿಸಿದೆ. ಒಡಿಶಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಇದು ಅಸಹಿಷ್ಣುತೆಯ ಎರಡನೇ ಘಟನೆಯಾಗಿದೆ.
ಬಕ್ರೀದ್ ವೇಳೆ ಒಡಿಶಾದ ಬಾಲಾಸೋರ್ ಪಟ್ಟಣದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಆನಂತರ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಲಾಗಿತ್ತಲ್ಲದೆ, 48 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಗಲಭೆಗೆ ಸಂಬಂಧಿಸಿ ಏಳು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 34 ಜನರನ್ನು ಬಂಧಿಸಲಾಗಿದೆ ಎಂದು ವರದಿಗಳಿವೆ. ಇದರ ಬೆನ್ನಲ್ಲೇ ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿ ಫ್ರಿಡ್ಜ್ ಕೊಂಡೊಯ್ದ ಘಟನೆ ನಡೆದಿದೆ.
ಹಾಗೆ ನೋಡಿದರೆ ಇಂಥ ಘಟನೆಗಳು ನಡೆದಿರುವುದು ಒಡಿಶಾದಲ್ಲಿ ಮಾತ್ರವೇ ಅಲ್ಲ. ದೇಶದ ಬೇರೆ ಬೇರೆ ಕಡೆಗಳಿಂದಲೂ ಇಂತಹದೇ ಆತಂಕಕಾರಿ ಘಟನೆಗಳು ವರದಿಯಾಗುತ್ತಿವೆ.
ಉತ್ತರ ಪ್ರದೇಶದ ಅಲಿಗಡದಲ್ಲಿ ಕಳ್ಳತನದ ಆರೋಪ ಹೊರಿಸಿ ಮುಸ್ಲಿಮ್ ವ್ಯಕ್ತಿಯ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆಗೈಯಲಾಗಿದೆ.ಅಲಿಗಡದ ಗಾಂಧಿ ಪಾರ್ಕ್‌ನ ಮಾಮು ಬಾಂಜಾ ಪ್ರದೇಶದಲ್ಲಿ ಮುಹಮ್ಮದ್ ಫರೀದ್ ಎಂಬ ವ್ಯಕ್ತಿ, ಗುಂಪೊಂದರ ಅನವಶ್ಯಕ ಶಂಕೆಗೆ ಬಲಿಯಾಗಿ ಹೋಗಿದ್ದಾನೆ.
ವಿಪರ್ಯಾಸ ಅಂದರೆ, ಹೀಗೆ ಒಬ್ಬನನ್ನು ಹಿಡಿದು ಹೊಡೆದು ಕೊಂದೇ ಹಾಕಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದನ್ನು ಅಲ್ಲಿನ ಬಿಜೆಪಿ ಶಾಸಕರೇ ವಿರೋಧಿಸಿದ್ದಾರೆ. ನಮ್ಮ ಐದಾರು ಸೋದರರನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಅವರನ್ನು ಬಿಡುಗಡೆ ಮಾಡಬೇಕು ಎಂದಿದ್ದಾರೆ ಬಿಜೆಪಿ ಶಾಸಕ ಮುಕ್ತಾ ರಾಜಾ.
ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಮುಸ್ಲಿಮ್ ವ್ಯಕ್ತಿಯೊಬ್ಬರ ಜವಳಿ ಅಂಗಡಿಯನ್ನು ಗುಂಪೊಂದು ದಾಳಿ ನಡೆಸಿ ಧ್ವಂಸಗೊಳಿಸಿದೆ. ಈ ಘಟನೆ ಕೂಡ ಬಕ್ರೀದ್ ಬೆನ್ನಲ್ಲೇ ನಡೆದಿದೆ. ನಹಾನ್ ಪಟ್ಟಣದಲ್ಲಿದ್ದ ಅಂಗಡಿಯನ್ನು ಧ್ವಂಸಗೊಳಿಸಿರುವುದಷ್ಟೇ ಅಲ್ಲದೆ, ಲೂಟಿ ಮಾಡಲಾಗಿದೆ.
ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆ ಕುರಿತ ವೀಡಿಯೊದಲ್ಲಿ ಕೂಡ ಆ ಗುಂಪು ‘ಜೈಶ್ರೀರಾಮ್’ ಕೂಗುತ್ತಿದ್ದುದು ತಿಳಿಯುತ್ತಿದೆ.
ಈ ಗುಂಪಿನ ವಿರುದ್ಧ ಪೊಲೀಸರು ಕ್ರಮ ಕೈಗೊಂಡರೇ ಎಂಬ ವಿಚಾರವೂ ತಿಳಿದುಬಂದಿಲ್ಲ. ಘಟನೆ ನಡೆದಾಗ ಅದರ ಮಾಲಕ ಇರಲಿಲ್ಲ. ಅವರು ತಮ್ಮ ಊರಾದ ಯುಪಿಯ ಸಹರಾಣ್‌ಪುರದಲ್ಲಿನ ತಮ್ಮ ಹಳ್ಳಿಗೆ ಕೆಲ ದಿನಗಳ ಮೊದಲೇ ಹೋಗಿದ್ದರು.
ಇನ್ನು, ಛತ್ತೀಸ್‌ಗಡದ ರಾಯ್‌ಪುರದಲ್ಲಿ ಜೂನ್ ಏಳರಂದು ಗುಂಪೊಂದರಿಂದ ದಾಳಿಯಲ್ಲಿ ಇಬ್ಬರು ಜಾನುವಾರು ಸಾಗಾಟಗಾರರಾದ ಗುಡ್ಡುಖಾನ್ ಹಾಗೂ ಚಾಂದ್ ಮಿಯಾ ಖಾನ್ ಅವರು ಕೊಲೆಯಾಗಿದ್ದಾರೆ. ಇದು ಕೂಡ ಬಕ್ರೀದ್ ಆಸುಪಾಸಿನಲ್ಲೇ ನಡೆದಿರುವ ಘಟನೆಯಾಗಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್‌ನ ನೋಪೋರಾ ಗಾಂವ್‌ನಲ್ಲಿ ಇತ್ತೀಚೆಗೆ ನಡೆದ ಘಟನೆ ಕೂಡ ಆಘಾತಕಾರಿಯಾಗಿದೆ.
ಮೆಲೆರ್‌ದಂಗ ನಿವಾಸಿ, 19 ವರ್ಷದ ತುಫಾನ್ ಶೇಕ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಗುಂಪೊಂದು ಹಲ್ಲೆ ಮಾಡಿದೆ. ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ.
ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾನೆ ಎಂದು ಸುಳ್ಳು ನೆಪ ಮುಂದೆ ಮಾಡಿ ಥಳಿಸಲಾಗಿದೆ ಎಂದು ಆ ಯುವಕನ ಸೋದರ ಆರೋಪಿಸಿದ್ದಾರೆ.
ಇನ್ನೊಂದೆಡೆ ಉತ್ತರ ಪ್ರದೇಶದ ಬಸ್ತಿಯಲ್ಲಿ ಆಟೋ ಚಾಲಕನೊಬ್ಬನ ಮೇಲೆ ಕೂಡ ಬಕ್ರೀದ್ ವೇಳೆಯೇ ಬಜರಂಗದಳದ ಗೂಂಡಾಗಳು ಹಲ್ಲೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿನ ಘಟನೆಯೊಂದರಲ್ಲಿ, ಮಗಳನ್ನು ಮದುವೆ ಮಾಡಿಕೊಡಲು ಒಪ್ಪದೇ ಇದ್ದುದಕ್ಕೆ ಝಾಕಿರ್ ಮಿಯಾನ್ ಶೇಖ್ ಎಂಬ 46 ವರ್ಷದ ವ್ಯಕ್ತಿಯನ್ನು ಕೊಲೆಗೈಯಲಾಗಿದೆ.
ಅವಿನಾಶ್ ಕಾರಟ್ ಎಂಬ ಯುವಕ ಝಾಕಿರ್ ಅವರ 18 ವರ್ಷದ ಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಆದರೆ ಝಾಕಿರ್ ಒಪ್ಪದಿದ್ದಾಗ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಪದೇ ಪದೇ ನಿರಾಕರಿಸಿದರೂ ಆರೋಪಿಗಳು ಝಾಕಿರ್‌ನನ್ನು ಅವರ ಮಗಳನ್ನು ತಮ್ಮ ಕುಟುಂಬದ ಹುಡುಗನಿಗೆ ಮದುವೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು.
ಬಕ್ರೀದ್ ದಿನ ಮತ್ತೊಮ್ಮೆ ಅದನ್ನೇ ಚರ್ಚಿಸಲು ಝಾಕಿರ್ ಮನೆಗೆ ಭೇಟಿ ನೀಡಿದಾಗ ವಾಗ್ವಾದ ನಡೆದು, ಹಲ್ಲೆ ನಡೆಸಲಾಯಿತು. ತಲೆಗೆ ಪೆಟ್ಟಾಗಿದ್ದ ಝಾಕಿರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಜಿಲ್ಲಾಡಳಿತವೇ ಕ್ಷುಲ್ಲಕ ಕಾರಣಕ್ಕೆ 11 ಮುಸ್ಲಿಮ್ ಕುಟುಂಬಗಳ ಮನೆಗಳನ್ನು ನೆಲಸಮಗೊಳಿಸಿದೆ. 50 ವರ್ಷಗಳಿಂದ ಆ ಸ್ಥಳದಲ್ಲಿ ನೆಲೆಸಿದ್ದ ಅಷ್ಟೂ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಗೋಹತ್ಯೆ ಕೇಸೊಂದರ ಆಧಾರದಲ್ಲೇ ಈ ಕುಟುಂಬಗಳನ್ನು ಬೀದಿ ಪಾಲು ಮಾಡಲಾಗಿದೆ.
ಇನ್ನು ತೆಲಂಗಾಣದಲ್ಲಿ ಮದ್ರಸಾ ಮೇಲೆ ಆರೆಸ್ಸೆಸ್ ಮತ್ತು ಹಿಂದೂ ವಾಹಿನಿ ಸಂಘಟನೆ ಸದಸ್ಯರು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿನ ಈ ಘಟನೆಯಲ್ಲಿ ಗುಂಪು ಹಲ್ಲೆಯಿಂದಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆಸಿದ ಎರಡು ಸಂಘಟನೆಗಳ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ಬಿಜೆಪಿ ಮೇದಕ್ ಜಿಲ್ಲಾಧ್ಯಕ್ಷ ಗದ್ದಂ ಶ್ರೀನಿವಾಸ್, ಬಿಜೆಪಿ ಮೇದಕ್ ಪಟ್ಟಣ ಅಧ್ಯಕ್ಷ ಎಂ. ನಯಮ್ ಪ್ರಸಾದ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮತ್ತು ಇತರ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮತ್ತೊಂದು ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿನಿಂದ ಆಕ್ರೋಶಿತಗೊಂಡಿರುವ ಹಿಂದೂ ರಕ್ಷಣಾ ದಳದ ಇಬ್ಬರು ಯುವಕರು ಅಲ್ಲಿನ ಜನರನ್ನೇ ದೇಶದ್ರೋಹಿಗಳು ಎಂದು ಕರೆದಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ ಇಬ್ಬರು ಯುವಕರು ಜನರನ್ನು ನಿಂದಿಸುತ್ತಿರುವುದು ಕಂಡುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ವೈರಲ್ ಆದ ಬಳಿಕ ತಿಲಮೋಡ್ ಪೊಲೀಸರು ಆ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರು ದಿಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕನ್ಹಯ್ಯಾ ಕುಮಾರ್‌ಗೆ ಈ ಹಿಂದೆ ಕಪಾಳಮೋಕ್ಷ ಮಾಡಿ ಸುದ್ದಿಯಾದವರೇ ಆಗಿದ್ದಾರೆ. ಇಬ್ಬರ ವಿರುದ್ಧವೂ ಧಾರ್ಮಿಕ ಭಾವನೆ ಕೆರಳಿಸಿ ನಿಂದನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ವೀಡಿಯೊದಲ್ಲಿ, ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ಸಿಟ್ಟಿಗೆದ್ದ ದಕ್ಷ್ ಚೌಧರಿ ಎಂಬ ಯುವಕ ಸ್ಥಳೀಯ ಜನರನ್ನು ನಿಂದಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿರುವುದು ಕಂಡುಬಂದಿದೆ. ಇದೇ ವೇಳೆ ದಕ್ಷ್ ಪಕ್ಕದಲ್ಲಿ ಕುಳಿತಿದ್ದ ಗರಿಮಾ ಗಾರ್ಡನ್ ನಿವಾಸಿ ಅನು ಚೌಧರಿ ಕೂಡ ಅಯೋಧ್ಯೆಯ ಜನರನ್ನು ನಿಂದಿಸಿರುವುದು ವೀಡಿಯೊದಲ್ಲಿದೆ.
ಇವೆಲ್ಲದರ ನಡುವೆ ಮತ್ತೂ ಒಂದು ವಿಪರ್ಯಾಸ ಏನೆಂದರೆ, ತಮಗೇ ವೋಟು ಹಾಕಬೇಕೆಂದು ಬಯಸುವ, ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯಲ್ಲಿನ ಸ್ವಾತಂತ್ರ್ಯದ ಬಗ್ಗೆಯೇ ಗೌರವವಿಲ್ಲದ ಜನಪ್ರತಿನಿಧಿಗಳು ಬಹಿರಂಗವಾಗಿಯೇ ಅಸಹಿಷ್ಣುತೆ ವ್ಯಕ್ತಪಡಿಸುತ್ತಿರುವುದು.
ಯಾದವರು ಮತ್ತು ಮುಸ್ಲಿಮರು ತನಗೆ ಮತ ಹಾಕದೇ ಇರುವುದರಿಂದ ತಾನು ಅವರ ಕೆಲಸ ಮಾಡುವುದಿಲ್ಲ ಎಂದು ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಹೇಳಿದ್ದು ವರದಿಯಾಗಿತ್ತು.
ಅದರ ನಡುವೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನೂತನ ಬಿಜೆಪಿ ಸಂಸದ ಬಿಷ್ಣು ಪದಾ ರೇ ಕೂಡ ಅಂಥದೇ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ತನಗೆ ಮತ ಹಾಕದಿದ್ದವರು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿಕೋಬಾರ್ ದ್ವೀಪದ ಮತದಾರರಿಗೆ ಅವರು ಬೆದರಿಕೆ ಹಾಕುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ಒಂದು ದಿನದ ನಂತರ ಜೂನ್ 5ರಂದು ಅವರು ಸಾರ್ವಜನಿಕ ಸಭೆಯಲ್ಲಿ ಮಾತಾಡುತ್ತ ಹೀಗೆ ಹೇಳಿರುವುದು ವೀಡಿಯೊದಲ್ಲಿದೆ.
ತನಗೆ ಮತ ಹಾಕದಿರುವ ನಿಮ್ಮ ದಿನಗಳು ಕೆಟ್ಟದಾಗಿರಲಿವೆ ಎಂದು ಬಹಿರಂಗವಾಗಿಯೇ ಸಂಸದನೊಬ್ಬ ಹೇಳುವ ಮಟ್ಟಕ್ಕೆ ಪರಿಸ್ಥಿತಿ ಹೋಗಿದೆಯೆಂದರೆ, ನಿಜವಾಗಿಯೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೆ ಎಂಬ ಅನುಮಾನ ಬರುತ್ತದೆ.
ಕಳೆದ 10 ವರ್ಷಗಳಿಂದಲೂ ದ್ವೇಷ ಹರಡುತ್ತಲೇ ಬಂದವರು, ಹಲ್ಲೆ ನಡೆಸುತ್ತಲೇ ಬಂದವರು, ಕೊಲ್ಲುತ್ತಲೇ ಬಂದವರು ಅದನ್ನು ಮತ್ತೂ ಮುಂದುವರಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲೇ ಮೋದಿ ದ್ವೇಷಕ್ಕೆ ಮುನ್ನುಡಿ ಹಾಕಿದ್ದು ಎಲ್ಲರಿಗೂ ಗೊತ್ತೇ ಇದೆ.
ಅವರ ಭಾಷಣಗಳಲ್ಲಿ ಅಭಿವೃದ್ಧಿಯ ವಿಚಾರ ಬರಲಿಲ್ಲ, ನಿರುದ್ಯೋಗದ ವಿಚಾರ ಬರಲಿಲ್ಲ, ಬೆಲೆಯೇರಿಕೆ ವಿಚಾರ ಬರಲಿಲ್ಲ. ಬದಲಾಗಿ ಮಂಗಳಸೂತ್ರ ಕಸಿಯಲಾಗುತ್ತದೆ ಎಂದು ಭಯ ಹುಟ್ಟಿಸಿ ಮುಸ್ಲಿಮರ ವಿರುದ್ಧ ದ್ವೇಷ ಮೂಡಿಸುವ ಯತ್ನ ನಡೆಸಲಾಯಿತು.
ನುಸುಳುಕೋರರು ಎಂದು ಟೀಕಿಸಲಾಯಿತು. ಹೆಚ್ಚು ಮಕ್ಕಳನ್ನು ಹೆರುವವರು ಎಂದು ಅವಹೇಳನ ಮಾಡಲಾಯಿತು. ಅಭಿವೃದ್ಧಿ ಬಿಟ್ಟು ದ್ವೇಷದ ಆಧಾರದಲ್ಲೇ ಮತ ಯಾಚಿಸಿದ್ದು ನಡೆಯಿತು. ಮುಸ್ಲಿಮರ ಮೀಸಲಾತಿಯನ್ನು ರದ್ದುಗೊಳಿಸುವ ಮಾತಾಡಲಾಯಿತು.
ಬಿಜೆಪಿ ಸಂಸದರು ಹಿಂದೂ ರಾಷ್ಟ್ರ ಹಾಗೂ ಸಂವಿಧಾನ ಬದಲಾವಣೆಯ ಮಾತಾಡಿದ್ದರು. ಸಂವಿಧಾನಕ್ಕೆ ತಿದ್ದುಪಡಿ ತರುವುದಕ್ಕಾಗಿ 400 ಸಿಟುಗಳ ಬಲ ಬೇಕಾಗಿದೆ ಎಂದು ಹೇಳಿಕೊಂಡು ಓಡಾಡಿದ್ದರು.
ಇಷ್ಟೆಲ್ಲ ಮಾಡಿದ ಮೋದಿ ಪಡೆ ಬಹುಮತ ಪಡೆಯಲಾರದೆ ಕುಸಿದಿರುವುದೇನೋ ನಿಜ. ಆದರೆ ಅದರ ಮನಃಸ್ಥಿತಿ ಬದಲಾಗಿದೆಯೆ ಎಂದು ಕೇಳಿಕೊಂಡರೆ, ಖಂಡಿತ ಇಲ್ಲ. ಬಹುಮತವಿಲ್ಲದಿದ್ದರೂ, ಬೇರೆಯವರ ಬೆಂಬಲದ ಮೇಲೆ ಸರಕಾರ ನಿಂತಿದೆಯಾದರೂ, ಸಮಾಜದಲ್ಲಿ ದ್ವೇಷದ ಮನಃಸ್ಥಿತಿ ಆಳದಲ್ಲಿ ಹಾಗೆಯೇ ಇದೆ. ಒಡೆಯುವ ಅದರ ಧೋರಣೆ, ಅದರ ಅಸಹಿಷ್ಣುತೆ ಇವೆಲ್ಲವೂ ಹಾಗೆಯೇ ಇವೆ. ಅದನ್ನು ಬೆಂಬಲಿಸುವ ಜನರೂ ಹಾದಿಬೀದಿಯಲ್ಲಿ ಅಂಥದೇ ಕೃತ್ಯ ಮುಂದುವರಿಸಿದ್ದಾರೆ.
ಇದನ್ನು ಈ 10 ವರ್ಷಗಳಲ್ಲಿ ಬಿಜೆಪಿ ಸರಕಾರ ಬೆಂಬಲಿಸಿಕೊಂಡೇ ಬಂದಿತ್ತೆಂಬುದು ದೇಶಕ್ಕೇ ಗೊತ್ತಿದೆ. ಇನ್ನು ಮುಂದೆಯೂ ಅದು ಇಂಥದ್ದರ ಬೆಂಬಲಕ್ಕೆ ನಿಲ್ಲದು ಎನ್ನುವ ಹಾಗಿಲ್ಲ.
ಇಂಥದ್ದನ್ನೆಲ್ಲ ಮಾಡಲೆಂದೇ ಅದು ತನ್ನ ಜನರನ್ನು ಮುಂದೆ ಬಿಟ್ಟಿರುತ್ತದೆ.
ಅದರ ನಾಯಕರು, ಸಂಸದರು, ಬಿಜೆಪಿ ರಾಜ್ಯ ಸರಕಾರಗಳು ಅನುಸರಿಸಿದ ಮತ್ತು ಅನುಸರಿಸುತ್ತಿರುವ ಧೋರಣೆ ಎಂಥದ್ದು ಎಂಬುದನ್ನು ನೋಡಿದ್ದೇವೆ.
ಜೆಡಿಯು, ಟಿಡಿಪಿ ಇದಕ್ಕೆಲ್ಲ ತಡೆ ಒಡ್ಡಲಿದೆ ಎಂದು ನಿರೀಕ್ಷೆ ಮಾಡುವುದು ಕೂಡ ಒಂದು ಹಂತದಲ್ಲಿ ಭ್ರಮೆಯೇ ಆದೀತು ಎನ್ನಿಸುತ್ತದೆ. ಯಾಕೆಂದರೆ ಮೋದಿ ಕಾಲಿಗೆ ಬೀಳುವ ನಿತೀಶ್ ಯಾವ ಸಂದೇಶ ಕೊಟ್ಟರು ಎನ್ನುವುದು ಅರ್ಥವಾಗುತ್ತಿಲ್ಲ. ಹಾಗೆಯೇ ಚಂದ್ರಬಾಬು ನಾಯ್ಡು ಕೂಡ ಬಿಜೆಪಿಯ ಮನುಷ್ಯ ವಿರೋಧಿ ನಿಲುವನ್ನು ಎಂದೂ ಸ್ಪಷ್ಟವಾಗಿ ಖಂಡಿಸಿದವರಲ್ಲ. ಚುನಾವಣಾ ಪ್ರಚಾರದಲ್ಲೇ ಪ್ರಧಾನಿ ಮೋದಿ ಅಷ್ಟೆಲ್ಲ ದ್ವೇಷ, ಸುಳ್ಳು ಹರಡುವಾಗ ಇದೇ ನಾಯ್ಡು ಒಂದೇ ಒಂದು ಮಾತಾಡಿಲ್ಲ.
ಅಧಿಕಾರದ ಸಮೀಪದಲ್ಲಿ ಹೀಗೆ ಒಬ್ಬರನ್ನೊಬ್ಬರು ಬೆಂಬಲಿಸುತ್ತಿರುವಾಗ, ಮನೆಗೇ ನುಗ್ಗಿ ಆತಂಕ ಸೃಷ್ಟಿಸುವುದು, ಮನೆ ಕೆಡವಿ ಕುಟುಂಬ ಕುಟುಂಬಗಳನ್ನೇ ಬೀದಿಪಾಲು ಮಾಡುವುದು, ಸುಮ್ಮನೆ ಏನೋ ಆರೋಪ ಹೊರಿಸಿ ಹಲ್ಲೆ ಮಾಡುವುದು, ಕೊಂದೇ ಬಿಡುವುದು- ಇವೆಲ್ಲವೂ ಈ ದೇಶದಲ್ಲಿ ಕಟು ವಾಸ್ತವಗಳಾಗಿಯೇ ಉಳಿದುಬಿಡಲಿವೆಯೇ?