ಇದು ಹುದ್ದೆಯ ಘನತೆಗೆ ಮಾಡಿದ ಅವಮಾನವಲ್ಲವೇ?
ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಬಹುತೇಕ ನಾಯಕರು ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಇದು ದೇಶದ ನಾಗರಿಕರಲ್ಲಿ ಭಯ ಉಂಟುಮಾಡಿದೆ ಮತ್ತು ಲೋಕಸಭೆಯ ಮೊದಲ ಮತ್ತು ಎರಡನೆಯ ಹಂತದ ಚುನಾವಣೆಯಲ್ಲಿ ಬಿಜೆಪಿ ಸರಕಾರದ ವಿರುದ್ಧ ಮತ ಚಲಾವಣೆಯಾಗಿರುವ ಸಂಶಯ ಪ್ರಧಾನಿ ನರೇಂದ್ರ ಮೋದಿಗೆ ಬಂದಿರುವ ಸಾಧ್ಯತೆಯಿದೆ. ಅದನ್ನು ಮನಗಂಡಿರುವ ಮೋದಿಯವರು ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಪ್ರಧಾನಿ ಹುದ್ದೆಯ ಘನತೆ ಮರೆತು ಮಾತನಾಡುತ್ತಿದ್ದಾರೆ. ಯಾರೋ ಸ್ಯಾಮ್ ಪಿತ್ರೋಡಾ ಅಮೆರಿಕದಲ್ಲಿ ಇರುವ ಕಾನೂನಿನ ಬಗ್ಗೆ ಹೇಳಿದರೆ, ಕಾಂಗ್ರೆಸ್ ಪಕ್ಷ ಹಿಂದೂಗಳ ಆಸ್ತಿ ಮುಸ್ಲಿಮರಿಗೆ ಹಂಚುತ್ತಾರೆ ಎಂದು ಜನರಲ್ಲಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಇನ್ನೂ ಮುಂದೆ ಹೋಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದುಕೊಂಡು ಮುಸ್ಲಿಮರಿಗೆ ನೀಡಲು ಮುಂದಾಗಿದೆ ಎಂದು ಕರ್ನಾಟಕದಲ್ಲಿರುವ ಶೇ. 4 ಮೀಸಲಾತಿ ವಿರುದ್ಧ ಮಾತನಾಡುತ್ತಿದ್ದಾರೆ. ಇದರಿಂದಾದರೂ ಹಿಂದೂಗಳು ಭಯಗೊಂಡು ಬಿಜೆಪಿಗೆ ಮತ ನೀಡಲಿ ಎನ್ನುವ ದುರುದ್ದೇಶ ಅವರಿಗಿರಬಹುದು.
ಭಾರತ ಸಂವಿಧಾನದ ಅನುಚ್ಛೇದ 15(4) ಹಾಗೂ 16(4) ರಲ್ಲಿ ಬಹಳ ಸ್ಪಷ್ಟವಾಗಿ “State shall make special provision for the advancement of any socially and educationally backward classes of citizens or Schedule caste or schedule tribe of this country” ಎಂದು ನಮೂದಿಸಲಾಗಿದೆ. ಅಂದರೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಗಳಿಗೆ ವಿಶೇಷ ಸವಲತ್ತು ನೀಡಬಹುದಾಗಿದೆ. ಇದರಲ್ಲಿ ಎಲ್ಲಿಯೂ ಹಿಂದುಳಿದ ಜಾತಿಗಳು ಎಂದು ನಮೂದಿಸಿಲ್ಲ. ವರ್ಗಗಳು ಎಂದರೆ ಯಾವುದೇ ಸಮುದಾಯ ಬರಬಹುದು ಎನ್ನುವುದನ್ನು ಮರೆಮಾಚಿ ಮುಸ್ಲಿಮರು ಒಂದು ಪ್ರತ್ಯೇಕ ಧರ್ಮ, ಧರ್ಮಾಧಾರಿತ ಮೀಸಲಾತಿ ನೀಡಬಾರದು ಎಂದು ಸಂವಿಧಾನ ಹೇಳಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಇದೇ ಬಿಜೆಪಿಯವರು ದೇಶದಲ್ಲಿ ಅಲ್ಪಸಂಖ್ಯಾತ ಇನ್ನುಳಿದ ಧರ್ಮಗಳಾದ ಕ್ರೈಸ್ತರು, ಬೌದ್ಧರು, ಜೈನರು, ಸಿಖ್ಖರಿಗೆ ನೀಡಲಾದ ಮೀಸಲಾತಿ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಅವರ ವಿರುದ್ಧ ಮಾತನಾಡಿದರೆ ಹಿಂದೂಗಳ ಮತಗಳ ಧ್ರುವೀಕರಣ ಆಗುವುದಿಲ್ಲ ಎನ್ನುವ ಕಾರಣಕ್ಕೆ.
ದೇಶದಲ್ಲಿ ಯಾವುದೇ ಸಮುದಾಯ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದರೆ ಅಂತಹ ಸಮುದಾಯಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಸಂವಿಧಾನ ಸ್ಪಷ್ಟವಾಗಿ ಅವಕಾಶ ನೀಡಿದೆ. ಆದರೂ ಬಿಜೆಪಿ ನಾಯಕರು ಮುಸ್ಲಿಮರಿಗೆ ನೀಡಲಾದ ಮೀಸಲಾತಿ ಧರ್ಮಾಧಾರಿತವಾಗಿದೆ, ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಸುಳ್ಳನ್ನು ಪದೇ ಪದೇ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಅಧ್ಯಯನ ವರದಿ ನೀಡಿದ್ದ ನ್ಯಾ.ಮಂಡಲ್ ಆಯೋಗದ ವರದಿಯನ್ನು ಚಳವಳಿ ರೂಪದಲ್ಲಿ ವಿರೋಧ ಮಾಡಿರುವುದೇ ಬಿಜೆಪಿ ಎನ್ನುವುದು ಇಂದಿನ ಹಿಂದುಳಿದ ವರ್ಗಗಳ ಯುವಪೀಳಿಗೆಗೆ ಗೊತ್ತಿಲ್ಲದಿರುವುದು ದುರದೃಷ್ಟ. ಯಾಕೆಂದರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರೆ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ ಎಂದು ದೇಶದ ತುಂಬೆಲ್ಲ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ ಹೋರಾಟ ಮಾಡಿರುವುದು ಬಿಜೆಪಿ ಇತಿಹಾಸ. ಈಗ ಬಿಜೆಪಿಯೇ ಹಿಂದುಳಿದ ವರ್ಗಗಳ ಪರವಾಗಿ ನಾನಿದ್ದೇನೆ ಎಂದು ಮೊಸಳೆ ಕಣ್ಣೀರು ಸುರಿಸುತ್ತಿರುವುದು ಹಾಸ್ಯಾಸ್ಪದ.
ಕರ್ನಾಟಕದಲ್ಲಿ 1995ರಲ್ಲಿ ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗದ ಶಿಫಾರಸಿನಂತೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಮರಿಗೆ 2ಬಿ ಪ್ರವರ್ಗಗಳಲ್ಲಿ ಶೇ. 4ರಷ್ಟು ಮೀಸಲಾತಿ ನೀಡಲಾಗಿದೆ. 2023ರಲ್ಲಿ ಯಾವುದೇ ವರದಿಯಿಲ್ಲದೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಮುಸ್ಲಿಮರ ಶೇ. 4ರ ಮೀಸಲಾತಿ ತೆಗೆದು ಹಾಕಿತ್ತು. ಇದನ್ನು ಮುಸ್ಲಿಮ್ ಸಮುದಾಯ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದೆ. 2023ರಲ್ಲೇ ಸುಪ್ರಿಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಬೊಮ್ಮಾಯಿ ಸರಕಾರ ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಮುಸ್ಲಿಮರಿಗೆ ಮೀಸಲಾತಿ ಮುಂದುವರಿಸುತ್ತೇವೆ ಎಂದು ಹೇಳಿದೆ. ಈಗಲೂ ರಾಜ್ಯದಲ್ಲಿ ಮುಸ್ಲಿಮರಿಗೆ ಶೇ. 4 ಮೀಸಲಾತಿ ಜಾರಿಯಲ್ಲಿದೆ. ಇದರಲ್ಲಿ ಕಾಂಗ್ರೆಸ್ ಸರಕಾರದ ಯಾವ ಪಾತ್ರವೂ ಇರಲಿಲ್ಲ. ದೇಶದ ಪ್ರಧಾನಿ ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವಂತಹ ಹಾಗೂ ಜನರನ್ನು ಒಂದು ಸಮುದಾಯದ ವಿರುದ್ಧ ಎತ್ತಿಕಟ್ಟುವಂತಹ ಪ್ರಯತ್ನ ಮಾಡಿರುವುದು ಅವರ ಹುದ್ದೆಯ ಘನತೆಗೆ ಮಾಡಿದ ಅವಮಾನ.
ದೇಶದಲ್ಲಿ ಸ್ವಾತಂತ್ರ್ಯಾನಂತರ ಹಲವಾರು ಆಯೋಗಗಳು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಬಗ್ಗೆ ವರದಿ ನೀಡಿವೆ. ಅವೆಲ್ಲ ಆಯೋಗಗಳು ನೀಡಿರುವ ವರದಿಯಲ್ಲಿ ಮುಸ್ಲಿಮರು ಸಹ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ್ದಾರೆ, ಅವರಿಗೂ ಮೀಸಲಾತಿ ನೀಡಬೇಕೆನ್ನುವ ಶಿಫಾರಸು ಮಾಡಿವೆ. ನ್ಯಾ.ಮಂಡಲ್ ಆಯೋಗದ ವರದಿಯಲ್ಲಿಯೂ ಮುಸ್ಲಿಮರಿಗೆ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಅದರಂತೆ ಮುಸ್ಲಿಮ್ ಸಮುದಾಯದ ಕೆಲವು ಉಪಪಂಗಡಗಳು ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ನ್ಯಾ.ಮಂಡಲ್ ಆಯೋಗದ ವರದಿ ಜಾರಿಯಾಗುವ ಸಂದರ್ಭದಲ್ಲಿ ವಿ.ಪಿ. ಸಿಂಗ್ ಸರಕಾರ ಅಧಿಕಾರದಲ್ಲಿತ್ತು ಎನ್ನುವುದನ್ನು ಸಹ ಮರೆಯುವಂತಿಲ್ಲ. ಅದರ ನಂತರ ನ್ಯಾ.ರಾಜೇಂದ್ರ ಸಾಚಾರ್ ವರದಿ ಸಹ ಮುಸ್ಲಿಮರು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಕೆಳಸ್ತರದಲ್ಲಿದ್ದಾರೆ, ಅವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿದೆ. ಅಲ್ಲದೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾಗಿದ್ದ ನ್ಯಾ.ರಂಗನಾಥ ಮಿಶ್ರಾ ನೇತೃತ್ವದ ಆಯೋಗದ ವರದಿ ಸಹ ಮುಸ್ಲಿಮರಿಗೆ ಶೇ. 10ರಷ್ಟು ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ಆದರೆ ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಅದು ಸಾಧ್ಯವಾಗಿಲ್ಲ.
ಈಗ ದೇಶದ ಪ್ರಧಾನಿ ಮೋದಿಯವರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಕಸಿದುಕೊಂಡು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ನೀಡಲು ಬಯಸುತ್ತಿದೆ ಎಂದೂ, ನಾನು ಯಾವುದೇ ಕಾರಣಕ್ಕೂ ಆ ರೀತಿ ಆಗಲು ಬಿಡುವುದಿಲ್ಲ ಎಂದೂ ಚುನಾವಣಾ ಪ್ರಚಾರದಲ್ಲಿ ಹೇಳುತ್ತಿರುವುದು ಅವರ ಶೋಚನೀಯ ಸ್ಥಿತಿಗೆ ಹಿಡಿದ ಕನ್ನಡಿ. ಮೋದಿಯವರು 2011ರಲ್ಲಿ ಗುಜರಾತ್ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ಕೆಲವು ಉಪಪಂಗಡಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಅಲ್ಲದೆ ಗುಜರಾತ್ ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮ್ ಸಮುದಾಯದ ಬಹುತೇಕ ಪಂಗಡಗಳು ಇರುವುದು ಮೋದಿಯವರು ನೋಡಲಿಲ್ಲವೇ, ಕರ್ನಾಟಕದಲ್ಲಿ ಮೀಸಲಾತಿ ಇರುವುದು ಕಾಣುವ ಮೋದಿಯವರಿಗೆ ಗುಜರಾತ್ ರಾಜ್ಯದಲ್ಲಿ ಇರುವ ಮುಸ್ಲಿಮ್ ಮೀಸಲಾತಿ ಕಾಣಲಿಲ್ಲವೇ? ದೇಶದ ಜನರಿಗೆ ಸುಳ್ಳು ಹೇಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ. ಅದೇ ರೀತಿ ಬಿಜೆಪಿ ಆಡಳಿತ ಇರುವ ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಲ್ಲಿಯೂ ಮುಸ್ಲಿಮ್ ಸಮುದಾಯದ ಹಲವು ಉಪಪಂಗಡಗಳಿಗೆ ಮೀಸಲಾತಿ ಇದೆ. ಮೋದಿಯವರು ಸಂವಿಧಾನ ಧರ್ಮಾಧಾರಿತ ಮೀಸಲಾತಿ ನೀಡಬಾರದೆಂದು ಹೇಳಿದೆ ಎಂದು ಹೇಳುವಾಗ ಸಂವಿಧಾನದ ಯಾವ ಅನುಚ್ಛೇದ ಮುಸ್ಲಿಮರಿಗೆ ಮೀಸಲಾತಿ ನೀಡಬಾರದೆಂದು ಹೇಳಿದೆ ಎನ್ನುವುದನ್ನು ಸಹ ಹೇಳಬೇಕಲ್ಲವೇ? ಧರ್ಮಾಧಾರಿತವಾಗಿ ಮುಸ್ಲಿಮರ ಮೀಸಲಾತಿ ಬಗ್ಗೆ ಮಾತನಾಡುವ ಮೋದಿಯವರು ಸಿಖ್ಖರು, ಜೈನರು, ಕ್ರೈಸ್ತರು, ಬೌದ್ಧರ ಮೀಸಲಾತಿ ಬಗ್ಗೆ ಮೌನಕ್ಕೆ ಶರಣಾಗುತ್ತಾರೆ. ಕೇವಲ ಚುನಾವಣೆಯಲ್ಲಿ ಮತಗಳ ಧ್ರುವೀಕರಣಕ್ಕಾಗಿ ಮುಸ್ಲಿಮ್ ಮೀಸಲಾತಿ ಬಗ್ಗೆ ಮಾತನಾಡುವುದು ಅವರ ಅಧಃಪತನಕ್ಕೆ ಸಾಕ್ಷಿಯಾಗಿದೆ.
ಅಷ್ಟಕ್ಕೂ ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಎಲ್ಲವೂ ಮಾಡಿಕೊಡಲಿದೆ ಎನ್ನುವಾಗ ಕಾಂಗ್ರೆಸ್ ಪಕ್ಷ ದೇಶದಲ್ಲಿ 50ಕ್ಕೂ ಹೆಚ್ಚು ವರ್ಷಗಳು ಆಡಳಿತ ನಡೆಸಿದೆ, ಮುಸ್ಲಿಮ್ ಸಮುದಾಯದ ಶೇ. 90ರಷ್ಟು ಜನತೆ ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಕೆಳಮಟ್ಟದಲ್ಲಿದೆ ಎಂದು ಹಲವು ಆಯೋಗಗಳ ವರದಿಗಳು ನೀಡಿವೆ. ಆದರೂ ಅವರೆಲ್ಲರನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಕಾಂಗ್ರೆಸ್ ಪಕ್ಷ ಸೇರಿಸಲಿಲ್ಲ. ಇಂದಿಗೂ ಶೇ. 90ರಷ್ಟು ಮುಸ್ಲಿಮರು ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಉದ್ಯೋಗಗಳಲ್ಲಿ ಸಾಮಾನ್ಯ ವರ್ಗಗಳಲ್ಲೇ ಸ್ಪರ್ಧೆ ಮಾಡಬೇಕು. ಅಲ್ಪಸಂಖ್ಯಾತ ಸ್ಥಾನಮಾನ ಎನ್ನುವುದು ಮೀಸಲಾತಿ ಎನ್ನುವ ರೀತಿಯಲ್ಲಿ ದೇಶದಲ್ಲಿ ಬಿಂಬಿಸಲಾಗಿದೆ. ಸಾರ್ವಜನಿಕರಲ್ಲಿ ಅದೊಂದು ತಪ್ಪು ಕಲ್ಪನೆ ಬೆಳೆದಿರುವುದು ಆತಂಕಕಾರಿ ವಿಷಯವಾಗಿದೆ. ಇದಕ್ಕೆ ನೀರೆರೆಯುವಂತೆ ಬಿಜೆಪಿ ನಾಯಕರು ಸುಳ್ಳು ಹೇಳುತ್ತ ತಿರುಗುತ್ತಿದ್ದಾರೆ.
ದೇಶದ ಪ್ರಧಾನಿ ಒಂದು ಸಮುದಾಯದ ವಿರುದ್ಧ ಇಷ್ಟೊಂದು ಸುಳ್ಳು ಹೇಳುವ ಮೂಲಕ ತಾನು ದೇಶದ ಎಲ್ಲ ಜನರ ಪರವಾಗಿ ಕೆಲಸ ಮಾಡುವುದಿಲ್ಲ ಎಂದು ಸಾರಿದಂತಿದೆ. ಅವರ ಘೋಷಣೆ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್, ಸಬ್ ಕಾ ವಿಕಾಸ್ ಎನ್ನುವುದು ಸುಳ್ಳು ಘೋಷಣೆಯಾಗಿದೆ. ಯಾವುದೇ ವ್ಯಕ್ತಿ, ಸಮುದಾಯದ ವಿರುದ್ಧ ಪೂರ್ವಾಗ್ರಹ ಪೀಡಿತನಾಗಿ ಕೆಲಸ ಮಾಡುವುದಿಲ್ಲ ಎಂದು ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಇಂದು ಕೇವಲ ಒಂದು ಚುನಾವಣೆ ಗೆಲ್ಲಲು ಇಡೀ ದೇಶದ ಜನರನ್ನು ದಾರಿ ತಪ್ಪಿಸುತ್ತಿರುವುದು ಅತ್ಯಂತ ಕಳವಳಕಾರಿ ವಿಷಯವಾಗಿದೆ.