ಇದು ರಾಷ್ಟ್ರೀಯ ಮಹಿಳಾ ಆಯೋಗದ ಇಬ್ಬಂದಿತನವಲ್ಲವೇ?
ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು)ದ ಮುಖ್ಯಸ್ಥೆ ರೇಖಾ ಶರ್ಮಾ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪದಲ್ಲಿ ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳಾ ಆಯೋಗ ಶುಕ್ರವಾರ ದಿಲ್ಲಿ ಪೊಲೀಸರಿಗೆ ದೂರು ನೀಡಿತ್ತು. ಆನಂತರ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) 2023ರ ಸೆಕ್ಷನ್ 79ರ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.
ಗುರುವಾರ ಹಾಥರಸ್ ಕಾಲ್ತುಳಿತದ ಸ್ಥಳಕ್ಕೆ ರೇಖಾ ಶರ್ಮಾ ಬಂದಿದ್ದನ್ನು ತೋರಿಸುವ ವೀಡಿಯೊ ಸಂಬಂಧ ಸಂಸದೆ ಮಹುವಾ ಮೊಯಿತ್ರಾ ಟೀಕೆ ಮಾಡಿದ್ದರು. ಆ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ರೇಖಾ ಅವರಿಗೆ ಛತ್ರಿ ಹಿಡಿದುಕೊಂಡು ಹಿಂದೆ ಹೋಗುತ್ತಿರುವುದನ್ನು ಕಾಣಬಹುದಿತ್ತು.
ಆ ಎಕ್ಸ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದ ಮಹುವಾ, ಕೆಲ ಆಕ್ಷೇಪಾರ್ಹ ಪದ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ, ರೇಖಾ ಶರ್ಮಾ ಈ ಹಿಂದೆ ಇತರ ವ್ಯಕ್ತಿಗಳ ಬಗ್ಗೆ ಹಾಕಿದ್ದ ಅವಹೇಳನಕಾರಿ ಎಕ್ಸ್ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಮಹುವಾ ಹಂಚಿಕೊಂಡಿದ್ದಾರೆ.
‘‘ನಿಮ್ಮ ಹೊಸ ಕಾನೂನಿನ ಅಡಿಯಲ್ಲಿ ಮತ್ತೊಬ್ಬ ಸರಣಿ ಅಪರಾಧಿಯ ಬಗ್ಗೆಯೂ ಕೇಸ್ ದಾಖಲಿಸಿ’’ ಎಂದು ಮಹುವಾ ದಿಲ್ಲಿ ಪೊಲೀಸರನ್ನು ಟ್ಯಾಗ್ ಮಾಡಿರುವ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಮೊಯಿತ್ರಾ ವಿರುದ್ಧ ದೂರು ದಾಖಲಿಸುವುದಕ್ಕೆ ಮಹಿಳಾ ಆಯೋಗಕ್ಕೆ ಅದೆಷ್ಟು ಆತುರವಿತ್ತೋ ಅಂತೂ ಅದು ಆ ಕೆಲಸ ಮಾಡಿದೆ. ಆದರೆ ಇದೇ ರೇಖಾ ಶರ್ಮಾ ನೇತೃತ್ವದ ಆಯೋಗ ನಿಜವಾಗಿಯೂ ತಾನು ಸಕ್ರಿಯವಾಗಿ ಕ್ರಮ ತೆಗೆದುಕೊಳ್ಳಬೇಕಿದ್ದ ಎಷ್ಟೆಲ್ಲ ಪ್ರಕರಣಗಳಲ್ಲಿ ಏನೂ ಮಾಡದೆ ಟೀಕೆಗೆ ಒಳಗಾಗಿತ್ತಲ್ಲವೆ?
ಬಿಜೆಪಿ ಆಡಳಿತದ ರಾಜ್ಯಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ರೇಖಾ ಶರ್ಮಾ ಬಿಜೆಪಿಗೆ ಬೇಕಾದಂತೆ ವರ್ತಿಸಿದ್ದ ಬಗ್ಗೆ ಸೂಕ್ತ ಕ್ರಮಕೈಗೊಳ್ಳದ ಬಗ್ಗೆ ಸಾಕಷ್ಟು ಟೀಕೆಗಳಿವೆ.
ಆದರೆ ವಿಪಕ್ಷ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರನ್ನು ಆಯಾ ಸರಕಾರದ ವಿರುದ್ಧ ಇವರೇ ಎತ್ತಿಕಟ್ಟಿದ ಆರೋಪಗಳೂ ಇವೆ.
ಒಂದು, 2020ರಲ್ಲಿ ಉತ್ತರ ಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಎನ್‌ಸಿಡಬ್ಲ್ಯು ಪ್ರತಿಕ್ರಿಯೆ ಚರ್ಚೆಯಾಗಿತ್ತು.
ಆ ಭೀಕರ ಘಟನೆಗೆ ಎನ್‌ಸಿಡಬ್ಲ್ಯುನ ಪ್ರತಿಕ್ರಿಯೆ ತೀರಾ ನಿಧಾನವಾಗಿತ್ತು ಮತ್ತು ಅಸಮರ್ಪಕವಾಗಿತ್ತು ಎಂಬ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಆ ಪ್ರಕರಣದ ತೀವ್ರತೆಗೆ ತಕ್ಕಂತೆ ಯಾವ ಮಟ್ಟದಲ್ಲಿ ಕ್ರಮಕ್ಕೆ ಮುಂದಾಗಬೇಕಿತ್ತೋ ಆ ಕೆಲಸವನ್ನು ಅದು ಮಾಡಿರಲೇ ಇಲ್ಲ ಎಂಬ ಟೀಕೆಗಳಿವೆ.
ಎರಡನೆಯದಾಗಿ, 2020ರಲ್ಲಿ ರೇಖಾ ಶರ್ಮಾ ‘‘ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಅವರನ್ನು ಭೇಟಿಯಾಗಿ, ಹೆಚ್ಚುತ್ತಿರುವ ಲವ್ ಜಿಹಾದ್ ಕೇಸ್‌ಗಳ ಬಗ್ಗೆ ಚರ್ಚಿಸಿದೆ’’ ಎಂದು ಆಯೋಗದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ ಹಾಕಿ ವಿವಾದ ಸೃಷ್ಟಿಸಿದ್ದರು.
ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅವರೇ ನಿರ್ಧರಿಸಿಬಿಟ್ಟಿರುವಂತೆ ಅವರ ಪೋಸ್ಟ್ ಇತ್ತು.
ಆದರೆ ಹೀಗೆ ಹೊಣೆಗೇಡಿ ಹೇಳಿಕೆ ನೀಡಿದ್ದವರ ನೇತೃತ್ವದಲ್ಲಿದ್ದ ಮಹಿಳಾ ಆಯೋಗದ ಬಳಿ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ಅಂಕಿಅಂಶವೇ ಇಲ್ಲ ಎಂಬುದು ಆರ್‌ಟಿಐ ಮೂಲಕ ಬಹಿರಂಗವಾಗಿತ್ತು.
ಹಾಗಾದರೆ ಲವ್ ಜಿಹಾದ್ ಪ್ರಕರಣಗಳಲ್ಲಿನ ಹೆಚ್ಚಳ ಎಂದು ಯಾವ ಆಧಾರದಲ್ಲಿ ಅವರು ಹೇಳಿದ್ದರು? ಹಾಗೆ ಹೇಳುವುದರ ಹಿಂದಿನ ಅವರ ಉದ್ದೇಶ ನಿಜವಾಗಿಯೂ ಏನಿತ್ತು?
ಮೂರು - 2020ರ ಜನವರಿಯಲ್ಲಿ ಜೆಎನ್‌ಯು ಪ್ರತಿಭಟನೆ ಬಗ್ಗೆಯೂ ಅವರು ಬಿಜೆಪಿ ಪರ ಹಾಗೂ ವಿದ್ಯಾರ್ಥಿ ವಿರೋಧಿ ನಿಲುವು ಪ್ರದರ್ಶಿಸಿ ಆಕ್ರೋಶಕ್ಕೆ ಗುರಿಯಾಗಿದ್ದರು.
ಅವರ ಟೀಕೆಗಳು, ಹಿಂಸೆಯ ವಿರುದ್ಧ ಪ್ರತಿಭಟಿಸುವ ವಿದ್ಯಾರ್ಥಿಗಳ ಹಕ್ಕನ್ನೇ ತಿರಸ್ಕರಿಸುವ ರೀತಿಯಲ್ಲಿದೆಯೆಂದೂ, ಸಂವೇದನಾಶೀಲವಲ್ಲದ ಹೇಳಿಕೆಯೆಂದೂ ಟೀಕೆಗಳು ವ್ಯಕ್ತವಾಗಿದ್ದವು.
ನಾಲ್ಕು -ಭಾರತದಲ್ಲಿನ ಮೀ ಟೂ ಅಭಿಯಾನಕ್ಕೂ ಎನ್‌ಸಿಡಬ್ಲ್ಯು ಸ್ಪಂದನೆ ತೀರಾ ನಿರಾಶಾದಾಯಕವಾಗಿತ್ತು.
ಆಯೋಗ ಸಾಕಷ್ಟು ಬೆಂಬಲ ನೀಡಲಿಲ್ಲ ಅಥವಾ ಲೈಂಗಿಕ ಕಿರುಕುಳಕ್ಕೆ ತುತ್ತಾದವರನ್ನು ರಕ್ಷಿಸಲು ಮತ್ತು ಅವರನ್ನು ಬೆಂಬಲಿಸಲು ದೃಢ ನಿಲುವನ್ನು ಆಯೋಗ ತೆಗೆದುಕೊಳ್ಳಲಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು.
ಬಿಜೆಪಿ ಶಾಸಕನೇ ಆರೋಪಿಯಾಗಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿಯೂ ಮಹಿಳಾ ಆಯೋಗದ ನಡೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಪ್ರಕರಣದ ಗಂಭೀರ ಸ್ವರೂಪ ಮತ್ತು ರಾಜಕೀಯ ವ್ಯಕ್ತಿ ಶಾಮೀಲಾಗಿರುವುದರಿಂದ ಆರೋಪಿಗಳ ವಿರುದ್ಧ ಆಯೋಗ ದೃಢ ನಿಲುವು ತೆಗೆದುಕೊಳ್ಳಬೇಕಿತ್ತು ಎಂಬ ಅಭಿಪ್ರಾಯಗಳು ಬಂದಿದ್ದವು.
ಲಾಕ್‌ಡೌನ್ ಸಮಯದಲ್ಲಿ ಮಹಿಳೆಯರು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಿಗೆ ಹೆಚ್ಚಾಗಿ ತುತ್ತಾಗಿದ್ದರೂ, ಅದರ ಹೆಚ್ಚಳ ನಿವಾರಿಸುವಲ್ಲಿ ಮತ್ತು ಜಾಗೃತಿ ಮೂಡಿಸುವಲ್ಲಿ ಆಯೋಗ ವಿಫಲವಾದುದರ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು.
ಮುಝಫ್ಫರ್‌ಪುರ ಶೆಲ್ಟರ್ ಹೋಮ್ ಪ್ರಕರಣದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಾಗಲೂ ರೇಖಾ ಶರ್ಮಾ ದೃಢ ನಿಲುವು ತೆಗೆದುಕೊಳ್ಳಲಿಲ್ಲ ಎಂಬ ಟೀಕೆಗಳಿದ್ದವು.
2018ರಲ್ಲಿ ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಭೀಕರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ನಡೆದಾಗ, ಅದು ಅಪ್ರಾಪ್ತ ಬಾಲಕಿಯ ಪ್ರಕರಣ, ಹಾಗಾಗಿ ನಾವೇನು ಮಾಡಲು ಆಗುವುದಿಲ್ಲ ಎಂದು ಸುಮ್ಮನಾಗಿತ್ತು ಮಹಿಳಾ ಆಯೋಗ.
ತೀರಾ ಇತ್ತೀಚಿನ ಪ್ರಕರಣಗಳನ್ನೇ ನೋಡಿ.
ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಹಗರಣ ಬೆಳಕಿಗೆ ಬಂದು ಇಡೀ ದೇಶಾದ್ಯಂತ ಅದು ಚರ್ಚೆಯಾಯಿತು. ಅಮಾಯಕ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ನೂರಾರು ವೀಡಿಯೊಗಳು ಬಹಿರಂಗವಾದವು.
ಆದರೆ ಇಷ್ಟು ಗಂಭೀರ ಆರೋಪಗಳ ಬಗ್ಗೆ ವಾರಗಳ ಕಾಲ ಏನೂ ಮಾತಾಡದ ರಾಷ್ಟ್ರೀಯ ಮಹಿಳಾ ಆಯೋಗ 20 ದಿನಗಳ ಬಳಿಕ ‘ಹಾಸನದಲ್ಲಿ ಮಹಿಳೆಯರಿಗೆ ದೂರು ಕೊಡುವಂತೆ ಒತ್ತಡ ಹೇರಲಾಗುತ್ತಿದೆ, ಕರ್ನಾಟಕ ಪೊಲೀಸರು ಎಂದು ಹೇಳಿಕೊಂಡವರು ಅವರಿಗೆ ದೂರು ನೀಡುವಂತೆ ಕಿರುಕುಳ ಕೊಡುತ್ತಿದ್ದಾರೆ’ ಎಂದು ಹೇಳಿಕೆ ಬಿಡುಗಡೆ ಮಾಡಿತು ಮಹಿಳಾ ಆಯೋಗ.
ಬಿಜೆಪಿ ಮಿತ್ರಪಕ್ಷದ ಸಂಸದನ ವಿರುದ್ಧ ಅತ್ಯಂತ ಗಂಭೀರ ಲೈಂಗಿಕ ಕಿರುಕುಳ ಆರೋಪ ಬಂದಾಗ ರಾಷ್ಟ್ರೀಯ ಮಹಿಳಾ ಆಯೋಗ ಪ್ರತಿಕ್ರಿಯಿಸಿದ್ದು ಹೀಗೆ!
ಆದರೆ ಅದೇ ರೇಖಾ ಶರ್ಮಾ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಆರೋಪದ ಮೇಲೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವವರೆಗೂ ಹೋಗಿದ್ದು ವಿಚಿತ್ರವಾಗಿತ್ತು.
ರಾಜಕೀಯ ಪಕ್ಷಪಾತಿ ಎಂದು ರೇಖಾ ಶರ್ಮಾ ವಿರುದ್ಧ ಟಿಎಂಸಿ ಆರೋಪಿಸಿತ್ತು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿನ ಇಂಥದೇ ಪ್ರಕರಣಗಳಲ್ಲಿ ಅವರೆಷ್ಟು ನಿಷ್ಕ್ರಿಯವಾಗಿದ್ದರು ಎಂಬುದನ್ನು ಎತ್ತಿ ತೋರಿಸಿತ್ತು.
ಪಶ್ಚಿಮ ಬಂಗಾಳಕ್ಕೆ ತಕ್ಷಣ ಸತ್ಯ ಶೋಧನಾ ತಂಡ ಕಳಿಸಿದ ಮಹಿಳಾ ಆಯೋಗ ಪ್ರಜ್ವಲ್ ರೇವಣ್ಣ ವಿಷಯದಲ್ಲಿ ಮಾತ್ರ ಸಂಪೂರ್ಣ ತದ್ವಿರುದ್ಧ ನಿಲುವು ತೋರಿಸಿತು.
ಮಣಿಪುರದಲ್ಲಿನ ಭಯಾನಕ ಲೈಂಗಿಕ ಹಿಂಸಾಚಾರ ಮತ್ತು ಜನಾಂಗೀಯ ಸಂಘರ್ಷಗಳಿಗೆ ಕೂಡ ಆಯೋಗ ಮೀನಮೇಷ ಎಣಿಸಿ ಪ್ರತಿಕ್ರಿಯಿಸಿದ್ದರ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು.
ತ್ವರಿತ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದುದರ ಬಗ್ಗೆ ಮತ್ತು ಸಂತ್ರಸ್ತರಿಗೆ ಸಾಕಷ್ಟು ಬೆಂಬಲ ನೀಡದೇ ಇದ್ದುದರ ಬಗ್ಗೆ ರೇಖಾ ಶರ್ಮಾ ಟೀಕೆಗಳನ್ನು ಎದುರಿಸಬೇಕಾಯಿತು.
ರೇಖಾ ಶರ್ಮಾ ಬಿಜೆಪಿ ಪಕ್ಷಪಾತಿ, ಬಿಜೆಪಿಗೆ ಬೇಕಾದಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ಟೀಕೆಗಳು ಹಲವು ಸಂದರ್ಭಗಳಲ್ಲಿ ಬಂದಿವೆ.
ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಗೆ ಭೇಟಿ ನೀಡಿ ಅಲ್ಲಿನ ರಾಜ್ಯ ಸರಕಾರವನ್ನು ಟೀಕಿಸಿದ್ದ ಶರ್ಮಾ ಅವರಿಗೆ ಬಿಜೆಪಿ ಜನರೇ ಇರುವ ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ಕಾಣಿಸದೇ ಉಳಿದದ್ದು ವಿಚಿತ್ರವಾಗಿತ್ತು.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ತಿಂಗಳು ಗಟ್ಟಲೆ ಹೋರಾಟ ಮಾಡಿದಾಗಲೂ ಅದಕ್ಕೆ ಮಹಿಳಾ ಆಯೋಗವಾಗಲೀ, ಅದರ ಅಧ್ಯಕ್ಷೆ ರೇಖಾ ಶರ್ಮ ಆಗಲೀ ಸೂಕ್ತ ರೀತಿಯಲ್ಲಿ ಸ್ಪಂದಿಸಲೇ ಇಲ್ಲ.
ಮಾರ್ಚ್ 2024ರಲ್ಲಿ ವಿದೇಶಿ ದಂಪತಿ ಮೇಲೆ ಜಾರ್ಖಂಡ್‌ನಲ್ಲಿ ಹಲ್ಲೆ ಹಾಗೂ ಸಾಮೂಹಿಕ ಅತ್ಯಾಚಾರ ನಡೆದಾಗ ಅದು ಅಂತರ್ ರಾಷ್ಟ್ರಿಯಾಗಿ ಚರ್ಚೆಯಾಯಿತು. ಆದರೆ ಹಲ್ಲೆ, ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಪ್ರವಾಸಿಗರ ಪರ ಮಾತಾಡುವ ಬದಲು ಅವರನ್ನೇ ದೂರುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದರು ರೇಖಾ ಶರ್ಮಾ.
2018ರಲ್ಲಿ ಥಾಮ್ಸನ್ ರಾಯ್ಟರ್ ಸರ್ವೇಯಲ್ಲಿ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂದು ಹೇಳಿದಾಗ ನಾವು ಪರಿಶೀಲಿಸಿದ ಅತ್ಯಾಚಾರ ಪ್ರಕರಣಗಳಲ್ಲಿ 30 ನಕಲಿಯಾಗಿದ್ದವು ಎಂದು ಹೇಳಿದ್ದರು ರೇಖಾ ಶರ್ಮಾ.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರ ಬಗ್ಗೆ ಮಹುವಾ ಕೆಟ್ಟದಾಗಿ ಕಮೆಂಟ್ ಮಾಡಿದ್ದರೆ ಅದು ಖಂಡನಾರ್ಹ. ಆದರೆ ಖಂಡಿಸಲು, ಪ್ರಕರಣ ದಾಖಲಿಸಲೇಬೇಕಾದ ಅದೆಷ್ಟು ಅರ್ಹ ಪ್ರಕರಣಗಳು ಈ ದೇಶದಲ್ಲಿ ನಡೆಯುತ್ತಿವೆ, ಅದಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಹೇಗೆ ಪ್ರತಿಕ್ರಿಯಿಸಿದೆ ಎಂಬುದೂ ಬಹಳ ಮುಖ್ಯವಲ್ಲವೇ?.