ಇಸ್ಲಾಮೋಫೋಬಿಯಾ ಮತ್ತು ಚುನಾವಣಾ ಕಥನಗಳು
ಭಾಗ- 1
ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನು ಗುರಿಯನ್ನಾಗಿಸಿ ಭಾಷಣಗಳು, ಕಟ್ಟಿದ ಕಥನಗಳು ಮತ್ತು ನಿರೂಪಣೆಗಳು ಮೇಲ್ನೋಟಕ್ಕೆ ಅಧಿಕಾರವನ್ನು ಮತ್ತೊಮ್ಮೆ ಪಡೆಯಲು ಮಾಡಿದ ಹತಾಶ ಪ್ರಯತ್ನವೆಂಬಂತೆ ಕಂಡುಬಂದರೂ, ಅದನ್ನು ಸಾಮಾನ್ಯ ವಿಷಯವೆಂದು ಪರಿಗಣಿಸಬೇಕಾಗಿಲ್ಲ. ಅದೊಂದು ವಿಶಾಲವಾದ ಯೋಜಿತ, ಚಿತ್ರಿತ ಇಸ್ಲಾಮೋಫೋಬಿಯಾ ಚಿಂತನೆಯ ಮತ್ತು ತಾತ್ವಿಕತೆಯ ಭಾಗ. ಅಲ್ಪಸಂಖ್ಯಾತರ ಕುರಿತಾಗಿರುವ ನಕಾರಾತ್ಮಕ ನಂಬಿಕೆ, ಅಸಹನೀಯತೆ, ಪೂರ್ವಾಗ್ರಹದ ಭಾಗ. ಮತ್ತೆ ಮತ್ತೆ ಅವರನ್ನು ಅಂಚಿಗೆ ತಳ್ಳುವ ಮತ್ತು ಎರಡನೇ ದರ್ಜೆಯ ನಾಗರಿಕರನ್ನಾಗಿಸುವ ಯತ್ನದ ಒಂದು ಭಾಗ. ಮತದಾರರನ್ನು ಹಿಂದೂ-ಮುಸ್ಲಿಮ್ ಮತ್ತು ಬಹುಸಂಖ್ಯಾತ-ಅಲ್ಪಸಂಖ್ಯಾತ ಎಂಬ ಬೈನರಿ ಅಥವಾ ವಿರೋಧಾತ್ಮಕ ವರ್ಗವನ್ನಾಗಿಸಿ ಶಾಶ್ವತ ವಿರೋಧಿಗಳು ಮತ್ತು ಸಂಘರ್ಷ ಇವರ ನಡುವೆ ಅನಿವಾರ್ಯ ಎಂಬೆಲ್ಲಾ ಬಿಂಬಿಸುವ ಯತ್ನದ ರೂಪಕ. ಅದು ಒಂದೆಡೆ ಅಲ್ಪಸಂಖ್ಯಾತರನ್ನು ಹೀಯಾಳಿಸುತ್ತಾ, ಅವಮಾನಿಸುತ್ತಾ, ಪ್ರಾಕಲ್ಪನೆಗಳನ್ನು ಕಟ್ಟುತ್ತಾ, ಮತ್ತೊಂದೆಡೆ ಬಹುಸಂಖ್ಯಾತರನ್ನು, ಹಿಂದುಳಿದ ವರ್ಗಗಳನ್ನು ಈ ರಾಜಕಾರಣದ ಬಲಿಪಶುಗಳು ಎಂದೆಲ್ಲಾ ನಿರೂಪಿಸುತ್ತದೆ ಹಾಗೂ ಅದೇ ವೇಗದಲ್ಲಿ ಅವರಲ್ಲಿ ಸಮಷ್ಟಿ ಕೋಮು ಪ್ರಜ್ಞೆಯನ್ನು ಸೃಷ್ಟಿಸುತ್ತದೆ ಮತ್ತು ಅದಕ್ಕೊಂದು ಹೊಸ ಆಯಾಮವನ್ನು ನೀಡುತ್ತದೆ. ಇದರ ಹೊರತಾಗಿ ಇತಿಹಾಸದುದ್ದಕ್ಕೂ ನಡೆದ ವಿವಿಧ ರೂಪದ ಅವಮಾನಗಳ ಪಟ್ಟಿಗಳನ್ನು ಮಾಡುತ್ತಾ, ಶತಮಾನದುದ್ದಕ್ಕೂ ಗುಲಾಮನಾಗಿ ಉಳಿದ ಕತೆ, ಆಂತರಿಕವಾಗಿ ಪರಕೀಯನಾದ ಕತೆ, ಮಧ್ಯಕಾಲೀನ ಯುದ್ಧ, ಸೋಲು, ಮತಾಂತರ ಮತ್ತು ದೌರ್ಜನ್ಯಗಳನ್ನು ಪ್ರಜ್ಞಾ ಪೂರಕವಾಗಿ ನೆನಪಿಸಲಾಗುತ್ತದೆ. ಇವುಗಳನ್ನು ರಾಜಕೀಯದ ಪ್ರಬಲ ಅಸ್ತ್ರವನ್ನಾಗಿ, ರಾಜಕೀಯ ಚಿಂತನೆಯ ಭಾಗವಾಗಿ, ರಾಜಕೀಯ ಸಂಸ್ಕೃತಿಯ ಭಾಗವಾಗಿ ಪರಿವರ್ತಿತವನ್ನಾಗಿಸುತ್ತದೆ. ಇದನ್ನು ಜಾಗತಿಕ/ವಸಾಹತುಶಾಹಿಯ/ವಸಾಹತೋತ್ತರ ಮಟ್ಟದ ಇಸ್ಲಾಮೋಫೋಬಿಯಾದ-ಅಲ್ಪಸಂಖ್ಯಾತರ ಕುರಿತಾದ ನಕಾರಾತ್ಮಾಕ ನಂಬಿಕೆ-ಭಾಗವಾಗಿ ನೋಡಬಹುದೇ? ಅದರ ಮುಂದುವರಿಕೆಯಾಗಿ ನೋಡಬಹುದೇ? ಅಥವಾ ಭಾರತಕ್ಕೆ ಸೀಮಿತಗೊಂಡ ಕೋಮುವಾದದ ಭಾಗವಾಗಿ ನೋಡಬಹುದೇ? ಅದರಲ್ಲೂ ಭಾರತದ ವಿಭಜನೆಯ ನಂತರ ಹುಟ್ಟಿಕೊಂಡ ಪೂರ್ವಾಗ್ರಹಗಳ ರೂಪಕವಾಗಿ ನೋಡಬಹುದೇ ಎಂಬ ಜಿಜ್ಞಾಸೆಗಳಿವೆ. ಲೋಕಸಭಾ ಚುನಾವಣೆ ಅವುಗಳಿಗೆ ಒಂದು ನೆಲೆಗಳನ್ನು ನೀಡಿತ್ತೇ? ಎಂಬಿತ್ಯಾದಿ ಪ್ರಶ್ನೆಗಳಿವೆ.
ಚುನಾವಣೆಯ ಕಥನಗಳು
ಚುನಾವಣೆಯ ಕಥನಗಳು ಮತ್ತು ಭಾಷಣಗಳು ಆರಂಭದಲ್ಲಿ ಅಲ್ಪಸಂಖ್ಯಾತರಿಗಿಂತಲೂ ಹೆಚ್ಚಾಗಿ 400 ಲೋಕಸಭಾ ಸೀಟ್‌ಗಳನ್ನು ಗೆಲ್ಲುವ ಗುರಿಯನ್ನಾಗಿಸಿತ್ತು. ‘ಅಬ್‌ಕೀ ಬಾರ್, ಚಾರ್‌ಸೌವ್ ಪಾರ್’ ಎಂಬುದು ಅದರ ಸ್ಲೋಗನ್ ಆಗಿತ್ತು. ಈ ಸ್ಲೋಗನ್‌ನಲ್ಲಿ ಒಂದು ಭಂಡ ಧೈರ್ಯ, ಅದರಲ್ಲೂ 400 ಸೀಟ್‌ಗಳನ್ನು ಅನಾಯಾಸವಾಗಿ ಗೆಲ್ಲುವ ಧೈರ್ಯ ಅಡಕವಾಗಿತ್ತು. ಅದಕ್ಕೂ ಕಾರಣಗಳಿದ್ದವು: ಶ್ರೀರಾಮ ದೇವಸ್ಥಾನದ ಸ್ಥಾಪನೆ ಮತ್ತು ರಾಮಲಲ್ಲಾನ ಪ್ರತಿಷ್ಠಾಪನೆ, 370 ವಿಧಿಯ ಅಂತ್ಯ, ನಾಗರಿಕ ಕಾನೂನಿನ ತಿದ್ದುಪಡಿ, ತ್ರಿವಳಿ ತಲಾಕ್‌ನ ಅನುಷ್ಠಾನ, ಕರ್ಪೂರಿ ಠಾಕೂರ್, ಚರಣ್ ಸಿಂಗ್ ಮುಂತಾದವರಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕಾರ ಇತ್ಯಾದಿಗಳು ಅದಕ್ಕೆ ಸ್ವಷ್ಟ ಬಹುಮತ ತರಬಹುದು ಎಂಬ ಗ್ರಹಿಕೆ ಇಲ್ಲಿ ಕೆಲಸ ಮಾಡಿತ್ತು. ಅದಕ್ಕಿಂತಲೂ ಹೆಚ್ಚಾಗಿ ಪ್ರಧಾನಿಯವರ ವೈಯಕ್ತಿಕ ವರ್ಚಸ್ಸು ಮತ್ತು ಹುಮ್ಮಸ್ಸು ಮತ್ತೊಮ್ಮೆ ಅನಾಯಸವಾಗಿ ಅಧಿಕಾರದ ಗದ್ದುಗೆಯನ್ನು ನೀಡಬಹುದು ಎಂಬ ಎರಡನೇ ಗ್ರಹಿಕೆ ಇಲ್ಲಿ ಕೆಲಸ ಮಾಡುತ್ತಿತ್ತು. ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದೊಳಗಿನ ಆಂತರಿಕ ಬಿಕ್ಕಟ್ಟುಗಳು, ಭಿನ್ನಾಭಿಪ್ರಾಯಗಳು ಮತ್ತು ಶಕ್ತಿಶಾಲಿ ನಾಯಕತ್ವದ ಕೊರತೆ ಇತ್ಯಾದಿ 400 ಸೀಟ್‌ಗಳನ್ನು ದಾಟಿಸುತ್ತದೆ ಎಂಬ ಮೂರನೇ ಗ್ರಹಿಕೆ ಇಲ್ಲಿ ಕೆಲಸ ಮಾಡಿತ್ತು. ಮೊದಲನೇ ಹಂತದ ಚುನಾವಣೆ ಮುಗಿದ ಕೂಡಲೇ ತಮ್ಮ ಗ್ರಹಿಕೆ ಮತ್ತು ಲೆಕ್ಕಾಚಾರಗಳು ತಲೆಕೆಳಗಾಗುವುದರ ಲಕ್ಷಣಗಳು ಕಾಣತೊಡಗಿದ ಕಾರಣ ಚುನಾವಣೆಯ ಕಥನಗಳ ಮತ್ತು ನಿರೂಪಣೆಗಳ ಸ್ವರೂಪ ಬದಲಾವಣೆಯಾಗ ತೊಡಗಿತ್ತು. ಅಲ್ಪಸಂಖ್ಯಾತರು ಹೊಸ ಕಥನದ ಕೇಂದ್ರ ಬಿಂದುವಾಗ ತೊಡಗಿದರು. ಈ ಕಥನಗಳಲ್ಲ್ ಮಿಥ್ಯೆಗಳು, ಕಲ್ಪಿತ ಇತಿಹಾಸ, ತಿರಸ್ಕಾರ, ನಿರಾಕರಣೆ, ಇತ್ಯಾದಿಗಳು ಸೇರಿಕೊಂಡವು. ಅಲ್ಪಸಂಖ್ಯಾತರು ದಿನನಿತ್ಯದ ಗುರಿಯಾದರು, ಅವಮಾನಿತರಾದರು. ಈ ಸಂದರ್ಭದಲ್ಲಿ ಇಸ್ಲಾಮೋಫೋಬಿಯಾದ ಇತಿಹಾಸ, ಬೆಳೆದ ಪರಿ, ಅದರ ವಿವಿಧ ರೂಪಕಗಳನ್ನು ಅರ್ಥೈಸುವುದು ಬಹು ಮುಖ್ಯವೆನಿಸುತ್ತದೆ.
ಇಸ್ಲಾಮೋಫೋಬಿಯಾ ಎಂಬ ಪದದ ಬಳಕೆ ಬಂದದ್ದು 1990 ದಶಕದ ಸುಮಾರಿಗೆ ಎಂದರೂ, ಅದೊಂದು ಪರಿಕಲ್ಪನೆಯಾಗಿ, ಚಿಂತನಾ ಕ್ರಮವಾಗಿ ಮತ್ತು ನಂಬಿಕೆಯಾಗಿ ಹುಟ್ಟಿಕೊಂಡದ್ದು ಮಧ್ಯಕಾಲೀನದಲ್ಲಿ. ಯಹೂದಿ ಧರ್ಮ ಮತ್ತು ಕ್ರೈಸ್ತ ಧರ್ಮಕ್ಕೆ ಸಮಾನಾಂತರವಾಗಿ ಹುಟ್ಟಿದ ಇಸ್ಲಾಮ್ ಜಗತ್ತಿನ ವಿವಿಧೆಡೆ ವಿಸ್ತರಿಸುತ್ತಿದ್ದಂತೆ ಅದರ ಮೂಲಭೂತ ತತ್ವ, ಆಚರಣೆ, ಅದರ ಜ್ಞಾನ ಸಂಪಾದನೆ, ಕಲೆ, ವಿಜ್ಞಾನ, ವಾಸ್ತುಶಿಲ್ಪ, ತತ್ವಜ್ಞಾನ, ರಾಜಕೀಯ ಚಿಂತನೆ ಇತ್ಯಾದಿ ತೀವ್ರವಾಗಿ ಪರೀಕ್ಷೆಗೊಳಗಾಯಿತು. ಅದರೊಟ್ಟಿಗೆ ಅನಾರೋಗ್ಯಕರವಾದ ಚರ್ಚೆಗಳು ಹುಟ್ಟಿದವು. ವಾಸ್ತವವಾಗಿ ಇಸ್ಲಾಮ್ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಅದು ಕ್ರಿಶ್ಚಿಯನ್ ಧರ್ಮ ಪ್ರವರ್ತಕರ ವಿಮರ್ಶೆಗೊಳಗಾಯಿತು.
ವಸಾಹತುಶಾಹಿ-ಸಾಮ್ರಾಜ್ಯಶಾಹಿ ಮತ್ತು ಇಸ್ಲಾಮೋಫೋಬಿಯಾವನ್ನು ಬೇರ್ಪಡಿಸಿ, ವಿಭಿನ್ನವಾಗಿ ಅವಲೋಕಿಸಬಾರದು. ಇವೆರಡು, ಒಂದು ಚಿಂತನೆಯಾಗಿ, ಒಂದು ತತ್ವವಾಗಿ, ಒಂದು ಯಜಮಾನಿಕೆಯ ಭಾಗವಾಗಿ ಜತೆ ಜತೆಯಾಗಿ ಹೋದವು, ಅವುಗಳು ಒಂದೇ ನಾಣ್ಯದ ಎರಡು ಮುಖಗಳು. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂಬಂತೆ ಕೊಲಂಬಸ್‌ಗೆ ಭಾರತದ/ಅಮೆರಿಕದ ಅನ್ವೇಷಣೆಯ ಸಂದರ್ಭದಲ್ಲಿ ಸ್ಪೇನ್ ರಾಣಿ ಇಸಾಬೆಲ್ಲಾ ನೀಡಿದ ಸನ್ನದ್ದಿಗೆ ಕಾರಣ ಆಳವಾಗಿದ್ದ ಮುಸ್ಲಿಮ್ ದ್ವೇಷ. ಮುಸ್ಲಿಮ್ ಅಥವಾ ಮೂರ್ಸ್‌ಗಳ ಹಿಡಿತದಲ್ಲಿದ್ದ ಕೊನೆಯ ಕೊಂಡಿ, ಗ್ರನಡಾ ಪತನವಾಯಿತೋ, ಆ ಸಂತೋಷದ ಭರದಲ್ಲಿ ಕೊಲಂಬಸ್‌ಗೆ ನೌಕಾ ಅನ್ವೇಷಣೆಗೆ, ಹೊಸ ಖಂಡಗಳ ಆಕ್ರಮಣಕ್ಕೆ, ವಸಾಹತು ಸ್ಥಾಪನೆಗೆ ಸನ್ನದ್ದು ನೀಡುತ್ತಾಳೆ. ಅಷ್ಟರ ತನಕ ಕೊಲಂಬಸ್‌ನ ಬೇಡಿಕೆಯನ್ನು ಐರೋಪ್ಯ ದೇಶಗಳು ತಿರಸ್ಕರಿಸಿದ್ದವು.
ವಿಚಿತ್ರವೆಂದರೆ ಐರೋಪ್ಯ ಜಗತ್ತಿಗೆ ಪ್ಲೇಟೋ, ಅರಿಸ್ಟಾಟಲ್‌ರನ್ನು ಪರಿಚಯಿಸಿದ ಚಿಂತಕರಾದ ಇಬ್ನ್ ಸೀನಾ, ವಸಾಹತುಶಾಹಿ ಚಿಂತನೆಯಲ್ಲಿ ಅನ್ಯರಾದರು. ಅವರ ಕೊಡುಗೆಯ ಉಲ್ಲೇಖ ಸಿಗದಂತೆ ನೋಡಿತ್ತು.ಆದರೆ ಅದೇ ಪಾಶ್ಚಾತ್ಯರು ಪ್ಲೇಟೋ, ಅರಿಸ್ಟಾಟಲರನ್ನು ಕ್ರೈಸ್ತ ಜಗತ್ತಿನ ಭಾಗವನ್ನಾಗಿಸಿ ವ್ಯಾಖ್ಯಾನಿಸಿದರು. ಮಾತ್ರವಲ್ಲದೆ ಅವರೇ ತಮ್ಮ ಜಗತ್ತಿನ ಶ್ರೇಷ್ಠ ಚಿಂತಕರು ಮತ್ತು ಎಲ್ಲಾ ಜ್ಞಾನದ ಚಿಲುಮೆಯೆಂದೆಲ್ಲಾ ಬಡಬಡಿಸಿ ಉಳಿದ ಜಗತ್ತಿಗೆ ವಸಾಹತುಶಾಹಿ ಮೂಲಕ ಪ್ರಸರಿಸಿದರು. ಆ ಮೂಲಕ ವಸಾಹತುಶಾಹಿ ಭಾರತದಂತಹ ದೇಶಗಳ ಜ್ಞಾನ ಸಂಪತ್ತಿನ ಮೇಲೆ, ರಾಜಕೀಯದ ಮೇಲೆ ತಮ್ಮ ಯಜಮಾನಿಕೆಯನ್ನು ಸಾಧಿಸಲು ಸಾಧ್ಯವಾಯಿತು.
ಇದರ ಮುಂದುವರಿಕೆಯಾಗಿ ಖಗೋಳ ಶಾಸ್ತ್ರಕ್ಕೆ ಅಲ್‌ತೂಸಿ, ದೃಗ್ವಿಜ್ಞಾನಕ್ಕೆ ಅಲ್ ಹಯ್‌ತಮ್, ಬೀಜಗಣಿತಕ್ಕೆ ಅಲ್-ಖಾರಿಝ್ಮಿ ನೀಡಿದ ಕೊಡುಗೆಯನ್ನು, ರಾಸಾಯನ ಶಾಸ್ತ್ರಕ್ಕೆ ಜಾಬಿರ್ ಇಬ್ನ್ ಹಯ್ಯಾನ್ ನೀಡಿದ ಕೊಡುಗೆಯನ್ನು, ವೈದ್ಯಕೀಯ ಶಾಸ್ತ್ರಕ್ಕೆ ಅಲ್ ರಿಝ್ವಿ ಮತ್ತು ಇಬ್ನ್‌ಸೀನಾ ನೀಡಿದ ಕೊಡುಗೆಗಳನ್ನು, ಖಗೋಳ ಶಾಸ್ತ್ರಕ್ಕೆ ಅಲ್-ಬತ್ತಾನಿ ಮತ್ತು ಅಲ್ ಫರ್ಗಾನಿ ನೀಡಿದ ಕೊಡುಗೆಗಳನ್ನು ಒಂದೋ ನಿರಾಕರಿಸಿತ್ತು, ಇಲ್ಲವೇ ಅದನ್ನು ಪ್ರಜ್ಞಾಪೂರ್ವಕವಾಗಿ ಕತ್ತಲಲ್ಲಿ ಬಚ್ಚಿಟ್ಟಿತ್ತು.
ಇದರ ಹೊರತಾಗಿ ವಿವಿಧ ರೂಪದಲ್ಲಿ ವಸಾಹತುಶಾಹಿ ಇಸ್ಲಾಮ್ ಜಗತ್ತಿನ ಮೇಲೆ ಯಜಮಾನಿಕೆಯನ್ನು ಸಾಧಿಸುವುದನ್ನು ನೋಡಬಹುದು. ಮೊದಲನೆಯದಾಗಿ, ಅವರ ಸಂಪ್ರದಾಯವನ್ನು ಹತ್ತಿಕ್ಕಿ ಪಾಶ್ಚಾತ್ಯ ಸಂಪ್ರದಾಯವನ್ನು ಬಲವಂತವಾಗಿ ಹೇರಿತ್ತು. ಎರಡನೆಯದಾಗಿ, ಸಮುದಾಯದೊಳಗಿನ ವೈವಿಧ್ಯತೆಗಳನ್ನು (ಜಾತಿ, ಪಂಗಡ ಇತ್ಯಾದಿ) ದಾಖಲಿಸುತ್ತಾ ಬೈನರಿ-ವೈರುಧ್ಯಗಳನ್ನು ನಿರ್ಮಿಸುತ್ತಾ ಹೋಯಿತು. ಅದೇ ನಿಟ್ಟಿನಲ್ಲಿ ಸಮುದಾಯಗಳನ್ನು ತುಚ್ಛೀಕರಿಸುತ್ತಾ ಮತ್ತು ಹೀಯಾಳಿಸುತ್ತಾ ಒಂದು ಜ್ಞಾನ ಭಂಡಾರವನ್ನೇ ನಿರ್ಮಿಸಿತ್ತು. ಆಫ್ರಿಕಾದ ಸಮುದಾಯವನ್ನು ಮೂರ್ಸ್‌ಗಳೆಂದು ಕರೆಯಿತು. ಭಾರತದ ಮಾಪಿಳ್ಳೆಗಳನ್ನು ಫೆನೆಟಿಕ್ಸ್‌ಗಳೆಂದು, ಕೆಲವು ಜಾತಿ, ಬುಡಕಟ್ಟುಗಳನ್ನು ಕ್ರಿಮಿನಲ್ ಜಾತಿಗಳೆಂದು ನಾಮಕರಣ ಮಾಡಿತ್ತು. ಮೂರನೆಯದಾಗಿ ಮುಸ್ಲಿಮ್ ಜಗತ್ತಿನ ಜ್ಞಾನ ಸಂಪತ್ತನ್ನೂ, ಜ್ಞಾನದ ಕೊಡುಗೆಯನ್ನೂ ಈ ಹಿಂದೆ ಹೇಳಿದಂತೆ ನಿರಂತರವಾಗಿ ಬಚ್ಚಿಟ್ಟಿತ್ತು, ಇಲ್ಲವೇ ನಿರಾಕರಿಸಿತ್ತು- ಭಾರತದ ಸಂದರ್ಭದಲ್ಲಿ ಅಲ್ ಬೈರೂನಿ, ದಾರ ಶಿಕೋ ಹೊರತಾಗಿ ಉಳಿದವರ ಅದರಲ್ಲೂ ರಾಜಕೀಯ ಚಿಂತಕರಾದ ಅಲ್ ಬೈರೂನಿ, ಫಕ್ರು ಮುದಾಬಿರ್‌ರಂತಹವರು ಅದರ ಕಥನಗಳಲ್ಲಿ ಉಲ್ಲೇಖವಾಗುವುದಿಲ್ಲ. ನಾಲ್ಕನೆಯದಾಗಿ ಎಲ್ಲಾ ಮುಸ್ಲಿಮ್ ಆಳ್ವಿಕೆಗಳನ್ನು ಅತ್ಯಂತ ಕ್ರೂರ, ಭೀಕರ, ಅನ್ಯತೆಯನ್ನು ನಿರ್ಮಿಸುವ ಆಳ್ವಿಕೆ ಎಂದೆಲ್ಲಾ ಚಿತ್ರಿಸಿತ್ತು. ಅದು ಒಟ್ಟೋಮನ್ ಸಾಮ್ರಾಜ್ಯವಿರಬಹುದು, ಟಿಪ್ಪುವಿನ ಸಾಮ್ರಾಜ್ಯವಿರಬಹುದು, ಇದರಲ್ಲಿ ಔರಂಗಜೇಬ, ಅಲ್ಲಾವುದ್ದೀನ್ ಖಿಲ್ಜಿ, ಟಿಪ್ಪು ಖಳನಾಯಕರಾಗಿ ಇತಿಹಾಸದುದ್ದಕ್ಕೂ ಬಿಂಬಿತರಾಗುತ್ತಾರೆ.
ಒಂದನೇ ಮಹಾ ಯುದ್ಧ ಮುಗಿದ ಕಾಲದಲ್ಲಿ, ಅದರಲ್ಲೂ ಮಧ್ಯಪೂರ್ವದ ವಿಭಜನೆಯಲ್ಲಿ, ಫೆಲೆಸ್ತೀನ್ ನೆಲದಲ್ಲಿ ಇಸ್ರೇಲ್ ದೇಶದ ಸ್ಥಾಪನೆಯಲ್ಲೂ ಮತ್ತು ಟರ್ಕಿಯ ಪತನದ ಸಂದರ್ಭದಲ್ಲೂ ಇಸ್ಲಾಮೋಫೋಬಿಯಾ ನಿಚ್ಚಳವಾಗಿ ಕಂಡು ಬರುತ್ತದೆ. ಮಹಾಯುದ್ಧದ ನೇತೃತ್ವ ವಹಿಸಿದ ಫೀಲ್ಡ್ ಮಾರ್ಷಲ್ ಎಡ್ಮಂಡ್ ಜೆರುಸಲೇಮ್ ಪಟ್ಟಣವನ್ನು ವಶಪಡಿಸುವ ಸಂದರ್ಭದಲ್ಲಿ ಹೇಳಿದ ಮಾತು ಇಸ್ಲಾಮೋಫೋಬಿಯಾದ ಜೀವಂತಿಕೆಗೆ ಸಾಕ್ಷಿಯಾಗುತ್ತದೆ.-‘‘ಕ್ರುಸೇಡರ ಯುದ್ಧಗಳು ಈಗ ಅಂತಿಮಗೊಂಡಿದೆ’’. ಅದೇ ರೀತಿ ಸಿರಿಯಾಕ್ಕೆ ನಿಯುಕ್ತಿಗೊಂಡ ಪ್ರಥಮ ರಾಜ್ಯಪಾಲ 1920ರಲ್ಲಿ ಹೇಳಿದ ಮಾತು, ‘‘ಸಲಾವುದ್ದೀನ್ ನಾವು ವಾಪಸ್ ಬಂದಿದ್ದೇವೆ’’(ಜೆರುಸಲೇಮ್ ಅನ್ನು ಕ್ರೈಸ್ತರ ಕೈಯಿಂದ ಬಿಡುಗಡೆಗೊಳಿಸಿದ ಕೀರ್ತಿ ಸಲಾವುದ್ದೀನ್‌ಗೆ ಸಲ್ಲುತ್ತದೆ) ಇಸ್ಲೋಮೋಫೋಬಿಯಾದ ತೀವ್ರತೆಯನ್ನು ಹೇಳುತ್ತದೆ.
ವಸಾಹತುಶಾಹಿಗೆ ಇಸ್ಲಾಮ್ ಕುರಿತಾದ ಪಡಿಯಚ್ಚನ್ನು, ಪೂರ್ವಾಗ್ರಹಗಳನ್ನು ಖ್ಯಾತ ಸಮಾಜಶಾಸ್ತ್ರಜ್ಞ ಎಡ್ವರ್ಡ್ ಸೈದ್ ತನ್ನ ಪುಸ್ತಕ ‘ಓರಿಯಂಟಲಿಸಂ’ನಲ್ಲಿ ಸುದೀರ್ಘವಾಗಿ ದಾಖಲಿಸುತ್ತಾರೆ. ವಸಾಹತುಶಾಹಿಗೆ ಅರಬ್ ಜಗತ್ತು ಮೋಸಗಾರರ, ಸೋಮಾರಿಗಳ, ಅಪನಂಬಿಕೆಯ, ನಿಗೂಢವಾಗಿರುವ ಮುಸ್ಲಿಮ್ ಜಗತ್ತು. ಅದು ಸಾಂಸ್ಕೃತಿಕವಾಗಿ ಮತ್ತು ದೈಹಿಕವಾಗಿ ಕೀಳು ಮಟ್ಟದಲ್ಲಿರುತ್ತದೆ. ಈ ಪೂರ್ವಾಗ್ರಹ ಮತ್ತು ಪಡಿಯಚ್ಚು ಸಾಂಸ್ಕೃತಿಕವಾಗಿ, ಜ್ಞಾನದ ರೂಪದಲ್ಲಿ ಆಳವಾಗಿ ಬೇರೂರಿರುತ್ತದೆ. ಹಾಗಾಗಿ ಪಾಶ್ಚಾತ್ಯ ಜಗತ್ತಿನ ಕಣ್ಣಲ್ಲಿ ಅರಬರು/ ಮುಸಲ್ಮಾನರು ಸದಾಕಾಲ ಶಂಕಿತರು. ಇಲ್ಲಿ ಅರಬ್ ಜಗತ್ತು ಮತ್ತು ಮುಸ್ಲಿಮ್ ಜಗತ್ತು ಬೇರೆ ಬೇರೆ ಅಲ್ಲ.
ಇಸ್ಲಾಮೋಫೋಬಿಯಾವನ್ನು ಇನ್ನೊಂದು ದೃಷ್ಟಿಕೋನದಿಂದಲೂ ನೋಡಬಹುದು. ಇದು ಬಹಳ ಮುಖ್ಯವಾಗಿ ಭಾರತದ ಸಂದರ್ಭದಲ್ಲಿ, ಅದರಲ್ಲಿಯೂ ವಸಾಹತುಶಾಹಿ ಕಾಲಘಟ್ಟದಲ್ಲಿ ಕಂಡು ಬರುತ್ತದೆ. ಇದನ್ನು ಹಿಂದುತ್ವ ದೃಷ್ಟಿಕೋನದ ಇಸ್ಲಾಮೋಫೋಬಿಯಾ ಎಂದು ಕರೆದರೆ ತಪ್ಪೇನಲ್ಲ. ಇದರಲ್ಲಿ ಬಹುಮುಖ್ಯವಾಗಿ ಸಾವರ್ಕರ್‌ರ ‘ಎಸೆನ್ಸೀಯಲ್ಸ್ ಆಫ್ ಹಿಂದುತ್ವ’ ಗ್ರಂಥ ಒಂದಾದರೆ, ಬಂಕಿಮ್ ಚಂದ್ರ ಚಟರ್ಜಿಯವರ ‘ಆನಂದಮಠ’, ‘ದೇಬಿ ಚೌದುರಾಣಿ’ ಮತ್ತು ‘ಸೀತಾರಾಮ್’. ಇನ್ನೊಂದೆಡೆ ಬಂಕಿಮ್ ಚಂದ್ರರು ಭಾರತದ ರಾಷ್ಟ್ರೀಯತೆಯನ್ನು ಹಿಂದೂ ರಾಷ್ಟ್ರೀಯತೆಗೆ, ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಮುಸ್ಲಿಮರ ಮೇಲಿನ ಹಿಂದೂ ಸನ್ಯಾಸಿಗಳ ಆಕ್ರಮಣವನ್ನು ಬೆಂಬಲಿಸುತ್ತಾ, ವೈಭವೀಕರಿಸುತ್ತಾರೆ.ಮುಸ್ಲಿಮರನ್ನು ತಮ್ಮ ಏಕೈಕ ವೈರಿಗಳೆಂದು ಚಿತ್ರೀಕರಿಸುತ್ತಾರೆ. ವಿಚಿತ್ರವೆಂದರೆ ಸಾವರ್ಕರ್ ಹಿಂದುತ್ವದ ಪ್ರತಿಪಾದಕರಾಗುವ ಪೂರ್ವದಲ್ಲಿ ಹಿಂದೂ-ಮುಸ್ಲಿಮರ ನಡುವಿನ ಅನ್ಯೋನ್ಯತೆಯ ಸಂಕೇತವಾಗಿದ್ದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಸ್ವಾಗತಿಸುತ್ತಾರೆ. ಅದಕ್ಕೆ ಪೂರಕವಾಗಿ ‘ಇಂಡಿಯಾಸ್ ಫಸ್ಟ್ ವಾರ್ ಆಫ್ ಇಂಡಿಪೆಂಡನ್ಸ್’ ಎಂಬ ತಮ್ಮ ಚಾರಿತ್ರಿಕ ಗ್ರಂಥದಲ್ಲಿ ಹೋರಾಟದ ವಿವಿಧ ಆಯಾಮಗಳನ್ನು, ಮುಸಲ್ಮಾನ ಉಲೇಮಾಗಳ ಕೊಡುಗೆಗಳನ್ನು, ಮುಸ್ಲಿಮ್ ಅರಸರ ಕೊಡುಗೆಗಳನ್ನು, ಮುಸ್ಲಿಮ್ ಜಮೀನ್ದಾರರು, ತಾಲೂಕ್ದಾರರು, ಕ್ರಾಂತಿಕಾರಿ ಹೋರಾಟಗಾರರು ಮತ್ತು ರೈತಾಪಿ ಮುಸಲ್ಮಾನರ ಪಾತ್ರವನ್ನು ದಾಖಲಿಸುತ್ತಾರೆ. ವಿಚಿತ್ರವೆಂದರೆ ಅವರು ಆನಂತರ ಹಿಂದುತ್ವದ ಪ್ರತಿಪಾದಕರಾಗುತ್ತಾರೆ- ಮುಸಲ್ಮಾನರು ಅನ್ಯರು, ಪಿತೃಭೂಮಿ, ಪುಣ್ಯ ಭೂಮಿಯನ್ನು ಒಪ್ಪದವರು. ಈ ವೈರುಧ್ಯ ನಿಜವೂ ಹೌದು, ವಿಚಿತ್ರವೂ ಹೌದು. ಅದೇನೇ ಇದ್ದರೂ ಇಂದಿನ ಇಸ್ಲಾಮೋಫೋಬಿಯಾಕ್ಕೆ ಇವರ ಕೊಡುಗೆಯನ್ನು ನಿರಾಕರಿಸುವಂತಿಲ್ಲ. ಯಾಕೆಂದರೆ ಇಂದಿನ ಕಥನಗಳು, ನಿರೂಪಣೆಗಳು ಅವರ ವಾದಗಳ ಆಧಾರದ ಮೇಲೆ ನಿಂತಿವೆ. ಉಳಿದವರ ಪ್ರಭಾವ, ಅದರಲ್ಲೂ ಬಾಲ ಗಂಗಾಧರ್ ತಿಲಕ್, ಅರಬಿಂದೋ ಘೋಷ್, ಆರ್ಯ ಸಮಾಜ, ಗುಲ್ವಾಡಿ ವೆಂಕಟರಾವ್ ಮುಂತಾದವರ ಪ್ರಭಾವ ಕಡಿಮೆ ಎಂದೇ ಹೇಳಬೇಕು.