ಶಿಕ್ಷಣದ ನಾಶವೇ ದೇಶದ ವಿನಾಶವೆಂಬ ಎಚ್ಚರ ಅಗತ್ಯ
ಯಾವುದೇ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುವುದು ಹಾಗೂ ಮಾನವನ ನಾಗರಿಕ ಬದುಕಿನ ಸರ್ವತೋಮುಖ ಅಭಿವೃದ್ಧಿಯ ತಳಹದಿಯಾಗಿರುವುದು ಶಿಕ್ಷಣ. ಮಾನವನ ಮನಸ್ಸನ್ನೂ ವೈಚಾರಿಕವಾಗಿ ಅರಳಿಸಿ, ಮಾನವೀಯ ಅಂತಃಕರಣದ ಮೂಲಕ ಪರಿಪೂರ್ಣನನ್ನಾಗಿಸುವ ನೆಲೆಯಲ್ಲಿ ಚಿಂತಿಸುವಂತೆ ಮಾಡುವ ಸಾಧನವೇ ಶಿಕ್ಷಣ ಹಾಗೂ ಶಿಕ್ಷಕ. ಈ ಸಾಧನ ಇಂದು ಭಾರತದಲ್ಲಿ ಏನಾಗುತ್ತಿದೆ?
ಭಾರತಕ್ಕೆ ಸಹನೆ ಮತ್ತು ಪ್ರೀತಿ ನನ್ನ ಧರ್ಮ ಎಂದು ವಿವೇಕದ ಪಾಠಹೇಳಿದ ಮಹಾತ್ಮಾ ಗಾಂಧಿ ಹೇಳುವಂತೆ; ಯಾವುದೇ ಶಿಕ್ಷಣ ವಿದ್ಯಾರ್ಥಿಗಳನ್ನು ಸಾಮಾಜಿಕ ಕೆಡುಕುಗಳ ಅಥವಾ ಇನ್ನಿತರ ಅನ್ಯಾಯಗಳ ವಿರುದ್ಧ ಹೋರಾಡುವಂತೆ ಸಿದ್ಧಗೊಳಿಸಲಾರದೋ, ಆ ಶಿಕ್ಷಣ ಪದ್ಧತಿಯಲ್ಲಿ ಮೂಲಭೂತವಾಗಿ ಏನೋ ದೋಷವಿದೆ ಎಂದು. ಈ ಮಾತನ್ನು ಚಾರಿತ್ರಿಕವಾಗಿ ಅರ್ಥಮಾಡಿಕೊಳ್ಳುತ್ತಾ, ವರ್ತಮಾನಕ್ಕೆ ಸಮೀಕರಿಸಿ ನೋಡಿದರೆ; ಈ ದೋಷ ಇಂದಿನ ಯುವ ತಲೆಮಾರಿನ ಮಿದುಳಿಗೆ ಮಾತ್ರವಲ್ಲದೆ, ದೇಹದ ತುಂಬೆಲ್ಲ ಹರಡಿಕೊಂಡಿದೆ ಎನಿಸುತ್ತಿದೆ. ಇಲ್ಲಿ ಧರ್ಮ ಕೋಮುವಾದಗೊಂಡು, ಅದರೊಳಗಿನ ಜಾತಿವ್ಯವಸ್ಥೆ ಗರ್ವವಾಗಿ ಮಾರ್ಪಾಡುಗೊಂಡಿದೆ. ಆದ್ದರಿಂದಲೇ ಇಲ್ಲಿ ಕರುಣೆ, ಮಮತೆ, ಸಮತೆ, ಮೈತ್ರಿ, ಸಹನೆಯ ಬದಲಾಗಿ ಸ್ವಾರ್ಥ, ದ್ವೇಷ, ಅಸೂಯೆ, ಕಂದಾಚಾರ, ವೈಷಮ್ಯಗಳು ರಾರಾಜಿಸುತ್ತಿವೆ. ಏಖಮುಖ ಪ್ರಚೋದನೆಗಳಿಗೆ ಕಿವಿ, ಬಾಯಿಯಾಗಿರುವ ವಿದ್ಯಾರ್ಥಿಗಳು ದಿಕ್ಕು-ದೆಸೆಯಿಲ್ಲದೆ ಟಾಂಗ ಗಾಡಿಗೆ ಕಟ್ಟಿದ ಕುದುರೆಯಂತಾಗುತ್ತಿರುವುದು ಅಪಾಯದ ಮುನ್ಸೂಚನೆ.
ವಿದ್ಯಾರ್ಥಿಗಳ ಮನಸ್ಸು, ಯೋಚನಾಮಟ್ಟ, ವಾಸ್ತವತೆಯನ್ನು ಕಡೆಗಣಿಸಿ ವಿರೋಧಾಭಾಸಗಳಿಂದ ಕೂಡಿದ ಮಾತುಗಳಿಗೆ ಮಾರುಹೋಗುತ್ತಿವೆ. ಇದಕ್ಕೆ ಕಾರಣ ಶಿಕ್ಷಣ ಕ್ಷೇತ್ರವು ವ್ಯಾಪಾರೀಕರಣ, ರಾಜಕೀಯ ಹಾಗೂ ಧಾರ್ಮಿಕೀಕರಣಗೊಳ್ಳುತ್ತಿರುವುದು. ಆದ್ದರಿಂದಲೇ ಅವೈಚಾರಿಕ, ಅವೈಜ್ಞಾನಿಕ, ಅಸಂಪ್ರದಾಯಿಕವಾದ ಮುಷ್ಕರ-ಘರ್ಷಣೆಗಳು ವಿದ್ಯಾರ್ಥಿಗಳನ್ನು ಯೋಚಿಸುವ, ಪ್ರಶ್ನಿಸುವ ಹಾಗೂ ವಿವೇಚಿಸುವ ಮನೋಭಾವವನ್ನೇ ಕುಂಠಿತಗೊಳಿಸುತ್ತಿದೆ. ಇದರ ಪ್ರತಿಫಲವೇ ಏನನ್ನೂ ಪ್ರಶ್ನಿಸದೆ, ಎಲ್ಲವನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳುವ ಗುಲಾಮಿ ಪ್ರವೃತ್ತಿ ಮುನ್ನೆಲೆಗೆ ಬಂದಿರುವುದು. ಇಂದಿನ ಪರಿಸ್ಥಿತಿ ಕೈಮೀರಿ ಹೋಗಿ ಆಗಿದೆ. ವಿದ್ಯಾರ್ಥಿ-ಶಿಕ್ಷಕರ ನಡುವಿನ ಅಂತರ ಜಾಸ್ತಿಯಾಗಿದೆ. ಇವರಿಬ್ಬರ ನಡುವೆ ಕಂದಕ ಸೃಷ್ಟಿಯಾಗಿದೆ. ಓದು ಕುರಿತಾಗಿ ಆಸಕ್ತಿ ಕಳೆದುಕೊಂಡಿರುವ ವಿದ್ಯಾರ್ಥಿಗಳು ಹೆಚ್ಚಾಗಿಯೇ ಇದ್ದಾರೆ. ಇಂತಹ ಅಂಧಕಾರದ ಮಕ್ಕಳಿಗೆ ಏನು ಪಾಠ ಮಾಡಿದರೂ ವ್ಯರ್ಥ ಎಂಬ ಸ್ಥಿತಿಗೆ ಶಿಕ್ಷಕರೂ ತಲುಪಿದ್ದಾರೆ. ಈ ಮನಸ್ಥಿತಿ ನಿರ್ಮಾಣಗೊಳ್ಳಲು ಕಾರಣವೇನು? ವರ್ತಮಾನದಲ್ಲೇ ಯಾಕೆ ಹೀಗಾಗುತ್ತಿದೆ? ಎಂದು ಚರ್ಚಿಸಬೇಕಾದ ಅನಿವಾರ್ಯ ಜರೂರಿದೆ.
ವಿದ್ಯಾರ್ಥಿಗಳು ಹೇಗಿರಬೇಕು ಎಂಬುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಆದರ್ಶ ಉದಾಹರಣೆ. ಬಾಬಾಸಾಹೇಬರು ಹೇಳುವಂತೆ; ಶಿಷ್ಯನಾದವನು ತನ್ನ ಗುರುವಿನಿಂದ ಮಾರ್ಗದರ್ಶನ ಪಡೆಯುತ್ತಾನೆ. ಅವನು ತನ್ನ ಗುರುನಿನ ಸಿದ್ಧಾಂತಗಳನ್ನು ಮತ್ತು ನಿರ್ಣಯಗಳನ್ನು ಸ್ವೀಕರಿಸಬೇಕಾಗಿಲ್ಲ. ಗುರುವಿನ ತತ್ವಗಳನ್ನು ನಿರಾಕರಿಸುವಾಗಲೂ ಶಿಷ್ಯ ತನ್ನ ಗುರುವಿನ ಬಗ್ಗೆ ತನ್ನ ಆಳವಾದ ಗೌರವವನ್ನು ವ್ಯಕ್ತಪಡಿಸುತ್ತಾನೆ. ವಸ್ತುನಿಷ್ಠವಾದ ಓದು ಹಾಗೂ ಪ್ರಶ್ನೆಗಳ ಮೂಲಕ ತಮ್ಮ ಜ್ಞಾನಭಂಡಾರವನ್ನು ಸಂಪಾದಿಸಿಕೊಂಡವರು ಬಾಬಾಸಾಹೇಬರು. ಅವರ ಓದಿನ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿಗೆ ಆಹ್ವಾನಿಸುತ್ತಾರೆ. ಆಗ ಮೊದಲು ನನ್ನ ಕೆಲಸ ಓದು, ಆನಂತರ ಎಲ್ಲವೂ ಎಂಬ ಪರಿಪೂರ್ಣವಾದ ಜ್ಞಾನ ಸಂಪಾದಿಸಲು ನಿಂತ ಅಂಬೇಡ್ಕರ್ ಅವರ ನಡೆ ಇವತ್ತಿನ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕಾಗಿದೆ. ಬಾಬಾಸಾಹೇಬರು ತಮ್ಮ ಜ್ಞಾನಶಿಸ್ತಿನಿಂದಲೇ ಇಡೀ ಜಗತ್ತೇ ಮೆಚ್ಚುವಂತಹ ಭಾರತದ ಸಂವಿಧಾನವನ್ನು ಬರೆದುಕೊಟ್ಟದ್ದು ಎಲ್ಲರಿಗೂ ತಿಳಿದಿರುವ ವಸ್ತುನಿಷ್ಠ ಸತ್ಯ.
ಯಾವುದೇ ದೇಶವನ್ನು ಈಗ ನಾಶಮಾಡಲು ಪರಮಾಣು ಹಾಗೂ ಕ್ಷಿಪಣಿಗಳ ಬಳಕೆಯ ಅಗತ್ಯವಿಲ್ಲ. ಬದಲಾಗಿ; ಆ ದೇಶದ ಶಿಕ್ಷಣ ಕ್ಷೇತ್ರವನ್ನು ವ್ಯಾಪಾರೀಕರಣ, ಧಾರ್ಮಿಕೀಕರಣ ಹಾಗೂ ನಕಲು ಪದವಿಗಳನ್ನು ನೀಡಿದರೆ ಸಾಕು. ಹೀಗೆ ವ್ಯಾಪಾರ, ಧಾರ್ಮಿಕ ಅತಿರೇಕ ಹಾಗೂ ನಕಲುಗೊಂಡ ವೈದ್ಯನಿಂದ ರೋಗಿ, ಇಂಜಿನಿಯರ್‌ಗಳಿಂದ ಕಟ್ಟಡಗಳು, ಅರ್ಥಶಾಸ್ತ್ರಜ್ಞನಿಂದ ಆರ್ಥಿಕ ನೀತಿ, ಧಾರ್ಮಿಕ ವಿದ್ವಾಂಸನಿಂದ ಮಾನವೀಯತೆ, ನ್ಯಾಯಾಧೀಶನಿಂದ ನ್ಯಾಯ, ಉಪನ್ಯಾಸಕರಿಂದ ವಿದ್ಯಾರ್ಥಿಗಳು ಸಾಲುಗಟ್ಟಿ ಸಾಯುತ್ತಾರೆ ಅಲ್ಲವೇ? ಮೇಷ್ಟ್ರಾದವರು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳೊಂದಿಗೆ ಜ್ಞಾನಶಿಸ್ತಿನಂತೆ ವರ್ತಿಸಬೇಕು. ನೈತಿಕವಾಗಿ ಇದ್ದುಕೊಂಡು ನುಡಿದಂತೆ ನಡೆಯಬೇಕು. ಆದರ್ಶ, ಮಾದರಿ, ಪ್ರೇರಣೆಗಳೆಂಬ ಪದಗಳಿಗೆ ಜೀವಂತ ಸಾಕ್ಷಿಯಾಗಬೇಕು. ಹಾಗೆಯೇ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದಾಗ ಮಾತ್ರ ಗುರು ಕಾಣುತ್ತಾನೆ ಎಂಬ ಎಚ್ಚರವೂ ಇರಬೇಕು. ಆಗ ಮಾತ್ರ ಮೇಷ್ಟ್ರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧಕ್ಕೆ ಅರ್ಥ ಬರುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ತನ್ನ ಮನೆಯೊಳಗಿನ ಮಕ್ಕಳಿಗಿಂತಲೂ ಹೆಚ್ಚಾಗಿ ಕಾಳಜಿ ಹಾಗೂ ಪ್ರೀತಿ ತೋರುತ್ತಾರೆ. ಜೊತೆಗೆ ವಿವೇಕದ ಪಾಠ ಹೇಳುತ್ತಾರೆ. ತಮ್ಮ ವಿದ್ಯಾರ್ಥಿಗಳು ಗೆದ್ದಾಗ ಸಂಭ್ರಮಿಸುವ ಹಾಗೂ ಸೋತಾಗ ಬೆನ್ನಿಗೆ ನಿಂತು ಗೆಲ್ಲುವ ತನಕವೂ ಛಲಬಿಡದೆ ಜತನದಿಂದ ಆತ್ಮಸ್ಥೈರ್ಯ ತುಂಬುತ್ತಾರೆ. ಓದದೆ, ಬರೆಯದೆ ಒಂದೇ ಒಂದು ದಿನ ಬದುಕಿರುವುದನ್ನು ತನ್ನಿಂದ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲದ ಶಿಕ್ಷಕರುಗಳೂ ನಮ್ಮ ನಡುವೆ ಇದ್ದಾರೆ. ಅವರ ಕನಸು ಹಾಗೂ ಜೀವಾಳವೇ ವಿದ್ಯಾರ್ಥಿಗಳು.
ಇತ್ತೀಚೆಗೆ ಅಕ್ಷರದ ಹಸಿವಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿ ರುವುದು ಭವಿಷ್ಯದ ಭಾರತಕ್ಕೆ ಆತಂಕವಾಗಿದೆ. ಬಹುತೇಕರಲ್ಲಿನ ಬೇಕಾಬಿಟ್ಟಿಯ ಮನಸ್ಥಿತಿ ಕಂಡು ಆಶ್ಚರ್ಯವೇನೂ ಆಗುತ್ತಿಲ್ಲ. ಏಕೆಂದರೆ; ಮಕ್ಕಳ ಈ ಮನಸ್ಥಿತಿಗೆ ಅವರ ಪೋಷಕರೇ ಪ್ರಮುಖ ಹೊಣೆಗಾರರು. ಮಕ್ಕಳು ಪೋಷಕರೊಂದಿಗೆ, ಪೋಷಕರು ಮಕ್ಕಳೊಂದಿಗೆ ಪರಸ್ಪರ ಸಂವಾದಿಸುತ್ತಿದ್ದರೆ ಈ ತರಹದವು ಘಟಿಸುವುದಿಲ್ಲ. ಪೋಷಕರೇ ನಿಮ್ಮ ಮಕ್ಕಳ ಕಲಿಕೆಯ ಮೇಲೆ ದಿನನಿತ್ಯ ಕಣ್ಣಿಡಿ. ಏನನ್ನು ಕಲಿಯುತ್ತಾರೆ, ಅವರ ವರ್ತನೆಗಳು ಹೇಗಿವೆ, ಸಹವಾಸ ಯಾವ ಹಾದಿಯಲ್ಲಿದೆ ಹೀಗೆ ಹಲವುಗಳ ಕಡೆಗೆ ಗಮನವಿರಲಿ. ರಾಜಕಾರಣದ ಉದ್ದೇಶಕ್ಕಾಗಿ ದ್ವೇಷದ ರೂಪದಲ್ಲಿ ವಿಷ ಬಿತ್ತುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿ ಮಕ್ಕಳ ಮನಸ್ಥಿತಿಯೂ ಬಹಳ ಮುಖ್ಯ. ಯಾವ ಮಕ್ಕಳಿಗೆ ತನ್ನ ಅಪ್ಪನ ಬೆವರಿನ ವಾಸನೆ, ಅವ್ವನ ಸಂಕಟಗಳು ಅರ್ಥವಾಗುತ್ತದೋ ಅಂತಹ ಮಕ್ಕಳು ಹಾದಿ ತಪ್ಪುವುದಿಲ್ಲ. ಮನೆಯೊಳಗಿರುವ ಬಡತನದ ನೋವು ಮಕ್ಕಳಿಗೆ ಅರ್ಥವಾಗಬೇಕು. ಅಕ್ಷರದ ಮೂಲಕವೇ ಬಡತನವನ್ನು ಬುಡಮಟ್ಟ ಕೀಳಬಹುದು ಎಂಬ ಎಚ್ಚರ ಹುಟ್ಟಿಬೆಳೆಯಬೇಕು. ವಿದ್ಯಾರ್ಥಿಗಳು ಅಕ್ಷರದ ಮೂಲಕವೇ ಬದುಕು ಕಟ್ಟಿಕೊಳ್ಳಬೇಕು. ಏಕೆಂದರೆ; ಅಕ್ಷರದ ಬದುಕು ಆತ್ಮಸ್ಥೈರ್ಯವನ್ನು, ಸ್ವಾಭಿಮಾನವನ್ನು ಕಟ್ಟಿಕೊಡುತ್ತದೆ. ಸಾಮಾನ್ಯವಾಗಿ ಈ ತಲೆಮಾರಿನ ಮಧ್ಯಮ ವರ್ಗದ, ಶೋಷಿತ ಸಮುದಾಯದ ಮಕ್ಕಳು ಅರ್ಥಮಾಡಿಕೊಳ್ಳಬೇಕಾಗಿರುವುದು ಶಿಕ್ಷಣ ಎನ್ನುವುದು ತಾನಿರುವ ಕತ್ತಲೆಯನ್ನು ಅರಿತು, ಬೆಳಕಿನೆಡೆಗೆ ಸಾಗಿಸುವ ದಾರಿ ಎಂದು. ಇಲ್ಲಿ ನಿನಗೆ ನೀನೇ ಬೆಳಕು. ವಿದ್ಯಾರ್ಥಿಗಳು ಓದನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬೇಕು. ಏಕೆಂದರೆ; ಮಾದರಿ ವ್ಯಕ್ತಿತ್ವ ರೂಪಿಸಿಕೊಂಡು ಮುಂದಿನ ತಲೆಮಾರಿಗೆ ಆದರ್ಶವಾಗಿ ಉಳಿಯಲು. ವರ್ತಮಾನದಲ್ಲಿ ನಿಮ್ಮನ್ನು ವಿಚಲಿತಗೊಳಿಸುವ ಅಗ್ಗದ ರಂಜನೆಗಳು, ಸೇಡು-ಕೇಡು, ಹುಸಿ ಉದ್ರೇಕಗಳು, ಅಪಾಯಕಾರಿ ಪ್ರಚೋದನೆಗಳು ಹೆಚ್ಚಾಗಿವೆ. ಇದಕ್ಕೆ ಕಾರಣವಾಗುವ ವ್ಯಕ್ತಿ ಹಾಗೂ ವ್ಯವಸ್ಥೆಗಳಿಂದ ಸಾಧ್ಯವಾದಷ್ಟು ದೂರ ಇರುವುದು ವಿದ್ಯಾರ್ಥಿಗಳ ಬದುಕಿಗೆ ಒಳಿತು.
ವಿದ್ಯಾರ್ಥಿಗಳೇ ಗಮನಿಸಿ; ಒಂದು ದೊಡ್ಡಮಟ್ಟದ ಯಶಸ್ಸಿನ ತನಕವಷ್ಟೇ ಈ ಜೀವನ ಕಷ್ಟ ಅನ್ನಿಸುವುದು. ಅಲ್ಲಿಯತನಕ ಬದುಕಿನಲ್ಲಿ ಘಟಿಸುವ ನಾನಾ ಬಗೆಯ ನೋವು-ಯಾತನೆಗಳನ್ನು ಅವುಡುಗಚ್ಚಿಕೊಂಡು ಸಹಿಸಿಕೊಳ್ಳಬೇಕು.
ವಿದ್ಯಾರ್ಥಿಗಳೇ, ನೀವು ಕಂಡಿರುವ ಕನಸುಗಳು ನಿಜವೇ ಆಗಿದ್ದು, ಅದಕ್ಕೆ ಬೇಕಾದ ಶ್ರಮ ಹಾಗೂ ನಿಷ್ಠೆ ತೋರಿದ್ದೇ ಆದರೆ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೀರಿ. ನಿಮ್ಮ ಕನಸುಗಳು ದೊಡ್ಡದಾಗಿರಲಿ, ಜೊತೆಗೆ ಗಮನವೆಲ್ಲವೂ ಆ ಕಡೆಗೆ ಮಾತ್ರವೇ ಇರಲಿ. ಯಾವುದೇ ಬಗೆಯ ಟೀಕೆ-ಟಿಪ್ಪಣಿ, ಹೀಯಾಳಿಕೆ-ತಿರಸ್ಕಾರಗಳು ಹಾಗೂ ಧಾರ್ಮಿಕ ಉನ್ಮಾದಗಳು ನಿಮ್ಮನ್ನು ವಿಚಲಿತರನ್ನಾಗಿಸಬಾರದು.
ಈ ಬದುಕು ನಿಮ್ಮ ಜವಾಬ್ದಾರಿ ಮಾತ್ರವೇ ಆಗಿರುತ್ತದೆ. ನಿಮ್ಮ ಓದಿನ ಅವಧಿಯಲ್ಲಿ ಪ್ರಾಮಾಣಿಕವಾಗಿ ತಮ್ಮ ಗುರಿಯೆಡೆಗೆ ಸಾಗಲು ಓದುವುದನ್ನೇ ಕಾಯಕವಾಗಿಸಿಕೊಳ್ಳಿ. ಯಾರು ಏನೇ ಅಂದರೂ ನಿಮ್ಮ ಆತ್ಮವಿಶ್ವಾಸ ಕುಗ್ಗಬಾರದು. ನಿನ್ನ ಗುರಿ ಇರುವುದು ಮುಂದೆಯೇ ಹೊರತು, ಹಿಂದಲ್ಲ.
ದೊಡ್ಡ ದೊಡ್ಡ ಹುದ್ದೆಗಳ ಮೇಲೆ ಗುರಿಯಿಡಿ. ಅದಕ್ಕಾಗಿ ತೆರಬೇಕಿರುವ ಶ್ರಮ ಹಾಗೂ ಮಹತ್ವಾಕಾಂಕ್ಷೆಯನ್ನು ಕಡಿಮೆ ಮಾಡಬೇಡಿ. ಓದುವಾಗಲೇ ಐಎಎಸ್, ಐಪಿಎಸ್, ಕೆಎಎಸ್, ಪ್ರಾಧ್ಯಾಪಕರು, ನ್ಯಾಯಾಧೀಶರು ಹೀಗೆ ದೊಡ್ಡ-ದೊಡ್ಡ ಹುದ್ದೆಗಳ ಕಡೆಗೆ ತಯಾರು ನಡೆಸಿ. ಇಂತಹ ಉನ್ನತ ಹುದ್ದೆಗಳ ಕಡೆಗೆ ನಿಮ್ಮ ಗಮನ ಹೆಚ್ಚು ಹರಿಸಿದಾಗ ಬೀದಿಯಲ್ಲಿನ ಉದ್ರೇಕ ಸಂಗತಿಗಳು ನಿಮ್ಮನ್ನು ಚಂಚಲಗೊಳಿಸಲಾರವು. ಹೀಗೆ ಪ್ರಜ್ಞಾವಂತರಾದ ವಿದ್ಯಾರ್ಥಿಗಳು ನೌಕರಿ ಪಡೆದು ಮನುಷ್ಯ-ಮನುಷ್ಯರ ನಡುವೆ ಇರುವ ಗೋಡೆಗಳನ್ನು ಕೆಡವಿ, ಬೆಸೆಯುವ ಸೇತುವೆಗಳನ್ನು ಕಟ್ಟಿ, ಆ ಮೂಲಕ ನೆಮ್ಮದಿಯ, ಸೌಹಾರ್ದದ, ಭ್ರಷ್ಟಾಚಾರ ರಹಿತ, ಜಾತಿರಹಿತ, ಲಿಂಗ ತಾರತಮ್ಯವಿಲ್ಲದ ಭಾರತವನ್ನು ಕಟ್ಟಬೇಕಾದ ನೈತಿಕ ಜವಾಬ್ದಾರಿ ವಹಿಸಬೇಕಾಗಿದೆ.
ಈ ಹೊತ್ತಿನಲ್ಲಿ ವಿದ್ಯಾರ್ಥಿ ತಲೆಮಾರಿಗೆ ಸಾಕಷ್ಟು ಸವಾಲುಗಳು ಎದುರುಗೊಳುತ್ತಿವೆ. ಎಲ್ಲದಕ್ಕೂ ತಯಾರಾಗುವ ಮೂಲಕ ಬಂಡೆಗಳ ಮೇಲೆ ಚಿಗುರೊಡೆಯಬೇಕು. ಅಕ್ಷರ ಕಲಿತವರಿಗೆ ಒಂದು ಎಚ್ಚರವಿರಲಿ; ಯಾರನ್ನಾದರೂ ಟೀಕಿಸಲೇಬೇಕು ಎಂಬ ಉದ್ದೇಶದಿಂದ ಅಹಂ ಏನನ್ನಾದರೂ ಕಾರಣ ಹುಡುಕುತ್ತಿರುತ್ತದೆ. ಆದರೆ, ಪ್ರಶಂಸಿಸಲೇಬೇಕು ಎನ್ನುವುದಕ್ಕಾಗಿ ಪ್ರೀತಿ ಒಂದು ಸಣ್ಣ ಕಾರಣವನ್ನಾದರೂ ಕಂಡುಕೊಳ್ಳುತ್ತದೆ. ಇಲ್ಲಿ ಆಗಬೇಕಾಗಿರುವುದು ಇಷ್ಟೇ; ನಾನು ಎಂಬುದು ನಾಶವಾಗಿ, ನಾವು ಎಂಬುದು ಉಳಿದು, ಬೆಳೆದು ಮತ-ಧರ್ಮಗಳೆನ್ನದೆ ಪ್ರತಿಯೊಬ್ಬರ ಎದೆಯೊಳಗೆ ಕರುಣೆ, ಪ್ರೀತಿ, ಸಮತೆ, ಪ್ರಜ್ಞೆ, ಸಹಬಾಳ್ವೆ ನೆಲೆ ಗೊಂಡು ಭವಿಷ್ಯದ ಭಾರತವನ್ನು ನಿರ್ಮಿಸಿ ನಮ್ಮ ಮುಂದಿನ ತಲೆಮಾರಿಗೆ ಮಾದರಿಯಾಗಿ ಉಳಿಯೋಣ.
ಪ್ರಭುತ್ವವೂ ಇತ್ತ ಕಡೆಗೆ ಗಮನ ಹರಿಸಬೇಕು. ಶಿಕ್ಷಕರು ಈ ದೇಶವನ್ನು ಕಟ್ಟುವ ಹಾಗೂ ಮುನ್ನಡೆಸುವ ನಾವಿಕರಿದ್ದಂತೆ. ಇವರಿಗೆ ಕಾನೂನಿನ ರಕ್ಷಣೆಯ ಅಗತ್ಯತೆ ತುರ್ತಾಗಿದೆ. ಜೊತೆಗೆ ಯಾವುದೇ ಶಿಕ್ಷಕನಿಗೆ ಕೊಠಡಿಯೊಳಗೆ ಪಠ್ಯಕ್ಕೆ ಪೂರಕವಾಗಿ ಉದಾಹರಣೆಯನ್ನು ಕೊಟ್ಟು ಪಾಠ ಮಾಡುವ ಸ್ವಾತಂತ್ರ್ಯ ಇರಬೇಕು. ಇದು ಕಾನೂನಾಗಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ, ವಿವೇಕವಂತರನ್ನಾಗಿಸುತ್ತಾ, ವೈಜ್ಞಾನಿಕ ಹಾಗೂ ವೈಚಾರಿಕ ಮನೋಭೂಮಿಕೆಯನ್ನು ಬೆಳೆಸುವುದು ಸಾಂವಿಧಾನಿಕ ಕರ್ತವ್ಯವಾಗಬೇಕಾಗಿದೆ.
ಸಮಸಮಾಜದ ಕನಸನ್ನು ಕಾಣುತ್ತಾ, ಎಲ್ಲಾ ಮತಪಂಥಗಳನ್ನು ಒಟ್ಟಿಗೆ ಸೇರಿಸುತ್ತಾ, ಕೂಡಿಬಾಳಿದರೆ ಸ್ವರ್ಗಸುಖ ಎನ್ನುತ್ತಾ, ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಕಡೆಗೆ ನಮ್ಮೆಲ್ಲರ ಪಯಣ ಸಾಗುವಂತಾಗಲಿ.