ನಾಳೆಯಿಂದ ವಿಧಾನ ಮಂಡಲದ ಜಂಟಿ ಅಧಿವೇಶನ; ಮಹತ್ವ ಪಡೆದುಕೊಳ್ಳಲಿರುವ ರಾಜ್ಯ ಬಜೆಟ್
ಸಿಎಂ ಸಿದ್ದರಾಮಯ್ಯರ 15 ನೇ ಬಜೆಟ್
ಬೆಂಗಳೂರು, ಫೆ.10: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಎರಡನೇ ಬಜೆಟ್ ಅಧಿವೇಶನವು ಫೆ.12ರಿಂದ ಆರಂಭಗೊಳ್ಳಲಿದೆ. ಅಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲಿದ್ದು, ಫೆ.16ರಂದು ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಲೋಕಸಭೆ ಚುನಾವಣೆಗೆ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಭಾರತೀಯ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸುವ ಸಾಧ್ಯತೆಯಿರುವುದರಿಂದ ಈ ಬಾರಿ ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಮಂಡಿಸಲಿರುವ ದಾಖಲೆಯ 15ನೇ ಬಜೆಟ್ ಹೆಚ್ಚು ಮಹತ್ವವನ್ನು ಪಡೆದುಕೊಳ್ಳಲಿದೆ.
ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ರಾಜ್ಯ ಸರಕಾರಕ್ಕೆ, ಲೋಕಸಭೆ ಚುನಾವಣೆಯು ಅಗ್ನಿಪರೀಕ್ಷೆಯಾಗಿದೆ. ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಕಾಂಗ್ರೆಸ್ ಸರಕಾರದ ಪರವಾಗಿ ಪರಿಣಾಮ ಬೀರಲಿದೆ ಎಂಬುದು ಈ ಲೋಕಸಭಾ ಚುನಾವಣೆಯಲ್ಲಿ ಬಯಲಾಗಲಿದೆ. ಅದರ ಜೊತೆಗೆ, ಬಜೆಟ್‌ನಲ್ಲಿಯೂ ಹೆಚ್ಚಿನ ಕೊಡುಗೆಗಳನ್ನು ಘೋಷಣೆ ಮಾಡುವ ಮೂಲಕ ಮತದಾರರ ಮನ ಗೆಲ್ಲಲು ಸಿಎಂ ಕಸರತ್ತು ನಡೆಸುವುದಂತೂ ನಿಶ್ಚಿತ.
ರಾಜ್ಯವನ್ನು ಕಾಡುತ್ತಿರುವ ಭೀಕರ ಬರ ಪರಿಸ್ಥಿತಿಯಿಂದಾಗಿ, ರೈತರಿಗೆ ಇನ್ನೂ ಬೆಳೆ ಪರಿಹಾರ ಸಮಗ್ರವಾಗಿ ದೊರೆಯದಿರುವುದು ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಒಂದು ಕಡೆ ರಾಜ್ಯ ಸರಕಾರ ತನ್ನ ಖಜಾನೆಯಿಂದ ರೈತರಿಗೆ 2 ಸಾವಿರ ರೂ.ವರೆಗಿನ ಪರಿಹಾರ ನೀಡುತ್ತಿದ್ದರೆ, ಕೇಂದ್ರ ಸರಕಾರದಿಂದ ಈವರೆಗೆ ಯಾವುದೇ ಪರಿಹಾರ ಬಿಡುಗಡೆಯಾಗದೆ ಇರುವುದು ವಿಪಕ್ಷಗಳ ವಿರುದ್ಧ ಪ್ರಯೋಗಿಸಲು ಸರಕಾರಕ್ಕೆ ಅಸ್ತ್ರ ಸಿಕ್ಕಂತಾಗಿದೆ.
ಕೇಂದ್ರ ಸರಕಾರದ ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯವನ್ನು ಖಂಡಿಸಿ ‘ದಕ್ಷಿಣದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಧ್ವನಿ ಎತ್ತುವಂತೆ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ನೀಡಿದ್ದ ಹೇಳಿಕೆಯು ಸದನದಲ್ಲಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ಅಲ್ಲದೆ, ‘ಡಿ.ಕೆ.ಸುರೇಶ್ ಹಾಗೂ ಶಾಸಕ ವಿನಯ್ ಕುಲಕರ್ಣಿಯನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ನೀಡಿರುವ ಪ್ರಚೋದನಾತ್ಮಕ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಸದಸ್ಯರು ವಾಗ್ದಾಳಿ ನಡೆಸುವ ಸಾಧ್ಯತೆಯಿದೆ.
ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿರುವ ಧ್ವಜಸ್ತಂಭದಲ್ಲಿ ಅನುಮತಿ ಪಡೆಯದೆ ಹಾರಿಸಲಾಗಿದ್ದ ಹನುಮ ಧ್ವಜವನ್ನು ಜಿಲ್ಲಾಡಳಿತ ತೆರವು ಗೊಳಿಸಿದ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಸದನದಲ್ಲಿ ಹೋರಾಡಲು ವಿಪಕ್ಷಗಳು ಸಜ್ಜಾಗಿವೆ.
ಕೇಂದ್ರ ಸರಕಾರ ಅನುದಾನ ಹಾಗೂ ತೆರಿಗೆ ಪಾಲು ಹಂಚಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಸಿದ ಪ್ರತಿಭಟನೆಯ ಔಚಿತ್ಯವನ್ನು ಪ್ರತಿಪಕ್ಷಗಳು ಪ್ರಶ್ನಿಸಬಹುದು. ಅಲ್ಲದೇ, ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಮಂಡನೆ ಮಾಡುವಂತೆ ಸರಕಾರಕ್ಕೆ ಪಟ್ಟು ಹಿಡಿಯುವ ಸಾಧ್ಯತೆಗಳು ಹೆಚ್ಚಿವೆ.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ನಿದ್ದೆಗೆಡಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾಡಿದ್ದ ಸರಕಾರಿ ಕಾಮಗಾರಿಗಳಲ್ಲಿನ 40 ಪರ್ಸೆಂಟ್ ಕಮಿಷನ್ ಆರೋಪವು, ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸರಕಾರದಲ್ಲಿಯೂ 40 ಪರ್ಸೆಂಟ್ ಕಮಿಷನ್ ಮುಂದುವರಿದಿದೆ ಎಂದು ಮಾಡಿರುವ ಆರೋಪವು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈ ಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಮುಂದಾಗಿರುವ ಸರಕಾರದ ಕ್ರಮಕ್ಕೆ ಬಿಜೆಪಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಸದನದಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಅಲ್ಲದೆ, ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಮಾಡಲಾ ಗಿದ್ದ ಮೀಸಲಾತಿ ಪುನರ್ ವರ್ಗೀಕರಣ ಜಾರಿಗೆ ತರುವಂತೆ ಸರಕಾರದ ಮೇಲೆ ಬಿಜೆಪಿ ಒತ್ತಡ ಹೇರುವ ಸಾಧ್ಯತೆಗಳು ಇವೆ.
ನಿಷೇಧಾಜ್ಞೆ ಜಾರಿ
ಫೆ.12ರಿಂದ 23ರ ವರೆಗೆ ಒಟ್ಟು 10 ದಿನಗಳ ಕಾಲ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಕಲಾಪದ ಹಿನ್ನೆಲೆಯಲ್ಲಿ ಫೆ.12ರಿಂದ 23ರ ವರೆಗೆ ಬೆಳಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ಗಂಟೆಯ ವರೆಗೆ ವಿಧಾನಸೌಧ ಕಟ್ಟಡದ 2 ಕಿ.ಮೀ. ವ್ಯಾಪ್ತಿಯಲ್ಲಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ವೇಳೆ 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಮೆರವಣಿಗೆ, ಸಭೆ ನಡೆಸುವುದು, ಶಸ್ತ್ರಾಸ್ತ್ರ, ದೊಣ್ಣೆ ಸಹಿತ ಮಾರಕಾಸ್ತ್ರ ಒಯ್ಯುವುದು, ಸ್ಪೋಟಕಗಳ ಸಾಗಾಟ, ಪ್ರತಿಕೃತಿ ಪ್ರದರ್ಶನ ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.