ಕರಾವಳಿ ಜಲಮೂಲಗಳ ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ‘ಕೆ-ಶೋರ್’
►840 ಕೋ.ರೂ. ವಿಶ್ವ ಬ್ಯಾಂಕ್ ನೆರವು ►ಕೇಂದ್ರ-ರಾಜ್ಯ ಸರಕಾರಗಳ ಸಹಭಾಗಿತ್ವ
ಮಂಗಳೂರು: ಕರ್ನಾಟಕ ಕರಾವಳಿಯ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ತಡೆಯುವ ಸಲುವಾಗಿ ವಿಶ್ವಬ್ಯಾಂಕ್ ನೆರವಿನೊಂದಿಗೆ ‘ಕೆ- ಶೋರ್’ (ಕರ್ನಾಟಕ- ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆ ಯನ್ನು ಸದೃಢಗೊಳಿಸುವುದು) ಯೋಜನೆ ಅನುಷ್ಠಾನಕ್ಕೆ ಅಂತಿಮ ಹಂತದ ಪ್ರಕ್ರಿಯೆಗಳು ನಡೆದಿವೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿರುವ ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ನವೆಂಬರ್ ಅಂತ್ಯದೊಳಗೆ ಕೇಂದ್ರ ಸರಕಾರದಿಂದ ಅನುಮೋದನೆ ಲಭಿಸಿ ಕರ್ನಾಟಕದ ಪ್ರಮುಖ ಕರಾವಳಿ ಭಾಗವಾದ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾರ್ಯಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕವು ದೇಶದ ಕಡಲ ರಾಜ್ಯಗಳಲ್ಲಿ ಒಂದಾಗಿದ್ದು, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2018-19ರಲ್ಲಿ ನೀಡಿರುವ ವರದಿಯಂತೆ ಭಾರತದ ಒಟ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.8(2.73 ಮಿಲಿ ಯನ್ ಮೆಟ್ರಿಕ್ ಟನ್- ವರ್ಷಕ್ಕೆ)ರಷ್ಟಾಗಿದೆ. ನಿರ್ವಹಣೆ ರಹಿತ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಭೂಭರ್ತಿ ಘಟಕಗಳು, ವಿಲೇವಾರಿ ಸ್ಥಳಗಳಿಂದ ಸೋರಿಕೆಯಾಗುವ ಪ್ಲಾಸ್ಟಿಕ್ ತ್ಯಾಜ್ಯ ನದಿಗಳ ಮೂಲ ಸಾಗರ, ಸಮುದ್ರಗಳಿಗೆ ಸೇರುವುದರಿಂದ ಸಮುದ್ರ ಪ್ಲಾಸ್ಟಿಕ್‌ಮಯವಾಗುತ್ತಿದೆ. ಈ ಪ್ಲಾಸ್ಟಿಕ್ ತ್ಯಾಜ್ಯ ನದಿ ಗಳ ಮೂಲಕ ಸಮುದ್ರ ಸೇರುವುದನ್ನು ತಪ್ಪಿಸುವ ಸಲುವಾಗಿ ರಾಜ್ಯದ ಕರಾವಳಿ ಜಿಲ್ಲೆಗಳ ಜಲಕಾಯ ವ್ಯವಸ್ಥೆಯನ್ನು ಪಾಸ್ಟಿಕ್ ತ್ಯಾಜ್ಯ ಮುಕ್ತಗೊಳಿಸುವುದು ಹಾಗೂ ಈ ಮೂಲಕ ಸಾರ್ವಜನಿಕರ ಆರೋಗ್ಯದ ಅಪಾಯಗಳನ್ನು ನಿಯಂತ್ರಿಸಿ ಆರ್ಥಿಕತೆಯ ಮೂಲಕ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿ ಸುವ ನಿಟ್ಟಿನಲ್ಲಿ ರಾಜ್ಯ ಸರಕಾರವು 2022-23ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಿತ್ತು. ಕರಾವಳಿ ಭಾಗದ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ನಿರ್ವಹಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ ‘ಬ್ಲೂ ಪ್ಲಾಸ್ಟಿಕ್ ನಿರ್ವಹಣೆ ಯೋಜನೆ’ ಎಂಬ ಹೆಸರಿನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಐದು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್‌ನ ನೆರವಿನೊಂದಿಗೆ 840 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಪ್ರಾಥಮಿಕ ಯೋಜನಾ ವರದಿ ಸಿದ್ಧಪಡಿಸಿ ವಿಶ್ವಬ್ಯಾಂಕ್ ಅಧಿಕಾರಿಗಳು, ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಮತ್ತು ನೀತಿ ಆಯೋಗದಿಂದ ಸಮ್ಮತಿ ಪಡೆಯಲಾಗಿದೆ.
2023ರ ಆಗಸ್ಟ್ 7 ಮತ್ತು ಸೆಪ್ಟಂಬರ್ 14ರಂದು ವಿಶ್ವಬ್ಯಾಂಕ್ ಅಧಿಕಾರಿಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಣಯದಂತೆ ಯೋಜನೆಗೆ ‘ಕೆ-ಶೋರ್’ (ಕರ್ನಾಟಕ- ಸ್ಟ್ರೆಂತ ನಿಂಗ್ ಕೋಸ್ಟಲ್ ರೆಸಿಲಿಯೆನ್ಸ್ ಆ್ಯಂಡ್ ದಿ ಎಕಾನಮಿ) ಎಂದು ಮರು ನಾಮಕರಣ ಮಾಡಲಾಗಿದೆ.
ಯೋಜನೆ ಅನುಷ್ಠಾನ ವಿಧಾನ
ರಾಜ್ಯದ ಕರಾವಳಿ ಮತ್ತು ಕಡಲ ಪ್ರದೇಶಗಳ ಮತ್ತು ನೀರುಣಿಸುವ ಜಲಾನಯನ ಪ್ರದೇಶಗಳ ಸುಸ್ಥಿರ, ಪರಿಣಾಮಕಾರಿ ಮತ್ತು ಉತ್ಪಾದಕ ಬಳಕೆಗಳನ್ನು ಉತ್ತೇಜಿಸಿ ರಾಜ್ಯದ ಆರ್ಥಿಕತೆಗೆ ಕೊಡುಗೆ ನೀಡುವ ಈ ಯೋಜನೆಯಡಿ, ನದಿಗಳ ಉಗಮ ಸ್ಥಾನವಾದ ಬೆಟ್ಟದ ತುದಿಯಿಂದ ಕರಾವಳಿ ವರೆಗಿನ ಪ್ರದೇಶಗಳನ್ನು ಜಲಾನಯನ ತತ್ವಗಳ ಆಧಾರದ ಮೇಲೆ ವಿವಿಧ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲಾಗುತ್ತದೆ. ಕಡಲು, ಅರಣ್ಯ, ನದಿ ಪಾತ್ರಗಳಂತಹ ಪರಿಸರ ವ್ಯವಸ್ಥೆಯನ್ನು ಕಸದಿಂದ ಸಂಪತ್ತು, ಹವಳದ ತೋಟಗಾರಿಕೆ, ಕರಾವಳಿಯುದ್ದಕ್ಕೂ ಅರಣ್ಯೀಕರಣ, ವಿಂಡ್ ಬ್ರೇಕರ್‌ಗಳ ನಿರ್ಮಾಣ, ನದಿ ಪಾತ್ರದಲ್ಲಿ ಪಶ್ಚಿಮಕ್ಕೆ ಹರಿಯುವ ನದಿಗಳು ಮತ್ತು ನದಿ ಮುಖಗಳುದ್ದಕ್ಕೂ ಸೂಕ್ಷ್ಮ ಸ್ಥಳಗಳಲ್ಲಿ ನೀರಿನಲ್ಲಿ ಹರಿದು ಬರುವ ಪಾಸ್ಟಿಕ್ ಸೆರೆ ಹಿಡಿಯಲು ಬಂಧನ ರಚನೆಗಳು, ಗಾಳಿಕೊಡೆಗಳು, ಬಲೆಗಳು, ಒಡ್ಡುಗಳನ್ನು ನಿರ್ಮಿಸಿ ತ್ಯಾಜ್ಯ ನಿರ್ವಹಣೆ, ಆಮೆ ಸಂರಕ್ಷಣಾ ಕೇಂದ್ರ ಸ್ಥಾಪನೆ, ಜೀವವೈವಿಧ್ಯ ಸಂರಕ್ಷಣೆ, ಪವಿತ್ರ ವನಗಳ ಪುನರ್‌ಸ್ಥಾಪನೆ, ಕರಾವಳಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಕಾರ್ಯಗತಗೊಳ್ಳಲಿವೆ ಎಂಬುದಾಗಿ ರಾಜ್ಯ ಸರಕಾರದ ನಡವಳಿಯಲ್ಲಿ ವಿವರಿಸಲಾಗಿದೆ.
ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆ, ಪ್ರವಾಸೋದ್ಯಮ ಇಲಾಖೆಗಳ ಮೂಲಕ ಯೋಜನೆ ಜಾರಿಗೊಳ್ಳಲಿದೆ. ಯೋಜ ನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈಗಾಗಲೇ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಉ.ಕ., ದ.ಕ. ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ಘಟಕವು ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಉಳಿದಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಹ ಅಧ್ಯಕ್ಷರಾಗಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ) ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ಅರಣ್ಯ), ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಸದಸ್ಯರಾಗಿ ಕಾರ್ಯ ನಿರ್ವ ಹಿಸಲಿ ದ್ದಾರೆ. ಇದಲ್ಲದೆ ಅಧ್ಯಕ್ಷರು ನಿರ್ಧರಿಸಿದಂತೆ ಇತರ ಅಧಿಕಾರಿಗಳು ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ಘಟಕದ ಆಹ್ವಾನಿತ ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದ ಯೋಜನಾ ನಿರ್ವಹಣಾ ಘಟಕಗಳು ಜಿಲ್ಲಾ ಕೇಂದ್ರಗಳಾದ ಕಾರವಾರ, ಉಡುಪಿ ಮತ್ತು ಮಂಗಳೂರಿನಲ್ಲಿ ಕಾರ್ಯನಿರ್ವಹಿಸಲಿವೆ.
ಪ್ಲಾಸ್ಟಿಕ್ ಅದರಲ್ಲೂ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಕರ್ನಾಟಕ ಕರಾವಳಿಯುದ್ದಕ್ಕೂ ಸಮುದ್ರಜೀವಿಗಳ ಮೂಲಕ ಮನುಷ್ಯನ ದೇಹ ಸೇರುತ್ತಿರುವುದನ್ನು ತಡೆಗಟ್ಟುವ ಹಾಗೂ ಕರಾವಳಿಯ ಮೀನುಗಾರಿಕಾ ಸಮುದಾಯವನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಕೆ- ಶೋರ್ ಯೋಜನಾ ವರದಿ ಸಿದ್ಧಪಡಿಸಲಾಗಿದೆ. 840 ಕೋಟಿ ರೂ.ಗಳ ಯೋಜನಾ ವರದಿಗೆ ವಿಶ್ವ ಬ್ಯಾಂಕ್ ಹಾಗೂ ಯೋಜನಾ ರಾಜ್ಯ ಸರಕಾರದ ಸಂಬಂಧಪಟ್ಟ ಇಲಾಖೆಗಳಿಂದ ಅನುಮೋದನೆ ಪಡೆಯಲಾಗಿದೆ. ಇದೀಗ ಅಂತಿಮವಾಗಿ ಕೇಂದ್ರ ಸರಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ನವೆಂಬರ್‌ನೊಳಗೆ ಸಿಗುವ ನಿರೀಕ್ಷೆ ಇದೆ.
-ಆ್ಯಂಟನಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು