ವಿವಿಧ ಸಾಧನಾ ಸೂಚಿಗಳ ಎದುರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸ್ಥಾನ
ಮಹಾಲೇಖಪಾಲರ ವರದಿಯ ಆಯ್ದ ಭಾಗಗಳು
ಮಹಾಲೇಖಪಾಲರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಲೆಕ್ಕ ಪತ್ರ ಪರಿಶೋಧನಾ ವರದಿಯಲ್ಲಿ ಮಾಮೂಲಿ ಲೆಕ್ಕ ಪತ್ರಗಳ ಪರಿಶೋಧನೆಯಿಂದಾಚೆ ಮಂಡಳಿಯ ಶಿಥಿಲಾವಸ್ಥೆ ಬಗ್ಗೆ ನೀಡಿರುವ ವಿವರಗಳು ಅದ್ಭುತವಾಗಿವೆ. ಅದನ್ನು ಓದಿದರೆ ಸರಕಾರ ಮತ್ತು ಮಂಡಳಿ ಲಜ್ಜೆಯಿಂದ ತಲೆ ಬಗ್ಗಿಸಬೇಕಾಗಿದೆ. ಅದನ್ನು ಓದಿದ ಈ ಪ್ರದೇಶದ ಜನರು ತಮ್ಮ ಈ ಕಲ್ಯಾಣ ಮಂಡಳಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಬಹುದು. ಮಂಡಳಿಯ ಕುರ್ಚಿ ಹಿಡಿದು ಬಂದ ಅನುದಾನ ಬೇಕಾಬಿಟ್ಟಿ ವೆಚ್ಚ ಮಾಡಿದ್ದು ಬಿಟ್ಟರೆ ಇನ್ನೇನೂ ಈ ಮಂಡಳಿ ಸಾಧಿಸಿದಂತಿಲ್ಲ.
ಈ ಭಾಗದಲ್ಲಿ ವಿವಿಧ ಸಾಧನಾ ಸೂಚಿಗಳನ್ವಯ ಈ ಪ್ರದೇಶದ ಸ್ಥಿತಿಗಿತಿ ಹೇಗಿದೆ ಎಂದು ಮಹಾಲೇಖಪಾಲರು ಹೇಳಿದ ವಿವರಗಳಿವೆ.
ಒಂದು ಪ್ರದೇಶದ ಅಭಿವೃದ್ಧಿಯನ್ನು ಇತರ ಪ್ರದೇಶಗಳೊಂದಿಗೆ ಹೋಲಿಸಲು ಹಲವು ಬಗೆಯ ಸಾಮಾಜಿಕ, ಆರ್ಥಿಕ ಸೂಚಿಗಳನ್ನು ಬಳಸುವುದಿದೆ. ಹಲವಾರು ಅಧ್ಯಯನಗಳು ಕಲ್ಯಾಣ ಕರ್ನಾಟಕದ ಹಿಂದುಳಿದಿರುವಿಕೆಯನ್ನು ಎತ್ತಿ ತೋರಿಸಿವೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ನಿಯೋಜಿತವಾಗಿದ್ದ ಸಂಸದೀಯ ಸಮಿತಿ ಈ ಅಧ್ಯಯನಗಳನ್ನು ಪರಿಗಣಿಸಿತ್ತು. ನಿರ್ದಿಷ್ಟ ಯೋಜಿತ ಗುರಿ ತಲುಪಲು, ಯೋಜನೆಯ ಪ್ರಗತಿಯನ್ನು ಅಳೆಯಲು ಇಂತಹ ಸೂಚಿಗಳ ಮಹತ್ವ ಜಾಗತಿಕವಾಗಿ ಒಪ್ಪಿತವಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಯಂತಹ ಜಾಗತಿಕ ಗುರಿ ತಲುಪುವುದನ್ನು ಅಳೆಯಲು ಜಗತ್ತಿನ ಎಲ್ಲಾ ದೇಶಗಳೂ ಇಂತಹ ಸೂಚಿಗಳನ್ನು ಬಳಸುತ್ತಿವೆ.
ಒಂದು ಪ್ರದೇಶದ ಅಭಿವೃದ್ಧಿ ನೀಲ ನಕ್ಷೆ ಮತ್ತು ಅನುಷ್ಠಾನದ ಪ್ರಗತಿಯ ಮೇಲೆ ನಿಗಾ ಇಡಲು ಇವು ಅವಶ್ಯ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿಯ ಸರಕಾರಿ ಆಜ್ಞೆಯ ನಿಬಂಧನೆ 13ರ ಪ್ರಕಾರ ಮಂಡಳಿಯು ಕಾಲಕಾಲಕ್ಕೆ ಬೇರೆ ಬೇರೆ ಕ್ಷೇತ್ರಗಳ ತೌಲನಿಕ ಅಭಿವೃದ್ಧಿ ಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಇದು ಪ್ರಾದೇಶಿಕ ಅಸಮಾನತೆಯನ್ನು ಕಡಿಮೆಗೊಳಿಸಲು ಅತ್ಯಾವಶ್ಯಕ. ಸರಕಾರದ ಬೇರೆ ಬೇರೆ ಇಲಾಖೆಗಳಿಂದ ಅಗತ್ಯವಿರುವ ಸಾಮಾಜಿಕ ಆರ್ಥಿಕ ಸೂಚಿಗಳ ಮಾಹಿತಿಯನ್ನು ಮಂಡಳಿ ಪಡೆದುಕೊಳ್ಳಬೇಕು ಎಂದು ಸರಕಾರದ ನಿಬಂಧನೆ ಹೇಳುತ್ತದೆ.
ಮಂಡಳಿ ಬಳಿ ಈ ಯಾವ ಸೂಚಿಗಳ ಮಾಹಿತಿಯೂ ಇಲ್ಲ. ತನ್ನ ಪ್ರದೇಶಕ್ಕೆ ಹೊಂದುವ ಸೂಚಿಗಳ ಚೌಕಟ್ಟನ್ನು ಈ ಮಂಡಳಿ ಅಂತಿಮಗೊಳಿಸಿಯೇ ಇಲ್ಲ. ಮಂಡಳಿಯು ನಂಜುಂಡಪ್ಪ ವರದಿಯನ್ನು ಎಲ್ಲಾ ಮಾಪನಗಳಿಗೂ ಉಲ್ಲೇಖಿಸುತ್ತದೆಯಾದರೂ ಪ್ರಾದೇಶಿಕ ಅಭಿವೃದ್ಧಿಗೆ ಬೇಕಾದ ಸ್ಪಷ್ಟ ಗುರಿಗಳನ್ನಾಗಲೀ ಅದಕ್ಕೆ ಬೇಕಾದ ಕಾಲಮಿತಿಯನ್ನಾಗಲೀ ನಿರ್ವಚಿಸಿಯೇ ಇಲ್ಲ.
ಸ್ಥೂಲ ಸೂಚಿಗಳು ರಾಷ್ಟ್ರಮಟ್ಟಕ್ಕೆ ಸಾಕು. ಆದರೆ ಪ್ರಾದೇಶಿಕವಾಗಿ ಸ್ಥಳೀಯ ಅಂಕಿ-ಅಂಶಗಳು ಅಗತ್ಯ. ತಾಲೂಕು ಮಟ್ಟದ ವಿವರಗಳು ಈ ಅಭಿವೃದ್ಧಿಯ ನೀಲನಕಾಶೆಗೆ ಅವಶ್ಯ. ಆದರೆ ಮಂಡಳಿಯಲ್ಲಿ ಇಂತಹ ವಿವರಗಳೇ ಇಲ್ಲ.
ನೀತಿ ಆಯೋಗದ ಆಶೋತ್ತರ ಜಿಲ್ಲಾ ಸೂಚಿಗಳ ಪ್ರಕಾರ ಕಲ್ಯಾಣ ಕರ್ನಾಟಕದ ಸ್ಥಿತಿಗತಿ:
ನೀತಿ ಆಯೋಗವು ಆರೋಗ್ಯ ಮತ್ತು ಪೋಷಕಾಂಶ, ಶಿಕ್ಷಣ, ಕೃಷಿ ಮತ್ತು ಜಲ ಸಂಪನ್ಮೂಲ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಇಟ್ಟುಕೊಂಡು 49 ಮಾನದಂಡಗಳನ್ನು ಅಭಿವೃದ್ಧಿಯ ಮಟ್ಟ ಮತ್ತು ಅಭಿವೃದ್ಧಿಯ ಅನುಷ್ಠಾನದ ಮೇಲೆ ನಿಗಾ ವಹಿಸಲು ಬಳಸಿದೆ. ಈ ಎಲ್ಲಾ ಮಾನದಂಡಗಳಲ್ಲೂ ಈ ಪ್ರದೇಶ ರಾಜ್ಯ ಸರಾಸರಿಗಿಂತ ಹಿಂದುಳಿದಿದೆ.
ಬಹು ಆಯಾಮದ ಬಡತನ ಸೂಚಿಯನ್ವಯ ಕಲ್ಯಾಣ ಕರ್ನಾಟಕದ ಸ್ಥಿತಿ:
ವಿಶ್ವಸಂಸ್ಥೆಯ ಯು.ಎನ್.ಡಿ.ಪಿ. ಈ ಸೂಚಿಯನ್ನು ಅಭಿವೃದ್ಧಿ ಪಡಿಸಿದೆ. ಈ ಮಾನದಂಡಗಳನ್ನು ಬಹುತೇಕ ಎಲ್ಲಾ ದೇಶಗಳು ಈಗ ಬಳಸುತ್ತಿವೆ. ಇದು ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟದ ವಿವರಗಳನ್ನು ಹಿಡಿದಿಡುತ್ತದೆ. ನಮ್ಮ ದೇಶದಲ್ಲೂ ಈ ಸೂಚಿಯನ್ನು ಬಳಸಲಾಗುತ್ತಿದೆ. ಆದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಈ ಸೂಚಿಯನ್ವಯ ಅಂಕಿಸಂಖ್ಯೆಯನ್ನು ಸಂಗ್ರಹಿಸಿಯೇ ಇಲ್ಲ. ನೀತಿ ಆಯೋಗವು ಸಿದ್ಧಪಡಿಸಿದ ಈ ಸೂಚಿಯನ್ವಯ ಕರ್ನಾಟಕದಲ್ಲಿ ಅತೀ ಕಳಪೆ ಮಟ್ಟ ಇರುವ ನಾಲ್ಕೂ ಜಿಲ್ಲೆಗಳು ಈ ಪ್ರದೇಶಕ್ಕೆ ಸೇರಿವೆ. ಉಳಿದೆರಡು ಜಿಲ್ಲೆಗಳು ತಳದಿಂದ 6 ಮತ್ತು 9ನೇ ಸ್ಥಾನದಲ್ಲಿವೆ!
ಮಾನವ ಅಭಿವೃದ್ಧಿ ಸೂಚಿ: ಅಭಿವೃದ್ಧಿಯ ಮಟ್ಟವನ್ನು ಅಳೆಯಲು ಈ ಸೂಚಿಯನ್ನು ಬಳಸಲಾಗುತ್ತದೆ. ತಲಾ ಆದಾಯದ ಮಾನದಂಡ ವಾಸ್ತವವನ್ನು ತೋರುವುದಿಲ್ಲ ಎಂಬ ಕಾರಣಕ್ಕೆ ಈ ಸೂಚಿ ಬಳಕೆಗೆ ಬಂದಿತು. ಈ ಸೂಚಿಯ ಪ್ರಕಾರ ಕಲ್ಯಾಣ ಕರ್ನಾಟಕದ ಆರೂ ಜಿಲ್ಲೆಗಳ ತಲಾ ಆದಾಯವೂ ಕಡಿಮೆ ಇದೆ. ಮಂಡಳಿಯು ಈ ಸಂಬಂಧ ಯಾವ ಅಧ್ಯಯನವನ್ನೂ ಮಾಡಿಲ್ಲ, ಇದನ್ನು ಬಳಸಿ ಯಾವ ಮಧ್ಯಪ್ರವೇಶವನ್ನೂ ಮಾಡಿಲ್ಲ.
ನಂಜುಂಡಪ್ಪ ವರದಿ ಪ್ರಕಾರ ಕಲ್ಯಾಣ ಕರ್ನಾಟಕದ ಸ್ಥಿತಿ: ನಂಜುಂಡಪ್ಪ ವರದಿ ಪ್ರಕಾರ 2002ರಲ್ಲಿ ರಾಜ್ಯದ 175 ತಾಲೂಕುಗಳು ಹಿಂದುಳಿದ ಪಟ್ಟಿಯಲ್ಲಿದ್ದವು. 2021ರಲ್ಲಿ 39 ತಾಲೂಕುಗಳು ಅತೀ ಹಿಂದುಳಿದ ಪಟ್ಟಿಯಲ್ಲಿವೆ. ಇವುಗಳಲ್ಲಿ 21 ಕಲ್ಯಾಣ ಕರ್ನಾಟಕದಲ್ಲಿವೆ!
ರಾತ್ರಿ ಬೆಳಕಿನ ಸೂಚಿ:
ಇದೊಂದು ವಿಶಿಷ್ಟ ಅಭಿವೃದ್ಧಿ ಸೂಚಿ. ರಾತ್ರಿ ವಿದ್ಯುತ್ ಬೆಳಕಿನ ವಿಸ್ತಾರವನ್ನು ಬಳಸುವ ಸೂಚಿ ಇದು. ಉಪಗ್ರಹ ಮುಖೇನ ಪಡೆಯಲಾದ ಫೋಟೊಗಳನ್ನು ಬಳಸಿ ವಿಶ್ಲೇಷಿಸಲಾಗುತ್ತದೆ. ಅಭಿವೃದ್ಧಿ, ನಾಗರಿಕ ಸೌಲಭ್ಯ ನಗರೀಕರಣ ಹೆಚ್ಚಿದ್ದಲ್ಲಿ ಬೀದಿ ಬೆಳಕು ಸಹಿತ ಬೆಳಕಿನ ಬಳಕೆಯ ವಿಸ್ತಾರ ಹೆಚ್ಚಿರುತ್ತದೆ. ಈ ಸೂಚಿಯನ್ವಯವೂ ಕಲ್ಯಾಣ ಕರ್ನಾಟಕ ತೀರಾ ಹಿಂದುಳಿದಿದೆ. ರಾಜ್ಯಾದ್ಯಂತ ವಿದುತ್ ಬೆಳಕಿನ ಬೆಳವಣಿಗೆಯ ದರಕ್ಕಿಂತ ಕಲ್ಯಾಣ ಕರ್ನಾಟಕದ ಮಟ್ಟ ತೀರಾ ಹಿಂದೆ ಇದೆ.
ಸುಸ್ಥಿರ ಅಭಿವೃದ್ಧಿಯ ಸೂಚಿ:
ವಿಶ್ವಸಂಸ್ಥೆಯ ಎಲ್ಲಾ ರಾಷ್ಟ್ರಗಳೂ 2015ರಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳು ಎಂಬ ಸೂಚಿಯನ್ನು ಸ್ವೀಕರಿಸಿವೆ. ಇವು ಜಾಗತಿಕವಾಗಿ ಬಡತನ ನಿವಾರಣೆ, ಪರಿಸರ ರಕ್ಷಣೆಯ ಬದ್ಧತೆಯನ್ನು ಖಚಿತಪಡಿಸುವ ಸೂಚಿಗಳು. ಈ ಪಟ್ಟಿಯಲ್ಲಿ ಸ್ಥೂಲವಾಗಿ 17 ಗುರಿಗಳಿವೆ. ಇವುಗಳ ಯಶಸ್ಸಿಗೆ ಪಂಚಾಯತ್‌ಗಳಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಎಲ್ಲಾ ಫಲಾನುಭವಿಗಳ ಭಾಗವಹಿಸುವಿಕೆಯೂ ಮುಖ್ಯ. ಅವರಲ್ಲಿ ಅರಿವು ಜಾಗೃತಿ ಮೂಡಿಸುವುದು ಈ ಗುರಿಗಳ ಆದ್ಯತೆ. ಆದರೆ ಕರ್ನಾಟಕ ಸರಕಾರವಾಗಲೀ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಾಗಲೀ ಈ ಪ್ರದೇಶದ ಸುಸ್ಥಿರ ಅಭಿವೃದ್ಧಿಯ ಗುರಿಗಳ ಸೂಚಿಯನ್ವಯ ಯಾವುದೇ ಮಾರ್ಗೋಪಾಯಗಳನ್ನೂ ಅಭಿವೃದ್ಧಿ ಪಡಿಸಿಲ್ಲ. ಕೇಂದ್ರ ಸರಕಾರ ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಸೂಚಿಗಳನ್ನೂ ಬಳಸುವ ಗೊಡವೆಗೂ ಈ ಮಂಡಳಿ ಹೋಗಿಲ್ಲ.
ಪ್ರಾಕೃತಿಕ ಸಂಪನ್ಮೂಲಗಳ ತಖ್ತೆ:
ಆಯಾ ಪ್ರದೇಶದ ಪ್ರಾಕೃತಿಕ ಸಂಪನ್ಮೂಲವನ್ನು ನಿರ್ಧರಿಸಲು ಈ ಸೂಚಿಯನ್ನು ಬಳಸಲಾಗುತ್ತಿದೆ. ಪ್ರಾಕೃತಿಕ ಸಂಪನ್ಮೂಲಗಳ ಬಳಕೆಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸೂಚಿ ಮುಖ್ಯ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ತನ್ನ ಪ್ರದೇಶದ ಪ್ರಾಕೃತಿಕ ಸಂಪನ್ಮೂಲಗಳ ತಖ್ತೆ ಮಾಡಿಯೇ ಇಲ್ಲ. ಇವುಗಳ ಬಳಕೆಯ ಉಪಕ್ರಮಗಳನ್ನು ಆರಂಭಿಸಿದಲ್ಲಿ ಪರಿಸರದ ಮೇಲಾಗುವ ಪ್ರಭಾವದ ಕುರಿತೂ ಯಾವ ಅಧ್ಯಯನಗಳೂ ಇಲ್ಲ!! ಜಿಲ್ಲಾ ಮಟ್ಟದ ಒಟ್ಟಾರೆ ಆಂತರಿಕ ಉತ್ಪನ್ನದ ಮಾಹಿತಿ, ಯೋಜನೆ ರೂಪಿಸಲು ಅವಶ್ಯ. ವಿತ್ತ ಆಯೋಗದಿಂದ ಹಿಡಿದು ಎಲ್ಲಾ ಯೋಜನಾ ಪ್ರಾಧಿಕಾರಗಳೂ ಜಿಲ್ಲಾ ವಿವರಗಳನ್ನು ಮಹತ್ವದ ದಾಖಲೆಗಳೆಂದು ಪರಿಗಣಿಸುತ್ತವೆ. ಆದರೆ ಸದರಿ ಮಂಡಳಿಯಲ್ಲಿ ತನ್ನ ವ್ಯಾಪ್ತಿಯ ಆರೂ ಜಿಲ್ಲೆಗಳ ಆಂತರಿಕ ಉತ್ಪನ್ನಗಳ ಯಾವ ದಾಖಲೆಗಳೂ ಇಲ್ಲ.!
ಉಳಿದಂತೆ ಮಹಾಲೇಖಪಾಲರ ವರದಿ ಆರೋಗ್ಯ, ಶಿಕ್ಷಣಗಳ ಅಂಕಿ-ಅಂಶಗಳನ್ನು ಬಳಸಿ ಈ ಮಂಡಳಿಯ ಯೋಜನಾ ದಾರಿದ್ರ್ಯದ ಬಗ್ಗೆ ಟೀಕೆ ಮಾಡಿದೆ. ಇನ್ನು ಕಾಮಗಾರಿಗಳ ಆಯ್ಕೆ ಬಗ್ಗೆ ಚೆಲ್ಲಿರುವ ಬೆಳಕು ರಾಜ್ಯ ಸರಕಾರದ ಯೋಜನಾ ಹೇರುವಿಕೆಯ ಮೇಲೂ ಮಾಡಿರುವ ಟಿಪ್ಪಣಿ.
ಒಂದೆರಡು ಎಕ್ಸ್ಟ್ರಾ ವಿವರ ಮಾತ್ರಾ ಇಲ್ಲಿ ದಾಖಲಿಸುವೆ.
ಸತತವಾಗಿ ಪ್ರತೀ ವರ್ಷ ಈ ಮಂಡಳಿಯ ವಾರ್ಷಿಕ ಕ್ರಿಯಾ ಯೋಜನೆ ತಿಂಗಳುಗಟ್ಟಲೆ ತಡವಾಗಿ ಪ್ರಸ್ತುತಗೊಂಡಿದೆ. ಒಂದು ಸಾಧಾರಣ ಪಂಚಾಯತ್ ಈ ಕೆಲಸ ಮಾಡಿದ್ದರೆ ಮೇಲಧಿಕಾರಿಗಳು ಅವರಿಗೆ ಬರೆ ಹಾಕುತ್ತಿದ್ದರು. ಆದರೆ ಈ ಮಂಡಳಿಯೋ, ರಾಜ್ಯ ಸರಕಾರದ ಬಜೆಟ್ ಮಂಡನೆ ಆದ ಮೇಲೆ ತನ್ನ ಕ್ರಿಯಾಯೋಜನೆ ಪ್ರಸ್ತುತಪಡಿಸುವ ಸಂಪ್ರದಾಯ ಬೆಳೆಸಿಕೊಂಡಂತಿದೆ.
ಒಟ್ಟಾರೆ ಕಾಮಗಾರಿಗಳಲ್ಲಿ ಬಹುತೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು. ಇದಕ್ಕಿರುವ ಆದ್ಯತೆ ಮತ್ತು ಆತುರ ಯಾಕೆಂದು ಪ್ರತ್ಯೇಕ ಹೇಳಬೇಕಿಲ್ಲ. ಬೆರಳೆಣಿಕೆಯ ಕಾಮಗಾರಿಗಳಷ್ಟೇ ಪರಿಸರ ರಕ್ಷಣೆ ಇತ್ಯಾದಿ ಬಗ್ಗೆ ಇವೆ ಎಂದು ಮಹಾಲೇಖಪಾಲರು ಹೇಳಿದ್ದಾರೆ.
ಇನ್ನು ಅಧ್ಯಕ್ಷ ಗಾದಿಯ ಮಹತ್ವ ಹೇಗಿದೆ ಎಂದರೆ ಎಲ್ಲಾ ಮಂಡಳಿಗಳಲ್ಲಿರುವಂತೆ ಇಲ್ಲೂ ಮಂಡಳಿಯ ಅಧ್ಯಕ್ಷರಿಗೆ ವಿವೇಚನಾ ನಿಧಿ ಲಭ್ಯವಿದೆ. ಈ ವಿವೇಚನಾ ನೀಡಿಕೆಯಲ್ಲಿ ಶೇ. 85ರಷ್ಟು ಕಲಬುರಗಿ ಜಿಲ್ಲೆಯೊಂದಕ್ಕೇ ನೀಡಲಾಗಿದೆ. ಉಳಿದ ಜಿಲ್ಲೆಗಳು ಅಷ್ಟೋ ಇಷ್ಟೋ ಚರಪು ಪಡೆದು ಕೂತಿವೆ.
ಈ ವರದಿ ಈಗಿನ ಸರಕಾರ ಬರುವ ಮೊದಲಿನ ಅವಧಿಗೆ ಸಂಬಂಧಿಸಿದ್ದು. ಈಗಿರುವ ಕಾಂಗ್ರೆಸ್ ಸರಕಾರ ಈ ವರದಿಯ ಉಲ್ಲೇಖಗಳನ್ನು ಗಮನಿಸಿ ಆಮೂಲಾಗ್ರವಾಗಿ ಹೊಸ ಅಭಿವೃದ್ಧಿ ನಕಾಶೆಯನ್ನು ಸಿದ್ಧಪಡಿಸಬೇಕಿದೆ.
ಈಗಾಗಲೇ ಈ ಪ್ರದೇಶಾಭಿವೃದ್ಧಿಗೆ ತಜ್ಞರ ಸಮಿತಿಯೊಂದನ್ನು ನೇಮಿಸಲಾಗಿದೆ. ಆದರೆ ಈ ಪ್ರದೇಶದ ಅಭಿವೃದ್ಧಿಗೆ ತಜ್ಞರ ಹೊಸ ಶಿಫಾರಸುಗಳ ಅಗತ್ಯವೇ ಇಲ್ಲ. ಮಹಾಲೇಖಪಾಲರು ಉಲ್ಲೇಖಿಸಿರುವ ಅಂಶಗಳನ್ನು ಗಮನಿಸಿ ಯೋಜನೆ, ಅನುಷ್ಠಾನ ಕೈಗೊಂಡರೂ ಸಾಕಷ್ಟು ಬದಲಾವಣೆ ಕಂಡೀತು.
ಅಂದ ಹಾಗೆ ಇತ್ತೀಚಿನ ಪತ್ರಿಕಾ ವರದಿ ಪ್ರಕಾರ ರಾಯಚೂರು ಜಿಲ್ಲೆಯಲ್ಲಿ 401 ಏಕೋಪಾಧ್ಯಾಯ ಶಾಲೆಗಳಿವೆ! ಒಟ್ಟಾರೆ ಕಲ್ಯಾಣ ಕರ್ನಾಟಕದಲ್ಲಿ ಈ ಸಂಖ್ಯೆ ಎಷ್ಟು ಎಂಬ ಮಾಹಿತಿ ಇಲ್ಲ!! ಇಂತಹ ದುಸ್ಥಿತಿ ಈಗಲೂ ಇದ್ದರೆ ಈ ಪ್ರದೇಶ ಉದ್ಧಾರವಾಗುವುದು ಕನಸಿನ ಮಾತು.