ಚಾರಣಿಗರಿಗೆ ಕೈಬೀಸಿ ಕರೆಯುತ್ತಿದೆ ಕಲ್ಯಾಣ ಕರ್ನಾಟಕ
ದಕ್ಷಿಣ ಭಾರತದಲ್ಲೇ ಮೊದಲ ಶುಷ್ಕ ಎಲೆಯುದುರುವ ಕಾಡಿನಲ್ಲಿ ಚಾರಣಕ್ಕೆ ಗ್ರೀನ್ ಸಿಗ್ನಲ್
ಕಲಬುರಗಿ: ಚಾರಣ (ಟ್ರೆಕ್ಕಿಂಗ್) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಕಾಡಿನಲ್ಲಿ, ಪರ್ವತದಲ್ಲಿ ಚಾರಣಕ್ಕೆ ಹೋಗಬೇಕಾದರೆ ದೂರದ ಸ್ಥಳಗಳಿಗೆ ಹೋಗಬೇಕಾದ ಅನಿವಾರ್ಯವಾಗಿತ್ತು. ಇದೀಗ ಚಾರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗ ಚಾರಣಿಗರು, ಬೆಟ್ಟ, ಶುಷ್ಕ ಎಲೆಯುದುರುವ ಅರಣ್ಯವನ್ನು ಸುತ್ತಬಹುದು.
ಭಾರತದಲ್ಲೇ ಶುಷ್ಕ ಎಲೆಯುದುರುವ ಕಾಡಿನಲ್ಲಿ ಪ್ರಥಮ ಸ್ಥಾನದಲ್ಲಿರುವ ಕಲಬುರಗಿಯ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ಮತ್ತು ಅದರೊಳಗೆ ಇರುವ ಚಂದ್ರಂಪಳ್ಳಿ ಪ್ರಕೃತಿಯನ್ನು ವೀಕ್ಷಿಸಬಹುದು. ಬೆಂಗಳೂರು ಸುತ್ತಮುತ್ತ, ದಕ್ಷಿಣ ಕರ್ನಾಟಕ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ಟ್ರೆಕ್ಕಿಂಗ್ ಸ್ಪಾಟ್ಗಳಿವೆ. ಆದರೆ ಉತ್ತರ ಕಲ್ಯಾಣ ಕರ್ನಾಟದಲ್ಲಿ ವಿರಳ.
ಚಾರಣಕ್ಕೆ ಉತ್ತರ ಭಾರತದ ಕಡೆಗೆ ತೆರಳುವ ದಕ್ಷಿಣ ಭಾರತದ ಮತ್ತು ರಾಜ್ಯದ ಪ್ರವಾಸಿಗರಿಗೆ ಇದೀಗ ಕಲಬುರಗಿಯ ಚಿಂಚೋಳಿ ಅಭಯಾರಣ್ಯವು ಕೈ ಬೀಸಿ ಕರೆಯುತ್ತಿದೆ. ಚಾರಣ ಕೈಗೊಳ್ಳುವ ಪ್ರವಾಸಿಗರಿಗೆ ಈಗಾಗಲೇ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಚಿಂಚೋಳಿ ವನ್ಯಜೀವಿ ಪ್ರದೇಶ ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಚಂದ್ರಂಪಳ್ಳಿ ಜಲಾಶಯ, ಕಾಡು ಸುತ್ತ ಹಸಿರು ರಮಣೀಯ ದೃಶ್ಯ ಕಾಣಬಹುದಾಗಿದೆ. ಈಗಾಗಲೇ ಅರಣ್ಯ ಸಿಬ್ಬಂದಿ, ಚಾರಣ ಪ್ರಿಯರ ಗುಂಪುಗಳೊಂದಿಗೆ ಪ್ರಾಯೋಗಿಕವಾಗಿ ಚಾರಣ ಮಾಡಿದ್ದಾರೆ. ಇಂತಹ ಪ್ರಕೃತಿ ಸೌಂದರ್ಯವನ್ನು ಚಾರಣದ ಮೂಲಕ ಕಣ್ತುಂಬಿಕೊಳ್ಳಬಹುದು.
ಬುಕಿಂಗ್ ಹೇಗೆ, ಯಾವಾಗ ಪ್ರಾರಂಭ?: ಸಾರ್ವಜನಿಕರು ಮತ್ತು ಚಾರಣ ಪ್ರಿಯರು ಇಂದಿನಿಂದಲೇ ಬುಕಿಂಗ್ ಮಾಡಬಹುದಾಗಿದೆ. aranyavihaara.Karnataka.gov.in ವೆಬ್ಸೈಟ್ ಮೂಲಕ ನಿಮ್ಮ ಟ್ರಕ್ಕಿಂಗ್ ಅನ್ನು ಬುಕ್ ಮಾಡಬಹುದು. ಸದ್ಯಕ್ಕೆ ಚಾರಣ ಮಾಡುವವರಿಗೆ ಉಚಿತ ಪ್ರವೇಶಿವಿರಲಿದ್ದು, ಕ್ರಮೇಣ ಅದಕ್ಕೆ ದರ ನಿಗದಿಪಡಿಸಲಾಗಿದೆ.
ಎಲ್ಲಿಂದ ಎಲ್ಲಿಯವರೆಗೆ ಚಾರಣ?: ಚಂದ್ರಂಪಳ್ಳಿ ನಿಸರ್ಗ ಧಾಮ-ಗೊಟ್ಟಂಗೊಟ್ಟ ಕ್ಯಾಂಪ್ವರೆಗೆ 9 ಕಿ.ಮೀ. ಚಾರಣವನ್ನು ಮೂರುವರೆ ಗಂಟೆ ಮತ್ತು ಚಂದ್ರಂಪಳ್ಳಿ ನಿಸರ್ಗ ಶಿಬಿರ-ಚಂದ್ರಂಪಳ್ಳಿ ಅರಣ್ಯ ಪ್ರದೇಶದ ಗಡಿಯವರೆಗೆ 4 ಕಿ.ಮೀ. ಚಾರಣವನ್ನು ಒಂದೂವರೆ ಗಂಟೆಯಲ್ಲಿ ಮಾಡಬಹುದಾಗಿದೆ. ಬೆಳಗ್ಗೆ 6 ರಿಂದ 2 ಗಂಟೆ ವರೆಗೆ ಮಾತ್ರ ಚಾರಣಕ್ಕೆ ಬುಕಿಂಗ್ ಮಾಡಿಕೊಳ್ಳಲಾಗುತ್ತದೆ. ಕಾಡಿನಲ್ಲಿ ಚಾರಣ ಪ್ರಿಯರಿಗೆ ಅಗತ್ಯ ಮಾರ್ಗದರ್ಶನ ಮತ್ತು ಮಾಹಿತಿ ನೀಡಲು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಹಿಂದೆ ಪ್ರವಾಸೋದ್ಯಮ ಸಚಿವನಾಗಿದ್ದಾಗ ಪ್ರದೇಶದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೈದರಾಬಾದ್ ಕರ್ನಾಟಕ ಪ್ರವಾಸಿ ಸಲಹಾ ಸಮಿತಿ ರಚಿಸಲಾಗಿತ್ತು. ಇದೀಗ ಸಾಕಷ್ಟು ಚರ್ಚಿಸಿ, ನಮ್ಮ ಭಾಗಲ್ಲಿ ಚಾರಣ ನಿರ್ಮಿಸಬೇಕು ಎಂದು ನಿರ್ಧರಿಸಿದೆವು. ಮಹತ್ವದ ಯೋಜನೆಗೆ ಕೇಂದ್ರ ಅನುಮತಿಸಿದೆ.
- ಪ್ರಿಯಾಂಕ್ ಖರ್ಗೆ, ಸಚಿವ
ಚಿಂಚೋಳಿ ವನ್ಯಜೀವಿ ಅಭಯಾರಣ್ಯ ದಕ್ಷಿಣ ಭಾರತದಲ್ಲೇ ಶುಷ್ಕ ಎಲೆಯುದುರುವ ಕಾಡಿನಲ್ಲಿ ಪ್ರಥಮ ಸ್ಥಾನದಲ್ಲಿದೆ. 13,488 ಹೆಕ್ಟೇರ್ ವಿಶಾಲ ಅರಣ್ಯ ಪ್ರದೇಶ ಇದು ಒಳಗೊಂಡಿದೆ. ಇಲ್ಲಿ ಅನೇಕ ಪ್ರಾಣಿ, ಪಕ್ಷಿ ಸಂಕುಲ ಹಾಗೂ ಸಸ್ಯ ಪ್ರಭೇದಗಳನ್ನು ನೋಡಬಹುದಾಗಿದೆ.
-ಸುಮಿತ್ ಪಾಟೀಲ್, ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ