ಕುಗ್ರಾಮಗಳ 'ಗರ್ಭಿಣಿಯರ ಆಪದ್ಭಾಂಧವ' ಸೂಲಗಿತ್ತಿ ಕಮಲಮ್ಮ
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿರುವ ನೂರಾರು ಕುಗ್ರಾಮಗಳಿಗೆ ಇಂದಿಗೂ ಸುಸಜ್ಜಿತ ರಸ್ತೆಯಂತಹ ಮೂಲಸೌಕರ್ಯಗಳಿಲ್ಲ. ಬೆಟ್ಟಗುಡ್ಡಗಳ ಮೇಲ್ಭಾಗ, ಇಳಿಜಾರು ಪ್ರದೇಶದಲ್ಲಿರುವ ಅನೇಕ ಕುಗ್ರಾಮಗಳಿಗೆ ಸುಸಜ್ಜಿತ ರಸ್ತೆ ಸೌಲಭ್ಯದ ಕೊರತೆಯಿಂದಾಗಿ ವಾಹನಗಳು ತಲುಪಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.
ಇಂತಹ ಗ್ರಾಮಗಳಲ್ಲಿ ಗರ್ಭಿಣಿಯರಿದ್ದರೆ ಹೆರಿಗೆ ಸಂದರ್ಭದಲ್ಲಿ ಅವರನ್ನು ಸಕಾ ಲದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಇಂತಹ ಕುಗ್ರಾಮಗಳ ಗರ್ಭಿಣಿಯರ ಪಾಲಿಗೆ ಸೂಲಗಿತ್ತಿ ಕಮಲಮ್ಮ ಆಪದ್ಬಾಂಧವರಾಗಿದ್ದು, ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರಿಗೆ ಸುಸೂತ್ರ ಹೆರಿಗೆ ಮಾಡಿಸುವ ಮೂಲಕ ಅವರು ಮಲೆನಾಡಿನಲ್ಲಿ ಮನೆ ಮಾತಾಗಿದ್ದಾರೆ.
ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿರುವ ಕಾಫಿ ಎಸ್ಟೇಟ್‌ನ ಲೈನ್ ಮನೆಯಲ್ಲಿ ವಾಸವಾಗಿರುವ ಕಮಲಮ್ಮ ಹಲವಾರು ದಶಕಗಳಿಂದ ಸೂಲಗಿತ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನೂರಿನ ಸುತ್ತಮುತ್ತಲ ಗ್ರಾಮಗಳಲ್ಲಿ ರಸ್ತೆ, ವಾಹನಗಳ ಸೌಲಭ್ಯ ಇಲ್ಲದಂತಹ ಒಂಟಿ ಮನೆಗಳ ಗರ್ಭಿಣಿಯರಿಗೆ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಾಗ ಆ ಗರ್ಭಿಣಿಯ ಕುಟುಂಬಸ್ಥರಿಗೆ ತಕ್ಷಣ ನೆನಪಾಗುವುದು ಸೂಲಗಿತ್ತಿ ಕಮಲಮ್ಮ. ಯಾರೇ ಕರೆದರೂ ತಡ ಮಾಡದೆ ಆ ಮನೆಗೆ ನಡೆದುಕೊಂಡೇ ಹೋಗುವ ಕಮಲಮ್ಮ ಗರ್ಭಿಣಿಯರಿಗೆ ಯಾವುದೇ ತೊಂದರೆಯಾಗದಂತೆ ಹೆರಿಗೆ ಮಾಡಿಸಿ ತಾಯಿ, ಮಗುವಿನ ಪ್ರಾಣ ಉಳಿಸುತ್ತಿರುವ ಕೆಲಸ ಇಂದಿಗೂ ಮುಂದುವರಿಸಿದ್ದಾರೆ.
ಕಮಲಮ್ಮ ‘ಸೂಲಗಿತ್ತಿ ಕಮಲಮ್ಮ’ ಆಗಿದ್ದೇ ಒಂದು ರೋಚಕ ಕಥೆಯಾಗಿದೆ. ಕಮಲಮ್ಮ ಮೊದಲು ಹೆರಿಗೆ ಮಾಡಿಸಿದ್ದು ತನ್ನ ತಾಯಿಗೇ ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಕಮಲಮ್ಮನ ತಂದೆ ತಾಯಿಗೆ 7ಮಂದಿ ಮಕ್ಕಳು. 10ವರ್ಷದ ಬಾಲಕಿಯಾಗಿದ್ದಾಗ ತನ್ನ ತಾಯಿಗೆ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಾಯಿಯ ಪ್ರತೀ ಹೆರಿಗೆಯನ್ನು ಕಮಲಮ್ಮನ ತಂದೆಯೇ ಮಾಡಿಸುತ್ತಿದ್ದುದನ್ನು ಕಂಡಿದ್ದ ಕಮಲಮ್ಮ ಹೆರಿಗೆ ಮಾಡಿಸುವ ವಿಧಾನವನ್ನು ಚಿಕ್ಕ ವಯಸ್ಸಿನಲ್ಲೇ ಕರಗತ ಮಾಡಿಕೊಂಡಿದ್ದರು. ತನ್ನ ತಾಯಿಗೆ ದಿಢೀರ್ ಹೆರಿಗೆ ಬೇನೆ ಕಾಣಿಸಿಕೊಂಡ ಸಂದರ್ಭದಲ್ಲಿ ತಂದೆ ಮನೆಯಲ್ಲಿರದ ಪರಿಣಾಮ 10ವರ್ಷದ ಬಾಲಕಿಯಾಗಿದ್ದ ಕಮಲಮ್ಮ ಆತಂಕಪಡದೇ ಧೈರ್ಯದಿಂದ ತಾಯಿಗೆ ತಾನೇ ಹೆರಿಗೆ ಮಾಡಿಸಲು ಮುಂದಾಗುವ ಮೂಲಕ ತಾಯಿ ಹಾಗೂ ತನ್ನ ಸಹೋದರಿಗೆ ಹೊಸ ಬದುಕು ನೀಡಿದ್ದರು. ತನ್ನ ತಾಯಿಯ ಸುಖ ಪ್ರಸವದ ಬಳಿಕ ಕಮಲಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆ ಮಾತಾಗಿದ್ದರಿಂದ ಅಕ್ಕಪಕ್ಕದ ಗ್ರಾಮಗಳಲ್ಲಿನ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗಲೆಲ್ಲ ಕಮಲಮ್ಮನಿಗೆ ಕರೆ ಬರುತ್ತಿತ್ತು. ಆಗ ಅಲ್ಲಿಗೆ ಭೇಟಿ ನೀಡುತ್ತಿದ್ದ ಕಮಲಮ್ಮ ಅತ್ಯಂತ ಮುಂಜಾಗ್ರತೆ, ಜಾಗರೂಕತೆಯಿಂದ ತಾಯಿ, ಮಗುವಿನ ಪ್ರಾಣ ಉಳಿಸುತ್ತಿದ್ದರು.
ಇದುವರೆಗೆ ನೂರಕ್ಕೂ ಹೆಚ್ಚು ಗರ್ಭಿಣಿಯರಿಗೆ ಸುಸೂತ್ರವಾಗಿ ಹೆರಿಗೆ ಮಾಡಿಸಿರುವ ಸೂಲಗಿತ್ತಿ ಕಮಲಮ್ಮ ಆಪತ್ಕಾಲದಲ್ಲಿ ಸುಖ ಪ್ರಸವ ಮಾಡಿಸುವ ಮೂಲಕ ನೂರಾರು ಗರ್ಭಿಣಿಯರು ಹಾಗೂ ಮಕ್ಕಳ ಪಾಲಿನ ಆಪತ್ಬಾಂಧವರಾಗಿದ್ದಾರೆ.
ಪ್ರತೀ ಹೆರಿಗೆ ಬಳಿಕ ಬಾಣಂತಿಯ ಆರೈಕೆಯನ್ನೂ ಮಾಡುವ ಕಮಲಮ್ಮ ಗರ್ಭಿಣಿ ಕುಟುಂಬದವರು ಕೊಟ್ಟಷ್ಟು ಪಡೆದು ಹಿಂದಿರುಗುತ್ತಾರೆ. ಈ ಪ್ರವೃತ್ತಿಯಿಂದ ಸೂಲಗಿತ್ತಿ ಕಮಲಮ್ಮ ಅವರ ಆರ್ಥಿಕ ಪರಿಸ್ಥಿತಿಯೇನೂ ಸುಧಾರಿಸಿಲ್ಲ. ಈ ವೃತ್ತಿಯನ್ನು ಸೇವೆ ಎಂದು ಭಾವಿಸಿರುವ ಅವರು, ಸಂಕಷ್ಟದಲ್ಲಿರುವ ಗರ್ಭಿಣಿಯರಿಗೆ ಸುಖ ಪ್ರಸವದ ಭಾಗ್ಯ ಕರುಣಿಸಿ ತಾಯಿ ಮಗುವಿನ ಪ್ರಾಣ ಉಳಿಸಿದ ಧನ್ಯತಾ ಭಾವದಿಂದ ಹಿಂದಿರುಗುತ್ತಾರೆ.
ಇದುವರೆಗೆ ತಾನು ಮಾಡಿದ ಎಲ್ಲ ಹೆರಿಗೆಯಲ್ಲೂ ಯಾವುದೇ ತೊಂದರೆಯಾಗಿಲ್ಲ. ನನ್ನ ತಂದೆ ತುಂಬಾ ಧೈರ್ಯದವರು. ಹೆರಿಗೆ ಮಾಡಿಸುವುದು, ಬಾಣಂತಿಯರಿಗೆ ಔಷಧ ಕೊಡುವುದು ತಂದೆಗೆ ಗೊತ್ತಿತ್ತು. ಅವರೇ ನನ್ನ ಗುರು. ಈಗ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿರುವುದರಿಂದ ಹೆರಿಗೆಗೆ ಕರೆಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಆಗಾಗ್ಗೆ ಕೆಲವರು ಕರೆಯುತ್ತಾರೆ. ಬದುಕಿರುವವರೆಗೂ ಈ ಕೆಲಸ ಮಾಡುತ್ತಿರುತ್ತೇನೆ. ನಿಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲವು ವರ್ಷ ಹೆರಿಗೆ ಸಂದರ್ಭದಲ್ಲಿ ಸಹಾಯಕಿಯಾಗಿ ಕೆಲಸ ಮಾಡಿದ್ದೆ ಎಂದು ಸೂಲಗಿತ್ತಿ ಕಮಲಮ್ಮ ಹೇಳುತ್ತಾರೆ.
ಸ್ವಂತ ಸೂರಿಲ್ಲದೆ ಲೈನ್ ಮನೆಯಲ್ಲಿ ವಾಸ
ನಿಡುವಾಳೆ ಗ್ರಾಮದ ಕಾಫಿ ಎಸ್ಟೇಟ್‌ನಲ್ಲಿ ತನ್ನ ಪತಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡಿರುವ ಸೂಲಗಿತ್ತಿ ಕಮಲಮ್ಮರಿಗೆ 6 ಮಂದಿ ಮಕ್ಕಳಿದ್ದು, ಸ್ವಂತ ಸೂರಿಲ್ಲದೇ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ. ಕುಗ್ರಾಮಗಳ ನೂರಾರು ತಾಯಿ ಮಗುವಿನ ಪ್ರಾಣ ಉಳಿಸಿರುವ ಸೂಲಗಿತ್ತಿ ಕಮಲಮ್ಮ ಮಲೆನಾಡು ಭಾಗದ ಗ್ರಾಮಗಳಲ್ಲಿ ಮನೆ ಮಾತಾಗಿದ್ದರೂ ಸ್ವಂತ ಸೂರಿಲ್ಲದೇ ಬದುಕುತ್ತಿರುವುದು ಬೇಸರದ ಸಂಗತಿಯಾಗಿದೆ.