ಕಾಂತರಾಜು ವರದಿ | ಜಾತಿಮುಸುಕಿನ ವರ್ಗ ಸಂಘರ್ಷ?

3. ಮುಸ್ಲಿಮರ ಜನಸಂಖ್ಯಾ ಹೆಚ್ಚಳ ದಲಿತರಿಗಿಂತ ಕಡಿಮೆ
ಬಿಹಾರದ ಜಾತಿ ಜನಗಣತಿ ಹೊರಬಂದಮೇಲೆ ಮೋದಿ ಮಾಧ್ಯಮಗಳು ಅತಿ ಹೆಚ್ಚು ಚರ್ಚೆ ಮಾಡಿದ ವಿಷಯ ಅತ್ಯಂತ ಹಿಂದುಳಿದ ಜಾತಿಗಳ ಬಗ್ಗೆ ಅಲ್ಲವೇ ಅಲ್ಲ. ಬದಲಿಗೆ ಮುಸ್ಲಿಮರ ಜನಸಂಖ್ಯೆಯ ಏರಿಕೆಯ ವೇಗ ಹಿಂದೂಗಳಿಗಿಂತ ಜಾಸ್ತಿಯಾಗಿರುವ ಬಗ್ಗೆ. ಆದರೆ ಅದೇ ಅಂಕಿಅಂಶಗಳನ್ನು ಕೂಲಂಕಷವಾಗಿ ಅಭ್ಯಸಿಸಿದರೆ ಅದು ತದ್ವಿರುದ್ಧವಾದ ಕಥೆಯನ್ನೇ ಹೇಳುತ್ತದೆ.
2011ರ ಜನಗಣತಿಯ ಪ್ರಕಾರ ಬಿಹಾರದ ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 82.7 ಇದ್ದದ್ದು 2023ರ ಜಾತಿ ಜನಗಣತಿಯ ಪ್ರಕಾರ ಶೇ. 81.99ಕ್ಕೆ ಇಳಿದಿದೆ. ಅಂದರೆ 2011ಕ್ಕೆ ಹೋಲಿಸಿದರೆ ಶೇ. 0.71ರಷ್ಟು ಇಳಿದಿದೆ.
ಅದೇ ರೀತಿ 2011ರ ಜನಗಣತಿಯ ಪ್ರಕಾರ ಬಿಹಾರದ ಜನಸಂಖ್ಯೆಯಲ್ಲಿ ಮುಸ್ಲಿಮರ ಜನಸಂಖ್ಯೆ 16.9ರಷ್ಟಿತ್ತು. 2023ರ ಜಾತಿ ಜನಗಣತಿಯ ಪ್ರಕಾರ ಅದು ಶೇ. 17.7ಕ್ಕೆ ಏರಿದೆ. ಅಂದರೆ ಶೇ. 0.8ರಷ್ಟು ಮಾತ್ರ ಏರಿಕೆ ಕಂಡಿದೆ.
ಹೀಗೆ ಮೇಲ್ನೋಟಕ್ಕೆ 2023ರಲ್ಲಿ ಹಿಂದೂಗಳ ಜನಸಂಖ್ಯಾ ಏರಿಕೆ ಕುಸಿದು ಮುಸ್ಲಿಮ್ ಜನಸಂಖ್ಯೆ ಏರಿರುವಂತೆ ಕಾಣುತ್ತದೆ. ಆದರೆ ದಶಕದಿಂದ ದಶಕಕ್ಕೆ ಹೆಚ್ಚುತ್ತಿರುವ ಜನಸಂಖ್ಯಾ ಏರಿಕೆಯ ಗತಿಯನ್ನು ನೋಡಿದರೆ ಬಿಹಾರದಲ್ಲಿ 2001-11 ರ ನಡುವೆ ಮುಸ್ಲಿಮರ ಜನಸಂಖ್ಯೆ ಏರಿಕೆಯ ಪ್ರಮಾಣ ಶೇ. 35ರಷ್ಟಿದ್ದರೆ, ಅದು 2011-23ರ ನಡುವೆ ಶೇ. 25ಕ್ಕೆ ಕುಸಿದಿದೆ. ಅಂದರೆ ದಶಕವಾರು ಏರಿಕೆಯ ಪ್ರಮಾಣ ಶೇ. 10ರಷ್ಟು ಕುಸಿದಿದೆ. ಆದರೆ ಹಿಂದೂಗಳಲ್ಲಿ ಈ ಕುಸಿತದ ಪ್ರಮಾಣ ಹೆಚ್ಚಿಲ್ಲ. ಹೀಗಾಗಿ ಒಟ್ಟಾರೆ ಇಂದಿನ ಜನಸಂಖ್ಯಾ ಪ್ರಮಾಣವನ್ನು ನೋಡಿದರೆ ಹಿಂದೂಗಳ ಜನಸಂಖ್ಯೆ ಕುಸಿದು, ಮುಸ್ಲಿಮರ ಜನಸಂಖ್ಯೆ ಏರಿದಂತೆ ಕಂಡು ಬಂದರೂ ಐತಿಹಾಸಿಕವಾಗಿ ನೋಡಿದರೆ ಮುಸ್ಲಿಮರ ಜನಸಂಖ್ಯಾ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ವೇಗವಾಗಿ ಕುಸಿಯುತ್ತಿದೆ.
ಹಾಗೆ ನೋಡಿದಲ್ಲಿ 2011ರಲ್ಲಿ ಬಿಹಾರದ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಗಳ ಪ್ರಮಾಣ ಶೇ. 16ರಷ್ಟಿದ್ದು, 2023ರ ಜಾತಿ ಜನಗಣತಿಯ ಪ್ರಕಾರ ಶೇ. 19.65 ಕ್ಕೆ ಏರಿದೆ. ಅದೇ ರೀತಿ ಹಿಂದುಳಿದ ಜಾತಿಗಳ ಜನಸಂಖ್ಯಾ ಏರಿಕೆಯ ಪ್ರಮಾಣಕ್ಕಿಂತ ಅತ್ಯಂತ ಹಿಂದುಳಿದ ಜಾತಿಗಳ ಏರಿಕೆಯ ಪ್ರಮಾಣ ಹೆಚ್ಚಿದೆ.
ಹೀಗಾಗಿ ಬಿಹಾರದ ಜಾತಿ ಜನಗಣತಿ ಜನಸಂಖ್ಯಾ ಏರಿಕೆಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲವೆಂಬ ಹಾಗೂ ಜನಸಂಖ್ಯಾ ಏರಿಕೆಯ ಪ್ರಮಾಣ ಬಡವರಲ್ಲಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಜಾತಿಗಳಲ್ಲಿ ಹೆಚ್ಚಿರುತ್ತದೆ ಎಂಬ ಸಂಗತಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ.
ಇದರ ಜೊತೆಜೊತೆಗೆ ಮುಸ್ಲಿಮರು ಒಂದು ಅವಿಭಜಿತ ಘಟಕವಲ್ಲ ಹಾಗೂ ಮುಸ್ಲಿಮ್ ಸಮುದಾಯದಲ್ಲೂ ಅನ್ಸಾರಿ, ಸುರ್ಜಾಪುರಿ, ಮನ್ಸುರಿಗಳಂತಹ ಮುಸ್ಲಿಮ್ ಪಂಗಡಗಳು ಅಶ್ರಫ್ ಕುಲಗಳಿಗೆ ಸೇರಿರುವ ಶೇಕ್ ಮುಸ್ಲಿಮರಿಗಿಂತ ಅತ್ಯಂತ ಹಿಂದುಳಿದಿದ್ದರೆಂಬ ಸತ್ಯವನ್ನು ಹೊರಗೆಡವಿದೆ. ಈ ಬಗೆಯ ಹಿಂದುಳಿದ ಪಾಸ್ಮಾಂದ ಮುಸ್ಲಿಮರ ಸಂಖ್ಯೆ ಬಿಹಾರದ ಮುಸ್ಲಿಮರಲ್ಲಿ ಶೇ. 75ಕ್ಕಿಂತ ಹೆಚ್ಚು. ಹೀಗಾಗಿ ಸಾಮಾಜಿಕ ನ್ಯಾಯದ ರಾಜಕಾರಣ ಪಾಸ್ಮಾಂದ ಮುಸ್ಲಿಮರಿಗೆ ಆದ್ಯತೆಯ ಮೇಲೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕಿದೆ.
ಜಾತಿ ಗಣತಿ ಹಿಂದುತ್ವದ ರಾಜಕಾರಣವನ್ನು ಹಿಮ್ಮೆಟ್ಟಿಸಬಹುದೇ?
1989ರಲ್ಲಿ ಮಂಡಲ್ ವರದಿ ಜಾರಿಯಾಗಿ ಹಿಂದೂಗಳೊಳಗಿನ ಹಿಂದುಳಿದ ವರ್ಗಗಳು ಮೇಲ್ಜಾತಿಗಳಿಂದ ತಮಗೆ ಆಗುತ್ತಿರುವ ಅನ್ಯಾಯಗಳನ್ನು ಅರ್ಥಮಾಡಿಕೊಂಡು ಜಾತಿ ಅಸ್ಮಿತೆಯನ್ನು ಮುಂದುಮಾಡಿಕೊಂಡು ಮೀಸಲಾತಿಯ ಲಾಭವನ್ನು ಅನುಭವಿಸಲು ಮುಂದಾದವು. ಇದು ಹಿಂದೂಗಳನ್ನು ‘ಹಿಂದೂ ಒಂದು’ ಎನ್ನುವ ಮುಸ್ಲಿಮ್ ವಿರೋಧಿ-ಬ್ರಾಹ್ಮಣೀಯ ಹಿಂದುತ್ವ ರಾಜಕಾರಣದಡಿ ಒಂದುಗೂಡಿಸ ಬಯಸಿದ್ದ ಬಿಜೆಪಿ-ಆರೆಸ್ಸೆಸ್ ರಾಜಕಾರಣಕ್ಕೆ ಪೆಟ್ಟು ನೀಡಿತು.
ಮಂಡಲ್ ರಾಜಕಾರಣವನ್ನು ಸೋಲಿಸಲೆಂದೇ ಅದು ಕಮಂಡಲ ಅರ್ಥಾತ್ ರಾಮಜನ್ಮಭೂಮಿ ರಾಜಕಾರಣವನ್ನು ಆಕ್ರಮಣಶೀಲವಾಗಿ ಕಟ್ಟಲು ಮುಂದಾಯಿತು. ಅತ್ಯಂತ ಆಕ್ರಮಣಕಾರಿಯಾಗಿ ಮುಸ್ಲಿಮರ ವಿರುದ್ಧ ಹಿಂದುಳಿದ ವರ್ಗಗಳಿಗೆ ಸೇರಿದ ಜಾತಿಗಳನ್ನೇ ಒಂದುಗೂಡಿಸ ತೊಡಗಿತು.
1990ರ ದಶಕದಲ್ಲಿ ಮಂಡಲ್ ರಾಜಕಾರಣದ ಭಾಗವಾಗಿ ಉತ್ತರ ಪ್ರದೇಶ, ಬಿಹಾರದ ಯಾದವ ರೀತಿಯ ಹಿಂದುಳಿದ ಪ್ರಬಲ ಸಮುದಾಯಗಳು ಜಾತಿ ಆಧಾರಿತ ಸಂಘಟನೆ ಮತ್ತು ಇತರ ಪ್ರಬಲ ಜಾತಿಗಳೊಡನೆ ಚುನಾವಣಾ ಸಮೀಕರಣಗಳನ್ನು ಏರ್ಪಡಿಸಿಕೊಂಡಿದ್ದರಿಂದ ಬಿಜೆಪಿಗೆ ಕಮಂಡಲ ರಾಜಕಾರಣದಿಂದ ಹೆಚ್ಚು ಚುನಾವಣಾ ಪ್ರಯೋಜವಾಗಲಿಲ್ಲ.
ಆದರೆ ಆಗಲೂ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಪಕ್ಷವೊಂದನ್ನು ಹೊರತು ಪಡಿಸಿ ಇತರ ಮಂಡಲ್ ಪಕ್ಷಗಳು ತಮ್ಮ ರಾಜಕೀಯ ಅವಕಾಶವಾದಕ್ಕಾಗಿ ಬಿಜೆಪಿಯ ಜೊತೆ ಕೈಗೂಡಿಸಿದವು. ಅದನ್ನು ಆಸರೆಯಾಗಿಟ್ಟುಕೊಂಡು ಬಿಜೆಪಿ ಮತ್ತು ಆರೆಸ್ಸೆಸ್‌ಗಳು ಹಿಂದುಳಿದ ವರ್ಗ ಸಮುದಾಯಗಳ ನಡುವೆ ತಮ್ಮ ಪ್ರಭಾವ ಮತ್ತು ಸಂಘಟನೆಯನ್ನು ಗಟ್ಟಿಗೊಳಿಸಿಕೊಂಡವು.
2000ದಿಂದಾಚೆಗೆ ಬಿಜೆಪಿ-ಆರೆಸ್ಸೆಸ್‌ಗಳು ಯಾದವೇತರ ಹಿಂದುಳಿದ ವರ್ಗಗಳು ಮತ್ತು ಜಾತವೇತರ ದಲಿತ ಜಾತಿಗಳ ನಡುವೆ ತಮ್ಮ ಪ್ರಭಾವವನ್ನು ಯೋಜಿತವಾಗಿ ಹೆಚ್ಚಿಸಿಕೊಳ್ಳುತ್ತಾ ಹೋದವು. ಅತ್ಯಂತ ನಿರ್ಲಕ್ಷ ್ಯಕ್ಕೆ ಒಳಗಾದ ಈ ಜಾತಿಗಳಿಗೆ ಪಕ್ಷದ ಹಾಗೂ ಸರಕಾರದ ಕೆಳಹಂತಗಳಲ್ಲಿ ಸ್ಥಾನಮಾನಗಳನ್ನು ನೀಡುತ್ತಾ ಈ ಜಾತಿಗಳನ್ನು ತಮ್ಮ ಪರವಾಗಿ ಸಂಘಟಿಸಿದವು. ಇದಕ್ಕೆ ಬಿಹಾರದಲ್ಲಿ ಬಿಜೆಪಿಯು ಅತ್ಯಂತ ಹಿಂದುಳಿದ ಜಾತಿಗಳ ನಾಯಕನಾಗಿದ್ದ ನಿತೀಶ್ ಕುಮಾರ್ ಜೊತೆ ಸೇರಿ ಸರಕಾರ ಮಾಡಿದ್ದು ಸಹಾಯವಾಯಿತು. ಇದರ ಜೊತೆಗೆ ಮೋದಿ ಸರಕಾರದ ಆಕ್ರಮಣಕಾರಿ ಹಿಂದುತ್ವ ರಾಜಕಾರಣವು ಸಹ ಅತ್ಯಂತ ಹಿಂದುಳಿದ ವರ್ಗಗಳನ್ನು ಸೆಳೆದಿದೆ.
ಹೀಗಾಗಿ ಮಂಡಲ್ ರಾಜಕಾರಣ ಹುಟ್ಟುಹಾಕಿದ ಅಡೆತಡೆಯನ್ನು ಹಿಂದುತ್ವವಾದಿ ಶಕ್ತಿಗಳು ಹಿಮ್ಮೆಟ್ಟಿಸಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ನಡುವೆ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡಿವೆ. ಇದರ ಪರಿಣಾಮವಾಗಿಯೇ 1987ರಲ್ಲಿ ಕೇವಲ ಶೇ. 7ರಷ್ಟು ಪ್ರಧಾನವಾಗಿ ಮೇಲ್ಜಾತಿ ಮತಗಳನ್ನು ಮಾತ್ರ ಪಡೆಯುತ್ತಿದ್ದ ಬಿಜೆಪಿ 2019ರಲ್ಲಿ ಶೇ. 38ರಷ್ಟು ಮತಗಳನ್ನು ಪಡೆಯುವಂತಾಗಿದೆ. ಅದು ಬಹುಪಾಲು ಹಿಂದುಳಿದ ವರ್ಗಗಳ ಮತವೇ ಆಗಿದೆ. ಸಿಎಸ್‌ಡಿಎಸ್-ಲೋಕನೀತಿ ಸಂಸ್ಥೆಯು ಮಾಡಿರುವ ಅಧ್ಯಯನದ ಪ್ರಕಾರ ಬಿಜೆಪಿಗೆ ಹಿಂದುಳಿದ ಜಾತಿಗಳಲ್ಲಿ ಶೇ.44ರಷ್ಟು ಮತಗಳು ಲಭ್ಯವಾಗಿವೆ. ಕಾಂಗ್ರೆಸ್‌ಗೆ ಶೇ. 15ರಷ್ಟು ಮತ್ತು ಮಂಡಲ್ ಪಕ್ಷಗಳಿಗೆ ಕೇವಲ ಶೇ. 27, ಅತ್ಯಂತ ಹಿಂದುಳಿದ ಜಾತಿಗಳಲ್ಲಿ ಬಿಜೆಪಿಗೆ ಶೇ. 50 ರಷ್ಟು ಬೆಂಬಲ ಸಿಗುತ್ತಿದೆ.
ಅಂದರೆ ಮಂಡಲ್ ಕ್ರಾಂತಿಯು ಹಿಂದುತ್ವವನ್ನು ಹತ್ತು ವರ್ಷಗಳ ಕಾಲವೂ ಹಿಮ್ಮೆಟ್ಟಿಸಲಾಗಲಿಲ್ಲ.
ಅದಕ್ಕೆ ಪ್ರಮುಖ ಕಾರಣ ಪ್ರಬಲ ಹಿಂದುಳಿದ ಜಾತಿಗಳ ಜಾತಿ ಪ್ರತಿಷ್ಠೆ, ರಾಜಕೀಯ ಅವಕಾಶವಾದ ಮತ್ತು ಅಂತರ್ಗತವಾಗಿ ಬೆಳೆಸಿಕೊಂಡಿರುವ ಹಿಂದುತ್ವ. ಅದು ಕರ್ನಾಟಕದ ರಾಜಕಾರಣ ನೋಡಿರುವವರಿಗೆ ವಿವರಿಸುವ ಅಗತ್ಯವೇ ಇರುವುದಿಲ್ಲ.
ಮಂಡಲ್ ವರದಿ ಬಂದ ಹೊಸತಿನಲ್ಲಿ ಬಿಜೆಪಿ ಇಷ್ಟು ಜನಬೆಂಬಲವನ್ನು ಪಡೆದುಕೊಂಡಿರಲಿಲ್ಲ. ಇಷ್ಟು ಸಂಪನ್ಮೂಲಗಳನ್ನು ಹೊಂದಿರಲಿಲ್ಲ. ಸರಕಾರವೂ ಅದರ ಕೈಯಲ್ಲಿರಲಿಲ್ಲ. ಹಾಗೂ ಮಂಡಲ್ ವರದಿ ಆಧರಿಸಿ ಅಧಿಕಾರಕ್ಕೆ ಬಂದ ಪ್ರಬಲ ಹಿಂದುಳಿದ ಜಾತಿ ನಾಯಕರ ಅವಕಾಶವಾದವೂ ಜನರೆದುರು ಬೆತ್ತಲಾಗಿರಲಿಲ್ಲ.
ಈಗ ಸಂದರ್ಭ ಬದಲಾಗಿದೆ.
ಹೀಗಾಗಿ ಈ ಜಾತಿ ಜನಗಣತಿಯ ನೈಜವಾದ ಸಾಮಾಜಿಕ ನ್ಯಾಯ ರಾಜಕಾರಣವನ್ನು ಹುಟ್ಟು ಹಾಕಲಿ ಎಂದು ಆಶಿಸಬಹುದೇ ವಿನಾ ಅದು 2024 ರಲ್ಲಿ ಹಿಂದುತ್ವ ರಾಜಕಾರಣವನ್ನು ಹಿಮ್ಮೆಟ್ಟಿಸಬಹುದು ಎಂದು ನಿರೀಕ್ಷಿಸುವುದು ದುರಾಸೆಯಾಗಬಹುದು.
ಸಮಾಜವಾದಿ ಆರ್ಥಿಕತೆ ಇಲ್ಲದೆ ಸಾಮಾಜಿಕ ನ್ಯಾಯ ಸಾಧ್ಯವೇ?
ಭಾರತದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಾಂಕೇತಿಕ ಪ್ರಾತಿನಿಧ್ಯ ಮತ್ತು ಆಡಳಿತಾತ್ಮಕ ಮತ್ತು ಉದ್ಯೋಗಗಳಲ್ಲಿ ವಂಚಿತರಿಗೆ ಮೀಸಲಾತಿಯ ಪ್ರಶ್ನೆಯಾಗಿ ಮಾತ್ರ ಉಳಿದುಬಿಟ್ಟಿದೆ.
ಆದರೆ ಅದು ಒಬ್ಬ ವ್ಯಕ್ತಿಗೆ ಒಂದು ಮೌಲ್ಯ ತಂದುಕೊಡಬೇಕಾದ ಆರ್ಥಿಕ ಮತ್ತು ರಾಜಕೀಯ ನ್ಯಾಯದ ಜೊತೆಗೆ ಅಂತರ್ಗತವಾಗಿ ಬೆಸೆದು ಕೊಂಡಿರುವ ಮೌಲ್ಯವಾಗಿದೆ. ಅದು ಸಾಧ್ಯವಾಗುವುದು ಅವಕಾಶಗಳಲ್ಲಿ ಮತ್ತು ಸ್ಥಾನಮಾನಗಳಲ್ಲಿ ಸಮಾನತೆ ಇದ್ದಾಗ ಮಾತ್ರ.