ಕೊಡಗು: 29 ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮರು ಸ್ಥಾಪನೆ
ಕರ್ನಾಟಕ ಗ್ರಾಮ ಸ್ವರಾಜ್, ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ
ಮಡಿಕೇರಿ: ಮಲೆನಾಡಿನ ಜಿಲ್ಲೆಗಳ ಮಾದರಿಯಲ್ಲಿಯೇ ಕೊಡಗು ಜಿಲ್ಲೆಯಲ್ಲೂ 18 ಸಾವಿರದಿಂದ 25 ಸಾವಿರ ಗ್ರಾಮೀಣ ಜನಸಂಖ್ಯೆಗೆ ಒಂದು ಜಿಲ್ಲಾ ಪಂಚಾಯತ್ ಸ್ಥಾನ ಸೃಷ್ಟಿಸುವ ಸಲುವಾಗಿ ಮಂಡಿಸಿದ್ದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ.
2016ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಲ್ಲಿದ್ದ 29 ಜಿಲ್ಲಾ ಪಂಚಾಯತ್ ಸ್ಥಾನಗಳು ಮತ್ತೆ ಮರು ಸ್ಥಾಪನೆಯಾಗಲಿವೆ. ಹಾಗೂ ಒಂದೆರಡು ಜಿಲ್ಲಾ ಪಂಚಾಯತ್ ಸ್ಥಾನಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಕೊಡಗು ಜಿಲ್ಲೆಯಲ್ಲಿ ಜಿಪಂ ಸ್ಥಾನಗಳನ್ನು 29ರಿಂದ 25ಕ್ಕೆ ಸೀಮಾಗಡಿ ನಿರ್ಣಯ ಆಯೋಗ ಕಡಿತಗೊಳಿಸಿರುವುದರ ಬಗ್ಗೆ ಗಮನಸೆಳೆದಿದ್ದರು. ಚಳಿಗಾಲದ ಅಧಿವೇಶನದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಪೂರಕವಾಗಿ ಸ್ಪಂದಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಬೇಕಾಗಿದೆ, ಎಲ್ಲರೂ ಸಹಕಾರ ನೀಡಿದರೆ ವಿಧೇಯಕಕ್ಕೆ ತಿದ್ದುಪಡಿ ತರಲಾಗುವುದೆಂದು ಸದನದಲ್ಲಿ ಉತ್ತರ ನೀಡಿದ್ದರು.
ಇದೀಗ ವಿಧಾನಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧೇಯಕವನ್ನು ಮಂಡಿಸಿದ್ದು, ಒಪ್ಪಿಗೆ ದೊರೆತಿದೆ. ಕೊಡಗು ಜಿಲ್ಲೆಯ ಶಾಸಕದ್ವಯರ ಪ್ರಯತ್ನದಿಂದ ಜಿಲ್ಲೆಯಲ್ಲಿ ಮತ್ತೆ ಜಿಪಂ ಸ್ಥಾನಗಳು 29ಕ್ಕೇರಿಕೆ ಕಾಣಲಿವೆ.
ಬಿಜೆಪಿ ಅವಧಿಯಲ್ಲಿ 18 ಸಾವಿರ ಜನಸಂಖ್ಯೆಯಿಂದ 23 ಸಾವಿರಕ್ಕೆ ಹೆಚ್ಚಳ ಮಾಡಲಾಗಿತ್ತು:
ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ 1993ರ ಅಧಿನಿಯಮ 160,161 ಮತ್ತು 162 ರಲ್ಲಿ ಸ್ಪಷ್ಟವಾಗಿ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ 30 ಸಾವಿರ ಜನಸಂಖ್ಯೆಗೆ ಒಂದು ಜಿಪಂ ಕ್ಷೇತ್ರ ಹಾಗೂ ಕೊಡಗು ಜಿಲ್ಲೆಗೆ 18 ಸಾವಿರ ಜನಸಂಖ್ಯೆಗೆ ಒಂದು ಜಿಪಂ ಕ್ಷೇತ್ರ ಎಂದು ನಿಗದಿ ಮಾಡಲಾಗಿತ್ತು. ಜನಸಂಖ್ಯೆ ನೆಪದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರದಿಂದ ಕೊಡಗು ಜಿಲ್ಲೆ ವಂಚಿತಗೊಂಡಿದೆ.
ಕ್ಷೇತ್ರದ ಗಡಿ,ಸಂಖ್ಯೆ ಸದ್ಯದಲ್ಲೇ ಪ್ರಕಟಗೊಳ್ಳುವ ನಿರೀಕ್ಷೆ:
ಕೊಡಗು ಜಿಲ್ಲೆ ಹೊರತುಪಡಿಸಿ 2023 ಡಿ.19ರಂದು ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮತ್ತು 234 ತಾಲೂಕು ಪಂಚಾಯತ್‌ಗಳ ಸದಸ್ಯರ ಸಂಖ್ಯೆ,ವರ್ಗವಾರು ಮೀಸಲು ಸಂಖ್ಯೆ ಹಾಗೂ ಕ್ಷೇತ್ರಗಳ ಗಡಿಯನ್ನು ನಿಗದಿಪಡಿಸಿ ರಾಜ್ಯ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಒಂದು ವಾರದೊಳಗೆ ಕೊಡಗು ಜಿಲ್ಲೆಯ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಪುನರ್ವಿಂಗಡಣೆಯ ಅಧಿಸೂಚನೆ ಪ್ರಕಟಿಸಿ, ಇದಾದ ನಂತರ 7 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ, 10 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ರಾಜ್ಯದ ಜನರಲ್ ಅಡ್ವಕೇಟ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್‌ಗೆ ಮಂಗಳವಾರ ಮಾಹಿತಿ ನೀಡಿದ್ದರು. ಆದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಬೇಕಾಗಿರುವುದರಿಂದ ಕೊಡಗು ಜಿಲ್ಲೆಯ ಕ್ಷೇತ್ರದ ಗಡಿ ಹಾಗೂ ಒಟ್ಟು ಮೀಸಲು ಪ್ರಕಟ ಗೊಂಡಿರಲಿಲ್ಲ.
ಇದೀಗ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದ್ದು, ಸದ್ಯದಲ್ಲೇ ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಕ್ಷೇತ್ರಗಳ ಗಡಿ,ಸಂಖ್ಯೆ,ಮೀಸಲು ಪ್ರಕಟಗೊಳ್ಳಲಿದೆ.ಈಗಾಗಲೇ ರಾಜ್ಯದ 30 ಜಿಲ್ಲೆಗಳ ಕ್ಷೇತ್ರದ ಗಡಿ,ಸಂಖ್ಯೆ,ಮೀಸಲು ಪ್ರಕಟಗೊಂಡಿದೆ. ಲೋಕಸಭಾ ಚುನಾವಣೆಯ ಬಳಿಕ ಜಿಲ್ಲಾ ಹಾಗೂ ತಾಪಂ ಚುನಾವಣೆ ನಡೆಯುವ ಸಾಧ್ಯತೆಗಳಿವೆ.
ಬಿಜೆಪಿಯ ಅವಧಿಯಲ್ಲಿ ರಚನೆಯಾಗಿದ್ದ ಸೀಮಾ ಗಡಿ ನಿರ್ಣಯ ಆಯೋಗ:
ಈ ಹಿಂದಿನ ಬಿಜೆಪಿ ಸರಕಾರವು ಅವಧಿ ಮುಗಿದ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ತೀರ್ಮಾನ ಮಾಡಲು ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಲಾಗಿತ್ತು. ಬಿಜೆಪಿ ಸರಕಾರ ಅವಧಿಯಲ್ಲಿ 2023 ಜನವರಿ ತಿಂಗಳಲ್ಲಿ ಸೀಮಾ ನಿರ್ಣಯ ಆಯೋಗವು ಕ್ಷೇತ್ರಗಳ ಪುನರ್ವಿಂಗಡಣೆ ಪಟ್ಟಿಯನ್ನು ಪ್ರಕಟಿಸಲಾಗಿತ್ತು. 2023 ಜನವರಿಯಲ್ಲಿ ಪ್ರಕಟಗೊಂಡಿದ್ದ ಕ್ಷೇತ್ರಗಳ ಪುನರ್ವಿಂಗಡಣೆಗೆ ದೊಡ್ಡ ಆಕ್ಷೇಪವೂ ವ್ಯಕ್ತವಾಗಿತ್ತು. ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಆಯೋಗವು ಪ್ರಕಟಿಸಿದ್ದ ಕರಡುಪಟ್ಟಿಯನ್ನು ಬದಲಾಯಿಸಿ ಕಾಂಗ್ರೆಸ್ ಸರಕಾರವು ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವನ್ನು ರಚಿಸಿತ್ತು. 2023 ಸೆ.5ರಂದು ಪ್ರಕಟಗೊಂಡಿದ್ದ ಕರಡು ಪಟ್ಟಿಯಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗದೆ ಜಿಲ್ಲೆಯ ಜನತೆಗೆ ನಿರಾಸೆಯುಂಟಾಗಿತ್ತು. ಒಟ್ಟು 29 ಕ್ಷೇತ್ರಗಳಿದ್ದ ಕೊಡಗಿನಲ್ಲಿ ಜನವರಿಯಲ್ಲಿ ಪ್ರಕಟಗೊಂಡ ಜಿಪಂ ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ 25 ಕ್ಷೇತ್ರಕ್ಕೆ ಇಳಿಸಲಾಗಿತ್ತು.
ಕೊಡಗು ಜಿಲ್ಲಾ ಕಾಂಗ್ರೆಸ್ ನಿಯೋಗವು ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ,ಕೊಡಗು ಜಿಲ್ಲೆಗೆ ಪುನಃ 29 ಜಿಪಂ ಸ್ಥಾನಗಳನ್ನು ನೀಡಿ, ವಿಶೇಷವಾಗಿ ಪರಿಗಣಿಸಬೇಕೆಂದು ಮನವಿ ಸಲ್ಲಿಸಿದ್ದರು.ಇದೀಗ ಕೊಡಗು ಜಿಲ್ಲೆಗೆ ಆದ ಅನ್ಯಾಯಕ್ಕೆ ನ್ಯಾಯ ದೊರೆತಿದ್ದು ಶಾಸಕದ್ವಯರ ಕೆಲಸ ಶ್ಲಾಘನೀಯವಾಗಿದೆ ಎಂದು ಪಕ್ಷಾತೀತವಾಗಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಾಮಾನ್ಯವಾಗಿ ತಾಲೂಕಿನಿಂದ ಚುನಾಯಿತರಾಗುವ ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನವನ್ನು 35ರಿಂದ 45 ಸಾವಿರ ಜನಸಂಖ್ಯೆಗೆ ನಿಗದಿಪಡಿಸಿದೆ. ಆದರೆ ಚಿಕ್ಕಮಗಳೂರು (ತರೀಕೆರೆ,ಕಡೂರು,ಅಜ್ಜಂಪುರ ಹೊರತುಪಡಿಸಿ)ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನಸಂಖ್ಯೆ ಇರುವುದರಿಂದ ಪ್ರತೀ 18 ರಿಂದ 25 ಸಾವಿರಕ್ಕೆ ಒಂದು ಸದಸ್ಯ ಸ್ಥಾನ ಸೃಷ್ಟಿಸಲಾಗಿದೆ.ಇದೇ ರೀತಿ ಕೊಡಗಿನಲ್ಲೂ 18 ರಿಂದ 25 ಸಾವಿರ ಜನಸಂಖ್ಯೆಗೆ ಒಂದು ಸದಸ್ಯ ಸ್ಥಾನ ಮಾಡಬೇಕು. ಇನ್ನು 7 ರಿಂದ 9.5 ಲಕ್ಷ ಮೀರಿದರೆ ಗ್ರಾಮೀಣ ಜಿಲ್ಲೆಯಲ್ಲಿ 28 ಮಂದಿ ಸದಸ್ಯರು ಇರಬೇಕೆಂದು ತಿದ್ದುಪಡಿ ಮಾಡಲಾಗಿದೆ.
- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ
ಶಾಸಕದ್ವಯರ ಪ್ರಯತ್ನದಿಂದ ಕೊಡಗು ಜಿಲ್ಲೆಯಲ್ಲಿ ಮತ್ತೆ 29 ಜಿಪಂ ಸ್ಥಾನಗಳು ಸ್ಥಾಪನೆಯಾಗಲಿವೆ. ಬಿಜೆಪಿ ಸರಕಾರದ ಅವಧಿಯಲ್ಲಿ ಸೀಮಾ ಗಡಿ ನಿರ್ಣಯ ಆಯೋಗವು ಕೊಡಗು ಜಿಲ್ಲೆಗೆ ಜಿಲ್ಲಾ ಪಂಚಾಯತ್ ಸ್ಥಾನ ಕಡಿಮೆ ಮಾಡಿ ಅನ್ಯಾಯ ಮಾಡಲಾಗಿತ್ತು. ಇದೀಗ ಶಾಸಕರ ಪ್ರಯತ್ನದಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ತಿದ್ದುಪಡಿ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. ಕೊಡಗಿನ ಶಾಸಕರಿಬ್ಬರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
- ಕೆ.ಎ. ಅಬ್ದುಲ್ ರಝಾಕ್ ಬಜೆಗುಂಡಿ, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವಕ್ತಾರ