ಕೊಡಿಯಾಲ್‌ಬೈಲ್‌ರ ‘ಶಿವಾಜಿ’ ಮತ್ತು ತುಳು ರಂಗಭೂಮಿಯ ಕೋಡೆ-ಇನಿ-ಎಲ್ಲೆ !

ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿನ್ನೆಯವರೆಗೂ ಕರಾವಳಿಯ ಸೃಜನಶೀಲ ನಿರ್ದೇಶಕರು! ನೆಲಮೂಲದ ಕತೆಗಳನ್ನೇ ರಂಗದ ಮೇಲೆ ತಂದು ಒಂದು ಪ್ರಜ್ಞಾವಂತ ‘ಪ್ರೇಕ್ಷಕರನ್ನು ಸೃಷ್ಟಿಸುವ’ ಸಾಮರ್ಥ್ಯ ತುಳುನಾಡಿನಲ್ಲಿ ವಿಜಯಕುಮಾರ್ ಕೊಡಿಯಾಲ್‌ಬೈಲ್‌ಗೆ ಅಲ್ಲದೆ ಇನ್ಯಾರಿಗೂ ಇರಲಿಲ್ಲ. ಅಶ್ಲೀಲ ಸಂಭಾಷಣೆ ಇಲ್ಲದ, ಬಡವರ-ಸ್ತ್ರಿಯರ ಬಗೆಗಿನ ಹಾಸ್ಯಗಳು ಇಲ್ಲದ ನಾಟಕವನ್ನೇ ಬರೆದು ನಿರ್ದೇಶಿಸಿಯೂ ತುಳು ರಂಗಭೂಮಿಯಲ್ಲಿ ಯಶಸ್ವಿಯಾಗಬಹುದೆಂದು ತೋರಿಸಿಕೊಟ್ಟವರು ವಿಜಯಕುಮಾರ್ ಕೊಡಿಯಾಲ್ ಬೈಲ್. ಕೇವಲ ಹಾಸ್ಯದ ನಾಟಕಗಳನ್ನೇ ರಚಿಸಿ, ಪ್ರಸ್ತುತಪಡಿಸಿ ಇಂದು ಮನೆಮಾತಾಗಿರುವ ಹಲವು ರಂಗಕರ್ಮಿಗಳು ತುಳುನಾಡಿನಲ್ಲಿರಬಹುದು. ಆದರೆ ‘ಕಂಟೆಂಟ್’ ಆಧರಿತ ನಾಟಕಗಳ ಮೂಲಕವೇ ತುಳುವ ಪ್ರಜ್ಞಾವಂತ ನಾಗರಿಕರ ಮಧ್ಯೆ ಗೌರವ ಉಳಿಸಿಕೊಂಡವರು ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಮಾತ್ರ. ಇಂತಹ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಕೂಡಾ ತುಳು ರಂಗಭೂಮಿಯನ್ನು ಹಾದಿ ತಪ್ಪಿಸುತ್ತಿದ್ದಾರೆಯೇ?
ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೆಶನದಲ್ಲಿ ರಂಗವೇರಲು ಸಿದ್ಧತೆ ನಡೆಸುತ್ತಿರುವ ‘ಛತ್ರಪತಿ ಶಿವಾಜಿ’ ತುಳು ನಾಟಕ ಇಂತಹ ಅನುಮಾನಗಳನ್ನು ಮೂಡಿಸಿದೆ. ‘‘ನಾನು ಚೀಪ್ ಗಿಮಿಕ್, ಚೀಪ್ ಹಾಸ್ಯ, ಸುಳ್ಳು ಕತೆಗಳ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಿಲ್ಲ’’ ಎಂದು ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲರು ‘ಕೋಡೆ-ಇನಿ-ಎಲ್ಲೆ’ (ನಿನ್ನೆ-ಇಂದು-ನಾಳೆ) ನಾಟಕ ಪ್ರದರ್ಶನದ ವೇಳೆ ಹೇಳಿದ್ದರು. ಕೋಡೆ-ಇನಿ-ಎಲ್ಲೆ ಎನ್ನುವುದು ಕರಾವಳಿಯ ರೈತರ ಭೂಸ್ವಾಧೀನವನ್ನು ವಿರೋಧಿಸುವ ಕಥಾವಸ್ತುವುಳ್ಳ ನಾಟಕ. ಆಗ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ಭೂಸ್ವಾಧೀನ ಮಾಡಲು ಸುಮಾರು ಐದು ಸಾವಿರ ಎಕರೆ ಕೃಷಿ ಭೂಮಿಯ ರೈತರಿಗೆ ನೋಟಿಸ್ ನೀಡಲಾಗಿತ್ತು. ರೈತರು ಹಳ್ಳಿಗಳಲ್ಲಿ ಭೂಮಿ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ, ನಗರದ ಪುರಭವನದಲ್ಲಿ ತುಳು ನಾಟಕಗಳ ಹಾಸ್ಯ ಸಂಭಾಷಣೆಗಳಿಗೆ ಜನ ಬಿದ್ದು ಬಿದ್ದು ನಗುತ್ತಿದ್ದರು. ಆಗ ಮೈಕೊಡವಿ ನಿಂತಿದ್ದ ವಿಜಯಕುಮಾರ್ ಕೊಡಿಯಾಲ್‌ಬೈಲ್‌ರವರು ಭೂಸ್ವಾಧೀನದ ಬಗ್ಗೆಯೇ ಕತೆ ರಚಿಸಿ ‘ಕೋಡೆ-ಇನಿ-ಎಲ್ಲೆ’ ಎಂಬ ನಾಟಕ ನಿರ್ದೇಶಿಸಿದ್ದರು. ಆ ನಾಟಕವನ್ನು ಕರಾವಳಿಯ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿತ್ತು. ಮಂಗಳೂರು ವಿಶೇಷ ಆರ್ಥಿಕ ವಲಯದ ವಿರುದ್ಧದ ಪತ್ರಕರ್ತನಾಗಿದ್ದ ನಾನೂ ಕೂಡಾ ‘ಕೋಡೆ-ಇನಿ-ಎಲ್ಲೆ’ ನಾಟಕಕ್ಕೆ ಅಳಿಲ ಸೇವೆ ನೀಡಿದ್ದೆ. ‘ಕೋಡೆ-ಇನಿ-ಎಲ್ಲೆ’ ತುಳು ನಾಟಕದಲ್ಲಿ ಮೊದಲ ಬಾರಿಗೆ ಸ್ಕ್ರೀನ್ ಪ್ಲೇ ಬಳಕೆ ಮಾಡಲಾಗಿತ್ತು. ನಾಟಕದ ದೃಶ್ಯಗಳ ಮಧ್ಯೆ ಭೂಸ್ವಾಧೀನದ ದೃಶ್ಯಗಳು, ರೈತರ ಗೋಳಾಟಗಳನ್ನು ಸ್ಕ್ರೀನ್ ಮೂಲಕ ವೀಡಿಯೊ ಪ್ಲೇ ಮಾಡಲಾಗಿತ್ತು. (ಅದಕ್ಕೆ ಬೇಕಾದ ಎಲ್ಲಾ ವೀಡಿಯೊಗಳನ್ನು ನಾನೇ ಸಿದ್ಧಪಡಿಸಿ ನೀಡಿದ್ದೆ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ, ನನ್ನದೇ ವೆಚ್ಚದಲ್ಲಿ ನಾಟಕ ನಡೆಯುವ ಎಲ್ಲಾ ಹಳ್ಳಿಗಳಿಗೂ ಹೋಗಿ ನನ್ನಿಂದಾದ ಪ್ರಚಾರ ನೀಡುತ್ತಿದ್ದೆ.) ಆ ದಿನಗಳಲ್ಲಿ ನಿತ್ಯ ನನ್ನ ಸಂಪರ್ಕದಲ್ಲಿದ್ದ ನಿರ್ದೆಶಕ ವಿಜಯಕುಮಾರ್ ಕೊಡಿಯಾಲ್‌ಬೈಲರು ‘ಜಿಲ್ಲಾಡಳಿತ, ಪೊಲೀಸ್ ಮತ್ತು ಎಸ್‌ಇಝಡ್ ಒತ್ತಡ’ಗಳ ಬಗ್ಗೆ ಹೇಳಿಕೊಂಡಿದ್ದರು. ಎಂತಹ ಒತ್ತಡಗಳಿದ್ದರೂ ನಾಟಕ ಪ್ರದರ್ಶನ ನಿಲ್ಲಿಸಿರಲಿಲ್ಲ. ಜನರೂ ಕೂಡಾ ವಿಜಯಕುಮಾರ್ ಕೊಡಿಯಾಲ್‌ಬೈಲ್‌ರ ಕೈಬಿಡಲಿಲ್ಲ. ತುಳು ಹಾಸ್ಯ ನಾಟಕಗಳ ಎದುರು ‘ವಿಚಾರ ಪ್ರಚೋದಿತ ನಾಟಕ’ ಕೋಡೆ-ಇನಿ-ಎಲ್ಲೆ ನಾಟಕವನ್ನು ಗೆಲ್ಲಿಸಿಕೊಟ್ಟು, ಕೊಡಿಯಾಲ್‌ಬೈಲ್‌ರ ಸ್ಟಾರ್ ನಿರ್ದೇಶಕ ಪಟ್ಟವನ್ನು ಗಟ್ಟಿಗೊಳಿಸಿದ್ದರು.
ಹಾಸ್ಯ ನಾಟಕಗಳಾಗಲೀ, ವಿಚಾರ ಪ್ರಚೋದಿತ ನಾಟಕಗಳಾಗಲೀ, ಈವರೆಗೂ ತುಳು ನಾಟಕ ರಂಗಭೂಮಿಗೆ ಕೋಮುವಾದದ ಸ್ಪರ್ಶ ನೀಡಿರಲಿಲ್ಲ. ಕರಾವಳಿಯನ್ನು ಬೆಸೆಯುವಲ್ಲಿ ತುಳು ನಾಟಕಗಳ ಪಾತ್ರ ಅಪಾರವಿತ್ತು. ದೇಶ ವಿದೇಶಗಳಲ್ಲಿ ಧರ್ಮ-ಜಾತಿಗಳನ್ನು ಮೀರಿ ತುಳು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಈವರೆಗಿನ ಎಲ್ಲಾ ತುಳು ನಾಟಕಗಳು ಹಿಂದೂ-ಮುಸ್ಲಿಮ್-ಕ್ರಿಶ್ಚಿಯನ್ ಯುವಕ ಮಂಡಲಗಳಲ್ಲಿ ಪ್ರದರ್ಶನಗೊಳ್ಳುವ ಅರ್ಹತೆ ಪಡೆದಿದ್ದವು. ಅಷ್ಟು ಮಾತ್ರವಲ್ಲದೆ, ಮುಸ್ಲಿಮ್-ಕ್ರಿಶ್ಚಿಯನ್ ರಾಷ್ಟ್ರಗಳಲ್ಲೂ ತುಳು ನಾಟಕಗಳು ಮಂಗಳೂರಿಗಿಂತಲೂ ಹೆಚ್ಚು ಪ್ರದರ್ಶನ ಪಡೆಯುತ್ತಿದ್ದವು. ಯಾಕೆಂದರೆ ತುಳು ಹಾಸ್ಯ ನಾಟಕಗಳಲ್ಲಿ ‘ದ್ವೇಷ’ ಇರುತ್ತಿರಲಿಲ್ಲ. ಆದರೀಗ, ವಿಚಾರ ಪ್ರಚೋದಿತ ನಾಟಕಗಳ ಮೂಲಕ ತುಳು ಹಾಸ್ಯ ನಾಟಕಕ್ಕೆ ಸೆಡ್ಡು ಹೊಡೆದಿದ್ದ ವಿಜಯಕುಮಾರ್ ಕೊಡಿಯಾಲ್‌ಬೈಲ್‌ರಿಗಿಂತ ತುಳು ಹಾಸ್ಯ ನಾಟಕಗಳ ನಿರ್ದೆಶಕರುಗಳೇ ಎಷ್ಟೋ ವಾಸಿ ಎನ್ನುವಂತಾಗಿದೆ ! ಕೋಮುವಾದಿಗಳ ಐಕಾನ್ ಆಗಿರುವ ‘ಶಿವಾಜಿ’ಯನ್ನು ಕೊಡಿಯಾಲ್‌ಬೈಲ್‌ರವರು ರಂಗಕ್ಕೆ ತರುತ್ತಿರುವುದು ತುಳು ರಂಗಭೂಮಿಯ ದುರಂತವಾಗಿದೆ.
ತುಳುವಿಗೂ, ಶಿವಾಜಿಗೂ ದರೋಡೆಯ ಸಂಬಂಧ ಹೊರತುಪಡಿಸಿದರೆ ಇನ್ನಾವ ಸಂಬಂಧವೂ ಇಲ್ಲ. 1665ರಲ್ಲಿ ಛತ್ರಪತಿ ಶಿವಾಜಿ ಬಸ್ರೂರಿನಲ್ಲಿ ದರೋಡೆ ನಡೆಸದೇ ಇದ್ದಲ್ಲಿ ಇವತ್ತು ಇಡೀ ಕರಾವಳಿ ಹೀಗಿರುತ್ತಿರಲಿಲ್ಲ. ಮುಂಬೈಯನ್ನೂ ಮೀರಿಸುವ ವಾಣಿಜ್ಯ ನಗರಿಯಾಗಿ ಇರುತ್ತಿತ್ತು. ಆಗ ಬಸ್ರೂರು ಕರಾವಳಿಯ ದೊಡ್ಡ ವಾಣಿಜ್ಯ ನಗರ. ಕ್ರಿ.ಶ. 12 ನೇ ಶತಮಾನದಲ್ಲಿ ಬಸ್ರೂರು ವೈಭವದ ಪಟ್ಟಣ. ತೆಂಗಿನಕಾಯಿ, ಅಕ್ಕಿ, ಕಾಳುಮೆಣಸು, ತಾಳೆ, ಲವಂಗ, ದಾಲ್ಚಿನಿ, ದವಸಧಾನ್ಯಗಳು ಸೇರಿದಂತೆ ಕರಾವಳಿ ಮಲೆನಾಡಿಗರು ಬೆಳೆಯುತ್ತಿದ್ದ ಮಸಾಲ ಪದಾರ್ಥಗಳನ್ನು ಬಸ್ರೂರಿನ ಮೂಲಕ ವಿದೇಶಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಚೀನಾದಿಂದ ಪಾತ್ರೆ, ರೇಷ್ಮೆ ವಸ್ತ್ರಗಳನ್ನು ಬಸ್ರೂರಿನ ಮೂಲಕ ಆಮದು ಮಾಡಲಾಗುತ್ತಿತ್ತು. ಚೀನಾಕ್ಕೆ ಬಸ್ರೂರಿನಿಂದ ಕಬ್ಬು ರಫ್ತು ಮಾಡಲಾಗುತ್ತಿತ್ತು.
ಶಿವಾಜಿಯ ‘ಬಸ್ರೂರು ದರೋಡೆ’ಯು ಮಹಾಶಿವರಾತ್ರಿ ದಿನದಂದು ನಡೆಯುತ್ತದೆ. (ಆಧಾರ: SIVAJIS RAID ON BASRUR By T S Shejwalkar - 1942, Pಚಿge :145) ಬಸ್ರೂರು ಮಹಾಲಿಂಗೇಶ್ವರ ಜಾತ್ರೆ ಮಹಾಶಿವರಾತ್ರಿಯಂದೇ ನಡೆಯುತ್ತದೆ. ಆಗೆಲ್ಲಾ ಜಾತ್ರೆಯೆಂದರೆ ಧಾರ್ಮಿಕ ಕಾರ್ಯಕ್ರಮವಲ್ಲ. ಮಹಾಲಿಂಗೇಶ್ವರನ ತೇರು ಎಳೆಯುವ ಜಾತ್ರೆಯೆಂದರೆ ಕೃಷಿಕರ ಬದುಕಿನ ಮಹತ್ತರ ದಿನ. ಆ ದಿನ ಸಂತೆಯಲ್ಲಿ ಕೃಷಿಕರು ಬೆಳೆದಿದ್ದನ್ನು ನೇರವಾಗಿ ಮಾರಾಟ ಮಾಡುತ್ತಾರೆ. ಮೊದಲೇ ವಾಣಿಜ್ಯ ನಗರ ಬೇರೆ. ಅಂದು ರೈತರು ಮತ್ತು ವ್ಯಾಪಾರಿಗಳ ಬಳಿ ಹಣವಿರುತ್ತದೆ ಎಂದುಕೊಂಡು 1665ರ ಫೆಬ್ರವರಿಯ ಮಹಾಶಿವರಾತ್ರಿ ದಿನ ಶಿವಾಜಿ ತನ್ನ ದರೋಡೆಕೋರ ಸೈನ್ಯದ ಜೊತೆ ದಾಳಿ ಮಾಡಿ ದೇವಸ್ಥಾನವನ್ನೂ ಸೇರಿದಂತೆ ಲೂಟಿ ಮಾಡಿದ. ಬಸ್ರೂರಿನ ಮುಖ್ಯ ವ್ಯಾಪಾರಿ ವರ್ಗವಾಗಿದ್ದ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ)ರ ಮೇಲೆ ಶಿವಾಜಿ ದರೋಡೆ ಪಡೆ ಹಲ್ಲೆ ನಡೆಸಿತು. ಹಲವು ಹಿಂದೂ-ಬ್ರಾಹ್ಮಣರ ಸಾವು ನೋವುಗಳು ನಡೆದವು. ಈ ದಾಳಿಯ ಬಳಿಕ ಬಸ್ರೂರು ವ್ಯಾಪಾರ ಕೇಂದ್ರ ನನೆಗುದಿಗೆ ಬಿದ್ದಿತ್ತು.
ಕರಾವಳಿಯ ಮೇಲೆ ಶಿವಾಜಿ ದರೋಡೆಗಾಗಿ ದಾಳಿ ಮಾಡಿದ ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾದ ಸತ್ಯ. ಅದನ್ನು ಬಲಪಂಥೀಯರು ‘ಪೋರ್ಚುಗೀಸರ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿ’ ಎನ್ನುತ್ತಾರೆ. ಇದು ಅಪ್ಪಟ ಸುಳ್ಳು. ಶಿವಾಜಿಯು ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ದಾಳಿ ಮಾಡುವಾಗ ಪೋರ್ಚುಗೀಸರ ಆಡಳಿತವಿರುವ ಗೋವಾವನ್ನು ಹಾದು ಬರುತ್ತಾನೆ. ಈ ಸಂದರ್ಭದಲ್ಲಿ ಗೋವಾದಲ್ಲಿರುವ ಪೋರ್ಚುಗೀಸರ ಮೇಲೆ ಯಾವ ದಾಳಿಯನ್ನೂ ಮಾಡಲ್ಲ. (ಆಧಾರ : SIVAJIS RAID ON BASRUR By T S Shejwalkar - 1942, Pಚಿge :140)
ಆಗ ದಕ್ಷಿಣ ಕನ್ನಡದ ಬಸ್ರೂರಿನಲ್ಲಿ ಕೆಳದಿಯ ಭದ್ರಪ್ಪ ನಾಯಕ ಡಚ್ಚರೊಂದಿಗೆ ವಹಿವಾಟು ನಡೆಸುತ್ತಿದ್ದರು. ಪೋರ್ಚುಗೀಸರೂ ಕೂಡಾ ಕೆಳದಿಯವರ ಜೊತೆ ವ್ಯಾಪಾರ ವಹಿವಾಟಿಗೆ ಒಪ್ಪಂದ ಮಾಡಿದ್ದರೇ ವಿನಹ ಬಸ್ರೂರು ಪೋರ್ಚುಗೀಸರ ಹಿಡಿತದಲ್ಲಿ ಇರಲಿಲ್ಲ. ಕನ್ನಡಿಗರೇ ಆದ ಕೆಳದಿಯವರ ಹಿಡಿತದಲ್ಲಿತ್ತು. ನಗ ನಾಣ್ಯಗಳ ದರೋಡೆಯ ಕಾರಣಕ್ಕಾಗಿಯೇ ಶಿವಾಜಿ ದಕ್ಷಿಣ ಕನ್ನಡ ಜಿಲ್ಲೆಗೆ ದಾಳಿ ನಡೆಸಿದ.
ಕರಾವಳಿಯ ದೇವಸ್ಥಾನದ ಜಾತ್ರೆಗಳ ಮೇಲೆ ದಾಳಿ ನಡೆಸಿ ದರೋಡೆ ನಡೆಸಿದ ಶಿವಾಜಿಯನ್ನು ಕರಾವಳಿಯ ನೆಲದಲ್ಲಿ ಯಾರೂ ವಿಜೃಂಭಿಸಲು ಸಾಧ್ಯವಿಲ್ಲ. ಶಿವಾಜಿ ಕರಾವಳಿಯ ಪಾಲಿಗೆ ದರೋಡೆಕೋರನೇ ಹೊರತು ಹೋರಾಟಗಾರನಲ್ಲ. ಶಿವಾಜಿಗೆ ದರೋಡೆಕೋರ ಎಂಬ ಪದವನ್ನು ಖ್ಯಾತ ಇತಿಹಾಸ ತಜ್ಞ T S Shejwalkar ಅವರು ಅವರ ಕೃತಿಯಾದ್ಯಂತ ಬಳಸಿದ್ದಾರೆ. ‘sivaji had perhaps selected this time just after the Mahashivaratri fast, because pilgrims had probably gathered around the shrine of Mahalingeshwara and merchants had collected good cash by selling their wares to them. The loot at Basrur is variously valued….’ ಎಂದು ಸ್ಪಷ್ಟವಾಗಿ ಬರೆಯುತ್ತಾರೆ.
ಶಿವಾಜಿ ನಾಟಕ ತುಳು ರಂಗಭೂಮಿಗೊಂದು ಕಪ್ಪು ಚುಕ್ಕೆ. ಕರಾವಳಿಯ ವಿರುದ್ಧ ದಂಡೆತ್ತಿ ಬಂದಂತಹ, ಕರಾವಳಿಯ ಜಿಎಸ್‌ಬಿ ಬ್ರಾಹ್ಮಣರನ್ನು ಇನ್ನಿಲ್ಲದಂತೆ ಹಿಂಸಿಸಿದ, ಇತಿಹಾಸದ ಪುಟದಲ್ಲಿ ‘ದರೋಡೆ’ ಕೃತ್ಯವನ್ನು ನಡೆಸಿರುವ ಶಿವಾಜಿಯ ನೈಜ ಇತಿಹಾಸವನ್ನು ತುಳುವರ ಮುಂದೆ ಇಡಬೇಕಿದೆ. ತುಳು ರಂಗಭೂಮಿಯ ಸೃಜನಶೀಲ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ರವರು ‘ಶಿವಾಜಿ’ ನಾಟಕದಿಂದಾಗಿ ಸಂವೇದನಾಶೀಲ ನೆಲಮೂಲದ ನಿರ್ದೇಶಕ ಎಂಬ ಸ್ಥಾನವನ್ನು ಕಳೆದುಕೊಳ್ಳಬಾರದು. ಎಲ್ಲಕ್ಕಿಂತ ಮುಖ್ಯವಾಗಿ, ಬಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್, ಕಾಲಿವುಡ್‌ನಲ್ಲಿರುವ ತುಳುವ ಸ್ಟಾರ್‌ಗಳನ್ನು ಬದಿಗೊತ್ತಿ, ತುಳುವರು ಪ್ರೀತಿಯಿಂದ ಬೆಳೆಸಿದ ಕರಾವಳಿಯ ಶ್ರೀಮಂತ ತುಳು ರಂಗಭೂಮಿಯನ್ನು ಹಾಳುಗೆಡವಬಾರದು ಎಂಬ ಪ್ರಜ್ಞೆ ಶಿವಾಜಿ ತಂಡಕ್ಕಿದ್ದರೆ ಉತ್ತಮ.