ಕೋಲಾರ: ಬಿಸಿಲ ಬೇಗೆಗೆ ಮೂಕ ಪ್ರಾಣಿಗಳ ಮೂಕರೋದನ
ಕೋಲಾರ : ಸುಡು ಬಿಸಿಲಿನ ಬೇಗೆಯಿಂದ ಜೀವರಾಶಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕುಡಿಯುವ ನೀರು ಆಹಾರಕ್ಕಾಗಿ ಹುಡುಕಾಟ ನಡೆಸುವ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಆವರಿಸಿದೆ. ಇದೇ ಮೊದಲ ಬಾರಿಗೆ ೩೬ರಿಂದ ೪೦ ಡಿಗ್ರಿವರೆಗೆ ತಾಪಮಾನವಿದ್ದು, ಇಡೀ ಕೋಲಾರ ಜಿಲ್ಲೆ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದೆ. ಬಿಸಿಲಿನ ತಾಪಮಾನದ ಜೊತೆಗೆ ಬಿಸಿ ಗಾಳಿ ಸಹ ಹೆಚ್ಚಾಗಿದ್ದು, ಜನರು ತಂಪುಪಾನೀಯ ಹಾಗೂ ಮರಗಳ ಆಶ್ರಯ ಪಡೆಯುತ್ತಿದ್ದಾರೆ. ಮನುಷ್ಯರದ್ದೇ ಈ ದುಸ್ಥಿತಿಯಾದರೆ ಇನ್ನು ಮೂಕ ಪ್ರಾಣಿ ಪಕ್ಷಿಗಳು ಬಿಸಿಲಿನ ತಾಪಮಾನಕ್ಕೆ ಬಸವಳಿಯುತ್ತಿವೆ. ಕುಡಿಯುವ ನೀರಿಗಾಗಿ ಕಾಡಿನಿಂದ ನಾಡಿಗೆ ಧಾವಿಸುವ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ ಹರಟಿ ಬಳಿಯಿರುವ ಅರಣ್ಯ ಪ್ರದೇಶದಿಂದ ಬೇತಮಂಗಲ ಮುಖ್ಯ ರಸ್ತೆಯ ಕೋಟಿಗಾನಹಳ್ಳಿ ಗೇಟ್ ಬಳಿ ವಾನರ ಸೇನೆ ರಸ್ತೆಗೆ ಬಂದು ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ರಸ್ತೆಯಲ್ಲಿ ಸಂಚರಿಸುವವರನ್ನು ಅಂಗಲಾಚುವ ಸ್ಥಿತಿ ನಿಜಕ್ಕೂ ಮನಕರಗುವಂತಿದೆ.
ರಸ್ತೆಯಲ್ಲಿ ಓಡಾಡುವ ಒಂದಷ್ಟು ವಾಹನ ಸವಾರರು ಸೌತೆಕಾಯಿ ಬಿಸ್ಕೆಟ್ ಸೇರಿದಂತೆ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಕೆಲವು ಬಾರಿ ಏನೂ ಸಿಗದೆ ರಸ್ತೆಯಲ್ಲಿ ಓಡಾಡುವ ವಾಹನಗಳ ಅಡಿಗೆ ಸಿಲುಕಿ ವಾನರಗಳು ಸಾವಿಗೀಡಾಗುತ್ತಿರುವ ಘಟನೆಗಳು ನಡೆಯುತ್ತಿವೆ.
ಅರಣ್ಯ ಇಲಾಖೆಯಿಂದ ಹೊಂಡಗಳನ್ನು ನಿರ್ಮಿಸಿ ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಹಲವು ರೀತಿಯ ಯೋಜಗಳಿವೆ. ಆದರೆ ಬೇಸಿಗೆ ಪ್ರಾರಂಭವಾಗಿ ಮೂರು ತಿಂಗಳು ಕಳೆದರು ಅರಣ್ಯ ಪ್ರದೇಶದಲ್ಲಿರುವ ಹೊಂಡಗಳಿಗೆ ನೀರು ತುಂಬಿಸದೇ ವನ್ಯ ಜೀವಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಕೆಲಸ ಸಂಘ ಸಂಸ್ಥೆಗಳು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾರ್ಚ್ ತಿಂಗಳಿಗಿಂತ ಮೇ ತಿಂಗಳಲ್ಲಿ ಸೂರ್ಯನ ಪ್ರಖರತೆ ಮತ್ತಷ್ಟು ಹೆಚ್ಚಾಗಿದೆ. ಪ್ರಾಣಿ ಪಕ್ಷಿಗಳು ಬಿರು ಬಿಸಿಲಿನ ಶಾಖಕ್ಕೆ ಬಸವಳಿಯುತ್ತಿವೆ ಬಿಸಿಲಿನ ಶಾಖಕ್ಕೆ ನಿಂತ್ರಾಣಗೊಳ್ಳುತ್ತಿರುವ ಪಕ್ಷಿಗಳು ಕುಡಿಯುವ ನೀರು ಸಿಗದೆ ಸಂಕಷ್ಟಕ್ಕೆ ಸಿಲುಕುತ್ತಿವೆ. ಮಳೆಯನ್ನೇ ಆಶ್ರಯಿಸಿರುವ ಕೋಲಾರ ಜಿಲ್ಲೆಯಲ್ಲಿ ಪ್ರಾಣಿ ಪಕ್ಷಿಗಳ ಸಂಕುಲ ಬೇಸಿಗೆ ಬೇಗೆಗೆ ಹನಿ ನೀರಿಗು ಪರಿತಪಿಸುತ್ತಿವೆ.
ಬಿಸಿಲಿನ ತಾಪಕ್ಕೆ ನಲುಗುವ ಪಕ್ಷಿಗಳ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಮೂರ್ಛೆ ತಪ್ಪಿ ಕೆಳಗೆ ಬಿಳುತ್ತವೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಪಕ್ಷಿಗಳಿಗೆ ಚಿಕಿತ್ಸೆ ಅಗತ್ಯ. ಗ್ರಾಮೀಣ ಭಾಗದಲ್ಲಿ ಕೃಷಿ ಹೊಂಡಗಳಲ್ಲಿ ರೈತರು ನೀರನ್ನು ತುಂಬಿಸಿರುವುದರಿಂದ ಪಕ್ಷಿಗಳಿಗೆ ಒಂದಷ್ಟು ಕುಡಿಯುವ ನೀರು ದೊರಕುತ್ತಿದ್ದರೂ ನಗರದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿಗೆ ಸಂಕಷ್ಟ ಎದುರಾಗಿದ್ದು, ನಗರದ ರಸ್ತೆ ಬದಿ ಇರುವ ಮರಗಳು ಹಾಗೂ ಉದ್ಯಾನವನ ಮನೆಗಳ ಮೇಲ್ಚಾವಣಿ ಸೇರಿದಂತೆ ಎಲ್ಲೆಲ್ಲಿ ಅವಕಾಶಗಳಿವೆಯೋ ಎಲ್ಲ ಕಡೆ ಬಟ್ಟಲುಗಳನ್ನು ಅಳವಡಿಸಿ ಪ್ರಾಣಿ ಪಕ್ಷಿಗಳ ದಾಹ ನೀಗಲು ಸಾರ್ವಜನಿಕರು ಮುಂದಾಗಬೇಕಿದೆ.
ಬಿಸಿಲಿನ ತಾಪಮಾನ ಇದೇ ರೀತಿ ಮುಂದುವರಿದರೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿನ ಅಭಾವ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಬಯಲು ಪ್ರದೇಶ ಹಾಗೂ ಅರಣ್ಯ ವ್ಯಾಪ್ತಿಯಲ್ಲಿ ಸಣ್ಣ ನೀರಿನ ಹೊಂಡಗಳನ್ನು ನಿರ್ಮಿಸಿ ಪ್ರಾಣಿ ಪಕ್ಷಿ ಸಂಕುಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ತಾಪಮಾನ ಹೆಚ್ಚಾದಾಗ ಪ್ರಾಣಿಗಳು ಬಿಕ್ಕಳಿಸುವ ಮೂಲಕ ದೇಹದಲ್ಲಿರುವ ತಾಪಮಾನ ಹೊರಹಾಕುತ್ತವೆ. ವನ್ಯ ಜೀವಿಗಳು ಸಹ ಇದೇ ರೀತಿ ತಾಪಮಾನವನ್ನು ಬಾಯಿಯ ಮೂಲಕ ಹೊರಹಾಕುತ್ತವೆ. ಬಿಸಿಲಿನ ಬೇಗೆಯಲ್ಲಿ ನೀರು ಸಿಗದೆ ಹೃದಯಾಘಾತ, ಉಸಿರಾಟ ಸಮಸ್ಯೆ, ಹೃದಯ ಬಡಿತದಲ್ಲಿ ಏರುಪೇರಾಗಿ ಪ್ರಾಣಿ, ಪಕ್ಷಿಗಳು ಸಾವಿಗಿಡಾಗುವ ಸಂಭವ ಹೆಚ್ಚಾಗಿದೆ ಆದ್ದರಿಂದ ಸಾರ್ವಜನಿಕರು ಪ್ರಾಣಿ ಪಕ್ಷಿಗಳಿಗೆ ಸಾಧ್ಯವಾದಷ್ಟು ನೀರಿನ ವ್ಯವಸ್ಥೆ ಮಾಡುವುದು ಸೂಕ್ತ.
- ಡಾ.ನಿತೀನ್ ಬಿ.ಎಸ್., ಪಶು ವೈದ್ಯ
ಅರಣ್ಯ ಇಲಾಖೆಯವರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಂಡು ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು. ಇದೇ ಮೊದಲ ಬಾರಿಗೆ ಕೋಲಾರದಲ್ಲಿ ದಾಖಲೆ ಮಟ್ಟದಲ್ಲಿ ತಾಪಮಾನ ಹೆಚ್ಚಾಗಿದ್ದು, ಪ್ರತಿಯೊಬ್ಬರೂ ಮಳೆಗಾಲದಲ್ಲಿ, ಮರಗಿಡಗಳನ್ನು ಬೆಳೆಸದೇ ಹೋದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗುಡಾಯಿಸುವುದರಲ್ಲಿ ಸಂದೇಹವೇ ಇಲ್ಲ.
- ನಾಗರಾಜ ಶೆಣೆ, ಕೋಲಾರ