ರೈತರ ಪಾಲಿಗೆ ದೂರವಾದ 'ಕೃಷಿ ಯಂತ್ರಧಾರೆ'
ಹೊಸಕೋಟೆ : ರೈತರ ಅನುಕೂಲಕ್ಕಾಗಿ ಸರಕಾರ ಜಾರಿಗೆ ತಂದಿದ್ದ ಬಾಡಿಗೆ ಆಧಾರಿತ ಕೃಷಿ ಯಂತ್ರಧಾರೆ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಯೋಜನೆ ಹಳ್ಳ ಹಿಡಿದಿದೆ.
ಗ್ರಾಮೀಣ ಭಾಗದ ಸಣ್ಣ, ಅತಿಸಣ್ಣ, ಬಡ ರೈತರು ಕೃಷಿ ಚಟುವಟಿಕೆಗೆ ಯಂತ್ರೋಪಕರಣಗಳನ್ನು ಖರೀದಿಸುವುದು ಕಷ್ಟ ಹೀಗಾಗಿ ರೈತರು ಬಾಡಿಗೆ ಆಧಾರದಲ್ಲಿ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಲಾಭದಾಯಕ ಕೃಷಿ ಮಾಡಲೆಂದು ಸರಕಾರ ಹೋಬಳಿ ಕೇಂದ್ರ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆದಿತ್ತು. ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಶೇ.50ರ ಅನುದಾನದಡಿ ಯಂತ್ರಗಳನ್ನು ಖರೀದಿಸಿ, ಸರಕಾರ ಗೊತ್ತುಪಡಿಸಿದ ದರದಂತೆ ಬಾಡಿಗೆಗೆ ರೈತರಿಗೆ ನೀಡಬೇಕಿತ್ತು. ಆರಂಭದಲ್ಲಿ ಉತ್ಸಾಹ ತೋರಿದ ಗುತ್ತಿಗೆ ಪಡೆದ ಸಂಸ್ಥೆಗಳು, ಕಡಿಮೆ ಬಾಡಿಗೆ, ಡೀಸೆಲ್ ದುಬಾರಿ, ಚಾಲಕರು, ಸಿಬ್ಬಂದಿ ಕೊರತೆ ನೆಪವೊಡ್ಡಿ ಈಗ ಹಿಂದೆ ಸರಿಯುತ್ತಿವೆ.
ಸೇವೆ ಒದಗಿಸುವಲ್ಲಿ ವಿಫಲ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೊರತುಪಡಿಸಿ ಇತರ ಖಾಸಗಿ ಸಂಸ್ಥೆಗಳು ಕೃಷಿ ಯಂತ್ರಧಾರೆ ಕೇಂದ್ರಗಳ ಸೇವೆಯನ್ನು ಸಕ್ರಿಯವಾಗಿ ಒದಗಿಸುವಲ್ಲಿ ವಿಫಲವಾಗಿವೆ. ರೈತರು ಹಾಗೂ ಕೃಷಿ ಅಧಿಕಾರಿಗಳ ದೂರಿನ ಅನ್ವಯ ಕೆಲವುಸಂಸ್ಥೆಗಳನ್ನು ಸರಕಾರದ ಆದೇಶದಂತೆ ಕಾರ್ಯವನ್ನು ನಿಲ್ಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕಿನ ಎಲ್ಲ ಹೋಬಳಿ ಕೇಂದ್ರಗಳಲ್ಲಿ 3 ಖಾಸಗಿ ಸಂಸ್ಥೆಗಳು 6 ವರ್ಷಗಳ ಗುತ್ತಿಗೆಗೆ ಪಡೆದು ಅವಧಿಯನ್ನು ಮುಗಿಸಿವೆ. ಅವಧಿ ಮುಗಿದಿದ್ದರೂ ಇದುವರೆಗೂ ಜಿಲ್ಲಾಡಳಿತ ಗುತ್ತಿಗೆ ನವೀಕರಣ ಅಥವಾ ಬದಲಿ ಸಂಸ್ಥೆಗೆ ಹೊಣೆ ವಹಿಸುವ ಕೆಲಸಕ್ಕೆ ಮುಂದಾಗಿಲ್ಲ.
ತುಕ್ಕು ಹಿಡಿಯುತ್ತಿರುವ ಯಂತ್ರೋಪಕರಣ: ಹೊಸ ಸಂಸ್ಥೆಗಳು ಗುತ್ತಿಗೆ ಪಡೆಯಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಜಿಲ್ಲೆಯ ಹಲವೆಡೆ ಯಂತ್ರಧಾರೆ ಕೇಂದ್ರಗಳಲ್ಲಿಯಂತ್ರೋಪಕರಣಗಳು ಬಿಸಿಲು, ಗಾಳಿ, ಮಳೆಗೆ ಸಿಲುಕಿ ತುಕ್ಕು ಹಿಡಿಯುತ್ತಿವೆ. ಸರಕಾರ ಶೇ.50 ಅನುದಾನ ನೀಡಿದ್ದು, ಆಯಾ ಸಂಸ್ಥೆಗಳು ಯಂತ್ರಗಳನ್ನು ಇಲಾಖೆಗೆ ವಾಪಸ್ ನೀಡಬೇಕಿದ್ದು, ಈ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ.
ಎತ್ತುಗಳ ಸಂಖ್ಯೆ ಕ್ಷೀಣ
ಗ್ರಾಮೀಣ ಭಾಗಗಳಲ್ಲಿ ಆಧುನಿಕ ಯಂತ್ರಗಳ ಭರಾಟೆಯಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದೆ. ಹೈನುಗಾರಿಕೆಯಲ್ಲಿ ಲಾಭ ಕಂಡ ರೈತರು ಎತ್ತುಗಳ ಬದಲಾಗಿ ಸೀಮೆ ಹಸುಗಳ ಸಾಕಣೆ ಆರಂಭಿಸಿದ್ದಾರೆ. ಇದರಿಂದ ಎತ್ತುಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ರೈತರು ಅನಿವಾರವಾಗಿ ಕೃಷಿಯಂತ್ರಗಳ ಬಳಕೆಗೆ ಮುಂದಾಗಿದ್ದಾರೆ.
ಪರ್ಯಾಯ ವ್ಯವಸ್ಥೆಗೆ ಮುಂದಾಗಿಲ್ಲ
ಪೂರ್ವ ಮುಂಗಾರಿನಲ್ಲಿ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದೆ. ರೈತರು ಬಿತ್ತನೆ ಪೂರ್ವ ಸಿದ್ಧತಾ ಕಾರ್ಯಗಳಿಗೆ ದುಬಾರಿ ಬೆಲೆ ತೆತ್ತು, ಖಾಸಗಿ ಕೃಷಿ ಯಂತ್ರಗಳ ಮೊರೆ ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಆದರೆ, ಪರ್ಯಾಯ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗುತ್ತಿಲ್ಲ.
ಕೋರ್ಟ್ ಮೆಟ್ಟಿಲೇರಿದ ಸಂಸ್ಥೆ
ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಡೆಸುವುದಾಗಿ ಸರಕಾರದಿಂದ 6 ವರ್ಷಸಂಸ್ಥೆಗಳು ಗುತ್ತಿಗೆ ಪಡೆದಿವೆ. ರೈತರು ಹಾಗೂ ಕೃಷಿ ಅಧಿ ಕಾರಿಗಳ ದೂರಿನ ಅನ್ವಯ ಕೆಲವು ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಿರುವುದನ್ನು ಪ್ರಶ್ನಿಸಿ ಸರಕಾರದ ವಿರುದ್ಧ ವರ್ಷಾ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದೆ.
ಕೃಷಿ ಯಂತ್ರಧಾರೆ ಸೇವೆ ರೈತರಿಗೆ ಸಮರ್ಪಕವಾಗಿ ಸಿಗದ ಕಾರಣ, ರೈತ ಉತ್ಪಾದಕ ಸಂಘಗಳಿಗೆ (ಎಫ್‌ಪಿಒ) ಒಪ್ಪಿಸಿ, ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಡೆಸಲು ಸರಕಾರ ಸೂಚಿಸಿದೆ. ವರ್ಷಗಳೇ ಉರುಳಿದರೂ ಜಿಲ್ಲಾಡಳಿತ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ.
ಬಾಡಿಗೆ ದರ ದುಪ್ಪಟ್ಟು
ಕೃಷಿ ಯಂತ್ರಧಾರೆ ಕೇಂದ್ರಗಳು ಸ್ಥಗಿತವಾದ ಹಿನ್ನೆಲೆ ಖಾಸಗಿ ಕೃಷಿ ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಮನಸೋ ಇಚ್ಛೆ ದರಗಳನ್ನು ಹೆಚ್ಚಿಸುತ್ತಿದ್ದು, ಉತ್ಪಾದನಾ ವೆಚ್ಚ ದುಪ್ಪಟ್ಟಾಗುತ್ತಿದೆ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.
ಖಾಸಗಿ ಸಂಸ್ಥೆಗಳು ನಿರ್ವಹಣೆ ಕಷ್ಟವೆಂದು ನವೀಕರಣಕ್ಕೆ ಮುಂದೆ ಬರುತ್ತಿಲ್ಲ, ರೈತ ಉತ್ಪಾದಕ ಸಂಸ್ಥೆಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ವಹಿಸುವಂತೆ ಸರಕಾರ ಸೂಚಿಸಿದೆ.
ಎಫ್‌ಪಿಒ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ. ಸರಕಾರದ ಮಟ್ಟದಲ್ಲಿ ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಯುತ್ತಿದೆ.
-ಗಾಯಿತ್ರಿ ಎಂ., ಜಿಲ್ಲಾ ಉಪ ನಿರ್ದೇಶಕಿ, ಕೃಷಿ ಇಲಾಖೆ, ಬೆಂಗಳೂರು ಗ್ರಾಮಾಂತರ
ಸರಕಾರದ ನಿರ್ಲಕ್ಷ್ಯದಿಂದ ಕೃಷಿ ಯಂತ್ರಧಾರೆ ಯೋಜನೆ ಹಳ್ಳ ಹಿಡಿದಿದೆ. ಕೃಷಿ ಇಲಾಖೆ ವತಿಯಿಂದ ನೇರವಾಗಿ ಬಡ ರೈತರಿಗೆ ಬಳಕೆಗೆ ಅವಕಾಶ ಕಲ್ಪಿಸುವುದನ್ನು ಬಿಟ್ಟು, ಖಾಸಗಿ ಸಂಸ್ಥೆಗಳಿಗೆ ಒಪ್ಪಿಸಿ ಯೋಜನೆ ಹಾದಿ ತಪ್ಪುವಂತೆ ಮಾಡಿರುವುದು ಸರಿಯಲ್ಲ. ಇನ್ನಾದರೂ ಸರಕಾರ ಸಮರ್ಪಕ ಸೇವೆಗೆ ಮುಂದಾಗಬೇಕಿದೆ.
-ಕೆಂಪೇಗೌಡ, ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ