ಕುಹಕವಾಡಿದ್ದ ರೈತರಿಗೆ ಪ್ರೇರಣೆಯಾದ ನಿವೃತ್ತ ಉಪನ್ಯಾಸಕ ಕೃಷ್ಣ
ಮಂಡ್ಯ: ರಾಜಧಾನಿ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಉಪನ್ಯಾಸಕರೊಬ್ಬರು ತನ್ನ ಗ್ರಾಮಕ್ಕೆ ಮರಳಿ ಕೃಷಿಯಲ್ಲಿ ಸಾಧನೆ ಮಾಡಿ, ಕುಹಕವಾಡಿದ್ದವರಿಗೇ ಪ್ರೇರಣೆಯಾಗಿದ್ದಾರೆ. ಮದ್ದೂರು ತಾಲೂಕು ಕೊಪ್ಪ ಬಳಿ ಇರುವ ಚಿಕ್ಕದೊಡ್ಡಿ(ಗೂಳೂರು ದೊಡ್ಡಿ) ಗ್ರಾಮದ ನಿವೃತ್ತ ಉಪನ್ಯಾಸಕ ಟಿ.ಕೃಷ್ಣ ತನ್ನ ಎರಡೇ ಎರಡು ಎಕರೆ ಭೂಮಿಯಲ್ಲಿ ಅಡಿಕೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಕೃಷ್ಣ ಅವರು ಬಿಎಸ್ಸಿ ಎಂಎಡ್ ಪದವಿಗಳಿಸಿ ಹೈಸ್ಕೂಲ್ ಶಿಕ್ಷಕರಾಗಿ ಸೇವೆ ಆರಂಭಿಸಿ, ಡಿಎಸ್‌ಇಆರ್‌ಟಿ, ಅಂದರೆ ರಾಜ್ಯ ಶಿಕ್ಷಣ ಹಾಗೂ ಸಂಶೋಧನಾ ತರಬೇತಿ ನಿರ್ದೇಶನಾಲಯದ ಸಂಪನ್ಮೂಲ ವ್ಯಕ್ತಿಯಾಗಿ ಛಾಪು ಮೂಡಿಸಿದವರು. ಈ ನಡುವೆ ಮನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಏಳು ವರ್ಷದ ಹಿಂದೆ ಸೇವೆಯಿಂದ ನಿವೃತ್ತರಾಗಿದ್ದಾರೆ.
ನಿವೃತ್ತಿ ನಂತರ ಬೆಂಗಳೂರಿನಲ್ಲೇ ತಾವು ನಿರ್ಮಿಸಿಕೊಂಡಿರುವ ಮನೆಯಲ್ಲಿ ಪತ್ನಿ, ಪುತ್ರ, ಪುತ್ರಿ ಜತೆ ಕಾಲ ಕಳೆಯುತ್ತಾ ಜತೆಗೆ, ತನ್ನ ಸ್ವಗ್ರಾಮದಲ್ಲಿರುವ ಎರಡು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಂಡು ಇತರ ರೈತರಿಗೆ ಪ್ರೇರಣೆ ಆಗಿದ್ದಾರೆ. ಇತರರಿಗೆ ಪ್ರೇರಣೆ ಆಗಲು ಕೃಷಿಯಲ್ಲಿ ತೊಡಗಿಸಿಕೊಳ್ಳಲಿಲ್ಲ. ಖುಷಿ, ಸಂತೋಷ, ಮಾನಸಿಕ ನೆಮ್ಮದಿಗಾಗಿ ಕೃಷಿ ಮಾಡಿದೆ, ಅದು ಇತರರಿಗೆ ಪ್ರೇರಣೆಯಾಗಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ಕೃಷ್ಣ.
ಏಳು ವರ್ಷದ ಹಿಂದೆ ತನ್ನ ಎರಡು ಎಕರೆ ಜಮೀನಿನಲ್ಲಿ ಕೃಷಿ ಆರಂಭಿಸಿದ ಕೃಷ್ಣ ಅವರು, ಅಡಿಕೆ ಕೃಷಿಗೆ ಆದ್ಯತೆ ನೀಡಿದರು. ಇದರ ಜತೆಗೆ ತೆಂಗು ಹಾಕಿದರು. ಈ ನಡುವೆ ಅಂತರ ಬೇಸಾಯವಾಗಿ ಬಾಳೆ ಬೆಳೆದರು. ಕಳೆದ ವರ್ಷದಿಂದ ಅಡಿಕೆ ಮತ್ತು ತೆಂಗು ಫಲ ಕೊಡುತ್ತಿವೆ. ಆದರೆ, ಅಡಿಕೆ ಬೆಳೆಗೆ ತೆಂಗಿನಮರ ತೊಡಕಾಗಿರುವುದರಿಂದ ತೆಂಗನ್ನು ತೆಗೆದು ಬಿಡುತ್ತಿದ್ದಾರೆ. ಅಡಿಕೆ ಮತ್ತು ಕಾಳು ಮೆಣಸು ಬೆಳೆಗೆ ಆದ್ಯತೆ ಕೊಟ್ಟಿದ್ದಾರೆ.
ಪಣಿಯೂರ್ ಒನ್ ತಳಿಯ 1,450 ಅಡಿಕೆ ಮರಗಳನ್ನು ಬೆಳೆಸಿದ್ದಾರೆ. ಇದರ ಜತೆಗೆ 120 ತೆಂಗಿನ ಮರ ಇವೆ. ಅಡಿಕೆ ಮತ್ತು ತೆಂಗು ಕಳೆದ ವರ್ಷದಿಂದ ಫಲ ಕೊಡುತ್ತಿವೆ. ಇದೀಗ ಎರಡನೇ ಬೆಳೆ ಫಸಲಿನ ಕೊಯ್ಲು ಆರಂಭವಾಗಿದೆ. ಅಡಿಕೆ ಫಲ ಲಾಭ ತಂದುಕೊಡುವ ಭರವಸೆಯನ್ನು ಕೃಷ್ಣ ಅವರಲ್ಲಿ ಮೂಡಿಸಿದೆ. ಅಡಿಕೆ ಮರಕ್ಕೆ ಹಬ್ಬಿಸಿರುವ ಕಾಳು ಮೆಣಸು ಗಿಡಗಳಿಂದಲೂ ಫಸಲು ಆರಂಭವಾಗಿದೆ.
ಕೃಷ್ಣ ಅವರು ನಿವೃತ್ತಿಯಾಗಿ ಗ್ರಾಮದಲ್ಲಿ ಕೃಷಿ ಮಾಡಲು ಬಂದಾಗ ಗ್ರಾಮದ ಹಲವರು ಕೃಷಿಯಲ್ಲಿ ಏನು ಸಿಗುತ್ತದೆ?. ಆರಾಮವಾಗಿ ಬೆಂಗಳೂರಿನಲ್ಲಿ ನಿವೃತ್ತಿ ಜೀವನ ನಡೆಸುವುದನ್ನು ಬಿಟ್ಟು ಕೃಷಿ ಮಾಡಲು ಬಂದಿದ್ದಾನೆ ಎಂದು ಕುಹಕವಾಡಿದ್ದರಂತೆ. ಅದೇ ಗ್ರಾಮದ ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣ ಅವರೂ ಕೃಷಿ ಬೇಡವೆಂದು ಕೃಷ್ಣ ಅವರಿಗೆ ಸಲಹೆ ನೀಡಿದ್ದರಂತೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳದ ಕೃಷ್ಣ ಕೃಷಿಯಲ್ಲಿ ತೊಡಗಿ ಯಶಸ್ವಿಯಾಗಿದ್ದಾರೆ. ಈಗ ಕುಹಕವಾಡಿದ್ದವರು ಕೃಷ್ಣ ಅವರಿಂದ ಪ್ರೇರಿತರಾಗುತ್ತಿದ್ದಾರೆ. ನಾರಾಯಣ್ ಅವರೂ ಗ್ರಾಮದಲ್ಲಿನ ತನ್ನ ಜಮೀನಿನಲ್ಲಿ ಶ್ರೀಗಂಧ ಬೆಳೆಯಲ್ಲಿ ತೊಡಗಿ ಯಶಸ್ಸಿನತ್ತ ಸಾಗಿದ್ದಾರೆ.
ನಾನು ಕೃಷಿಯಲ್ಲಿ ಸಾಧನೆ ಮಾಡುವ ಉದ್ದೇಶದಿಂದ ನಿವೃತ್ತಿ ನಂತರ ಗ್ರಾಮಕ್ಕೆ ಬರಲಿಲ್ಲ. ಉಪನ್ಯಾಸಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದರೂ ಮಾನಸಿಕ, ದೈಹಿಕ ಆರೋಗ್ಯ ಮುಖ್ಯವಾಗಿತ್ತು. ದೈಹಿಕ ಶ್ರಮ ಅಗತ್ಯದ ಹಿನ್ನೆಲೆಯಲ್ಲಿ ಕೃಷಿ ಮಾಡಲು ತೀರ್ಮಾನಿಸಿದೆ. ಕೃಷಿ ಮಾಡಿದೆ, ನಷ್ಟವಂತೂ ಆಗಿಲ್ಲ. ಕೃಷಿಯಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಿದೆ. ಕೃಷಿಯ ಜತೆಗೆ ಓದಿನಲ್ಲಿ ಆಸಕ್ತಿ ಇರುವುದು ನೆಮ್ಮದಿಯನ್ನು ಇಮ್ಮಡಿಗೊಳಿಸಿದೆ.
-ಟಿ.ಕೃಷ್ಣ