ಜಡತ್ವಕ್ಕೆ ವಿವೇಕ ನೀಡಿದ ಕುಸ್ ಕುಸ್ ದಿಲ್ ಕುಶ್ ನಾಟಕ
ಯಾವುದು ಸ್ಥಿರವಲ್ಲ. ಗಳಿಗೆ ಗಳಿಗೆಯೂ ಬದಲಾಗುತ್ತಿರುತ್ತದೆ. ಸ್ಥಿರವೆಂದು ಭಾವಿಸಿದವನಿಗೆ ಅವನ ತಲೆಯೇ ಭಾರವಾಗುವುದರ ಜೊತೆಗೆ ಅಧಿಕಾರ, ಅಂತಸ್ತುಗಳು ಪೆಡಂಬೂತವಾಗುತ್ತವೆ ಎಂಬ ಬುದ್ದನ ಸಂದೇಶ ಮನಸಿನಲ್ಲಿ ಮೊಳಕೆ ಹೊಡೆದು ಗಾಳಿಯಂತೆ ಹಗುರವಾಗುವ ಕ್ಷಣವನ್ನು ಸಾಹಿತಿ, ನಾಟಕಕಾರ ಕೋಟಗಾನಹಳ್ಳಿ ರಾಮಯ್ಯ ಅವರ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ನೋಡುತ್ತಾ ಅನುಭವಿಸಲು ಒಂದು ಅವಕಾಶ ಸಿಕ್ಕಿತು.
ಕೋಲಾರದ ಸಾಂಸ್ಕೃತಿಕ ಕೇಂದ್ರವಾಗಿರುವ ಆದಿಮದಲ್ಲಿ ಜೂನ್ 22ರಂದು 206 ನೆ ಹುಣ್ಣಿಮೆ ಹಬ್ಬದ ಪ್ರಯುಕ್ತ ಮಕ್ಕಳ ನಾಟಕೋತ್ಸವವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕೋಲಾರದ ಕೆಇಬಿ ನೌಕರರ ಸಂಘದ ಮಕ್ಕಳು, ಚಂದಿರನ ಹಾಲಿನಂತಹ ಬೆಳಕಿನಲ್ಲಿ ಕುಸ್ ಕುಸ್ ದಿಲ್ ಕುಶ್ ನಾಟಕವನ್ನು ತಮ್ಮ ಅಮೋಘ ಅಭಿನಯದ ಮೂಲಕ ತಮ್ಮ ಎದುರಿಗಿದ್ದ ಪ್ರೇಕ್ಷಕರ ಮನಸಿನಲ್ಲಿ ಬದುಕಿನ ನೆಮ್ಮದಿಗೆ ಬೇಕಾದ ಸಂದೇಶವನ್ನು ನಾಟಿ ಬಿಟ್ಟರು.
ಬದಲಾವಣೆ ಬಯಸದ ಆಲೋಚನೆ, ನಡತೆ, ಅಧಿಕಾರ, ಸಂಪತ್ತು ಜಡ್ಡುಕಟ್ಟುತ್ತದೆ. ಉಪಯೋಗಕ್ಕೂ ಬಾರದಾಗುತ್ತದೆ. ಆಗ ಅದು ರೋಗವಾಗಿಯೂ ಪರಿಣಮಿಸುತ್ತದೆ. ಅದರಲ್ಲೂ ಇಂತಹ ಜಡತ್ವ ಸ್ಥಿತಿ ಅಧಿಕಾರ ಸ್ಥಾನದಲ್ಲಿರುವವರಿಗೆ ಹೊಕ್ಕಿಬಿಟ್ಟರೆ ಅದರ ರೋಗುವ ಇಡೀ ಸಮಾಜಕ್ಕೆ ಅಂಟುವ ಭೀತಿ ಇರುತ್ತದೆ ಎಂಬ ಸಂದೇಶವನ್ನು ನಾಟಕವು ಜನಸಾಮಾನ್ಯರ ತಿಳುವಳಿಕೆಯ ಮೂಲಕ ಕಟ್ಟಿಕೊಟ್ಟಿತು.
ಸಾಮಾನ್ಯ ಎಂಬ ಪದವೇ ಹಗುರವಾದದ್ದು. ಸ್ವಚಂದವಾಗಿರುವಂತಹದ್ದು ಹಾಗೂ ಮುಕ್ತವಾಗಿರುವಂತಹದ್ದು. ಪರಿಸರದ ಸಹಜವಾದ ಬದಲಾವಣೆಯ ಜೊತೆಗೆ ಹೊಂದಿಕೊಳ್ಳುತ್ತಾ ಸಾಗುವವರು. ಇವರ ಹೊರತಾಗಿಯೂ ಜನಸಾಮಾನ್ಯರಿಂದಲೇ ಎದ್ದು ಹೋದವರು, ಸೇವೆಯ ನೆಪದಲ್ಲಿ ಅಧಿಕಾರ, ಅಂತಸ್ತನ್ನು ಸೃಷ್ಟಿಸಿಕೊಂಡು ವ್ಯವಸ್ಥೆಯನ್ನು ಜಡ್ಡುಗೊಳಿಸಲು ಪ್ರಾರಂಭಿಸುತ್ತಾರೆ. ಒಂದು ಹಂತದಲ್ಲಿ ಶ್ರಮದ ರುಚಿಯನ್ನು ಮರೆತು ಅಧಿಕಾರದ ವ್ಯಾಮೋಹಕ್ಕೆ ಬೀಳುವ ಅಧಿಕಾರಸ್ತರು, ಮೊದಲು ತಮ್ಮ ಮೆದುಳನ್ನು ಜಡಗೊಳಿಸಿಕೊಳ್ಳುತ್ತಾರೆ. ನಂತರ ಇಡೀ ವ್ಯವಸ್ಥೆಯನ್ನು ಜಡಗೊಳಿಸುತ್ತಾ ಹೋಗುತ್ತಾರೆ. ಆದರೆ, ಜನಸಾಮಾನ್ಯರಿಗೆ ಜಡತ್ವದ ಪರಿಚಯವೇ ಇರುವುದಿಲ್ಲ. ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಸದಾ ಜಂಗಮರಾಗೆಯೇ ಇರುತ್ತದೆ. ಅದು ಶ್ರಮದ ಫಲವೇ ಅಂತಹದ್ದು. ಜನಸಾಮಾನ್ಯರ ಶ್ರಮದ ಫಲದಿಂದ ಕೂತು ತಿನ್ನುವ ಅಧಿಕಾರಸ್ಥ ಸ್ಥಾನದಲ್ಲಿವವರ ಜಡತ್ವವು, ಸಾರ್ವಾಧಿಕಾರಿಯಾಗಿಯೂ, ಹಿಂಸಾತ್ಮಕವಾಗಿಯೂ, ಧ್ವೇಷಕಾರಿಯೂಗಿಯೂ ಪರಿಣಮಿಸಬಹುದೆಂಬುದನ್ನು ಕುಸ್‌ಕುಸ್ ದಿಲ್ ಕುಶ್ ನಾಟಕವು ಸೂಚ್ಯವಾಗಿ ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದೆ.
ಅದು ಯಾವುದೇ ಪ್ರಭುತ್ವವು ಅದೆಷ್ಟೆ ದಮನಕಾರಿಯಾಗಿದ್ದರೂ, ಸರ್ವಾಧಿಕಾರಿ ಧೋರಣೆಯಿಂದ ಜನಸಾಮಾನ್ಯರ ಬದುಕನ್ನು ಹಿಡತದಲ್ಲಿ ಇಟ್ಟುಕೊಳ್ಳಲು ಮುಂದಾದರೂ ಜನಸಾಮಾನ್ಯರ ವಿವೇಕವು ಕೆಲವೊಮ್ಮೆ ಅಗೋಚರವಾಗಿ, ಮಗದೊಮ್ಮೆ ಝರಿಯಂತೆ ಸದಾ ಚಲನಶೀಲತೆಯನ್ನು ಸದಾ ಕಾಪಿಟ್ಟುಕೊಂಡಿರುತ್ತಾರೆ. ಸಂದರ್ಭಕ್ಕೆ ಅನುಗುಣವಾಗಿ ಆ ವಿವೇಕವೇ ಸಮಾಜವನ್ನು ಮುನ್ನಡೆಸುತ್ತಿರುತ್ತಾರೆ. ಪ್ರಭುತ್ವದ ಮೇಲ್ನೋಟಕ್ಕೆ ಬಲಿಷ್ಟವಾಗಿಯೂ, ಸುಂದರವಾಗಿ ಕಂಡರೂ ಆಂತರಿಕವಾಗಿ ಅದಕ್ಕೆ ಯಾವುದೇ ಸ್ವತಂತ್ರವಾದ ಅಸ್ಥಿತ್ವ ಇರುವುದಿಲ್ಲ. ಅದೇ ಹೊತ್ತಿನಲ್ಲಿ ಜನಸಾಮಾನ್ಯರು ನೋಡುವುದಕ್ಕೆ ಪ್ರಭುತ್ವದ ಅಡಿಯಲ್ಲಿದ್ದರೂ ಬದುಕಿನ ಬಗೆಗಿನ ಅವರ ವಿವೇಕವೂ ಪರಂಪರಾಗತವಾಗಿ ಅದಕ್ಕೊಂದು ಅಸ್ಮಿತೆಯನ್ನು ಇಟ್ಟುಕೊಂಡೆ ನಿರಂತರವಾಗಿ ಸಾಗುತ್ತಿರುತ್ತಾರೆ. ಹಾಗೂ ಒಂದು ಹಂತದಲ್ಲಿ ಜನಸಾಮಾನ್ಯರೇ ಪ್ರಭುತ್ವವನ್ನು ಧಿಕ್ಕುದೆಸೆಯನ್ನು ನೀಡತ್ತಾರೆ ಎಂಬುದನ್ನು ನಾಟಕದಲ್ಲಿ ರಾಜನ ತಲೆಯಲ್ಲಿದ್ದ ಕಿರೀಟವನ್ನು ಜನಸಾಮಾನ್ಯರೇ ತೆಗೆಯುವ ಮೂಲಕ ಹೊಸ ಚಿಂತನೆಯ ಚಲನೆಗೆ ಅನುವು ಮಾಡಿಕೊಡುತ್ತಾರೆ. ನಾಟಕದಲ್ಲಿ ಬಿಂಬಿತವಾಗಿರುವ ಈ ದೃಶ್ಯವು ಜನಸಾಮಾನ್ಯರಿಗೆ ಒಪ್ಪದ ಯಾವ ಅಧಿಕಾರ ಬಹುದಿನ ಬಾಳುವುದಿಲ್ಲ ಎಂಬ ಸಂದೇಶವನ್ನು ಗಟ್ಟಿಯಾಗಿ ಹೇಳುವಲ್ಲಿ ಯಶಸ್ವಿಯಾಗಿದೆ.
ನಾಟಕದ ಮತ್ತೊಂದು ವಿಶೇಷ ಏನೆಂದರೆ, ನಾಟಕದ ಸಂಭಾಷಣೆ ಸಹಜತೆಯಿಂದ ಕೂಡಿರುವುದು, ಇವತ್ತಿನ ಗಲ್ಲಿಗಳಲ್ಲಿ, ಓಣಿಗಳಲ್ಲಿ, ಆಡುವಾಗ, ನಲಿಯುವಾಗ ಬಳಸುವ ಗಾದೆಗಳು, ಕಿಚಾಯಿಸುವ ತಮಾಷೆಗಳ ಪದಗಳನ್ನೆ ಬಳಸಿಕೊಂಡಿರುವುದು. ಹೀಗಾಗಿ ಕೋಲಾರ ಪ್ರದೇಶದಲ್ಲಿ ಸಹಜವಾಗಿ ಬಳಸುವ ಕನ್ನಡ ಹಾಗೂ ತೆಲಗು ಭಾಷೆಯಲ್ಲೇ ನಾಟಕ ಪ್ರಸ್ತುತಗೊಂಡು ಪ್ರೇಕ್ಷಕರು ನಗೆಗಡಲಿನಲ್ಲಿ ತೇಲಿಸುತ್ತಾ ವಿವೇಕವೊಂದನ್ನು ತಲುಪಿಸಿದ್ದು ಗಮನಾರ್ಹವಾದ ಅಂಶವಾಗಿದೆ.
ಇನ್ನು ನಾಟಕದ ಪಾತ್ರದಾರಿಗಳಾದ ಮಕ್ಕಳ ಅಭಿನಯಕ್ಕೆ ನೋಡುಗರು ಮನಸೋತರು. ಅಲ್ಲಿ ಯಾರು ಹೆಚ್ಚು ಅಲ್ಲ, ಕಡಿಮೆಯೂ ಅಲ್ಲದ ರೀತಿಯಲ್ಲಿ ತಮಗೆ ಕಟ್ಟ ಪಾತ್ರಗಳಲ್ಲಿ ತಲ್ಲೀನರಾಗಿದ್ದರು. ಪ್ರತಿ ಪಾತ್ರದಾರಿಗಳ ಪ್ರತಿ ಡೈಲಾಗ್‌ಗಳು ಮನ ಸೆಳೆಯುವಂತಿತ್ತು. ಒಟ್ಟಾರೆ ಈ ನಾಟಕದ ಯಶಸ್ಸಿನಲ್ಲಿ ನಾಟಕ ರಚನೆಕಾರ ಕೋಟಗಾನಹಳ್ಳಿ ರಾಮಯ್ಯ ಹಾಗೂ ನಿರ್ದೇಶಕ ಶೃಂಗಾರ್ ಅವರ ಶ್ರಮ, ಶ್ರದ್ಧೆಯು ಪಾತ್ರದಾರಿಗಳ ಪ್ರತಿ ಡೈಲಾಗ್‌ನಲ್ಲಿ ಗೋಚರವಾಗುತ್ತಿತ್ತು.