ಮತಗಟ್ಟೆ ಸಮೀಕ್ಷೆಗಳಲ್ಲಿ ಪಾರದರ್ಶಕತೆಯ ಕೊರತೆ

ದೇಶದಲ್ಲಿ ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಎಷ್ಟೋ ಸಲ ಮತಗಟ್ಟೆ ಸಮೀಕ್ಷೆಗಳು ಹೇಳುವುದೇ ಒಂದು, ಫಲಿತಾಂಶ ಬಂದಾಗಿನ ಕಥೆಯೇ ಇನ್ನೊಂದು. ಅವು ಬಹಳ ಸಲ ನಂಬಿಕೆಗೆ ಅರ್ಹವಲ್ಲ ಎನ್ನುವಂತಾಗಿರುವುದೂ ನಿಜ.
ಅವುಗಳ ವಿಧಾನಗಳೇ ಅಸ್ಪಷ್ಟವಾಗಿರುತ್ತವೆ. ಅವು ಪಡೆಯುವ ಸ್ಯಾಂಪಲ್ ಮತ್ತದರ ಆಧಾರದ ಮೇಲೆ ಮಾಡುವ ಊಹೆ ವೈಜ್ಞಾನಿಕ ಎಂದೇನೂ ಅನ್ನಿಸುವುದಿಲ್ಲ.
ಭಾರತದಲ್ಲಿ ಹೆಚ್ಚಿನ ಏಜೆನ್ಸಿಗಳು ಕಾರ್ಯನಿರ್ವಹಿಸುವ ಪಾರದರ್ಶಕವಲ್ಲದ ರೀತಿಯನ್ನು ‘ದಿ ಪ್ರಿಂಟ್’ನ ಅಪೂರ್ವ ಮಂದಾನಿ ತಮ್ಮ ತನಿಖಾ ವರದಿಯಲ್ಲಿ ಬಯಲು ಮಾಡಿದ್ದಾರೆ.
ಮೊನ್ನೆಯ ದಿಲ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಯಲ್ಲಿ 27 ವರ್ಷಗಳ ನಂತರ ಬಿಜೆಪಿ ಗೆಲ್ಲುವುದರ ಬಗ್ಗೆ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ತೆಲಂಗಾಣ ಮೂಲದ ಕೆಕೆ ಸರ್ವೇ ಆ್ಯಂಡ್ ಸಟ್ಯೆಾಟಜೀಸ್ (ಕೆಕೆಎಸ್) ಎಂಬ ಏಜೆನ್ಸಿ ಎಎಪಿ ಅಧಿಕಾರಕ್ಕೆ ಬರುತ್ತದೆ ಎಂದಿತ್ತು. ಅದು ತಾನು ಮಾಡಿದ ಸೀಟುಗಳ ಊಹೆಯನ್ನು ಯಾವುದೇ ಮತ ಹಂಚಿಕೆ ಪ್ರಮಾಣದ ಪ್ರಸ್ತಾಪವಿಲ್ಲದೆ ಪ್ರಸಾರ ಮಾಡಿತು.ಅದರ ವಿಧಾನ ಅಸಾಂಪ್ರದಾಯಿಕ ಎನ್ನುವಂತಿತ್ತು. ಸ್ಯಾಂಪಲ್ ನ ಗಾತ್ರದ ಬಗ್ಗೆ ನಂಬಿಕೆಯಿಲ್ಲದಿರುವುದೇ ತಮ್ಮ ಯಶಸ್ಸಿನ ಮಂತ್ರವಾಗಿದೆ ಎಂದು ಕೆಕೆಎಸ್ ವಕ್ತಾರರು ಹೇಳಿದ್ದರು.
ಭಾವನೆಗಳನ್ನು ವಿಶ್ವಾಸದಿಂದ ಅಳೆಯುವುದು ಮುಖ್ಯ. ಆದ್ದರಿಂದ ಸ್ಯಾಂಪಲ್ ಗಾತ್ರದ ಬಗ್ಗೆ ಸ್ಪಷ್ಟವಾದ ಚಿತ್ರ ಕೊಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು ಎಂದು ಮಂದಾನಿ ವರದಿಯಲ್ಲಿ ಪ್ರಸ್ತಾಪಿಸುತ್ತಾರೆ.
ಸರ್ವೇಯ ಮಾದರಿ ಗಾತ್ರವನ್ನು ನಂಬಬೇಡಿ ಎಂಬುದು ಆ ಏಜನ್ಸಿಯ ಸಲಹೆಯಾಗಿತ್ತು. ಅಲ್ಲದೆ, ಅದರ ಡೇಟಾ ಕೇವಲ ಮತದಾನದ ದಿನಕ್ಕೆ ಸೀಮಿತವಾಗಿರಲಿಲ್ಲ, ಫೆಬ್ರವರಿ 5ರಂದು ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ಡಿಸೆಂಬರ್ ಮತ್ತು ಜನವರಿ ಈ ಎರಡು ತಿಂಗಳುಗಳಲ್ಲಿ ಅದು ಡೇಟಾ ಸಂಗ್ರಹಿಸಿತ್ತು ಎಂಬುದನ್ನು ಸಂಸ್ಥೆಯ ವಕ್ತಾರರು ಹೇಳಿದ್ದರು.
ಭಾರತದಲ್ಲಿ ಮತಗಟ್ಟೆ ಸಮೀಕ್ಷೆಗಳು, ಮತದಾನದ ಹೊತ್ತಲ್ಲಿ ಆಯ್ದ ಮತದಾರರನ್ನು ಮಾತಾಡಿಸಿದಾಗ ಅವರಿಂದ ಆ ಹೊತ್ತಿಗೆ ಬರುವ ಉತ್ತರಗಳನ್ನು ಆಧರಿಸಿ ಮಾಡುವ ಊಹೆಯ ಮೇಲೆ ನಿಲ್ಲುತ್ತವೆ.
ಮತಗಟ್ಟೆ ಸಮೀಕ್ಷೆಯ ಹಿಂದೆ ಕಾನೂನಾತ್ಮಕ ಅಸ್ಪಷ್ಟತೆಯಿದೆ.ಆದರೂ, ಸ್ಯಾಂಪಲ್‌ನ ಗಾತ್ರಗಳನ್ನು ಬಹಿರಂಗಪಡಿಸುವ ಬಗ್ಗೆ ಮತ್ತು ಅವರು ತಮ್ಮ ಊಹೆಗೆ ಬೆಂಬಲವಾಗಿ ಅನುಸರಿಸುವ ವಿಧಾನದ ಬಗ್ಗೆ ಮಾರ್ಗಸೂಚಿಗಳಿವೆ.
ಈ ಸಮೀಕ್ಷೆಗಳನ್ನು ಅಂತಿಮ ಫಲಿತಾಂಶವನ್ನು ಅರ್ಥೈಸಲು ಸಂಶೋಧನಾ ಸಾಧನವಾಗಿ ಬಳಸಬೇಕೆಂದು ತಜ್ಞರು ಹೇಳುತ್ತಾರೆ.
ಆದರೆ, ಮತಗಟ್ಟೆ ಸಮೀಕ್ಷೆಗಳು ಮಾತ್ರ ಮಾಧ್ಯಮದ ಚಮತ್ಕಾರದ ಸಾಧನವಾಗಿ ಬದಲಾಗಿವೆ ಎನ್ನುತ್ತಾರೆ ಮಂದಾನಿ.
ಈ ತನಿಖಾ ವರದಿಯಲ್ಲಿ ದಿಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಮೊದಲು ಎಕ್ಸಿಟ್ ಪೋಲ್ ಬಿಡುಗಡೆ ಮಾಡಿದ 10 ಕಂಪೆನಿಗಳನ್ನು ಗಮನಿಸಲಾಗಿದೆ.
ಮತಗಟ್ಟೆ ಸಮೀಕ್ಷೆ ಬಿಡುಗಡೆ ಮಾಡಿದ ಅನೇಕ ಏಜೆನ್ಸಿಗಳು ತಮ್ಮ ಮೂಲವನ್ನು ವಿವರಿಸುವ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಪುಟವನ್ನು ಹೊಂದಿರಲಿಲ್ಲ ಎಂಬುದನ್ನು ಅವರು ಬಯಲು ಮಾಡಿದ್ದಾರೆ.
ಪ್ರತೀ ಚುನಾವಣೆಯ ಹೊತ್ತಿಗೂ ಹೊಸ ಏಜನ್ಸಿಗಳ ಹೆಸರುಗಳು ಕಾಣಿಸಿಕೊಳ್ಳುತ್ತವೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ ಸಮೀಕ್ಷಾ ಏಜನ್ಸಿಗಳಿಂದ ಮಾರುಕಟ್ಟೆ ತುಂಬಿ ತುಳುಕುತ್ತಿದೆ. ಅವು ತಮ್ಮ ಸಮೀಕ್ಷೆಯ ವಿಧಾನ, ಪರಿಣತಿ ಮತ್ತು ಹಣಕಾಸಿನ ವಿಚಾರದಲ್ಲಿ ಅಷ್ಟೊಂದು ಪಾರದರ್ಶಕವಾಗಿಲ್ಲ. ಅವೆಲ್ಲವುಗಳ ಬಗ್ಗೆ ಉತ್ತರಗಳು ಸಿಗುವುದಕ್ಕಿಂತ ಹೆಚ್ಚಾಗಿ ಪ್ರಶ್ನೆಗಳೇ ಏಳುತ್ತವೆ.
ಈ ಯಾವುದೇ ಏಜನ್ಸಿಗಳು ತಮ್ಮ ಸ್ಯಾಂಪಲ್ ಗಾತ್ರವನ್ನು ಅಥವಾ ಅವುಗಳ ವಿಧಾನವನ್ನು ಅಥವಾ ತಮಗೆ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.ತಾವು ಬಳಸಿದ ಕಚ್ಚಾ ಡೇಟಾವನ್ನು ಕೂಡ ಹಂಚಿಕೊಳ್ಳಲು ಅವು ನಿರಾಕರಿಸಿದವು ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ.
ಕೆಲವರು ಸ್ಯಾಂಪಲ್ ಗಾತ್ರವನ್ನು ನಂಬುವುದಿಲ್ಲ. ಮತ್ತೆ ಕೆಲವರು ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡುತ್ತಾರೆ.
ರಾಜಕೀಯ ಪಕ್ಷಗಳಿಗಾಗಿ ಮೊದಲು ಸಮೀಕ್ಷೆಗಳನ್ನು ನಡೆಸಿರುವ ಏಜನ್ಸಿಗಳೂ ಈ ಎಕ್ಸಿಟ್ ಪೋಲ್ ಮಾಡುತ್ತವೆ.
ದಿಲ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳನ್ನು ಪ್ರಕಟಿಸಿದ್ದ ಏಜೆನ್ಸಿಗಳಲ್ಲಿ ಜರ್ನೋ ಮಿರರ್ ಕೂಡ ಒಂದು.
ದಿಲ್ಲಿ ಮೂಲದ ಜರ್ನೋ ಮಿರರ್ ಎಎಪಿಗೆ 45ರಿಂದ 48 ಸ್ಥಾನಗಳು ಮತ್ತು ಬಿಜೆಪಿಗೆ 18 ರಿಂದ 20 ಸ್ಥಾನಗಳು ಬರಬಹುದೆಂದು ಹೇಳಿತ್ತು. ಅದು ತೆಗೆದುಕೊಂಡಿದ್ದ ಸ್ಯಾಂಪಲ್ ಗಾತ್ರ ಕೇವಲ 1,000 ಜನರು. ಸುಮಾರು 10 ವರದಿಗಾರರು ಮತ್ತು ವಿದ್ಯಾರ್ಥಿಗಳ ತಂಡ ಸಮೀಕ್ಷೆ ನಡೆಸಿತ್ತು.
ಎಎಪಿ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಊಹಿಸಿದ ಕೆಲವೇ ಏಜೆನ್ಸಿಗಳಲ್ಲಿ ಮೈಂಡ್ ಬ್ರಿಂಕ್ ಕೂಡ ಒಂದು. ಅದು ಕೂಡ ಸೋಷಿಯಲ್ ಮೀಡಿಯಾ ಪೇಜ್ ಹೊಂದಿಲ್ಲ. ಆದರೆ ಕಾರ್ಪೊರೇಟ್ ಡೇಟಾಬೇಸ್ ಆಗಿರುವ ಝೌಬಾಕಾರ್ಪ್ ಪ್ರಕಾರ, ಕಂಪೆನಿ 2019ರಲ್ಲಿ ರಚನೆಯಾಯಿತು ಮತ್ತು ಇಬ್ಬರು ನಿರ್ದೇಶಕರನ್ನು ಹೊಂದಿದೆ.
ಅವರಲ್ಲಿ ಒಬ್ಬರು ನವನೀತ್ ಕುಮಾರ್. ಅವರು ಈ ಹಿಂದೆ ಇಟಿಜಿ ರಿಸರ್ಚ್‌ನೊಂದಿಗೆ ಕೆಲಸ ಮಾಡಿದ್ದವರು. ಈಗ ಮೈಂಡ್ ಬ್ರಿಂಕ್‌ನೊಂದಿಗೆ ಸಂಬಂಧ ಹೊಂದಿರುವುದನ್ನು ಖಚಿತ ಪಡಿಸಿದ ಅವರು, ಸಂಸ್ಥೆ ಅಥವಾ ಅದರ ಸಮೀಕ್ಷೆ ವಿಧಾನದ ಕುರಿತು ಯಾವುದೇ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ಮಂದಾನಿ ಹೇಳುತ್ತಾರೆ.
ಮಾಧ್ಯಮ ಸಂಸ್ಥೆಗಳು ಸಾಮಾನ್ಯವಾಗಿ ಮತಗಟ್ಟೆ ಸಮೀಕ್ಷೆಗಳ ಹಿಂದೆ ಏಜೆನ್ಸಿಗಳ ಜೊತೆಗಿರುತ್ತವೆ. ಆದರೂ, ಸಮೀಕ್ಷೆ ಮಾಡುವವರು ಮತ್ತು ಅವರ ಏಜೆನ್ಸಿಗಳಿಗೆ ಚುನಾವಣಾ ಸಮೀಕ್ಷೆಗಳು ಮಾತ್ರವೇ ಏಕೈಕ ಆದಾಯದ ಮೂಲವಲ್ಲ.
ಉದಾಹರಣೆಗೆ, ಸಿವೋಟರ್‌ನ ಸಂಸ್ಥಾಪಕ ನಿರ್ದೇಶಕ ಯಶವಂತ ದೇಶಮುಖ್ ಹೇಳುವಂತೆ, ಚುನಾವಣೆ ಮತ್ತು ಮತಗಟ್ಟೆ ಸಮೀಕ್ಷೆಗಳು ಕಂಪೆನಿಯ ಕೆಲಸದ ಶೇ. 10 ರಷ್ಟು ಸಹ ಇಲ್ಲ. ಅದು ಇತರ ಯಾವುದೇ ಮಾರುಕಟ್ಟೆ ಸಂಶೋಧನೆ ಅಥವಾ ಸಾಮಾಜಿಕ ಸಂಶೋಧನಾ ಕಂಪೆನಿಯಂತೆಯೇ ಸಾಮಾಜಿಕ ಆರ್ಥಿಕ ಸಂಶೋಧನೆಯನ್ನು ನಡೆಸುತ್ತದೆ ಎಂಬುದರ ಬಗ್ಗೆ ವರದಿ ಹೇಳುತ್ತದೆ.
ಹಲವಾರು ಪೋಲ್‌ಸ್ಟರ್‌ಗಳು ರಾಜಕೀಯ ಪಕ್ಷಗಳಿಗಾಗಿ ಕೆಲಸ ಮಾಡುತ್ತಿದ್ದು, ಮತದಾನದ ಕೊನೆಯಲ್ಲಿ ಮಾಹಿತಿಯನ್ನು ಸುದ್ದಿ ವಾಹಿನಿಗಳಿಗೆ ರವಾನಿಸುತ್ತವೆ. ಆದರೂ, ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳಿಗಿಂತ ಭಿನ್ನವಾಗಿ, ಪೋಲ್‌ಸ್ಟರ್‌ಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಬಂಧಗಳು ಭಾರತದಲ್ಲಿ ರಹಸ್ಯವಾಗಿವೆ ಎಂಬುದನ್ನು ಹಿರಿಯ ಪತ್ರಕರ್ತರು ಹೇಳುವ ಬಗ್ಗೆ ವರದಿ ಪ್ರಸ್ತಾಪಿಸುತ್ತದೆ.
ಇನ್ನು, ನೊಯ್ಡಾ ಮೂಲದ ಎಐ ಚಾಲಿತ ಸಮೀಕ್ಷಾ ಕಂಪೆನಿ ಸಿಎನ್‌ಎಕ್ಸ್ ಬಗ್ಗೆ ನೋಡೋಣ.
ಅದರ ಸಹ ಸಂಸ್ಥಾಪಕ ಭವೇಶ್ ಝಾ ಕಂಪೆನಿ ರಾಜಕೀಯ ಪಕ್ಷಗಳೊಂದಿಗೆ ನೇರವಾಗಿ ಕೆಲಸ ಮಾಡದಿದ್ದರೂ, ಚುನಾವಣಾ ತಂತ್ರಜ್ಞರು, ಸಲಹೆಗಾರರಿಂದ ದಿಲ್ಲಿ ಚುನಾವಣಾ ಪ್ರಚಾರವನ್ನು ಟ್ರ್ಯಾಕ್ ಮಾಡಲು ನಿಯೋಜಿಸಲಾಗಿತ್ತು ಎಂದು ಹೇಳಿರುವುದನ್ನು ಮಂದಾನಿ ಉಲ್ಲೇಖಿಸುತ್ತಾರೆ.
ಭವೇಶ್ ಝಾ ಪ್ರಕಾರ, ಸಿಎನ್‌ಎಕ್ಸ್ ದಿಲ್ಲಿ ಚುನಾವಣೆಯ ಮತಗಟ್ಟೆ ಸಮೀಕ್ಷೆಯ ಊಹೆಗಳು 21,000ರ ಪರಿಷ್ಕೃತ ಮಾದರಿ ಗಾತ್ರವನ್ನು ಆಧರಿಸಿದ್ದವು. ಪ್ರತೀ ವಿಧಾನಸಭಾ ಕ್ಷೇತ್ರದಿಂದ 300 ಮಾದರಿಗಳನ್ನು ಸಂಗ್ರಹಿಸಲಾಯಿತು. ಇದು ಕಂಪ್ಯೂಟರ್ ನೆರವಿನ ವೈಯಕ್ತಿಕ ಸಂದರ್ಶನಗಳನ್ನು ನಡೆಸುತ್ತಿದ್ದ 270 ಸರ್ವೇಯರ್‌ಗಳನ್ನು ಹೊಂದಿತ್ತು.
ಉದ್ಯಮದ ಕೆಲವು ಏಜೆನ್ಸಿಗಳು, ದೇಶದ ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದು, ಸರ್ವೇ ಏನಿದ್ದರೂ, ಅವುಗಳಿಗೆ ಪ್ಯಾಷನ್ ಮಾತ್ರವಾಗಿರುತ್ತದೆ, ಅಂತಹ ಒಂದು ಕಂಪೆನಿ ಪೀಪಲ್ಸ್ ಇನ್‌ಸೈಟ್.
ಇದು ಕಳೆದ ವರ್ಷ, 2024ರ ಸಾರ್ವತ್ರಿಕ ಚುನಾವಣೆಗೆ ತಿಂಗಳುಗಳ ಮೊದಲು ನೋಂದಣಿಯಾಯಿತು. ಇದರ ಸಂಸ್ಥಾಪಕರು ಸೋದರ ಸಂಬಂಧಿಗಳಾದ ಸಂದೀಪ್ ಗುಪ್ತಾ ಮತ್ತು ನಿಖಿಲ್ ಗುಪ್ತಾ. ದಿಲ್ಲಿ ಚುನಾವಣೆಗೆ ಅದರ ಸ್ಯಾಂಪಲ್ ಗಾತ್ರ 8 ಲಕ್ಷಕ್ಕೂ ಹೆಚ್ಚಿತ್ತು.
ಈ ಉದ್ಯಮದಲ್ಲಿರುವ ಮತ್ತೊಂದು ಕಂಪೆನಿ ವೀ ಪ್ರೆಸೈಡ್.
ಪುಣೆ ಮೂಲದ ಕಂಪೆನಿ ಮತಗಟ್ಟೆ ಸಮೀಕ್ಷೆಗಳಿಗಾಗಿ ಸುದ್ದಿ ವಾಹಿನಿಗಳಿಂದ ನಿಯೋಜಿಸಲ್ಪಟ್ಟ ಇತರ ಸಂಸ್ಥೆಗಳಿಗೆ ಮತ ಹಂಚಿಕೆ ಸಂಖ್ಯೆಗಳನ್ನು ನೀಡುವ ಕೆಲಸ ಮಾಡುತ್ತದೆ ಎಂಬುದನ್ನು ಈ ತನಿಖಾ ವರದಿಯಲ್ಲಿ ಹೇಳಲಾಗಿದೆ.
ಚುನಾವಣೆಯ ಸಮಯದಲ್ಲಿನ ಪ್ರಾಮುಖ್ಯತೆಯ ಹೊರತಾಗಿಯೂ, ಮತಗಟ್ಟೆ ಸಮೀಕ್ಷೆಗಳು ಭಾರತದಲ್ಲಿ ಹೆಚ್ಚಾಗಿ ಅನಿಯಂತ್ರಿತವಾಗಿವೆ.
ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಪ್ರಕಾರ, 1951ರ ಜನತಾ ಪ್ರಾತಿನಿಧ್ಯ ಕಾಯ್ದೆಯನ್ನು 2009 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಚುನಾವಣೆಗಳು ಮತ್ತು ಮತಗಟ್ಟೆ ಸಮೀಕ್ಷೆಗಳ ವಿಭಾಗ 126ಎ ಅನ್ನು ನಂತರ 1951ರ ಕಾನೂನಿಗೆ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ.
ಅಲ್ಲದೆ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸಮೀಕ್ಷೆಯ ಕುರಿತು ಸಂಕ್ಷಿಪ್ತ ಮಾರ್ಗಸೂಚಿಗಳನ್ನು ನಿಗದಿಪಡಿಸುತ್ತದೆ.
ಮತಗಟ್ಟೆ ಸಮೀಕ್ಷೆ ಏಜನ್ಸಿಗಳ ದಾಖಲೆಯೇನೂ ಉತ್ತಮವಾಗಿಲ್ಲ. ಪಳಗಿದ ಏಜನ್ಸಿಗಳು ಕೂಡ ತಪ್ಪು ಊಹೆಗಳನ್ನು ಮಾಡಿ ಯಡವಟ್ಟು ಮಾಡುತ್ತವೆ.
ಕಳೆದ ವರ್ಷದ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಗೆಲುವು ಸಾಧಿಸಿತು. ಆದರೆ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲಿದೆ ಎಂದು ಊಹಿಸಿದ್ದವು.
ಮತಗಟ್ಟೆ ಸಮೀಕ್ಷೆಗಳಲ್ಲಿ ಪಾರದರ್ಶಕತೆಯ ಕೊರತೆ ಬಹಳವಿದೆ. ಅವು ಅಂತಿಮ ಸಂಖ್ಯೆಗಳನ್ನು ತಲುಪಲು ಬಳಸುವ ಡೇಟಾ ಮತ್ತು ವಿಧಾನಗಳಲ್ಲಿನ ಪಾರದರ್ಶಕತೆಯ ಕೊರತೆಯೇ ದೊಡ್ಡ ಕಳವಳದ ವಿಷಯ ಎಂದು ತಜ್ಞರು ಹೇಳುತ್ತಾರೆ.
ಮತಗಟ್ಟೆ ಸಮೀಕ್ಷೆಗಳು ಒಂದು ನಿಯಂತ್ರಣಕ್ಕೆ ಒಳಪಟ್ಟಿರಬೇಕಾದ ಅಗತ್ಯದ ಬಗ್ಗೆ ಖುರೇಷಿಯವರು ಕೂಡ ಹೇಳಿದ್ದಾರೆ.